Sunday, 27 September 2026

ಅಷ್ಟಕವರ್ಗ (ಭಾಗ - 3)

                              ಹರಿಃ ಓಂ 
                 ಓಂ ಶ್ರೀ ಗಣಪತಯೇ ನಮಃ 
                    ಓಂ ಶ್ರೀ ಗುರವೇ ನಮಃ 

ಅಷ್ಟಕವರ್ಗ :---
     
      ಹಿಂದಿನ ಲೇಖನದಲ್ಲಿ ಸರ್ವಾಷ್ಟಕ ವರ್ಗ, ತ್ರಿಕೋಣ ಹಾಗೂ ಏಕಾಧಿಪತ್ಯ ಶೋಧನೆಯ ಬಗ್ಗೆ ತಿಳಿದುಕೊಂಡೆವು. 
     ಮುಂದುವರೆದ ಭಾಗವನ್ನು ನೋಡೋಣ...

ಅಷ್ಟಕವರ್ಗ ಮತ್ತು ದಾಂಪತ್ಯ ಹೊಂದಾಣಿಕೆ (Marriage Compatibility)

    ಮದುವೆಯ ಗುಣಮಿಲನ ಮಾಡುವಾಗ ಕೇವಲ ನಕ್ಷತ್ರಗಳನ್ನು ನೋಡುವುದಕ್ಕಿಂತ, ಅಷ್ಟಕವರ್ಗವನ್ನು ನೋಡುವುದು ದಾಂಪತ್ಯ ಯಶಸ್ಸಿಗೆ ತುಂಬಾ ಸಹಕಾರಿ. ನಾವೆಲ್ಲರೂ ಜಾತಕ ಹೊಂದಾಣಿಕೆ ಮಾಡುವಾಗ ಕೇವಲ ಅಷ್ಟಕೂಟ ಕೂಟಗಳನ್ನು (36 ಗುಣಗಳು) ನೋಡುತ್ತೇವೆ. ಮದುವೆ ಹೊಂದಾಣಿಕೆಯಲ್ಲಿ 36 ಗುಣಗಳು ಮ್ಯಾಚ್ ಆದರೂ ಮದುವೆ ಮುರಿದುಬೀಳುವ ಉದಾಹರಣೆಗಳನ್ನು ನಾವು ನೋಡಿದ್ದೇವೆ. ಅದಕ್ಕೆ ಕಾರಣ ಅಷ್ಟಕವರ್ಗದ ಈ ಬಿಂದುಗಳ ರಹಸ್ಯ. 
      ಅಷ್ಟಕವರ್ಗದಲ್ಲಿ ದಂಪತಿಗಳ ಅಥವಾ ಪಾಲುದಾರರ (Business Partners) ನಡುವಿನ ಹೊಂದಾಣಿಕೆಯನ್ನು ಅಳೆಯಲು ಒಂದು ಅದ್ಭುತ  ಸೂತ್ರವಿದೆ. 

ಅದೇನೆಂದರೆ..
      ಜಾತಕದಲ್ಲಿ ಯಾವ ರಾಶಿಯಲ್ಲಿ 30 ಕ್ಕಿಂತ ಹೆಚ್ಚು ಬಿಂದುಗಳು ಇರುತ್ತವೆಯೋ, ಅದೇ ರಾಶಿಯನ್ನು ಜನ್ಮರಾಶಿಯನ್ನಾಗಿ ಹೊಂದಿರುವ ವ್ಯಕ್ತಿಗಳು (ಸ್ನೇಹಿತರು, ಸಂಗಾತಿ ಅಥವಾ ಉದ್ಯೋಗಿ) ನಮ್ಮ ಜೀವನಕ್ಕೆ ಬಂದರೆ, ಅವರು ಸದಾ ಲಾಭ ಮತ್ತು ಅದೃಷ್ಟವನ್ನು ತರುತ್ತಾರೆ.              ವರನ ಜಾತಕದಲ್ಲಿ ಶುಕ್ರ ಗ್ರಹವು ಯಾವ ರಾಶಿಯಲ್ಲಿದೆಯೋ, ವಧುವಿನ ಜಾತಕದ ಸಮುದಾಯ ಅಷ್ಟಕವರ್ಗದಲ್ಲಿ ಅದೇ ರಾಶಿಗೆ ಹೆಚ್ಚು ಬಿಂದುಗಳಿರಬೇಕು. ಹಾಗೆಯೇ ವಧುವಿನ ಜಾತಕದ ಗುರುವಿನ ರಾಶಿಗೆ, ವರನ ಜಾತಕದಲ್ಲಿ ಹೆಚ್ಚು ಬಿಂದುಗಳಿರಬೇಕು. ಹೀಗಿದ್ದರೆ ಆ ದಂಪತಿಗಳ ನಡುವೆ ಪರಸ್ಪರ ಗೌರವ, ಪ್ರೀತಿ ಮತ್ತು ಆಕರ್ಷಣೆ ಜೀವಮಾನವಿಡೀ ಇರುತ್ತದೆ. ವಿವಾಹದಲ್ಲಿ ಹುಡುಗನಿಗೆ ಅತಿ ಹೆಚ್ಚು ಬಿಂದುಗಳಿರುವ ರಾಶಿಯೇ ಹುಡುಗಿಯ ಜನ್ಮರಾಶಿಯಾಗಿದ್ದರೆ, ಆ ದಾಂಪತ್ಯ ನೂರಾರು ವರ್ಷ ಸುಖವಾಗಿರುತ್ತದೆ."
        ಒಂದು ವೇಳೆ ಜಾತಕದ ಯಾವುದಾದರೂ ರಾಶಿಯಲ್ಲಿ 22 ಕ್ಕಿಂತ ಕಡಿಮೆ ಬಿಂದುಗಳು ಇದ್ದರೆ, ಆ ರಾಶಿಯನ್ನು ಜನ್ಮರಾಶಿಯನ್ನಾಗಿ ಹೊಂದಿರುವ ವ್ಯಕ್ತಿಗಳು ಎಷ್ಟೇ ಒಳ್ಳೆಯವರಾಗಿದ್ದರೂ, ಅವರ ಜೊತೆಗಿನ ಒಡನಾಟ ನಷ್ಟ, ಅಪವಾದ ಅಥವಾ ಮಾನಸಿಕ ನೆಮ್ಮದಿ ಭಂಗ ಉಂಟುಮಾಡುತ್ತದೆ

       ಸರಳವಾಗಿ ಹೇಳುವುದಾದರೆ, ಗ್ರಹ ಮೈತ್ರಿ ಮತ್ತು ದಶೆಗಳು ಜಾತಕದ ಹವಾಮಾನ (Weather) ಇದ್ದಂತೆ, ಆದರೆ ಅಷ್ಟಕವರ್ಗವು ಜಾತಕದ ಭೂಮಿಯ ಫಲವತ್ತತೆ (Soil Fertility) ಇದ್ದಂತೆ. ಹವಾಮಾನ ಎಷ್ಟೇ ಚೆನ್ನಾಗಿದ್ದರೂ ಭೂಮಿ ಫಲವತ್ತಾಗಿದ್ದರೆ ಮಾತ್ರ ಬೆಳೆ (ಫಲಿತಾಂಶ) ಚೆನ್ನಾಗಿ ಬರುತ್ತದೆ!

      ಮದುವೆಯ ಕಾಲ: ಶುಕ್ರನ ಶೋಧ್ಯಪಿಂಡದ ಸಂಖ್ಯೆಯನ್ನು ಗುರುವಿನ ಬಿಂದುಗಳಿಂದ ಗುಣಿಸಿ, 27 ರಿಂದ ಭಾಗಿಸಿದಾಗ ಬರುವ ನಕ್ಷತ್ರಕ್ಕೆ ಗೋಚಾರದ ಗುರು ಬಂದಾಗ ವ್ಯಕ್ತಿಯ ವಿವಾಹ ಮಹೋತ್ಸವ ನಡೆಯುತ್ತದೆ.

      ಶುಕ್ರನ ಅಷ್ಟಕವರ್ಗದಲ್ಲಿ ಅತಿ ಹೆಚ್ಚು ಬಿಂದುಗಳನ್ನು ಹೊಂದಿರುವ ರಾಶಿಯು ಯಾವ ಮಾಸವನ್ನು ಪ್ರತಿನಿಧಿಸುವುದೋ ಆ ಮಾಸದಲ್ಲಿ ವಿವಾಹ ಆಗುತ್ತೆ.

    ಕಳತ್ರ ಭಾವ ಮತ್ತು ಸಂಗಾತಿಯ ಗುಣ" 
       ಕೇವಲ ಜಾತಕದ 7 ನೇ ಮನೆಯನ್ನು ನೋಡಿ ಸಂಗಾತಿಯ ಗುಣ ಹೇಳುವುದಕ್ಕಿಂತ, ಅಷ್ಟಕವರ್ಗದಲ್ಲಿ ನಿಖರವಾದ ಸೂತ್ರವಿದೆ.
       ಶುಕ್ರನ ಭಿನ್ನಾಷ್ಟಕವರ್ಗವನ್ನು ನೋಡಿ. ಅದರಲ್ಲಿ 7 ನೇ ಮನೆಯಲ್ಲಿ ಎಷ್ಟು ಬಿಂದುಗಳಿವೆಯೋ ಅಷ್ಟು ಬಿಂದುಗಳನ್ನು ಕೊಟ್ಟ ಗ್ರಹಗಳು ಯಾವುವು, ಆ ಬಿಂದುಗಳನ್ನು ಕೊಟ್ಟ ಗ್ರಹಗಳು ಶುಭ ಗ್ರಹಗಳಾಗಿದ್ದರೆ (ಗುರು, ಬುಧ, ಚಂದ್ರ), ಸಂಗಾತಿಯು ಅತ್ಯಂತ ಸುಂದರ, ಗುಣವಂತ ಮತ್ತು ಧಾರ್ಮಿಕ ಗುಣ ಉಳ್ಳವರಾಗಿರುತ್ತಾರೆ. ಒಂದು ವೇಳೆ ಪಾಪ ಗ್ರಹಗಳು (ಶನಿ, ಮಂಗಳ, ) ಬಿಂದು ಕೊಟ್ಟಿದ್ದರೆ, ಸಂಗಾತಿಯು ಕೋಪಿಷ್ಠ ಅಥವಾ ಕಠಿಣ ಸ್ವಭಾವದವರಾಗಿರುತ್ತಾರೆ.  
        
 "ಪ್ರಥಮ ಗರ್ಭ ಮತ್ತು ಸಂತಾನ ಲಿಂಗ" ನಿರ್ಣಯ:
ಗುರುಗ್ರಹದಿಂದ ಸಂತಾನ ಯೋಗ:--
     ಗುರುವಿನ ಭಿನ್ನಾಷ್ಟಕವರ್ಗದಲ್ಲಿ 5 ನೇ ಮನೆಯನ್ನು (ಸಂತಾನ ಸ್ಥಾನ) ನೋಡಿ. ಆ 5ನೇ ಮನೆಗೆ ಬಿಂದುಗಳನ್ನು ಕೊಟ್ಟ ಗ್ರಹಗಳ ಸಂಖ್ಯೆಯನ್ನು ಲೆಕ್ಕ ಹಾಕಿ.
     ಆ ಮನೆಗೆ ಬಿಂದು ಕೊಟ್ಟ ಗ್ರಹಗಳಲ್ಲಿ ಪುರುಷ ಗ್ರಹಗಳು (ಸೂರ್ಯ, ಮಂಗಳ, ಗುರು) ಹೆಚ್ಚಿದ್ದರೆ, ಮೊದಲ ಸಂತಾನ ಗಂಡು ಮಗುವಾಗುವ ಸಾಧ್ಯತೆ ಶೇ. 8೦ ರಷ್ಟಿರುತ್ತದೆ. ಸ್ತ್ರೀ ಗ್ರಹಗಳು (ಶುಕ್ರ, ಚಂದ್ರ) ಹೆಚ್ಚಿದ್ದರೆ ಹೆಣ್ಣು ಮಗುವಾಗುವ ಯೋಗವಿರುತ್ತದೆ. 
ಇದು ಪ್ರಕೃತಿಯ ನಿಯಮವನ್ನು ಅಷ್ಟಕವರ್ಗ ಹೇಗೆ ಸೂಕ್ಷ್ಮವಾಗಿ ಹಿಡಿದಿಡುತ್ತದೆ ಎಂಬುದಕ್ಕೆ ಸಾಕ್ಷಿ.

        ಗುರುವಿನ ಭಿನ್ನಾಷ್ಟಕವರ್ಗದಲ್ಲಿ 5ನೇ ಮನೆಯಲ್ಲಿ ಕನಿಷ್ಠ 5 ಬಿಂದುಗಳು ಇರಬೇಕು. ಒಂದು ವೇಳೆ ಅಲ್ಲಿ 2 ಅಥವಾ 3 ಬಿಂದುಗಳಿದ್ದರೆ, ಜಾತಕದಲ್ಲಿ ಎಷ್ಟೇ ದೊಡ್ಡ ಪುತ್ರಕಾರಕ ಯೋಗಗಳಿದ್ದರೂ ಸಂತಾನ ಪ್ರಾಪ್ತಿ ತಡವಾಗುತ್ತದೆ ಅಥವಾ ವೈದ್ಯಕೀಯ ನೆರವು ಬೇಕಾಗುತ್ತದೆ.
 ಗುರುಸ್ಥಿತ ರಾಶಿಯಿಂದ ಪಂಚಮದಲ್ಲಿ ಇರುವ ಬಿಂದುಗಳನ್ನು ಗುರುವಿನ ಶೋಧ್ಯಪಿಂಡದಿಂದ ಗುಣಿಸಿ, 27 ರಿಂದ ಭಾಗಿಸಿದಾಗ ಬರುವ ಶೇಷಸಂಖ್ಯೆ ಸೂಚಿಸುವ ನಕ್ಷತ್ರ ಅಥವಾ ಅದರ ತ್ರಿಕೋಣ ನಕ್ಷತ್ರದಲ್ಲಿ ಗುರು ಸಂಚಾರ ಮಾಡುವ ಸಮಯದಲ್ಲಿ ಸಂತಾನ ಪ್ರಾಪ್ತಿ.
 
        ಸಾಮಾನ್ಯವಾಗಿ ಜಾತಕದಲ್ಲಿ 6,8,12 ನೇ ಮನೆಗಳನ್ನು ದುಸ್ಥಾನಗಳು ಅಥವಾ ಕೆಟ್ಟ ಮನೆಗಳು ಎನ್ನಲಾಗುತ್ತದೆ. ಆದರೆ ಸರ್ವಾಷ್ಟಕವರ್ಗದಲ್ಲಿ . ದುಸ್ಥಾನಗಳಲ್ಲಿ ಬಿಂದುಗಳ ಸಂಖ್ಯೆ 18 ರಿಂದ 22 ಕ್ಕಿಂತ ಕಡಿಮೆ ಇದ್ದರೆ, ಆ ಜಾತಕನಿಗೆ ಶತ್ರುಗಳ ಕಾಟ ಇರುವುದಿಲ್ಲ, ರೋಗಗಳು ಬೇಗ ಗುಣವಾಗುತ್ತವೆ ಮತ್ತು ಸಾಲದ ಬಾಧೆ ಇರುವುದಿಲ್ಲ!

         ಸಾಮಾನ್ಯ ಜಾತಕದಲ್ಲಿ ದುಸ್ಥಾನ ಮನೆಗಳು ಬಲವಾದರೆ ಕಷ್ಟ ಹೆಚ್ಚುತ್ತದೆ. ಆದರೆ ಅಷ್ಟಕವರ್ಗದಲ್ಲಿ ಈ ಮನೆಗಳ ಬಿಂದುಗಳು ಕಡಿಮೆಯಾದಷ್ಟೂ ಜಾತಕನಿಗೆ ರಾಜಯೋಗ ಸಿಗುತ್ತದೆ.

​         ದೈನಂದಿನ ಜೀವನ/ಗೋಚಾರ:     
      ಸರ್ವಾಷ್ಟಕವರ್ಗದಲ್ಲಿ 30 ಕ್ಕಿಂತ ಹೆಚ್ಚು ಬಿಂದುವಿರುವ ರಾಶಿಗೆ ಚಂದ್ರ ಅಥವಾ ಲಗ್ನಾಧಿಪತಿ ಬಂದ ದಿನಗಳು ಜಾತಕನಿಗೆ ಅತ್ಯಂತ ಲಾಭದಾಯಕ ಮತ್ತು ಸಂತೋಷದಾಯಕ ದಿನಗಳಾಗಿರುತ್ತವೆ.

     
     ಚಂದ್ರನ ಅಷ್ಟಕವರ್ಗದಲ್ಲಿ ಯಾವ ರಾಶಿಯಲ್ಲಿ ಹೆಚ್ಚು ಬಿಂದುಗಳು ಬರುವುವೋ ಆ ರಾಶಿಯಿಂದ ತಾಯಿಗೆ ಕ್ಷೇಮಕರ.

     ​ ದಿಕ್ಕಿನ ಬಲ: ಕುಂಡಲಿಯಲ್ಲಿ ಪೂರ್ವ , ದಕ್ಷಿಣ  ಪಶ್ಚಿಮ ಮತ್ತು ಉತ್ತರ ರಾಶಿಗಳ ಬಿಂದುಗಳನ್ನು ಕೂಡಿ . ಯಾವ ದಿಕ್ಕಿಗೆ ಅತಿ ಹೆಚ್ಚು ಬಿಂದು ಬರುತ್ತದೆಯೋ, ಜಾತಕನು ಆ ದಿಕ್ಕಿನಲ್ಲಿ ಉದ್ಯೋಗ ಅಥವಾ ವ್ಯಾಪಾರ ಮಾಡಿದರೆ ಅತ್ಯಂತ ವೇಗವಾಗಿ ಭಾಗ್ಯೋದಯವಾಗುತ್ತದೆ.

ಇಂದ್ರ ಧ್ವಜ" ಮತ್ತು "ಮಂಡೂಕ ಗತಿ" (ರಾಶಿಗಳ ಏರಿಳಿತ)
           ಸರ್ವಷ್ಟಕ ಅಥವಾ ಸಮುದಾಯ ಅಷ್ಟಕವರ್ಗದಲ್ಲಿ 12 ಮನೆಗಳ ಬಿಂದುಗಳನ್ನು ಸಾಲಾಗಿ ಬರೆದಾಗ, ಒಂದು ಮನೆಯಿಂದ ಮತ್ತೊಂದು ಮನೆಗೆ ಬಿಂದುಗಳ ಸಂಖ್ಯೆ ಹೇಗೆ ಬದಲಾಗುತ್ತದೆ ಎಂಬುದರ ಮೇಲೆ ಜೀವನದ ಪ್ರಗತಿ ನಿರ್ಧಾರವಾಗುತ್ತದೆ:

      ಆರೋಹಣ (Climbing):1 ನೇ ಮನೆಯಿಂದ ಮುಂದಿನ ಮನೆಗಳಿಗೆ ಹೋದಂತೆ ಬಿಂದುಗಳ ಸಂಖ್ಯೆ ಹೆಚ್ಚುತ್ತಾ ಹೋದರೆ (ಉದಾಹರಣೆಗೆ: 9ನೇ ಮನೆಗಿಂತ 10 ರಲ್ಲಿ, ಹತ್ತನೇ ಮನೆಗಿಂತ 11 ರಲ್ಲಿ ಬಿಂದುಗಳು ಹೆಚ್ಚಿದ್ದರೆ.. ಆ ವ್ಯಕ್ತಿಯ ಜೀವನ ವಯಸ್ಸಾದಂತೆಲ್ಲಾ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮೇಲೇರುತ್ತಾ ಹೋಗುತ್ತದೆ. ಇದನ್ನು 'ಇಂದ್ರ ಧ್ವಜ' ಯೋಗ ಎನ್ನಬಹುದು.

       ಅವರೋಹಣ (Falling):. ಒಂದು ವೇಳೆ 9, 10, ನೇ ಮನೆಗಳಿಗಿಂತ 11 ಮತ್ತು 12 ನೇ ಮನೆಯಲ್ಲಿ ಬಿಂದುಗಳು ದಿಢೀರನೆ ಕುಸಿದರೆ, ಜೀವನದ ಉತ್ತರಾರ್ಧದಲ್ಲಿ ಅಥವಾ ಉದ್ಯೋಗದ ಕೊನೆಯ ದಿನಗಳಲ್ಲಿ ಜಾಗರೂಕರಾಗಿರಬೇಕು.
 
ಭಾಗ್ಯೋದಯ ಯಾವಾಗ?
ದಿನ ವರ್ಷಗಳ ಲೆಕ್ಕಾಚಾರ:
     ಜೀವನದ ಸುವರ್ಣ ಕಾಲ ಅಥವಾ ಅದೃಷ್ಟದ ವಯಸ್ಸು ಯಾವುದು ಎಂಬುದನ್ನು ಅಷ್ಟಕವರ್ಗದ ಮೂಲಕ ಅತ್ಯಂತ ಸುಲಭವಾಗಿ ಕಂಡುಹಿಡಿಯಬಹುದು.
ನಿಯಮ: ಜಾತಕದ ಲಗ್ನದಿಂದ ಆರಂಭಿಸಿ, ಯಾವ ಮನೆಯಲ್ಲಿ ಅತಿ ಹೆಚ್ಚು ಬಿಂದುಗಳಿವೆಯೋ ಆ ಮನೆಯೇ ನಮ್ಮ ಭಾಗ್ಯದ ತಾಣ.

      ಉದಾಹರಣೆ: ಜಾತಕದಲ್ಲಿ 4ನೇ ಮನೆಯಲ್ಲಿ (ಸುಖ/ಮಾತೃ ಸ್ಥಾನ) 28 ಬಿಂದುಗಳಿದ್ದರೆ 4 ನೇ ಮನೆಗೆ ಸಂಬಂಧಿಸಿದ ವಯಸ್ಸಿನಲ್ಲಿ (ಅಂದರೆ ಸುಮಾರು 28 ರಿಂದ 32 ನೇ ವಯಸ್ಸಿನಲ್ಲಿ) ಸ್ವಂತ ಮನೆ, ವಾಹನ ಯೋಗ ಅಥವಾ ವೃತ್ತಿಯಲ್ಲಿ ದೊಡ್ಡ ಯಶಸ್ಸು ಸಿಗುತ್ತದೆ.

      11 ನೇ ಮನೆಯಲ್ಲಿ ಅತಿ ಹೆಚ್ಚು ಬಿಂದುಗಳಿದ್ದರೆ 3೦ರ ಹರೆಯದ ನಂತರ ಅಪಾರ ಧನಲಾಭವಾಗುತ್ತದೆ.

. ಶೋಧ್ಯ ಪಿಂಡ ಮತ್ತು ದಿಕ್ಕಿನ ರಹಸ್ಯ (Direction of Success)
      ಮುಂಚೆ ಹೇಳಿದಂತೆ ತ್ರಿಕೋಣ ಮತ್ತು ಏಕಾಧಿಪತ್ಯ ಶೋಧನೆಗಳ ನಂತರ ನಮಗೆ ಪ್ರತಿಯೊಂದು ಗ್ರಹಕ್ಕೂ ಒಂದು 'ಶೋಧ್ಯ ಪಿಂಡ' ಸಿಗುತ್ತದೆ. ಈ ಶೋಧ್ಯ ಪಿಂಡದ ಸಂಖ್ಯೆಯನ್ನು ಬಳಸಿಕೊಂಡು ಕೆಲವು ವಿಶೇಷ ವಿಷಯಗಳನ್ನು ತಿಳಿಯಬಹುದು:

    ಯಾವ ದಿಕ್ಕಿನಲ್ಲಿ ಅದೃಷ್ಟವಿದೆ?: ಗುರುವಿನ ಭಿನ್ನಾಷ್ಟಕವರ್ಗದಲ್ಲಿ ಯಾವ ದಿಕ್ಕಿಗೆ (ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ) ಸೇರಿದ ರಾಶಿಗಳಲ್ಲಿ ಹೆಚ್ಚು ಬಿಂದುಗಳಿವೆಯೋ, ಆ ದಿಕ್ಕಿಗೆ ಪ್ರಯಾಣ ಬೆಳೆಸಿದರೆ ಅಥವಾ ಆ ದಿಕ್ಕಿನ ಊರುಗಳಲ್ಲಿ ಉದ್ಯೋಗ/ವ್ಯಾಪಾರ ಮಾಡಿದರೆ ಅತ್ಯಂತ ವೇಗವಾಗಿ ಯಶಸ್ಸು ಸಿಗುತ್ತದೆ.

     ಗೋಚಾರ ಶನಿಯ "ಬಿಂದು ರಹಸ್ಯ" (Saturn's Transit)
     ಶನಿ ಗ್ರಹವು ಒಂದು ರಾಶಿಯಲ್ಲಿ ಎರಡುವರೆ ವರ್ಷ ಇರುತ್ತದೆ. ಅಷ್ಟಕವರ್ಗದಲ್ಲಿ ಶನಿಗೆ ಕೇವಲ 39 ಬಿಂದುಗಳಿರುವುದರಿಂದ, ಪ್ರತಿಯೊಂದು ರಾಶಿಯಲ್ಲೂ ಅದಕ್ಕೆ ಸಿಗುವ ಬಿಂದುಗಳು ತೀರಾ ಕಡಿಮೆ ಇರುತ್ತವೆ.
 ಶನಿಯು ಪ್ರಸ್ತುತ ಸಂಚರಿಸುವ ರಾಶಿಯಲ್ಲಿ 4 ಅಥವಾ ಅದಕ್ಕಿಂತ ಹೆಚ್ಚು ಬಿಂದುಗಳಿದ್ದರೆ ಆ ಎರಡುವರೆ ವರ್ಷ ಶನಿಯು ನಮಗೆ ಯಾವುದೇ ಕಷ್ಟ ಕೊಡುವುದಿಲ್ಲ. ಬದಲಿಗೆ ಸ್ಥಿರ ಆಸ್ತಿ ಅಥವಾ ಉದ್ಯೋಗದಲ್ಲಿ ಪ್ರಗತಿ ನೀಡುತ್ತಾನೆ.
     ಒಂದು ವೇಳೆ ಶನಿ ಇರುವ ರಾಶಿಯಲ್ಲಿ 0, 1, 2, ಬಿಂದುಗಳು ಮಾತ್ರ ಇದ್ದರೆ, ಆ ಅವಧಿಯಲ್ಲಿ ಆರೋಗ್ಯದಲ್ಲಿ ಏರುಪೇರು, ಅನಗತ್ಯ ವಿವಾದಗಳು ಅಥವಾ ಮಾನಸಿಕ ಒತ್ತಡ ಹೆಚ್ಚಾಗಬಹುದು. ಅಂತಹ ಸಮಯದಲ್ಲಿ ಶನಿ ಶಾಂತಿ ಅಥವಾ ಆಂಜನೇಯ ಸ್ವಾಮಿ ಆರಾಧನೆ ಮಾಡುವುದು ಸೂಕ್ತ.

       ಸಾಮಾನ್ಯವಾಗಿ ಅಷ್ಟಮ ಶನಿ ಅಶುಭ ಎನ್ನಲಾಗುತ್ತದೆ. ಆದರೆ, ಜಾತಕದ 8ನೇ ಮನೆಯಲ್ಲಿ 30 ಕ್ಕಿಂತ ಹೆಚ್ಚು ಬಿಂದುಗಳು ಇದ್ದರೆ, ಅಷ್ಟಮ ಶನಿಯು ಜಾತಕನಿಗೆ ತೊಂದರೆ ಕೊಡುವ ಬದಲು ಹಠಾತ್ ಧನಲಾಭ ಮತ್ತು ಲಾಟರಿ ಯೋಗವನ್ನು ನೀಡುತ್ತಾನೆ.

 ಜಾತಕದ ಶನಿಯು ಯಾವ ನಕ್ಷತ್ರದಲ್ಲಿರುವನೋ ಆ ನಕ್ಷತ್ರದಿಂದ 8 ನೇ ನಕ್ಷತ್ರದಲ್ಲಿ ಶನಿಯು ಸಂಚಾರವಾಗುವಾಗ ತಂದೆಯ ತಂದೆ (ತಾತನ) ಮರಣ.


  "ಸರ್ವಾಷ್ಟಕವರ್ಗ" ಮತ್ತು ವಯಸ್ಸಿನ ಕಾಲಚಕ್ರ (Age Cycles)

     ನಮ್ಮ ಇಡೀ ಜೀವನದ 120 ವರ್ಷಗಳ ಪರಮಾಯುಷ್ಯವನ್ನು ಅಷ್ಟಕವರ್ಗವು ಮೂರು ಪ್ರಮುಖ ಭಾಗಗಳಾಗಿ ವಿಂಗಡಿಸಿ ಭವಿಷ್ಯ ಹೇಳುತ್ತದೆ. ಜಾತಕದ 12 ಮನೆಗಳನ್ನು ತಲಾ 4 ಮನೆಗಳಂತೆ 3 ಭಾಗ ಮಾಡಲಾಗುತ್ತದೆ:

    ಮೊದಲ ಭಾಗ (1 ರಿಂದ 4 ನೇ ಮನೆಗಳು) ಇದು ಜೀವನದ ಬಾಲ್ಯ ಮತ್ತು ಯೌವನದ ಕಾಲ (ಅಂದಾಜು 1 ರಿಂದ 3೦ ವರ್ಷ). ಈ ನಾಲ್ಕು ಮನೆಗಳ ಒಟ್ಟು ಬಿಂದುಗಳು ಹೆಚ್ಚಾಗಿದ್ದರೆ, ವ್ಯಕ್ತಿಯ ಬಾಲ್ಯ ಸುಖಮಯವಾಗಿರುತ್ತದೆ, ಉತ್ತಮ ಶಿಕ್ಷಣ ಮತ್ತು ತಂದೆ-ತಾಯಿಯ ಬೆಂಬಲ ಸಿಗುತ್ತದೆ.

    ಎರಡನೇ ಭಾಗ (5 ರಿಂದ 8ನೇ ಮನೆಗಳು): ಇದು ಜೀವನದ ಮಧ್ಯಭಾಗ ಅಥವಾ ಯೌವನೋತ್ತರ ಕಾಲ (ಅಂದಾಜು 31 ರಿಂದ 60 ವರ್ಷ). ಇಲ್ಲಿ ಬಿಂದುಗಳು ಹೆಚ್ಚಾಗಿದ್ದರೆ ವೃತ್ತಿಜೀವನ, ಸಂಪಾದನೆ, ಮದುವೆ, ಸಂತಾನ ಮತ್ತು ಸಮಾಜದಲ್ಲಿ ದೊಡ್ಡ ಯಶಸ್ಸು ಸಿಗುತ್ತದೆ.

    ಮೂರನೇ ಭಾಗ (9 ರಿಂದ 12 ನೇ ಮನೆಗಳು): ಇದು ಜೀವನದ ಉತ್ತರಾರ್ಧ ಅಥವಾ ವೃದ್ಧಾಪ್ಯದ ಕಾಲ (6೦ ವರ್ಷದ ನಂತರ). ಇಲ್ಲಿ ಬಿಂದುಗಳು ಹೆಚ್ಚಾಗಿದ್ದರೆ ನಿವೃತ್ತಿಯ ನಂತರದ ಜೀವನ ನೆಮ್ಮದಿಯಾಗಿರುತ್ತದೆ, ಆಧ್ಯಾತ್ಮಿಕ ಉನ್ನತಿ ಮತ್ತು ಗೌರವ ಸಿಗುತ್ತದೆ.

    ಈ ಮೂರು ಭಾಗಗಳಲ್ಲಿ ಯಾವ ಭಾಗದಲ್ಲಿ ಅತಿ ಹೆಚ್ಚು ಬಿಂದುಗಳಿರುತ್ತವೆಯೋ, ಜೀವನದ ಆ ಕಾಲಘಟ್ಟವೇ ಆ ವ್ಯಕ್ತಿಯ ಪಾಲಿಗೆ ಸುವರ್ಣ ಯುಗ ಆಗಿರುತ್ತದೆ.

    . ಪ್ರತಿದಿನದ ಶುಭ-ಅಶುಭ ತಿಳಿಯುವ "ಚಂದ್ರನ ನಡೆ" ದಿನನಿತ್ಯ ರಾಶಿ ಭವಿಷ್ಯ ನೋಡುತ್ತೇವೆ.  ಗೋಚಾರದಲ್ಲಿ ಚಂದ್ರನು ಪ್ರತಿದಿನ ಒಂದೊಂದು ನಕ್ಷತ್ರ, ರಾಶಿಯನ್ನು ಬದಲಾಯಿಸುತ್ತಾನೆ. ಚಂದ್ರನು ಪ್ರಸ್ತುತ ಸಂಚರಿಸುವ ರಾಶಿಯಲ್ಲಿ, ಜಾತಕದ ಚಂದ್ರನ ಭಿನ್ನಾಷ್ಟಕವರ್ಗದಲ್ಲಿ 6, 7, ಅಥವಾ 8 ಬಿಂದುಗಳಿದ್ದರೆ, ಅಂದು ಅತ್ಯಂತ ಸಂತೋಷದ ದಿನ, ಅನಿರೀಕ್ಷಿತ ಧನಲಾಭ ಅಥವಾ ಒಳ್ಳೆಯ ಸುದ್ದಿ ಸಿಗುತ್ತದೆ.

     ಅದೇ ರಾಶಿಯಲ್ಲಿ ಚಂದ್ರನಿಗೆ ಕೇವಲ ೦, 1 ಅಥವಾ 2 ಬಿಂದುಗಳಿದ್ದರೆ, ಅಂದು ಮನಸ್ಸಿಗೆ ಅಶಾಂತಿ, ಕೆಲಸದಲ್ಲಿ ನಷ್ಟ ಅಥವಾ ಜಗಳಗಳು ಆಗಬಹುದು. ಅಂತಹ ದಿನಗಳಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು.

. ಗ್ರಹಗಳ ಸಾಮರ್ಥ್ಯ
      ಒಂದು ಗ್ರಹವು ಜಾತಕದಲ್ಲಿ ರಾಜಯೋಗವನ್ನು ಕೊಡುತ್ತದೆಯೇ ಇಲ್ಲವೇ ಎಂಬುದನ್ನು ಅದರ ಭಿನ್ನಾಷ್ಟಕವರ್ಗದ ಬಿಂದುಗಳು ನಿರ್ಧರಿಸುತ್ತವೆ:

    ಸೂರ್ಯ ಮತ್ತು ಸರ್ಕಾರಿ ಉದ್ಯೋಗ: ಸೂರ್ಯನ ಭಿನ್ನಾಷ್ಟಕವರ್ಗದಲ್ಲಿ ಸೂರ್ಯನಿರುವ ಮನೆಗೆ 6 ಕ್ಕಿಂತ ಹೆಚ್ಚು ಬಿಂದುಗಳಿದ್ದರೆ, ಆ ವ್ಯಕ್ತಿಗೆ ಸರ್ಕಾರಿ ಕೆಲಸ ಅಥವಾ ರಾಜಕೀಯದಲ್ಲಿ ಉನ್ನತ ಹುದ್ದೆ ಸಿಗುವುದು ಖಚಿತ.

    ಕುಜ ಮತ್ತು ಸ್ವಂತ ಮನೆ: ಕುಜನ ಭಿನ್ನಾಷ್ಟಕವರ್ಗದಲ್ಲಿ 4ನೇ ಮನೆಗೆ (ಭೂಮಿ ಸ್ಥಾನ) 5 ಕ್ಕಿಂತ ಹೆಚ್ಚು ಬಿಂದುಗಳಿದ್ದರೆ, ಆ ವ್ಯಕ್ತಿ ಸ್ವಂತ ಪರಿಶ್ರಮದಿಂದ ಭವ್ಯವಾದ ಮನೆ ಅಥವಾ ಜಮೀನನ್ನು ಖರೀದಿಸುತ್ತಾನೆ.

    ಶುಕ್ರ ಮತ್ತು ವಾಹನ/ಸಂಗಾತಿ: ಶುಕ್ರನ ಭಿನ್ನಾಷ್ಟಕವರ್ಗದಲ್ಲಿ 7 ಅಥವಾ 8 ಬಿಂದುಗಳಿದ್ದರೆ, ಅತ್ಯಂತ ಸುಂದರ, ಗುಣವಂತ ಸಂಗಾತಿ ಮತ್ತು ಐಷಾರಾಮಿ ವಾಹನ ಯೋಗ ಸಿಗುತ್ತದೆ.

   . ಶತ್ರು ಮತ್ತು ರೋಗ ಜಯದ ಸೂತ್ರ (6ನೇ ಮನೆ)
ಜಾತಕದಲ್ಲಿ 6ನೇ ಮನೆಯನ್ನು ಶತ್ರು, ರೋಗ ಮತ್ತು ಸಾಲದ ಮನೆ ಎನ್ನಲಾಗುತ್ತದೆ. ಸಮುದಾಯ ಅಷ್ಟಕವರ್ಗದಲ್ಲಿ ಇದರದ್ದೇ ಒಂದು ವಿಚಿತ್ರ ನಿಯಮವಿದೆ. ಲಗ್ನ ಸ್ಥಾನಕ್ಕಿಂತ (1ನೇ ಮನೆ) 6ನೇ ಮನೆಯಲ್ಲಿ ಬಿಂದುಗಳು ಕಡಿಮೆ ಇರಬೇಕು. ಲಗ್ನದಲ್ಲಿ 32 ಬಿಂದುಗಳಿದ್ದು, 6 ನೇ ಮನೆಯಲ್ಲಿ 22 ಬಿಂದುಗಳಿದ್ದರೆ, ಶತ್ರುಗಳು ನಮ್ಮ ಮುಂದೆ ತಲೆ ಎತ್ತಲು ಸಾಧ್ಯವಿಲ್ಲ. ಯಾವುದೇ ರೋಗ ಬಂದರೂ ಬೇಗ ಗುಣಮುಖರಾಗುವ ಯೋಗ ಇರುತ್ತೆ.
      ಒಂದು ವೇಳೆ ಲಗ್ನಕ್ಕಿಂತ 6ನೇ ಮನೆಯಲ್ಲಿ ಬಿಂದುಗಳು ಹೆಚ್ಚಾದರೆ, ಸಾಲದ ಬಾಧೆ ಮತ್ತು ಅನಾರೋಗ್ಯದ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತವೆ.

 . "ಕಕ್ಷಾ" ಪದ್ಧತಿ (The Micro-Transits)

     ಇದು ಅಷ್ಟಕವರ್ಗದ ಅತ್ಯಂತ ಸೂಕ್ಷ್ಮವಾದ ಭಾಗ. ಒಂದು ರಾಶಿಯನ್ನು (30 ಡಿಗ್ರಿ) ತಲಾ 3° 45' ನಂತೆ 8 ಸಮಾನ ಭಾಗಗಳಾಗಿ (ಕಕ್ಷಾಗಳಾಗಿ) ಹಂಚಲಾಗುತ್ತದೆ. ಪ್ರತಿಯೊಂದು ಭಾಗಕ್ಕೂ ಒಬ್ಬೊಬ್ಬ ಗ್ರಹ ಅಧಿಪತಿಯಾಗಿರುತ್ತಾನೆ (ಶನಿ, ಗುರು, ಕುಜ, ಸೂರ್ಯ, ಶುಕ್ರ, ಬುಧ, ಚಂದ್ರ ಮತ್ತು ಲಗ್ನ).

     ಗೋಚಾರದಲ್ಲಿ ಒಂದು ಗ್ರಹವು (ಉದಾಹರಣೆಗೆ ಗುರು) ಒಂದು ರಾಶಿಯಲ್ಲಿ ಸಾಗುವಾಗ, ಆ ರಾಶಿಯ ಯಾವ ಕಕ್ಷೆಯಲ್ಲಿ ಅದಕ್ಕೆ ಬಿಂದು ಸಿಕ್ಕಿರುತ್ತದೆಯೋ, ಆ ಕಕ್ಷೆಗೆ ಗುರು ಬಂದಾಗ ಮಾತ್ರ (ಅಂದರೆ ಆ ನಿರ್ದಿಷ್ಟ ದಿನಗಳಲ್ಲಿ ಮಾತ್ರ) ಜಾತಕನಿಗೆ ಲಾಟರಿ ಹೊಡೆದಂತೆ ಯಶಸ್ಸು ಸಿಗುತ್ತದೆ! ಉಳಿದ ದಿನಗಳು ಸಾಧಾರಣವಾಗಿರುತ್ತವೆ. ಇದಕ್ಕಾಗಿಯೇ ಒಂದೇ ರಾಶಿಯಲ್ಲಿದ್ದರೂ ಗುರು ಇಡೀ ವರ್ಷ ಶುಭ ಫಲ ಕೊಡುವುದಿಲ್ಲ, ಕೇವಲ ಕೆಲವು ದಿನಗಳು ಮಾತ್ರ ಅದ್ಭುತ ಫಲ ಕೊಡುತ್ತಾನೆ.
    ಗೋಚಾರ ಗ್ರಹವು ತನಗೆ ಬಿಂದು ಕೊಟ್ಟಿರುವ ಗ್ರಹದ ಕಕ್ಷೆಯೊಳಗೆ ಪ್ರವೇಶಿಸಿದಾಗ ಮಾತ್ರ ಆ ದಿನ ಅಥವಾ ಆ ವಾರದಲ್ಲಿ ಶುಭ ಘಟನೆ ನಡೆಯುತ್ತದೆ. ಬಿಂದು ಕೊಡದ ಕಕ್ಷೆಯಲ್ಲಿದ್ದಾಗ ಗ್ರಹ ಒಳ್ಳೆಯದನ್ನು ಮಾಡುವುದಿಲ್ಲ. 
ಅಷ್ಟಕವರ್ಗ ಎಂಬುದು ಜ್ಯೋತಿಷ್ಯದ ಎಕ್ಸ್‌-ರೇ (X-ray) ಇದ್ದಂತೆ. ಮೇಲ್ನೋಟಕ್ಕೆ ಕಾಣಿಸದ ಗ್ರಹಗಳ ನೈಜ ಶಕ್ತಿಯನ್ನು ಇದು ಎಳೆಎಳೆಯಾಗಿ ಬಿಚ್ಚಿಡುತ್ತದೆ.

