Wednesday, 23 May 2018

ಕುಜದೋಷದ ಸ್ವರೂಪ, ಫಲ ಹಾಗೂ ಪರಿಹಾರೋಪಾಯಗಳು

                             ಹರಿಃ  ಓಂ
             ಶ್ರೀ ಮಹಾಗಣಪತಯೇ  ನಮಃ
                 ಶ್ರೀ  ಗುರುಭ್ಯೋನಮಃ

          ಕುಜದೋಷ  :--


ಕುಜದೋಷದ  ಸ್ವರೂಪ,  ಫಲ  ಹಾಗೂ  ಪರಿಹಾರೋಪಾಯಗಳು  :---
          ಜಾತಕರ  ಜನ್ಮ ಕುಂಡಲಿಯಲ್ಲಿ  ಕುಜ  ಎಷ್ಟು  ಅಶುಭನಾಗುತ್ತಾನೆ  ಎಂಬುದನ್ನು  ಕುಜದೋಷದ ಅಂತರ್ಗತ  ವಿಚಾರ ಮಾಡಬೇಕಾಗುತ್ತದೆ.
          ಕುಂಡಲಿಯಲ್ಲಿ  ಪ್ರಥಮ,  ದ್ವಿತೀಯ  ಚತುರ್ಥ, ಪಂಚಮ,  ಸಪ್ತಮ ,  ಅಷ್ಟಮ  ಹಾಗೂ  ದ್ವಾದಶ  ಭಾವಗಳಲ್ಲಿ  ಕುಜನಿದ್ದರೆ  ದೋಷವೆಂದೇನಿಸುತ್ತದೆ,  ಈ  ಭಾವಗಳಿಗೆ ತಮ್ಮದೇ  ಆದ  ಒಂದು ವಿಶಿಷ್ಟ  ಮಹತ್ವವಿದೆ.
   
          ■  ಪ್ರಥಮ  ಭಾವದಿಂದ  ಜಾತಕನ  ಶರೀರ,
          ■  ದ್ವಿತೀಯ ಭಾವದಿಂದ  ಕುಟುಂಬ ಸೌಖ್ಯ,
          ■  ಚತುರ್ಥ  ಭಾವದಿಂದ  ಸುಖ  ಅಂದರೆ  ಭೂಮಿ, ವಾಹನ, ಮನೆ  ಹಾಗೇ ಪ್ರಯೋಜನಕ್ಕೆ  ಬರುವ  ಅವಶ್ಯಕ  ಸಾಮಗ್ರಿಗಳು,
          ■  ಪಂಚಮ  ಭಾವದಿಂದ  ಸಂತಾನ  ಸುಖ
          ■  ಸಪ್ತಮ  ಭಾವದಿಂದ  ಕಾಮ, ಪತಿ ಅಥವಾ  ಪತ್ನಿ,  ರತಿಸುಖ,
          ■  ಅಷ್ಟಮ  ಭಾವದಿಂದ ಜೀವನದಲ್ಲಿ  ತಲೆದೋರುವ  ಬಾಧೆಗಳು  ಅಥವಾ  ಮೃತ್ಯು  ಅಥವಾ  ಆಯಸ್ಸಿನ  ವಿಚಾರ,
          ■  ದ್ವಾದಶ ಭಾವದಿಂದ  ವ್ಯಯ  ಅಥವಾ ಖರೀದಿ  ಶಕ್ತಿಯ  ವಿಚಾರಗಳನ್ನು  ಮಾಡಲಾಗುತ್ತದೆ.  ಆದ್ದರಿಂದ  ಜನ್ಮ ಕುಂಡಲಿಯಲ್ಲಿ ಕೌಟುಂಬಿಕ  ಸುಖ  ದುಃಖಾದಿಗಳ  ವಿಚಾರ  ಮಾಡುವಾಗ  ಈ   7  ಭಾವಗಳಿಗೆ  ವಿಶೇಷ  ಮಹತ್ವ  ಕೊಡಲಾಗುತ್ತದೆ.
          ಈ  ಭಾವಗಳಲ್ಲಿ  ಪಾಪಗ್ರಹಗಳ  ಸ್ಥಿತಿಯಾಗಲೀ  ಅಥವಾ  ಈ  ಭಾವಗಳ  ಮೇಲೆ  ಪಾಪಗ್ರಹಗಳ  ದೃಷ್ಟಿಯಾಗಲೀ  ಇದ್ದರೆ  ಜಾತಕರಿಗೆ  ಆ  ಭಾವಗಳ  ಸುಖದಲ್ಲಿ  ತೊಂದರೆಗಳು  ಲಭಿಸುತ್ತದೆ.
          ■   ಕುಜನು  ಪಾಪಗ್ರಹವಾಗಿದ್ದು,  ಒಂದು ವೇಳೆ  ಕುಜನು  ಲಗ್ನ,  ದ್ವಿತೀಯ,  ಚತುರ್ಥ,  ಪಂಚಮ,  ಸಪ್ತಮ,  ಅಷ್ಟಮ,  ದ್ವಾದಶ  ಭಾವಗಳಲ್ಲಿ  ಸ್ಥಿತನಿದ್ದರೆ  ತನ್ನ  ಕೆಟ್ಟ  ಪ್ರಭಾವ ವನ್ನು  ತೋರುತ್ತಾನೆ.
          ■   ಲಗ್ನದಲ್ಲಿ  ಮಂಗಳನಿದ್ದರೆ,  ಅಥವಾ  ಅವನ  ದೃಷ್ಟಿ  ಲಗ್ನದ  ಮೇಲಿದ್ದರೆ,  ಜಾತಕನ ಆರೋಗ್ಯ  ಉತ್ತಮವಾಗಿರುವುದಿಲ್ಲ,  ಸ್ವಭಾವದಲ್ಲಿ  ಕೂಡ  ಹಠಮಾರಿತನ  ಹಾಗೂ  ಉಗ್ರತನವಿರುತ್ತದೆ.
          ■   ದ್ವಿತೀಯದಲ್ಲಿ ಕುಜನಿದ್ದರೆ,  ಅಥವಾ  ಅವನ  ದೃಷ್ಟಿ  ದ್ವಿತೀಯದ  ಮೇಲಿದ್ದರೆ,  ಮಾತಿನಲ್ಲಿ  ಒರಟುತನ  ಹಾಗೂ  ಕುಟುಂಬದಲ್ಲಿ  ಹೊಂದಾಣಿಕೆಯ  ವಿಷಯದಲ್ಲಿ  ಕೊರತೆಯಿರುತ್ತದೆ.
          ■    ಚತುರ್ಥ  ಭಾವದಲ್ಲಿ  ಕುಜನಿದ್ದರೆ  ಅಥವಾ  ಅವನ ದೃಷ್ಟಿ  ಚತುರ್ಥ ದ  ಮೇಲಿದ್ದರೆ,  ಸುಖ ಭೋಗೋಪ ಸಾಧನಗಳಲ್ಲಿ  ಕೊರತೆಯಿರುತ್ತದೆ.
      
          ■    ಪಂಚಮ  ಭಾವದಲ್ಲಿ  ಕುಜನಿದ್ದರೆ  ಅಥವಾ  ಪಂಚಮದ  ಮೇಲೆ  ಕುಜನ  ದೃಷ್ಟಿಯಿದ್ದರೆ,  ಮೃತ ಸಂತಾನ, ಗರ್ಭಪಾತ,ಸಂತಾನ  ವಿಷಯದಲ್ಲಿ  ದುಃಖ, 
          ■    ಸಪ್ತಮ  ಭಾವದಲ್ಲಿ  ಕುಜನಿದ್ದರೆ  ಅಥವಾ  ಆ  ಭಾವದ ಮೇಲೆ  ಕುಜನ  ದೃಷ್ಟಿಯಿದ್ದರೆ,  ಕೌಟುಂಬಿಕ  ಜೀವನ  ಸುಖಮಯವಾಗಿ  ಇರುವುದಿಲ್ಲ,  ಒಮ್ಮೊಮ್ಮೆ ದ್ವಿಕಳತ್ರ,
          ■   ಅಷ್ಟಮ  ಭಾವದಲ್ಲಿ  ಕುಜನಿದ್ದರೆ  ಅಥವಾ ಕುಜನ  ದೃಷಿಯಿದ್ದರೆ,  ಜೀವನದಲ್ಲಿ  ತೊಂದರೆಗಳು,  ಕಲತ್ರನಾಶ,  ಹಾಗೂ  ಅನಿಷ್ಟ ಗಳು  ಭಾಧಿಸುತ್ತವೆ.
          ■   ದ್ವಾದಶ  ಭಾವದಲ್ಲಿ  ಕುಜನಿದ್ದರೆ  ಅಥವಾ  ಆ  ಭಾವದ ಮೇಲೆ  ಕುಜನ  ದೃಷ್ಟಿಯಿದ್ದರೆ,  ಅಧಿಕ  ವ್ಯಯ  ಚಿಂತೆ,  bed  comfort ವಿಚಾರದಲ್ಲಿ  ತೊಂದರೆಗಳು  ಪೀಡಿಸುತ್ತವೆ.
          ಆದ್ದರಿಂದ  ಈ  ಏಳು  ಭಾವಗಳಲ್ಲಿ  ಎಲ್ಲಿಯಾದರೂ  ಕುಜ  ಸ್ಥಿತನಿದ್ದರೆ  ಆ  ಜಾತಕರು  ಕುಜದೋಷವುಳ್ಳವರು  ಎಂದೆನಿಸಿಕೊಳ್ಳುತ್ತಾರೆ.
