Sunday, 6 October 2019

ದುರ್ಗಾಷ್ಟಮಿ


                                 ಹರಿಃ ಓಂ
                 ಓಂ ಮಹಾ ಗಣಪತಯೇ ನಮಃ
                     ಓಂ ಶ್ರೀ ಗುರುಭ್ಯೋನಮಃ

ದುರ್ಗಾಷ್ಟಮಿ ಮಹತ್ವ
       ಪಾರ್ವತಿಯು ದುರ್ಗೆಯಾಗಿ, ಚಾಮುಂಡಿಯಾಗಿ  ಮಹಿಷಾಸುರ ಮತ್ತು ಅವನ ಸಹಚರರ ಅಧರ್ಮಗಳನ್ನು ತೊಡೆದು ದಾನವರನ್ನು ಸಂಹಾರ ಮಾಡಿದ ದಿನವೇ ದುರ್ಗಾಷ್ಟಮಿ, ದುರ್ಗೆಯ ಜನನ ದುಷ್ಟ ಸಂಹಾರದ ಪ್ರತೀಕವಾಗಿದೆ . ದುಷ್ಟ ಸಂಹಾರಕ್ಕಾಗಿ ಶಿಷ್ಟ ರಕ್ಷಣೆಗಾಗಿ ಮಾತೆಯು ತ್ರಿಮೂರ್ತಿ ಸ್ವರೂಪಿಣಿಯಾಗಿ ಚಾಮುಂಡೇಶ್ವರಿಯಾಗಿ ಭೂಮಿಗೆ ಬಂದ ಈ ದಿವಸಗಳಲ್ಲಿ ಭೂಮಿಯ ಮೇಲೆ ದೈವಶಕ್ತಿಯ ಪ್ರಭಾವ ಅತ್ಯಧಿಕವಾಗಿರುತ್ತದೆ ಎಂಬುದು ನಮ್ಮ ಹಿರಿಯರ  ಅನಿಸಿಕೆ.
        ನವರಾತ್ರಿಯ ಎಂಟನೇ ದಿನದಂದು ಜಗನ್ಮಾತೆಯು ದುರ್ಗೆಯ ರೂಪ ತಾಳಿ ಚಂಡ, ಮುಂಡ ಮತ್ತು ರಕ್ತ ಬೀಜಾಸುರರನ್ನು ಸಂಹರಿಸಿದ ದಿನವಾಗಿದ್ದರಿಂದ ದುರ್ಗಾಷ್ಟಮಿಯಾಗಿ ಆಚರಿಸಲ್ಪಡುತ್ತದೆ. ಈ ದಿನದಂದು ಮಾತೆಯನ್ನು ೬೪ ಯೋಗಿನಿಗಳ ರೂಪದಲ್ಲಿ, ದುರ್ಗೆಯ ಸಹಚರರಾದ ಅಷ್ಟ ಮಾತೃಕೆಯರ ಪೂಜೆ ಮಾಡಲಾಗುತ್ತದೆ. ಬ್ರಹ್ಮಾಣೀ, ಮಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಹಿ, ನರಸಿಂಗಿ, ಇಂದ್ರಾಣಿ ಮತ್ತು ಚಾಮುಂಡಾ ರೂಪದಲ್ಲಿ ಅಷ್ಟನಾಯಿಕೆಯರ ಪೂಜೆಗೈಯಲಾಗುತ್ತದೆ.
         ದುರ್ಗೆಯು ಭಗವಂತನ ಪತ್ನಿಯೇ ಆಗಿದ್ದಾಳೆ. ಈ ದುರ್ಗೆಯ ಪೂಜೆಯನ್ನು ನವರಾತ್ರಿಯಲ್ಲಿ ದುರ್ಗಾಷ್ಟಮಿಯ ದಿನ ಮಾಡುವುದು ವಿಹಿತವಾಗಿದೆ.
ಶ್ರೀವಾದಿರಾಜಪೂಜ್ಯ ಚರಣರು ದುರ್ಗಾದೇವಿಯನ್ನು ಹೀಗೆ ಸ್ತುತಿಸಿದ್ದಾರೆ .