      ಧನಾಗಮನ ಮತ್ತು ದರಿದ್ರ ಯೋಗ:--
ಜಾತಕದಲ್ಲಿ ಕೇವಲ ಗ್ರಹಗಳ ಯೋಗಗಳನ್ನು ನೋಡಿ ಧನವಂತರಾಗುತ್ತಾರೋ ಇಲ್ಲವೋ ಎಂದು ಹೇಳಲು ಬರುವುದಿಲ್ಲ. ಅದಕ್ಕೆ ಸರ್ವಾಷ್ಟಕವರ್ಗದಲ್ಲಿ ಒಂದು ಅದ್ಭುತ ಗಣಿತವಿದೆ:

       ಸೂತ್ರ: 11ನೇ ಮನೆಯ (ಲಾಭ) ಮತ್ತು 1೦ನೇ ಮನೆಯ (ಕರ್ಮ) ಬಿಂದುಗಳನ್ನು ಒಟ್ಟುಗೂಡಿಸಿ. ಹಾಗೆಯೇ, 12 ನೇ ಮನೆಯ (ವ್ಯಯ) ಮತ್ತು 1 ನೇ ಮನೆಯ (ಲಗ್ನ/ದೇಹ) ಬಿಂದುಗಳನ್ನು ಒಟ್ಟುಗೂಡಿಸಿ.

  (1೦ + 11) ರ ಮೊತ್ತವು (1+ 12 ) ರ ಮೊತ್ತಕ್ಕಿಂತ ಹೆಚ್ಚಾಗಿದ್ದರೆ: ಆ ವ್ಯಕ್ತಿ ಜೀವಮಾನವಿಡೀ ರಾಜನಂತೆ ಬದುಕುತ್ತಾನೆ. ಸಂಪತ್ತು ತಾನಾಗಿಯೇ ಹುಡುಕಿಕೊಂಡು ಬರುತ್ತದೆ. ಭೌತಿಕ ಸುಖಕ್ಕೆ ಕೊರತೆಯಿರುವುದಿಲ್ಲ.

  (1 + 12) ರ ಮೊತ್ತವು (10 + 11) ಕ್ಕಿಂತ ಹೆಚ್ಚಾಗಿದ್ದರೆ: ಆ ವ್ಯಕ್ತಿ ಎಷ್ಟು ಸಂಪಾದಿಸಿದರೂ ಹಣ ಕೈಯಲ್ಲಿ ನಿಲ್ಲುವುದಿಲ್ಲ, ಕಠಿಣ ಪರಿಶ್ರಮ ಪಟ್ಟರೂ ತಕ್ಕ ಪ್ರತಿಫಲ ಸಿಗದೆ ಸಾಲ ಅಥವಾ ವ್ಯರ್ಥ ಖರ್ಚುಗಳು ಬೆನ್ನಟ್ಟಿ ಬರುತ್ತವೆ.

 . "ಬಂಧು-ಮಿತ್ರರಿಂದ ಮೋಸ" ತಿಳಿಯಲೂ ಸಹ ಅಷ್ಟಕವರ್ಗವನ್ನು  ನೋಡಬಹುದು.
    ನಮ್ಮನ್ನು ನಂಬಿದವರೇ ನಮಗೆ ಬೆನ್ನಿಗೆ ಚೂರಿ ಹಾಕುತ್ತಾರಾ ಅಥವಾ ನಮಗೆ ನಿಷ್ಠಾವಂತರಾಗಿರುತ್ತಾರಾ ಎಂಬುದನ್ನು ಅಷ್ಟಕವರ್ಗ ಹೇಳುತ್ತದೆ.

     ಸೂತ್ರ: ನಮ್ಮ ಜನ್ಮ ಲಗ್ನದಿಂದ 4ನೇ ಮನೆ (ಬಂಧುಗಳು/ಸ್ನೇಹಿತರು) ಮತ್ತು 9ನೇ ಮನೆ (ಭಾಗ್ಯ/ಗುರುಗಳು) ಇವುಗಳ ಬಿಂದುಗಳನ್ನು ಗಮನಿಸಿ. 4ನೇ ಮನೆಯಲ್ಲಿ 3೦ಕ್ಕೂ ಹೆಚ್ಚು ಬಿಂದುಗಳಿದ್ದು, 9ನೇ ಮನೆಯಲ್ಲಿ 22 ಬಿಂದುಗಳಿದ್ದರೆ, ನಮ್ಮ ಸ್ವಂತ ಬಂಧುಗಳೇ ನಮ್ಮ ಪ್ರಗತಿಯನ್ನು ಸಹಿಸದೆ ಅಸೂಯೆ ಪಡುತ್ತಾರೆ ಅಥವಾ ನಮಗೆ ಅಡ್ಡಿಪಡಿಸುತ್ತಾರೆ.

    ಒಂದು ವೇಳೆ 9ನೇ ಮನೆಯಲ್ಲಿ ಬಿಂದುಗಳು ಹೆಚ್ಚಿದ್ದು, 4ನೇ ಮನೆಯಲ್ಲಿ ಕಡಿಮೆಯಿದ್ದರೆ, ಹುಟ್ಟಿದ ಊರಿಗಿಂತ ದೂರದ ಊರಿನಲ್ಲಿ, ಅಪರಿಚಿತ ಜನರಿಂದ ಮತ್ತು ಗುರುತು ಇಲ್ಲದವರಿಂದ ಅಪಾರ ಸಹಾಯ ಮತ್ತು ಅದೃಷ್ಟ ಒಲಿದು ಬರುತ್ತದೆ.

   "ಮರಣ ಕಾರಕ ರಾಶಿ" ಮತ್ತು ಅಪಘಾತಗಳ ಮುನ್ಸೂಚನೆ

     ಅಷ್ಟಕವರ್ಗದಲ್ಲಿ ಆಯುಷ್ಯ ಮತ್ತು ಕಷ್ಟದ ಕಾಲವನ್ನು ತಿಳಿಯಲು ಶನಿಯ ಭಿನ್ನಾಷ್ಟಕವರ್ಗವನ್ನು ಬಳಸಲಾಗುತ್ತದೆ.
     ಸೂತ್ರ: ಶನಿಯ ಭಿನ್ನಾಷ್ಟಕವರ್ಗದಲ್ಲಿ ಯಾವ ರಾಶಿಯಲ್ಲಿ ಅತ್ಯಂತ ಕಡಿಮೆ ಬಿಂದುಗಳಿವೆಯೋ (೦, 1 ಅಥವಾ 2 ಬಿಂದುಗಳು), ಆ ರಾಶಿಯನ್ನು ಜಾತಕನ ಅತ್ಯಂತ ದುರ್ಬಲ ಬಿಂದು ಎನ್ನಲಾಗುತ್ತದೆ.

     ರಹಸ್ಯ: ಗೋಚಾರದಲ್ಲಿ ಶನಿ ಗ್ರಹವು ಅಥವಾ ರಾಹು ಗ್ರಹವು ಆ ನಿರ್ದಿಷ್ಟ ರಾಶಿಗೆ ಪ್ರವೇಶಿಸಿದಾಗ, ಜಾತಕನಿಗೆ ತೀವ್ರ ಆರೋಗ್ಯದ ಏರುಪೇರು, ಶಸ್ತ್ರಚಿಕಿತ್ಸೆ (Surgery), ಆಸ್ತಿ ನಷ್ಟ ಅಥವಾ ಅಪಘಾತಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಆ ಕಾಲದಲ್ಲಿ ಅತ್ಯಂತ ಜಾಗರೂಕರಾಗಿರಬೇಕು.
ಪರಿಹಾರವಾಗಿ ಮಹಾಮೃತ್ಯುಂಜಯ ಜಪ ಅಥವಾ ದಾನ ಧರ್ಮಗಳನ್ನು ಮಾಡಬೇಕು.

   "ಶೋಧ್ಯ ಪಿಂಡ"ದಿಂದ ಮಕ್ಕಳ ಭಾಗ್ಯೋದಯ 

    ಗುರು ಗ್ರಹದ ಶೋಧ್ಯ ಪಿಂಡವನ್ನು (Reduction ಮಾಡಿದ ನಂತರ ಸಿಗುವ ಒಟ್ಟು ಅಂಕ) ಬಳಸಿಕೊಂಡು ಸಂತಾನದ ಯೋಗವನ್ನು ಲೆಕ್ಕ ಹಾಕಲಾಗುತ್ತದೆ.
ಗುರುವಿನ ಶೋಧ್ಯ ಪಿಂಡದ ಸಂಖ್ಯೆಯನ್ನು 7 ರಿಂದ ಗುಣಿಸಿ, 27 ರಿಂದ ಭಾಗಿಸಿದಾಗ ಬರುವ ಶೇಷದ (Remainder) ಆಧಾರದ ಮೇಲೆ ಒಂದು ನಕ್ಷತ್ರ ಸಿಗುತ್ತದೆ.
 ಗೋಚಾರದಲ್ಲಿ ಗುರು ಗ್ರಹವು ಆ ನಿರ್ದಿಷ್ಟ ನಕ್ಷತ್ರಕ್ಕೆ ಬಂದಾಗ ಆ ಜಾತಕನಿಗೆ ಸಂತಾನ ಪ್ರಾಪ್ತಿಯಾಗುತ್ತದೆ. ಅಥವಾ ಆ ನಕ್ಷತ್ರದಲ್ಲಿ ಹುಟ್ಟುವ ಮಗುವಿನಿಂದ ಆ ತಂದೆ/ತಾಯಿಗೆ ಜಗತ್ತಿನಲ್ಲಿ ಅತ್ಯಂತ ದೊಡ್ಡ ಕೀರ್ತಿ, ಗೌರವ ಮತ್ತು ಭಾಗ್ಯೋದಯವಾಗುತ್ತದೆ!

 . "ಸರ್ಪ ಶಾಪ / ಪಿತೃ ದೋಷ" 
     ಜಾತಕದಲ್ಲಿ ಪಿತೃ ದೋಷವಿದೆಯೇ ಎಂಬುದನ್ನು ಸೂರ್ಯನ ಅಷ್ಟಕವರ್ಗದಿಂದ ತಿಳಿಯಬಹುದು.
ಸೂತ್ರ: ಸೂರ್ಯನ ಭಿನ್ನಾಷ್ಟಕವರ್ಗದಲ್ಲಿ 9ನೇ ಮನೆಗೆ (ಪಿತೃ ಸ್ಥಾನ) ಸೂರ್ಯನೇ ಕೇವಲ 1 ಅಥವಾ 2 ಬಿಂದುಗಳನ್ನು ನೀಡಿದ್ದರೆ, ಅಲ್ಲಿ ಪಿತೃ ದೋಷವಿದೆ ಎಂದರ್ಥ. ಇಂತಹ ಜಾತಕದವರಿಗೆ ವಂಶ ಪಾರಂಪರ್ಯವಾಗಿ ಬರಬೇಕಾದ ಆಸ್ತಿ ಕೈತಪ್ಪುತ್ತದೆ, ತಂದೆಯ ಜೊತೆ ಸದಾ ವೈಚಾರಿಕ ಭಿನ್ನಾಭಿಪ್ರಾಯಗಳಿರುತ್ತವೆ ಅಥವಾ ಸಮಾಜದಲ್ಲಿ ಎಷ್ಟು ಒಳ್ಳೆಯ ಕೆಲಸ ಮಾಡಿದರೂ ಬೇಗನೆ ಅಪಕೀರ್ತಿ ಬರುತ್ತದೆ
 ಇದಕ್ಕೆ.....
ಗಯಾ ಶ್ರಾದ್ಧ ಅಥವಾ ಪಿತೃ ತರ್ಪಣಗಳ ಮೂಲಕ ಪರಿಹಾರ ಕಂಡುಕೊಳ್ಳಬಹುದು.

    "ಅಷ್ಟಕವರ್ಗವು ಕೇವಲ ಗಣಿತವಲ್ಲ, ಅದು ಬ್ರಹ್ಮದೇವನು ನಮ್ಮ ಹಣೆಯ ಮೇಲೆ ಬರೆದ ಹಣೆಬರಹದ ತೀವ್ರತೆಯನ್ನು ಅಳೆಯುವ ಮಾಪಕ".

     ಜಾತಕದಲ್ಲಿ ಗ್ರಹಗಳು ಎಷ್ಟೇ ಕೆಟ್ಟದಾಗಿ ಕುಳಿತಿದ್ದರೂ, ಅಷ್ಟಕವರ್ಗದ ಬಿಂದುಗಳು ಚೆನ್ನಾಗಿದ್ದರೆ ಆ ವ್ಯಕ್ತಿಯನ್ನು ಯಾರೂ ಸೋಲಿಸಲು ಸಾಧ್ಯವಿಲ್ಲ.

    ಜೀವನದಲ್ಲಿ ನಮಗೆ ಸಾಡೇಸಾತಿ ಶನಿ, ಅಷ್ಟಮ ಶನಿ ಅಥವಾ ರಾಹು ದಶೆ ಬಂದಾಗ ತೀವ್ರ ಮಾನಸಿಕ ಹಿಂಸೆ ಅನುಭವಿಸುತ್ತೇವೆ. ಈ ಕಷ್ಟದ ಕಾಲ ಯಾವಾಗ ಕೊನೆಗೊಳ್ಳುತ್ತದೆ ಎಂಬುದನ್ನು ದಿನಗಳ ಸಮೇತ ಲೆಕ್ಕ ಹಾಕಬಹುದು.
        ಪ್ರತಿ ರಾಶಿಯಲ್ಲಿ 8 ಕಕ್ಷೆಗಳಿರುತ್ತವೆ ಎಂದು ನಾವು ಮುಂಚೆ ನೋಡಿದ್ದೇವೆ. ಶನಿ ಸಂಚರಿಸುವಾಗ ಶನಿಗೆ ಆ ರಾಶಿಯಲ್ಲಿ ಒಟ್ಟು ಬಿಂದುಗಳು ಕಡಿಮೆ ಇದ್ದರೂ, ಯಾವ ಬೇರೆ ಗ್ರಹಗಳ ಕಕ್ಷೆಗಳಲ್ಲಿ ಶನಿಗೆ 'ಬಿಂದು' ಸಿಕ್ಕಿರುತ್ತದೆಯೋ, ಶನಿ ಆ ಕಕ್ಷೆಯ ಡಿಗ್ರಿಗಳಿಗೆ ಬಂದಾಗ ಆ ಕಷ್ಟದ ಅವಧಿಯಲ್ಲೂ ವ್ಯಕ್ತಿಗೆ ದಿಢೀರ್ ರಿಲೀಫ್ (ನೆಮ್ಮದಿ) ಸಿಗುತ್ತದೆ. ಕಷ್ಟದ ನಡುವೆಯೂ ಅದೃಷ್ಟದ ಹಾದಿ ತೆರೆಯುತ್ತದೆ.

     (The Golden Dynamic Transit)
      ನಾವು ಗೋಚಾರದಲ್ಲಿ ಕೇವಲ ಶನಿ ಅಥವಾ ಗುರುವನ್ನು ಮಾತ್ರ ದೊಡ್ಡ ಗ್ರಹಗಳೆಂದು ಗಮನಿಸುತ್ತೇವೆ. ಆದರೆ ಸೂರ್ಯ, ಬುಧ, ಶುಕ್ರರಂತಹ ವೇಗವಾಗಿ ಚಲಿಸುವ ಗ್ರಹಗಳೂ ಸಹ ಅಷ್ಟಕವರ್ಗದ ಮೂಲಕ ದಿನನಿತ್ಯದ ಅದೃಷ್ಟವನ್ನು ಬದಲಾಯಿಸುತ್ತವೆ.

     ಸರ್ವಾಷ್ಟಕವರ್ಗದಲ್ಲಿ ಯಾವ ರಾಶಿಗೆ 3೦ ಕ್ಕಿಂತ ಹೆಚ್ಚು ಬಿಂದುಗಳಿವೆಯೋ , ಆ ರಾಶಿಗೆ ಗೋಚಾರದಲ್ಲಿ ಒಂದೇ ಬಾರಿಗೆ 3 ಅಥವಾ 4 ಗ್ರಹಗಳು ಬಂದು ಕುಳಿತರೆ (ಇದನ್ನು ಗ್ರಹಗಳ ಕೂಟ ಎನ್ನಲಾಗುತ್ತದೆ), ಆ 1 ಅಥವಾ 2 ತಿಂಗಳ ಅವಧಿಯಲ್ಲಿ ಜಾತಕನಿಗೆ ಜೀವನದ ಅತಿ ದೊಡ್ಡ ಸುವರ್ಣಾವಕಾಶ ಸಿಗುತ್ತದೆ.

 . "ಬಿಂದು ಹೀನ ಗ್ರಹ" ಮತ್ತು ನಿರರ್ಥಕ ದಶೆ
ಜಾತಕದಲ್ಲಿ ಒಂದು ಗ್ರಹವು ಅತ್ಯಂತ ಬಲಿಷ್ಠವಾಗಿರಬಹುದು (ಉದಾಹರಣೆಗೆ ಉಚ್ಚ ಸ್ಥಾನದಲ್ಲೋ ಅಥವಾ ಸ್ವಕ್ಷೇತ್ರದಲ್ಲೋ ಇರಬಹುದು). ಮೇಲ್ನೋಟಕ್ಕೆ ಆ ಗ್ರಹದ ದಶೆ ಬಂದರೆ ಜಾತಕನಿಗೆ ಅಪಾರ ಐಶ್ವರ್ಯ ಸಿಗುತ್ತದೆ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ಅಷ್ಟಕವರ್ಗ ಇಲ್ಲಿ ಅಸಲಿ ರಹಸ್ಯವನ್ನು ಬಿಚ್ಚಿಡುತ್ತದೆ. ಆ ಗ್ರಹವು ಕುಳಿತಿರುವ ರಾಶಿಗೆ, ಅದರ ಸ್ವಂತ ಭಿನ್ನಾಷ್ಟಕವರ್ಗದಲ್ಲಿ ಕೇವಲ 1 ಅಥವಾ 2 ಬಿಂದುಗಳು ಮಾತ್ರ ಸಿಕ್ಕಿದ್ದರೆ, ಆ ಗ್ರಹದ 1೦-2೦ ವರ್ಷಗಳ ಮಹಾದಶೆಯು ಸಂಪೂರ್ಣ ನಿರರ್ಥಕವಾಗುತ್ತದೆ! ಹೊರಗಿನಿಂದ ನೋಡಲು ಗ್ರಹ ರಾಜನಂತೆ ಕಂಡರೂ, ಅಷ್ಟಕವರ್ಗದ ಬಿಂದುಗಳು ಇಲ್ಲದಿದ್ದರೆ ಅದು "ಕೈಯಲ್ಲಿ ಆಯುಧವಿಲ್ಲದ ರಾಜನಂತೆ" ಅಸಹಾಯಕನಾಗಿಬಿಡುತ್ತದೆ.

 . "ಆಯುರ್ದಾಯ ಲೆಕ್ಕಾಚಾರ" (The Longevity Secret)

     ಅಷ್ಟಕವರ್ಗದಲ್ಲಿ ಒಬ್ಬ ವ್ಯಕ್ತಿಯ ಆಯುಷ್ಯವನ್ನು ವರ್ಷ, ತಿಂಗಳು ಮತ್ತು ದಿನಗಳ ಸಮೇತ ಲೆಕ್ಕ ಹಾಕುವ 'ಅಷ್ಟಕವರ್ಗ ಆಯುರ್ದಾಯ' ಎಂಬ ಪ್ರತ್ಯೇಕ ಗಣಿತವೇ ಇದೆ.

       ಸೂತ್ರ: ಶನಿ ಭಿನ್ನಾಷ್ಟಕವರ್ಗದ ಬಿಂದುಗಳನ್ನು ಹಾಗೂ 'ಶೋಧ್ಯ ಪಿಂಡ'ವನ್ನು ಗುಣಿಸಿ, ನಿರ್ದಿಷ್ಟ ಸಂಖ್ಯೆಯಿಂದ ಭಾಗಿಸಿದಾಗ ಒಂದು ವರ್ಷದ ಸಂಖ್ಯೆ ಸಿಗುತ್ತದೆ. ಆ ವರ್ಷದಲ್ಲಿ ಗೋಚಾರ ಶನಿಯು ಜಾತಕದ ಅತ್ಯಂತ ಕಡಿಮೆ ಬಿಂದುವಿರುವ ಕಕ್ಷೆಯನ್ನು ದಾಟುವಾಗ ಆಯುಷ್ಯಕ್ಕೆ ಕಂಟಕಗಳು ಬರುತ್ತವೆ. ಇದನ್ನು ಮುಂಚಿತವಾಗಿಯೇ ಅರಿತು ಮಹಾಮೃತ್ಯುಂಜಯ ಹೋಮಗಳ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಇದು ಅಷ್ಟಕವರ್ಗದ ಅತ್ಯಂತ ಗುಪ್ತವಾದ ಗಣಿತ.

  "ವಾಸ್ತು ಮತ್ತು ಅಷ್ಟಕವರ್ಗ" (Vastu Alignment)
     ಇಡೀ ಸರ್ವಾಷ್ಟಕವರ್ಗ ಕುಂಡಲಿಯನ್ನು ಬಳಸಿ, ಜೀವನದಲ್ಲಿ ಯಾವ ದಿಕ್ಕು ಅತ್ಯಂತ ಶ್ರೇಷ್ಠ ಮತ್ತು ಅದೃಷ್ಟ ತರುತ್ತದೆ ಎಂಬುದನ್ನು ವಾಸ್ತು ಪ್ರಕಾರ ನಿರ್ಧರಿಸಬಹುದು.

ಸೂತ್ರ: 12 ರಾಶಿಗಳನ್ನು ನಾಲ್ಕು ದಿಕ್ಕುಗಳಾಗಿ ವಿಂಗಡಿಸಲಾಗುತ್ತದೆ:

ಪೂರ್ವ ದಿಕ್ಕು:- ಮೇಷ, ಸಿಂಹ, ಧನು ರಾಶಿಗಳ ಒಟ್ಟು ಬಿಂದುಗಳ ಮೊತ್ತ.

ದಕ್ಷಿಣ ದಿಕ್ಕು:- ವೃಷಭ, ಕನ್ಯಾ, ಮಕರ ರಾಶಿಗಳ ಒಟ್ಟು ಬಿಂದುಗಳ ಮೊತ್ತ.

ಪಶ್ಚಿಮ ದಿಕ್ಕು:-- ಮಿಥುನ, ತುಲಾ, ಕುಂಭ ರಾಶಿಗಳ ಒಟ್ಟು ಬಿಂದುಗಳ ಮೊತ್ತ.

ಉತ್ತರ ದಿಕ್ಕು :-- ಕರ್ಕಾಟಕ, ವೃಶ್ಚಿಕ, ಮೀನ ರಾಶಿಗಳ ಒಟ್ಟು ಬಿಂದುಗಳ ಮೊತ್ತ.

 ಈ ನಾಲ್ಕು ದಿಕ್ಕುಗಳ ಮೊತ್ತದಲ್ಲಿ ಯಾವ ದಿಕ್ಕಿಗೆ ಅತ್ಯಂತ ಹೆಚ್ಚು ಬಿಂದುಗಳು ಬರುತ್ತವೆಯೋ, ಆ ದಿಕ್ಕಿಗೆ ಮುಖ್ಯದ್ವಾರ ಇರುವ ಮನೆಯಲ್ಲಿ ವಾಸಿಸಿದರೆ ಭಾಗ್ಯೋದಯ.

  ಸ್ವಂತ ಮನೆ ಅಥವಾ ಜಮೀನು ಖರೀದಿಸುವಾಗ ಕೂಡ ಅಷ್ಟಕವರ್ಗವನ್ನು ಬಳಸಬಹುದು.

    ನಿಯಮ: ಜಾತಕದ 4ನೇ ಮನೆ (ವಾಹನ/ಮನೆ) ಮತ್ತು 2ನೇ ಮನೆ (ಧನ) ಯಲ್ಲಿ 30 ಕ್ಕಿಂತ ಹೆಚ್ಚು ಬಿಂದುಗಳಿದ್ದು, 4ನೇ ಮನೆಯ ಅಧಿಪತಿ ಶುಭ ಕಕ್ಷೆಯಲ್ಲಿದ್ದಾಗ ಮಾತ್ರ ಮನೆ ಕಟ್ಟಲು ಆರಂಭಿಸಬೇಕು.
ಜಾತಕದ 4ನೇ ಮನೆಯಲ್ಲಿ ಎಷ್ಟು ಬಿಂದುಗಳಿವೆಯೋ, ಆ ಸಂಖ್ಯೆಗೆ ಹೊಂದಿಕೆಯಾಗುವ ದಿಕ್ಕಿನ ಮುಖವಿರುವ ಮನೆಯನ್ನು ಖರೀದಿಸಿದರೆ ಆ ವ್ಯಕ್ತಿ ಜನ್ಮವಿಡೀ ಸುಖವಾಗಿರುತ್ತಾನೆ.

ಬಾಹ್ಯ ಮತ್ತು ಅಭ್ಯಂತರ" ಫಲ 

    ಸೂತ್ರ: ಸರ್ವಾಷ್ಟಕವರ್ಗದಲ್ಲಿ 1, 2, 4, 9, 10 ಮತ್ತು 11 ನೇ ಮನೆಗಳನ್ನು 'ಅಭ್ಯಂತರ' (ಒಳಗಿನ) ಮನೆಗಳು ಎನ್ನಲಾಗುತ್ತದೆ. 3, 5, 6, 7, 8 ಮತ್ತು 12 ನೇ ಮನೆಗಳನ್ನು 'ಬಾಹ್ಯ' (ಹೊರಗಿನ) ಮನೆಗಳು ಎನ್ನಲಾಗುತ್ತದೆ.

    ನಿಯಮ: ಅಭ್ಯಂತರ ಮನೆಗಳ ಒಟ್ಟು ಬಿಂದುಗಳ ಮೊತ್ತವು, ಬಾಹ್ಯ ಮನೆಗಳ ಒಟ್ಟು ಬಿಂದುಗಳಿಗಿಂತ ಹೆಚ್ಚಾಗಿರಬೇಕು.

     ಫಲಿತಾಂಶ: ಯಾರ ಜಾತಕದಲ್ಲಿ ಅಭ್ಯಂತರ ಮನೆಗಳ ಬಲ ಹೆಚ್ಚಿರುತ್ತದೆಯೋ, ಅವರು ರಾಜನಂತೆ ವೈಭೋಗದ ಜೀವನ ನಡೆಸುತ್ತಾರೆ. ಒಂದು ವೇಳೆ ಬಾಹ್ಯ ಮನೆಗಳ ಬಿಂದುಗಳು ಹೆಚ್ಚಾದರೆ, ಆ ವ್ಯಕ್ತಿ ಎಷ್ಟು ಸಂಪಾದಿಸಿದರೂ ನೆಮ್ಮದಿ ಇಲ್ಲದೆ ಆಧ್ಯಾತ್ಮಿಕವಾಗಿ ಸಂನ್ಯಾಸಿಯಂತೆ ಬಾಳುತ್ತಾನೆ.

 "ಶೋಧ್ಯಪಿಂಡ" ಮತ್ತು ಮರಣ/ರೋಗ ಕಾಲ ನಿರ್ಣಯ (The Longevity Secret)

       "ಮಹರ್ಷಿ ಪರಾಶರರು ಆಯುಷ್ಯ ಮತ್ತು ರೋಗದ ಕಾಲವನ್ನು ನಿಖರವಾಗಿ ತಿಳಿಯಲು ಶೋಧ್ಯಪಿಂಡದ ಅದ್ಭುತ ಗಣಿತವನ್ನು ನೀಡಿದ್ದಾರೆ. ಗೋಚಾರ ಶನಿಯು ಆ ಕಂಟಕ ನಕ್ಷತ್ರಕ್ಕೆ ಬಂದಾಗ ಜಾತಕನಿಗೆ ತೀವ್ರ ಅನಾರೋಗ್ಯ ಅಥವಾ ಮರಣ ಸಂಭವಿಸುತ್ತದೆ."

     ಸೂತ್ರ: ಅಷ್ಟಕವರ್ಗದ ತ್ರಿಕೋಣ ಮತ್ತು ಏಕಾಧಿಪತ್ಯ ಶೋಧನೆ ಮುಗಿದ ನಂತರ ಸಿಗುವ ಸಂಖ್ಯೆಯೇ 'ಶೋಧ್ಯಪಿಂಡ' (Shodhya Pinda). ಇದು ಅಷ್ಟಕವರ್ಗದ ಅತ್ಯುನ್ನತ ಗಣಿತ.

     ನಿಯಮ: ಶನಿಯ ಶೋಧ್ಯಪಿಂಡವನ್ನು ತಗೆದುಕೊಂಡು, ಅದನ್ನು ಶನಿ ಇರುವ ಮನೆಯ ಬಿಂದುಗಳಿಂದ ಗುಣಿಸಿ, 27 ರಿಂದ ಭಾಗಿಸಿದಾಗ ಬರುವ ಶೇಷವೇ (Remainder) ಆ ವ್ಯಕ್ತಿಯ ಜೀವನದ ಕಂಟಕ ನಕ್ಷತ್ರವಾಗಿರುತ್ತದೆ!

       ಆಯುಷ್ಯ ಕಾರಕ ಶನಿ ಮತ್ತು ಮೃತ್ಯು ಭಾಗ" ರಹಸ್ಯ (The Exact Year of Longevity)

   ಶನಿದೇವನು ಆಯುಷ್ಯ ಕಾರಕ. ಆತ ತಾನು ಕುಳಿತ ಮನೆಯಲ್ಲಿ ಎಷ್ಟು ಬಿಂದುಗಳನ್ನು ಪಡೆದಿದ್ದಾನೆ ಎಂಬುದರ ಆಧಾರದ ಮೇಲೆ ಮನುಷ್ಯನ ಆಯುಷ್ಯದ ರೇಖೆ ನಿರ್ಧಾರವಾಗುತ್ತದೆ."
   ಜಾತಕನ ಆಯುಷ್ಯದ ವರ್ಷವನ್ನು ನಿಖರವಾಗಿ ತಿಳಿಯಲು ಅಷ್ಟಕವರ್ಗದಲ್ಲಿ ಒಂದು ಅದ್ಭುತ ಗಣಿತವಿದೆ.
ಶನಿಯ ಭಿನ್ನಾಷ್ಟಕವರ್ಗದಲ್ಲಿ, ಶನಿ ಗ್ರಹವು ಜನ್ಮಕುಂಡಲಿಯಲ್ಲಿ ಯಾವ ರಾಶಿಯಲ್ಲಿ ಕುಳಿತಿದ್ದಾನೋ ಆ ರಾಶಿಯ ಬಿಂದುಗಳನ್ನು ತೆಗೆದುಕೊಳ್ಳಿ.
 ಶನಿ ಕುಳಿತ ರಾಶಿಯ ಬಿಂದುಗಳ ಸಂಖ್ಯೆಯನ್ನು, ಆತನ ಮಹಾದಶೆ ಅಥವಾ ಗೋಚಾರದ ಪ್ರಮುಖ ವರ್ಷಗಳಿಗೆ ಗುಣಿಸಿ ಲೆಕ್ಕ ಹಾಕಿದಾಗ, ಜಾತಕನಿಗೆ ಬರುವ ಅಪಮೃತ್ಯು ಅಥವಾ ತೀವ್ರ ಗಂಡಾಂತರದ ವರ್ಷ ನಿಖರವಾಗಿ ತಿಳಿಯುತ್ತದೆ.

. "ರಾಹು-ಕೇತುಗಳ ಗುಪ್ತ ಬಿಂದು ಸಮನ್ವಯ" (The Shadow Planet Secret)

   ಅಷ್ಟಕವರ್ಗದಲ್ಲಿ ರಾಹು ಮತ್ತು ಕೇತುಗಳಿಗೆ ಪ್ರತ್ಯೇಕ ಚಾರ್ಟ್ ಇರುವುದಿಲ್ಲ. ಆದರೆ ನಾಡಿ ಜ್ಯೋತಿಷ್ಯದಲ್ಲಿ ಇವುಗಳಿಗೂ ಒಂದು ರಹಸ್ಯ ನಿಯಮವಿದೆ.

  ರಾಹು ಜಾತಕದಲ್ಲಿ ಯಾವ ರಾಶಿಯಲ್ಲಿ ಕುಳಿತಿದ್ದಾನೋ, ಆ ರಾಶಿಗೆ ಶನಿಯ ಭಿನ್ನಾಷ್ಟಕವರ್ಗದಲ್ಲಿ ಎಷ್ಟು ಬಿಂದುಗಳಿವೆ ಎಂದು ನೋಡಿ. ಅದೇ ರೀತಿ ಕೇತು ಕುಳಿತ ರಾಶಿಗೆ ಮಂಗಳನ ಭಿನ್ನಾಷ್ಟಕವರ್ಗದಲ್ಲಿ ಎಷ್ಟು ಬಿಂದುಗಳಿವೆ ಎಂದು ನೋಡಿ.

   ನಿಯಮ: ಶನಿಯ ಭಿನ್ನಾಷ್ಟಕದಲ್ಲಿ ರಾಹು ಇರುವ ಮನೆಗೆ 5 ಕ್ಕಿಂತ ಹೆಚ್ಚು ಬಿಂದುಗಳಿದ್ದರೆ, ಆ ರಾಹು ತನ್ನ ದಶೆಯಲ್ಲಿ ಅನಿರೀಕ್ಷಿತ ರಾಜಯೋಗ, ವಿದೇಶ ಯೋಗ ಮತ್ತು ಕೋಟ್ಯಂತರ ಹಣವನ್ನು ನೀಡುತ್ತಾನೆ. ಬಿಂದುಗಳು ಕಡಿಮೆ ಇದ್ದರೆ ಸರ್ಪದೋಷ ಅಥವಾ ತೀವ್ರ ಮಾನಸಿಕ ಅಶಾಂತಿ ತರುತ್ತಾನೆ.

 "ಸರ್ವಾಷ್ಟಕವರ್ಗದಿಂದ ಅದೃಷ್ಟ
 
     ಸೂತ್ರ: ಜಾತಕದ 1, 4, 7 10 ನೇ ಮನೆಗಳನ್ನು (ಕೇಂದ್ರ ಸ್ಥಾನಗಳು) ಮತ್ತು 1, 5 9 ನೇ ಮನೆಗಳನ್ನು (ತ್ರಿಕೋಣ ಸ್ಥಾನಗಳು) ಒಟ್ಟಿಗೆ ಸೇರಿಸಿ ಬಿಂದುಗಳನ್ನು ಲೆಕ್ಕ ಹಾಕಿ.
ಯಾರ ಜಾತಕದಲ್ಲಿ ಕೇಂದ್ರ ಮತ್ತು ತ್ರಿಕೋಣ ಸ್ಥಾನಗಳ ಒಟ್ಟು ಬಿಂದುಗಳ ಮೊತ್ತವು 180 ಕ್ಕಿಂತ ಹೆಚ್ಚಿರುತ್ತದೆಯೋ, ಅವರು ಈ ಭೂಮಿಯ ಮೇಲೆ ಅತ್ಯಂತ ಅದೃಷ್ಟವಂತರು. ಅವರು ಯಾವುದೇ ಬಡ ಕುಟುಂಬದಲ್ಲಿ ಹುಟ್ಟಿದರೂ, ತಮ್ಮ ಸ್ವಪ್ರಯತ್ನ ಮತ್ತು ಅದೃಷ್ಟದಿಂದ ಸಮಾಜದ ಅತ್ಯುನ್ನತ ಶಿಖರವನ್ನು ತಲುಪುತ್ತಾರೆ.

   ಗ್ರಹಯುದ್ಧ :--
       ಜಾತಕದಲ್ಲಿ ಎರಡು ಶತ್ರು ಗ್ರಹಗಳು (ಉದಾಹರಣೆಗೆ ಶನಿ ಮತ್ತು ಮಂಗಳ) ಒಂದೇ ಮನೆಯಲ್ಲಿ ಕುಳಿತಾಗ ಸಾಮಾನ್ಯವಾಗಿ 'ಗ್ರಹಯುದ್ಧ ' 'ದ್ವಂದ್ವ ಯುದ್ಧ' ಅಥವಾ ಕೆಟ್ಟ ಫಲ ಸಿಗುತ್ತದೆ ಎನ್ನಲಾಗುತ್ತದೆ. ಆದರೆ ಅಷ್ಟಕವರ್ಗದಲ್ಲಿ ಇದರ ಸತ್ಯವೇ ಬೇರೆ.

    ಆ ರಾಶಿಯಲ್ಲಿ ಯಾರ ಭಿನ್ನಾಷ್ಟಕವರ್ಗದಲ್ಲಿ ಹೆಚ್ಚು ಬಿಂದುಗಳಿವೆಯೋ, ಆ ಗ್ರಹವೇ ಯುದ್ಧದಲ್ಲಿ ಗೆಲ್ಲುತ್ತದೆ! ಉದಾಹರಣೆಗೆ ಮಂಗಳನಿಗೆ 6 ಬಿಂದುಗಳು ಮತ್ತು ಶನಿಗೆ 2 ಬಿಂದುಗಳಿದ್ದರೆ, ಆ ವ್ಯಕ್ತಿಗೆ ಶನಿಯ ದೋಷ ತಟ್ಟುವುದಿಲ್ಲ, ಬದಲಿಗೆ ಮಂಗಳನ ಶೌರ್ಯ ಮತ್ತು ಭೂಮಿ ಲಾಭ ಸಿಗುತ್ತದೆ.

. "ರಾಜಯೋಗ ಭಂಗ" ಮತ್ತು ನೀಚ ಗ್ರಹದ ಚಮತ್ಕಾರ (The Debilitated Planet Savior)

   ಗ್ರಹವೊಂದು ನೀಚ ರಾಶಿಯಲ್ಲಿದ್ದರೆ (Debilitated) ಅದು ಕೆಟ್ಟ ಫಲ ನೀಡುತ್ತದೆ ಎಂಬುದು ಸಾಮಾನ್ಯ ನಂಬಿಕೆ. ಆದರೆ ಪರಾಶರರು ಒಂದು ವಿನಾಯಿತಿ ನೀಡಿದ್ದಾರೆ.
ಏನೆಂದರೆ...
  ನೀಚನಾಗಿರುವ ಗ್ರಹದ ಭಿನ್ನಾಷ್ಟಕವರ್ಗದಲ್ಲಿ, ಆ ನೀಚ ರಾಶಿಗೆ 7 ಅಥವಾ 8 ಬಿಂದುಗಳು ಬಂದಿದ್ದರೆ, ಆ ಗ್ರಹವು ನೀಚತ್ವವನ್ನು ಕಳೆದುಕೊಂಡು 'ವಿಪರೀತ ರಾಜಯೋಗ'ವನ್ನು ನೀಡುತ್ತದೆ. ಆ ವ್ಯಕ್ತಿ ಶೂನ್ಯದಿಂದ ಕೋಟ್ಯಧಿಪತಿಯಾಗುತ್ತಾನೆ.

. "ಸರ್ವಾಷ್ಟಕವರ್ಗ ಮತ್ತು ಆಯುಷ್ಯದ ಕೊನೆಯ ದಿನಗಳು" (The Final Transition)

      ನಿಯಮ: ವ್ಯಕ್ತಿಯ ಜೀವನದ ಕೊನೆಯ ದಿನಗಳು ನೆಮ್ಮದಿಯಾಗಿರುತ್ತವೆಯೇ ಅಥವಾ ಕಷ್ಟದಿಂದ ಕೂಡಿರುತ್ತವೆಯೇ ಎಂಬುದನ್ನು ತಿಳಿಯಲು ಈ ನಿಯಮ ಉಪಯುಕ್ತ.
      ಸೂತ್ರ: ಜಾತಕದ ಕೊನೆಯ ಮೂರು ಮನೆಗಳಾದ 1೦, 11 ಮತ್ತು 12 ನೇ ಮನೆಗಳ ಬಿಂದುಗಳನ್ನು ನೋಡಿ. 10 ಮತ್ತು 11 ಕ್ಕಿಂತ 12 ನೇ ಮನೆಯಲ್ಲಿ ಬಿಂದುಗಳು ತೀರಾ ಕಡಿಮೆ ಇದ್ದು, 9 ಮತ್ತು 1 ನೇ ಮನೆಯಲ್ಲಿ ಬಿಂದುಗಳು ಹೆಚ್ಚಿದ್ದರೆ, ಆ ವ್ಯಕ್ತಿಯ ಮರಣವು ಯಾವುದೇ ನೋವಿಲ್ಲದೆ, ಅತ್ಯಂತ ಧಾರ್ಮಿಕ ಮತ್ತು ನೆಮ್ಮದಿಯ ವಾತಾವರಣದಲ್ಲಿ (ಮೋಕ್ಷದ ದಾರಿಯಲ್ಲಿ) ಆಗುತ್ತದೆ.