            ಲಗ್ನದಿಂದ,  ಚಂದ್ರರಾಶಿಯಿಂದ  ಹಾಗೂ  ಶುಕ್ರನಿಂದ ಕೂಡ   ಈ  ಭಾವಗಳಲ್ಲಿ  ಕುಜನು  ಸ್ಥಿತನಿದ್ದರೂ  ಕೂಡ  ಕುಜದೋಷವಾಗುತ್ತದೆ.
 
           ಕುಜ  ಶನಿ,  ಸೂರ್ಯ,  ರಾಹು,  ಕೇತು  ಇವರು ತಮ್ಮ  ದೃಷ್ಟಿ ,  ಯುತಿ ಅಥವಾ   ಸ್ಥಿತಿಯಿಂದ ಯಾವುದೇ  ಭಾವದ  ಶುಭ ಫಲಗಳನ್ನು  ನಷ್ಟಗೊಳಿಸುವ  ಸಾಮರ್ಥ್ಯ ವನ್ನು  ಹೊಂದಿರುವರು,  ಆದ್ದರಿಂದ  ಈ  ಗ್ರಹರು  ನೈಸರ್ಗಿಕವಾಗಿ ಪಾಪಗ್ರಹರು,   ಈ  ಪಾಪಗ್ರಹಗಳು 1,  2,  4,  5,  7,  8,  12  ಈ  ಭಾವಗಳಲ್ಲಿ  ಸ್ಥಿತರಿದ್ದರೆ  ಕುಜದೋಷದಷ್ಟೇ  ಪ್ರಭಾವ  ಉಂಟಾಗುತ್ತದೆ,   ಆದ್ದರಿಂದ  ಇದರ  ವಿಚಾರವನ್ನೂ  ಮಾಡುವುದು  ಅವಶ್ಯಕ,  ಏಕೆಂದರೆ  ಲಗ್ನ ಶರೀರವನ್ನೂ,  ಚಂದ್ರ  ಮನಸ್ಸನ್ನೂ,  ಹಾಗೂ  ಶುಕ್ರ  ದಾಂಪತ್ಯ ಸುಖದ  ಪ್ರತಿನಿಧಿತ್ವ  ವಹಿಸುತ್ತಾರೆ.
          ದಾಂಪತ್ಯ  ಸುಖದಲ್ಲಿ  ಶರೀರ,  ಮನಸ್ಸು  ಹಾಗೂ  ರತಿಸುಖ  ತಮ್ಮದೇ  ಆದ  ಮಹತ್ವಹೊಂದಿದೆ.   ರವಿ , ಶನಿ, ರಾಹು, ಕೇತುಗಳಿಂದ  ನಿರ್ಮಾಣವಾಗುವ  ದುರ್ಯೋಗಗಳು  ಅಲ್ಪ ಪ್ರಭಾವವುಳ್ಳದ್ದಾಗಿರುತ್ತದೆ,   ಆದ್ರೆ ಕುಜನಿಂದ  ದುರ್ಯೋಗ  ನಿರ್ಮಾಣವಾದಾಗ  ಅದರ  ದುಷ್ಪ್ರಭಾವವನ್ನು  ಅಧಿಕವೆಂದು  ತಿಳಿಯಲಾಗುತ್ತದೇ,   ಕೇತುವಿನಿಂದ  ನಿರ್ಮಾಣವಾಗುವ  ಯೋಗ ಎಲ್ಲಕ್ಕಿಂತ  ಕಡಿಮೆ  ಪ್ರಭಾವ  ಹೊಂದಿರುತ್ತದೆ,  ಲಗ್ನ,  ಚತುರ್ಥ,  ಅಷ್ಟಮ ಹಾಗೂ  ವ್ಯಯಭಾವಗಳಲ್ಲಿ  ಪಾಪಗ್ರಹದ  ಸ್ಥಿತಿ ಯಿಂದ  ನಿರ್ಮಾಣವಾಗುವ  ದುರ್ಯೋಗಗಳ  ಪ್ರಭಾವ  ಭಾವಗಳ  ಕ್ರಮಾನುಸಾರ ಕಡಿಮೆಯಿರುತ್ತದೆ , ಆದರೆ  ಈ  ಪ್ರಭಾವ  ಸಪ್ತಮ  ಭಾವದಲ್ಲಿ  ಎಲ್ಲಕ್ಕಿಂತ  ಅಧಿಕವಿರುತ್ತದೆ,  ದ್ವಾದಶ  ಭಾವದಲ್ಲಿ  ಎಲ್ಲಕ್ಕಿಂತ  ಕಡಿಮೆಇರುತ್ತದೇ.
         
            ಮದುವೆ ಎಂಬುದು ಮನುಷ್ಯನ ಜೀವನವನ್ನೇ ಬದಲಿಸುವ ಕಾಲ ಘಟ್ಟ. ಇದು ಎರಡು ಜೀವಗಳು ಸಮ್ಮಿಳಿತಗೊಳ್ಳುವ ಕಾರ್ಯ.  ಕುಜದೋಷ ಎಷ್ಟಿದೆ ಎಂದು ಇಬ್ಬರ ಜಾತಕವನ್ನು (ವಧು-ವರ) ಕೂಲಂಕಷವಾಗಿ ಪರಿಶೀಲಿಸಿ ವಿವಾಹ ಮಾಡುವುದರಿಂದ ದಾಂಪತ್ಯ ಜೀವನ ಸುಖವಾಗಿರಲು ಸಹಾಯವಾಗುತ್ತದೆ.
          ದಾಂಪತ್ಯ ಯೋಗ ನಿರ್ಧರಿಸುವಾಗ ವಧು-ವರರ ದಿನಾದಿಕೂಟಗಳನ್ನು ಸೂಕ್ತವಾಗಿ ಪರಿಶೀಲಿಸುವುದರೊಂದಿಗೆ, ಜನ್ಮ ಜಾತಕದಲ್ಲಿ ಬರುವ ಕುಜದೋಷ, ವಿಷಕನ್ಯಾಯೋಗವನ್ನು ಪರಿಶೀಲಿಸಿ ವಿವಾಹವನ್ನು ನಿರ್ಧರಿಸಬೇಕಾಗಿರುವುದರಿಂದ ಈ ಕುಜದೋಷ ನೋಡಬೇಕು.
         ಕುಜ ದೋಷಗಳು ಬರಲು ಕಾರಣ:
         ■   ಜನನ ಕಾಲದಲ್ಲಿ ಗ್ರಹಗಳು, ಉಪಗ್ರಹಗಳು, ಉಲ್ಕಶಿಲೆಗಳು, ಧೂಮಕೇತುಗಳು ಮತ್ತು ಯಾವುದಾದರೊಂದು ಕ್ಷುದ್ರವಸ್ತು ಸೂರ್ಯನಿಗೆ ಅಡ್ಡಬಂದಾಗ ಸಂಕ್ರಮಣ ಏರ್ಪಟ್ಟು ಸೂರ್ಯನಿಂದ ಹೊರಹೊಮ್ಮುವ  ಕಿರಣಗಳು ವಕ್ರಸ್ಥಿತಿಯಲ್ಲಿ ಭೂಮಿಯ  ಮೇಲೆ ಬಿದ್ದಾಗ,
          ■  ಜ್ಯೋತಿಷ್ಯಶಾಸ್ತ್ರದ ರೀತ್ಯ  ಜಾತಕರ  ಜನ್ಮಕುಂಡಲಿಯಲ್ಲಿ ಕುಜ ಮತ್ತು ಶನಿಗ್ರಹಗಳು ಅಷ್ಟಮ ಸ್ಥಾನಕ್ಕೆ ಬಂದಾಗ,
          ■  ವಾಸಿಸುವ  ಮನೆ  ಮತ್ತು ಪರಿಸರದ ನೈರ್ಮಲ್ಯ ಕೆಟ್ಟು ವಾಸ್ತು ದೋಷಗಳು ಉದ್ಭವಿಸಿದಾಗ,
         ■  ಕುಲದೇವರನ್ನು ಪೂಜಿಸುವುದು ಮರೆತಾಗ,
  
         ■  ಪೌರ್ಣಮಿ ಅಮಾವಾಸ್ಯೆ ಮತ್ತು ಗ್ರಹಣ ಕಾಲದಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತಮ ಸಮಯದಲ್ಲಿ ಜನಿಸಿದವರು ಕುಜ ದೋಷಕ್ಕೆ ತುತ್ತಾಗುತ್ತಾರೆ. 
ಕುಜದೋಷ  ಪರಿಶೀಲಿಸುವುದು ಮುಖ್ಯವಾಗಿ
          ■ ಮೊದಲನೆಯದಾಗಿ ಜನ್ಮ ಜಾತಕದಲ್ಲಿ ಬರುವ ಕುಜದೋಷ
          ■  ಎರಡನೆಯದಾಗಿ ವಿವಾಹ ಸಮಯದ ಲಗ್ನಕುಂಡಲಿಯಲ್ಲಿ ದೋಷಯುತ ಮಂಗಳನಿರದಂತೆ ಎಚ್ಚರವಹಿಸಬೇಕು.
          ■  ಮೂರನೆಯದಾಗಿ ಸ್ತ್ರೀಯ ಪ್ರಥಮ ರಜೋದರ್ಶನ ಕಾಲದಲ್ಲಿ ಸ್ಪಷ್ಟ ಲಗ್ನ ಕುಂಡಲಿಯಲ್ಲಿ ಕುಜದೋಷ ಅತಿ ಮಹತ್ವದ್ದು.