" ದುರ್ಜ್ಞೇಯತ್ವಾತ್ ದುಃಖದತ್ವಾತ್ ದುಷ್ಪ್ರಾಪ್ಯತ್ವಾಚ್ಚ ದುರ್ಜನೈಃ |
ಸತಾಮಭಯಭೂಮಿತ್ವಾತ್ ದುರ್ಗಾತ್ವಂ ಹೃದ್ಗುಹಾಶ್ರಯಾತ್ ||"
ದುರ್ಗಾ ಎನ್ನುವ  ಪದ ವಿವಿದಾರ್ಥಗಳನ್ನು ಹೊಂದಿದೆ, 
     ➡ ಭಕ್ತರ ಕಷ್ಟಗಳನ್ನು ದೂರ ಮಾಡುವವಳಿಗೆ ದುರ್ಗಾ ಎಂದು ಹೆಸರು
     ➡ ಸಾಕಲ್ಯೇನ ಬ್ರಹ್ಮಾದಿಗಳಿಂದ ತಿಳಿಯಲಶಕ್ಯಳಾದ್ದರಿಂದ ಲಕ್ಷ್ಮೀದೇವಿಯರಿಗೆ ದುರ್ಗಾ ಎಂದು ಹೆಸರು.
     ➡ ದುಷ್ಟಜನರಿಗೆ ದುಃಖವನ್ನು ಕೊಡುವುದರಿಂದ ಅವಳಿಗೆ ದುರ್ಗಾ ಎಂದು ಹೆಸರು.
     ➡ ದುಷ್ಟ ಜನರಿಂದ ಹೊಂದಲು ಅಶಕ್ಯಳಾದ್ದರಿಂದ ಅವಳಿಗೆ ದುರ್ಗಾ ಎಂದು ಹೆಸರು.
     ➡ ಸಜ್ಜನರಿಗೆ ಶ್ವೇತದ್ವೀಪ, ಅನಂತಾಸನ, ವೈಕುಂಠಗಳೆಂಬ ತ್ರಿಧಾಮರೂಪಳಾಗಿ ಅಭಯಸ್ಥಾನೀಯಳಾದ್ದರಿಂದ ಅವಳಿಗೆ ದುರ್ಗಾ ಎಂದು ಹೆಸರು.
    ➡ ಸಕಲ ಜೀವರ ಹೃದಯಗಳಲ್ಲಿ ನಿಯಾಮಕತ್ವೇನ ನೆಲೆಸಿರುವುದರಿಂದ ಅವಳಿಗೆ ದುರ್ಗಾ ಎಂದು ಹೆಸರು.
       ದುರ್ಗಾಷ್ಠಮಿಯದಿನ ಮಹಾಗೌರಿಯನ್ನು ಪೂಜಿಸಲಾಗುತ್ತದೆ
ಶ್ವೇತೇ ವೃಷೇ ಸಮಾರೂಢಾ ಶ್ವೇತಾಂಬರ ಧರಾ ಶುಚಿಃ|
ಮಹಾಗೌರಿ ಶುಭಂ ದಧ್ಯಾನ್ಮಹಾದೇವ ಪ್ರಮೋದದಾ ||
        ಒಂಬತ್ತು ರಾತ್ರಿಗಳಲ್ಲಿ ಎಂಟನೆಯ ದಿನ ಪೂಜಿಸಲ್ಪಡುವ ದೇವತೆಯೇ ಈ ಮಹಾಗೌರಿ. ತೇಜಸ್ಸನ್ನು ಪ್ರಾಪ್ತಿ ಮಾಡಿಕೊಂಡವಳೇ ಮಹಾಗೌರಿ ಎನ್ನಲಾಗಿದೆ. ಗೌರ ಎಂದರೆ ತೇಜಸ್ಸು ಎಂದರ್ಥ. ಮಹತ್ತರವಾದ ತೇಜಸ್ಸನ್ನು ಹೊಂದಿದವಳೂ ಆ ತೇಜಸ್ಸಿನಿಂದಲೇ ಶಿಷ್ಟರನ್ನು ಪಾಲಿಸುವ ಕಾರ್ಯವನ್ನು ಮಾಡುವವಳೇ ಈ ಮಹಾಗೌರಿ. ಮಹಾಗೌರಿಯನ್ನು ಶಿವೆ ಎಂಬುದಾಗಿಯೂ ಕರೆಯುತ್ತಾರೆ. ಈಕೆ ಚತುರ್ಭುಜೆಯಾಗಿದ್ದು ತ್ರಿಶೂಲ ಮತ್ತು ಡಮರು ಇವಳ ಕೈಯಲ್ಲಿದೆ. ಶುಭ್ರವಾದ ಬಿಳಿಯ ಸೀರೆಯನ್ನು ಈಕೆ ಧರಿಸಿದ್ದಾಳೆ. ಶ್ವೇತವೃಷಭ ಇವಳ ವಾಹನ. ಶಾಂತಸ್ವರೂಪಿಣಿಯಾದ ಮಹಾಗೌರಿಯನ್ನು ದುರ್ಗಾಷ್ಟಮಿಯದಿನ ಪೂಜಿಸಿದರೆ ವಿಶೇಷ ಫಲ ಲಭಿಸುವುದು.