  "ಲಗ್ನಾಧಿಪತಿಯ ಬಿಂದು ಬಲ" ಮತ್ತು ಆರೋಗ್ಯದ ರಹಸ್ಯ (The Immunity Law)

   ಜಾತಕದ ಲಗ್ನಾಧಿಪತಿ ಯಾವ ರಾಶಿಯಲ್ಲಿ ಕುಳಿತಿದ್ದಾನೋ, ಆ ರಾಶಿಗೆ ಅವನದೇ ಭಿನ್ನಾಷ್ಟಕವರ್ಗದಲ್ಲಿ ಎಷ್ಟು ಬಿಂದುಗಳಿವೆ ಎಂದು ನೋಡಿ.
   ಲಗ್ನಾಧಿಪತಿ ಕುಳಿತ ಮನೆಗೆ ಅವನ ಭಿನ್ನಾಷ್ಟಕದಲ್ಲಿ 5 ಕ್ಕಿಂತ ಹೆಚ್ಚು ಬಿಂದುಗಳಿದ್ದರೆ, ಆ ವ್ಯಕ್ತಿಗೆ ಯಾವುದೇ ದೊಡ್ಡ ಕಾಯಿಲೆಗಳು ಬರುವುದಿಲ್ಲ. ಬಂದರೂ ಬೇಗ ಗುಣವಾಗುತ್ತಾರೆ (Immunity). ಒಂದು ವೇಳೆ ಅಲ್ಲಿ 2 ಕ್ಕಿಂತ ಕಡಿಮೆ ಬಿಂದುಗಳಿದ್ದರೆ, ಜಾತಕದಲ್ಲಿ ಎಷ್ಟೇ ದೊಡ್ಡ ಆಯುಷ್ಯ ಯೋಗವಿದ್ದರೂ ಆ ವ್ಯಕ್ತಿ ಸದಾ ರೋಗಪೀಡಿತನಾಗಿರುತ್ತಾನೆ.

. "ಗುರು ಮತ್ತು ಶನಿಯ ಮಹಾ ಮಿಲನ" ನಿಯಮ (The Grand Event Trigger)
    ಸರ್ವಾಷ್ಟಕವರ್ಗದಲ್ಲಿ ಅತ್ಯಂತ ಹೆಚ್ಚು ಬಿಂದುಗಳಿರುವ (ಉದಾಹರಣೆಗೆ 35 ಕ್ಕಿಂತ ಹೆಚ್ಚು) ರಾಶಿ ಯಾವುದು ಎಂದು ಕಂಡುಹಿಡಿದು, ಗೋಚಾರದ ಗುರು ಮತ್ತು ಶನಿ ಇಬ್ಬರೂ ತಮ್ಮ ಸಂಚಾರದ ಅವಧಿಯಲ್ಲಿ ಒಂದೇ ಬಾರಿಗೆ ಆ ರಾಶಿಯನ್ನು ನೋಡಿದಾಗ ಅಥವಾ ಆ ರಾಶಿಯಲ್ಲಿದ್ದಾಗ, ಜಾತಕನ ಜೀವನದ ಅತ್ಯಂತ ದೊಡ್ಡ ಶುಭ ಘಟನೆ (ಮದುವೆ, ದೊಡ್ಡ ಉದ್ಯೋಗ, ವಿದೇಶ ಪ್ರಯಾಣ ಅಥವಾ ಮಗುವಿನ ಜನನ) ಸಂಭವಿಸುತ್ತದೆ.

      ದೂರ ಪ್ರಯಾಣ (Long-distance Travel) ಮತ್ತು ತೀರ್ಥಯಾತ್ರೆಗಳ (Pilgrimage) ಸಮಯ ಹಾಗೂ ಯಶಸ್ಸನ್ನು ನಿರ್ಧರಿಸುವಲ್ಲಿ ಅಷ್ಟಕವರ್ಗ ಪದ್ಧತಿಯು ಅತ್ಯಂತ ನಿಖರವಾದ ಲೆಕ್ಕಾಚಾರವನ್ನು ನೀಡುತ್ತದೆ. ಜಾತಕದಲ್ಲಿ ಒಂಬತ್ತನೇ ಮನೆ (9th House - ತೀರ್ಥಯಾತ್ರೆ/ಭಾಗ್ಯ) ಮತ್ತು ಹನ್ನೆರಡನೇ ಮನೆ (12th House - ದೂರ ಪ್ರಯಾಣ/ವಿದೇಶ ಪ್ರವಾಸ) ಇವುಗಳನ್ನು ಪ್ರಧಾನವಾಗಿ ನೋಡಲಾಗುತ್ತದೆ. ಜಾತಕದ 9ನೇ ಮನೆಯಲ್ಲಿ ಸರ್ವಾಷ್ಟಕವರ್ಗದಲ್ಲಿ ಎಷ್ಟು ಬಿಂದುಗಳಿವೆ ಎಂದು ನೋಡಿ.
      ಗೋಚಾರದ ಗುರು ಗ್ರಹವು ಜಾತಕದ 9 ನೇ ಮನೆಗೆ ಬಂದಾಗ ಅಥವಾ ಗುರುವಿನ ಭಿನ್ನಾಷ್ಟಕವರ್ಗದಲ್ಲಿ 5 ಕ್ಕಿಂತ ಹೆಚ್ಚು ಬಿಂದುಗಳಿರುವ ರಾಶಿಗೆ ಪ್ರವೇಶಿಸಿದಾಗ, ಜಾತಕನಿಗೆ ಅತ್ಯಂತ ಪವಿತ್ರವಾದ ಪುಣ್ಯಕ್ಷೇತ್ರಗಳ ದರ್ಶನ ಹಾಗೂ ತೀರ್ಥಯಾತ್ರೆ ಮಾಡುವ ಸೌಭಾಗ್ಯ ಒದಗಿಬರುತ್ತದೆ. ಆ ಪ್ರಯಾಣವು ಅತ್ಯಂತ ಸುಖಕರ ಮತ್ತು ಆಧ್ಯಾತ್ಮಿಕ ಉನ್ನತಿ ನೀಡುವಂತದ್ದಾಗಿರುತ್ತದೆ.

.    "ಶನಿ-ಮಂಗಳ ಮತ್ತು ಪ್ರಯಾಣದ ಕಂಟಕ"  (The Travel Danger Alert)
      ಸೂತ್ರ: ಜಾತಕದ 8ನೇ ಮನೆ (ಅಪಘಾತ/ಗಂಡಾಂತರ) ಮತ್ತು 12 ನೇ ಮನೆ (ದೂರ ಪ್ರಯಾಣ) ಇವುಗಳ ಬಿಂದುಗಳನ್ನು ಗಮನಿಸಬೇಕು.
ಒಂದು ವೇಳೆ 12 ನೇ ಮನೆಯಲ್ಲಿ ಸರ್ವಾಷ್ಟಕವರ್ಗ ಬಿಂದುಗಳು ಹೆಚ್ಚಿದ್ದು (3೦+), ಆದರೆ ಅಲ್ಲಿ ಶನಿ ಅಥವಾ ಮಂಗಳನ ಭಿನ್ನಾಷ್ಟಕವರ್ಗದಲ್ಲಿ ಕೇವಲ ೦ ಅಥವಾ 1 ಬಿಂದು ಇದ್ದರೆ, ಆ ರಾಶಿಗೆ ಗೋಚಾರ ಗ್ರಹಗಳು ಬಂದಾಗ ದೂರ ಪ್ರಯಾಣ ಮಾಡಬಾರದು.ಅಂತಹ ಸಮಯದಲ್ಲಿ ಪ್ರಯಾಣ ಬೆಳೆಸಿದರೆ ಹಣದ ನಷ್ಟ, ಅಪಘಾತ, ಅಥವಾ ತೀರ್ಥಯಾತ್ರೆಗೆ ಹೋದ ಜಾಗದಲ್ಲಿ ತೀವ್ರ ಅನಾರೋಗ್ಯ ಎದುರಾಗುತ್ತದೆ. ಇದನ್ನು 'ಯಾತ್ರಾ ಭಂಗ ಯೋಗ' ಎನ್ನಲಾಗುತ್ತದೆ.

. "ಚಂದ್ರ ಮತ್ತು ಜಲಾವೃತ ತೀರ್ಥಕ್ಷೇತ್ರಗಳ" ರಹಸ್ಯ 
   ಚಂದ್ರನು ಜಲ ಗ್ರಹ ಮತ್ತು ಆತ ಪ್ರಯಾಣಕ್ಕೆ ಕಾರಕ. ಚಂದ್ರನ ಭಿನ್ನಾಷ್ಟಕವರ್ಗದಲ್ಲಿ ಜಲ ರಾಶಿಗಳಾದ ಕರ್ಕಾಟಕ, ವೃಶ್ಚಿಕ ಮತ್ತು ಮೀನ ರಾಶಿಗಳ ಬಿಂದುಗಳನ್ನು ಲೆಕ್ಕ ಹಾಕಿ....  ಈ ಜಲ ರಾಶಿಗಳಲ್ಲಿ ಚಂದ್ರನಿಗೆ 5 ಕ್ಕಿಂತ ಹೆಚ್ಚು ಬಿಂದುಗಳಿದ್ದರೆ, ಆ ವ್ಯಕ್ತಿ ತನ್ನ ಜೀವನದಲ್ಲಿ ಕಾಶಿ, ರಾಮೇಶ್ವರ, ಜಗನ್ನಾಥ ಪುರಿ ಅಥವಾ ಸಮುದ್ರ/ನದಿ ತೀರದಲ್ಲಿರುವ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುತ್ತಾನೆ. ಗೋಚಾರ ಚಂದ್ರನು ಆ ಬಿಂದು ಬಲವಿರುವ ರಾಶಿಗೆ ಬಂದ ದಿನಗಳಲ್ಲೇ ತೀರ್ಥಯಾತ್ರೆಯ ಯೋಗ ಕೂಡಿಬರುತ್ತದೆ.

,    ಇಂದಿನ ದಿನಗಳಲ್ಲಿ ಜನರು ತೀರ್ಥಯಾತ್ರೆಗೆ ಅಥವಾ ವಿದೇಶ ಪ್ರವಾಸಕ್ಕೆ ಹೋಗುವಾಗ ಕೇವಲ ವಾರ-ತಿಂಗಳುಗಳನ್ನಷ್ಟೇ ನೋಡುತ್ತಾರೆ. ಆದರೆ ಅಷ್ಟಕವರ್ಗದ 9 ಮತ್ತು 12 ನೇ ಮನೆಯ ಬಿಂದು ಬಲವನ್ನು ನೋಡದೆ ಹೋದರೆ, ಪುಣ್ಯಕ್ಷೇತ್ರಕ್ಕೆ ಹೋದರೂ ನೆಮ್ಮದಿ ಸಿಗುವುದಿಲ್ಲ. ಬಿಂದುಗಳು ಬಲಿಷ್ಠವಾಗಿದ್ದಾಗ ಹೋಗುವ ಯಾತ್ರೆಯು ಮಾತ್ರ ಮನುಷ್ಯನಿಗೆ ನಿಜವಾದ ಆತ್ಮಶಾಂತಿ ಮತ್ತು ದೈವಾನುಗ್ರಹವನ್ನು ತಂದುಕೊಡುತ್ತದೆ.. ಹಾಗೆಯೇ ರವಿ ಸಂಚಾರದಿಂದ ಕೂಡಾ ನಾವುಗಳು ಯಾತ್ರೆಯ ಯಶಸ್ಸನ್ನು ನಿರೀಕ್ಷಿಸಬಹುದು.. ಹೇಗೆಂದರೆ, ಸರ್ವಾಷ್ಟಕವರ್ಗದಲ್ಲಿ ಅತಿ ಹೆಚ್ಚು ಬಿಂದುಗಳಿರುವ ರಾಶಿಯಲ್ಲಿ ಸೂರ್ಯನು ಸಂಚರಿಸುವಾಗ ಕೈಗೊಳ್ಳುವ ಪ್ರಯಾಣವು ಅತ್ಯಂತ ಯಶಸ್ವಿ, ಗೌರವಯುತ ಮತ್ತು ಲಾಭದಾಯಕವಾಗಿರುತ್ತದೆ.

      ಸೂರ್ಯನೇ ಆತ್ಮಕಾರಕ ಮತ್ತು ಬೆಳಕು: ಜ್ಯೋತಿಷ್ಯದಲ್ಲಿ ಸೂರ್ಯನನ್ನು ರಾಜ, ಕೀರ್ತಿ, ಯಶಸ್ಸು ಮತ್ತು ಅಧಿಕಾರದ ಕಾರಕ ಎನ್ನಲಾಗುತ್ತದೆ. ಸರ್ವಾಷ್ಟಕವರ್ಗದಲ್ಲಿ 3೦ ಕ್ಕಿಂತ ಹೆಚ್ಚು ಬಿಂದುಗಳಿರುವ ಬಲಿಷ್ಠ ರಾಶಿಗೆ ಸೂರ್ಯನು ಪ್ರವೇಶಿಸಿದಾಗ ಆ ರಾಶಿಗೆ ವಿಶೇಷವಾದ 'ಪ್ರಕಾಶ' (Energy) ಸಿಗುತ್ತದೆ.
ಪ್ರಯಾಣದಲ್ಲಿ ರಾಜಗೌರವ (The Royal Travel): ಸೂರ್ಯನು ಅತಿ ಹೆಚ್ಚು ಬಿಂದುಗಳಿರುವ ರಾಶಿಯಲ್ಲಿ ಸಂಚರಿಸುವ ಆ ಒಂದು ತಿಂಗಳ ಅವಧಿಯಲ್ಲಿ (ಸಂಕ್ರಮಣದಿಂದ ಸಂಕ್ರಮಣದವರೆಗೆ) ಕೈಗೊಳ್ಳುವ ದೂರ ಪ್ರಯಾಣ, ಉದ್ಯೋಗದ ನಿಮಿತ್ತ ಪ್ರಯಾಣ ಅಥವಾ ತೀರ್ಥಯಾತ್ರೆಗಳು ಯಾವುದೇ ಅಡೆತಡೆಗಳಿಲ್ಲದೆ ಪೂರ್ಣಗೊಳ್ಳುತ್ತವೆ. ಸರ್ಕಾರಿ ಕೆಲಸಗಳು, ಉನ್ನತ ಅಧಿಕಾರಿಗಳ ಭೇಟಿ ಅಥವಾ ಉದ್ಯಮದ ಮಾತುಕತೆಗಾಗಿ ಮಾಡುವ ಪ್ರಯಾಣವಾಗಿದ್ದರೆ ಅದರಲ್ಲಿ ಭಾರಿ ಜಯ ಸಿಗುತ್ತದೆ.

     ದೂರ ಪ್ರಯಾಣ ಅಥವಾ ವಿದೇಶ ಪ್ರವಾಸಕ್ಕೆ ವರ್ಷದ ಯಾವ ತಿಂಗಳು ಶ್ರೇಷ್ಠ ಎಂದು ತಿಳಿಯಲು ಸೂರ್ಯನ ಗೋಚಾರವೇ ಆಧಾರ. ನಾವು ದಿನದ ಮುಹೂರ್ತಕ್ಕೆ ಚಂದ್ರಬಲವನ್ನು ನೋಡುತ್ತೇವೆ. ಆದರೆ ಇಡೀ ತಿಂಗಳ ಯಶಸ್ಸಿಗೆ ಸೂರ್ಯಬಲ ಅತ್ಯಾವಶ್ಯಕ. ಸರ್ವಾಷ್ಟಕವರ್ಗದ ಗರಿಷ್ಠ ಬಿಂದುಗಳ ರಾಶಿಯಲ್ಲಿ ಸೂರ್ಯನಿರುವಾಗ ಹೊರಟರೆ, ಆ ಪ್ರಯಾಣದಲ್ಲಿ ನಮಗೆ ರಾಜಗೌರವ ಸಿಗುತ್ತದೆ ಎಂಬುದು ಅಷ್ಟಕವರ್ಗದ ಪ್ರಾಯೋಗಿಕ ಸತ್ಯ...

    ವಿದ್ಯಾಭ್ಯಾಸ, ಬುದ್ಧಿಶಕ್ತಿ, ಮತ್ತು ಜ್ಞಾನಾರ್ಜನೆಯ ನಿಖರವಾದ ವಿಶ್ಲೇಷಣೆಗೆ ಬುಧನ ಭಿನ್ನಾಷ್ಟಕವರ್ಗವನ್ನು ನೋಡುವುದು ಅತ್ಯಗತ್ಯ.
ಜ್ಯೋತಿಷ್ಯದಲ್ಲಿ ಬುಧನನ್ನು 'ಬುದ್ಧಿಕಾರಕ' ಮತ್ತು 'ವಿದ್ಯಾಕಾರಕ' ಎನ್ನಲಾಗುತ್ತದೆ. 
ಬುಧನ ಬಿಂದು ಬಲ" ಮತ್ತು ಏಕಾಗ್ರತೆ (Concentration & Intellect) ಜಾತಕರಿಗೆ ಯಾವ ರೀತಿ ಸಹಾಯಕ ಆಗುತ್ತೆ ಎಂದು ನೋಡುವಾಗ.....
  ಜನ್ಮ ಲಗ್ನದಿಂದ 4ನೇ ಮನೆ (ವಿದ್ಯಾ ಸ್ಥಾನ) ಮತ್ತು 5ನೇ (ಬುದ್ಧಿ ಸ್ಥಾನ) ಆ ಮನೆಗಳಿಗೆ ಬುಧನ ಭಿನ್ನಾಷ್ಟಕವರ್ಗದಲ್ಲಿ ಎಷ್ಟು ಬಿಂದುಗಳು ಬಂದಿವೆ ಎಂಬುದನ್ನು ಲೆಕ್ಕ ಹಾಕಬೇಕು.
ಬುಧನ ಭಿನ್ನಾಷ್ಟಕದಲ್ಲಿ 4 ಮತ್ತು 5ನೇ ಮನೆಗಳಿಗೆ 5 ಅಥವಾ ಅದಕ್ಕಿಂತ ಹೆಚ್ಚು ಬಿಂದುಗಳು ಇದ್ದರೆ, ಆ ಮಗುವಿಗೆ ಅದ್ಭುತವಾದ ಜ್ಞಾಪಕ ಶಕ್ತಿ, ಏಕಾಗ್ರತೆ ಮತ್ತು ಬುದ್ಧಿವಂತಿಕೆ ಇರುತ್ತದೆ. ಪರೀಕ್ಷೆಗಳಲ್ಲಿ ಸದಾ ಮುಂಚೂಣಿಯಲ್ಲಿರುತ್ತಾರೆ.
, "ಜಾತಕದಲ್ಲಿ ಬುಧ ಉಚ್ಚನಾಗಿದ್ದರೂ, ಅವನ ಭಿನ್ನಾಷ್ಟಕದಲ್ಲಿ ವಿದ್ಯಾ ಸ್ಥಾನಕ್ಕೆ ಬಿಂದುಗಳು ಕಡಿಮೆ ಇದ್ದರೆ ಮಗುವಿಗೆ ಓದಿನಲ್ಲಿ ಆಸಕ್ತಿ ಇರುವುದಿಲ್ಲ. ಅಷ್ಟಕವರ್ಗದ ಬಿಂದುಗಳೇ ನಿಜವಾದ ಬುದ್ಧಿಶಕ್ತಿಯ ಅಳತೆಗೋಲು."

   ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಉನ್ನತ ಶಿಕ್ಷಣಕ್ಕೆ (Competitive Exams & Degrees) ಜಾತಕದ 6ನೇ ಮನೆ (ಸ್ಪರ್ಧೆ/ಪರೀಕ್ಷೆ) ಮತ್ತು 9ನೇ ಮನೆ (ಉನ್ನತ ಶಿಕ್ಷಣ/Higher Studies) ಇವುಗಳನ್ನು ಗಮನಿಸಬೇಕು.

    ಬುಧನ ಭಿನ್ನಾಷ್ಟಕವರ್ಗದಲ್ಲಿ 5 ನೇ ಮನೆಗಿಂತ 6ನೇ ಮನೆಯಲ್ಲಿ ಬಿಂದುಗಳು ಹೆಚ್ಚಿದ್ದರೆ, ಆ ವಿದ್ಯಾರ್ಥಿಯು ಐಎಎಸ್ (IAS), ಬ್ಯಾಂಕಿಂಗ್ ಅಥವಾ ಯಾವುದೇ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸುಲಭವಾಗಿ ಪಾಸ್ ಮಾಡುತ್ತಾನೆ. 9ನೇ ಮನೆಯಲ್ಲಿ ಬಿಂದುಗಳು ಹೆಚ್ಚಿದ್ದರೆ ವಿದೇಶಕ್ಕೆ ಹೋಗಿ ಉನ್ನತ ಪದವಿ ಪಡೆಯುವ ಯೋಗವಿರುತ್ತದೆ.

   ಬುಧ ಗೋಚಾರ ಮತ್ತು ಫಲಿತಾಂಶದ ಕಾಲ (Exam Results & Success)
    ಗೋಚಾರದ ಬುಧನು ವರ್ಷದಲ್ಲಿ ಯಾವ ಸಮಯದಲ್ಲಿ ಬಲಿಷ್ಠವಾಗಿರುತ್ತಾನೆ ಎಂದರೆ ಬುಧನ ಭಿನ್ನಾಷ್ಟಕವರ್ಗದಲ್ಲಿ 6 ,7 ಅಥವಾ 8 ಬಿಂದುಗಳಿರುವ ಬಲವಾದ ರಾಶಿಯಲ್ಲಿ ಸಂಚರಿಸುತ್ತಿರುವ ಕಾಲ. ಒಂದು ವೇಳೆ ವಿದ್ಯಾರ್ಥಿಗಳ ಪರೀಕ್ಷಾ ಸಮಯದಲ್ಲಿ ಬಲವಾದ ರಾಶಿಯಲ್ಲಿ ಬುಧನ ಸಂಚಾರ ವಿದ್ದರೆ, ಆ ವಿದ್ಯಾರ್ಥಿಗೆ ಅತ್ಯಂತ ಪ್ರಶಂಸನೀಯ ಅಂಕಗಳು ಮತ್ತು ಯಶಸ್ಸು ಸಿಗುತ್ತದೆ.

    ಬುಧನ ಅಷ್ಟಕವರ್ಗದಲ್ಲಿ ಒಂದು ರಾಶಿಗೆ ೦ ಬಿಂದುವಿದ್ದು, ಗೋಚಾರ ಬುಧ ಅಲ್ಲಿಗೆ ಬಂದಾಗ ವ್ಯಕ್ತಿಯ ಬುದ್ಧಿ ಸಂಪೂರ್ಣ ಭ್ರಮಿತಗೊಳ್ಳುತ್ತದೆ, ವ್ಯಾಪಾರದಲ್ಲಿ ದಿಢೀರ್ ನಷ್ಟ ಅಥವಾ ತಪ್ಪು ನಿರ್ಧಾರಗಳಿಂದ ಹಾನಿಯಾಗುತ್ತದೆ.

   "ಬಾಹುಬಲ ಗ್ರಹ" ಮತ್ತು ಲಾಟರಿ ಯೋಗ
ಜಾತಕದ 12ಮನೆಗಳಲ್ಲಿ ಗ್ರಹಗಳು ಹಂಚಿಹೋಗಿರುತ್ತವೆ. ಆದರೆ ಯಾವ ಮನೆಯಲ್ಲಿ ಅತಿ ಹೆಚ್ಚು ಬಿಂದುಗಳಿರುತ್ತವೆಯೋ, ಆ ಮನೆಯಲ್ಲಿ ಕುಳಿತಿರುವ ಗ್ರಹಕ್ಕೆ 'ಬಾಹುಬಲಿ ಗ್ರಹ' ಅಥವಾ ಸರ್ವಾಧಿಕಾರಿ ಗ್ರಹ ಎನ್ನಲಾಗುತ್ತದೆ. ಆ ಗ್ರಹವು ಜಾತಕದಲ್ಲಿ ಎಷ್ಟೇ ದುರ್ಬಲವಾಗಿದ್ದರೂ (ನೀಚವಾಗಿದ್ದರೂ ಅಥವಾ ಶತ್ರು ಮನೆಯಲ್ಲಿದ್ದರೂ), ತನ್ನ ದಶೆ ಅಥವಾ ಭುಕ್ತಿ ಬಂದಾಗ ವ್ಯಕ್ತಿಗೆ ಅನಿರೀಕ್ಷಿತ ಧನಲಾಭ, ಲಾಟರಿ ಹೊಡೆದಂತಹ ಅದೃಷ್ಟ ಅಥವಾ ಸಮಾಜದಲ್ಲಿ ದೊಡ್ಡ ಹುದ್ದೆಯನ್ನು ತಂದುಕೊಡುತ್ತದೆ. ಅಷ್ಟಕವರ್ಗದ ಬಿಂದುಗಳು ಗ್ರಹದ ಬಾಹ್ಯ ದೋಷಗಳನ್ನು ತೊಡೆದುಹಾಕುತ್ತವೆ!

. "ತ್ರಿಕೋಣ ಶೋಧನೆ"ಯಿಂದ ಶತ್ರುಗಳ ನಾಶ (The Enemy Reduction)
   ತ್ರಿಕೋಣ ಶೋಧನೆಯ ನಂತರ 6 ನೇ ಮನೆಯಲ್ಲಿ (ಶತ್ರು ಸ್ಥಾನ) ಬಿಂದುಗಳ ಸಂಖ್ಯೆ ಶೂನ್ಯವಾದರೆ ಅಥವಾ ತೀರಾ ಕಡಿಮೆಯಾದರೆ, ಆ ವ್ಯಕ್ತಿಯ ಜೀವನದಲ್ಲಿ ಶತ್ರುಗಳೇ ಇರುವುದಿಲ್ಲ. ಒಂದು ವೇಳೆ ಶತ್ರುಗಳು ಹುಟ್ಟಿಕೊಂಡರೂ ಅವರು ತಾವಾಗಿಯೇ ನಾಶವಾಗುತ್ತಾರೆ ಅಥವಾ ಜಾತಕನ ಮುಂದೆ ಶರಣಾಗುತ್ತಾರೆ. ಇದನ್ನು ಅಜಾತಶತ್ರು ಯೋಗ ಎನ್ನಬಹುದು.

 "ದಿಗ್ಬಲ" ಮತ್ತು ಗ್ರಹಗಳ ದಿಕ್ಕಿನ ರಹಸ್ಯ

   ಪ್ರತಿಯೊಂದು ಗ್ರಹಕ್ಕೂ ಅಷ್ಟಕವರ್ಗದಲ್ಲಿ ಒಂದು ನಿರ್ದಿಷ್ಟ ದಿಕ್ಕಿನಲ್ಲಿ ಅತಿ ಹೆಚ್ಚು ಬಿಂದುಗಳು ಸಿಗುತ್ತವೆ.
  ಸೂರ್ಯ ಮತ್ತು ಕುಜನಿಗೆ 1೦ನೇ ಮನೆಯಲ್ಲಿ (ದಕ್ಷಿಣ ದಿಕ್ಕು), ಬುಧ, ಗುರುವಿಗೆ 1 ನೇ ಮನೆಯಲ್ಲಿ (ಪೂರ್ವ ದಿಕ್ಕು), ಶನಿಗೆ 7 ನೇ ಮನೆಯಲ್ಲಿ (ಪಶ್ಚಿಮ ದಿಕ್ಕು) ಶುಕ್ರ ಚಂದ್ರ ರಿಗೆ 4 ನೇ ಮನೆಯಲ್ಲಿ ಬಿಂದುಗಳು ಹೆಚ್ಚಿದ್ದರೆ ಆ ಗ್ರಹಗಳಿಗೆ ದಿಗ್ಬಲ ಬರುತ್ತದೆ. ಜಾತಕದಲ್ಲಿ ಈ ದಿಕ್ಕುಗಳ ಬಲ ಚೆನ್ನಾಗಿದ್ದರೆ, ವ್ಯಕ್ತಿಯು ಆಯಾ ದಿಕ್ಕಿಗೆ ಸಂಬಂಧಿಸಿದ ಉದ್ಯೋಗ ಅಥವಾ ಆಯಾ ಗ್ರಹಕ್ಕೆ ಸಂಬಂಧ ಪಟ್ಟಂತೆ ವ್ಯಾಪಾರ ವ್ಯವಹಾರ ಮಾಡಿದರೆ ಜಗತ್ಪ್ರಸಿದ್ಧನಾಗುತ್ತಾನೆ.

"ಅಷ್ಟಕವರ್ಗ ಮತ್ತು ನವಮಾಂಶ (Navamsa Connection)
    ನಾವಿಲ್ಲಿಯವರೆಗೆ ಕೇವಲ ರಾಶಿ ಕುಂಡಲಿಯಲ್ಲಿ (D-1) ಬಿಂದುಗಳನ್ನು ನೋಡಿದ್ದೆವು. ಆದರೆ ಫಲಿತಾಂಶದ ನೈಜ ತೀವ್ರತೆಯನ್ನು ತಿಳಿಯಲು ಇದನ್ನು ನವಮಾಂಶಕ್ಕೂ ಅನ್ವಯಿಸಬಹುದು.
    ಗೊಚಾರದಲ್ಲಿ ಯಾವುದಾದರೂ ಒಂದು ಗ್ರಹವು (ಉದಾಹರಣೆಗೆ ಗುರು ಅಥವಾ ಶನಿ) ಸಾಗುತ್ತಿರುವಾಗ, ಅದು ನವಮಾಂಶ ಕುಂಡಲಿಯಲ್ಲಿ ಯಾವ ರಾಶಿಯನ್ನು ಪ್ರವೇಶಿಸುತ್ತದೆಯೋ, ಆ ರಾಶಿಗೆ ರಾಶಿ ಕುಂಡಲಿಯ ಸರ್ವಾಷ್ಟಕವರ್ಗದಲ್ಲಿ ಎಷ್ಟು ಬಿಂದುಗಳಿವೆ ಎಂದು ನೋಡಬೇಕು.
   ನವಮಾಂಶದಲ್ಲಿ ಗ್ರಹ ಇರುವ ರಾಶಿಗೆ ಮೂಲ ಸರ್ವಾಷ್ಟಕವರ್ಗದಲ್ಲಿ 32 ಕ್ಕಿಂತ ಹೆಚ್ಚು ಬಿಂದುಗಳಿದ್ದರೆ ಆ ಗ್ರಹವು ಮೇಲ್ನೋಟಕ್ಕೆ ಗೋಚಾರದಲ್ಲಿ ಕೆಟ್ಟ ಸ್ಥಾನದಲ್ಲಿದ್ದರೂ (ಉದಾಹರಣೆಗೆ 8 ಅಥವಾ 12ನೇ ಮನೆಯಲ್ಲಿದ್ದರೂ), ನವಮಾಂಶದ ಬಲದಿಂದಾಗಿ ವ್ಯಕ್ತಿಗೆ ಕೇವಲ ಒಳ್ಳೆಯ ಫಲಗಳನ್ನೇ ನೀಡುತ್ತದೆ! ಕಷ್ಟಗಳು ಧೂಳೀಪಟವಾಗುತ್ತದೆ.

       ಸರ್ವಾಷ್ಟಕವರ್ಗದಲ್ಲಿ ಕೆಲವು ಮನೆಗಳ ಬಿಂದುಗಳ ಪರಸ್ಪರ ಸಂಬಂಧದಿಂದ ಅತ್ಯಂತ ವಿರಳವಾದ ಯೋಗಗಳು ಸೃಷ್ಟಿಯಾಗುತ್ತವೆ.
   ಹೇಗೆಂದರೆ... ಜಾತಕದಲ್ಲಿ 1ನೇ ಮನೆ (ಲಗ್ನ), 4ನೇ ಮನೆ (ಸುಖ), 9 ನೇ ಮನೆ (ಭಾಗ್ಯ) ಮತ್ತು 11ನೇ ಮನೆ (ಲಾಭ)—ಈ ನಾಲ್ಕೂ ಮನೆಗಳಲ್ಲಿ ತಲಾ 3೦ ಅಥವಾ ಅದಕ್ಕಿಂತ ಹೆಚ್ಚು ಬಿಂದುಗಳಿದ್ದರೆ ಅದನ್ನು ಅಷ್ಟಕವರ್ಗದ ಅತ್ಯುನ್ನತ 'ಕಾಮಧೇನು ಯೋಗ' ಎನ್ನಲಾಗುತ್ತದೆ.
  ಫಲ: ಇಂತಹ ಜಾತಕದವರು ಯಾವುದೇ ಬಡ ಕುಟುಂಬದಲ್ಲಿ ಹುಟ್ಟಿದರೂ, ಸ್ವಂತ ಬುದ್ಧಿವಂತಿಕೆ ಮತ್ತು ದೈವಬಲದಿಂದ ಅದ್ಭುತ ಸಾಮ್ರಾಜ್ಯವನ್ನು ಕಟ್ಟುತ್ತಾರೆ. ಇವರ ಜೀವನದಲ್ಲಿ ಸೋಲು ಎನ್ನುವುದು ತೀರಾ ವಿರಳ.

 "ಗ್ರಹಗಳ ಯುದ್ಧ"
    ಜಾತಕದಲ್ಲಿ ಎರಡು ಗ್ರಹಗಳು ಒಂದೇ ಮನೆಯಲ್ಲಿ ತೀರಾ ಹತ್ತಿರದ ಡಿಗ್ರಿಗಳಲ್ಲಿ ಕುಳಿತಾಗ ಅದಕ್ಕೆ 'ಗ್ರಹ ಯುದ್ಧ' (Planetary War) ಎನ್ನಲಾಗುತ್ತದೆ. ಸಾಮಾನ್ಯವಾಗಿ ಇಂತಹ ಸಮಯದಲ್ಲಿ ಯಾವ ಗ್ರಹ ಗೆದ್ದಿದೆ ಎಂದು ತಿಳಿಯಲು ಗೊಂದಲವಾಗುತ್ತದೆ. ಆಗ ಯಾವ ಗ್ರಹದ ಭಿನ್ನಾಷ್ಟಕವರ್ಗದಲ್ಲಿ ಆ ನಿರ್ದಿಷ್ಟ ರಾಶಿಗೆ ಹೆಚ್ಚು ಬಿಂದುಗಳು ಸಿಕ್ಕಿರುತ್ತವೆಯೋ, ಆ ಗ್ರಹವೇ ಯುದ್ಧದಲ್ಲಿ ವಿಜಯಶಾಲಿ ಎಂದು ತೀರ್ಮಾನಿಸಲಾಗುತ್ತದೆ! ಆ ಗ್ರಹವೇ ಜಾತಕನ ಜೀವನದ ದಿಕ್ಕನ್ನು ಬದಲಾಯಿಸುವ ಶಕ್ತಿ ಹೊಂದುತ್ತದೆ.

ಗ್ರಹಗಳ ಉದಯ-ಅಸ್ತಂಗತ" ಮತ್ತು ಬಿಂದುಗಳು (Combustion vs Points)
    ಸಾಮಾನ್ಯವಾಗಿ ಜ್ಯೋತಿಷ್ಯದಲ್ಲಿ ಯಾವುದೇ ಗ್ರಹವು ಸೂರ್ಯನ ಹತ್ತಿರ ಬಂದು ಅಸ್ತಂಗತ (Combust) ಆದಾಗ, ಆ ಗ್ರಹ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ ಮತ್ತು ಕೆಟ್ಟ ಫಲ ನೀಡುತ್ತದೆ ಎಂದು ಹೇಳಲಾಗುತ್ತದೆ. ಆದರೆ ಅಷ್ಟಕವರ್ಗ ಈ ನಿಯಮಕ್ಕೆ ಒಂದು ದೊಡ್ಡ ವಿನಾಯಿತಿ ನೀಡುತ್ತದೆ! ಹೇಗೆಂದರೆ..
    ಒಂದು ಗ್ರಹವು ಜಾತಕದಲ್ಲಿ ಅಸ್ತಂಗತವಾಗಿದ್ದರೂ (Combust), ಭಿನ್ನಾಷ್ಟಕವರ್ಗದಲ್ಲಿ ಆ ಗ್ರಹಕ್ಕೆ ಆ ಮನೆಯಲ್ಲಿ 6 ಅಥವಾ ಅದಕ್ಕಿಂತ ಹೆಚ್ಚು ಬಿಂದುಗಳು ಸಿಕ್ಕಿದ್ದರೆ, ಆ ಗ್ರಹವು ಅಸ್ತಂಗತ ದೋಷದಿಂದ ಮುಕ್ತವಾಗುತ್ತದೆ!
ಫಲಿತಾಂಶ: ಆ ಗ್ರಹವು ತನ್ನ ದಶೆ ಅಥವಾ ಮುಹೂರ್ತದಲ್ಲಿ ಯಾವುದೇ ಕಂಟಕವನ್ನು ಕೊಡುವುದಿಲ್ಲ, ಬದಲಿಗೆ ಅತ್ಯಂತ ಶುಭ ಫಲಗಳನ್ನೇ ನೀಡುತ್ತದೆ. ಏಕೆಂದರೆ ಅಷ್ಟಕವರ್ಗದ ಬಿಂದುಗಳು ಆ ಗ್ರಹಕ್ಕೆ ಆಂತರಿಕವಾಗಿ 'ದಿಗ್ಬಲ' ಮತ್ತು 'ಚೇಷ್ಟಾಬಲ'ವನ್ನು ಒದಗಿಸುತ್ತವೆ.

"ಹೀಗೆ ಅಷ್ಟಕವರ್ಗ ಎಂಬುದು ಕೇವಲ ಅಂಕಿ-ಅಂಶಗಳ ಆಟವಲ್ಲ. ಇದು ಪರಾಶರ ಮಹರ್ಷಿಗಳು ನಮಗೆ ನೀಡಿರುವ ದಿವ್ಯ ಜ್ಞಾನದ ಗಣಿ. ಸಾಮಾನ್ಯ ದೃಷ್ಟಿಗೆ ಕಾಣಿಸದ ಜಾತಕದ ಗುಪ್ತ ರಹಸ್ಯಗಳನ್ನು ಈ ಬಿಂದುಗಳು ನಮಗೆ ಕನ್ನಡಿಯಂತೆ ತೋರಿಸುತ್ತವೆ..."

      ಮಹರ್ಷಿ ಪರಾಶರರು ಅನುಗ್ರಹಿಸಿದ ಅಷ್ಟಕವರ್ಗದ ಈ ಅದ್ಭುತ ಜ್ಞಾನಗಂಗೆಯಿಂದ  ಬಿಂದುಗಳ ರಹಸ್ಯ, ಭಿನ್ನಾಷ್ಟಕವರ್ಗ, ಸರ್ವಾಷ್ಟಕವರ್ಗದ ತತ್ವಗಳು ಹಾಗೂ ಶೋಧ್ಯಪಿಂಡದ ಅತ್ಯುನ್ನತ ಗಣಿತದಿಂದ ಜೀವನದ ಆಗುಹೋಗುಗಳನ್ನು ನಿಖರವಾಗಿ ತಿಳಿಯಬಹುದು.

"ಜ್ಞಾನಿನಾಮ್ ಅಗ್ರಗಣ್ಯಂ ತಂ ಪ್ರಣಮಾಮಿ ಮುಹುರ್ಮುಹುಃ |
ಶ್ರೀ ಕೃಷ್ಣಾರ್ಪಣಮಸ್ತು..."

                      ಧನ್ಯವಾದಗಳು 🙏🙏

                  ✍️ ಡಾ : ಶೈಲಜಾ ರಮೇಶ್ 


ಅಷ್ಟಕವರ್ಗ (ಭಾಗ - 2)

                           ಹರಿಃ ಓಂ 
                ಶ್ರೀ ಗಣಪತಯೇ ನಮಃ 
                 ಶ್ರೀ ಗುರುಭ್ಯೋ ನಮಃ 

ಅಷ್ಟಕವರ್ಗ:--
ಮುಂದುವರೆದ ಭಾಗ.....

ಹಿಂದಿನ ಲೇಖನದಲ್ಲಿ ಭಿನ್ನಾಷ್ಟಕ ವರ್ಗಗಳ ಬಗ್ಗೆ  ತಿಳಿದುಕೊಂಡೆವು.....

   ಅಷ್ಟಕವರ್ಗ ಪದ್ಧತಿಯಲ್ಲಿ ಪ್ರತಿಯೊಂದು ಗ್ರಹದ ಭಿನ್ನಾಷ್ಟಕವರ್ಗವು ಮಾನವನ ಜೀವನದ ನಿರ್ದಿಷ್ಟ ಕ್ಷೇತ್ರಗಳನ್ನು ಮತ್ತು ಗ್ರಹಗಳ ನೈಜ ಸಾಮರ್ಥ್ಯವನ್ನು ಸೂಚಿಸುತ್ತದೆ. ಯಾವ ರಾಶಿಯಲ್ಲಿ ನಿರ್ದಿಷ್ಟ ಗ್ರಹಕ್ಕೆ 4 ಅಥವಾ ಅದಕ್ಕಿಂತ ಹೆಚ್ಚು ಬಿಂದುಗಳಿರುತ್ತವೆಯೋ, ಆ ರಾಶಿಗೆ ಆ ಗ್ರಹ ಬಂದಾಗ ಶುಭ ಫಲಗಳನ್ನು ನೀಡುತ್ತದೆ. 
          ಗ್ರಹಗಳ ಗೋಚಾರ (ಸಂಚಾರ) ಫಲಗಳನ್ನು ತಿಳಿಯಲು ಮತ್ತು ವೃತ್ತಿಜೀವನ, ಆರ್ಥಿಕ ಸ್ಥಿತಿ, ಆಯಸ್ಸು ಮುಂತಾದವುಗಳನ್ನು ಹೆಚ್ಚು ನಿಖರವಾಗಿ ಲೆಕ್ಕಹಾಕಲು ಅಷ್ಟಕವರ್ಗವನ್ನು ಬಳಸಲಾಗುತ್ತದೆ. 

​ಸರ್ವಾಷ್ಟಕವರ್ಗ ನಿಯಮ. 

       ​ಎಲ್ಲಾ 7 ಗ್ರಹಗಳ ಒಟ್ಟು ಬಿಂದುಗಳನ್ನು ಸೇರಿಸಿದಾಗ (48+49+39+54+56+52+39) ಒಟ್ಟು 337 ಬಿಂದುಗಳು ಬರುತ್ತವೆ. ಜಾತಕದಲ್ಲಿ ಈ 337 ಬಿಂದುಗಳನ್ನು 12 ರಾಶಿಗಳಿಗೆ ಹಂಚಲಾಗುತ್ತದೆ.