         ಕುಜದೋಷದ  ಸ್ವಯಂ  ನಿವೃತ್ತಿ
        ಜನ್ಮ ಕುಂಡಲಿಯಲ್ಲಿ  ಈ  ಕೆಳಗೆ  ತಿಳಿಸಿರುವ  ಸ್ಥಿತಿಗಳು  ನಿರ್ಮಾಣವಾಗಿದ್ದರೆ  ಪ್ರಾಯಶಃ  ಕುಜದೋಷ  ಸ್ವಯಂ  ನಿವಾರಣೆಯಾಗುತ್ತದೆ.
    
       ■   ವಧೂ -  ವರರ ಕುಂಡಲಿಗಳನ್ನು  ಕೂಡಿಸಲು  ಪರಿಶೀಲಿಸುವಾಗ,  ಕುಜದೋಷವಿದ್ದು,   ಯಾರೊಬ್ಬರ  ಕುಂಡಲಿಯಲ್ಲಿ,  1,  4,  7,  8,  12  ಭಾವದಲ್ಲಿ  ಶನಿ  ಸ್ಥಿತನಿದ್ದರೆ,
      ■   ಮೇಷ   ರಾಶಿ, ಲಗ್ನದಲ್ಲಿ  ಅಥವಾ  ವೃಶ್ಚಿಕ ರಾಶಿ,  ಲಗ್ನದ  ಚತುರ್ಥ ದಲ್ಲಿ,  ಅಥವಾ  ಮಕರ ರಾಶಿ,  ಲಗ್ನದ  ಸಪ್ತಮದಲ್ಲಿ  ಅಥವಾ  ಕಟಕ  ರಾಶಿ,  ಲಗ್ನದ ಅಷ್ಟಮದಲ್ಲಿ  ಅಥವಾ ಧನಸ್ಸು  ರಾಶಿಯ  ದ್ವಾದಶ  ಭಾವದಲ್ಲಿದ್ದರೆ,
      ■   ದ್ವಿತೀಯ ಭಾವದಲ್ಲಿ  ಚಂದ್ರ -  ಶುಕ್ರರ  ಯುತಿಯಿದ್ದರೆ,  ಕೇಂದ್ರದಲ್ಲಿ  ಶಶಿಮಂಗಳ ಯೋಗವಿದ್ದರೆ,   ಗುರು - ಕುಜರ  ಯುತಿಯಿದ್ದರೆ,  ಅಥವಾ  ಕುಜನ ಮೇಲೆ  ಗುರುವಿನ  ಪೂರ್ಣ ದೃಷ್ಟಿ ಇದ್ದರೆ,
       ■  ಗುರು  ಅಥವಾ  ಶುಕ್ರನ  ರಾಶಿಯು  ಅಷ್ಟಮ ಭಾವವಾಗಿದ್ದು, ಸಪ್ತಮಾಧಿಪತಿ  ಬಲಿಷ್ಠನಾಗಿ  ಕೇಂದ್ರ  ಅಥವಾ .ತ್ರಿಕೋಣದಲ್ಲುದ್ದರೆ,
       ■  ಸಪ್ತಮ ಭಾವಾಧಿಪತಿ ಅಥವಾ  ಶುಕ್ರ  ಬಲಿಷ್ಠರಾಗಿ  ಸಪ್ತಮ ಭಾವದಲ್ಲಿ  ಅಥವಾ  ಸಪ್ತಮಕ್ಕೆ  ದೃಷ್ಠಿ ಇದ್ದರೆ,
        ■   ದೋಷ ಕಾರಕನಾದ  ಕುಜ  ಸ್ವಕ್ಷೇತ್ರ,  ಉಚ್ಚಕ್ಷೇತ್ರ,  ಅಥವಾ  ಮೂಲತ್ರಿಕೋನ ದಲ್ಲಿ ಸ್ಥಿತನಿದ್ದರೆ  ಕುಜದೋಷ  ಸ್ವಯಂ ದೂರಾಗುತ್ತದೆ.
        
         ■  ಕಟಕ ಮತ್ತು ಸಿಂಹ ಲಗ್ನದವರಿಗೆ ಕುಜದೋಷವಿಲ್ಲ. ಅಶ್ವಿನಿ, ಮೃಗಶಿರ, ಪುನರ್ವಸು, ಪುಷ್ಯ, ಆಶ್ಲೇಷಾ, ಸ್ವಾತಿ, ಅನುರಾಧ, ಪೂರ್ವಷಾಢಾ, ಉತ್ತರಾಷಾಢಾ, ಶ್ರವಣ, ಉತ್ತರಾಭಾದ್ರ, ರೇವತಿ ಈ ನಕ್ಷತ್ರಗಳಲ್ಲಿ ಜನಿಸಿದವರಿಗೆ ಕುಜದೋಷವಿಲ್ಲ.
         ■  ಪಂಚಮಹಾಪುರುಷ ಯೋಗದಲ್ಲಿ ರುಚಿಕಯೋಗವಿದ್ದರೆ ಕುಜದೋಷವಿಲ್ಲ.
   
         ■  ರವಿ, ಚಂದ್ರ, ಕುಜ ಉಚ್ಚರಾಶಿಗಳಲ್ಲಿದ್ದರೆ ಹಾಗೂ ಕುಜನು ಶನಿರಾಹು, ರವಿಯ ಯುತಿಯಲ್ಲಿದ್ದರೂ ಕುಜದೋಷವಿಲ್ಲ.
         ವಿವಾಹ ಸಮಯದಲ್ಲಿ ವಧು- ವರರ ಸಾಲಾವಳಿಗೆ ತೆಗೆದುಕೊಂಡಾಗ ಗಂಡಿನ ಜಾತಕದಲ್ಲಿ (ವರ) ಕುಜನ 2,5,7ನೇ ಭಾವಗಳಲ್ಲಿ ಕುಜನಿದ್ದರೆ ಬಲಿಷ್ಠ ಕುಜದೋಷ. ಗಂಡಿನ ಜಾತಕದಲ್ಲಿ ಹೆಚ್ಚು ಕುಜದೋಷವಿದ್ದು, ಹೆಣ್ಣಿನ ಜಾತಕದಲ್ಲಿ ಕಡಿಮೆ ಕುಜದೋಷವಿದ್ದರೆ ವಿವಾಹ ಮಾಡಬಹುದು. ಆದರೆ, ಗಂಡಿನ ಜಾತಕದಲ್ಲಿ ಕಡಿಮೆ ಕುಜದೋಷವಿದ್ದು, ಹೆಣ್ಣಿನ ಜಾತಕದಲ್ಲಿ ಹೆಚ್ಚಿನ ಕುಜದೋಷವಿದ್ದರೆ ವಿವಾಹ ಮಾಡಬಾರದು.
         ಈ ಕುಜದೋಷ ಉಂಟಾಗುವುದಕ್ಕೂ ಸಮಯವುಂಟು. ಕುಜ ಬಲಿಷ್ಠನಿದ್ದರೆ ಅಥವಾ ಮಾರಕನಾಗಿದ್ದರೆ 28ನೇ ವಯಸ್ಸಿನಿಂದ 32ನೇ ವರ್ಷದವರೆಗೆ ತನ್ನ ಇಷ್ಟ- ಅನಿಷ್ಟಾದಿ ಫಲಗಳನ್ನು ಕೊಡುವನು. ಅಂದಿನ ಗೋಚಾರ ಸ್ಥಾನ ಮತ್ತು ಅಷ್ಟಕವರ್ಗ ಬಿಂದುಗಳನ್ನು ಗಮನಿಸಬೇಕು. ಇದರೊಂದಿಗೆ ದಶಾಕಾಲ ಬಹಳ ಮಹತ್ವದಾಗಿದೆ. ಈ ಅನಿಷ್ಟ ಫಲಗಳು ದಶಾಕಾಲದಲ್ಲೇ ಹೆಚ್ಚಾಗಿ ನೀಡುತ್ತಾನೆ. ಒಬ್ಬೊಬ್ಬರ ಜಾತಕದಲ್ಲಿ ಕುಜದಶಾಕಾಲ  ಬರದೇ ಹೋಗಬಹುದುದು. ಆಗ ಕುಜನ ಅನಿಷ್ಟ ಫಲಗಳು   ಕೂಡ  ಕಡಿಮೆಯಾಗುತ್ತದೆ.
  
ದ್ವಾದಶ ಲಗ್ನಗಳಲ್ಲಿ  ಕುಜದೋಷ  ಹಾಗೂ  ಲಾಲ್ ಕಿತಾಬ್  ರೀತ್ಯಾ  ಪರಿಹಾರೋಪಾಯಗಳು:---
          ಮೇಶಲಗ್ನ:--
ಲಗ್ನಸ್ಥಿತ  ಕುಜನಿಗೆ  ಪರಿಹಾರೋಪಾಯ  :--
1,  ಕೆಂಪು ಬಣ್ಣದ ಕರವಸ್ತ್ರವನ್ನು ಬಳಿಯಲ್ಲಿರಿಸಿಕೊಳ್ಳಬೇಕು.
2, ತಾಮ್ರ ಅಥವಾ  ಚಿನ್ನದ  ಉಂಗುರದಲ್ಲಿ  ಹವಳವನ್ನು ಧರಿಸಬೇಕು.
3, ಮಂಗವನ್ನು  ಸಾಕಬೇಕು.
ಚತುರ್ಥ ಸ್ಥಾನಸ್ಥಿತ ಕುಜನಿಗೆ  ಪರಿಹಾರೋಪಾಯ :-
1,  ಸಂತಾನಹೀನ  ವ್ಯಕ್ತಿ ಯಿಂದ ಯಾವುದೇ ಉಡುಗೊರೆಗಳನ್ನು  ಪಡೆಯಬಾರದು.