        ಮಹಾಗೌರಿಯನ್ನು ಪೂಜಿಸುವುದರಿಂದ ದುಃಖ ಸಂತಾಪಗಳು ದೂರವಾಗುತ್ತವೆ. ಶೀಘ್ರಫಲದಾಯಕಿ ಎಂದೇ ಪ್ರಖ್ಯಾತಿಯಾಗಿರುವ ಈಕೆ ನಮಗೆ ಲೌಕಿಕ ಮತ್ತು ಅಲೌಕಿಕ ಸುಖವನ್ನು ಕರುಣಿಸುತ್ತಾಳೆ. ದುಷ್ಟರಿಂದ ರಕ್ಷಿಸುವುದರ ಜೊತೆಗೆ ನಮ್ಮೊಳಗಿದ್ದುಕೊಂಡು ನಮ್ಮನ್ನಾಳುವ ದುಷ್ಟತನವನ್ನೂ ದೂರ ಮಾಡುತ್ತಾಳೆ. ಮಹಾಗೌರಿಯನ್ನು ಆದಿಶಕ್ತಿ ಎನ್ನಲಾಗಿದೆ. ಇವಳ ಪೂಜೆಗೆ ಈ ದುರ್ಗಾಷ್ಟಮಿಯ ಪುಣ್ಯಕಾಲವೇ ಅತ್ಯಂತ ಶ್ರೇಷ್ಠವಾದ ದಿನವಾಗಿದೆ. ಮಹಾಗೌರಿಯನ್ನು ಶ್ರದ್ಧಾ ಭಕ್ತಿಪೂರ್ವಕವಾಗಿ ಪೂಜಿಸುವುದರಿಂದ ಸಕಲ ಸಂಪತ್ತು ಪ್ರಾಪ್ತಿಯಾಗುವುದು.
        ಮಹಾ ಎಂದರೆ ದೊಡ್ಡದು ಎಂದರ್ಥ. ಮನುಜ ಜನ್ಮವೇ ದೊಡ್ಡದು. ಗೌರಿ ಇಲ್ಲಿ ತೇಜಸ್ಸಿನ ಪ್ರತೀಕ. ಈ ತೇಜಸ್ಸನ್ನು ಹೊಂದಲು ಆಕೆ ತಪಸ್ಸನ್ನು ಮಾಡಿದ್ದಾಳೆ. ಮಹಾಗೌರಿಯೆಂದರೆ ಮಹಾನ್ ತಪಸ್ಸೂ ಹೌದು. ಇದು ನಮ್ಮ ಜೀವನವನ್ನು ಸೂಕ್ಷ್ಮವಾಗಿ ವಿವರಿಸಿದ ರೂಪ. ಮನುಷ್ಯ ಜನ್ಮವೇ ಮಹಾನ್, ಅಲ್ಲದೆ ಇದೊಂದು ತಪಸ್ಸು ಕೂಡ ಆಗಿದೆ ಎಂಬುದನ್ನು ಈ ದೇವಿಯ ರೂಪ ಹೇಳುತ್ತದೆ. ಉಳಿದ ಯಾವ ಜನ್ಮವನ್ನೂ ಮಾನವನ ಜನ್ಮಕ್ಕೆ ಹೋಲಿಸಲಾಗದು. ಹಾಗಾಗಿಯೇ ಮಾನವ ಜನ್ಮ ಮಹಾತಪಸ್ಸು. ಜಗತ್ತಿನಲ್ಲಿ ಬದಲಾವಣೆಯೊಂದೇ ಶಾಶ್ವತ ಎಂಬಂತೆ ನಮ್ಮ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳುವುದು ಸುಲಭವಲ್ಲ. ತ್ಯಾಗ ಮತ್ತು ಏಕಾಗ್ರತೆ ಇಲ್ಲಿ ಮುಖ್ಯ. ಅಂತಹ ಶಕ್ತಿಯನ್ನು ಹೊಂದಲು ಮತ್ತು ಮನಸ್ಸನ್ನು ಕೇಂದ್ರೀಕರಿಸಲು ದೇವ ದೇವತೆಯರ ಸಹಾಯ ನಮಗೆ ಬೇಕು. ಹಾಗಾಗಿಯೇ ಮೂರ್ತಿಗಳು, ಮಂತ್ರ ಶ್ಲೋಕಾದಿಗಳು ಮತ್ತು ಪೂಜೆಗಳು ಹುಟ್ಟಿಕೊಂಡವು.