    ಸಾಮಾನ್ಯವಾಗಿ ಯಾವುದೇ ರಾಶಿಯಲ್ಲಿ 28 ಅಂಕಗಳನ್ನು ಸರಾಸರಿ ಎಂದು ಪರಿಗಣಿಸಲಾಗುತ್ತದೆ. 
ಫಲಿತಾಂಶಗಳು: 28 ಕ್ಕಿಂತ ಹೆಚ್ಚು ಬಿಂದುಗಳನ್ನು ಹೊಂದಿರುವ ಮನೆಗಳು/ರಾಶಿಗಳು ಅತ್ಯಂತ ಮಂಗಳಕರ ಫಲಿತಾಂಶಗಳನ್ನು ನೀಡುತ್ತವೆ. 25 ಕ್ಕಿಂತ ಕಡಿಮೆ ಬಿಂದುಗಳಿದ್ದಲ್ಲಿ ಆ ಪ್ರದೇಶದಲ್ಲಿ ಹೆಚ್ಚು ಶ್ರಮ ಮತ್ತು ತಾಳ್ಮೆ ಅಗತ್ಯವಿರುತ್ತದೆ. 
      
35 ಕ್ಕಿಂತ ಹೆಚ್ಚು ಬಿಂದು ಬಿದ್ದ ರಾಶಿ ಅತಿ ಉತ್ತಮ ಫಲ
25 ಕ್ಕಿಂತ ಹೆಚ್ಚು ಬಿಂದು ಬಿದ್ದ ರಾಶಿ ಮಧ್ಯಮ ಫಲ
20 ಕ್ಕಿಂತ ಕಡಿಮೆ ಬಿಂದು ಬಿದ್ದ ರಾಶಿ ಕನಿಷ್ಠ ಫಲ

    ಅಷ್ಟಮಕ್ಕಿಂತ ಲಗ್ನದಲ್ಲಿ, ಚಂದ್ರಾಷ್ಟಮಕ್ಕಿಂತ ಚಂದ್ರ ಲಗ್ನದಲ್ಲಿ ಹೆಚ್ಚು ಬಿಂದುಗಳಿದ್ದರೆ ದೀರ್ಘ ಆಯಸ್ಸನ್ನು ಸೂಚಿಸುತ್ತದೆ. 

ಸ್ವಂತ ಮನೆ ಅಥವಾ ಜಮೀನು ಖರೀದಿಸುವಾಗ ಕೂಡ ಅಷ್ಟಕವರ್ಗವನ್ನು ಬಳಸಬಹುದು.

       ಜಾತಕದ 4ನೇ ಮನೆ (ವಾಹನ/ಮನೆ) ಮತ್ತು 2ನೇ ಮನೆ (ಧನ) ಯಲ್ಲಿ 30 ಕ್ಕಿಂತ ಹೆಚ್ಚು ಬಿಂದುಗಳಿದ್ದು, 4ನೇ ಮನೆಯ ಅಧಿಪತಿ ಶುಭ ಕಕ್ಷೆಯಲ್ಲಿದ್ದಾಗ ಮಾತ್ರ ಮನೆ ಕಟ್ಟಲು ಆರಂಭಿಸಬೇಕು.
        ಜಾತಕದ 4ನೇ ಮನೆಯಲ್ಲಿ ಎಷ್ಟು ಬಿಂದುಗಳಿವೆಯೋ, ಆ ಸಂಖ್ಯೆಗೆ ಹೊಂದಿಕೆಯಾಗುವ ದಿಕ್ಕಿನ ಕಡೆಗೆ ಮುಖ್ಯ ದ್ವಾರವಿರುವ ಮನೆಯನ್ನು ಖರೀದಿಸಿದರೆ ಆ ವ್ಯಕ್ತಿ ಜನ್ಮವಿಡೀ ಸುಖವಾಗಿರುತ್ತಾನೆ.

ಅಷ್ಟಕವರ್ಗದಲ್ಲಿ ದಿಕ್ಕುಗಳನ್ನು ಆಧರಿಸಿ ಕೂಡ ಜಾತಕರ ಅಭಿವೃದ್ಧಿ ಬಗ್ಗೆ ತಿಳಿಯಬಹುದು 
ಜ್ಯೋತಿಷ್ಯದ ಮೂಲ ತತ್ವದ ಪ್ರಕಾರ

ಪೂರ್ವ ದಿಕ್ಕು 1 5 9 
ದಕ್ಷಿಣ ದಿಕ್ಕು 2 6 10
ಪಶ್ಚಿಮ ದಿಕ್ಕು 3 7 11
ಉತ್ತರ ದಿಕ್ಕು 4 8 12

     ಬೃಹತ್ ಪರಾಶರ ಹೋರಾಶಾಸ್ತ್ರದ 'ಕೋಷ್ಟಕ ವಿಭಜನೆ' (ರಾಶಿ ಮತ್ತು ಭಾವಗಳ ಸಂಬಂಧ) ಪ್ರಕಾರ
ಸರ್ವಾಷ್ಟಕವರ್ಗದಲ್ಲಿ ಜಾತಕದ 12 ಭಾವಗಳನ್ನು ಸಮಾನವಾಗಿ 4 ದಿಕ್ಕುಗಳಾಗಿ ಹಂಚಲು (ಭಾವ 1 ರಿಂದ ಭಾವ 12 ರವರೆಗೆ) ಪರಾಶರ ಮಹರ್ಷಿಗಳು 3-3 ಭಾವಗಳ ಗುಂಪನ್ನು ಮಾಡಿದ್ದಾರೆ. ಇದನ್ನು "ಭಾವ ತ್ರಿಕೋಣ ವಿಭಜನೆ" ಎನ್ನಲಾಗುತ್ತದೆ.

ಅದರ ಪ್ರಕಾರ
ಪೂರ್ವ:1, 12, 11 ಭಾವಗಳು
ದಕ್ಷಿಣ: 8, 9, 10 ಭಾವಗಳು
ಪಶ್ಚಿಮ: 5, 6, 7 ಭಾವಗಳು
ಉತ್ತರ:2, 3, 4 ಭಾವಗಳು

     ಜಾತಕದ ಚಕ್ರವನ್ನು ಲೌಕಿಕವಾಗಿ ಅಥವಾ ಭೌಗೋಳಿಕವಾಗಿ ನೋಡಿದಾಗ 1 ನೇ ಮನೆ ಪೂರ್ವ, 7 ನೇ ಮನೆ ಪಶ್ಚಿಮ, 10 ನೇ ಮನೆ ದಕ್ಷಿಣ ಮತ್ತು 4 ನೇ ಮನೆ ಉತ್ತರ ಎಂದೇ ನಾವೆಲ್ಲರೂ ಕಲಿತಿದ್ದೇವೆ . ಹಾಗಾಗಿ 11, 12 ಪೂರ್ವಕ್ಕೆ ಅಥವಾ 5, 6 ಪಶ್ಚಿಮಕ್ಕೆ ಹೇಗೆ ಸೇರುತ್ತವೆ ಎನ್ನುವ ಗೊಂದಲ ಕಾಡಬಹುದು.

(ಲಗ್ನ ಎಂಬುದು ಪೂರ್ವದ ಆರಂಭವಾದರೆ, ಸೂರ್ಯನು ಮಧ್ಯಾಹ್ನದ ದಕ್ಷಿಣ ಬಿಂದುವನ್ನು (10 ನೇ ಮನೆ) ತಲುಪುವ ಮೊದಲು ದಾಟುವ ಮನೆಗಳೇ 12 ಮತ್ತು 11. ಹಾಗಾಗಿ ಲಗ್ನದ ಮುಂಭಾಗದ ಪೂರ್ವದ ವಲಯಕ್ಕೆ 11 ಮತ್ತು 12 ನೇ ಮನೆಗಳು ಸೇರುತ್ತವೆ.")

. ಸೂರ್ಯನ ಚಲನೆ ಮತ್ತು ದಿನದ 24 ಗಂಟೆಗಳ ಕಾಲಾವಧಿ (The Logic of Sun's Motion)
​ಅಷ್ಟಕವರ್ಗದಲ್ಲಿ ಈ ದಿಕ್ಕುಗಳ ವಿಭಜನೆಯು ಕೇವಲ ಭೌಗೋಳಿಕ ದಿಕ್ಕನ್ನು ಆಧರಿಸಿಲ್ಲ, ಬದಲಿಗೆ ಸೂರ್ಯನು ಜಾತಕ ಚಕ್ರದಲ್ಲಿ ದಿನದ 24 ಗಂಟೆಗಳಲ್ಲಿ ಹೇಗೆ ಚಲಿಸುತ್ತಾನೆ ಎನ್ನುವುದರ ಮೇಲೆ ಆಧಾರಿತವಾಗಿದೆ.

​ಲಗ್ನ (1 ನೇ ಮನೆ): ಇದು ಸೂರ್ಯೋದಯದ ಸಮಯ (ಪೂರ್ವ ದಿಗಂತ).
     ​12 ಮತ್ತು 11 ನೇ ಮನೆಗಳು: ಸೂರ್ಯ ಉದಯಿಸಿದ ನಂತರ (ಬೆಳಗ್ಗೆ 6 ಗಂಟೆಯ ನಂತರ), ಜಾತಕ ಚಕ್ರದಲ್ಲಿ ಸೂರ್ಯನು ಮುಂದಕ್ಕೆ ಹೋಗುವುದಿಲ್ಲ, ಬದಲಿಗೆ 12 ನೇ ಮನೆಗೆ, ನಂತರ 11 ನೇ ಮನೆಗೆ, ತದನಂತರ 10 ನೇ ಮನೆಗೆ (ಮಧ್ಯಾಹ್ನ 12 ಗಂಟೆಗೆ) ಚಲಿಸುತ್ತಾನೆ. ಅಂದರೆ, ಸೂರ್ಯೋದಯದ ನಂತರದ ಮೊದಲ 4 ಗಂಟೆಗಳ ಕಾಲ ಸೂರ್ಯನು ಪೂರ್ವ ದಿಗಂತದ ಆಕಾಶದಲ್ಲೇ ಇರುತ್ತಾನೆ. ಅದಕ್ಕಾಗಿಯೇ 1, 12, 11 ಈ ಮೂರೂ ಭಾವಗಳನ್ನು "ಪೂರ್ವದ ಆಕಾಶ ಅಥವಾ ಪೂರ್ವ ದಿಕ್ಕು" ಎಂದು ಪರಿಗಣಿಸಲಾಗುತ್ತದೆ.
​ಇದೇ ತರ್ಕವನ್ನು ಉಳಿದ ದಿಕ್ಕುಗಳಿಗೂ ಅನ್ವಯಿಸಲಾಗುತ್ತದೆ.

​10 ನೇ ಮನೆ: ಇದು ಮಧ್ಯಾಹ್ನ 12 ಗಂಟೆಯ ಸಮಯ. ಸೂರ್ಯನು ಆಕಾಶದ ಅತಿ ಎತ್ತರದಲ್ಲಿ (ದಕ್ಷಿಣ ಭಾಗದಲ್ಲಿ) ಇರುತ್ತಾನೆ.
     ​9 ಮತ್ತು 8 ನೇ ಮನೆಗಳು: ಮಧ್ಯಾಹ್ನದ ನಂತರ ಸೂರ್ಯನು ಪಶ್ಚಿಮದ ಕಡೆಗೆ ಸರಿಯುವ ಮುನ್ನ ದಕ್ಷಿಣದ ಆಕಾಶದಲ್ಲೇ ಸಾಗುತ್ತಾನೆ (ಮಧ್ಯಾಹ್ನ 12 ರಿಂದ ಸಂಜೆ 4 ರವರೆಗೆ). ಆದ್ದರಿಂದ 10, 9, 8 ನೇ ಮನೆಗಳು "ದಕ್ಷಿಣ ದಿಕ್ಕು" ಆಗುತ್ತವೆ.

​7 ನೇ ಮನೆ: ಇದು ಸೂರ್ಯಾಸ್ತದ ಸಮಯ (ಸಂಜೆ 6 ಗಂಟೆ - ಪಶ್ಚಿಮ ದಿಗಂತ).

​ 6 ಮತ್ತು 5 ನೇ ಮನೆಗಳು: ಸೂರ್ಯ ಮುಳುಗಿದ ತಕ್ಷಣದ ಅವಧಿ (ಸಂಜೆ 6 ರಿಂದ ರಾತ್ರಿ 10 ರವರೆಗೆ). ಸೂರ್ಯನು ಪಶ್ಚಿಮ ದಿಗಂತದ ಕೆಳಗೆ ಜಾರಿರುತ್ತಾನೆ. ಆದ್ದರಿಂದ 7, 6, 5 ನೇ ಮನೆಗಳು "ಪಶ್ಚಿಮ ದಿಕ್ಕು" ಆಗುತ್ತವೆ.

​4 ನೇ ಮನೆ: ಇದು ಮಧ್ಯರಾತ್ರಿ 12 ಗಂಟೆಯ ಸಮಯ (ಉತ್ತರ ದಿಗಂತದ ಕೆಳಭಾಗ).
​ 3 ಮತ್ತು 2 ನೇ ಮನೆಗಳು: ಮಧ್ಯರಾತ್ರಿಯ ನಂತರ ಸೂರ್ಯನು ಮತ್ತೆ ಪೂರ್ವಕ್ಕೆ ಬರುವ ಮುನ್ನ ಇರುವ ರಾತ್ರಿಯ ಕೊನೆಯ ಭಾಗ (ರಾತ್ರಿ 12 ರಿಂದ ಮುಂಜಾನೆ 4 ರವರೆಗೆ). ಆದ್ದರಿಂದ 4, 3, 2 ನೇ ಮನೆಗಳು "ಉತ್ತರ ದಿಕ್ಕು" ಆಗುತ್ತವೆ.

      ಪೂರ್ವ ದಿಕ್ಕಿನ ಒಟ್ಟು ಬಿಂದುಗಳು = 1 ನೇ ಭಾವ + 12 ನೇ ಭಾವ + 11 ನೇ ಭಾವದ ಬಿಂದುಗಳು.
​ದಕ್ಷಿಣ ದಿಕ್ಕಿನ ಒಟ್ಟು ಬಿಂದುಗಳು = 10 ನೇ ಭಾವ + 9 ನೇ ಭಾವ + 8 ನೇ ಭಾವದ ಬಿಂದುಗಳು.
​ಪಶ್ಚಿಮ ದಿಕ್ಕಿನ ಒಟ್ಟು ಬಿಂದುಗಳು = 7 ನೇ ಭಾವ + 6 ನೇ ಭಾವ + 5 ನೇ ಭಾವದ ಬಿಂದುಗಳು.
​ಉತ್ತರ ದಿಕ್ಕಿನ ಒಟ್ಟು ಬಿಂದುಗಳು = 4 ನೇ ಭಾವ + 3 ನೇ ಭಾವ + 2 ನೇ ಭಾವದ ಬಿಂದುಗಳು.

     ಯಾವ ದಿಕ್ಕಿನಲ್ಲಿ ಹೆಚ್ಚು ಬಿಂದುಗಳಿರುತ್ತವೆಯೋ ಆ ದಿಕ್ಕಿನಲ್ಲಿ ಸುಖ ಸಂಪತ್ತು, ಆ ದಿಕ್ಕಿನಲ್ಲಿ ಶುಭ ಗ್ರಹಗಳಿದ್ದರೆ ಶುಭ ಫಲ ಜಾಸ್ತಿ. ಲಗ್ನದ ಅಧಿಪತಿ ಇರುವ ದಿಕ್ಕಿನಲ್ಲಿ ಆತನ ಜೀವನ, 8 ನೇ ಅಧಿಪತಿ ಇರುವ ದಿಕ್ಕು ಆತನಿಗೆ ಕಂಟಕ.

​      ಇದರೊಂದಿಗೆ ಜಾತಕದಲ್ಲಿ ಗ್ರಹಗಳು ಯಾವ ರಾಶಿ/ಭಾವದಲ್ಲಿವೆ ಎಂಬುದನ್ನು ನೋಡುವಾಗ ಸಾಂಪ್ರದಾಯಿಕ ರಾಶಿ ದಿಕ್ಕುಗಳನ್ನು (ಮೇಷ-ಸಿಂಹ-ಧನು = ಪೂರ್ವ ಇತ್ಯಾದಿ) ಬಳಸುತ್ತೇವೆ. ಆದರೆ, ಸರ್ವಾಷ್ಟಕವರ್ಗದ ಬಿಂದುಗಳ ಮೂಲಕ ವ್ಯಕ್ತಿಯ ಜೀವನದ ದಿಕ್ಕು, ಭಾಗ್ಯೋದಯದ ದಿಕ್ಕು ಮತ್ತು ಕಂಟಕದ ದಿಕ್ಕನ್ನು ನಿರ್ಣಯಿಸುವಾಗ ಈ ವಿಶೇಷ ಭಾವ ತ್ರಿಕೋಣ ತತ್ವವೇ ಅತ್ಯಂತ ನಿಖರವಾದ ಫಲಿತಾಂಶವನ್ನು ನೀಡುತ್ತದೆ.
    
    ಲಗ್ನ 1, 2, 4, 9, 10, 11 ಈ ಭಾವಗಳ ಒಟ್ಟು ಬಿಂದು 164 ಕ್ಕಿಂತ ಹೆಚ್ಚಿದ್ದರೆ ಶ್ರೀಮಂತ ಸಂತೃಪ್ತ ಜೀವನ.
   6-8-12 ರಲ್ಲಿಯ ಬಿಂದುಗಳನ್ನು ಕೂಡಿಸಿದರೆ 76 ಕ್ಕಿಂತ ಹೆಚ್ಚಾದರೆ ಖರ್ಚು ಜಾಸ್ತಿ.

     ಅಷ್ಟಕವರ್ಗದಿಂದ ವಿಶೇಷವಾಗಿ ಯಾವ ಅವಸ್ಥೆಯಲ್ಲಿ ಜಾತಕರ , ಸುಖ ಸಂತೋಷ ಇರುತ್ತೆ ಅಂತ ಕೂಡ ನೋಡಬಹುದು, ಉದಾಹರಣೆ: ಬಾಲ್ಯ, ಯೌವನ, ವೃದ್ಧಾಪ್ಯ ಇವು ಮೂರು ಅವಸ್ಥೆಯಲ್ಲಿ ಯಾವುದು ಉತ್ತಮವಾಗಿರುತ್ತೆ ಅಂತ ನೋಡುವಾಗ...

     ರಾಶಿ ಚಕ್ರದ 12 ಭಾವಗಳನ್ನು ತಲಾ 4 ಭಾವಗಳಂತೆ ಮೂರು ಭಾಗಗಳಾಗಿ ಪ್ರತ್ಯೇಕಿಸಬೇಕು:
​ಮೊದಲನೇ ಭಾಗ (ಬಾಲ್ಯ / ಪ್ರಥಮ ಖಂಡ): 1 ನೇ ಭಾವದಿಂದ 4 ನೇ ಭಾವದವರೆಗೆ. (1, 2, 3, 4)
​ಎರಡನೇ ಭಾಗ (ಯೌವನ / ದ್ವಿತೀಯ ಖಂಡ): 5 ನೇ ಭಾವದಿಂದ 8 ನೇ ಭಾವದವರೆಗೆ. (5, 6, 7, 8)
​ಮೂರನೇ ಭಾಗ (ವೃದ್ಧಾಪ್ಯ / ತೃತೀಯ ಖಂಡ): 9 ನೇ ಭಾವದಿಂದ 12 ನೇ ಭಾವದವರೆಗೆ. (9, 10, 11, 12)

ವಿಶೇಷ ನಿಯಮ ( ಸ್ಥೂಲ ದೃಷ್ಟಿ)
      ​ಕೆಲವು ಸಂಪ್ರದಾಯಗಳಲ್ಲಿ ಲಗ್ನದಿಂದ ಎಣಿಸಿದರೆ, ಇನ್ನು ಕೆಲವು ಶಾಸ್ತ್ರಗಳಲ್ಲಿ ಗುರು ಇರುವ ಮನೆಯನ್ನೇ ಲಗ್ನ ಮಾಡಿ,  ಅಲ್ಲಿಂದ ಮುಂದಿನ ಮನೆಗಳನ್ನು ಲೆಕ್ಕ ಹಾಕಲಾಗುತ್ತದೆ. 

ಬೃಹತ್ ಪರಾಶರ ಹೊರಶಾಸ್ತ್ರದಲ್ಲಿ

     ಸ್ಥಿರ ರಾಶಿ ಪದ್ಧತಿ "ಖಂಡ ಸ್ಫುಟ" ನಿಯಮ.ಅಥವಾ ರಾಶಿ ವಿಭಾಗ ಎನ್ನಲಾಗುತ್ತದೆ. ಇದು ಇಡೀ ಬ್ರಹ್ಮಾಂಡದ ಕಾಲಚಕ್ರದಲ್ಲಿ ಆಯಾ ರಾಶಿಗಳ ಶಕ್ತಿಯನ್ನು ಆಧರಿಸಿ ಜಾತಕನ ಸ್ಥಿತ್ಯಂತರವನ್ನು ಸ್ಥೂಲವಾಗಿ ಹೇಳುತ್ತದೆ. ಇಲ್ಲಿ 

ಮೀನದಿಂದ ಮಿಥುನದವರೆಗೆ - ಬಾಲ್ಯ
ಕಟಕದಿಂದ ತುಲಾದವರೆಗೆ - ಯೌವನ
ವೃಶ್ಚಿಕದಿಂದ ಕುಂಭದವರೆಗೆ - ವೃದ್ಧಾಪ್ಯ

    (ರಾಶಿಚಕ್ರದ ಕೊನೆಯ ರಾಶಿಯಾದ ಮೀನವನ್ನು 'ಮೋಕ್ಷ' ಮತ್ತು 'ಹೊಸ ಜನ್ಮದ ಆರಂಭದ ಬಿಂದು' ಎಂದು ಪರಿಗಣಿಸಲಾಗುತ್ತದೆ. ಆತ್ಮವು ಜನ್ಮವೆತ್ತಿ ಭೂಮಿಗೆ ಬರುವ ಆರಂಭಿಕ ಹಂತವನ್ನು ಇದು ಸೂಚಿಸುವುದರಿಂದ, ಮೀನದಿಂದ ಮಿಥುನದವರೆಗಿನ ನಾಲ್ಕು ರಾಶಿಗಳನ್ನು ಬಾಲ್ಯ (ಪ್ರಥಮ ಖಂಡ) ಎಂದು ಕರೆಯಲಾಗಿದೆ.)

     ಯಾವ ಭಾಗದಲ್ಲಿ ಹೆಚ್ಚು ಬಿಂದುಗಳು ಇರುತ್ತವೆಯೋ, ಜೀವನದ ಆ ಕಾಲಘಟ್ಟವು ಅತ್ಯಂತ ಸುಖಕರ, ಯಶಸ್ವಿ ಮತ್ತು ಭಾಗ್ಯಶಾಲಿಯಾಗಿರುತ್ತದೆ.
     ​ಬಾಲ್ಯ ಭಾಗದಲ್ಲಿ ಹೆಚ್ಚು ಬಿಂದುಗಳಿದ್ದರೆ: ಜಾತಕನ ಬಾಲ್ಯ ಮತ್ತು ಆರಂಭಿಕ ಜೀವನ (ಶಿಕ್ಷಣ, ಕೌಟುಂಬಿಕ ಸುಖ) ತುಂಬಾ ಚೆನ್ನಾಗಿರುತ್ತದೆ.
     ​ಯೌವನ ಭಾಗದಲ್ಲಿ ಹೆಚ್ಚು ಬಿಂದುಗಳಿದ್ದರೆ: ಜಾತಕನ ಮಧ್ಯ ವಯಸ್ಸು (ಉದ್ಯೋಗ, ಮದುವೆ, ಸಂಪಾದನೆ, ಕೀರ್ತಿ) ಅತ್ಯಂತ ಪ್ರಗತಿದಾಯಕವಾಗಿರುತ್ತದೆ. ಹೆಚ್ಚಿನ ಸಾಧನೆಗಳು ಈ ಹಂತದಲ್ಲೇ ಆಗುತ್ತವೆ.
     ​ವೃದ್ಧಾಪ್ಯ ಭಾಗದಲ್ಲಿ ಹೆಚ್ಚು ಬಿಂದುಗಳಿದ್ದರೆ: ಜಾತಕನ ಇಳಿವಯಸ್ಸು ಅಥವಾ ಕೊನೆಯ ಕಾಲ ಬಹಳ ಸುಖಮಯವಾಗಿರುತ್ತದೆ. ನೆಮ್ಮದಿ, ಆಧ್ಯಾತ್ಮಿಕ ಚಿಂತನೆ ಮತ್ತು ಮಕ್ಕಳಿಂದ ಸುಖ ಸಿಗುತ್ತದೆ.
     ಲಗ್ನ, ಲಾಭಗಳಲ್ಲಿ 30 ಕ್ಕಿಂತ ಹೆಚ್ಚು ಬಿಂದುಗಳಿದ್ದರೆ ಧನಿಕ ಮತ್ತು ರಾಜ ಮರ್ಯಾದೆ.

     1, 9, 10, 11 ಭಾವಗಳಲ್ಲಿ 30 ಕ್ಕಿಂತ ಹೆಚ್ಚು ಬಿಂದುಗಳಿದ್ದರೆ ಅವನು ಅತ್ಯಂತ ಶ್ರೀಮಂತ. 25 ಕ್ಕಿಂತ ಕಡಿಮೆ ಇದ್ದರೆ ದಾರಿದ್ರ್ಯ.

     ಲಗ್ನದಲ್ಲಿ 30 ಕ್ಕಿಂತ ಕಡಿಮೆ ಬಿಂದುವಿದ್ದು 3 ನೇ ಭಾವದಲ್ಲಿ 30 ಕ್ಕಿಂತ ಹೆಚ್ಚು ಬಿಂದುವಿದ್ದರೆ ರಾಜಯೋಗ. ( 3 ನೇ ಭಾವ ಸ್ವಪ್ರಯತ್ನವನ್ನು ತೋರಿಸುತ್ತೇ, ಸ್ವಪ್ರಯತ್ನದಿಂದ ರಾಜಯೋಗ)

    ಚಂದ್ರನಿಂದ 10, 11 ರಲ್ಲಿ 30 ಕ್ಕಿಂತ ಹೆಚ್ಚು ಬಿಂದುವಿದ್ದು ಗುರುವೀಕ್ಷಣೆ ಇದ್ದರೆ ಮಂತ್ರಿಯಾಗುತ್ತಾನೆ.

    ಲಗ್ನಾಧಿಪತಿ 4 ರಲ್ಲಿದ್ದು 30 ಬಿಂದುಗಳಿದ್ದರೆ ಆ ಮನುಷ್ಯ ಸುಖವಂತ.
     28 ಕ್ಕಿಂತ ಹೆಚ್ಚು ಬಿಂದು ಇರುವ ರಾಶಿಯಲ್ಲಿ ಶನಿ ಸಂಚಾರವಿದ್ದಾಗ - ಶನಿಪೀಡೆ ಕಡಿಮೆ. ಲಗ್ನದಲ್ಲಿ ಮತ್ತು  9 ರಲ್ಲಿ 29 ಕ್ಕಿಂತ ಹೆಚ್ಚು ಬಿಂದು ಇದ್ದರೆ ಪಾಪಗ್ರಹಗಳ ಸಂಬಂಧವಿಲ್ಲದಿದ್ದರೆ ಲಾಟರಿಯಲ್ಲಿ ಹಣ.

       11 ನೇ ಭಾವಕ್ಕಿಂತ 12 ರಲ್ಲಿ ಕಡಿಮೆ ಬಿಂದು ಇದ್ದರೆ ಧನಿಕ. ಗುರುವು 4 ರಲ್ಲಿ 40 ಬಿಂದುಗಳಿಂದ ಕೂಡಿ ಮೇಷದಲ್ಲಿ ರವಿ ಇದ್ದರೆ ಉನ್ನತ ಅಧಿಕಾರ. . 
      ಲಗ್ನವು 40 ಬಿಂದುಗಳಿಂದ ಕೂಡಿ ಧನಸ್ಸಿನಲ್ಲಿ ಗುರು , ಮೀನದಲ್ಲಿ ಶುಕ್ರ, ಮಕರದಲ್ಲಿ ಕುಜ ಇದ್ದರೆ ಜಾತಕನು ಕೋಟ್ಯಾಧೀಶ. 
      11 ರಲ್ಲಿ 10 ಕ್ಕಿಂತ ಹೆಚ್ಚು ಬಿಂದುಗಳಿದ್ದು ಲಗ್ನದಲ್ಲಿ 12 ಕ್ಕಿಂತ ಹೆಚ್ಚು ಬಿಂದುಗಳಿದ್ದಲ್ಲಿ ಸುಖ ಭೋಗಿ.

      4, 5 ನೇ ಭಾವದ ಗ್ರಹಗಳು ಭೌತಿಕ ಜಗತ್ತಿನ ಕಡೆಗೆ ಸೆಳೆಯುತ್ತದೆ . 
1, 3, 9, 10 ಭಾವಗಳು ಹೆಚ್ಚು ಬಲಿಷ್ಠರಾಗಿದ್ದರೆ ಆಧ್ಯಾತ್ಮಿಕತೆ ಕಡೆಗೆ ಪ್ರೀತಿ.

      ಶುಕ್ರ ನೀಚ, ದುಸ್ಥಾನಗಳಲ್ಲಿದ್ದರೂ ಸಹ ಅಲ್ಲಿಗೆ ಹೆಚ್ಚು ಬಿಂದುಗಳಿದ್ದರೆ, ಶುಭ ಫಲಗಳ ಮೊತ್ತ ಜಾಸ್ತಿ ಇರುವುದರಿಂದ  ಆ ಭಾವಗಳು ಉತ್ತಮ ಫಲವನ್ನೇ ಕೊಡುತ್ತದೆ. 

     1, 9, 10, 11 ರಲ್ಲಿ 30 ಬಿಂದುಗಳ ಮೇಲಿದ್ದರೆ ಸುಖಮಯ ಜೀವನ. 
      ಲಗ್ನದಿಂದ ಗುರು/ ಶುಕ್ರರ ಮನೆಯವರೆಗೆ ಎಣಿಸಿ, ಅದನ್ನು ಏಳರಿಂದ ಗುಣಿಸಿ, 27ರಿಂದ ಭಾಗಿಸಿದರೆ ಬಂದ ಭಾಗಲಬ್ದದ ವರ್ಷದಲ್ಲಿ ಪ್ರಗತಿಪರ ಕಾರ್ಯಗಳು ನಡೆಯುತ್ತವೆ. ಶೇಷವು ನಕ್ಷತ್ರವನ್ನು ಸೂಚಿಸುತ್ತದೆ.

      10 ಕ್ಕಿಂತ 11 ರಲ್ಲಿ ಹೆಚ್ಚು ಬಿಂದುಗಳಿಂದ ಕೂಡಿದ್ದರೆ ಕ್ರಿಯಾಶೀಲತೆ ಇರುತ್ತೆ, ತನ್ಮೂಲಕ ಹೆಚ್ಚು ಧನಲಾಭ.
      12 ನೇ ಮನೆಯು 2 ಕ್ಕಿಂತ ಪ್ರಬಲವಾಗಿದ್ದರೆ ಪರದೇಶದಿಂದ ಲಾಭ. 12 ನೆ ಭಾವದ ಬಿಂದುಗಳಿಗಿಂತ 2 ನೆ ಭಾವದ ಬಿಂದು ಹೆಚ್ಚಿದ್ದರೆ ಆತ ಜಿಪುಣ.

     ರೋಗ ಬಂದಾಗ ಯಾವ ರಾಶಿಯಲ್ಲಿ ಕಡಿಮೆ ಬಿಂದುವಿರುತ್ತದೋ ಆ ದಿನ ಡಾಕ್ಟರನ್ನು ಭೇಟಿ ಮಾಡಿದರೆ ಬೇಗ ಖಾಯಿಲೆ ವಾಸಿ ಆಗುತ್ತೆ, ಆ ದಿನ ಸಾಲ ತೆಗೆದುಕೊಂಡರೂ ಕೂಡ ಬೇಗ ಸಾಲ ತೀರುತ್ತದೆ.

1-5-9 ಭಾವಗಳು (ಧರ್ಮ ತ್ರಿಕೋಣ) ಬಂಧು ಭಾವ
2-6-10 ಭಾವಗಳು (ಅರ್ಥ ತ್ರಿಕೋಣ ) ಸೇವಕಭಾವ
3-7-11 ಭಾವಗಳು (ಕಾಮ ತ್ರಿಕೋಣ ) ಪೋಷಕಭಾವ 
4-8-12 ಭಾವಗಳು (ಮೋಕ್ಷ ತ್ರಿಕೋಣ ) ಘಾತಕಭಾವ

     ಧರ್ಮ ತ್ರಿಕೋಣ ಇಲ್ಲಿ ಬಿಂದುಗಳು ಚೆನ್ನಾಗಿದ್ದರೆ ವ್ಯಕ್ತಿ ಧರ್ಮನಿಷ್ಠ, ಬುದ್ಧಿವಂತ ಮತ್ತು ಸಮಾಜದಲ್ಲಿ ಗೌರವ ಉಳ್ಳವನಾಗುತ್ತಾನೆ.

    ಅರ್ಥ ತ್ರಿಕೋಣದಲ್ಲಿ ಬಿಂದುಗಳು ಹೆಚ್ಚಿದ್ದರೆ ಆರ್ಥಿಕ ಸ್ಥಿತಿ, ಉದ್ಯೋಗ ಮತ್ತು ಶತ್ರು ಜಯ ಪ್ರಬಲವಾಗಿರುತ್ತದೆ.

     ಕಾಮ ತ್ರಿಕೋಣ ಇಲ್ಲಿ ಬಿಂದುಗಳು ಹೆಚ್ಚಿದ್ದರೆ ಇಷ್ಟಾರ್ಥ ಸಿದ್ಧಿ, ಉತ್ತಮ ಸ್ನೇಹಿತರು, ದಾಂಪತ್ಯ ಸುಖ ಮತ್ತು ಹೆಚ್ಚಿನ ಲಾಭ ಸಿಗುತ್ತದೆ.

   ಮೋಕ್ಷ ತ್ರಿಕೋಣ ಇಲ್ಲಿ ಬಿಂದುಗಳು ಹೆಚ್ಚಿದ್ದರೆ ಆಧ್ಯಾತ್ಮಿಕ ಚಿಂತನೆ, ಮಾನಸಿಕ ನೆಮ್ಮದಿ ಇರುತ್ತದೆ. ಆದರೆ 8 ಮತ್ತು 12 ರಲ್ಲಿ ಅತಿ ಹೆಚ್ಚು ಬಿಂದುಗಳಿದ್ದರೆ ಖರ್ಚು ಮತ್ತು ಕಷ್ಟಗಳೂ ಹೆಚ್ಚಾಗಬಹುದು.

      ಈ ನಾಲ್ಕು ವಿಭಾಗದ ಬಿಂದುಗಳನ್ನು ಪ್ರತ್ಯೇಕವಾಗಿ ಕೂಡಿಸಿ ಯಾವ ವರ್ಗದಲ್ಲಿ ಹೆಚ್ಚು ಬಿಂದು ಬರುವುದೋ ಆ ವರ್ಗದಿಂದ ಜಾತಕನ ಸುಖ, ಕೆಲಸಗಳನ್ನು ನಿರ್ಧರಿಸಬಹುದು. ಪೋಷಕ ವರ್ಗದ ಬಿಂದುಗಳು, ಘಾತಕಕ್ಕಿಂತ ಹೆಚ್ಚಿದ್ದರೆ ಆತ ಧನಿಕ. ಇಲ್ಲಿ ಅರ್ಥ ಅಥವಾ ಸೇವಕ ವರ್ಗದ ಬಿಂಧುಗಳು ಪ್ರಭಲವಾಗಿದ್ದರೆ ಆತ ಹಣಕ್ಕೆ ಆಸೆ ಪಡುವವನಾಗಿರುತ್ತಾನೆ. ಧರ್ಮ ಭಾವಗಳು ಪ್ರಭಲವಾಗಿದ್ದರೆ ಜಾತಕರು ಧರ್ಮದಿಂದ ಬದುಕುತ್ತಾರೆ.

      ಅಷ್ಟಕವರ್ಗವನ್ನು ಕೇವಲ ಬಿಂದುಗಳಷ್ಟೇ ಅಲ್ಲದೆ, ಮತ್ತಷ್ಟು ಸೂಕ್ಷ್ಮವಾಗಿ ತಿಳಿಯಲು ಎರಡು ಪ್ರಮುಖ ಪ್ರಕ್ರಿಯೆಗಳನ್ನು ಮಾಡಲಾಗುತ್ತದೆ:

ಅವು ತ್ರಿಕೋಣ ಮತ್ತು ಏಕಾಧಿಪತ್ಯ ಶೋಧನೆ 

    . ಮೂಲ ಭಿನ್ನಾಷ್ಟಕವರ್ಗದಲ್ಲಿ ಕಾಣುವ ಬಿಂದುಗಳು ಕಚ್ಚಾ ವಸ್ತುವಿನಂತೆ (Raw Material). ಅದನ್ನು ಶುದ್ಧೀಕರಿಸುವ ಪ್ರಕ್ರಿಯೆಯೇ "ಶೋಧನೆ". ಇದರಲ್ಲಿ ಎರಡು ಪ್ರಕಾರಗಳಿವೆ.
​ ತ್ರಿಕೋಣ ಶೋಧನೆ (Triplicity Reduction)
​ನಮ್ಮ 12 ರಾಶಿಗಳನ್ನು ನಾಲ್ಕು ತತ್ವಗಳ ತ್ರಿಕೋಣಗಳಾಗಿ ವಿಂಗಡಿಸಲಾಗಿದೆ:

​ಅಗ್ನಿ ತ್ರಿಕೋಣ: ಮೇಷ, ಸಿಂಹ, ಧನುಸ್ಸು 
​ಪೃಥ್ವಿ ತ್ರಿಕೋಣ: ವೃಷಭ, ಕನ್ಯಾ, ಮಕರ 
​ವಾಯು ತ್ರಿಕೋಣ: ಮಿಥುನ, ತುಲಾ, ಕುಂಭ
​ಜಲ ತ್ರಿಕೋಣ: ಕಟಕ, ವೃಶ್ಚಿಕ, ಮೀನ 

ತ್ರಿಕೋಣ​ ಶೋಧನೆಯ ನಿಯಮ: 

    ​ಒಂದು ತ್ರಿಕೋಣದ ಮೂರು ರಾಶಿಗಳ ಬಿಂದುಗಳನ್ನು ಗಮನಿಸಿ. ಆ ಮೂರರಲ್ಲಿ ಯಾವ ರಾಶಿಯಲ್ಲಿ ಅತ್ಯಂತ ಕಡಿಮೆ ಬಿಂದು ಇದೆಯೋ, ಆ ಸಂಖ್ಯೆಯನ್ನು ಮೂರು ರಾಶಿಗಳ ಬಿಂದುಗಳಿಂದ ಕಳೆಯಬೇಕು.

     ಒಂದು ನಿರ್ದಿಷ್ಟ ಗ್ರಹದ ಭಿನ್ನಾಷ್ಟಕವರ್ಗದಲ್ಲಿ, ಉದಾಹರಣೆಗೆ....ಅಗ್ನಿ ತ್ರಿಕೋಣದ ಮೂರು ರಾಶಿಗಳ ಬಿಂದುಗಳನ್ನು ನೋಡಬೇಕು. ಮೇಷದಲ್ಲಿ 4, ಸಿಂಹದಲ್ಲಿ 5 ಧನುಸ್ಸಿನಲ್ಲಿ 2 ಬಿಂದುಗಳಿವೆ ಎಂದುಕೊಳ್ಳೋಣ. ಈ ಮೂರರಲ್ಲಿ ಅತ್ಯಂತ ಕಡಿಮೆ ಬಿಂದು ಯಾವುದು? '2'. ಈಗ ಈ ಮೂರೂ ರಾಶಿಗಳಿಂದ 2 ಅನ್ನು ಕಳೆಯಬೇಕು. ಆಗ ಮೇಷದಲ್ಲಿ 2, ಸಿಂಹದಲ್ಲಿ 3, ಧನುಸ್ಸಿನಲ್ಲಿ ಶೂನ್ಯ (೦) ಉಳಿಯುತ್ತದೆ. 

    ಯಾವುದಾದರೂ ಒಂದು ರಾಶಿಯಲ್ಲಿ 0 (ಶೂನ್ಯ) ಬಿಂದು ಇದ್ದರೆ, ಆ ಗುಂಪಿನಲ್ಲಿ ಯಾವುದೇ ಕಡಿತ (ಶೋಧನೆ) ಮಾಡುವಂತಿಲ್ಲ. ಬಿಂದುಗಳು ಹಾಗೇ ಉಳಿಯುತ್ತವೆ.

   ​ಮೂರು ರಾಶಿಗಳಲ್ಲಿ ಸಮಾನ ಬಿಂದುಗಳಿದ್ದರೆ (ಉದಾ: 4, 4, 4), ಮೂರೂ ಶೂನ್ಯವಾಗುತ್ತವೆ (0, 0, 0).

    ಮೂರು ರಾಶಿಗಳಲ್ಲಿ 2 ರಾಶಿಯಲ್ಲಿ ಶೂನ್ಯ ಬಿಂದುವಿದ್ದರೆ ಮೂರನೇ ರಾಶಿಯಲ್ಲಿರುವ ಬಿಂದುಗಳನ್ನು ಪರಿಗಣಿಸಬಾರದು.

"ಇದು ಜಾತಕದ ಅಹಂಕಾರವನ್ನು ಕರಗಿಸಿ ನೈಜ ಶಕ್ತಿಯನ್ನು ತೋರಿಸುವ ಗಣಿತ".