2,  ದಕ್ಷಿಣ ದಿಕ್ಕಿನ ಕಡೆ  ಬಾಗಿಲಿರುವ  ಮನೆಯಲ್ಲಿ  ವಾಸಿಸಬಾರದು.
3,  ಬೆಳ್ಳಿಯ ಕಡಗವನ್ನು ಧರಿಸಬೇಕು.
ಸಪ್ತಮಸ್ಥಿತ  ಕುಜನಿಗೆ  ಪರಿಹಾರೋಪಾಯ :---
1,  ಸುಳ್ಳನ್ನಾಡಬಾರದು,  ಸುಳ್ಳು ಸಾಕ್ಷಿ  ಹೇಳಬಾರದು.
2, ಚಿನ್ನದ  ಉಂಗುರದಲ್ಲಿ  ಹವಳ ಧರಿಸಬೇಕು.
3,  ಸಹೋದರಿ  ಅಥವಾ  ಪುತ್ರಿಗೆ  ಸಿಹಿ ತಿನ್ನಿಸಬೇಕು.
ಅಷ್ಟಮಭಾವ ಸ್ಥಿತ ಕುಜನಿಗೆ  ಪರಿಹಾರೋಪಾಯ :--
1,  ನದಿಯ  ನೀರಿನಲ್ಲಿ ಸಕ್ಕರೆಯನ್ನು  ಪ್ರವಹಿಸಿಬೇಡಬೇಕು.
2, ಬೆಳ್ಳಿ ಉಂಗುರವನ್ನು  ಧರಿಸಬೇಕು.
3, ದಕ್ಷಿಣ ದಿಕ್ಕಿಗೆ  ಬಾಗಿಲಿರುವ ಮನೆಯಲ್ಲಿ  ವಾಸಿಸಬಾರದು.
ದ್ವಾದಶಸ್ಥಿತ  ಕುಜನಿಗೆ  ಪರಿಹಾರೋಪಾಯ:---
1,  ಜನರಿಗೆ  ಸಿಹಿ  ಹಂಚಬೇಕು.
2, ಮಾಂಸಾಹಾರ  ಸೇವಿಸಬಾರದು.
3, ಗಾಯತ್ರೀ ಮಂತ್ರ  ಅಥವಾ  ದುರ್ಗಾ  ಸಪ್ತಶತಿಯ  ಪಾರಾಯಣ  ಮಾಡಬೇಕು.
          ವೃಷಭಲಗ್ನ  :---
ಲಗ್ನಸ್ಥಿತ  ಕುಜನಿಗೆ  ಪರಿಹಾರೋಪಾಯ  :--
1,  ಶುದ್ಧ  ಚಾರಿತ್ರ್ಯ ವಿರಬೇಕು.
2, ದಾನ ರೂಪದಲ್ಲಿ  ಕೊಡುವ ವಸ್ತುಗಳನ್ನು  ಸ್ವೀಕರಿಸಬಾರದು.
3, ಕೆಂಪು ಬಣ್ಣದ  ಕರವಸ್ತ್ರವನ್ನು ಬಳಿಯಲ್ಲಿರಿಸಿಕೊಳ್ಳಬೇಕು.
ಚತುರ್ಥ ಸ್ಥಾನಸ್ಥಿತ ಕುಜನಿಗೆ  ಪರಿಹಾರೋಪಾಯ
1, ಬೆಳ್ಳಿಯ  ಕಡಗದಲ್ಲಿ ತಾಮ್ರದ ಮೊಳೆ ಯನ್ನು ಸೇರಿಸಿ ಧರಿಸಬೇಕು.
2,  ಜೇನುತುಪ್ಪ ಹಾಗೂ  ಸಿಂಧೂರವನ್ನು  ನದಿಯಲ್ಲಿ ಪ್ರವಹಿಸಿಬೇಡಬೇಕು.
3, ಸಹೋದರಿ  ಅಥವಾ  ಪುತ್ರಿಯ  ಸೇವೆ ಮಾಡಬೇಕು.
ಸಪ್ತಮಸ್ಥಿತ  ಕುಜನಿಗೆ  ಪರಿಹಾರೋಪಾಯ :---
1,  ಶುದ್ಧ  ಚಾರಿತ್ರ್ಯ ವಿರಬೇಕು.
2,  ಪ್ರತಿದಿನ  ಸುಂದರಕಾಂಡ  ಪಠಿಸಬೇಕು.
3,  ಹವಳದ  ಉಂಗುರ  ಧರಿಸಬೇಕು.
ಅಷ್ಟಮಭಾವ ಸ್ಥಿತ ಕುಜನಿಗೆ  ಪರಿಹಾರೋಪಾಯ :--
1,  ದಕ್ಷಿಣದ ದ್ವಾರದ ಮನೆಯಲ್ಲಿ  ವಾಸಿಸಬಾರದು.
2,  ಮಾಂಸಾಹಾರ  ಮತ್ತು  ಮದ್ಯಪಾನ  ಸೇವಿಸಲೇ ಬಾರದು.
3,  ವಿಧವೆಯರಿಗೆ  ಗೌರವಿಸಿ  ಪಾಲನೆ , ಪೋಷಣೆ  ಮಾಡಬೇಕು.
ದ್ವಾದಶಸ್ಥಿತ  ಕುಜನಿಗೆ  ಪರಿಹಾರೋಪಾಯ:---
1, ಸಿಹಿ ಭೋಜನವನ್ನು  ಅನ್ಯರಿಗೂ  ಮಾಡಿಸಿ  ತಾನೂ  ಸೇವಿಸಬೇಕು.
2,  ಹಿರಿಯ ಸಹೋದರನ ಕೈಯಿಂದ  ಹಾಲು  ಸೇವಿಸಬೇಕು.
3,  ಹವಳದ  ಉಂಗುರವನ್ನು  ಧರಿಸಬೇಕು.
          ಮಿಥುನಲಗ್ನ :---
ಲಗ್ನಸ್ಥಿತ  ಕುಜನಿಗೆ  ಪರಿಹಾರೋಪಾಯ  :--
1,  ಹನುಮಂತ  ದೇವರಿಗೆ  ನೈವೇದ್ಯವನ್ನು  ಸಮರ್ಪಿಸಿ ಪ್ರಸಾದವನ್ನು  ಸ್ವೀಕರಿಸಬೇಕು.
2,  ಬೆಳ್ಳಿಯ  ಬಳೆಗೆ  ಕೆಂಪು ವರ್ಣವನ್ನು  ಲೇಪಿಸಿ ,  ಸ್ತ್ರೀಯರು  ಧರಿಸಬೇಕು.
3,  ದಾನವಾಗಿ  ಯಾವುದೇ  ವಸ್ತುವನ್ನು  ಪಡೆಯಬಾರದು.
ಚತುರ್ಥ ಸ್ಥಾನಸ್ಥಿತ ಕುಜನಿಗೆ  ಪರಿಹಾರೋಪಾಯ
1,  ಯಾರನ್ನೂ  ಅವಾಚ್ಯ ಶಬ್ದಗಳಿಂದ  ನಿಂದಿಸಬಾರದು.
2,  ಸಂತಾನಹೀನರು, ಒಕ್ಕಣ್ಣರು, ಕೆಡಕನ್ನುಂಟುಮಾಡುವ  ವ್ಯಕ್ತಿಗಳಿಂದ  ದೂರವಿರಬೇಕು.
3,  ಬೆಳ್ಳಿಯ  ಕಡಗವನ್ನು  ಧರಿಸಬೇಕು.
ಸಪ್ತಮಸ್ಥಿತ  ಕುಜನಿಗೆ  ಪರಿಹಾರೋಪಾಯ :---
1,  ಸಹೋದರನ  ಮಕ್ಕಳ  ಪಾಲನೆ   (ಸೇವೆ ) ಮಾಡಬೇಕು.
2,  ಸಹೋದರಿ  ಅಥವಾ  ಪುತ್ರಿಗೆ  ಪ್ರತಿನಿತ್ಯ  ಸಿಹಿಯನ್ನು  ತಿನ್ನಿಸಬೇಕು.
3, ಇಟ್ಟಿಗೆಯಿಂದ  ಹಸಿಗೋಡೆ ನಿರ್ಮಿಸಿ,  ಮತ್ತೆ  ಕೆಡವಬೇಕು.
ಅಷ್ಟಮ ಸ್ಥಿತ ಕುಜನಿಗೆ  ಪರಿಹಾರೋಪಾಯ:---
1,  ದಕ್ಷಿಣದ ದ್ವಾರದ  ಮನೆಯಲ್ಲಿ  ವಾಸಮಾಡಬಾರದು.
2,  ಯಾರನ್ನೂ  ಬೈಯಬಾರದು.
3, ವಿಧವಾ ಸ್ತ್ರೀಯರ ಸೇವೆ  ಮಾಡಬೇಕು.
ದ್ವಾದಶಸ್ಥಿತ  ಕುಜನಿಗೆ  ಪರಿಹಾರೋಪಾಯ:---
1, ಬೆಳಿಗ್ಗೆ  ಎದ್ದ ತಕ್ಷಣ ಜೇನುತುಪ್ಪದಿಂದ  ಬಾಯಿ  ಸಿಹಿ ಮಾಡಿಕೊಳ್ಳಬೇಕು.
2,  ದೇವಸ್ಥಾನಗಳಲ್ಲಿ  ಸಿಹಿ  ಹಂಚಬೇಕು.