        ಒಂದೊಂದು ದೇವತೆಯಲ್ಲಿಯೂ ಒಂದೊಂದು ಭಿನ್ನವಾದ ಶಕ್ತಿಯಿದೆ. ಆ ಶಕ್ತಿಯ ಸ್ವರೂಪವೇ ನಮಗೆ ಆಶ್ರಯ. ಅರಿವಿನ ದೀಪ ಉರಿಯುತ್ತಿರಲೆಂದು ಮಹಾಗೌರಿಯಲ್ಲಿ ಪ್ರಾರ್ಥಿಸಬೇಕು. ಮಹಾಗೌರಿಯು ತೇಜಸ್ಸನ್ನು ಗಳಿಸಿ ಶಿವನನ್ನು ಸೇರಿದಂತೆ ಮಾನವನೂ ಕೊನೆಯಲ್ಲಿ ಸೇರುವುದು ಶಿವನನ್ನೇ. ಹಾಗಾಗಿ ಆತ ನಮಗೆ ಮುಕ್ತಿಯನ್ನು ಕರುಣಿಸಬೇಕಾದರೆ ನಾವು ತೇಜಸ್ಸನ್ನು ಹೊಂದಬೇಕು. ಈ ದುರ್ಗಾಷ್ಟಮಿಯ ದಿನ ಮಹಾಗೌರಿಯನ್ನು ಆರಾಧಿಸುವ ಮೂಲಕ ದ್ವೇಷ ಅಸೂಯೆಗಳನ್ನು ಬಿಟ್ಟು, ಪ್ರೀತಿ, ಸ್ನೇಹ, ಸತ್ಯ, ಮತ್ತು ನಿಷ್ಠೆಯಿಂದ ಬದುಕಿ ತೇಜೋಮಯರಾಗಲು ಪ್ರಾರ್ಥಿಸಬೇಕು.
       ದುರ್ಗಾ ಮಂತ್ರವು ಹೀಗಿದೆ -
        "  ಓಂ ದುಂ ದುರ್ಗಾಯೈ ನಮಃ "  ಈ ಮಂತ್ರವನ್ನು ತ್ರಿಕರಣ ಪೂರ್ವಕವಾಗಿ ಯಥಾಶಕ್ತಿ ಜಪಿಸಿದರೆ ಭಕ್ತರ ಸಂಕಷ್ಟಗಳನ್ನು ದೂರಮಾಡಿ ಸಲಹುವುದರಲ್ಲಿ ಸಂದೇಹವಿಲ್ಲ.
        ನವರಾತ್ರಿಯ 8 ನೇ ದಿನವಾದ ದುರ್ಗಾಷ್ಟಮಿಯಂದು " ಓಂ ದುಂ ದುರ್ಗಾಯೈ ನಮಃ " ಈ ಮಂತ್ರದಿಂದ ಕಲಶದಲ್ಲಿ ದುರ್ಗೆಯನ್ನು ಆವಾಹಿಸಿ ಪೂಜಿಸಬೇಕು.
ವಿಜಯದಶಮೀ ದಿನದಂದು ದುರ್ಗೆಯ ವಿಸರ್ಜನೆಯನ್ನು ಮಾಡಬೇಕು.
     ✍  ಡಾ: ಶೈಲಜಾ ರಮೇಶ್
    (ವಿವಿಧ ಮೂಲಗಳಿಂದ ಸಂಗ್ರಹಿಸಿ ಬರೆದದ್ದು)
      

No comments:

Post a Comment