​ ಏಕಾಧಿಪತ್ಯ ಶೋಧನೆ (Dual Lordship Reduction)
​     ತ್ರಿಕೋಣ ಶೋಧನೆ ಮುಗಿದ ನಂತರ "ಏಕಾಧಿಪತ್ಯ ಶೋಧನೆ" ಮಾಡಬೇಕು. ಸೂರ್ಯ ಮತ್ತು ಚಂದ್ರರನ್ನು ಹೊರತುಪಡಿಸಿ ಉಳಿದ 5 ಗ್ರಹಗಳಿಗೆ ಎರಡೆರಡು ಮನೆಗಳಿವೆ. ಮಂಗಳನಿಗೆ ಮೇಷ-ವೃಶ್ಚಿಕ, ಬುಧನಿಗೆ ಮಿಥುನ-ಕನ್ಯಾ, ಗುರುವಿಗೆ ಧನುಸ್ಸು-ಮೀನ, ಶುಕ್ರನಿಗೆ ವೃಷಭ-ತುಲಾ, ಶನಿಗೆ ಮಕರ-ಕುಂಭ.

ಏಕಾಧಿಪತ್ಯ ಶೋಧನೆಯ ಪ್ರಮುಖ ನಿಯಮಗಳು:

​    1. ಎರಡೂ ಮನೆಗಳಲ್ಲಿ ಶೋಧಿತ ಬಿಂದುಗಳು ಸಮನಾಗಿದ್ದು, ಎರಡೂ ಮನೆಗಳಲ್ಲಿ ಯಾವುದೇ ಗ್ರಹ ಇಲ್ಲದಿದ್ದರೆ, ಎರಡೂ ಮನೆಗಳ ಬಿಂದುಗಳನ್ನು ಶೂನ್ಯ (0) ಮಾಡಬೇಕು.

    2. ​ಎರಡೂ ಮನೆಗಳಲ್ಲಿ ಬಿಂದುಗಳು ಅಸಮನಾಗಿದ್ದು (ಉದಾ: ಒಂದು ಕಡೆ 4, ಇನ್ನೊಂದು ಕಡೆ 2), ಎರಡೂ ಮನೆಗಳು ಗ್ರಹ ರಹಿತವಾಗಿದ್ದರೆ, ಕಡಿಮೆ ಇರುವ ಬಿಂದುವನ್ನು ಎರಡೂ ಕಡೆ ಕಳೆಯಬೇಕು (ಆಗ 4 ಇದ್ದದ್ದು 2 ಆಗುತ್ತದೆ, 2 ಇದ್ದದ್ದು 0 ಆಗುತ್ತದೆ).

    3. ​ಒಂದು ಮನೆಯಲ್ಲಿ ಗ್ರಹವಿದ್ದು, ಇನ್ನೊಂದು ಮನೆ ಖಾಲಿ ಇದ್ದರೆ, ​ಖಾಲಿ ಇರುವ ಮನೆಯ ಬಿಂದು ಹೆಚ್ಚಿದ್ದರೆ, ಅದನ್ನು ಗ್ರಹವಿರುವ ಮನೆಯ ಬಿಂದುವಿಗೆ ಸಮ ಮಾಡಬೇಕು.

    ​4. ಖಾಲಿ ಇರುವ ಮನೆಯ ಬಿಂದು ಕಡಿಮೆಯಿದ್ದರೆ, ಆ ಖಾಲಿ ಮನೆಯ ಬಿಂದುವನ್ನು ಶೂನ್ಯ ಮಾಡಬೇಕು, ಗ್ರಹವಿರುವ ಮನೆಯ ಬಿಂದು ಹಾಗೇ ಇರುತ್ತದೆ.

    5. ​ಎರಡೂ ಮನೆಗಳಲ್ಲಿ ಗ್ರಹಗಳಿದ್ದರೆ - ಯಾವುದೇ ಶೋಧನೆ ಮಾಡುವಂತಿಲ್ಲ, ಬಿಂದುಗಳು ಹಾಗೇ ಇರುತ್ತವೆ.ಈ ತರಹ ​ ಶೋಧನೆಯ ನಂತರ ಸಿಗುವ ಬಿಂದುಗಳೇ "ಶೋಧಿತ ಬಿಂದುಗಳು".

​ ಶೋಧ್ಯಪಿಂಡದ ಗಣಿತ 
    ​ಏಕಾಧಿಪತ್ಯ ಶೋಧನೆಯ ನಂತರ ಬಂದ ಬಿಂದುಗಳಿಗೆ ಎರಡು ರೀತಿಯ ಗುಣಾಕಾರಗಳನ್ನು ಮಾಡಲಾಗುತ್ತದೆ:

​ ರಾಶಿ ಗುಣಕಾರ:-- ಪ್ರತಿಯೊಂದು ರಾಶಿಗೂ ಮಹರ್ಷಿಗಳು ಒಂದು ಸ್ಥಿರ ಸಂಖ್ಯೆಯನ್ನು ನೀಡಿದ್ದಾರೆ.

   (ಮೇಷಕ್ಕೆ 7, ವೃಷಭಕ್ಕೆ 10, ಮಿಥುನಕ್ಕೆ 8, ಕಟಕಕ್ಕೆ 4, ಸಿಂಹಕ್ಕೆ 10, ಕನ್ಯಾಕ್ಕೆ 5, ತುಲಾಗೆ 7, ವೃಶ್ಚಿಕ ಕ್ಕೆ 8, ಧನಸ್ಸುವಿಗೆ 9, ಮಕರಕ್ಕೆ 5, ಕುಂಭಕ್ಕೆ 11, ಮೀನಕ್ಕೆ 12 ). ಆಯಾ ರಾಶಿಯ ಶೋಧಿತ ಬಿಂದುವನ್ನು ಈ ಸಂಖ್ಯೆಯಿಂದ ಗುಣಿಸಬೇಕು. ಬಂದ ಮೊತ್ತವೇ 'ರಾಶಿಪಿಂಡ'
        ರಾಶಿ ಪಿಂಡ: ಪ್ರತಿ ರಾಶಿಯ ಶೋಧಿತ ಬಿಂದುವನ್ನು ಆಯಾ ರಾಶಿಯ 'ರಾಶಿ ಗುಣಕಾರ'ದಿಂದ ಗುಣಿಸಿ, ಬಂದ ಎಲ್ಲಾ 12 ಮನೆಗಳ ಮೊತ್ತವನ್ನು ಕೂಡಬೇಕು.

     ಗ್ರಹ ಗುಣಕಾರ :-- ಆಯಾ ರಾಶಿಯಲ್ಲಿ ಕುಳಿತಿರುವ ಗ್ರಹಗಳಿಗೂ ಸ್ಥಿರ ಸಂಖ್ಯೆಗಳಿವೆ.

    (ಸೂರ್ಯನಿಗೆ 5, ಚಂದ್ರನಿಗೆ 5, ಮಂಗಳನಿಗೆ 8. ಬುಧನಿಗೆ 5, ಗುರುವಿಗೆ 10, ಶುಕ್ರನಿಗೆ 7, ಶನಿಗೆ 5.). ಅದರಿಂದ ಗುಣಿಸಿದಾಗ ಬರುವುದು 'ಗ್ರಹಪಿಂಡ'.    

    ಗ್ರಹ ಪಿಂಡ: ಗ್ರಹಗಳು ಕುಳಿತಿರುವ ಮನೆಗಳ ಶೋಧಿತ ಬಿಂದುವನ್ನು ಆಯಾ 'ಗ್ರಹ ಗುಣಕಾರ' ದಿಂದ ಗುಣಿಸಿ, ಆ ಮೊತ್ತವನ್ನು ಕೂಡಬೇಕು.

      ನಿಯಮ 1: ಗ್ರಹವಿರುವ ರಾಶಿಯಲ್ಲಿ ಶೋಧಿತ ಬಿಂದು ಶೂನ್ಯ (0) ಆಗಿದ್ದರೆ ಆ ಗ್ರಹದ ಗುಣಾಕಾರವೂ ಶೂನ್ಯವಾಗುತ್ತದೆ (ಹಾಗಾಗಿ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳುವ ಅಗತ್ಯವಿಲ್ಲ).

      ​ನಿಯಮ 2: ಗ್ರಹವಿಲ್ಲದ (ಖಾಲಿ) ರಾಶಿಯಲ್ಲಿ ಬಿಂದುಗಳು ಎಷ್ಟೇ ಇದ್ದರೂ ಅಲ್ಲಿ ಗ್ರಹವೇ ಇಲ್ಲದ ಕಾರಣ ಆ ಬಿಂದುಗಳನ್ನು ಗ್ರಹಪಿಂಡಕ್ಕೆ ಬಳಸುವಂತಿಲ್ಲ (ಅವು ಬರೀ ರಾಶಿಪಿಂಡಕ್ಕೆ ಮಾತ್ರ ಸೀಮಿತ).

       ​ನಿಯಮ 3: ಗ್ರಹವೂ ಇರಬೇಕು + ಅಲ್ಲಿ ಶೋಧಿತ ಬಿಂದುವೂ ಇರಬೇಕು ಆಗ ಮಾತ್ರ ಆ ಗ್ರಹದ ಗುಣಾಕಾರ ಸಂಖ್ಯೆಯಿಂದ ಆ ಬಿಂದುವನ್ನು ಗುಣಿಸಿ ಗ್ರಹಪಿಂಡವನ್ನು ಕಂಡುಹಿಡಿಯಬೇಕು.
​ಈ ರಾಶಿಪಿಂಡ ಮತ್ತು ಗ್ರಹಪಿಂಡ ಎರಡನ್ನೂ ಕೂಡಿಸಿದಾಗ ಬರುವ ಮಹಾ ಮೊತ್ತವೇ "ಶೋಧ್ಯಪಿಂಡ".

 ಇದನ್ನು ಭವಿಷ್ಯ ಹೇಳಲು ಬಳಸುವುದು ಹೇಗೆ?

     ಮಹರ್ಷಿ ಪರಾಶರರು ಆಯುಷ್ಯ ಮತ್ತು ರೋಗದ ಕಾಲವನ್ನು ನಿಖರವಾಗಿ ತಿಳಿಯಲು ಶೋಧ್ಯಪಿಂಡದ ಅದ್ಭುತ ಗಣಿತವನ್ನು ನೀಡಿದ್ದಾರೆ. 

     ತಂದೆಯ ಕಷ್ಟ/ಮರಣ ಕಾಲ: ಸೂರ್ಯನ ಶೋಧ್ಯಪಿಂಡದ ಸಂಖ್ಯೆಯನ್ನು ತೆಗೆದುಕೊಂಡು, ಅದಕ್ಕೆ ರವಿಯ ಭಿನ್ನಾಷ್ಟಕವರ್ಗದಲ್ಲಿ 9 ನೇ ಮನೆಯಲ್ಲಿರುವ ಬಿಂದುಗಳಿಂದ ಗುಣಿಸಬೇಕು. ಬಂದ ಒಟ್ಟು ಮೊತ್ತವನ್ನು 27 ರಿಂದ ಭಾಗಿಸಿದಾಗ ಸಿಗುವ ಶೇಷ ಒಂದು ನಕ್ಷತ್ರವನ್ನು ಸೂಚಿಸುತ್ತದೆ. ಗೋಚಾರದ ಶನಿ ದೇವನು ಆ ನಕ್ಷತ್ರಕ್ಕೆ ಅಥವಾ ಆ ನಕ್ಷತ್ರದ ತ್ರಿಕೋಣ ನಕ್ಷತ್ರಕ್ಕೆ ಬಂದಾಗ ಜಾತಕನ ತಂದೆಗೆ ಮರಣಾಂತಿಕ ಕಷ್ಟ ಅಥವಾ ಪಿತೃ ವಿಯೋಗವಾಗುತ್ತದೆ. ಅಥವಾ ಪಿತೃ ಸಮಾನ ವ್ಯಕ್ತಿಯ ಮರಣ ಉಂಟಾಗುತ್ತದೆ.

      ತಾಯಿಯ ಕಷ್ಟ/ಮರಣಕಾಲ:--ಚಂದ್ರಾಷ್ಟಕ ವರ್ಗದಿಂದ ಶೋಧ ಬಿಂದುವನ್ನು ಚಂದ್ರನ 4 ರಲ್ಲಿ ಬಿದ್ದ ಸಂಖ್ಯೆಯಿಂದ ಗುಣಿಸಿ 27 ರಿಂದ ಭಾಗಿಸಿದಾಗ ಬರುವ ಶೇಷ ನಕ್ಷತ್ರದಲ್ಲಿ ಶನಿ ಸಂಚಾರವಾಗುವಾಗ ತಾಯಿಯ ಮರಣ ಸಂಭವ.

     ಆಯುಷ್ಯ ನಿರ್ಣಯ: ಶನಿಯ ಶೋಧ್ಯಪಿಂಡವನ್ನು 7 ರಿಂದ ಗುಣಿಸಿ 27 ರಿಂದ ಭಾಗಿಸಿದಾಗ ಬರುವ ಶೇಷದ ನಕ್ಷತ್ರಕ್ಕೆ ಗೋಚಾರದಲ್ಲಿ ಶನಿ ಬಂದಾಗ ಜಾತಕನಿಗೆ ಕಷ್ಟಕಾಲ. 

     ಶನಿಯ ಶೋಧ್ಯಪಿಂಡವನ್ನು ಲಗ್ನ ಭಿನ್ನಾಷ್ಟಕ ವರ್ಗದ ಅಷ್ಟಮದಲ್ಲಿ ಇರುವ ಬಿಂದುವಿನಿಂದ ಗುಣಿಸಿ 27 ರಿಂದ ಭಾಗಿಸಿದರೆ ಬರುವ ಶೇಷ ನಕ್ಷತ್ರದಲ್ಲಿ ಶನಿ ಸಂಚಾರಕಾಲದಲ್ಲಿ ಜಾತಕನ ಮರಣ.

    ಗೋಚಾರ ಶನಿಯು ಕಂಟಕ ನಕ್ಷತ್ರಕ್ಕೆ ಬಂದಾಗ ಜಾತಕನಿಗೆ ತೀವ್ರ ಅನಾರೋಗ್ಯ ಅಥವಾ ಮರಣ ಸಂಭವಿಸುತ್ತದೆ."

     ಸೂರ್ಯನ ಅಷ್ಟಕವರ್ಗದಿಂದ ಜಾತಕನ ಮರಣ ಮಾಸವನ್ನು ಹೇಳಬಹುದು. ರವಿ ಶೋದ್ಯ ಪಿಂಡಕ್ಕೆ ಸೂರ್ಯನಿಂದ 8 ರಲ್ಲಿದ್ದ ಬಿಂದುಗಳಿಂದ ಗುಣಿಸಿ 120 ರಿಂದ ಭಾಗಿಸಬೇಕು. ಶೇಷ ಮಾಸದಲ್ಲಿ ಮರಣ.

     ಜ್ಯೋತಿಷ್ಯದಲ್ಲಿ 'ಶೋಧ್ಯಪಿಂಡ' ಎಂಬುದು ಬ್ರಹ್ಮರಹಸ್ಯವಿದ್ದಂತೆ. ನಾವು ಕೇವಲ ಗ್ರಹಗಳ ದಶೆಯನ್ನು ನೋಡಿ ಸಮಯ ನಿರ್ಧಾರ ಮಾಡುತ್ತೇವೆ. ಆದರೆ ಅಷ್ಟಕವರ್ಗದ ಶೋಧ್ಯಪಿಂಡದ ಗಣಿತವನ್ನು ಅನ್ವಯಿಸಿದರೆ, ಘಟನೆ ನಡೆಯುವ ನಿಖರವಾದ ತಿಂಗಳು ಮತ್ತು ದಿನವನ್ನು ಕೂಡ ನಾವು ಬೆರಳೆಣಿಕೆಯಲ್ಲಿ ಹೇಳಬಹುದು...!!

ಸಹೋದರ ಭಾವ ಮತ್ತು ತ್ರಿಕೋಣ ಶೋಧನೆ" (Sibling & Heritage Secret)

     ಸಾಮಾನ್ಯವಾಗಿ ಜಾತಕದಲ್ಲಿ 3 ನೇ ಮನೆ ಸಹೋದರ ಸ್ಥಾನ ಹಾಗೂ 4 ನೇ ಮನೆ ತಾಯಿಯ ಸ್ಥಾನ ಎಂದು ನಮಗೆಲ್ಲರಿಗೂ ಗೊತ್ತು. ಆದರೆ ಅಷ್ಟಕವರ್ಗದಲ್ಲಿ ಇವರ ಭಾಗ್ಯವನ್ನು ತಿಳಿಯಲು ವಿಶಿಷ್ಟ ನಿಯಮವಿದೆ.

    ನಿಯಮ : ಮಂಗಳನ ಭಿನ್ನಾಷ್ಟಕವರ್ಗದಲ್ಲಿ 3 ನೇ ಮನೆಗೆ ಮತ್ತು ಚಂದ್ರನ ಭಿನ್ನಾಷ್ಟಕವರ್ಗದಲ್ಲಿ 4 ನೇ ಮನೆಗೆ ತ್ರಿಕೋಣ ಶೋಧನೆ ಮಾಡಿದ ನಂತರ ಉಳಿಯುವ ಬಿಂದುಗಳನ್ನು ನೋಡಬೇಕು.

     ಮಂಗಳನ ಶೋಧಿತ ಬಿಂದುಗಳು ಹೆಚ್ಚಿದ್ದರೆ, ಸಹೋದರರು ಜೀವನದಲ್ಲಿ ಅತ್ಯಂತ ಉನ್ನತ ಸ್ಥಾನಕ್ಕೆ ಬೆಳೆಯುತ್ತಾರೆ ಮತ್ತು ಅವರಿಂದ ನಮಗೆ ಲಾಭವಿದೆ. ಒಂದು ವೇಳೆ ಚಂದ್ರನ ಶೋಧಿತ ಬಿಂದುಗಳು 4 ನೇ ಮನೆಯಲ್ಲಿ ಶೂನ್ಯ ಅಥವಾ ಅತ್ಯಂತ ಕಡಿಮೆ ಬಂದರೆ, ಪಿತ್ರಾರ್ಜಿತ ಆಸ್ತಿ ಸಿಗುವುದು ಕಷ್ಟ ಅಥವಾ ತಾಯಿಯ ಕಡೆಯಿಂದ ಆಸ್ತಿ ವಿವಾದಗಳು ಉಂಟಾಗುತ್ತವೆ.

                 ಮುಂದುವರೆಯುವುದು.......

                      ಡಾ: B. N. ಶೈಲಜಾ ರಮೇಶ್    

Sunday, 23 August 2026

ಅಷ್ಟಕವರ್ಗ (ಭಾಗ -1)

                ಓಂ ಶ್ರೀ ಗಣೇಶಾಯ ನಮಃ |
                 ಓಂ ಶ್ರೀ ಗುರುಭ್ಯೋ ನಮಃ |

         ವಿಶ್ವಪ್ರಕಾಶಕಂ ವಂದೇ ಸೂರ್ಯಂ ಗ್ರಹಪತಿಂ ಮುದಾ |
         ಪರಾಶರಂ ಮುನಿಶ್ರೇಷ್ಠಂ ಜ್ಯೋತಿಃಶಾಸ್ತ್ರ ಪ್ರವರ್ತಕಮ್ ||

          ಜ್ಯೋತಿಷ್ಯ ಎಂಬುದು ಕೇವಲ ಭವಿಷ್ಯ ಹೇಳುವ ಕಲೆ ಅಷ್ಟೇ ಅಲ್ಲ, ಅದು ವೇದದ ಕಣ್ಣು—'ವೇದಸ್ಯ ಚಕ್ಷುಃ'..!!  ಅಂತ ಹೆಸರಾಗಿದೆ. ಇದರಲ್ಲಿ ಅನೇಕ ವಿಭಾಗಗಳಿವೆ. ಅದರಲ್ಲಿ ಈಗ ತಿಳಿದುಕೊಳ್ಳುತ್ತಿರುವ  ವಿಷಯ ಅತ್ಯಂತ ವಿಶಿಷ್ಟವಾದದ್ದು ಮತ್ತು ನಿಖರವಾದದ್ದು. ಅದೇ 'ಅಷ್ಟಕವರ್ಗ ಪದ್ಧತಿ'.
    
         ನಾವು ಜಾತಕವನ್ನು ನೋಡುವಾಗ ಲಗ್ನ ಕುಂಡಲಿ, ನವಾಂಶ ಕುಂಡಲಿ, ಶೋಡಶವರ್ಗ ಕುಂಡಲಿಗಳನ್ನೆಲ್ಲಾ ನೋಡುತ್ತೇವೆ. ಆದರೂ ಕೆಲವೊಮ್ಮೆ ನಮ್ಮ ಭವಿಷ್ಯ ವಾಣಿ ಯಾಕೆ ಸುಳ್ಳಾಗುತ್ತದೆ? ಒಬ್ಬ ವ್ಯಕ್ತಿಗೆ ಉಚ್ಚ ಗ್ರಹಗಳ ದಶೆ ಬಂದರೂ ಆತ ಯಾಕೆ ಬೀದಿಗೆ ಬೀಳುತ್ತಾನೆ? ನೀಚ ಗ್ರಹಗಳ ದಶೆಯಲ್ಲಿ ಕೋಟ್ಯಧಿಪತಿ ಯಾಕೆ ಆಗುತ್ತಾನೆ? ಈ ಎಲ್ಲಾ ಗೊಂದಲಗಳಿಗೆ ಮಹರ್ಷಿ ಪರಾಶರರು ಬರೆದ 'ಬೃಹತ್ ಪರಾಶರ ಹೋರಾಶಾಸ್ತ್ರ'ದಲ್ಲಿ ಉತ್ತರ ನೀಡಿದ್ದಾರೆ. ಅದೇ ಅಷ್ಟಕವರ್ಗ!

​. ಅಷ್ಟಕವರ್ಗದ ಹಿನ್ನೆಲೆ
      ​ಮಹರ್ಷಿ ಪರಾಶರರು, ಕಲಿಯುಗದ ಮನುಷ್ಯರ ಆಯುಸ್ಸು, ಬುದ್ಧಿ ಶಕ್ತಿ ಮತ್ತು ಏಕಾಗ್ರತೆ ಕಡಿಮೆಯಿರುತ್ತದೆ ಎಂಬುದನ್ನು ಮುನ್ಸೂಚನೆಯಾಗಿ ಅರಿತಿದ್ದರು. ಗಹನವಾದ ಗಣಿತವನ್ನು ಅರ್ಥಮಾಡಿಕೊಳ್ಳಲಾಗದ ಸಾಮಾನ್ಯ ದೈವಜ್ಞರಿಗೂ ಸಹ ನಿಖರವಾಗಿ ಫಲ ಹೇಳಲು ಬರಲಿ ಎಂಬ ಕರುಣೆಯಿಂದ ಈ ಪದ್ಧತಿಯನ್ನು ಸೃಷ್ಟಿಸಿದರು.

​'      ಮಹರ್ಷಿ ಪರಾಶರರು ಜಾತಕದ ನೂರಾರು ನಿಯಮಗಳನ್ನು ಹೇಳಿದ ನಂತರ, ಕಲಿಯುಗದ ಮಾನವನಿಗೆ ಗ್ರಹಗಳ ಗೋಚಾರ ಫಲವನ್ನು ಅತ್ಯಂತ ಸುಲಭವಾಗಿ ಮತ್ತು ಗಣಿತದ ರೂಪದಲ್ಲಿ ನಿಖರವಾಗಿ ತಿಳಿಯಲು ನೀಡಿದ ದಿವ್ಯ ಆಯುಧವೇ ಈ ಅಷ್ಟಕವರ್ಗ. ಜಾತಕದಲ್ಲಿ ಗ್ರಹಗಳು ಎಷ್ಟೇ ಬಲವಾಗಿದ್ದರೂ, ಅವು ಪ್ರಸ್ತುತ ಜೀವನದಲ್ಲಿ ಯಾವ ಫಲ ನೀಡುತ್ತವೆ ಎಂಬುದನ್ನು ಅಳೆಯುವ ಅತ್ಯುತ್ತಮ ತಕ್ಕಡಿ ಇದು.

    ಅಷ್ಟಕವರ್ಗ ಎಂದರೆ 'ಎಂಟು ವರ್ಗಗಳ ಸಮೂಹ'. ಜನ್ಮ ಕುಂಡಲಿಯಲ್ಲಿ ಒಂದು ಗ್ರಹವು ತಾನು ಕುಳಿತಿರುವ ಸ್ಥಾನದಿಂದ ಮಾತ್ರ ಫಲ ನೀಡುವುದಿಲ್ಲ. ಅದು ಜನ್ಮ ಲಗ್ನ ಸೇರಿದಂತೆ ಉಳಿದ 7 ಗ್ರಹಗಳ (ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ) ಜನ್ಮ ಸ್ಥಾನಗಳಿಂದ ನಿರ್ದಿಷ್ಟ ಮನೆಗಳಿಗೆ ಶುಭ ಅಥವಾ ಅಶುಭ ಪ್ರಭಾವವನ್ನು ಬೀರುತ್ತದೆ. ಈ ಎಂಟು ಮೂಲ ಬಿಂದುಗಳ ಪ್ರಭಾವವನ್ನೇ ಅಷ್ಟಕವರ್ಗ ಎನ್ನಲಾಗುತ್ತದೆ. (ರಾಹು-ಕೇತುಗಳಿಗೆ ಸ್ವಂತ ಆಧಿಪತ್ಯವಿಲ್ಲದ ಕಾರಣ ಅಷ್ಟಕವರ್ಗದಲ್ಲಿ ಅವುಗಳನ್ನು ಪರಿಗಣಿಸುವುದಿಲ್ಲ).

     ಈಗ ನಾವು ಈ ಅಷ್ಟಕವರ್ಗದ ಮೂಲ ತತ್ವಗಳು, ಬಿಂದುಗಳ ರಹಸ್ಯ ಮತ್ತು ಪ್ರಾಯೋಗಿಕವಾಗಿ ಜಾತಕಗಳನ್ನು ಹೇಗೆ ವಿಶ್ಲೇಷಣೆ ಮಾಡಬೇಕು ಎಂಬುದನ್ನು ಸೂಕ್ಷ್ಮವಾಗಿ ತಿಳಿಯಲಿದ್ದೇವೆ. 

       ​ಅಷ್ಟಕವರ್ಗವು ವೈದಿಕ ಜ್ಯೋತಿಷ್ಯದಲ್ಲಿ (Vedic Astrology) ಬಳಸಲಾಗುವ ಒಂದು ವಿಶಿಷ್ಟ ಮತ್ತು ಗಣಿತೀಯವಾದ ಮುನ್ಸೂಚನಾ ಪದ್ಧತಿಯಾಗಿದೆ. ಇದು ಪ್ರತಿಯೊಂದು ಮನೆಯಲ್ಲಿ ಅಥವಾ ರಾಶಿಯಲ್ಲಿರುವ ಗ್ರಹಗಳ ಬಲವನ್ನು ಅಳೆಯಲು ಸಹಾಯ ಮಾಡುತ್ತದೆ.
ಗ್ರಹಗಳ ಗೋಚಾರ ಫಲಗಳನ್ನು ಮತ್ತು ಜಾತಕದ ಬಲವನ್ನು ಅಳೆಯಲು ಇದನ್ನು ಬಳಸಲಾಗುತ್ತದೆ. ಸರಳವಾಗಿ ಹೇಳಬೇಕೆಂದರೆ, ಇದು ನಮ್ಮ ಜಾತಕದ ಗ್ರಹಗಳು ನಮಗಾಗಿ ಸಿದ್ಧಪಡಿಸುವ ಒಂದು ಪ್ರಗತಿ ಪತ್ರ (Report Card) ಇದ್ದಂತೆ.
 'ಅಷ್ಟಕ' ಎಂದರೆ ಎಂಟು ಮತ್ತು 'ವರ್ಗ' ಎಂದರೆ ಗುಂಪು ಎಂದರ್ಥ. 

ಅಷ್ಟಕವರ್ಗದ ವಿಧಗಳು
​
ಭಿನ್ನಾಷ್ಟಕವರ್ಗ: ಪ್ರತಿಯೊಂದು ಗ್ರಹವು 12 ಮನೆಗಳಿಗೆ ಪ್ರತ್ಯೇಕವಾಗಿ ನೀಡುವ ಅಂಕಗಳು.

​ಸಮುದಾಯ ಅಷ್ಟಕವರ್ಗ: ಎಲ್ಲಾ 7 ಗ್ರಹಗಳು ಮತ್ತು ಲಗ್ನ ಸೇರಿ ಒಟ್ಟಾಗಿ ಪ್ರತಿ ಮನೆಗೆ ನೀಡುವ ಒಟ್ಟು ಅಂಕಗಳ ಪಟ್ಟಿ.

​. ಇದರ ಉಪಯೋಗಗಳು

​     ಗೋಚಾರ ಫಲ ತಿಳಿಯಲು: ಭವಿಷ್ಯ ಹೇಳಲು ಇದನ್ನು ಪ್ರಮುಖವಾಗಿ ನೋಡಲಾಗುತ್ತದೆ. ಪ್ರಸ್ತುತ ಶನಿ ಅಥವಾ ಗುರು ಯಾವ ರಾಶಿಯಲ್ಲಿದ್ದಾರೆ ಮತ್ತು ಆ ರಾಶಿಯಲ್ಲಿ ಅಷ್ಟಕವರ್ಗದ ಬಿಂದುಗಳು ಎಷ್ಟಿವೆ ಎಂಬುದನ್ನು ನೋಡಿ ಆ ವರ್ಷ ಅಥವಾ ಕಾಲಾವಧಿ ಹೇಗಿರುತ್ತದೆ ಎಂದು ನಿಖರವಾಗಿ ಹೇಳಬಹುದು.

​ದಶೆಯ ಫಲ ತಿಳಿಯಲು: ಒಂದು ಗ್ರಹದ ಮಹಾದಶೆ ನಡೆಯುತ್ತಿರುವಾಗ, ಆ ಗ್ರಹ ಕುಳಿತಿರುವ ಮನೆಗೆ ಅಷ್ಟಕವರ್ಗದಲ್ಲಿ ಒಳ್ಳೆ ಅಂಕಗಳಿದ್ದರೆ ಆ ದಶೆಯು ಉತ್ತಮವಾಗಿರುತ್ತದೆ.

 ಆಯುಷ್ಯ ಮತ್ತು ವೃತ್ತಿ ನಿರ್ಧಾರ: ಜೀವನದ ಏಳುಬೀಳುಗಳು, ಧನಾಗಮನ ಮತ್ತು ಆರೋಗ್ಯದ ಸ್ಥಿತಿಯನ್ನು ತಿಳಿಯಲು ಇದು ಸುಲಭವಾದ ಮಾರ್ಗ.
​ಯಾವುದೇ ಜಾತಕದಲ್ಲಿ ಗ್ರಹಗಳು ಉಚ್ಚವಾಗಿದ್ದರೂ ಅಥವಾ ನೀಚವಾಗಿದ್ದರೂ, ಅಷ್ಟಕವರ್ಗದಲ್ಲಿ ಆ ಮನೆಗೆ ಸಿಗುವ ಬಿಂದುಗಳು ಆ ಗ್ರಹದ ನೈಜ ಸಾಮರ್ಥ್ಯವನ್ನು ತೋರ್ಪಡಿಸುತ್ತವೆ.

       ಈ ಪದ್ಧತಿಯಲ್ಲಿ 7 ಗ್ರಹಗಳು (ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ) ಮತ್ತು ಲಗ್ನ ಸೇರಿದಂತೆ ಒಟ್ಟು 8 ಅಂಶಗಳನ್ನು ಪರಿಗಣಿಸಲಾಗುತ್ತದೆ. ಪ್ರತಿ ಗ್ರಹವು ಇತರ ಗ್ರಹಗಳು ಮತ್ತು ಲಗ್ನದ ಸ್ಥಾನಕ್ಕೆ ಅನುಗುಣವಾಗಿ ಪ್ರತಿಯೊಂದು ರಾಶಿಯಲ್ಲಿ ಶುಭ (ಬಿಂದು) ಅಥವಾ ಅಶುಭ (ರೇಖೆ) ಅಂಕಗಳನ್ನು ನೀಡುತ್ತದೆ. 

ಇದರ ಪ್ರಮುಖ ಅಂಶಗಳು ಈ ಕೆಳಗಿನಂತಿವೆ:
ಬಿಂದುಗಳು:-- ಪ್ರತಿಯೊಂದು ಗ್ರಹವು ಒಂದು ನಿರ್ದಿಷ್ಟ ರಾಶಿಯಲ್ಲಿ ನೀಡುವ ಶುಭ ಅಂಕಗಳನ್ನು ಬಿಂದುಗಳೆಂದು ಕರೆಯಲಾಗುತ್ತದೆ. 

ಗರಿಷ್ಠ ಮತ್ತು ಕನಿಷ್ಠ ಅಂಕಗಳು:-- ಒಂದು ರಾಶಿಗೆ ಕನಿಷ್ಠ 0 ಬಿಂದು ಗರಿಷ್ಠ 8 ಬಿಂದುಗಳು ಸಿಗಬಹುದು. 

ಸರ್ವಾಷ್ಟಕವರ್ಗ : -- ಎಲ್ಲಾ 8 ಅಂಶಗಳು 12 ರಾಶಿಗಳಲ್ಲಿ ನೀಡುವ ಒಟ್ಟು ಬಿಂದುಗಳ ಮೊತ್ತವನ್ನು ಇದು ಸೂಚಿಸುತ್ತದೆ. ಇಡೀ ಜಾತಕದ ಒಟ್ಟು ಬಿಂದುಗಳ ಮೊತ್ತ 337 + 49 = 386 ಆಗಿರುತ್ತದೆ. ಇದನ್ನು ಸರ್ವಾಷ್ಟಕವರ್ಗ ಎನ್ನಲಾಗುತ್ತದೆ.

ಇನ್ನು ಭಿನ್ನಾಷ್ಟಕ ವರ್ಗದ ಗಣಿತದ ಬಗ್ಗೆ ತಿಳಿಯೋಣ

​ಭಿನ್ನಾಷ್ಟಕವರ್ಗ :--

​       ಪ್ರತಿಯೊಂದು ಗ್ರಹವೂ ಜಾತಕದ 12 ಮನೆಗಳಿಗೆ ತನ್ನದೇ ಆದ ಶುಭ ಬಿಂದುಗಳನ್ನು ಹಂಚುತ್ತದೆ. ದಕ್ಷಿಣ ಭಾರತದ ಪದ್ಧತಿಯಲ್ಲಿ 'ಬಿಂದು' ಎಂದರೆ ಶುಭ, 'ರೇಖೆ' ಎಂದರೆ ಅಶುಭ (ಶೂನ್ಯ). ಪ್ರತಿಯೊಂದು ಗ್ರಹವು ಗರಿಷ್ಠ ಎಷ್ಟು ಬಿಂದುಗಳನ್ನು ಹಂಚಬಲ್ಲದು ಎಂಬ ಗಣಿತ ಇಲ್ಲಿದೆ:

 ರವಿ ಭಿನ್ನಾಷ್ಟಕವರ್ಗ:--

        ರವಿ ಭಿನ್ನಾಷ್ಟಕವರ್ಗಕ್ಕೆ ಲಗ್ನ ಸೇರಿದಂತೆ ಏಳೂ ಗ್ರಹಗಳು ತಮ್ಮ ಸ್ವಂತ ಸ್ಥಾನದಿಂದ ನಿರ್ದಿಷ್ಟ ಮನೆಗಳಲ್ಲಿ ಶುಭ ಬಿಂದುಗಳನ್ನು ನೀಡುತ್ತವೆ. ರವಿಗೆ ಒಟ್ಟು 48 ಬಿಂದುಗಳು ಲಭ್ಯವಿದ್ದು, ಪ್ರತಿ ಗ್ರಹವು ಕೊಡುವ ಬಿಂದುಗಳ ವಿವರ ಈ ಕೆಳಗಿನಂತಿದೆ:

      ಗ್ರಹಗಳು ಬಿಂದು ಕೊಡುವ ಸ್ಥಾನಗಳು (ರಾಶಿಗಳು)

ರವಿ :--ತನ್ನ ಸ್ಥಾನದಿಂದ 1,2,4,7,8,9,10,11, ನೇ ಮನೆಗಳಿಗೆ ಬಿಂದುಗಳನ್ನು ನೀಡುತ್ತಾನೆ (ಒಟ್ಟು 8 ಬಿಂದುಗಳು).
ಚಂದ್ರ :-- ತನ್ನ ಸ್ಥಾನದಿಂದ 3,6,10,11 ನೇ ಮನೆಗಳಿಗೆ ಬಿಂದುಗಳನ್ನು ನೀಡುತ್ತಾನೆ (ಒಟ್ಟು 4 ಬಿಂದುಗಳು).
ಮಂಗಳ :-- ತನ್ನ ಸ್ಥಾನದಿಂದ 1, 2,4,7,8,9,10,11, ನೇ ಮನೆಗಳಿಗೆ ಬಿಂದುಗಳನ್ನು ನೀಡುತ್ತಾನೆ (ಒಟ್ಟು 8 ಬಿಂದುಗಳು).
ಬುಧ :-- ತನ್ನ ಸ್ಥಾನದಿಂದ 3,5,6,9,10,11,12 ನೇ ಮನೆಗಳಿಗೆ ಬಿಂದುಗಳನ್ನು ನೀಡುತ್ತಾನೆ (ಒಟ್ಟು 7 ಬಿಂದುಗಳು).
ಗುರು :-- ತನ್ನ ಸ್ಥಾನದಿಂದ 5,6,9,11 ನೇ ಮನೆಗಳಿಗೆ ಬಿಂದುಗಳನ್ನು ನೀಡುತ್ತಾನೆ (ಒಟ್ಟು 4 ಬಿಂದುಗಳು).
ಶುಕ್ರ:-- ತನ್ನ ಸ್ಥಾನದಿಂದ 6,7,12, ನೇ ಮನೆಗಳಿಗೆ ಬಿಂದುಗಳನ್ನು ನೀಡುತ್ತಾನೆ (ಒಟ್ಟು 3 ಬಿಂದುಗಳು).
ಶನಿ :-- ತನ್ನ ಸ್ಥಾನದಿಂದ 1,2,4,7,8,9,10,11 ನೇ ಮನೆಗಳಿಗೆ ಬಿಂದುಗಳನ್ನು ನೀಡುತ್ತಾನೆ (ಒಟ್ಟು 8 ಬಿಂದುಗಳು).
ಲಗ್ನ :-- ಲಗ್ನ ಸ್ಥಾನದಿಂದ 1,2,3,4,7,9,10,11 ನೇ ಮನೆಗಳಿಗೆ ಬಿಂದುಗಳನ್ನು ನೀಡುತ್ತದೆ (ಒಟ್ಟು 8 ಬಿಂದುಗಳು).

      ರವಿ ಭಿನ್ನಾಷ್ಟಕವರ್ಗವು, ಆತ್ಮ ಮತ್ತು ಯಶಸ್ಸು, ಆರೋಗ್ಯ ಮತ್ತು ಕೀರ್ತಿ, ಜಾತಕನ ದೈಹಿಕ ಶಕ್ತಿ, ರೋಗನಿರೋಧಕ ಶಕ್ತಿ ಮತ್ತು ಸಮಾಜದಲ್ಲಿ ಸಿಗುವ ಗೌರವವನ್ನು ಇದು ನಿರ್ಧರಿಸುತ್ತದೆ.
ವೃತ್ತಿ :ಸರ್ಕಾರಿ ಕೆಲಸ, ಉದ್ಯೋಗದಲ್ಲಿ ಪ್ರಗತಿ ಮತ್ತು ತಂದೆಯೊಂದಿಗಿನ ಬಾಂಧವ್ಯವನ್ನು ತಿಳಿಯಲು ಇದನ್ನು ನೋಡಲಾಗುತ್ತದೆ.
ಸೂರ್ಯ ಆತ್ಮಕಾರಕ ಮತ್ತು ಆರೋಗ್ಯ ಕಾರಕ. ಸೂರ್ಯನ ಅಷ್ಟಕವರ್ಗದಲ್ಲಿ ಯಾವ ಮನೆಗೆ 5 ಅಥವಾ ಅದಕ್ಕಿಂತ ಹೆಚ್ಚು ಬಿಂದುಗಳಿವೆಯೋ, ಆ ಮನೆಯ ವಿಷಯದಲ್ಲಿ ವ್ಯಕ್ತಿಗೆ ಅಪಾರ ಕೀರ್ತಿ, ತಂದೆಯ ಬೆಂಬಲ ಮತ್ತು ಆರೋಗ್ಯ ಸಿಗುತ್ತದೆ.

ಶುಭ ಸಂಖ್ಯೆ: -- ರವಿ ಇರುವ ರಾಶಿಯಲ್ಲಿ 5 ರಿಂದ 8 ಬಿಂದುಗಳಿದ್ದರೆ ರಾಜಯೋಗ ಮತ್ತು ಅಧಿಕಾರ ಸಿಗುತ್ತದೆ.
​8 ಬಿಂದುಗಳಿದ್ದರೆ - ರಾಜಕೀಯ ಸಂಘ, ಧನಲಾಭ, ಮಾನ ಸಮ್ಮಾನ
​7 ಬಿಂದುಗಳಿದ್ದರೆ - ಮರ್ಯಾದೆ, ಸ್ತ್ರೀಯರಿಂದ ಗೌರವ
​6 ಬಿಂದುಗಳಿದ್ದರೆ - ಉನ್ನತಿ, ಶೌರ್ಯ, ಧನ ಕೀರ್ತಿ
​5 ಬಿಂದುಗಳಿದ್ದರೆ - ಸಜ್ಜನರ ಸಂಘ, ವಿದ್ಯಾದನ ಪ್ರಾಪ್ತಿ (ಅಧಿಕಾರ ಲಾಭ)
​4 ಬಿಂದುಗಳಿದ್ದರೆ - ಸುಖ ದುಃಖ ಸಮ
​3 ಬಿಂದು ಇದ್ದರೆ - ಅಶಾಂತಿ, ಶಾರೀರಿಕ ತೊಂದರೆ
​2 ಬಿಂದು ಇದ್ದರೆ - ಅಸಮಾಧಾನ, ಚೋರ ಭೀತಿ
​1 ಬಿಂದು ಇದ್ದರೆ - ದೇಹಾಲಸ್ಯ, ದುಃಖ

​ ಹೆಚ್ಚು ಬಿಂದುಗಳಿರುವ ಮಾಸದಲ್ಲಿ ರವಿ ಸಂಚರಿಸುವಾಗ ವಿವಾಹಾದಿ ಮಂಗಳ ಕಾರ್ಯಗಳನ್ನು ಮಾಡಿದರೆ ಶುಭ.. ಕಡಿಮೆ ಬಿಂದು ಇರುವ ಮಾಸದಲ್ಲಿ ದೂರಪ್ರಯಾಣ, ಮಂಗಳ ಕಾರ್ಯಗಳನ್ನು ಮಾಡಬಾರದು.

    ​ರವಿಯ ಅಷ್ಟಕವರ್ಗದಲ್ಲಿ ಹೆಚ್ಚು ಬಿಂದು ಇರುವ ದಿಕ್ಕಿನಲ್ಲಿ ದೇವರ ಮನೆ ಇದ್ದರೆ ಶರೀರ ಸೌಖ್ಯ ಆಯುರಾರೋಗ್ಯವು ದೊರೆಯುತ್ತದೆ.
​ರವಿ ಲಗ್ನದಲ್ಲಿದ್ದು 2-3 ಬಿಂದುಗಳಿದ್ದರೆ ಶಾರೀರಿಕ ಸೌಖ್ಯ ಕಡಿಮೆ. .

​(ರವಿಯಿಂದ 9 ನೇ ಮನೆ ತಂದೆಯ ಜಾತಕ ಲಗ್ನ, ರವಿಯಿಂದ 10 ನೇ ಮನೆ ತಂದೆಯ ಸಂಪತ್ತು, 12 ನೇ ಮನೆ ತಂದೆಯ ನಿರ್ದಿಷ್ಟ ಸ್ಥಳ ಮೊದಲಾದವುಗಳನ್ನು ತಿಳಿಸುತ್ತದೆ.)

     ಯಾವುದೇ ಒಂದು ರಾಶಿಯಲ್ಲಿ ರವಿಗೆ 4 ಅಥವಾ ಅದಕ್ಕಿಂತ ಹೆಚ್ಚು ಬಿಂದುಗಳು ಬಂದರೆ ಆ ರಾಶಿಯಲ್ಲಿ ರವಿಯ ಸಂಚಾರ (ಗೋಚಾರ) ಮತ್ತು ದಶಾ ಕಾಲವು ಅತ್ಯುತ್ತಮ ಫಲಿತಾಂಶಗಳನ್ನು ನೀಡುತ್ತದೆ.

ಚಂದ್ರ ಭಿನ್ನಾಷ್ಟಕವರ್ಗ :--
   ಲಗ್ನ ಸೇರಿದಂತೆ ಎಂಟೂ ಗ್ರಹಗಳು ತಮ್ಮ ಸ್ವಂತ ಸ್ಥಾನದಿಂದ ನಿರ್ದಿಷ್ಟ ಮನೆಗಳಲ್ಲಿ ಶುಭ ಬಿಂದುಗಳನ್ನು ನೀಡುತ್ತವೆ. ಚಂದ್ರನಿಗೆ ಒಟ್ಟು 49 ಬಿಂದುಗಳು ಲಭ್ಯವಿದ್ದು, ಪ್ರತಿ ಗ್ರಹವು ಕೊಡುವ ಬಿಂದುಗಳ ವಿವರ ಈ ಕೆಳಗಿನಂತಿದೆ:

     ಗ್ರಹಗಳು ಬಿಂದು ಕೊಡುವ ಸ್ಥಾನಗಳು (ರಾಶಿಗಳು)
ರವಿ :-- ತನ್ನ ಸ್ಥಾನದಿಂದ 3, 6, 7, 8, 10, 11, ನೇ ಮನೆಗಳಿಗೆ ಬಿಂದುಗಳನ್ನು ನೀಡುತ್ತಾನೆ (ಒಟ್ಟು 6 ಬಿಂದುಗಳು).
ಚಂದ್ರ :--ತನ್ನ ಸ್ಥಾನದಿಂದ 1,3, 6, 7, 10, 11 ನೇ ಮನೆಗಳಿಗೆ ಬಿಂದುಗಳನ್ನು ನೀಡುತ್ತಾನೆ (ಒಟ್ಟು 6 ಬಿಂದುಗಳು).
ಮಂಗಳ : -- ತನ್ನ ಸ್ಥಾನದಿಂದ 2, 3, 5, 6, 9, 10, 11 ನೇ ಮನೆಗಳಿಗೆ ಬಿಂದುಗಳನ್ನು ನೀಡುತ್ತಾನೆ (ಒಟ್ಟು 7 ಬಿಂದುಗಳು).
ಬುಧ : -- ತನ್ನ ಸ್ಥಾನದಿಂದ 1, 3, 4, 5, 7, 8, 10, 11 ನೇ ಮನೆಗಳಿಗೆ ಬಿಂದುಗಳನ್ನು ನೀಡುತ್ತಾನೆ (ಒಟ್ಟು 8 ಬಿಂದುಗಳು).
ಗುರು :-- ತನ್ನ ಸ್ಥಾನದಿಂದ 1, 4, 7, 8, 10,11,12, ನೇ ಮನೆಗಳಿಗೆ ಬಿಂದುಗಳನ್ನು ನೀಡುತ್ತಾನೆ (ಒಟ್ಟು 7 ಬಿಂದುಗಳು).
ಶುಕ್ರ :-- ತನ್ನ ಸ್ಥಾನದಿಂದ 3, 4, 5, 7, 9, 10, 11 ನೇ ಮನೆಗಳಿಗೆ ಬಿಂದುಗಳನ್ನು ನೀಡುತ್ತಾನೆ (ಒಟ್ಟು 7 ಬಿಂದುಗಳು).
ಶನಿ :-- ತನ್ನ ಸ್ಥಾನದಿಂದ 3, 5, 6, 11ನೇ ಮನೆಗಳಿಗೆ ಬಿಂದುಗಳನ್ನು ನೀಡುತ್ತಾನೆ (ಒಟ್ಟು 4 ಬಿಂದುಗಳು).
ಲಗ್ನ :-- ಲಗ್ನ ಸ್ಥಾನದಿಂದ 3, 6, 10, 11 ನೇ ಮನೆಗಳಿಗೆ ಬಿಂದುಗಳನ್ನು ನೀಡುತ್ತದೆ (ಒಟ್ಟು 4 ಬಿಂದುಗಳು).

       ಚಂದ್ರ ಭಿನ್ನಾಷ್ಟಕವರ್ಗ   ಮನಸ್ಸು ಮತ್ತು ಸಂಪತ್ತನ್ನು ಸೂಚಿಸುತ್ತದೆ . ಮಾನಸಿಕ ಸ್ಥಿತಿ, ಜಾತಕನ ಮಾನಸಿಕ ನೆಮ್ಮದಿ, ಯೋಚನಾ ಶಕ್ತಿ ಮತ್ತು ತಾಯಿಯ ಆರೋಗ್ಯವನ್ನು ಇದು ಸೂಚಿಸುತ್ತದೆ. ಧನಲಾಭ ಮತ್ತು ಪ್ರಯಾಣ, ದೈನಂದಿನ ಆದಾಯ, ಆರ್ಥಿಕ ಏರಿಳಿತಗಳು ಮತ್ತು ಪ್ರಯಾಣದ ಯಶಸ್ಸನ್ನು ಲೆಕ್ಕ ಹಾಕಲು ಇದು ಮುಖ್ಯ. ಚಂದ್ರನಿಗಿರುವ ಬಿಂದುಗಳು ಮನಸ್ಸಿನ ಸಂತೋಷವನ್ನು ನಿರ್ಧರಿಸುತ್ತವೆ.

ಚಂದ್ರನ ಅಷ್ಟಕವರ್ಗದಲ್ಲಿ 

​8 ಬಿಂದುಗಳು: ಗೌರವ ಕೀರ್ತಿ, ರುಚಿಕರ ಆಹಾರ ಸೇವನೆ, ಆದಾಯ, ಮಂತ್ರೋಪದೇಶ.
7 ಬಿಂದುಗಳು: ಗಂಧ ಮಾಲ್ಯಾಧಿ ವಸ್ತುಗಳ ಸಂಗ್ರಹಣೆ, ಚೌಲಾದಿ ಧಾರ್ಮಿಕ ಕಾರ್ಯಗಳು.
6 ಬಿಂದುಗಳು: ಮಂತ್ರಶಕ್ತಿ ಬ್ರಾಹ್ಮಣ ಸ್ನೇಹ
​5 ಬಿಂದುಗಳು: ಪರಾಕ್ರಮ
​4 ಬಿಂದುಗಳು: ಸುಖ ದುಃಖ ಸಮ
​3 ಬಿಂದು ಇದ್ದರೆ: ಬಂದು, ಸ್ನೇಹಿತರಲ್ಲಿ ವೈಷಮ್ಯ
​2 ಬಿಂದು ಇದ್ದರೆ: ಶತ್ರು ವೃದ್ಧಿ, ಪತಿಪತ್ನಿಯರಲ್ಲಿ ಜಗಳ
​1 ಬಿಂದು ಇದ್ದರೆ: ಅನಿರೀಕ್ಷಿತ ತೊಂದರೆಗಳು.
​0 ಬಿಂದು ಇದ್ದರೆ: ಕಾಯಿಲೆ ಆತಂಕ

​      ಹೆಚ್ಚು ಬಿಂದು ಇರುವ ರಾಶಿಯ ಒಡಹುಟ್ಟಿದವರ ಮುಖ ದರ್ಶನ ಮಾಡಿ ಅವರಿಗೆ ವಸ್ತ್ರದಾನ ಮಾಡಿದರೆ ಶುಭಫಲ. ಶೂನ್ಯ ಬಿಂದು ಇರುವ ರಾಶಿಯಲ್ಲಿ ಶನಿ ಚಂದ್ರ ಸಂಚರಿಸುವಾಗ ಶುಭಕಾರ್ಯಗಳು ಬೇಡ. ಚಂದ್ರನಿಂದ 8, 12 ನೇ ಮನೆಯಲ್ಲಿ ಕಡಿಮೆ ಬಿಂದು ಇರುವ ರಾಶಿಯಲ್ಲಿ ಖಂಡಿತ ಶುಭಕಾರ್ಯ ಮಾಡಬಾರದು.

     ​ ಚಂದ್ರನು ಲಗ್ನದಲ್ಲಿದ್ದು 1, 2, 3 ಬಿಂದುಗಳಿದ್ದರೆ ರೋಗಿಷ್ಟ. 2-3 ಬಿಂದುವಿದ್ದು ಪಾಪಗ್ರಹವಿದ್ದರೆ ಆ ಜಾತಕನಿಗೆ 37 ನೇ ವಯಸ್ಸಿನಲ್ಲಿ ಮರಣ ಭಯವಿರುತ್ತದೆ. 
      ಕೇಂದ್ರ, ತ್ರಿಕೋಣ, ಉಚ್ಚ, ಸ್ವಕ್ಷೇತ್ರ, ಮಿತ್ರಕ್ಷೇತ್ರದಲ್ಲಿ ಇದ್ದು ಹೆಚ್ಚು ಬಿಂದುಗಳಿದ್ದರೆ ರಾಜಯೋಗ. ಚಂದ್ರನು ಮಾತೃಕಾರಕನಾದ್ದರಿಂದ ಆಕೆಯ ಸಹೋದರ /ಸಹೋದರಿಯರ ಸಂಖ್ಯೆಯನ್ನು ಚಂದ್ರನ 4 ನೇ ಮನೆಯಿಂದ ತಿಳಿಯಬಹುದು. ಚಂದ್ರನು 6, 11 ರಲ್ಲಿ 6 ಬಿಂದುಗಳ ಮೇಲೆ ಪಡೆದು ಗುರುದೃಷ್ಟಿ ಇದ್ದರೆ ಆ ಜಾತಕನು ಧನಿಕ ಹಾಗೂ ಯೋಗಪುರುಷ . ಚಂದ್ರನಿಂದ ಅಷ್ಟಮಾದಿಪತಿ ನಕ್ಷತ್ರದಲ್ಲಿ ಚಂದ್ರ ಸಂಚರಿಸುವಾಗ ಜಾತಕನು ರೋಗಾದಿಗಳಿಂದ ನರಳುತ್ತಾನೆ.
ಯಾವುದೇ ಒಂದು ರಾಶಿಯಲ್ಲಿ ಚಂದ್ರನಿಗೆ 4 ಅಥವಾ ಅದಕ್ಕಿಂತ ಹೆಚ್ಚು ಬಿಂದುಗಳು ಇದ್ದರೆ, ಆ ರಾಶಿಯಲ್ಲಿ ಚಂದ್ರನ ಗೋಚಾರ (ಪ್ರತಿ ತಿಂಗಳ ಸಂಚಾರ) ಮತ್ತು ದಶಾ ಕಾಲವು ಮಾನಸಿಕ ನೆಮ್ಮದಿ ಹಾಗೂ ಧನಲಾಭವನ್ನು ನೀಡುತ್ತದೆ.

ಕುಜನ ಭಿನ್ನಾಷ್ಟಕವರ್ಗ - ಶಕ್ತಿ ಮತ್ತು ಆಸ್ತಿ

   ಪರಾಕ್ರಮ ಮತ್ತು ಸೋದರರು: ಜಾತಕನ ಧೈರ್ಯ, ನಾಯಕತ್ವ ಗುಣ ಮತ್ತು ಒಡಹುಟ್ಟಿದವರಿಂದ ಸಿಗುವ ಸಹಕಾರವನ್ನು ಇದು ತಿಳಿಸುತ್ತದೆ.

ಸ್ಥಿರ ಆಸ್ತಿ: ಭೂಮಿ ಖರೀದಿ, ಮನೆ ಕಟ್ಟುವುದು, ರಿಯಲ್ ಎಸ್ಟೇಟ್ ವ್ಯವಹಾರ ಮತ್ತು ಅಪಘಾತಗಳ ಸಾಧ್ಯತೆಯನ್ನು ತಿಳಿಯಲು ಇದನ್ನು ಬಳಸಲಾಗುತ್ತದೆ.

ಮಂಗಳ ಭಿನ್ನಾಷ್ಟಕವರ್ಗದಲ್ಲಿ - ಒಟ್ಟು ಬಿಂದುಗಳು: 39

ರವಿ: 3, 5, 6, 10, 11 (5 ಬಿಂದು)
ಚಂದ್ರ: 3, 6, 11 (3 ಬಿಂದು)
ಮಂಗಳ: 1, 2, 4, 7, 8, 10, 11 (7 ಬಿಂದು)
ಬುಧ: 3, 5, 6, 11 (4 ಬಿಂದು)
ಗುರು: 6, 8, 11, 12 (4 ಬಿಂದು)
ಶುಕ್ರ: 6, 8, 11, 12 (4 ಬಿಂದು)
ಶನಿ: 1, 4, 7, 8, 9, 10, 11, (7 ಬಿಂದು)
ಲಗ್ನ: 1, 3, 6, 10, 11 (5 ಬಿಂದು)

ಇಲ್ಲಿ ಬಿಂದುಗಳು ಕಡಿಮೆ ಇದ್ದರೆ ಕೋಪ ಮತ್ತು ರಕ್ತದೊತ್ತಡದ ಸಮಸ್ಯೆಗಳು ಕಾಡಬಹುದು.

​8 ಬಿಂದು: ಅಣ್ಣ ತಮ್ಮಂದಿರಿಂದ ಲಾಭ ಧನಸಂಪಾದನೆ, ಭೂಮಿಲಾಭ, ಶತ್ರುನಾಶ
​7 ಬಿಂದು: ಅಣ್ಣ ತಮ್ಮಂದಿರಿಂದ ಲಾಭ, ಭಾಗ್ಯ
6 ಬಿಂದು: ಯಜಮಾನನ ಪ್ರೀತಿ
​5 ಬಿಂದು: ಸದಾಚಾರ
​4 ಬಿಂದು: ಸುಖ ದುಃಖ ಸಮ
​3 ಬಿಂದು: ಬಂಧು ವಿಯೋಗ
​2 ಬಿಂದು: ಕಲಹ, ವಿರೋಧಿಗಳ ಉಪದ್ರವ
​1 ಬಿಂದು: ದೇಹಪೀಡೆ
​0 ಬಿಂದು: ಮೂರ್ಚಾವಸ್ಥೆ.

     ​ ಕುಜನಿಂದ 3 ರಲ್ಲಿ ಇರುವ ಬಿಂದುಗಳಿಂದ ಭ್ರಾತೃಗಳ ಸಂಖ್ಯೆಯನ್ನು ಹೇಳಬಹುದು. ಕುಜನು ಸ್ವಕ್ಷೇತ್ರ ಮತ್ತು 9, 4, 10, 11 ನೇ ಭಾವದಲ್ಲಿದ್ದು 8 ಬಿಂದುಗಳಿಂದ ಕೂಡಿದ್ದರೆ ಕೋಟ್ಯಾಧಿಪತಿ. ಮೇಷ, ಸಿಂಹ, ವೃಶ್ಚಿಕ, ಧನಸ್ಸು, ಮಕರ, ಮೀನ ರಾಶಿಗಳು ಲಗ್ನವಿದ್ದು ಅಲ್ಲಿ ಕುಜನಿಗೆ 4 ಬಿಂದುಗಳಿದ್ದಾಗ ರಾಜಯೋಗ, ಲಗ್ನ & 10 ರಲ್ಲಿ 8 ಬಿಂದುಗಳಿದ್ದರೆ ರಾಜಯೋಗ.

    ​ಕುಜನಿಂದ 3 ನೇ ಮನೆಯಲ್ಲಿ ಬಿದ್ದ ಬಿಂದು ಸಂಖ್ಯೆಗಳಿಂದ Or ತ್ರಿಕೋಣ ಶೋಧನದ ನಂತರ ಬಿದ್ದ ಬಿಂದುಗಳಿಂದ ಭ್ರಾತೃ ಸಂಖ್ಯೆಯನ್ನು ಹೇಳಬಹುದು. (ಪೂರ್ವಾಷಾಢ ನಕ್ಷತ್ರ Or ತ್ರಿಕೋಣ ನಕ್ಷತ್ರದಲ್ಲಿ ಶನಿಯು ಸಂಚಾರ ಮಾಡುವಾಗ ಭ್ರಾತೃವಿಗೆ ಪೀಡೆ.)

     ​ಕುಜನು 4 ನೇ ಅಧಿಪತಿಯಾಗಿದ್ದು ಸ್ವಕ್ಷೇತ್ರದಲ್ಲಿದ್ದು 4 ಬಿಂದುಗಳಿಂದ ಕೂಡಿದ್ದರೆ ಅವನು ರಾಜ ಸಮಾನನು. ದಶಮದಲ್ಲಿದ್ದರೆ ನ್ಯಾಯಾಧೀಶ, ಬ್ರಾಹ್ಮಣನಾಗಿದ್ದರೆ ಅನೇಕ ಯಜ್ಞಗಳನ್ನು ಮಾಡುತ್ತಾನೆ. ವೈಶ್ಯನಾಗಿದ್ದರೆ ವ್ಯಾಪಾರ, ಕೃಷಿಗಳಿಂದ ಸಂಪತ್ತು. ಶೂದ್ರನಾಗಿದ್ದರೆ ಸೇನಾಪತಿ, ಇವು ಸಿಂಹ, ಮಕರ ಲಗ್ನಕ್ಕೆ ಮಾತ್ರ ಸಂಬಂಧ ಪಟ್ಟಿದ್ದು. ಚಂದ್ರ ಮಂಗಳ ಯುತಿ ಇದ್ದರೂ ಅಥವಾ ದೃಷ್ಟಿ ಇದ್ದರೂ ಮಂತ್ರಿಯಾಗುವ ಯೋಗ ಇರುತ್ತದೆ.

     ಕುಜನು 4 ಬಿಂದುಗಳಿಂದ ಕೂಡಿದ್ದು ರಾಶಿ ಬಲವಿದ್ದು ಶನಿಯು ಸಂಬಂಧವಿದ್ದರೂ ನ್ಯಾಯಾಧೀಶ. ಕುಜ ಬಲಿಷ್ಠನಾಗಿದ್ದು ಹೆಚ್ಚು ಬಿಂದುಗಳಿಂದ ಕೂಡಿದ್ದರೆ ಮುಖ್ಯ ಅಧಿಕಾರಿ.

.   ಕುಜ Or ಶನಿ ಲಗ್ನದಿಂದ 3 ರಲ್ಲಿದ್ದು 3 ಕ್ಕಿಂತ ಕಡಿಮೆ ಬಿಂದುಗಳಿದ್ದರೆ ಭ್ರಾತೃ ನಾಶ. ಕುಜನು ಮತ್ತು ಶನಿ 6-8 ರಲ್ಲಿ 1-3 ಬಿಂದುಗಳಿದ್ದರೆ ಭ್ರಾತೃ ನಾಶ. ಕುಜನು + ಶನಿಯು 6, 8 ರಲ್ಲಿದ್ದು 1-3 ಬಿಂದುಗಳಿದ್ದರೆ ಭ್ರಾತೃವಿಗೆ ಕೇಡು.

ಬುಧ ಭಿನ್ನಾಷ್ಟಕವರ್ಗ - 

      ಬುದ್ಧಿವಂತಿಕೆ ಮತ್ತು ವ್ಯಾಪಾರ, ಬುದ್ಧಿಶಕ್ತಿ: ಜಾತಕನ ಕಮ್ಯುನಿಕೇಶನ್ (ಮಾತುಗಾರಿಕೆ), ನೆನಪಿನ ಶಕ್ತಿ ಮತ್ತು ಶಿಕ್ಷಣದ ಪ್ರಗತಿಯನ್ನು ಇದು ತೋರಿಸುತ್ತದೆ.

ವ್ಯಾಪಾರ ಮತ್ತು ಸೋದರಮಾವ: ಹೊಸ ಬಿಸಿನೆಸ್ ಆರಂಭಿಸಲು, ಷೇರು ಮಾರುಕಟ್ಟೆ ಹೂಡಿಕೆಗೆ ಮತ್ತು ಸೋದರಮಾವನ ಸಂಬಂಧ ತಿಳಿಯಲು ಇದು ಮುಖ್ಯ.
ಹೆಚ್ಚು ಬಿಂದುಗಳಿದ್ದರೆ ಗಣಿತ, ಬರವಣಿಗೆ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿ ಅದ್ಭುತ ಯಶಸ್ಸು ಸಿಗುತ್ತದೆ.

ಬುಧ ಭಿನ್ನಾಷ್ಟಕವರ್ಗ - ಒಟ್ಟು ಬಿಂದುಗಳು: 54

​ರವಿ: 5, 6, 9, 11, 12 (5 ಬಿಂದು)

​ಚಂದ್ರ: 2, 4, 6, 8, 10, 11 (6 ಬಿಂದು)

​ಮಂಗಳ: 1, 2, 4, 7, 8, 9, 10, 11 (8 ಬಿಂದು)

​ಬುಧ: 1, 3, 5, 6, 9, 10, 11, 12 (8 ಬಿಂದು)

​ಗುರು: 6, 8, 11, 12 (4 ಬಿಂದು)

​ಶುಕ್ರ: 1, 2, 3, 4, 5, 8, 9, 11 (8 ಬಿಂದು)

​ಶನಿ: 1, 2, 4, 7, 8, 9, 10, 11 (8 ಬಿಂದು)

​ಲಗ್ನ: 1, 2, 4, 6, 8, 10, 11 (7 ಬಿಂದು)

ಬುಧಾಷ್ಟಕವರ್ಗದಲ್ಲಿ

​8 ಬಿಂದುಗಳು: ರಾಜಸನ್ಮಾನ ಲಾಭ
​7 ಬಿಂದುಗಳು: ಪಾಂಡಿತ್ಯ, ಸಂಪತ್ತು, ಕೀರ್ತಿ
​6 ಬಿಂದುಗಳು: ಕಾರ್ಯಸಿದ್ಧಿ, ಯಶಸ್ಸು ಪ್ರಾಪ್ತಿ
​5 ಬಿಂದುಗಳು: ಹೊಸ ಮಿತ್ರರು ಬಂಧುಗಳು ದೊರೆಯುತ್ತಾರೆ
​4 ಬಿಂದುಗಳು: ತೃಪ್ತಿ ಆದರೆ ಉತ್ಸಾಹ ಕಮ್ಮಿ.
​3 ಬಿಂದುಗಳು: ಮಾನಸಿಕ ತೊಂದರೆ
​2 ಬಿಂದುಗಳು: ವಾತಾಪಿತ್ತ ಮೂಲಕ ಅನಾರೋಗ್ಯ 
​1 ಬಿಂದು: ಕಷ್ಟ ನಷ್ಟ 
​0 ಬಿಂದು: ಸಂಪತ್ತು ಹಾನಿ ಮತ್ತು ಶತ್ರು ಭಯ

​        ಬುಧನಿಂದ 4 ನೇ ಸ್ಥಾನದಿಂದ ಕುಟುಂಬ ಧನ ಮತ್ತು ಸೋದರ ಮಾವನ ವಿಚಾರಗಳನ್ನು ಹೇಳಬಹುದು. ಬುಧನು ಮಂತ್ರವಿದ್ಯೆಗಳ ಕಾರಕನು ಇವನ ಅಷ್ಟಕವರ್ಗದಲ್ಲಿ ಬುಧನಿಂದ 3 ನೇ ಸ್ಥಾನದಲ್ಲಿ 0 Or 1 ಬಿಂದುವಿದ್ದರೆ ಅವನು ಮೂರ್ಖನಾಗುತ್ತಾನೆ ಅಥವಾ ಮೂಗನಾಗುತ್ತಾನೆ.
      ​ಅಷ್ಟಕವರ್ಗದಲ್ಲಿ ಬುಧನಿಂದ 2 ನೇ ಸ್ಥಾನದಲ್ಲಿ
​2 ಬಿಂದುವಿದ್ದರೆ - ಚಂಚಲ ವಾಕ್ಕು ಅಸ್ಪಶ್ಟ ಮಾತು.
​3 ಬಿಂದುವಿದ್ದರೆ - ಸಾಧಾರಣ ಮಾತು
​4 ಬಿಂದುವಿದ್ದರೆ - ಮಾತುಗಾರ
​5-6 ಬಿಂದುವಿದ್ದರೆ - ಆಸಾಧಾರಣವಾದ ಮಾತು, ಮಾತಲ್ಲೇ ಬೇರೆಯವರ ಮನಸೆಳೆಯುವರು
​7 ಬಿಂದುವಿದ್ದರೆ - ಕವಿ ಸಮಾನ
​8 ಬಿಂದುವಿದ್ದರೆ - ಬೃಹಸ್ಪತಿ ಸಮಾನ

       ​ಬುಧನು ಯಾವುದೇ ರಾಶಿಯಲ್ಲಿ ಸಂಚರಿಸುವಾಗ ಆ ರಾಶಿಯಲ್ಲಿ ಹೆಚ್ಚು ಬಿಂದುಗಳಿದ್ದರೆ ಪೂರ್ತಿ ವಿದ್ಯಾಭ್ಯಾಸ ಪ್ರಾಪ್ತಿ. ಬುಧನ ಅಷ್ಟಕವರ್ಗದಲ್ಲಿ ಬುಧನು 6, 8, 12 ರಲ್ಲಿದ್ದು 1, 2, 3 ಬಿಂದುಗಳಿಂದ ಕೂಡಿದ್ದು ಶುಭಗ್ರಹರ ದೃಷ್ಟಿ ಇಲ್ಲದಿದ್ದಲ್ಲಿ ಜಾತಕನಿಗೆ ನೀಚ ಜನರ ಸಹವಾಸದಿಂದಾಗಿ ಜೂಜು ಇತ್ಯಾದಿ ದುರ್ವ್ಯಸನಕ್ಕೆ ಒಳಗಾಗುತ್ತಾನೆ. ಬುಧನಿಗೆ 5 ಕ್ಕಿಂತ ಹೆಚ್ಚು ಬಿಂದುಗಳಿದ್ದು, ತ್ರಿಕೋಣದಲ್ಲಿದ್ದು ಗುರು, ಶನಿ ದೃಷ್ಟಿ ಇದ್ದರೆ ಆ ಜಾತಕನು ವೇದಾಂತಿಯಾಗುತ್ತಾನೆ. ಬುಧನಿಗೆ 5 ಬಿಂದುಗಳಿದ್ದು ಗುರು-ಮಂಗಳರ ಯುತಿ ಇದ್ದಾಗ ಅಥವಾ ದೃಷ್ಟಿ ಇದ್ದಾಗ ತರ್ಕಶಾಸ್ತ್ರ ಪಂಡಿತನಾಗುತ್ತಾನೆ. ಲಗ್ನದಿಂದ ಪಂಚಮ ಭಾವದಲ್ಲಿ ಬುಧನಿದ್ದು ಹೆಚ್ಚು ಬಿಂದುವಿನಿಂದ ಕೂಡಿ ಕೇತುವಿನ ಸಂಬಂದ ಇದ್ದರೆ.. ಗಣಿತ, ಜ್ಯೋತಿಷ್ಯ ಪ್ರವೀಣನಾಗುತ್ತಾನೆ. ಬುಧನು ತನ್ನ ಮನೆಯಲ್ಲಿ Or ತನ್ನ ನವಾಂಶದಲ್ಲಿದ್ದರೆ ಶಿಲ್ಪಕಲೆ, ಲಲಿತಕಲಾ, ವೇದಗಳಲ್ಲಿ
ಪ್ರವೀಣನಾಗುತ್ತಾನೆ. ಬುಧನು ಶನಿ ಶುಕ್ರ ಚಂದ್ರರ ಸಂಪರ್ಕ ದಲ್ಲಿದ್ದು ಗುರುವಿನ ದೃಷ್ಟಿ ಇದ್ದರೆ ನೃತ್ಯ, ಹಾಸ್ಯ ಪ್ರವೀಣನಾಗುತ್ತಾನೆ. ಬುಧನು 4 ಬಿಂದುಗಳಿಂದ ಕೂಡಿ ಮಂಗಳನ ಮನೆಯಲ್ಲಿದ್ದರೆ ಮತ್ತು ಶುಕ್ರ ನವಾಂಶದಲ್ಲಿ ಗುರುವಿನ Or ಶನಿದೃಷ್ಟಿ ಇದ್ದರೆ ಕವಿ Or ನಾಟಕಕಾರನಾಗುತ್ತಾನೆ. ಬುಧನು 6, 8, 12 ರಲ್ಲಿದ್ದರೆ ವಿದ್ಯಾಭ್ಯಾಸಕ್ಕೆ ತೊಂದರೆ. ಬುಧನು ಭಾವದಲ್ಲಿ ದುರ್ಬಲನಾಗಿದ್ದರೂ 4 Or ಹೆಚ್ಚು ಬಿಂದುಗಳಿದ್ದರೆ ಆ ಭಾವಕ್ಕೆ ಬಲ ಇರುತ್ತದೆ. ಆ ಭಾವಗಳಿಗೆ ಗುರುದೃಷ್ಟಿ ಇದ್ದರೆ ಮತ್ತಷ್ಟು ಆ ಭಾವಕ್ಕೆ ಪುಷ್ಟಿ.
​  
      ಬುಧನು ಕೇಂದ್ರ ತ್ರಿಕೋಣಗಳಲ್ಲಿದ್ದು 5 ಬಿಂದುಗಳಿಂದ ಕೂಡಿದ್ದು ಇವನಿಗೆ ಗುರುವಿನ Or ಶನಿಯು ಯುತಿ Or ದೃಷ್ಟಿ ಇದ್ದರೆ ಜಾತಕನು ವೇದಾಂತ ಶಾಸ್ತ್ರ ಪ್ರವೀಣನಾಗುತ್ತಾನೆ.

ಗುರು ಭಿನ್ನಾಷ್ಟಕವರ್ಗ - ಒಟ್ಟು ಬಿಂದುಗಳು: 56

       ಜ್ಞಾನ ಮತ್ತು ಭಾಗ್ಯ ಸಂತಾನ ಮತ್ತು ಧನ: ಮಕ್ಕಳ ಭಾಗ್ಯ, ಆಧ್ಯಾತ್ಮಿಕ ಒಲವು, ಉನ್ನತ ಶಿಕ್ಷಣ ಮತ್ತು ಸಂಪತ್ತಿನ ಶೇಖರಣೆಯನ್ನು ಇದು ಸೂಚಿಸುತ್ತದೆ.
ದೈವಕೃಪೆ: ಜೀವನದಲ್ಲಿ ಬರುವ ಅದೃಷ್ಟ ಮತ್ತು ಧಾರ್ಮಿಕ ಕಾರ್ಯಗಳ ಯಶಸ್ಸನ್ನು ಗುರು ಭಿನ್ನಾಷ್ಟಕವರ್ಗದಿಂದ ತಿಳಿಯಬಹುದು.
ಗುರುವಿಗೆ ಹೆಚ್ಚು ಬಿಂದುಗಳಿರುವ ರಾಶಿಯಲ್ಲಿ ಗುರು ಸಂಚರಿಸುವಾಗ ಮದುವೆ, ಸಂತಾನದಂತಹ ಮಂಗಲ ಕಾರ್ಯಗಳು ನಡೆಯುತ್ತವೆ.

ಗುರು ಭಿನ್ನಾಷ್ಟಕ ವರ್ಗದಲ್ಲಿ ಗ್ರಹಗಳು ಕೊಡುವ ಬಿಂಧುಗಳು 

​ರವಿ: 1, 2, 3, 4, 7, 8, 9, 10, 11 (9 ಬಿಂದು)
​ಚಂದ್ರ: 2, 5, 7, 9, 11 (5 ಬಿಂದು)
​ಮಂಗಳ: 1, 2, 4, 7, 8, 10, 11 (7 ಬಿಂದು)
​ಬುಧ: 1, 2, 4, 5, 6, 9, 10, 11 (8 ಬಿಂದು)
​ಗುರು: 1, 2, 3, 4, 7, 8, 10, 11 (8 ಬಿಂದು)
​ಶುಕ್ರ: 2, 5, 6, 9, 10, 11 (6 ಬಿಂದು)
​ಶನಿ: 3, 5, 6, 12 (4 ಬಿಂದು)
​ಲಗ್ನ: 1, 2, 4, 5, 6, 7, 9, 10, 11 (9 ಬಿಂದು)

ಗುರುವು ತನ್ನ ಭಿನ್ನಾಷ್ಟಕ ವರ್ಗಗಳಲ್ಲಿ

​8 ಬಿಂದುಗಳಿದ್ದರೆ - ರಾಜಸನ್ಮಾನ
​7 ಬಿಂದುಗಳಿದ್ದರೆ - ವಿವಿಧ ರೀತಿ ಧನ ಪ್ರಾಪ್ತಿ
​6 ಬಿಂದುಗಳಿದ್ದರೆ - ವಸ್ತ್ರಾಭರಣ ಸಂಗ್ರಹ
​5 ಬಿಂದುಗಳಿದ್ದರೆ - ಕಾರ್ಯ ಸಿದ್ಧಿ, ವಿಜಯ
​4 ಬಿಂದುಗಳಿದ್ದರೆ - ಲಾಭ ನಷ್ಟ ಸಮಾನ
​3 ಬಿಂದುಗಳಿದ್ದರೆ - ಕಿವಿನೋವು ನಿಶ್ಯಕ್ತಿ
​2 ಬಿಂದುಗಳಿದ್ದರೆ - ರಾಜಕೋಪ ಧನ ಹಾನಿ
​1 ಬಿಂದುಗಳಿದ್ದರೆ - ಧನನಾಶ, ಬಂಧು ಹಾನಿ
​0 ಬಿಂದುಗಳಿದ್ದರೆ - ಧನ ಬುದ್ಧಿ, ಸುತ ಹಾನಿ

      ​ ಹೆಚ್ಚು ಬಿಂದುಗಳು ಬಿದ್ದಿರುವ ರಾಶಿಯಲ್ಲಿ ದೇವತಾಕಾರ್ಯಗಳು, ವ್ರತಗಳನ್ನು ಆಚರಿಸಬಹುದು . ಗುರುವು ಉಚ್ಛ / ಸ್ವಕ್ಷೇತ್ರಗಳಲ್ಲಿ ಹೆಚ್ಚು ಬಿಂದುಗಳಿಂದ ಕೂಡಿದ್ದರೆ ಮಾನ ಮನ್ನಣೆ, 7 ಬಿಂದುಗಳಿಂದ ಕೂಡಿ ಚಂದ್ರನೊಡನಿದ್ದರೆ ಪತ್ನಿ ಪುತ್ರರ ಅಭಿವೃದ್ಧಿ. 6 ಬಿಂದುಗಳಿದ್ದರೆ ಧನ ವಾಹನ ವಸ್ತ್ರ ಸಂಗ್ರಹ. ಗುರುವಿನಿಂದ 5 ರಲ್ಲಿ ಬಿದ್ದ ಸಂಖ್ಯೆಯಿಂದ ಮಕ್ಕಳ ಸಂಖ್ಯೆಯನ್ನು ಹೇಳಬಹುದು. ಸರ್ವಾಷ್ಟಕವರ್ಗದಲ್ಲಿ ಗುರುವಿಗೆ ಬಿದ್ದ ಬಿಂದುಗಳ ಮೊತ್ತದ ವರ್ಷದಲ್ಲಿ ರಾಜ ಸನ್ಮಾನ. ಗುರುವಿನ ಅಷ್ಟಕವರ್ಗದಲ್ಲಿ ಹೆಚ್ಚು ಬಿಂದುಗಳಿರುವ ರಾಶಿಯಲ್ಲಿ ರವಿ ಸಂಚರಿಸುವಾಗ ಗರ್ಭಧಾರಣೆ ಆದರೆ ಹುಟ್ಟುವ ಮಗು ಪ್ರಖ್ಯಾತನಾಗುತ್ತಾನೆ.

       ​ಚಂದ್ರನು ತನ್ನ ಅಷ್ಟಕವರ್ಗದಲ್ಲಿ 1, 3 ಬಿಂದುಗಳಿಂದ ಕೂಡಿದ್ದು ಗುರುವಿನಿಂದ 6, 8 ರಲ್ಲಿದ್ದರೆ ಅವನಿಗೆ ರಾಜಯೋಗವಿದ್ದರೂ ಸಾಲದ ಭಾದೆ ತಪ್ಪುವುದಿಲ್ಲ. ಗುರು ಯಾವ ರಾಶಿಯಲ್ಲಿದ್ದರೂ ನವಂಶದಲ್ಲಿ ಉಚ್ಛನಾಗಿದ್ದರೆ 5 ಬಿಂದುಗಳಿಂದ ಕೂಡಿದ್ದರೆ ಭೂ ಸೌಖ್ಯ ಪ್ರಾಪ್ತಿ. ಗುರುವು ಕೇಂದ್ರ ತ್ರಿಕೋಣದಲ್ಲಿದ್ದರೂ 1, 3 ಬಿಂದುಗಳಿದ್ದರೆ ಯಾವ ಫಲವನ್ನು ಕೊಡುವುದಿಲ್ಲ. ಗುರುವಿಗೆ 4 ಕ್ಕಿಂತ ಹೆಚ್ಚು ಬಿಂದುಗಳಿದ್ದರೆ , ಶುಕ್ರನ ಯುತಿ Or ದೃಷ್ಟಿ ರಾಜಯೋಗ.

ಶುಕ್ರ ಭಿನ್ನಾಷ್ಟಕವರ್ಗ - 
       ಸುಖ ಮತ್ತು ವೈವಾಹಿಕ ಜೀವನ

ವೈವಾಹಿಕ ಸುಖ: ವಿವಾಹ ಯೋಗ, ಪತ್ನಿ/ಪತಿಯ ಸುಖ ಮತ್ತು ಪ್ರೇಮ ಜೀವನದ ಯಶಸ್ಸನ್ನು ಇದು ನಿರ್ಧರಿಸುತ್ತದೆ.
ವಿಲಾಸಿ ಜೀವನ: ವಾಹನ ಯೋಗ, ಆಭರಣಗಳು, ಕಲೆ, ಸಂಗೀತ ಮತ್ತು ಐಷಾರಾಮಿ ಜೀವನದ ಸೌಕರ್ಯಗಳನ್ನು ತಿಳಿಯಲು ಇದನ್ನು ನೋಡಲಾಗುತ್ತದೆ.
ಶುಕ್ರನಿಗೆ ಉತ್ತಮ ಬಿಂದುಗಳಿದ್ದರೆ ಜೀವನದಲ್ಲಿ ಎಲ್ಲಾ ಭೌತಿಕ ಸುಖಗಳು ಲಭಿಸುತ್ತವೆ.

ಶುಕ್ರ ಭಿನ್ನಾಷ್ಟಕವರ್ಗ - ಒಟ್ಟು ಬಿಂದುಗಳು: 52

​ರವಿ: 8, 11, 12 (3 ಬಿಂದು)
​ಚಂದ್ರ: 1, 2, 3, 4, 5, 8, 9, 11, 12 (9 ಬಿಂದು)
​ಮಂಗಳ: 3, 5, 6, 9, 11, 12 (6 ಬಿಂದು)
​ಬುಧ: 3, 5, 6, 9, 11 (5 ಬಿಂದು)
​ಗುರು: 5, 8, 9, 10, 11 (5 ಬಿಂದು)
​ಶುಕ್ರ: 1, 2, 3, 4, 5, 8, 9, 10, 11 (9 ಬಿಂದು)
​ಶನಿ: 3, 4, 5, 8, 9, 10, 11 (7 ಬಿಂದು)
​ಲಗ್ನ: 1, 2, 3, 4, 5, 8, 9, 11 (8 ಬಿಂದು)

ಶುಕ್ರನಿಗೆ ಕುಂಡಲಿಯಲ್ಲಿ

​8 ಬಿಂದುವಿದ್ದರೆ - ವಿಲಾಸ ಜೀವನ
​7 ಬಿಂದುವಿದ್ದರೆ - ರತ್ನಾಭರಣ ಪ್ರಾಪ್ತಿ
​6 ಬಿಂದುವಿದ್ದರೆ - ಪ್ರೀತಿಯುಳ್ಳ ಪತ್ನಿ
​5 ಬಿಂದುವಿದ್ದರೆ - ಸನ್ಮಿತ್ರರ ಸಹವಾಸ 
​4 ಬಿಂದುವಿದ್ದರೆ - ಸಾಮಾನ್ಯ ಸೌಖ್ಯ
​3 ಬಿಂದುವಿದ್ದರೆ - ಜನರಿಂದ ಕಲಹ
​2 ಬಿಂದುವಿದ್ದರೆ - ಜಾರಿ ಬೀಳುವಿಕೆ
​1 ಬಿಂದುವಿದ್ದರೆ - ಕಫ, ಜಲಾದಿಗಳ ರೋಗ
​0 ಬಿಂದುವಿದ್ದರೆ - ಹೆಂಡತಿಗೆ ರೋಗ

​        ಶುಕ್ರಾಷ್ಟಕದಲ್ಲಿ ಶುಕ್ರನಿಂದ 7 ನೇ ಸ್ಥಾನದಲ್ಲಿ ಯಾವ ಗ್ರಹದಿಂದ ಬಿಂದು ಬಿದ್ದಿರುತ್ತದೆಯೋ ಆ ಗ್ರಹದ ನಕ್ಷತ್ರತ್ರಯದಲ್ಲಿ ಒಂದರಲ್ಲಿ ಹೆಣ್ಣು ಹುಟ್ಟಿದ್ದರೆ..., ರವಿಯ ಬಿಂದು ಇದ್ದರೆ ಆಕೆ ಪತಿಗೆ ಪ್ರಿಯಳಾಗುತ್ತಾಳೆ. ಚಂದ್ರನ ಬಿಂದುವಿದ್ದು ಚಂದ್ರನ ನಕ್ಷತ್ರದಲ್ಲಿ ಹುಟ್ಟಿದ್ದರೆ ಅವಳು ಪ್ರೀತಿಸುವ ಹೆಂಡತಿ.
​ಕುಜನ ನಕ್ಷತ್ರದಲ್ಲಿ ಜನಿಸಿದ್ದರೆ ಅವರು ಪತಿಗಾಗಿ ಸತ್ಕಾರ್ಯ ಮಾಡುತ್ತಾರೆ. (ಕೇತುವಿನ ನಕ್ಷತ್ರದಲ್ಲಿದ್ದರೂ ಇದೇ ಫಲ.
​ಬುಧನ ನಕ್ಷತ್ರ - ಪತಿಗೆ ಆಜ್ಞಾಧಾರಕರು
​ಗುರು ನಕ್ಷತ್ರ - ಅವರಲ್ಲಿ ಸತ್ಪುತ್ರರು ಜನಿಸುತ್ತಾರೆ.
​ಶುಕ್ರ ನಕ್ಷತ್ರ - ಅಧಿಕ ಸಂಸಾರ ಸುಖ
​ಶನಿ ನಕ್ಷತ್ರ - ಪತಿಗೆ ಆಜ್ಞಾಪಾಲಕರು
​( ರಾಹು ನಕ್ಷತ್ರದಲ್ಲಿದ್ದಾಗ ಕೂಡಾ ಇದೆ ಫಲ )
​ವರನ ಕುಂಡಲಿಯಲ್ಲಿ ಶುಕ್ರನ ಅಷ್ಟಕವರ್ಗದಲ್ಲಿ ಹೆಚ್ಚು ಬಿಂದುಗಳು ಬಿದ್ದಿರುವ ರಾಶಿಯಲ್ಲಿ ಜನಿಸಿದ ಕನ್ಯೆಯನ್ನು ಮದುವೆಯಾದರೆ ಅವರು ಪರಮ ಸುಖಿಗಳು.
​ಕುಜ ಅಥವಾ ಶನಿ 2 Or 7 ರಲ್ಲಿದ್ದು ಶುಕ್ರನ 12 ರಲ್ಲಿದ್ದರೆ ಜಾತಕನಿಗೆ ದೈವೀಕ ಯೋಗ.
ಶುಕ್ರನು ಕೇಂದ್ರ Or ತ್ರಿಕೋಣದಲ್ಲಿ 8 ಬಿಂದುವಿನಿಂದ ಕೂಡಿದ್ದರೆ ಸಕಲ ಭೋಗ ಭಾಗ್ಯಗಳನ್ನು ಪಡೆಯುತ್ತಾನೆ. ಕಡಿಮೆ ಬಿಂದುಗಳಿದ್ದರೆ ಸುಖ ಹೀನ.

​ ಶನಿ ಭಿನ್ನಾಷ್ಟಕವರ್ಗ:--ಆಯಸ್ಸು ಮತ್ತು ಕರ್ಮ

        ಜಾತಕನ ಆಯಸ್ಸಿನ ಪ್ರಮಾಣ, ದೀರ್ಘಕಾಲದ ಕಾಯಿಲೆಗಳು ಮತ್ತು ಕಷ್ಟಗಳನ್ನು ಇದು ಸೂಚಿಸುತ್ತದೆ.
ಉದ್ಯೋಗದ ಸ್ಥಿರತೆ: ಕಠಿಣ ಪರಿಶ್ರಮ, ನೌಕರಿ ಅಥವಾ ಉದ್ಯೋಗದಲ್ಲಿ ಎದುರಾಗುವ ಸವಾಲುಗಳನ್ನು ತಿಳಿಯಲು ಇದು ಅತ್ಯಂತ ಮುಖ್ಯ.
ಶನಿಗೆ ಸಾಮಾನ್ಯವಾಗಿ ಬಿಂದುಗಳು ಕಡಿಮೆ ಇರುತ್ತವೆ (39 ಬಿಂದುಗಳು ಮಾತ್ರ). ಶನಿ ಇರುವ ರಾಶಿಯಲ್ಲಿ 4 ಕ್ಕಿಂತ ಹೆಚ್ಚು ಬಿಂದುಗಳಿದ್ದರೆ ಏಳರ ಶನಿ ಅಥವಾ ಅಷ್ಟಮ ಶನಿಯ ಕಷ್ಟಗಳು ಕಡಿಮೆಯಾಗುತ್ತವೆ.

 ಶನಿ ಭಿನ್ನಾಷ್ಟಕವರ್ಗದಲ್ಲಿ - ಒಟ್ಟು ಬಿಂದುಗಳು: 39

​ರವಿ: 1, 2, 4, 7, 8, 10, 11 (7 ಬಿಂದು)
​ಚಂದ್ರ: 3, 6, 11 (3 ಬಿಂದು)
​ಮಂಗಳ: 3, 5, 6, 10, 11, 12 (6 ಬಿಂದು)
​ಬುಧ: 6, 8, 9, 10, 11, 12 (6 ಬಿಂದು)
​ಗುರು: 5, 6, 11, 12 (4 ಬಿಂದು)
​ಶುಕ್ರ: 6, 11, 12 (3 ಬಿಂದು)
​ಶನಿ: 3, 5, 6, 11 (4 ಬಿಂದು)
​ಲಗ್ನ: 1, 3, 4, 6, 10, 11 (6 ಬಿಂದು)

ಶನಿ ಅಷ್ಟಕ ವರ್ಗದ ಫಲ

​8 ಬಿಂದು - ನಗರದ ಒಡೆಯ ನಾಗರಾಧಿಕಾರಿ 
​7 ಬಿಂದು - ವಾಹನ ಲಾಭ
​6 ಬಿಂದು - ಚೋರ ನಾಯಕ
​5 ಬಿಂದು - ಕೃಷಿಯಿಂದ ಧನಲಾಭ
​4 ಬಿಂದು - ಸಾಮಾನ್ಯ ಸುಖ
​3 ಬಿಂದು -ಸೇವಕರ (ನೌಕರಿ) ನಾಶ, ಧನ ಹಾನಿ
​2 ಬಿಂದು - ಆತುರತೆ, ಬಂಧನ ಭೀತಿ
​1 ಬಿಂದು - ಕಾರ್ಯ ಹಾನಿ
​0 ಬಿಂದು - ಭಾಗ್ಯ ಕ್ಷಯ

​         ಲಗ್ನಕ್ಕೆ ಶನಿಯು ಯೋಗ ಕಾರಕನು ಹೌದೋ ಅಲ್ಲವೋ ಎಂಬುದನ್ನು ಗಮನಿಸಬೇಕು. ಶನಿ ತನ್ನ ಅಷ್ಟಕವರ್ಗದಲ್ಲಿ ಹೆಚ್ಚು ಬಿಂದುಗಳು ಬಿದ್ದಿರುವ ರಾಶಿಯಲ್ಲಿ ಸಂಚರಿಸುವಾಗ ಭೂಮಿ, ನೌಕರರಿಂದ ಲಾಭವಿರುತ್ತದೆ. ಶನಿಯ ಶೋಧ್ಯ ಪಿಂಡ ಬಿಂದುವನ್ನು ಶನಿಯಿಂದ 8 ರಲ್ಲಿ ಬಿದ್ದ ಬಿಂದು ಸಂಖ್ಯೆಯಿಂದ ಗುಣಿಸಿ 27 ರಿಂದ ಭಾಗಿಸಿದಾಗ ಶೇಷ ನಕ್ಷತ್ರದಲ್ಲಿ Or ತ್ರಿಕೋಣ ನಕ್ಷತ್ರದಲ್ಲಿ ಶನಿ ಬಂದಾಗ ಮರಣ ಭೀತಿ. ಲಗ್ನದಿಂದ ಶನಿಯವರೆಗೆ ಎರಡನ್ನೂ ಒಳಗೊಂಡು ಬಿಂದುಗಳನ್ನು ಕೂಡಿಸಿ ಬಂದ ಸಂಖ್ಯೆಗೆ 7 ರಿಂದ ಗುಣಿಸಿ 27 ರಿಂದ ಭಾಗಿಸಿದಾಗ ಬಂದ ಶೇಷ ಸಂಖ್ಯೆಯ ನಕ್ಷತ್ರದಲ್ಲಿ ಶನಿ ಸಂಚಾರ ಮಾಡುವಾಗ ಧನ ಸುಖ ಹಾನಿ. ಶನಿಯು 3 ಬಿಂದುಗಳಿಂದ ಕೂಡಿ 10 ನೇ ಮನೆಯಲ್ಲಿದ್ದರೆ Or ದಶಮಾಧಿಪತಿಯಿಂದ ಕೂಡಿದ್ದರೆ ಪರದೇಶ ವಾಸ. ಶನಿ 2-3 ಬಿಂದುಗಳಿಂದ ಕೂಡಿ 2 ನೇ ಮನೆಯಲ್ಲಿದ್ದು ದ್ವಿತೀಯಾಧಿಪತಿಯಿಂದ ಕೂಡಿದ್ದರೆ ಗಂಗಾ ಸ್ನಾನ ಫಲ. ಶನಿ 1, 2, 3 ಬಿಂದುಗಳಿಂದ ಕೂಡಿದ್ದು ಯಾವ ಭಾವದಲ್ಲಿದ್ದರೂ ಪರದೇಶ ವಾಸ.
​ಶನಿ, ಗುರು, ರವಿ, ಚಂದ್ರ ಇವರುಗಳು ತಂತಮ್ಮ ಅಷ್ಟಕವರ್ಗದಲ್ಲಿ 1, 2, 3 ಬಿಂದು ಬಿದ್ದ ರಾಶಿಯಲ್ಲಿ ಸಂಚರಿಸುವಾಗ ಅಶುಭ ಫಲಗಳು ಅಧಿಕ.

ಲಗ್ನ ಭಿನ್ನಾಷ್ಟಕ ವರ್ಗ

        ಲಗ್ನ ಭಿನ್ನಾಷ್ಟಕವರ್ಗವು - ವ್ಯಕ್ತಿತ್ವ ಮತ್ತು ಜೀವನಶೈಲಿಯನ್ನು ಸೂಚಿಸುತ್ತದೆ.
ಜಾತಕನ ಒಟ್ಟಾರೆ ವ್ಯಕ್ತಿತ್ವ, ನಡವಳಿಕೆ ಮತ್ತು ಆಲೋಚನಾ ಶೈಲಿಯನ್ನು ಇದು ಪ್ರತಿನಿಧಿಸುತ್ತದೆ.
ಯಶಸ್ಸಿನ ಹಾದಿ: ಜೀವನದ ವಿವಿಧ ಹಂತಗಳಲ್ಲಿ ವ್ಯಕ್ತಿಯು ಸ್ವಪ್ರಯತ್ನದಿಂದ ಹೇಗೆ ಯಶಸ್ಸು ಸಾಧಿಸುತ್ತಾನೆ ಎಂಬುದನ್ನು ಇದು ತೋರಿಸುತ್ತದೆ.

ಗ್ರಹಗಳು ಲಗ್ನಕ್ಕೆ ಬಿಂದು ಕೊಡುವ ಸ್ಥಾನಗಳು (ರಾಶಿಗಳು) ಒಟ್ಟು ಬಿಂದುಗಳು 49 

ರವಿ:-- ತನ್ನ ಸ್ಥಾನದಿಂದ 3, 4, 6, 11, 12 ನೇ ಮನೆಗಳಿಗೆ ಬಿಂದುಗಳನ್ನು ನೀಡುತ್ತಾನೆ (ಒಟ್ಟು 5 ಬಿಂದುಗಳು)
ಚಂದ್ರ:-- ತನ್ನ ಸ್ಥಾನದಿಂದ 3, 6, 10, 11, 12, ನೇ ಮನೆಗಳಿಗೆ ಬಿಂದುಗಳನ್ನು ನೀಡುತ್ತಾನೆ (ಒಟ್ಟು 5 ಬಿಂದುಗಳು).
ಮಂಗಳ :-- ತನ್ನ ಸ್ಥಾನದಿಂದ 1, 3, 6, 10, 11 ನೇ ಮನೆಗಳಿಗೆ ಬಿಂದುಗಳನ್ನು ನೀಡುತ್ತಾನೆ (ಒಟ್ಟು 5 ಬಿಂದುಗಳು).
ಬುಧ : -- ತನ್ನ ಸ್ಥಾನದಿಂದ 1, 2, 4, 6, 8, 10, 11 ನೇ ಮನೆಗಳಿಗೆ ಬಿಂದುಗಳನ್ನು ನೀಡುತ್ತಾನೆ (ಒಟ್ಟು 7 ಬಿಂದುಗಳು).
ಗುರು :-- ತನ್ನ ಸ್ಥಾನದಿಂದ 1, 2, 4, 5, 6, 7, 9, 10, 11 ನೇ ಮನೆಗಳಿಗೆ ಬಿಂದುಗಳನ್ನು ನೀಡುತ್ತಾನೆ (ಒಟ್ಟು 9 ಬಿಂದುಗಳು).
ಶುಕ್ರ:-- ತನ್ನ ಸ್ಥಾನದಿಂದ 1, 2, 3, 4, 5, 8, 9, 11 ನೇ ಮನೆಗಳಿಗೆ ಬಿಂದುಗಳನ್ನು ನೀಡುತ್ತಾನೆ (ಒಟ್ಟು 8 ಬಿಂದುಗಳು).
ಶನಿ :-- ತನ್ನ ಸ್ಥಾನದಿಂದ 1, 3, 4, 6, 10, 11 ನೇ ಮನೆಗಳಿಗೆ ಬಿಂದುಗಳನ್ನು ನೀಡುತ್ತಾನೆ (ಒಟ್ಟು 6 ಬಿಂದುಗಳು).
ಲಗ್ನ : -- ಲಗ್ನ ಸ್ಥಾನದಿಂದಲೇ 3, 6, 10, 11 ನೇ ಮನೆಗಳಿಗೆ ಬಿಂದುಗಳನ್ನು ನೀಡುತ್ತದೆ (ಒಟ್ಟು 4 ಬಿಂದುಗಳು). 

ಲಗ್ನ ಭಿನ್ನಾಷ್ಟಕ ವರ್ಗ ಫಲಗಳು

       ​ಲಗ್ನದ ಅಷ್ಟಕವರ್ಗದಲ್ಲಿ ಒಟ್ಟು 49 ಬಿಂದುಗಳಿರುತ್ತವೆ. ಜಾತಕನ ಜನ್ಮಲಗ್ನದಿಂದ ವಿವಿಧ ರಾಶಿಗಳಲ್ಲಿ ಬಿದ್ದಿರುವ ಬಿಂದುಗಳ ಆಧಾರದ ಮೇಲೆ ಫಲಗಳನ್ನು ಹೀಗೆ ನಿರ್ಣಯಿಸಲಾಗುತ್ತದೆ:

​8 ಬಿಂದುಗಳಿದ್ದರೆ: ಜಗತ್ ಪ್ರಸಿದ್ಧಿ, ಅಪ್ರತಿಮ ಕೀರ್ತಿ, ರಾಜಸಮಾನ ಗೌರವ ಮತ್ತು ಸಕಲ ಸುಖ ಭೋಗಗಳು ಲಭಿಸುತ್ತವೆ. ಆರೋಗ್ಯವಂತ.
​7 ಬಿಂದುಗಳಿದ್ದರೆ: ಉನ್ನತ ಹುದ್ದೆ, ಸಮಾಜದಲ್ಲಿ ಶ್ರೇಷ್ಠ ಗೌರವ, ವಾಹನ ಮತ್ತು ಧನಲಾಭ.
​6 ಬಿಂದುಗಳಿದ್ದರೆ: ಉತ್ತಮ ಆರೋಗ್ಯ, ಕೀರ್ತಿ, ಶೌರ್ಯ ಮತ್ತು ಎಲ್ಲ ಕಾರ್ಯಗಳಲ್ಲೂ ವಿಜಯ.
​5 ಬಿಂದುಗಳಿದ್ದರೆ: ಸದಾಚಾರ, ಸಜ್ಜನರ ಸ್ನೇಹ, ಸಾಂಸಾರಿಕ ಸುಖ ಮತ್ತು ಆರ್ಥಿಕ ಪ್ರಗತಿ.
​4 ಬಿಂದುಗಳಿದ್ದರೆ: ಸುಖ ಮತ್ತು ದುಃಖ ಸಮಾನವಾಗಿರುತ್ತದೆ (ಮಿಶ್ರ ಫಲ).
​3 ಬಿಂದುಗಳಿದ್ದರೆ: ಮಾನಸಿಕ ಅಶಾಂತಿ, ದೈಹಿಕ ಆಯಾಸ ಮತ್ತು ಸಣ್ಣಪುಟ್ಟ ತೊಂದರೆಗಳು.
​2 ಬಿಂದುಗಳಿದ್ದರೆ: ಬಂಧುಗಳಿಂದ ವಿರೋಧ, ಧನಹಾನಿ ಮತ್ತು ಅತಿಯಾದ ಶ್ರಮ.
​1 ಬಿಂದುವಿದ್ದರೆ: ತೀವ್ರ ದಾರಿದ್ರ್ಯ, ಕಾರ್ಯಹಾನಿ ಮತ್ತು ಅಪಕೀರ್ತಿಯ ಭೀತಿ.
​0 ಬಿಂದುವಿದ್ದರೆ: ಅಂಗವೈಕಲ್ಯ, ಸರ್ವಸ್ವ ನಾಶ ಅಥವಾ ತೀವ್ರ ಮಾನಸಿಕ ಭ್ರಷ್ಟತೆ.

     ಲಗ್ನವು ನಮ್ಮ ದೇಹ, ಆರೋಗ್ಯ, ಕೀರ್ತಿ, ಸ್ವಭಾವ ಮತ್ತು ಆತ್ಮವಿಶ್ವಾಸವನ್ನು ಸೂಚಿಸುತ್ತದೆ. ಲಗ್ನ ಭಿನ್ನಾಷ್ಟಕವರ್ಗದಲ್ಲಿ ಯಾವ ರಾಶಿಯಲ್ಲಿ 4 ಅಥವಾ ಅದಕ್ಕಿಂತ ಹೆಚ್ಚು ಬಿಂದುಗಳು ಇರುತ್ತವೆಯೋ, ಆ ರಾಶಿಯಲ್ಲಿ ಶುಭ ಗ್ರಹಗಳು ಸಂಚರಿಸುವಾಗ ಜಾತಕನಿಗೆ ಉತ್ತಮ ಆರೋಗ್ಯ, ಯಶಸ್ಸು ಮತ್ತು ಸಮಾಜದಲ್ಲಿ ಗೌರವ ಲಭಿಸುತ್ತದೆ.

       ಅಷ್ಟಕವರ್ಗ ಪದ್ಧತಿಯಲ್ಲಿ ಪ್ರತಿಯೊಂದು ಗ್ರಹದ ಭಿನ್ನಾಷ್ಟಕವರ್ಗವು ಮಾನವನ ಜೀವನದ ನಿರ್ದಿಷ್ಟ ಕ್ಷೇತ್ರಗಳನ್ನು ಮತ್ತು ಗ್ರಹಗಳ ನೈಜ ಸಾಮರ್ಥ್ಯವನ್ನು ಸೂಚಿಸುತ್ತದೆ. ಯಾವ ರಾಶಿಯಲ್ಲಿ ನಿರ್ದಿಷ್ಟ ಗ್ರಹಕ್ಕೆ 4 ಅಥವಾ ಅದಕ್ಕಿಂತ ಹೆಚ್ಚು ಬಿಂದುಗಳಿರುತ್ತವೆಯೋ, ಆ ರಾಶಿಗೆ ಆ ಗ್ರಹ ಬಂದಾಗ ಶುಭ ಫಲಗಳನ್ನು ನೀಡುತ್ತದೆ. 

​                   ಮುಂದುವರೆಯುವುದು.......

                  ಡಾ : B. N. ಶೈಲಜಾ ರಮೇಶ್ 

Monday, 16 March 2026

ಕ್ರೀಡೆ ಮತ್ತು ಜ್ಯೋತಿಷ್ಯ

                             ಹರಿಃ ಓಂ 

             ಓಂ ಶ್ರೀ ಮಹಾಗಣಪತಯೇ ನಮಃ 

                  ಓಂ ಶ್ರೀ ಗುರುಭ್ಯೋ ನಮಃ 

     ಕ್ರೀಡೆ ಮತ್ತು ಜ್ಯೋತಿಷ್ಯ:---


     ಕಳೆದ ಲೇಖನದಲ್ಲಿ  ಕ್ರೀಡಾಪಟುವಾಗಲು ಹಾಗೂ ಕ್ರೀಡಾಕ್ಷೇತ್ರದಲ್ಲಿ ಯಶಸ್ವಿಯಾಗಲು  ಗ್ರಹಗಳ ಪಾತ್ರ, ಕ್ರೀಡಾಭಾವಗಳು, ರಾಶಿಗಳ ಪಾತ್ರ, ಯಾವ ಗ್ರಹಗಳು ಯಾವ ಕ್ರೀಡೆಯನ್ನು ಪ್ರಚೋದಿಸುತ್ತವೆ ಎಂಬುದನ್ನು ವಿವರವಾಗಿ ತಿಳಿದುಕೊಂಡೆವು. 

      ಈಗ ಇನ್ನೂ ಹೆಚ್ಚಿನ ವಿಷಯಗಳ ಬಗ್ಗೆ  ತಿಳಿದುಕೊಳ್ಳೋಣ.

        ಕ್ರೀಡೆಯಲ್ಲಿನ ಯಶಸ್ಸಿಗೆ  ನಕ್ಷತ್ರಗಳೂ ಸಹ ಕಾರಣವಾಗುತ್ತವೆ. ಗ್ರಹಗಳು ಎಲ್ಲಿವೆ ಅನ್ನುವುದಕ್ಕಿಂತ ಅವು ಯಾವ ನಕ್ಷತ್ರದಲ್ಲಿದೆ ಎಂಬುದು, ಕ್ರೀಡಾಪಟುವಿನ ಶೈಲಿಯನ್ನು  ನಿರ್ಧರಿಸುತ್ತವೆ.

ಕೇತುವಿನ ನಕ್ಷತ್ರಗಳಲ್ಲಿ( ಅಶ್ವಿನಿ, ಮಖ, ಮೂಲ)ಗ್ರಹಗಳಿದ್ದರೆ ಆಟಗಾರ ಅತೀ ವೇಗವಾಗಿರ್ತಾನೆ , ಉದಾಹರಣೆಗೆ fast ಬೋಲರ್ಸ್,  ರವಿಯ ನಕ್ಷತ್ರಗಳು  ಆಕ್ರಮಣಕಾರಿ ಸ್ವಭಾವವನ್ನು ಕೊಡುತ್ತದೆ.  ಸೋಲನ್ನು ಒಪ್ಪದ ಹಠ ಇವರಲ್ಲಿ ಹೆಚ್ಚಾಗಿರುತ್ತೆ. ಚಂದ್ರನ ನಕ್ಷತ್ರಗಳು,(ರೋಹಿಣಿ, ಹಸ್ತ, ಶ್ರವಣ) ಆಟಗಾರನಿಗೆ  ಉತ್ತಮವಾದ ಟೈಮಿಂಗ್ ಕೊಡುತ್ತವೆ. ಇದು ಬ್ಯಾಟ್ಸಮನ್ಗಳಿಗೆ ವರದಾನ. ಕುಜನ ನಕ್ಷತ್ರಗಳು (ಮೃಗಶಿರಾ, ಚಿತ್ತ, ಧನಿಷ್ಟ), ಇವು ಜಾತಕರಿಗೆ ಧೈರ್ಯ ಹಾಗೂ ಬಲವನ್ನು ತುಂಬುತ್ತವೆ. ಆರ್ದ್ರ ನಕ್ಷತ್ರ ತಂತ್ರಗಾರಿಕೆ ಕೊಟ್ಟರೆ,  ಪೂರ್ವ ಫಲ್ಗುಣಿ ಫಿಟ್ನೆಸ್ಗಾಗಿ  ಉತ್ತಮ ನಕ್ಷತ್ರ. ವಿಶಾಖ, ಜೇಷ್ಠ, ಪೂರ್ವಾಷಾಢ ವಿಶೇಷವಾಗಿ ಜಲಕ್ರೀಡೆಯನ್ನು ಪ್ರಚೋದಿಸುವ ನಕ್ಷತ್ರವಾಗಿದೆ. ಉತ್ತರಾಷಾಢ  ಕುದುರೆ ಸವಾರಿ ಆಟಕ್ಕೆ ಉತ್ತಮ ನಕ್ಷತ್ರವಾಗಿದೆ. ರೇವತಿ ನಕ್ಷತ್ರ ಕೂಡ ಕ್ರೀಡೆಯನ್ನು ಪ್ರಚೋದಿಸುವ ನಕ್ಷತ್ರವಾಗಿದೆ.

ಕ್ರೀಡಾ ಜ್ಯೋತಿಷ್ಯದ ಪ್ರಮುಖ ಅಂಶಗಳು:--

     ಕ್ರೀಡಾಪಟುತ್ವಕ್ಕೆ ಮುಖ್ಯವಾಗಿ ತನುಸ್ಥಾನ, ವಿಕ್ರಮಸ್ಥಾನ, 5,6,10,11 ರ  ಜೊತೆ ಜೊತೆಗೆ  ಸಪ್ತಮ ಸ್ಥಾನವನ್ನು ಪರಿಶೀಲಿಸಬೇಕಾಗುತ್ತದೆ .  7ನೆ ಭಾವವನ್ನೂ ಸಹ ಕ್ರೀಡಾ ಸ್ಥಾನವೆಂದೂ ಜ್ಯೋತಿಷ್ಯ ದಲ್ಲಿ ಹೇಳಿದೆ. ಜಾತಕ ಕಲಾನಿಧಿ   ಗ್ರಂಥದಲ್ಲಿ  "ಕಳತ್ರ ಕ್ರೀಡಾ ಭೋಗ ಕಾಮ - ಶೃಂಗಾರಕೇಳೀಭೋಜನ ವಿಹಾರ ಸಂಸಾರಕಾರಕಮ್ ಸಪ್ತಮಮ್ " ಎಂದು 7 ನೇ ಮನೆಯನ್ನು ವಿವರಿಸಿದ್ದಾರೆ.    ಹಾಗೆಯೇ ಕ್ರೀಡೆಗಳಿಂದ  ಸುಖ, ಅದೃಷ್ಟ, ಭಾಗ್ಯವಿದೆಯೇ ಎಂದು ತಿಳಿಯಲು ಪೋಷಕ ಭಾವಗಳಾದ  ಸುಖ ಸ್ಥಾನ, ಭಾಗ್ಯಸ್ಥಾನಗಳನ್ನೂ ಪರಿಶೀಲಿಸಬೇಕಾಗುತ್ತೆ,.

   ಅತ್ಯುತ್ತಮ  ಕ್ರಿಕೆಟ್ ಆಟಗಾರ (ಬ್ಯಾಟ್ಸ್‌ಮನ್) ಆಗಬೇಕಾದರೆ , 3 ನೇ ಮನೆ ಬಲಿಷ್ಠವಾಗಿರಬೇಕು  ಏಕೆಂದರೆ ಅದು ನಮ್ಮ ದೇಹದ ತೋಳುಗಳನ್ನು ಪ್ರತಿನಿಧಿಸುತ್ತದೆ. 

     ಫುಟ್ಬಾಲ್ ಆಟಗಾರನಿಗೆ 11 ನೇ ಮನೆ ಕಾಲುಗಳನ್ನು ಪ್ರತಿನಿಧಿಸುವುದರಿಂದ 11ನೇ ಮನೆ ಬಲವಾಗಿರಬೇಕು

   ಧನು ರಾಶಿಯು ಯೋಧನಂತಹ ಮನೋಭಾವವನ್ನು ಸೂಚಿಸುತ್ತದೆ ಮತ್ತು ಈ  ರಾಶಿಯಲ್ಲಿರುವ ಗ್ರಹಗಳು ಕ್ರಿಕೆಟಿ ಆಟಗಾರರಿಗೆ ಮುಖ್ಯವಾಗಿವೆ.  

   ಚದುರಂಗದ ಆಟಕ್ಕೆ ಬುಧ, ಶನಿ ಮತ್ತು ಚಂದ್ರನೊಂದಿಗೆ ಬುದ್ಧಿಮತ್ತೆಯನ್ನು ಪ್ರತಿನಿಧಿಸುವ 5 ನೇ ಮನೆ ಬಲವಾಗಿರಬೇಕು.

   ಗುರುವು ನಿಯಮಗಳನ್ನು ಪಾಲಿಸುವ ಮೂಲಕ ಆಡಲು ವ್ಯವಸ್ಥಿತ, ನಿಯಂತ್ರಿತ ಮನೋಭಾವವನ್ನು ನೀಡುತ್ತದೆ. ಕ್ರೀಡಾ ಮನೋಭಾವವೂ ಗುರುವಿನಿಂದ ಉಂಟಾಗುತ್ತದೆ.

   ಗುಂಪು ಚಟುವಟಿಕೆಗಳಿಗೆ ಶನಿ ಪ್ರಮುಖ ಪಾತ್ರ ವಹಿಸುತ್ತದೆ. ಇದು 'ತಂಡ ಮನೋಭಾವ'ವನ್ನು ನೀಡುತ್ತದೆ.

  6ನೇ ಮತ್ತು 10ನೇ ಭಾವಗಳು ವಿಶೇಷವಾಗಿ ಬಲಿಷ್ಠವಾಗಿದ್ರೆ ಜಾತಕರು ಆಟವನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿರ್ತಾರೆ.

  ಲಗ್ನದಲ್ಲಿ ಬಲವಾದ ತೃತೀಯಾಧಿಪತಿ ಇದ್ದರೆ, ಆ ವ್ಯಕ್ತಿ ಕ್ರೀಡಾ ಐಕಾನ್ ಆಗಬಹುದು.

   ಪಂಚಮಾಧಿಪತಿ ಬಲವಾಗಿದ್ರೆ ಆಟಗಾರನು ಸ್ಮಾರ್ಟ್ ಪ್ಲೇಯರ್ ಎನಿಸಿಕೊಳ್ಳುತ್ತಾನೆ.

   ಸೂರ್ಯನು ಕ್ರೀಡೆಯಲ್ಲಿ ಹೆಸರು ಮತ್ತು ಖ್ಯಾತಿಯನ್ನು ಗಳಿಸಲು ಸಹಾಯ ಮಾಡುತ್ತಾನೆ.

   ಬುಧ, ಶುಕ್ರ ಮತ್ತು ಕುಜ ಗ್ರಹಗಳು ಐದನೇ ಮನೆಯೊಂದಿಗೆ ಒಂದಲ್ಲ ಒಂದು ರೀತಿಯಲ್ಲಿ ಸಂಯೋಜನೆಗೊಂಡರೆ, ಕಲೆ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು ಆಸಕ್ತಿ ಮತ್ತು ಇಚ್ಛೆಯನ್ನು ಹುಟ್ಟುಹಾಕುತ್ತದೆ ಮತ್ತು ವಿಜೇತರಾಗಲು ಸಹಾಯ ಮಾಡುತ್ತದೆ. ಇಂತಹ ಸಂಯೋಜನೆ ಇರುವ ಜಾತಕರು ಕ್ರೀಡೆಯ ಜೊತೆ ಜೊತೆಗೆ ಮಾಡೆಲ್ ಆಗಿ  ಸಹ  ಮಿಂಚುತ್ತಾರೆ.

   ಬಲವಾದ ಮಂಗಳ ಜೊತೆಗೆ ಬೆಂಬಲಿತ ಸೂರ್ಯ/ಚಂದ್ರ/ಬುಧ ಮತ್ತು ಶಿಸ್ತಿನ ಶನಿ/ಗುರು ಹೊಂದಿರುವ ಚಾರ್ಟ್ ಉತ್ತಮ ಅಥ್ಲೆಟಿಕ್ ಆಗುವ ಯೋಗವನ್ನು ಹೊಂದಿದೆ..

   ಕ್ರೀಡೆಗೆ ಬೇಕಾದ ಎಲ್ಲ ರೀತಿಯ  ಸಂಯೋಜನೆಗಳು ಜಾತಕರಿಗೆ ಜನ್ಮದಿಂದಲೇ ಬಂದಿದ್ದರೂ ಸಹ ಕ್ರೀಡಾಕ್ಷೇತ್ರಕ್ಕೆ ಪದಾರ್ಪಣೆ ಮಾಡುವ ಹಾಗೂ ಯಶಸ್ಸನ್ನು ಪಡೆಯುವ ಸಮಯ ಯಾವುದು ಅಂತ ನೋಡೋದಾದ್ರೆ.....

     ಕ್ರೀಡಾಪಟುಗಳು  ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಲು ಹಾಗೂ ಯಶಸ್ಸು ಪಡೆಯಲು 1,3,5,6,10, ನೇ ಅಧಿಪತಿಗಳ ದಶಕಾಲಗಳು ಅಥವಾ  ಕುಜ, ಶನಿ, ರಾಹು, ಗುರು ರವಿಯ ದಶ ಕಾಲಗಳು ಉತ್ತಮವಾಗಿರುತ್ತೆ.
 
    ಕ್ರೀಡಾಪಟುವಿನ  ಯೌವನದಲ್ಲಿ ಕುಜ, ರಾಹು, ಶುಕ್ರನ ಮಹರ್ದೆಶೆಗಳು  ನಡೆದರೆ  ಅತೀ ವೇಗವಾಗಿ ಯಶಸ್ಸನ್ನು ಪಡೆಯುತ್ತಾರೆ.

    ವೇಗದ, ಆಕ್ರಮಣಕಾರಿ ಕ್ರೀಡಾಪಟುಗಳ ಲಗ್ನದಲ್ಲಿ ಅಥವಾ 10 ನೇ ಸ್ಥಾನದಲ್ಲಿ ಮೇಷ/ವೃಶ್ಚಿಕದಲ್ಲಿ ಬಲವಾದ ಮಂಗಳ ಸ್ಥಿತ  ಅಥವಾ ಸಂಚಾರ ಸಮಯದಲ್ಲಿ ಕ್ರೀಡೆಯಲ್ಲಿ ಉತ್ತಮ ಕಾರ್ಯಕ್ಷಮತೆ ಇರುತ್ತೆ.

  ಕ್ರೀಡಾ ಭಾವಗಳ  ಮೇಲೆ,ಮಂಗಳ/ಶನಿ/ಗುರು/ರಾಹುವಿನ ಸಂಚಾರ ಕಾಲದಲ್ಲಿ ಹೆಚ್ಚಾಗಿ ಕ್ರೀಡಾಪಟುಗಳು ಉತ್ತುಂಗಕ್ಕೇರುತ್ತಾರೆ., 

   ಬಲವಾದ ಸೂರ್ಯ ಮತ್ತು ಶನಿಯ ಸ್ಥಾನಗಳು ಸಹಿಷ್ಣುತೆ ಮತ್ತು ಶಿಸ್ತನ್ನು ಒದಗಿಸುತ್ತವೆ.

    ಮಂಗಳ ಮತ್ತು ಚಂದ್ರನನ್ನು ಬೆಂಬಲಿಸುವ ಬಲವಾದ ಬುಧನಿದ್ದಾಗ ಆಟಗಾರರು  ತಾಂತ್ರಿಕವಾಗಿ ಕೌಶಲ್ಯಪೂರ್ಣರಾಗಿರುತ್ತಾರೆ.   

   ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಲು ಹಾಗೂ ಯಶಸ್ವಿಯಾಗಲು ಯೋಗಗಳ ಪಾತ್ರವೂ ಸಹ ಇದೆ.
ಪಂಚ ಮಹಾಪುರುಷ ಯೋಗಗಳಲ್ಲಿ  ರುಚಕಯೋಗ, ಭದ್ರಯೋಗ, ಹಂಸ ಹಾಗೂ ಶಶಯೋಗಗಳು ಕ್ರೀಡೆಯಲ್ಲಿ ಆಸಕ್ತಿ ಹಾಗೂ ಯಶಸ್ಸನ್ನು ನೀಡುತ್ತವೆ.
 ಗಜಕೇಸರಿ ಯೋಗ, ನೀಚಭಂಗ ರಾಜಯೋಗ ಕೂಡಾ ಸಹಕಾರಿಯಾಗುತ್ತೆ. ಹಾಗೆಯೇ ವಿಪರೀತ ರಾಜಯೋಗ ಇದ್ದರೆ ಸೋಲುವ ಹಂತದಲ್ಲಿರುವ ಪಂದ್ಯವನ್ನೂ ಅನಿರೀಕ್ಷಿತವಾಗಿ ಗೆಲುವಿನತ್ತ ತಿರುಗಿಸುವ ಶಕ್ತಿ ಆಟಗಾರನಿಗೆ ಇರುತ್ತೆ.

      ಕ್ರೀಡಾ ವೃತ್ತಿಜೀವನದ ಅವಧಿ:--
    
      ಕೆಲವರು ಕ್ರೀಡೆಯಿಂದ ಬಹುಬೇಗ ನಿವೃತ್ತಿ ಹೊಂದುತ್ತಾರೆ. ಕೆಲವರು ಧೀರ್ಘವಾಗಿ  ಆಟ ಆಡ್ತಾ ಇರ್ತಾರೆ. ಇದಕ್ಕೆ ಕಾರಣ ಶನಿ ಗ್ರಹದ ಸ್ಥಿತಿ..! ಶನಿ ಅಂದ್ರೇನೇ ಸ್ಥಿರತೆ...ಶುಭನಾದ ಶನಿಗ್ರಹ ಜಾತಕದಲ್ಲಿ ಕೇಂದ್ರ ತ್ರಿಕೋಣದಲ್ಲಿದ್ಸರೆ  ಆಟಗಾರನಿಗೆ ಸುಧೀರ್ಘ ವೃತ್ತಿಜೀವನ ಇರುತ್ತೆ.
     ಮಾರಕ ದಶಗಳು,  ಹಾಗೂ ದಶ ಸಂಧಿ ಕಾಲ  ಆಟಗಾರನನ್ನು ಬೇಗ ನಿವೃತ್ತಿ ಮಾಡಿಸಿಬಿಡುತ್ತೆ.

     ಕ್ರೀಡಾಪಟುಗಳು ಯಶಸ್ಸಿನ ಉತ್ತುಂಗದಲ್ಲಿದ್ದಾಗ  ಹಠಾತ್ತಾಗಿ ಫಾರ್ಮ್ ಕಳೆದುಕೊಂಡುಬಿಡ್ತಾರೆ. ಇದಕ್ಕೆ ಜ್ಯೋತಿಷ್ಯ ಕಾರಣ, ಸಾಡೆಸಾತಿ, ಶನಿಯ ಅಶುಭ ಪ್ರಭಾವ ಹೆಚ್ಚಾದಾಗ ಆಟಗಾರ ಎಷ್ಟೇ ಪ್ರಯತ್ನಿಸಿದರೂ  ಫಲ ಸಿಗುವುದಿಲ್ಲ, ಅವರ ಶಿಸ್ತನ್ನು ಪರೀಕ್ಷಿಸುವ ಸಮಯ ಆಗಿರುತ್ತೆ. ಅಷ್ಟಮ ಶನಿಯ ಕಾಲದಲ್ಲಿ injuries ಮತ್ತು ಕಾಂಟ್ರಾವರ್ಸಿ  ಆಗುವ ಸಂಭವವೇ ಹೆಚ್ಚು. ಅಶುಭ ರಾಹು /ಕೇತುಗಳ  ಸಂಚಾರ ಕಾಲದಲ್ಲಿ ಕೂಡ  ಆಟಗಾರರು ಮಾನಸಿಕ ಒತ್ತಡಕ್ಕೆ ಒಳಗಾಗಿ  ತಪ್ಪು ನಿರ್ಧಾರ ತೊಗೋತಾರೆ.

   6ನೇ ಮನೆ ಅಪಘಾತಗಳನ್ನು ಸೂಚಿಸುತ್ತೆ, 6th lord ಕುಜನ ಜೊತೆಗೆ ಅಶುಭ ಸಂಪರ್ಕದಲ್ಲಿದ್ದಾಗ  ಆಟಗಾರ ಪದೇ ಪದೇ  ಗಾಯಕ್ಕೆ ಒಳಗಾಗುತ್ತಾನೆ.

    8ನೇ ಮನೆ ಧೀರ್ಘಕಾಲದ ನೋವು ಮತ್ತು ಸರ್ಜರಿಯನ್ನು ಸೂಚಿಸುತ್ತೆ. ಶನಿ ಮತ್ತು ರಾಹುವಿನ ಅಶುಭ ಪ್ರಭಾವ  8 ನೇ ಮನೆಯ ಮೇಲಿದ್ದರೆ.. ನೋವು ಮತ್ತು ಶಸ್ತ್ರಚಿಕಿತ್ಸೆಯ ಕಾರಣದಿಂದ ವೃತ್ತಿ ಜೀವನಕ್ಕೆ ಪೆಟ್ಟು ಬೀಳುವ ಸಾಧ್ಯತೆ ಇರುತ್ತೆ.

ಗೆಲುವಿನ ಕ್ಷಣ :--

       ಕ್ರೀಡಾoಗಣದಲ್ಲಿ ಒಬ್ಬ ಆಟಗಾರನ ಪ್ರದರ್ಶನವು ಆತನ ಕಠಿಣ ಪರಿಶ್ರಮದ ಮೇಲೆ ನಿರ್ಧಾರಿತವಾಗಿರುತ್ತವೆ ಎನ್ನುವುದು ಸತ್ಯವಾದರೂ... ಅದೇ ಆಟಗಾರ ಅನಿರೀಕ್ಷಿತವಾಗಿ ಜಯಗಳಿಸುವುದು ಹಾಗೂ ಅಂತಿಮ ಕ್ಷಣದಲ್ಲಿ ಸೋಲಾಗುವುದರ ಹಿನ್ನೆಲೆಯಲ್ಲಿ ಗ್ರಹಗಳ ಪಾತ್ರವೂ ಇದೆ..!

       ಆಟಗಾರ ಎಷ್ಟೇ ಶ್ರೇಷ್ಠನಾಗಿದ್ದರೂ ಪಂದ್ಯ ನಡೆಯುವ ದಿನದ ಚಂದ್ರನ ಸ್ಥಿತಿ ಆತನ ಪ್ರದರ್ಶನವನ್ನು ನಿರ್ಧರಿಸುತ್ತದೆ. ಪಂದ್ಯದ ದಿನ ಆಟಗಾರನ ಜನ್ಮರಾಶಿಯಿಂದ ಉಪಚಯ 
ಸ್ಥಾನಗಳಾದ... 3,  6,  10, 11ನೇ ಭಾವಗಳಲ್ಲಿದ್ದರೆ  ಆ ದಿನ ಆ ಆಟಗಾರನಿಗೆ ಅದೃಷ್ಟದ ದಿನವಾಗಿರುತ್ತೆ.

    ಒಂದುವೇಳೆ  ಚಂದ್ರ 8,12ನೇ ಮನೆಯಲ್ಲಿದ್ದರೆ ಎಷ್ಟೇ ಪ್ರಯತ್ನ ಪಟ್ಟರೂ ಅಂತಿಮ ಕ್ಷಣದಲ್ಲಿ ತಪ್ಪು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇರುತ್ತೆ..

ಸಂಖ್ಯಾ ಶಾಸ್ತ್ರ ಮತ್ತು ಕ್ರೀಡೆ :--

      ಪ್ರತಿಯೊಂದು ಸಂಖ್ಯೆಯೂ ಒಂದೊಂದು ಗ್ರಹವನ್ನು ಪ್ರತಿನಿಧಿಸುತ್ತೆ, ಯಾವ ಗ್ರಹದ ಸಂಖ್ಯೆ ಯಾವ ಕ್ರೀಡಾಪಟುವಿನ ಮೇಲೆ ಪ್ರಭಾವ ಬೀರುತ್ತದೆ ಎಂದು ಅವರು ಹುಟ್ಟಿದ ದಿನಾಂಕದ ಆಧಾರದ ಮೇಲೆ ತಿಳಿಯಬಹುದು. ಯಾವ ಸಂಖ್ಯೆ ಅನುಕೂಲಕರವೋ ಆ ಸಂಖ್ಯೆಯ ಜೆರ್ಸಿಯನ್ನು ಕ್ರೀಡಾಪಟುಗಳು ಆಯ್ಕೆ ಮಾಡಿಕೊಳ್ಳುತ್ತಾರೆ.

      ಸಂಖ್ಯೆ 7 :-- ಭಾರತದ  ಕ್ರಿಕೆಟ್ ತಂಡದ ಶ್ರೇಷ್ಠ ಆಟಗಾರ ಹಾಗೂ ವಿಕೆಟ್ ಕೀಪರ್ ಆಗಿದ್ದ ಧೋನಿ ಯವರ ಜೆರ್ಸಿ ಸಂಖ್ಯೆ 7. ಇದು ಕೇತುವಿನ ಸಂಖ್ಯೆ, ಇದು ಅಧ್ಯತ್ಮಿಕತೆ  ಮತ್ತು ಅಂತಃಪ್ರಜ್ಞೆಯನ್ನು ಸೂಚಿಸುತ್ತದೆ,  ಧೋನಿಯವರ ಕ್ಯಾಪ್ಟನ್ ಕೂಲ್  ಸ್ವಭಾವ ಮತ್ತು ಕೊನೆಯ  ಕ್ಷಣದ ನಿರ್ಧಾರಗಳಿಗೆ  ಈ ಸಂಖ್ಯೆಯ ಬಲವೂ ಕಾರಣ.

ಸಂಖ್ಯೆ 10 :---10 ಎನ್ನುವುದು ಸೂರ್ಯನ ಸಂಖ್ಯೆ, ಸೂರ್ಯನು  ಪ್ರಭುತ್ವ ಮತ್ತು ರಾಜತ್ವವನ್ನು ಪ್ರತಿನಿಧಿಸುತ್ತಾನೆ.  ಕ್ರಿಕೆಟ್ ದೇವರೆಂದೇ ಹೆಸರಾದ ಸಚಿನ್ ಟೆಂಡೂಲ್ಕರ್ ಅವರ ಜೆರ್ಸಿ ಸಂಖ್ಯೆ 10, ಸಚಿನ್ ರವರು ಕ್ರೀಡಾಕ್ಷೇತ್ರದಲ್ಲಿ ರಾಜನಂತೆ ಮಿಂಚಲು ಈ ಸಂಖ್ಯೆಯೂ ಒಂದು ಕಾರಣವಿರಬಹುದು..

ತಂಡದ ನಾಯಕತ್ವ :--

      ಒಳ್ಳೆಯ ಆಟಗಾರರೆಲ್ಲರೂ ಒಳ್ಳೆಯ ನಾಯಕರಾಗಲು ಸಾಧ್ಯವಿಲ್ಲ. ನಾಯಕತ್ವಕ್ಕೆ ಕೆಲವು ವಿಶೇಷ ಶಕ್ತಿಗಳಿರಬೇಕು.
     ಕ್ರೀಡಾಪಟುವಿನ ಜಾತಕದಲ್ಲಿ  ಸಿಂಹರಾಶಿಯ ಪ್ರಭಾವವಿರಬೇಕು. ಸೂರ್ಯ ಮತ್ತು  ಸಿಂಹರಾಶಿ ಪ್ರಭಲವಾಗಿದ್ದರೆ  ಅಂತಹವರು ನೂರಾರು ಜನರನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿರುತ್ತಾರೆ.
    ವಿವೇಕವನ್ನು ನೀಡುವ ಗುರುಗ್ರಹದ ದೃಷ್ಟಿಯು ಸೋಲಿನ ಸಮಯದಲ್ಲಿರುವ  ತಂಡವನ್ನು ಕುಗ್ಗದಂತೆ ಸರಿಯಾದ ತಂತ್ರ ರೂಪಿಸಲು ಸಹಾಯಮಾಡುತ್ತದೆ.

ವಿಶ್ವ ಚಾoಪಿಯನ್ ಆಗಲು ವಿಷೇಶ ಅಂಶಗಳು :--
 
    ಆಟಗಾರರು ಸ್ಥಳೀಯವಾಗಿ ಆಟವಾಡುವುದಕ್ಕೂ.. ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳುವುದಕ್ಕೂ  ವ್ಯತ್ಯಾಸವಿದೆ.   
    ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಹ  ಕೌಶಲ್ಯವನ್ನು ಆಟಗಾರನಿಗೆ ಕೊಡುವುದು ರಾಹು, ರವಿ ಹಾಗೂ ಗುರು ಗ್ರಹಗಳು.
    ಆಟಗಾರನಿಗೆ ರಾಹುವಿನ ಶುಭಪ್ರಭಾವ  ಅತೀ ಮುಖ್ಯ, ರಾಹುವು 3 ಅಥವಾ 11ನೇ ಮನೆಯಲ್ಲಿದ್ದರೆ ಜಾತಕರು ಯಾರೂ ಊಹಿಸಲಾಗದ ತಂತ್ರಗಳನ್ನು ಬಳಸಿ ಗೆಲ್ಲುತ್ತಾರೆ. 
   ಸೂರ್ಯನು ಪ್ರಭಲವಾಗಿದ್ದರೆ ಮಾತ್ರ ಒಬ್ಬ ಆಟಗಾರ ಸಾವಿರಾರು ಜನಗಳ ಮುಂದೆ ಒತ್ತಡಕ್ಕೆ ಒಳಗಾಗದೆ ಆತ್ಮವಿಶ್ವಾಸದಿಂದ ಆಡಬಲ್ಲ.
   ಗುರುವಿನ ಅನುಗ್ರಹವು ಭಾಗ್ಯದ ಸಂಕೇತ, ಎಷ್ಟೇ ಕಷ್ಟಪಟ್ಟರೂ ಅಂತಿಮ ಕ್ಷಣದಲ್ಲಿ ಅದೃಷ್ಟ ಕೈಹಿಡಿಯಬೇಕಾದರೆ  ಗುರುವಿನ ದೃಷ್ಟಿ ಇರಲೇಬೇಕು.

ಬಣ್ಣಗಳು ಹಾಗೂ ತಂಡದ ಯಶಸ್ಸು:--

   ಕ್ರೀಡಾ ತಂಡಗಳ ಜೆರ್ಸಿ ಬಣ್ಣದ ಹಿಂದೆ ಕೂಡ ಬಲವಾದ ಜ್ಯೋತಿಷ್ಯ ಅಂಶವಿದೆ.
   ನೀಲಿ ಬಣ್ಣ :--  ಈ ಬಣ್ಣ  ಶನಿಗ್ರಹದ್ದು,  ಇದು ಸ್ಥಿರತೆ ಮತ್ತು ಗಾಂಭೀರ್ಯದ ಸಂಕೇತ.  ಭಾರತದ ಕ್ರಿಕೆಟ್ ತಂಡದ ಈ ಬಣ್ಣವು  ತಂಡಕ್ಕೆ ಒಂದು ರೀತಿಯ ಕೂಲ್ ಮತ್ತು ಸ್ಟೇಬಲ್  ಶಕ್ತಿಯನ್ನು ನೀಡುತ್ತದೆ.
   ಹಳದಿ ಬಣ್ಣ :--  ಇದು ಗುರುಗ್ರಹದ ಬಣ್ಣ, ಈ ಬಣ್ಣವು  ಜ್ಞಾನ, ತಂತ್ರ, ಮತ್ತು ಅದೃಷ್ಟವವನ್ನು ಪ್ರತಿನಿಧಿಸುತ್ತದೆ. (CSK ತಂಡದ ಬಣ್ಣ ಹಳದಿ)
   ಕೆಂಪು ಬಣ್ಣ :-- ಕುಜನ ಈ ಬಣ್ಣ  ಆಕ್ರಮಣ ಕಾರಿ ಆಟಕ್ಕೆ ಪ್ರಚೋದಿಸುತ್ತದೆ

ಕ್ರೀಡಾ ಫಲಿತಾಂಶ ಹಾಗೂ ಗ್ರಹಣ :--

       ವಿಶ್ವ ಕಪ್ ನಂತಹ ದೊಡ್ಡ ಮಟ್ಟದ ಪಂದ್ಯಾವಳಿಗಳು ನಡೆಯುವಾಗ, ಸೂರ್ಯ ಅಥವಾ ಚಂದ್ರ ಗ್ರಹಣಗಳು ಸಂಭವಿಸಿದರೆ, ಅದು ಕ್ರೀಡಾ ಲೋಕದಲ್ಲಿ ದೊಡ್ಡ ಮಟ್ಟದ ಬೇಸರ, ಅಸಮಾಧಾನಕ್ಕೆ  ಕಾರಣವಾಗುತ್ತದೆ.  ಬಲಿಷ್ಠವಾದ ತಂಡಗಳು ಅನಿರೀಕ್ಷಿತವಾಗಿ ಸೋಲುವುದು,  ಹೆಸರೇ ಇಲ್ಲದ ತಂಡಗಳು  ಇದ್ದಕ್ಕಿದ್ದಂತೆ ಗೆದ್ದು ಚಾoಪಿಯನ್ ಆಗುವುದು.. ಇದೆಲ್ಲ ಗ್ರಹಣದ ಪ್ರಭಾವವೇ ಎಂದು ಊಹಿಸಬಹುದು, ಗ್ರಹಣವು ನಾಯಕರ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದ ಮೇಲೆ ತಾತ್ಕಾಲಿಕ ಪರಿಣಾಮ ಬೀರಬಲ್ಲದು.

 ಹಸ್ತಾಕ್ಷರ ಮತ್ತು ಜ್ಯೋತಿಷ್ಯ:--

    ಆಟಗಾರರ ಸಹಿ ಕೂಡ ಅವರ ಗ್ರಹಗತಿಗಳನ್ನು ಪ್ರತಿಬಿಂಬಿಸುತ್ತವೆ,  ಯಾರು ತಮ್ಮ ಹೆಸರಿನ ಕೆಳಗೆ  ಮೇಲ್ಮುಖ ವಾಗಿ ಗೆರೆ ಎಳೆಯುತ್ತಾರೋ ಅವರು ಅತೀವ ಆತ್ಮವಿಶ್ವಾಸ ಮತ್ತು ಹೋರಾಟದ ಗುಣವನ್ನು ಹೊಂದಿರುತ್ತಾರೆ ಎಂದು ಹೇಳಬಹುದು.
    ಸಹಿ ಮಾಡುವಾಗ ಅಕ್ಷರಗಳು ದೊಡ್ಡದಾಗಿದ್ದರೆ, ಅವರು ಮೈದಾನದಲ್ಲಿ ಡಾಮಿನೇಟ್ ಮಾಡಲು ಇಷ್ಟಪಡುತ್ತಾರೆ, ಅದು ಅವರ ಜಾತಕದ  ಸೂರ್ಯನ ಪ್ರಭಾವವನ್ನು ತೋರಿಸುತ್ತದೆ.

    ಅದೃಷ್ಟ ಮಹೂರ್ತ :--

    ಟಾಸ್ ಗೆಲ್ಲುವುದೂ ಕೂಡ ಒಂದು ಅದೃಷ್ಟವೇ..!! ಪಂದ್ಯರಂಭ ಸಮಯದಲ್ಲಿ ತಂಡದ ನಾಯಕನಿಗೆ  ಶುಭಹೋರೆ ಅಥವಾ ಅಮೃತ ಘಳಿಗೆ  ನಡೆಯುತ್ತಿದ್ದರೆ ಟಾಸ್ ಗೆಲ್ಲುವ ಮತ್ತು ಪಂದ್ಯದ ಮೇಲೆ ನಿಯಂತ್ರಣ ಸಾಧಿಸುವ ಸಾಧ್ಯತೆ ಹೆಚ್ಚಿರುತ್ತದೆ. ಪಂದ್ಯ  ನಡೆಯುವ ಸಮಯದ ಗೋಚಾರ ಮತ್ತು ಕ್ರೀಡಾoಗಣ ಇರುವ ದಿಕ್ಕು ಕೂಡ ಪ್ರಭಾವ ಬೀರುತ್ತೆ.

ಕ್ರೀಡಾಪಟುಗಳಿಗೆ ಜ್ಯೋತಿಷ್ಯ ಸಲಹೆ:--

   ಕ್ರೀಡೆಯಲ್ಲಿ ಏಕಾಗ್ರತೆ ಹೆಚ್ಚಿಸಲು ಮತ್ತು ದೈಹಿಕ ಪೆಟ್ಟುಗಳಿಂದ ಪಾರಾಗಲು ಕೆಲವು ಸಲಹೆಗಳು ಹೀಗಿವೆ.
   ಧ್ಯಾನ ಮತ್ತು ಪ್ರಾಣಾಯಾಮ, ಇದು ಬುಧ ಮತ್ತು ಚಂದ್ರನನ್ನು  ಬಲಪಡಿಸಿ ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ.
   ಮಾನಸಿಕ ಶಾಂತಿಗಾಗಿ ಬೆಳ್ಳಿ ಆಭರಣವನ್ನು ಧರಿಸುವುದು ಕೂಡ ಕೆಲವರಿಗೆ ಸಹಕಾರಿ.
   ಕುಜನ ಅನುಗ್ರಹಕ್ಕಾಗಿ ಅಭ್ಯಾಸದ ಸಮಯದಲ್ಲಿ  ಕೆಂಪು ಬಣ್ಣದ ವಸ್ತ್ರ ಅಥವಾ ಕರವಸ್ತ್ರ ಬಳಸುವುದ್ರಿಂದ ಆತ್ಮವಿಶ್ವಾಸ ಹೆಚ್ಚುತ್ತೆ.
         
      ಜಾತಕದಲ್ಲಿ ಅಡೆತಡೆಗಳಿದ್ದರೆ ಜ್ಯೋತಿಷ್ಯದ ಪರಿಹಾರಗಳೆಂದರೆ.....
      ಕುಜನ ದೋಷವಿದ್ದರೆ, ಅಥವಾ ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಹನುಮಂತನ ಆರಾಧನೆ, ಹನುಮಾನ್ ಚಾಲೀಸ ಪಠನೆ  ಶ್ರೇಷ್ಠ.
      ಆತ್ಮವಿಶ್ವಾಸ ಮತ್ತು ನಾಯಕತ್ವದ ಗುಣ ಕುಗ್ಗಿದಾಗ ಸೂರ್ಯ ನಮಸ್ಕಾರ ಮತ್ತು ಸೂರ್ಯನ ಆರಾಧನೆ ಉತ್ತಮ.
      ಜಾತಕ ವಿಶ್ಲೇಷಣೆಯ  ನಂತರ  ಹವಳ  ಅಥವಾ ಪಚ್ಚೆ ರತ್ನಧಾರಣೆ ಮಾಡುವುದು ಸಹ ಕ್ರೀಡೆಯಲ್ಲಿ ಸಹಕಾರಿಯಾಗಬಲ್ಲದು.
      ಶನಿ ಮತ್ತು ರಾಹುವಿನ ಅಶುಭ ಪ್ರಭಾವದಿಂದ ವೃತ್ತಿಜೀವನಕ್ಕೆ ಸಮಸ್ಯೆಯಾದರೆ, ಹನುಮಂತ ದೇವರಿಗೆ ಸಾಸಿವೆ ಎಣ್ಣೆಯ ದೀಪ ಹಚ್ಚುವುದು ಮತ್ತು ಶನಿ ಶಾಂತಿ ಮಾಡಿಸುವುದು ಉತ್ತಮ.
       
       ಒಟ್ಟಿನಲ್ಲಿ  ಕ್ರೀಡೆಯಲ್ಲಿ ಯಶಸ್ವೀಯಾಗಬೇಕೆಂದರೆ,  ಜಾತಕದ  1,3,5,6,10,11,ನೇ ಸ್ಥಾನಗಳ ಜೊತೆಗೆ ಚತುರ್ಥ, ಸಪ್ತಮ, ಭಾಗ್ಯ ಸ್ಥಾನಗಳು, ರವಿ, ಕುಜ, ಬುಧ, ಗುರು, ಶುಕ್ರ, ಚಂದ್ರ, ಶನಿಗ್ರಹಗಳ ಜೊತೆ ಜೊತೆಗೆ ರಾಹು ಕೇತುಗಳೂ ಬಲಾಢ್ಯವಾಗಿರಬೇಕಾಗುತ್ತದೆ.
-------------
ಈಗ ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಿದ  ಮಹಿಳಾ ಕ್ರೀಡಾಪಟುಗಳ ಜಾತಕವನ್ನು ನೋಡೋಣ :--

ಭಾರತದ ಪ್ರಮುಖ ಮಹಿಳಾ ಕ್ರೀಡಾಪಟುಗಳು 

ಹರ್ಮನ್‌ಪ್ರೀತ್ ಕೌರ್ :-- ಭಾರತ ಮಹಿಳಾ ರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕಿ:--
 ಆಕ್ರಮಣಕಾರಿ ಬ್ಯಾಟರ್.
ಹರ್ಮನ್ಪ್ರೀತ್ ಕೌರ್ ಭುಲ್ಲರ್ (ಜನನ 8 ಮಾರ್ಚ್ 1989) ಒಬ್ಬ ಭಾರತೀಯ ಕ್ರಿಕೆಟ್ ಆಟಗಾರ್ತಿ , ಅವರು ಆಲ್-ರೌಂಡರ್ ಆಗಿ ಆಡುತ್ತಾರೆ ಮತ್ತು ಭಾರತ ಮಹಿಳಾ ರಾಷ್ಟ್ರೀಯ ತಂಡದ ನಾಯಕಿಯಾಗಿದ್ದಾರೆ . ಅವರು ಟಾಪ್ ಆರ್ಡರ್ ಬ್ಯಾಟ್ಸ್‌ಮನ್ ಮತ್ತು ಬಲಗೈ ಆಫ್-ಸ್ಪಿನ್ ಬೌಲರ್. ಅವರು 2025 ರ ಮಹಿಳಾ ಕ್ರಿಕೆಟ್ ವಿಶ್ವಕಪ್ , 2012 ರಲ್ಲಿ ಮಹಿಳಾ ಏಷ್ಯಾ ಕಪ್ ,  2016 ಮತ್ತು 2022 ರಲ್ಲಿ ಮತ್ತು 2022 ರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಗೆದ್ದ ಭಾರತೀಯ ತಂಡವನ್ನು ಮುನ್ನಡೆಸಿದರು . ಅವರ ನಾಯಕತ್ವದಲ್ಲಿ, ಭಾರತೀಯ ಮಹಿಳಾ ತಂಡವು 1999 ರಿಂದ 2022 ರಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ದ್ವಿಪಕ್ಷೀಯ ಮಹಿಳಾ ಏಕದಿನ ಅಂತರರಾಷ್ಟ್ರೀಯ (WODI) ವಿದೇಶ ಸರಣಿ ಗೆಲುವು , 2023 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಗೆಲುವು ಮತ್ತು 2025 ರಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಮಹಿಳಾ ಟ್ವೆಂಟಿ20 ಅಂತರರಾಷ್ಟ್ರೀಯ (WT20I) ಸರಣಿ ಗೆಲುವು ಸಾಧಿಸಿತು . ಅವರು 2022 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಭಾರತೀಯ ತಂಡದ ಸದಸ್ಯರಾಗಿದ್ದರು . 2017 ರಲ್ಲಿ ಅರ್ಜುನ ಪ್ರಶಸ್ತಿಯನ್ನು ಪಡೆದಿದ್ದಾರೆ.
ಇದುವರೆಗೂ 131 ಪಂದ್ಯಗಳನ್ನು ಮುನ್ನಡೆಸಿದ್ದು 77 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಅದ್ಭುತ ನಾಯಕಿ ಅಂತಲೇ ಹೇಳಬಹುದು.

ಗೂಗಲ್ ನಲ್ಲಿ ಸಿಕ್ಕ ಜನ್ಮವಿವರಗಳ ಆದಾರದ ಮೇರೆಗೆ
ಹರ್ಮಂಪ್ರೀತ್ ಕೌರ್ ರವರ 
* ಲಗ್ನ  -ವೃಶ್ಚಿಕ
* ಪೂರ್ವಬಾದ್ರ 2 ನೇ ಪಾದ ಕುಂಭರಾಶಿ
* ಲಗ್ನಾಧಿಪತಿ ಕುಜ 6 ನೇ ಅಧಿಪತಿಯೂ ಆಗಿ ಕೃತಿಕಾ 3 ನೆ ಪಾದ ವೃಶಭ ರಾಶಿಯಲ್ಲಿ ಪಂಚಮಾಧಿಪತಿ ಗುರುವಿನೊಂದಿಗೆ ಸ್ಥಿತನಾಗಿದ್ದು ಲಗ್ನವನ್ನು ದೃಷ್ಟಿಸುತ್ತಿರುವುದು... ಲಗ್ನ ಬಲಯುತವಾಗಿದೆ ಎಂದು ತಿಳಿಸುತ್ತೆ. 
* ಕುಜ ಕೂಡ ಗುರುವಿನೊಂದಿಗಿದ್ದು ಮಿತ್ರ ರವಿಯ ನಕ್ಷತ್ರ ದಲ್ಲಿರುವುದರಿಂದ, ಸಪ್ತಮ ಕೇಂದ್ರದಲ್ಲಿರುವುದರಿಂದ ಕುಜ ಸಹ ಸ್ಟ್ರಾಂಗ್ ಅಂತ ಹೇಳಬಹುದು. 
* ವಿಕ್ರಮ ಸ್ಥಾನಾಧಿಪತಿ ಶನಿಗ್ರಹ  ಧನಸ್ಸಿನಲ್ಲಿ ಸ್ಥಿತನಿದ್ದು ಜಾತಕರಿಗೆ ಮತ್ತಷ್ಟು ಧೈರ್ಯವನ್ನು ತುಂಬಿ ನ್ಯಾಯಯುತವಾದ ಆಕ್ರಮಣಕಾರಿ ಆಟಗಾರಳನ್ನಾಗಿ ಮಾಡಿದೆ, ಜೊತೆಗೆ ಗುರುವಿನ ದೃಷ್ಟಿಯೂ ವಿಕ್ರಮಸ್ಥಾನಕ್ಕಿದೆ.
* ಪ್ರತಿಭೆಯನ್ನು ಸೂಚಿಸುವ ಪಂಚಮಧಿಪತಿಯು, ಲಗ್ನ - 6ನೇ ಅಧಿಪತಿಯಾದ ಕುಜನೊಟ್ಟಿಗೆ  ಸಪ್ತಮ ಕೇಂದ್ರದಲ್ಲಿದ್ದು,  ಇವರಿಗೆ ಕ್ರಿಕೆಟ್ನಲ್ಲಿ ಆಸಕ್ತಿ ಹಾಗೂ ಯಶಸ್ಸನ್ನು ಕೊಟ್ಟಿದೆ.
* 10th ಅಧಿಪತಿಯಾದ ರವಿಗೆ 7th, 9th, 11th  ಅಧಿಪತಿಗಳ ಸಂಯೋಜನೆ ಚತುರ್ಥ ಕೇಂದ್ರವಾದ ಕುಂಭದಲ್ಲಿ ಇದ್ದು ತನ್ನ ಸ್ವಕ್ಷೇತ್ರ 10 ನೇ ಸ್ಥಾನವನ್ನು ವೀಕ್ಷಿಸುತ್ತಿರುವುದರಿಂದ, ಲಗ್ನಾಧಿಪತಿ ಕುಜನ ದೃಷ್ಟಿ ಕೂಡ 10 ರ ಮೇಲಿರುವುದರಿಂದ 10ನೆ ಭಾವ ಕೂಡ ಬಲವಾಯ್ತು. ಇದರಿಂದ ಇವರು  ತಂಡದ ನಾಯಕಿ ಆಗುವ ಯೋಗ ಉಂಟಾಯ್ತು. ಜೊತೆಗೆ ರಾಹುವಿನ ಬಾಹುಬಲವೂ ಸೇರಿ ಪ್ರಚಂಡ ವಿಜಯವನ್ನು ಸಾಧಿಸುವ ಯೋಗ  ಉಂಟಾಯ್ತು.
* ದಶಮಾಧಿಪತಿಗೆ  11 ನೇ ಅಧಿಪತಿಯ ಸಂಬಂಧ ಅನೇಕ ಪ್ರಶಸ್ತಿಗಳು, ಧನಲಾಭ ಎಲ್ಲವೂ ಸಿಕ್ಕಿದೆ.
ದಶಮ ಸ್ಥಾನದಲ್ಲಿರುವ ಕೇತು ಇವರಿಗೆ ಕೀರ್ತಿಯನ್ನು ತಂದುಕೊಟ್ಟಿದೆ.
 * 3rd ಅಧಿಪತಿ  ಶನಿದಶೆ ಶುಕ್ರಭುಕ್ತಿಯಲ್ಲಿ, ಇವರು ತಮ್ಮ 20 ನೆ ವರ್ಷದಲ್ಲಿ, 2009 ನೆ ಇಸವಿಯಲ್ಲಿ ಕ್ರಿಕೆಟ್ ಆಟಕ್ಕೆ ಪಾದಾರ್ಪಣೆ ಮಾಡಿದರು.
* ಪ್ರಸ್ತುತ 11th ಅಧಿಪತಿ ಬುಧನ ದೆಶೆ ನಡೆಯುತ್ತಿದ್ದು, ಈ ದಶ ಕೂಡ ಅವರನ್ನು ಕ್ರೀಡೆಯಲ್ಲಿ ಉನ್ನತಿ  ತಂದುಕೊಡಲಿದೆ.
ಇವರ ಕುಂಡಲಿಯಲ್ಲಿ ಕ್ರೀಡೆಗೆ ಪ್ರಮುಖವಾದ ಗ್ರಹಗಳೆಲ್ಲರೂ ಕೇಂದ್ರಸ್ಥಾನದಲ್ಲಿ ಸ್ಥಿತರಾಗಿ ಇವರನ್ನು ಅಪ್ರತಿಮ ಕ್ರಿಕೆಟ್ ಕ್ರೀಡಾಪಟುವನ್ನಾಗಿ ಮಾಡಿದೆ.


ಸ್ಮೃತಿ ಮಂಧಾನ:---
ತಂಡದ ಸ್ಟಾರ್ ಆರಂಭಿಕ ಬ್ಯಾಟರ್.

ಸ್ಮೃತಿ ಮಂಧಾನ (ಜನನ 18 ಜುಲೈ 1996) ಒಬ್ಬ ಭಾರತೀಯ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ್ತಿ ಮತ್ತು ಭಾರತೀಯ ಮಹಿಳಾ ರಾಷ್ಟ್ರೀಯ ತಂಡದ ಉಪನಾಯಕಿ . ಅವರು 2025 ರ ಮಹಿಳಾ ಕ್ರಿಕೆಟ್ ವಿಶ್ವಕಪ್ , 2016 ಮತ್ತು 2022 ರಲ್ಲಿ ಮಹಿಳಾ ಏಷ್ಯಾ ಕಪ್ ಗೆದ್ದ ಭಾರತೀಯ ತಂಡದ ಭಾಗವಾಗಿದ್ದರು . ಅವರು 2022 ರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಮತ್ತು 2022 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿ ಬೆಳ್ಳಿ ಪದಕವನ್ನು ಗೆದ್ದರು.

ಮಂಧಾನಾ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10,000 ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ್ದಾರೆ. ಅವರು ಅಂತರರಾಷ್ಟ್ರೀಯ ಶತಕಗಳ
 ದಾಖಲೆ ( ಮೆಗ್ ಲ್ಯಾನಿಂಗ್ ಅವರೊಂದಿಗೆ ಹಂಚಿಕೊಂಡಿದ್ದಾರೆ) ಮತ್ತು ಮಹಿಳಾ ಏಕದಿನ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ( WODI) ಎರಡನೇ ಅತಿ ಹೆಚ್ಚು ಶತಕಗಳನ್ನು ಗಳಿಸಿದ್ದಾರೆ. ಅವರು ಮಹಿಳಾ ಟ್ವೆಂಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ( WT20I) ಎರಡನೇ ಅತಿ ಹೆಚ್ಚು ರನ್ ಮತ್ತು ಅರ್ಧಶತಕಗಳನ್ನು ಗಳಿಸಿದ್ದಾರೆ . ಮಹಿಳಾ ಅಂತರರಾಷ್ಟ್ರೀಯ ಕ್ರಿಕೆಟ್‌ನ ಮೂರು ಸ್ವರೂಪಗಳಲ್ಲಿ - WTests , WODIs ಮತ್ತು WT20Is ನಲ್ಲಿ ಶತಕ ಗಳಿಸಿದ ಮೊದಲ ಭಾರತೀಯ ಆಟಗಾರ್ತಿಯಾಗಿದ್ದಾರೆ ಮತ್ತು ಯಾವುದೇ ಭಾರತೀಯ ಬ್ಯಾಟ್ಸ್‌ಮನ್‌ನಿಂದ ODI ಸ್ವರೂಪದಲ್ಲಿ ವೇಗದ ಶತಕದ ದಾಖಲೆಯನ್ನು ಹೊಂದಿದ್ದಾರೆ .

ದೇಶೀಯ ಕ್ರಿಕೆಟ್‌ನಲ್ಲಿ, ಮಂಧಾನ ಮಹಾರಾಷ್ಟ್ರವನ್ನು ಪ್ರತಿನಿಧಿಸುತ್ತಾರೆ . ಅವರು ಮಹಿಳಾ ಪ್ರೀಮಿಯರ್ ಲೀಗ್ (WPL) ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕಿಯಾಗಿದ್ದಾರೆ ಮತ್ತು 2024 ಮತ್ತು 2026 ರ ಋತುಗಳಲ್ಲಿ WPL ಪ್ರಶಸ್ತಿಗಳನ್ನು ಗೆಲ್ಲಲು ಕಾರಣರಾಗಿದ್ದರು.



● ಸ್ಮೃತಿ ಮಂದಾನ ರವರ ಜನ್ಮ ಲಗ್ನ ಮೀನ, ಭಾವನಾತ್ಮಕ ಆಟಗಾರ್ತಿ.
● ಲಗ್ನಾಧಿಪತಿ ತನ್ನ ಸ್ವಕ್ಷೇತ್ರ ಧನಸ್ಸುವಿನಲ್ಲಿ ದಶಮಸ್ಥಾನಸ್ಥಿತನಾದ್ದರಿಂದ ಲಗ್ನಾಧಿಪತಿ ಬಲಯುತ. ಜೊತೆಗೆ ಕ್ರೀಡಾ ಜ್ಯೋತಿಷ್ಯ ದಲ್ಲಿ ಪ್ರಮುಖವಾದ ಗ್ರಹ ಕುಜ ಹಾಗೂ ಗುರುವು ಪರಸ್ಪರ ದೃಷ್ಟಿಯಿಂದ ಇವರಿಗೆ ಕ್ರಿಕೆಟ್ ಕ್ರೀಡೆಯಲ್ಲಿ ಆಸಕ್ತಿ ಬಂದಿದೆ.
● ಲಗ್ನದಲ್ಲಿನ ಶನಿ, ಕೇತುವಿನಿಂದ ತಾರ್ಕಿಕವಾಗಿ,  ಶಿಸ್ತುಬದ್ಧವಾಗಿ ಆಟವಾಡ್ತಾರೆ, ಸಪ್ತಮದ ರಾಹು ಲಗ್ನವನ್ನು ದೃಷ್ಟಿಸಿ, ಬಲ ಪರಾಕ್ರಮವನ್ನು ಕೊಟ್ಟು ಆಕ್ರಮಣಕಾರಿ ಆಟವಾಡಲು ಪ್ರಚೋದಿಸುತ್ತೆ.
● 3rd ಲಾರ್ಡ್ ಶುಕ್ರ 3ರಲ್ಲೇ ಇದ್ದು  ಬಲಯುತನಾಗಿದ್ದಾನೆ. ರಾಹುವಿನ ಪಂಚಮ ದೃಷ್ಟಿ ಶುಕ್ರನ ಮೇಲಿದ್ದು, ಆಟದ ಮೈದಾನದಲ್ಲಿ  ತನ್ನ ಪರಾಕ್ರಮ ಮೆರೆಯುವಂತೆ ಮಾಡಿದ್ದಾನೆ.
● ಪಂಚಮಾಧಿಪತಿ ಚಂದ್ರ ಪಂಚಮದಲ್ಲಿಯೇ ಇದ್ದು  ಜಾತಕಿಗೆ ಸಹಾನುಭೂತಿ, ರಕ್ಷಣಾತ್ಮಕ ಮನೋಭಾವ, ಊಹಾತ್ಮಕ ಶಕ್ತಿ, ಜನರೊಡನೆ ಭಾವನಾತ್ಮಕ ಸಂಪರ್ಕ ಸಾಧಿಸುವ, ನಿಭಾಯಿಸುವ, ಸಾಮರ್ಥ್ಯವನ್ನು ಕೊಟ್ಟಿದೆ.
● 5th ಲಾರ್ಡ್ ಚಂದ್ರನು  ಬುಧನ ನಕ್ಷತ್ರದಲ್ಲಿ  ಬುಧನೊಟ್ಟಿಗೆ ಇದ್ದು, ಚುರುಕುತನದ ಜೊತೆಗೆ  ಕ್ರಿಯಾತ್ಮಕವಾಗಿ ಯೋಚಿಸಿ ಕಾರ್ಯರೂಪಕ್ಕಿಳಿವ ಗುಣವನ್ನು ಕೊಟ್ಟಿದೆ.
 • 6th ಲಾರ್ಡ್ ರವಿ 5th ಲ್ಲಿ ಚಂದ್ರ ಬುದರ ಜೊತೆಗೆ ಇದ್ದು ಜಾತಕಿಗೆ ಸ್ಥಿತಿಸ್ಥಾಪಕತ್ವ, ಅಂತಃಪ್ರಜ್ಞೆ ಮತ್ತು ಇತರರಿಗೆ ಸ್ಫೂರ್ತಿ ನೀಡುವ ಸಾಮರ್ಥ್ಯ ಕೊಟ್ಟಿದೆ. ಈ ಗುಣಗಳು ಮೈದಾನದಲ್ಲಿ ಅವರ ಸ್ಥಿರ ಪ್ರದರ್ಶನ ಮತ್ತು ನಾಯಕತ್ವದಲ್ಲಿ ಪ್ರತಿಫಲಿಸುತ್ತವೆ.
 • ಧನ,  ಭಾಗ್ಯಾಧಿಪತಿಯಾದ ಕುಜ ಚತುರ್ಥ ಕೇಂದ್ರದಲ್ಲಿ ಸ್ಥಿತನಾಗಿ, ಗುರುವಿನ ವೀಕ್ಷಣೆಯಲ್ಲಿ, ಇವರಿಗೆ, ಧೈರ್ಯ ಹಣ, ಕ್ರೀಡಾ ಜೀವನದ ಸುಖ, ಭಾಗ್ಯವನ್ನು ಕೊಟ್ಟು ಯಶಸ್ವೀ ಕ್ರೀಡಾತಾರೆಯನ್ನಾಗಿ ಮಾಡಿದೆ.
• 10th ಲಾರ್ಡ್, ಗುರು 10 ರಲ್ಲೇ ಇದ್ದು, ಕುಜನ ದೃಷ್ಟಿ ಪಡೆದು ಕೀರ್ತಿ, ಪ್ರಶಸ್ತಿ ವೃತ್ತಿಜೀವನದಲ್ಲಿ ಉನ್ನತ ಸ್ಥಾನ ಕೊಡುವಲ್ಲಿ ಸಹಕಾರಿಯಾಗಿದೆ.
• 11th ಲಾರ್ಡ್ ಶನಿಯು ಲಗ್ನದಲ್ಲೇ ಕೇತುವಿನೊಂದಿಗಿದ್ದು, ಇವರಿಗೆ ಸಲ್ಲಬೇಕಾದ ಮಾನಸಮ್ಮಾನ, ಲಾಭ ಪ್ರಶಸ್ತಿ ಎಲ್ಲವನ್ನೂ ಕೊಟ್ಟು  ಕೀರ್ತಿ ಪತಾಕೆಯನ್ನು ಹಾರಿಸಿದೆ.
• ಕೇತುದೆಶೆ ರಾಹುಭುಕ್ತಿಯಲ್ಲಿ  ಇವರು ತಮ್ಮ 9 ನೆ ವಯಸ್ಸಿಸಲ್ಲಿ ಕ್ರಿಕೆಟ್ ಸ್ಪರ್ಧೆ ಯಲ್ಲಿ ಭಾಗವಹಿಸಿದರು, 
• ಪ್ರಸ್ತುತ 3 ನೆ ಅಧಿಪತಿ ಶುಕ್ರದೆಶೆ ನಡೆಯುತ್ತಿದ್ದು,  ಶುಕ್ರದೆಶೆ ಶನಿ ಭುಕ್ತಿಯಲ್ಲಿ ಕಳೆದ ವರ್ಷ ಮಹಿಳಾ ವಿಶ್ವಕಪ್ ಪಂದ್ಯದಲ್ಲಿ ಭಾರತದ ಪರವಾಗಿ ಗೆದ್ದು ದೇಶದ ಗೌರವವನ್ನು ಎತ್ತಿ ಹಿಡಿದಿದ್ದಾರೆ.
ಇವರ ಜಾತಕದಲ್ಲಿ  ಕ್ರೀಡಾಗ್ರಹಗಳು ಕೇಂದ್ರ ತ್ರಿಕೋಣದಲ್ಲಿದ್ದು ಇವರನ್ನು ಉತ್ತಮ ಕ್ರಿಕೆಟ್ ಪಟುವನ್ನಾಗಿ ಮಾಡಿದೆ.

          ✍️ಡಾ: B. N. ಶೈಲಜಾ ರಮೇಶ್