3,  ಸಂತೋಷದ  ಸಂದರ್ಭಗಳಲ್ಲಿ  ಸಿಹಿ  ಹಂಚಬೇಕು.
          ಕಟಕಲಗ್ನ  :---
ಲಗ್ನಸ್ಥಿತ  ಕುಜನಿಗೆ  ಪರಿಹಾರೋಪಾಯ  :--
1,  ಮನೆ  ಹಾಗೂ  ಕಾರ್ಯಾಲಯದಲ್ಲಿ  ಸೇವಕರನ್ನು  ನೇಮಿಸಿಕೊಳ್ಳಬೇಕು.
2,  ಪ್ರತಿನಿತ್ಯ  ಹನುಮಾನ್  ಚಾಲೀಸ  ಪಠಿಸಬೇಕು.
3,  ಹವಳವನ್ನು  ತಾಮ್ರ ಅಥವಾ  ಚಿನ್ನದ  ಉಂಗುರದಲ್ಲಿ  ಧರಿಸಬೇಕು.
ಚತುರ್ಥ ಸ್ಥಾನಸ್ಥಿತ ಕುಜನಿಗೆ  ಪರಿಹಾರೋಪಾಯ :--
1,  ಸಂತಾನ  ಹೀನ  ವ್ಯಕ್ತಿ ಗಳಿಂದ  ಯಾವುದೇ  ದಾನವನ್ನು  ಪಡೆಯಬಾರದು.
2,  ಸಹೋದರಿ  ಅಥವಾ  ಪುತ್ರಿಗೆ  ಪ್ರತಿನಿತ್ಯ  ಸಿಹಿಯನ್ನು  ತಿನ್ನಿಸಬೇಕು.
3, ಇಟ್ಟಿಗೆಯಿಂದ  ಹಸಿಗೋಡೆ ನಿರ್ಮಿಸಿ,  ಮತ್ತೆ  ಕೆಡವಬೇಕು.
ಸಪ್ತಮಸ್ಥಿತ  ಕುಜನಿಗೆ  ಪರಿಹಾರೋಪಾಯ :---
1,  ಬೆಳ್ಳಿ  ಬಳೇಯನ್ನು ಕೆಂಪು  ಬಣ್ಣದಿಂದ  ಅಲಂಕರಿಸಿ  ಸ್ತ್ರೀಯರು  ಧರಿಸಬೇಕು.
2,  ಉತ್ತಮ  ಚಾರಿತ್ರ್ಯ ವಂತರಾಗಿರಬೇಕು.
3,  ಸ್ರ್ತೀ  ಸಂಬಂಧಿಗಳ  ಮನೆಗೆ  ಹೋಗುವಾಗ  ಸಿಹಿ  ತಿನಿಸನ್ನು  ತೆಗೆದುಕೊಂಡು  ಹೋಗಬೇಕು.
ಅಷ್ಟಮ ಸ್ಥಿತ ಕುಜನಿಗೆ  ಪರಿಹಾರೋಪಾಯ:---
1,  ನದಿಯ  ನೀರಿನಲ್ಲಿ ಸಕ್ಕರೆಯನ್ನು  ಪ್ರವಹಿಸಿಬೇಡಬೇಕು.
2, ಬೆಳ್ಳಿ ಉಂಗುರವನ್ನು  ಧರಿಸಬೇಕು.
3, ದಕ್ಷಿಣ ದಿಕ್ಕಿಗೆ  ಬಾಗಿಲಿರುವ ಮನೆಯಲ್ಲಿ  ವಾಸಿಸಬಾರದು.
ದ್ವಾದಶಸ್ಥಿತ  ಕುಜನಿಗೆ  ಪರಿಹಾರೋಪಾಯ:---
1,  ತುಕ್ಕು  ಹಿಡಿದು  ಹಾಳಾದ  ಆಯುಧಗಳನ್ನು  ಮನೆಯಲ್ಲಿ  ಇಟ್ಟುಕೊಳ್ಳಬಾರದು.
2,  ಅತಿಥಿಗಳ  ಭೋಜನಾನಂತರ  ಅವರಿಗೆ ಸೋಂಪು,  ಕಲ್ಲುಸಕ್ಕರೆಯನ್ನು  ಕೊಡಬೇಕು.
3,  ಸಿಹಿಯನ್ನು  ಹಂಚುವುದು  ತುಂಬಿಕ್ಆ  ಶುಭದಾಯಕ.
          ಸಿಂಹಲಗ್ನ  :---
ಲಗ್ನಸ್ಥಿತ  ಕುಜನಿಗೆ  ಪರಿಹಾರೋಪಾಯ  :--
1,  ಆನೆಯ  ದಂತದಿಂದ  ತಯಾರಾದ  ಯಾವುದೇ  ವಸ್ತುಗಳನ್ನು  ಮನೆಯಲ್ಲಿಡಬಾರದು.
2,  ಯಾವುದೇ  ವಸ್ತುಗಳನ್ನು  ದಾನವಾಗಿ  ಪಡೆಯಬಾರದು.
3,  ಶುದ್ಧ  ಚಾರಿತ್ರ್ಯ ವಿರಬೇಕು.
ಚತುರ್ಥ ಸ್ಥಾನಸ್ಥಿತ ಕುಜನಿಗೆ  ಪರಿಹಾರೋಪಾಯ :--
1,  ತಾಯಿ  ಅಥವಾ  ತಾಯಿ  ಸಮನಾದ  ವ್ಯಕ್ತಿಯ  ಸೇವೆ  ಮಾಡಬೇಕು.
2,  ಸಂತಾನವಿಲ್ಲದವರಿಂದ   ಹಣವಾಗಲಿ ,  ಭೂಮಿಯನ್ನಾಗಲೀ  ಪಡೆಯಬಾರದು.
3,  ದಕ್ಷಿಣದ ಬಾಗಿಲಿನ  ಮನೆಯಲ್ಲಿ  ವಾಸಮಾಡಬಾರದು.
ಸಪ್ತಮಭಾವ ಸ್ಥಿತ ಕುಜನಿಗೆ ಪರಿಹಾರೋಪಾಯ :--
1,  ಶುಧ್ಹ ಚಾರಿತ್ರ್ಯವಿರಬೇಕು.
2,  ಮಾಂಸಾಹಾರ  ಹಾಗೂ ಮಧ್ಯಪಾನಗಳಿಂದ .ದೂರವಿರಬೇಕು.
3, ತಾಮ್ರ ಅಥವಾ  ಬಂಗಾರದಲ್ಲಿ  ಹವಳವನ್ನು  ಧರಿಸಬೇಕು.
ಅಷ್ಟಮಭಾವ ಸ್ಥಿತ ಕುಜನಿಗೆ ಪರಿಹಾರೋಪಾಯ :--
1,  ಯಾರಿಗೂ  ಬೈಯಬಾರದು ಹಾಗೂ ಕೆಟ್ಟದ್ದನ್ನು  ಬಯಸಬಾರದು.
2,  ವಿಧವೆಯರನ್ನು ಗೌರವಿಸಿ,  ಪಾಲನೆ  ಪೋಷಣೆ,  ಸೇವೆ  ಮಾಡಬೇಕು.
3,  ಬೆಳ್ಳಿಯ ಕಡಗದಲ್ಲಿ  ತಾಮ್ರದ ಮೊಳೆಯನ್ನು ಕೂಡಿಸಿ  ಧರಿಸಬೇಕು.
ದ್ವಾದಶಭಾವ ಸ್ಥಿತ ಕುಜನಿಗೆ ಪರಿಹಾರೋಪಾಯ :--
1,  ಸಿಹಿತಿನಿಸು ಹಾಗೂ ಸಿಹಿ ಭೋಜನವನ್ನು ಜನರಿಗೆ  ಬಡಿಸಬೇಕು
2,  ಗಾಯತ್ರೀ ಮಂತ್ರಜಪ ಹಾಗೂ ದುರ್ಗಾಮಾತೆಯ ಸ್ತೋತ್ರವನ್ನು ಪಠಿಸಬೇಕು.
3,  ಹನುಮಂತ  ದೇವರಿಗೆ  ನೈವೇದ್ಯ ಅರ್ಪಿಸಿ ಪ್ರಸಾದವನ್ನು ಎಲ್ಲರಿಗೂ  ಹಂಚಬೇಕು.
          ಕನ್ಯಾಲಗ್ನ  ;--
ಲಗ್ನಸ್ಥಿತ  ಕುಜನಿಗೆ  ಪರಿಹಾರೋಪಾಯ  :--
1,  ಆನೆಯ ದಂತದ ಯಾವುದೇ ವಸ್ತುಗಳನ್ನು  ಮನೆಯಲ್ಲಿಡಬಾರದು.
2,  ಹನುಮಾನ್  ಚಾಲೀಸಾ ವನ್ನು ಪ್ರತಿನಿತ್ಯ ತಪ್ಪದೆ ಪಠಿಸಬೇಕು.
3,  ಅಸತ್ಯ ನುಡಿಯಬಾರದು.
ಚತುರ್ಥ ಸ್ಥಾನಸ್ಥಿತ ಕುಜನಿಗೆ  ಪರಿಹಾರೋಪಾಯ :--
1, ನದಿಯ ಜಲದಲ್ಲಿ  ಸಿಂಧೂರ  ಹಾಗೂ  ಜೇನುತುಪ್ಪವನ್ನು  ಪ್ರವಹಿಸಿಬಿಡಬೇಕು.
2,  ಸಂತಾನ ಹೀನ    ವ್ಯಕ್ತಿಯಿಂದ ಯಾವುದೇ  ದಾನವನ್ನು   ಸ್ನೇಕರಿಸIಬಾರದು
3,  ದಕ್ಷಿಣ ದಿಶೆಯ ಮನೆಯಲ್ಲಿ   ವಾಸ
ಮಾಡ ಬಾರದು.
ಸಪ್ತಮ ಸ್ಥಾನಸ್ಥಿತ ಕುಜನಿಗೆ  ಪರಿಹಾರೋಪಾಯ :--
1,  ಶುದ್ಧ  ಚಾರಿತ್ರ್ಯವಿರಬೇಕು.
2,  ಪುತ್ರಿ  ಅಥವಾ  ಸಹೋದರಿಗೆ  ಸಿಹಿಯನ್ನು ತಿನ್ನಿಸಬೇಕು.
3,  ಬೆಳ್ಳಿಯ ಬಳೆಗಳನ್ನು ಕೆಂಪುವರ್ಣದಿಂದ  ಅಲಂಕರಿಸಿ ಸ್ತ್ರೀಯು  ಧರಿಸಬೇಕು.
ಅಷ್ಟಮ ಸ್ಥಾನಸ್ಥಿತ ಕುಜನಿಗೆ  ಪರಿಹಾರೋಪಾಯ :--
1,  ದಕ್ಷಿಣದ ದಿಕ್ಕಿನ ಮನೆಯಲ್ಲಿ  ವಾಸಿಸಬಾರದು.
2,  ಯಾರಿಗೂ  ಬೈಯಬಾರದು ಹಾಗೂ ಕೆಟ್ಟದ್ದನ್ನು  ಬಯಸಬಾರದು.
3,  ವಿಧವೆಯರ  ಸೇವೆ ಮಾಡಿ ಅವರ  ಆಶೀರ್ವಾದ ಪಡೆಯಬೇಕು.
ದ್ವಾದಶಭಾವ ಸ್ಥಿತ ಕುಜನಿಗೆ ಪರಿಹಾರೋಪಾಯ :--
1,   ಮನೆ ಹಾಗೂ ಕಾರ್ಯ ಸ್ಥಾನದಲ್ಲಿ  ಸೇವಕರನ್ನು ನೇಮಿಸಿಕೊಳ್ಳಬೇಕು.
2,  ಆಂಜನೇಯ ದೇವರಿಗೆ ನೈವೇದ್ಯವನ್ನು  ಸಮರ್ಪಿಸಿ  ಎಲ್ಲರಿಗೂ  ವಿತರಿಸಬೇಕು.
3,  ಹಿರಿಯ  ಸೋದರ ನ ಕೈಯಿಂದ  ಹಾಲನ್ನು  ಕುಡಿಯಬೇಕು.
          ತುಲಾಲಗ್ನ. :---
ಲಗ್ನಸ್ಥಿತ  ಕುಜನಿಗೆ  ಪರಿಹಾರೋಪಾಯ  :--
1,  ದಾನದ ರೂಪದಲ್ಲಿ ಆಗಲೀ ,  ಉಚಿತವಾಗಿ ಆಗಲೀ ಯಾರಿಂದಲೂ  ಯಾವುದೇ ವಸ್ತುವನ್ನು  ಸ್ವೀಕರಿಸಬಾರದು.
2,  ಸುಳ್ಳನ್ನು ಹೇಳುವುದು  ಹಾಗೂ  ಸುಳ್ಳು ಸಾಕ್ಷಿ ಹೇಳುವುದಾಗಲೀ  ಮಾಡಬಾರದು.
3,  ಆನೆಯ ದಂತದಿಂದ ಮಾಡಿದ ಯಾವುದೇ  ವಸ್ತುಗಳನ್ನು  ಮನೆಯಲ್ಲಿಡಬಾರದು.
ಚತುರ್ಥ ಸ್ಥಾನಸ್ಥಿತ ಕುಜನಿಗೆ  ಪರಿಹಾರೋಪಾಯ :-
1,  ತಾಯಿ  ಅಥವಾ  ತಾಯಿ  ಸಮಾನಳಾದ  ಸ್ತ್ರೀಯರ  ಸೇವೇ  ಮಾಡಬೇಕು.
2,  ಸಂತಾನ ಹೀನ  ವ್ಯಕ್ತಿಯಿಂದ  ಭೂಮಿ  -  ಸಂಪತ್ತನ್ನು  ಪಡೆಯಬಾರದು.
3,  ನದಿಯ ಜಲದಲ್ಲಿ  ಸಿಂಧೂರ  ಹಾಗೂ  ಜೇನುತುಪ್ಪವನ್ನು  ಪ್ರವಹಿಸಿಬೇಡಬೇಕು.
ಸಪ್ತಮ ಸ್ಥಾನಸ್ಥಿತ ಕುಜನಿಗೆ  ಪರಿಹಾರೋಪಾಯ :--
1,  ಮಾಂಸಾಹಾರ,  ಹಾಗೂ  ಮದ್ಯಪಾನವನ್ನು  ವ್ಯರ್ಜಿಸಬೇಕು.
2,  ಪ್ರತಿದಿನ  ಹನುಮಾನ್  ಚಾಲೀಸಾ ಪಠಿಸಬೇಕು.
3, ವ್ಯವಹಾರಗಳು  ಹಾಗೂ  ಚಾರಿತ್ರ್ಯವನ್ನು  ಪವಿತ್ರವಾಗಿಟ್ಟುಕೊಳ್ಳಬೇಕು.
ಅಷ್ಟಮ ಸ್ಥಾನಸ್ಥಿತ ಕುಜನಿಗೆ  ಪರಿಹಾರೋಪಾಯ :--
1,  ಸಂತಾನಹೀನ,  ಒಕ್ಕಣ್ಣಿನ  ಹಾಗೂ  ಕ್ರೂರ ವ್ಯಕ್ತಿ ಗಳಿಂದ  ದೂರವಿರಬೇಕು.
2,   ಸಿಹಿ ತಂದೂರಿ ರೊಟ್ಟಿಯನ್ನು  ನಾಯಿಗೆ  ತಿನ್ನಿಸಬೇಕು.
3,  ವಿಧವೆಯರ ಸೇವೆ ಮಾಡಿ  ಆಶೀರ್ವಾದ ಪಡೆಯಬೇಕು.
ದ್ವಾದಶಭಾವ ಸ್ಥಿತ ಕುಜನಿಗೆ ಪರಿಹಾರೋಪಾಯ :--
1,  ಹಾಲಿನಿಂದ ಮಾಡಿದ ಹಲ್ವಾವನ್ನು  ಸೇವಿಸಬೇಕು ಹಾಗೂ  ಅನ್ಯರಿಗೂ  ತಿನ್ನಿಸಬೇಕು.
2,  ತುಕ್ಕುಹಿಡಿದು   ಹಾಳಾದ  ಆಯುಧಗಳನ್ನು  ಮನೆಯಲ್ಲಿ ಇಡಬಾರದು.
3,  ಗಾಯತ್ರೀ ಮಾತೇ ಹಾಗೂ  ದುರ್ಗಾಮಾತೆಯ  ಸ್ತೋತ್ರವನ್ನು ಪಠಿಸಬೇಕು.
          ವೃಶ್ಚಿಕ ಲಗ್ನ  :---
ಲಗ್ನಸ್ಥಿತ  ಕುಜನಿಗೆ  ಪರಿಹಾರೋಪಾಯ  :--
1,  ಕೆಂಪುವರ್ಣದಿಂದ ಕೂಡಿದ ಕರವಸ್ತ್ರವನ್ನು  ಬಳಿಯಲ್ಲಿ ಇಟ್ಟುಕೊಳ್ಳಬೇಕು.
2,  ಬೆಳ್ಳಿಯ  ಉಂಗುರವನ್ನು  ಧರಿಸಬೇಕು.
3,  ಯಾರಿಂದಲೂ  ದಾನವನ್ನು  ಪಡೆಯಬಾರದು
ಚತುರ್ಥ ಸ್ಥಾನಸ್ಥಿತ ಕುಜನಿಗೆ  ಪರಿಹಾರೋಪಾಯ :-
1,  ಸಂತಾನ ಹೀನ  ವ್ಯಕ್ತಿಗಳ  ಯಾವುದೇ ರೀತಿಯ  ಸಂಪತ್ತನ್ನು  ಖರೀದಿಸಬಾರದು.
2,  ದಕ್ಷಿಣದ ದಿಕ್ಕಿನ  ಬಾಗಿಲಿನ ಮನೆಯಲ್ಲಿ  ವಾಸಮಾಡಬಾರದು.
3,  ಸುಳ್ಳನ್ನು  ನುಡಿಯುವುದಾಗಲೀ  ಬೈಯುವುದಾಗಲೀ  ಮಾಡಬಾರದು.
ಸಪ್ತಮ ಸ್ಥಾನಸ್ಥಿತ ಕುಜನಿಗೆ  ಪರಿಹಾರೋಪಾಯ :--
1,  ಸಹೋದರನ  ಮಕ್ಕಳ  ಪಾಲನೆ  ಮಾಡಬೇಕು.
2,  ಹಸಿ ಇಟ್ಟಿಗೆಯಿಂದ  ಗೋಡೆಯನ್ನು  ನಿರ್ಮಿಸಿ  ಕೆಡವಬೇಕು.
3,  ಶುದ್ಧ  ಚಾರಿತ್ರ್ಯವಿರಬೇಕು.
ಅಷ್ಟಮ ಸ್ಥಾನಸ್ಥಿತ ಕುಜನಿಗೆ  ಪರಿಹಾರೋಪಾಯ :--
1,  ಸಿಹಿ ತಂದೂರಿ ರೊಟ್ಟಿಯನ್ನು  ನಾಯಿಗೆ  ತಿನ್ನಿಸಬೇಕು.
2,  ಬೆಳ್ಳಿಯ ಕಡಗದಲ್ಲಿ ತಾಮ್ರದ  ಮೊಳೆಯನ್ನು ಕೂಡಿಸಿ  ಧರಿಸಬೇಕು.
3,  ಸುಳ್ಳನ್ನು  ನುಡಿಯುವುದಾಗಲೀ  ಬೈಯುವುದಾಗಲೀ  ಮಾಡಬಾರದು.
ದ್ವಾದಶಸ್ಥಿತ  ಕುಜನಿಗೆ  ಪರಿಹಾರೋಪಾಯ:---
1, ಬೆಳಿಗ್ಗೆ  ಎದ್ದ ತಕ್ಷಣ ಜೇನುತುಪ್ಪದಿಂದ  ಬಾಯಿ  ಸಿಹಿ ಮಾಡಿಕೊಳ್ಳಬೇಕು.
2,  ದೇವಸ್ಥಾನಗಳಲ್ಲಿ  ಸಿಹಿ  ಹಂಚಬೇಕು.
3,  ಸಂತೋಷದ  ಸಂದರ್ಭಗಳಲ್ಲಿ  ಸಿಹಿ  ಹಂಚಬೇಕು.
          ಧನುರ್ ಲಗ್ನ. :---
ಲಗ್ನಸ್ಥಿತ  ಕುಜನಿಗೆ  ಪರಿಹಾರೋಪಾಯ  :--
1,  ಆನೆಯ  ದಂತದಿಂದ  ತಯಾರಾದ  ಯಾವುದೇ  ವಸ್ತುಗಳನ್ನು  ಮನೆಯಲ್ಲಿಡಬಾರದು.
2,  ಕೆಂಪುವರ್ಣದಿಂದ ಕೂಡಿದ ಕರವಸ್ತ್ರವನ್ನು  ಬಳಿಯಲ್ಲಿ ಇಟ್ಟುಕೊಳ್ಳಬೇಕು.
3,   ಪ್ರತಿದಿನ  ಹನುಮಾನ್  ಚಾಲೀಸಾ ಪಠಿಸಬೇಕು.
ಚತುರ್ಥ ಸ್ಥಾನಸ್ಥಿತ ಕುಜನಿಗೆ  ಪರಿಹಾರೋಪಾಯ :-
೧,  ಮಂಗನನ್ನು  ಸಾಕಿ  ಅದರ  ಸೇವೆ  ಮಾಡಬೇಕು.
2,  ಮುತ್ತುಗದ ಗಿಡವನ್ನು ಮಕ್ನೆಯಲ್ಲಿ  ಬೆಳೆಸಬಾರದು.
3,  ತಾಯಿ  ಅಥವಾ  ತಾಯಿ  ಸಮಾನಳಾದ  ಸ್ತ್ರೀಯರ  ಸೇವೇ  ಮಾಡಬೇಕು.
ಸಪ್ತಮ ಸ್ಥಾನಸ್ಥಿತ ಕುಜನಿಗೆ  ಪರಿಹಾರೋಪಾಯ :--
1,  ಮಾಂಸಾಹಾರ,  ಹಾಗೂ  ಮದ್ಯಪಾನವನ್ನು  ವ್ಯರ್ಜಿಸಬೇಕು.
2,  ಹಸಿ ಇಟ್ಟಿಗೆಯಿಂದ  ಗೋಡೆಯನ್ನು  ನಿರ್ಮಿಸಿ  ಕೆಡವಬೇಕು.
3,  ಅತ್ತೆ,  ಚಿಕ್ಕಮ್ಮ,  ನಾದಿನಿ  ಇವರಮನೆಗೆ  ಹೋಗುವಾಗ  ಸಿಹಿ  ತಿಂಡಿ ತೆಗೆದುಕೊಂಡು ಹೋಗಬೇಕು.
ಅಷ್ಟಮ ಸ್ಥಾನಸ್ಥಿತ ಕುಜನಿಗೆ  ಪರಿಹಾರೋಪಾಯ :--
1,  ಸಂತಾನ ಹೀನ  ವ್ಯಕ್ತಿ ಯೊಡನೆ  ಸಂಬಂದ ಇರಿಸಿಕೊಳ್ಳಬಾರದು.
2,  ಬೆಳ್ಳಿಯ  ಊಂಗುರವನ್ನು ಧರಿಸಬೇಕು.
3,  ಗಾಯತ್ರಿ. ಮಂತ್ರ ಜಪ  ಮಾಡಬೇಕು.
ದ್ವಾದಶಸ್ಥಿತ  ಕುಜನಿಗೆ  ಪರಿಹಾರೋಪಾಯ:---
1,  ಮಾಂಸಾಹಾರ,  ಹಾಗೂ  ಮದ್ಯಪಾನವನ್ನು  ವ್ಯರ್ಜಿಸಬೇಕು.
2,  ತುಕ್ಕುಹಿಡಿದು   ಹಾಳಾದ  ಆಯುಧಗಳನ್ನು  ಮನೆಯಲ್ಲಿ ಇಡಬಾರದು.
3,  ಪ್ರಾತಃಕಾಲದಲ್ಲಿ  ಎದ್ದ ತಕ್ಷಣ ಜೇನುತುಪ್ಪ ದಿಂದ  ಬಾಯಿಯನ್ನು  ಸಿಹಿ ಗೊಳಿಸಬೇಕು.
          ಮಕರಲಗ್ನ  :---
ಲಗ್ನಸ್ಥಿತ  ಕುಜನಿಗೆ  ಪರಿಹಾರೋಪಾಯ  :--
1,  ತಾಮ್ರ ಅಥವ  ಚಿನ್ನದ ಉಂಗುರದಲ್ಲಿ ಹವಳವನ್ನು ಧರಿಸಬೇಕು.
2, ದಾನ ರೂಪದಲ್ಲಿ  ಕೊಡುವ ವಸ್ತುಗಳನ್ನು  ಸ್ವೀಕರಿಸಬಾರದು.
3,  ತಾಯಿ  ಅಥವಾ  ತಾಯಿ  ಸಮಾನಳಾದ  ಸ್ತ್ರೀಯರ  ಸೇವೇ  ಮಾಡಬೇಕು.
ಚತುರ್ಥ ಸ್ಥಾನಸ್ಥಿತ ಕುಜನಿಗೆ  ಪರಿಹಾರೋಪಾಯ :-
1,  ಮಂಗವನ್ನು  ಸಾಕಬೇಕು, ಅದರ ಸೇವೆ ಮಾಡಬೇಕು.
2, ದಕ್ಷಿಣದ ಬಾಗಿಲಿನ ಮನೆಯಲ್ಲಿ  ವಾಸಮಾಡಬಾರದು.
3,  ಸದಾ  ಸತ್ಯವನ್ನೇ  ನುಡಿಯಬೇಕು.
ಸಪ್ತಮ ಸ್ಥಾನಸ್ಥಿತ ಕುಜನಿಗೆ  ಪರಿಹಾರೋಪಾಯ :--
1,  ಮದ್ಯಪಾನ,  ಮಾಂಸಾಹಾರ ಸೇವನೆ  ಮಾಡಬಾರದು,
2,  ಸಹೋದರಿ ಅಥವಾ  ಪುತ್ರಿಗೆ  ನಿತ್ಯವೂ  ಸಿಹಿ ತಿನ್ನಿಸಬೇಕು.
3,  ಮನೆಗೆ  ಬಂದ  ಅತಿಥಿಗಳಿಗೆ  ಸಿಹಿ ಭೋಜನ ಮಾಡಿಸಬೇಕು.
ಅಷ್ಟಮ ಸ್ಥಾನಸ್ಥಿತ ಕುಜನಿಗೆ  ಪರಿಹಾರೋಪಾಯ :--
1,  ಸಂತಾನಹೀನ,  ಒಕ್ಕಣ್ಣಿನ  ಹಾಗೂ  ಕ್ರೂರ ವ್ಯಕ್ತಿ ಗಳಿಂದ  ದೂರವಿರಬೇಕು.
2, ದಕ್ಷಿಣದ ಬಾಗಿಲಿನ ಮನೆಯಲ್ಲಿ  ವಾಸಮಾಡಬಾರದು
3,  ವಿಧವೆಯರ ಸೇವೆ ಮಾಡಿ  ಆಶೀರ್ವಾದ ಪಡೆಯಬೇಕು.
ದ್ವಾದಶಸ್ಥಿತ  ಕುಜನಿಗೆ  ಪರಿಹಾರೋಪಾಯ:---
1,  ಪ್ರತಿನಿತ್ಯ  ಹನುಮಾನ್  ಚಾಲೀಸಾ ಪಠಿಸಬೇಕು.
2,  ಹಾಲಿನಿಂದ ಮಾಡಿದ ಹಲ್ವಾವನ್ನು  ಬೆರೆಯವರಿಗೂ ತಿನಿಸಿ  ತಾನೂ  ತಿನ್ನಬೇಕು.
3,  ತುಕ್ಕು ಹಿಡಿದ ಆಯುಧಗಳನ್ನು ಮನೆಯಲ್ಲಿ ಇರಿಸಬಾರದು.
           ಕುಂಭ  ಲಗ್ನ  :----
ಲಗ್ನ ಸ್ಥಿತ ಕುಜನಿಗೆ  ಪರಿಹಾರೋಪಾಯ  :---
1, ಆನೆಯ ದಂತದಿಂದ  ಮಾಡಿದ  ಯಾವುದೇ  ವಸ್ತುಗಳನ್ನು  ಮನೆಯಲ್ಲಿಡಬಾರದು.
2,  ಯಾರಿಂದಲೂ  ಯಾವುದೇ ಪದಾರ್ಥಗಳನ್ನು  ಉಚಿತವಾಗಿ  ಪಡೆಯಬಾರದು.
3,  ಆಂಜನೆಯನಿಗೆ ನೈವೇದ್ಯವನ್ನು ಮಾಡಿ  ಪ್ರಸಾದವನ್ನು  ಎಲ್ಲರಿಗೂ ಹಂಚಬೇಕು.
ಚತುರ್ಥ ಸ್ಥಾನಸ್ಥಿತ ಕುಜನಿಗೆ  ಪರಿಹಾರೋಪಾಯ :
1,. ನದಿಯಲ್ಲಿ ಜೇನುತುಪ್ಪ ಹಾಗೂ  ಸಿಂಧೂರ ವನ್ನು  ಪ್ರವಹಿಸಿ ಬಿಡಬೇಕು. 
2, ತಾಯಿಯ ಸೇವೆಯನ್ನು ಮಾಡಬೇಕು  ಅಥವಾ ಮಂಗವನ್ನು  ಸಾಕ ಬೇಕು.
3,  ಬೆಳ್ಳಿಯ ಕಡಗದಲ್ಲಿ  ತಾಮ್ರದ  ಮೊಳೆಯನ್ನು
ಕೂಡಿಸಿ  ಧರಿಸಬೇಕು.
ಸಪ್ತಮ ಸ್ಥಾನಸ್ಥಿತ ಕುಜನಿಗೆ  ಪರಿಹಾರೋಪಾಯ :--
1,  ಸಹೋದರನ  ಸಂತಾನದ ಪಾಲನೆ ಮಾಡಬೇಕು.
2,  ಅತಿಥಿಗಳಿಗೆ  ಸಿಹಿಭೋಜನ ಮಾಡಿಸಬೇಕು.
3, ಶುದ್ಧ ನಡತೆಯಿರಬೇಕು.
ಅಷ್ಟಮ ಸ್ಥಾನಸ್ಥಿತ ಕುಜನಿಗೆ  ಪರಿಹಾರೋಪಾಯ :--
1,  ಸತ್ಯವನ್ನೇ ನುಡಿಯಬೇಕು,  ವಚನಬದ್ಧ ರಾಗಿರಬೇಕು.
2,  ವಿಧವೆಯರ ಸೇವೆ ಮಾಡಿ  ಆಶೀರ್ವಾದ ಪಡೆಯಬೇಕು.
3,  ದಕ್ಷಿಣದ ದಿಕ್ಕಿನ ಮನೆಯ ವಾಸ  ಸಲ್ಲದು.
ದ್ವಾದಶಸ್ಥಿತ  ಕುಜನಿಗೆ  ಪರಿಹಾರೋಪಾಯ:---
1,  ಬೆಳ್ಳಿಯ ಬಳೆಗಳನ್ನು  ಕೆಂಪುವರ್ಣದಿಂದ ಅಲಂಕರಿಸಿ,  ಸ್ತ್ರೀಯರು. ಧರಿಸಬೇಕು.
2,   ಆಂಜನೇಯ ನಿಗೆ ನೈವೇದ್ಯವನ್ನು ಸಮರ್ಪಿಸಿ,  ಪ್ರಸಾದವನ್ನು  ಹಂಚಬೇಕು.
3,   ತುಕ್ಕುಹಿಡುದ  ವಸ್ತುಗಳನ್ನು ಮನೆಯಲ್ಲಿ ಇಡಬಾರದು.
          ಮೀನ ಲಗ್ನ :---
ಲಗ್ನ ಸ್ಥಿತ ಕುಜನಿಗೆ  ಪರಿಹಾರೋಪಾಯ  :---
1,  ಕೆಂಪು  ಬಣ್ಣದ  ಕರವಸ್ತ್ರವನ್ನು  ಸದಾ  ಬಳಿಯಲ್ಲಿ ಇರಿಸಿಕೊಳ್ಲ ಬೇಕು.
2,  ಯಾರಿಂದಲೂ  ಯಾವುದೇ ಪದಾರ್ಥಗಳನ್ನು  ಉಚಿತವಾಗಿ  ಪಡೆಯಬಾರದು.
3,  ಮನೆ ಮತ್ತು  ಕಾರ್ಯಾಲಯದಲ್ಲಿ   ಸೇವಕರನ್ನು  ನೇಮಿಸಿಕೊಳ್ಳಬೇಕು.
ಚತುರ್ಥ ಸ್ಥಾನಸ್ಥಿತ ಕುಜನಿಗೆ  ಪರಿಹಾರೋಪಾಯ :
1,  ಮಂಗವನ್ನು  ಸಾಕಬೇಕು ಹಾಗೂ  ಅದರ  ಸೇವೆ ಮಾಡಬೇಕು.
2,  ತಾಯಿಯ ಸೇವೆ ಮಾಡಬೇಕು.
3,  ಯಾರನ್ನೂ  ಬೈಯಬಾರದು.
ಸಪ್ತಮ ಸ್ಥಾನಸ್ಥಿತ ಕುಜನಿಗೆ  ಪರಿಹಾರೋಪಾಯ :--
1,  ಮದ್ಯಪಾನ.. ಮಾಂಸಾಹಾರ  ಸೇವನೆ  ಮಾಡಲೇಬಾರದು.
2,  ಹಸಿ ಇಟ್ಟಿಗೆಯಿಂದ  ಗೋಡೆಯನ್ನು  ಕಟ್ಟಿ  ಕೆಡವಬೇಕು.
3,  ಬೆಳ್ಳಿಯ ಬಳೆಗಳನ್ನು  ಸ್ತ್ರೀಯರು  ಧರಿಸಬೇಕು.
ಅಷ್ಟಮ ಸ್ಥಾನಸ್ಥಿತ ಕುಜನಿಗೆ  ಪರಿಹಾರೋಪಾಯ :--
1,  ಬಂಗಾರದ ಉಂಗುರದಲ್ಲಿ  ಹವಳವನ್ನು  ಧರಿಸಬೇಕು.
2,  ಸಿಹಿ ತಂದೂರಿ  ರೊಟ್ಟಿಯನ್ನು  ನಾಯಿಗೆ  ತಿನ್ನಿಸಬೇಕು.
3,  ವಿಧವೆಯರ ಸೇವೆ ಮಾಡಿ ಆಶೀರ್ವಾದ ಪಡೆಯಬೇಕು.
ದ್ವಾದಶಸ್ಥಿತ  ಕುಜನಿಗೆ  ಪರಿಹಾರೋಪಾಯ:---
1,  ಪ್ರತಿನಿತ್ಯ  ಏಳುತ್ತಿದ್ದಂತೆಯೇ ಜೇನುತುಪ್ಪದಿಂದ  ಬಾಯಿಯನ್ನು  ಸಿಹಿಗೊಳಿಸಬೇಕು.
2,  ಹಾಲಿನಿಂದ ಮಾಡಿದ  ಹಲ್ವಾ ಸೇವನೆ ಮಾಡಬೇಕು  ಹಾಗೂ  ಬೇರೆಯವರಿಗೂ  ಹಂಚಬೇಕು.
3,  ಹನುಮಂತ ನಿಗೆ  ಸಿಂಧೂರವರ್ಣದ  ರವಿಕೆ  ಬಟ್ಟೆಯನ್ನು  ಅರ್ಪಿಸಬೇಕು.
           ಒಟ್ಟಿನಲ್ಲಿ..    ಯಾವುದೇ ಲಗ್ನವಾಗಲೀ... ಕುಜನು   ಯಾವುದೇ  ಭಾವದಲ್ಲಿರಲಿ ( 1, 2, 4, 5, 7, 8, 12 )   ಜಾತಕರು   ಪರಿಶುದ್ಧರಾಗಿರಬೇಕು,  ಸ್ರ್ತೀಯರನ್ನು  ಶುದ್ಧ ಭಾವದಿಂದ  ತಾಯಿಯಂತೆ  ನೋಡಬೇಕು,  ತಾಯಿಯ  ಸೇವೆ  ಮಾಡಬೇಕು,  ಮಾಂಸಾಹಾರ,  ಮದ್ಯಪಾನ  ವ್ಯರ್ಜಿಸಬೇಕು,  ಸಹೋದರ ರನ್ನು,  ಸಹೋದರಿಯರನ್ನು, ಹಾಗೂ  ಅವರ ಮಕ್ಕಳನ್ನು  ಪ್ರೀತಿ ವಿಶ್ವಾಸದಿಂದ  ನೋಡಬೇಕು,  ಸತ್ಯ ವಂತರಾಗಿರಬೇಕು,  ಯಾರಿಗೂ  ಅನ್ಯಾಯ ಮಾಡುವುದಾಗಲೀ,  ಬೇರೆಯವರ  ಸಂಪತ್ತಿನ ಅಪವ್ಯಯ ಮಾಡುವುದಾಗಲೀ  ಮಾಡಬಾರದು... ಎಂಬುದು  ಲಾಲ್ ಕಿತಾಬ್ ನಲ್ಲಿ  ಉಲ್ಲೇಖಿತವಾಗಿದೆ.
        ✍  ಡಾ || B. N.  ಶೈಲಜಾ  ರಮೇಶ್...

4 comments: