Thursday, 24 May 2018

ಒಗಟುಗಳಲ್ಲಿ ನವಗ್ರಹಗಳು

                             ಹರಿಃ  ಓಂ
               ಶ್ರೀ ಮಹಾಗಣಪತಯೇ ನಮಃ
                   ಶ್ರೀ ಗುರುಭ್ಯೋನಮಃ

ಒಗಟುಗಳಲ್ಲಿ  ನವಗ್ರಹಗಳು  :---




ಹೇಳಿ... ನಾನ್ಯಾರು..??
********************
ನಾ ರಾಜ ನಾ ತಂದೆ
ನಾ ನಿನ್ನ ಆತ್ಮ
ನಾ ಒಲಿಯೇ ನಿನಗೀವೆ
ಉನ್ನತ ಸ್ಥಾನ
ನಾ ಜ್ಞಾನಿ  ನಾ  ಗ್ರೀಷ್ಮ
ನಾ ನಿನ್ನ ನೇತ್ರ
ನಾ ಒಲಿಯೇ.. ಧಾರಾಳಿ
ನೀ ಗೌರವಕೆ ಪಾತ್ರ
ನಾ ಧೀರ, ನಾ  ಶೂರ
ನಾ ಧೈರ್ಯವಂತ
ಗಂಭೀರ ನಡೆ
ನೋಟ ಆಕಾಶದೆಡೆ,
ನಾನೀವೆ  ಉತ್ಸಾಹ  ಧರ್ಮಕಾರ್ಯಗಳತ್ತ
ನಾನೆಲ್ಲರಿಗೂ ಕೇಂದ್ರಬಿಂದು
ಪೂರ್ವಮುಖಿ ನಾನು
ಎಲ್ಲರಿಹರು ಸುತ್ತುವರೆದು
ಲಗಾಮಿಹುದೆನ್ನಲಿ ಗೊತ್ತೇನು.?
ನಾನಿಲ್ಲದಿರೆ ಜಗವೇ ಮಂಕು
ಜಗಜನರ ಉತ್ಸಾಹಕೆ ನಾನಿರಬೇಕು
ಶ್ರೀ ಹರಿಯ ಒಲುಮೆಯಲಿ
ಸತ್ತು ಬದುಕಿದ ನಾನು
ದಿನದಿನವೂ  ಆಯುಷ್ಯ
ಕಿತ್ತು ನಡೆವವನು
ನಾನೆಲ್ಲರ ಹೃದಯಾಧೀಶ
ನೆನೆದೊಡನೆ ಹರಿವುದು ಕ್ಲೇಶ
ನಿನ್ನ ನೋಡಲು ದಿನವೂ ನಾ ಬರುವೆ
ನಾ ಯಾರೆಂದು ಹೇಳು ನೀ ಮಗುವೇ
ಸರಿಯಾಗಿ  ಹೇಳಿದರೆ
ಹರಸುತಲಿ ಕಾಯ್ವೆ
ಆರೋಗ್ಯ ಜ್ಞಾನದ ಬೆಳಕ
ದಾಯಪಾಲಿಸುವೆ
ಶ್ರೀ ಶೈಲನಾಥನ ದಯದಿಂದ
ಸಕಲ ಸನ್ಮಂಗಳವ ನಾ ನೀಡುವೆ...
           
                               ನೀ  ಮಾರ್ತಾಂಡ
                               ನೀ ಭಾಸ್ಕರ
                               ಪ್ರತಿದಿನವೂ ಉದಿಸುವೆ
                               ನಮಗೋಸ್ಕರ
                               ಆರೋಗ್ಯ ಪ್ರದಾತ
                               ಗ್ರಹಣಾಮಾದಿರಾದಿತ್ಯ
                               ಸಂಜ್ಞಾ ಛಾಯಾವಲ್ಲಭ
                               ಶ್ರೀ ವಿಷ್ಣು ಪ್ರಭಾವ
                               ಸಿಂಹರಾಷ್ಯಾಧೀಶ
                               ಗ್ರಹನಾಯಕ
                               ಶ್ರೀಶೈಲ ನಾಥನನುಗ್ರಹದ
                               ಬಲದಿ ಪರಿಹರಿಸು
                               ಸಕಲದೋಷ ಪ್ರಭೇಬೀರು
                               ಬಾಳಲ್ಲಿ ಓ.. ದಿವಾಕರಾ....
                                
              

ಹೇಳಿ  ನಾನ್ಯಾರು ??
******************
ನಾ ಶೀತಲ ನಾ ಮೋಹಕ
ಅಚ್ಚ ಶ್ವೇತ ವರ್ಣ..
ನಾ ಸೌಮ್ಯ ಸತ್ವವಂತ
ಮನವು ಚಂಚಲವಣ್ಣ..
ಆಕರ್ಷಕ ಸಿಹಿಮಾತಿನ
ಮಾತೃ ಹೃದಯದವನು
ನಾ ಒಲಿದರೆ ನೀ ದಯಾಮಯ
ಹಾಸ್ಯಪ್ರವೃತ್ತಿಯುಳ್ಳವನು
ನಾನೂ  ಕೂಡ  ಆಗಸಕೆ ಕಣ್ಣು
ಏರಿಳಿತವುಳ್ಳವನು
ಮನಸ್ಸಿದ್ದರೆ ನಿರ್ಮಲ
ಯಶಸ್ಸನ್ನೀಯುವವನು
ನಾನಿಲ್ಲದಿರೆ ಜಗತ್ತೇ ಶೂನ್ಯ
ಮನುಜಕುಲಕೆ  ಬ್ರಾಂತಿ
ನಾನೊಲಿಯೆ ಜೀವಿಗೆ ಪೋಷಣೆ
ನೀಡುವೆ ಮನಃಶಾಂತಿ
ಪ್ರೀತಿ ಪ್ರೇಮ ಪ್ರಣಯ
ಲೀಲೆಗಳಿಗೆ ನಾನೇ ಕಾರಣ
27 ಪತ್ನಿಯರ ಪತಿ ನಾನು
ಇದೆ ಅದಕೆ ಸಕಾರಣ
ನಾ ಕ್ಷೀಣಿಸಲು ಅಮೃತವಿಲ್ಲ
ದೇವತೆಗಳಿಗೆ ಕಷ್ಟವಂತೆ
ಸಾಗರದಿ ಆವಿರ್ಭವಿಸಿದವ
ಸರ್ವರಿಗೂ  ಇಷ್ಟವಂತೆ
ಕ್ಷೀಣನಾದೊಡೆ ಬಲವಿಲ್ಲ
ವೃದ್ಧಿಯಲಿ ಪ್ರವರ್ಧಮಾನ
ನಾ ಒಲಿಯೇ ವರವೀವೆ
ಮನವು ಉತ್ತಮೊತ್ತಮ
ಹೇಳು ನೀ ನಾ ಯಾರೆಂದು
ಕೊಡುವೆ ಅಮೃತದ ಬಿಂದು
ಆರೋಗ್ಯ ಸ್ಥಿರ ಮನಸು
ನೀಡಿ ಹರಸುವೆ ಎಂದೆಂದೂ
ಶ್ರೀ ಶೈಲನಾಥನ ದಯದಿಂದ
ಸಕಲ ಸೌಭಾಗ್ಯಗಳು ನಿನಗಿರಲಿ ಎಂದೂ....
               
                      
                             ನೀ ನೀಡುವೆ ಯಶಸ್ಸು
                             ನಿರ್ಮಲ ಮನಸ್ಸು
                             ಸೌಮ್ಯ ಸ್ವಭಾವದ ಸುಂದರ
                             ನೀ  ಬಾನ ಚಂದಿರ
                             ಅತ್ರಿನೇತ್ರ ಸಂಭೂತ
                             ರೋಹಿಣೀ ಪ್ರಿಯ
                             ಇಂದು.ಶೀತಲ ನೀ
                             ಕುಮುದಬಾಂಧವ
                             ಮಾತೃಸುಖವನೀವ
                             ಶಂಭೋರ್ಮುಕುಟ ಭೂಷಣ
                             ಕ್ಷೀರೋರ್ದಾರ್ಣವ ಸಂಭೂತ
                             ಹೇ ಚಂದ್ರಮಾ
                             ಶ್ರೀಶೈಲನಾಥನ
                             ಅನುಗ್ರಹದಿಕಾಯೋ
                             ಕಟಕರಾಷ್ಯಾಧೀಶ
                             ಚಂಚಲ ಚಿತ್ತ..

                           
             

ಹೇಳಿ .. ನಾನ್ಯಾರು ??
*******************
ನಾ  ಅವನಿಜ... ಆದರೂ
ಸಹನೆಯಿಲ್ಲ ಸಿಡುಕಿನವ
ರುಧಿರ ವರ್ಣ ನನ್ನದು
ಕಲಹಪ್ರಿಯನು..
ನನ್ನ  ದೃಷ್ಟಿಯದು ಕ್ರೂರ
ಹೋರಾಟವೇನಗಿಷ್ಟ, ನಾ ಧೀರ ಯೋಧ
ಸಸ್ಯಾದಿಪ ನಾನು ಅರಣ್ಯಾಧಿಪತಿಯು
ಪಾಕಶಾಸ್ತ್ರ ಪ್ರವೀಣನೂ ಹೌದು
ಸ್ವಚ್ಛ ಉಚ್ಚಾರಕನು
ದೇಶ ಸೇವೆಯೇ ಧ್ಯೇಯ
ಭೂಮಿಗಧಿಪತಿ ನಾನೇ
ನಾ ಮುನಿಯೇ  ಸ್ಪೋಟಗಳು
ಭೂಮಿ ಬಿರಿಯುವುದು
ದ್ವೇಷಾಸೂಯೆಯ ಅಹಂಕಾರದಿ
ಜಗ  ಹೊತ್ತಿ ಉರಿವುದು
ಭಯೋತ್ಪಾದನೆ ಆಕ್ರಮಣ
ಉರಿಬೆಂಕಿ ನಾನೇ
ಅನೈತಿಕತೆಯ ಬಲೆಯಲ್ಲಿ
ಬೀಳಿಸುವವ  ನಾನೇ
ಪಂಚಭೂತಾತ್ಮಗಳಿಗೆ ನಾನೇ ಅಧಿಪ
ಸರ್ವ ಮಂಗಳ ಮಾಂಗಲ್ಯ ಸ್ವರೂಪ
ಶುಭನಾದರೆ ನಾ ಯಂತ್ರ ಮಂತ್ರ ಸಿದ್ಧಿ
ಸುಂದರ ಸಂಸಾರ ನೈತಿಕತೆಯಲಿ ಬುದ್ಧಿ
ನಾನೊಲಿಯೇ ದೃಢಶಕ್ತಿ ಧೈರ್ಯವನೀವೆ
ಸಂಸಾರ ಸುಖವಿತ್ತು ಸೋದರರ ಕಾಯ್ವೆ
ಹೇಳು ನೀ ನಾನ್ಯಾರೆಂದು
ಕೀರ್ತಿಯನ್ನು ಕೊಡುವೆ
ಶ್ರೀ ಶೈಲನಾಥನ ದಯೆಯಿಂದ
ಸನ್ಮಂಗಳವಿತ್ತು ಕಾಯ್ವೆ....
                               ಅಡಿಗಡಿಗೆ ಕುದಿದು,
                               ಉರಿಗಣ್ಣಿಂದಳೆದು
                               ಕೋಪಾಗ್ನಿಯಲಿ ಕೊಂದು
                               ದೇವಸೇನಾನಿಯಾದೆ
                               ಪಂಚಭೂತಗಳಿಗಧಿಪ
                               ಹೇ ಭೂಮಿಸುತ
                               ಮಹಾತೇಜ  ಅತಿ
                               ಭಯಂಕರ ರೂಪ
                               ಮೇಶವೃಶ್ಚಿಕಾಧೀಶ
                               ಹೇ ಅವನಿಜ
                               ನೀ  ಅಂಗಾರಕ ಕುಜ
                               ಮಂಗಳ  ಭೌಮ
                               ಇರಲೆಮ್ಮ ಮೇಲೇ
                               ಶ್ರೀ ಶೈಲನಾಥನ ಪ್ರೇಮ
                           
               

ಹೇಳಿ.... ನಾನ್ಯಾರು .?
*******************
ನಾ ಕಿರಿಯ ನಾ ಚತುರ
ಸೌಮ್ಯ ಸ್ವಭಾವದವನು
ಶಕ್ತಿಪೀತ ರಥದಲ್ಲಿ
ವಿರಾಜಿಸುತ್ತಿರುವವನು
ಭೂತತ್ವಾಧಿಪತಿಯು ನಾ
ಜ್ಯೋತಿಷ್ಯಾಸ್ತ್ರ  ಬಲ್ಲವನು
ನಿಪುಣ ಚತುರ  ವಿವೇಕಿ
ನಾ ವಿನೋದ ಹಾಸ್ಯ ಪ್ರಿಯನು
ಚಿಗುರು ದೂರ್ವಾದಳ ಸಮದ ವರ್ಣ
ಹಾಸ್ಯಪ್ರಜ್ಞೆ ಯುಳ್ಳವನು
ದೋಷತ್ರಯದಧಿಪತಿಯು ನಾ
ತಾಯಿಯ ಕಡೆಯ  ಬಂಧು
ವ್ಯಾಪಾರ - ವ್ಯವಹಾರದಲ್ಲಿ
ನಾ ಒಂದು ಹೆಜ್ಜೆ ಮುಂದು
ರಾಜಸ ಗುಣದವನು ನಾ
ಬಹುವೇಷಧಾರಿ...
ನಾಟ್ಯಶಾಲೆ, ಉದ್ಯಾನಗಳಲಿ
ನಡೆ, ಗ್ರಾಮ ಸಂಚಾರಿ..
ಧರ್ಮ ಸಮ್ಮತವಾದ ನಡೆ ಇಷ್ಟ
ನಾ ಒಲಿಯದಿರೆ.ಕಷ್ಟ
ನಾ ಮುನಿಯೇ ಅಲ್ಲೋಲ ಕಲ್ಲೋಲ
ಮನಸ್ಸಿನಾಳದಲ್ಲಿ
ದಿಕ್ಕು ಕಾಣದೆ ಮುಳುಗಿ ಹೋದೀರಿ
ನೀವು ನಿತ್ಯ ವ್ಯವಹಾರದಲ್ಲಿ
ಮಧ್ಯಸ್ಥಿಕೆ ಗೂ ನಾನಿರಬೇಕು
ಮಾಧ್ಯಮ ಸಂಪರ್ಕ ಸಾಧಕನು
ಅಸಾಧಾರಣ ಭೌದ್ಧಿಕತೆಯ ರೂಪ
ನಾ ಒಲಿಯೇ ನೀಡುವೆನು
ಕಾರ್ಯಕಾರಣ ಬುದ್ಧಿ
ಚಮತ್ಕಾರ ನೀಡುವೆನು
ಕರಕುಶಲ ಬಂಧು ಮಿತ್ರ
ವಿದ್ಯಾವಿನಯ ಕೊಡುವೆನು
ನಾ ಒಲಿಯಲಿಹುದು
ವಾಕ್ಚಾತುರ್ಯ ಬಲವು
ಉನ್ನತ ವಿದ್ಯಾಭ್ಯಾಸ
ಮಾಯಾಜಾಲವು
ಹಸಿರಿರುವಲ್ಲಿ ಉಸಿರಾಗಿಹೆ ನಾ
ನೆಡು ಹಸಿರು ಗಿಡಗಳನು
ಹರಸಿ ಹಾರೈಸಿ ನಿಮ್ಮ
ಬಾಳ ಹಸಿರಾಗಿಸುವೆನು
ನಾನ್ಯಾರೆಂದು ಹೇಳು ನೀ
ವಿಚಾರ ಪರ ಮಾತಿನಲಿ
ಶ್ರೀ ಶೈಲನಾಥನ ದಯೆ ಇರಲಿ
ವಿಮರ್ಶಾತ್ಮಕ ಗುಣ ಬರಲಿ
                                ಹೇ ಸುಧಾಂಶುತನಯ
                                ನೀ ಪ್ರಜ್ಞಾವಂತನು
                                ಮಾತಿನಲಿ ಚಾತುರ್ಯ
                                ನೀ ಇಳಾಪ್ರಿಯನು
                                ಹುಟ್ಟಿನಿಂದಲೇ.ಚತುರ
                                ಅಪ್ರತಿಮ ಭೌದ್ಧಿಕ ರೂಪ
                                ಯುಕ್ತಿ ಚಮತ್ಕಾರಗಳನೀವ
                                ಶ್ರೀ ಮಹಾವಿಷ್ಣು ಸ್ವರೂಪ
                                ಮಿಥುನ ಕನ್ಯಾದೀಶ
                                ಹೇ.ಚಂದ್ರ ಪುತ್ರ
                                ಪಚ್ಚೆವರ್ಣದ. ಚೆಲುವ
   .                            ಹೇ.. ಬುಧದೇವ
                                ಶ್ರೀಶೈಲನಾಥನ ದಯವಿರಲಿ
                                ಪ್ರಖರ ಬುದ್ಧಿಯು ಒಲಿದು ಬರಲಿ
                               
                         

ಹೇಳಿ... ನಾನ್ಯಾರು ???
********************
ನಾ  ಆಧ್ಯಾತ್ಮಿಕತೆಯ  ಪ್ರತೀಕ
ಧಾರ್ಮಿಕ ಪ್ರವರ್ತಕ
ಮೃದು ಭಾವದ ಮನಸು
ಅಧರ್ಮದಲಿ ಮುನಿಸು
ಉನ್ನತ ಸಂಸ್ಕಾರ ವಂತ
ನಾ  ವೇದ ಪಂಡಿತ
ಮಂತ್ರ ದ್ರಷ್ಟ್ರಾರನೂ ನಾನೇ
ಬ್ರಹ್ಮಜ್ಞಾನ ಉಳ್ಳವನು
ಸ್ಮೃತಿ ಶಾಸ್ತ್ರ ವೇದಪುರಾಣಗಳಿಗೆ
ನಾನೇ ಅಧಿಪತಿಯು
ಬಂಗಾರದಂತ ಮನಸ್ಸಿನವ
ಅದರದೇ ಬಣ್ಣ
ಶುಭಕರ್ಮಗಳಲಿ ಆಸ್ಥೆ
ಅಲ್ಲಿಯೇ ನಿಲ್ಲುವ ವ್ಯವಸ್ಥೆ
ಸುರರ, ಸುರರಂಥ ನಡೆಯವರ
ರಕ್ಷಣೆಯ ಭಾರ ಹೊಣೆ ನನ್ನದೇ
ಶರಣಾಗತರ  ಕಾಯ್ವ ಪ್ರಭೆ ನನ್ನದೇ
ಇಡು ನೀ ನನ್ನಲ್ಲಿ  ಶರಣಾಗತಿ
ನೀಡಿ ಶುಭಮತಿ
ಕರುಣಿಸುವೆ ಉತ್ತಮೊತ್ತಮ ಸಂತತಿ
ನನ್ನ ದಯೆಯಿಂದಲೇ ಆರ್ಥಿಕ ಪ್ರಗತಿ
ನಡೆದು ಉತ್ತಮ ರೀತಿ ಗಳಿಸು ಸದ್ಗತಿ
ನಾ ಮುನಿಯೇ ನೀ  ಅಳಿವೆ
ದುಃಖ ಮಲಿನತೆಯಲಿ ಅಲೆವೆ
ಕಷ್ಟಕೋಟಲೆಗಳ ನಡುವೆ
ಮರುಗಿ ಕೊರಗುವೆ
ದುಸ್ತರ ಬದುಕಲಿ ದಾರಿ ಕಾಣದೆ ತೊಳಲುವೆ
ಎಲ್ಲ ಶುಭಕಾರ್ಯಕ್ಕೆ ನನ್ನ ಬಲವಿರಬೇಕು
ಬದುಕು ನಳನಳಿಸಿ ನಗಲು
ನನ್ನ ಒಲವಿರಬೇಕು
ಹೇಳು ನೀ ನಾನ್ಯಾರೆಂದು
ಹರಸುವೆ ಬಳಿಬಂದು
ಶ್ರೀಶೈಲ ನಾಥನ  ದಯದಿಂದ
ದೈವಾನುಗ್ರಹವಿರಲಿ ಎಂದೂ...
                                 ಗೌರವಾದರಕೆ ಪಾತ್ರ
                                 ನೀ  ಪರಮ ಪವಿತ್ರ
                                 ಜ್ಞಾನ ಸುಖವನೀವ
                                 ಧನ, ಪುತ್ರದಾತ
                                 ತಾರಾಪತ್ನೀ ಸಹಿತ
                                 ಜ್ಯೋತಿಶ್ಯಾಸ್ತ್ರ ಪ್ರದಾತ
                                 ಧನುರ್ಮೀನಾಧಿಪತಿಯೇ
                                 ಹೇ  ದೇವಗುರುವೆ
                                 ಬೃಹತ್ ಬುದ್ಧಿಯ ದಾತ
                                 ಹೇ  ಬೃಹಸ್ಪತಿ
                               ಶ್ರೀಶೈಲನಾಥನನನುಗ್ರಹದಿಂದ
                                ನೀಡೆಮಗೆ ಸಕಲ ಶುಭಮತ
       

                    

: ಹೇಳಿ ...ನಾನ್ಯಾರು???
********************
ನಾ ಮೃದು ಸ್ವಭಾವದ ರಸಿಕ
ಭೋಗಭಾಗ್ಯ ಉಳ್ಳವನು
ಅಚ್ಚ ಶ್ವೇತ ವರ್ಣದ ಚೆಲುವ
ಬಿಳಿದಾವರೆಯ ಮುಖದವನು
ಯಜುರ್ವೇದಾಧಿಪತಿಯು ನಾ
ಸ್ವದೇಶಾಭಿಮಾನ ಉಳ್ಳವನು
ಸಂಗೀತ ಸಾಹಿತ್ಯ ನಾಟ್ಯಅಲಂಕಾರ
ಕವಿತ್ವ ಗುಣವುಳ್ಳವನು
ಹೂವು ಪರಿಮಳ ಗಂಧ
ವಿನೋದ ಲಾಸ್ಯವೇ ಚಂದ
ಶಯ್ಯಾಗೃಹವೆನಗಿಷ್ಟ
ಭೋಗಪ್ರಧಾನ ವಿಷಯಾಸಕ್ತ
ಕಲ್ಯಾಣ ಕಾರಕನೂ  ನಾನೇ
ಸೌಂದರ್ಯೋಪಾಸಕನು
ನಾ ರಕ್ಕಸ ಕುಲಕೆ ಮಿತ್ರ
ಸರಿದಾರಿಯ ತೋರಿಸುವವ
ಸನ್ಮಾರ್ಗಕ್ಕೆಳೆದುತರಲು
ಸಾಕಷ್ಟು ಪ್ರಯತ್ನಿಸುವವ
ಶ್ರೀಶೈಲ ನಾಥನನುಗ್ರಹದಿಂದ
ಸಂಜೀವಿನಿ ವಿದ್ಯೆ ಪಡೆದವ
ಷಂಡರಿಗನುಗ್ರಹಿಸಿದ ದೆಸೆ
ಶ್ರೀಚಕ್ರಾಧಿದೇವತೆಯಿಂದ
ಶಾಪಕ್ಕೊಳಗಾದವ
ಜಗದ ಜೀವಿಗಳು ಹಂಬಲಿಸಿ
ಹಾತೊರೆವ ಪ್ರತಿ ಸುಖದಲ್ಲಿ
ನಾನಡಗಿ ಕುಳಿತಿರುವೆ
ಒಲಿದು ಹಾರೈಸಲು ನಿಮ್ಮ
ದಾಂಪತ್ಯ ಸುಖವಿರಿಸುವೆ
ಸಕಲ ಭೋಗಭಾಗ್ಯಗಳನಿತ್ತು ಹರಸುವೆ
ಕಾಮಕಳತ್ರ ವೀರ್ಯ ಕಾರಕನು ನಾನೇ
ಸಿರಿ ಗೌರವಾದರ ಗೃಹಸೌಖ್ಯ ನೀಡುವವ ನಾನೇ
ನಾ ಮುನಿಯೇ ಜಯವಿಲ್ಲ
ಸಂಸಾರದಲಿ ಮುನಿಸು
ಭೋಗಲಾಲಸೆಗೆ ಮಿತಿಯಿಲ್ಲ
ಅನೈತಿಕತೆಯಲಿ  ಮನಸು
ಮುನಿದು ನಾ ಸಿಡಿದರೆ
ನಿನ್ನ ಅದಃಪತನಕೆ ದಾರಿ
ಒಲಿದು ಹರಸಿದರೆ
ಸಿರಿ ಸೌಭಾಗ್ಯವೀವ ನಾರಿ
ಹೇಳು ನೀ  ನಾನ್ಯಾರೆಂದು
ಸಿರಿದೇವಿ ಹರಸುವಳು ಬಂದು
ಶ್ರೀಶೈಲನಾಥನೊಲವಿರಲಿ
ಭೋಗಭಾಗ್ಯಗಳು ನಿನ್ನನರಸಿ ಬರಲಿ...
  
                                 ಕಾವ್ಯ ಕೋಮಲಮಯ
                                 ವಚನ,  ಮೃದುಹೃದಯ
                                 ಭೋಗಭಾಗ್ಯವನೀವ
                                 ಲಘುಸ್ವಭಾವದವ
                                 ಜ್ಞಾನವೀರ್ಯಕಾರಕ
                                 ನೀ  ಭೋಗಪ್ರಧಾನ ಗ್ರಹ
                                 ಅಸುರ ಗುರುವೇ ನೀ
                                 ಶಸ್ತ್ರಾಸ್ತ್ರ ಕೋವಿದ
                                 ಸಂಗೀತ ನಾಟ್ಯ ಗಾನ
                                 ಸಕಲ ಕಲಾವಿದ
                                 ವೃಷಭತುಲಾಧೀಶ
                                 ಹೇ.ಭಾರ್ಗವಾ
                                 ಶ್ರೀ ಶೈಲನಾಥನನುಗ್ರಹ
                                 ಇರಲಿ ಹೇ ಶುಕ್ರ ದೇವಾ..
                                      
                                    

ಹೇಳಿ...  ನಾನ್ಯಾರು..??
*********************
ಉತ್ತಮ  ಶಿಕ್ಷಕ ನು ನಾ ಪಕ್ಷಪಾತ ವಿಲ್ಲದವನು
ನೀ ನಡೆದ ನಡೆಯಂತೆಯೇ ಫಲಾಫಲವನೀಯುವನು
ವಾಯುತತ್ವ ಪ್ರಧಾನ ಶ್ರಮದಿಂದಲೇ ಜೀವನ
ತಮೋಗುಣದವನು ಸ್ಥಿರಕಾರ್ಯ ತತ್ಪರನು ನಾ
ನಿಧಾನವೇ ಪ್ರಧಾನಗುಣ ಧೀರ್ಘವ್ಯಾಧಿಯ ಜನ್ಯ
ಧರ್ಮಶಾಸ್ತ್ರಾಸಕ್ತನು ನಾ ಉತ್ತಮಕಾರ್ಯಕ್ಕೆ ಮಾನ್ಯ
ಮುನಿಸಿರಲು ಅಲ್ಲೋಲ ಕಲ್ಲೋಲ ಜಗವೇ ನಡುಗುವುದು
ಸಿಕ್ಕರೆನ್ನ ದೃಷ್ಟಿಗೆ ಬದುಕು ದುಸ್ತರವಾಗುವುದು
ಹೆಸರಲೇ ಇಹುದು ನಡುಕ ನಾ ವಯಸ್ಸಾದ ಮುದುಕ
ಅಹಿತಕರ್ಮಕ್ಕೆ ನಾ ಎಂದೂ ದುಃಖಕಾರಕ
ನೈತಿಕತೆಯ ಜರಿದು ಆದರೆ ಪತಿತ
ಆಗುವೆ.ಘೋರ ಶಿಕ್ಷಾರ್ಹ ಅವಸಾನ ಖಚಿತ
ಸುಕೃತ ಫಲವಿಲ್ಲದಿರೆ ನೀ  ಸಾಮಾನ್ಯ ಸೇವಕ
ಧರ್ಮಮಾರ್ಗದೊಳಿರಲು ನ್ಯಾಯಾಸ್ಥಾನಕೆ ಪ್ರೇರಕ
ಮುನಿಯೇ ನಾ ಅದಃಪತನ ಏಳುಬೀಳಿನ ಜೀವನ
ದಾರಿದ್ರ್ಯಾಪಮಾನ ಕಟ್ಟಿಟ್ಟ ಬುತ್ತಿ ಜೀವನವೇ ಅಯೋಮಯ
ಸೃಷ್ಟಿಯ ಸಮತೋಲನಕೆ ಹರನಿಂದ ನಿಯೋಜಿತನಾದವನು
ನ್ಯಾಯಮಾರ್ಗದಿ ನಡೆದು ಅವನ್ಹೆಸರ ಪಡೆದವನು
ಪ್ರಚೋದನೆಯಿಹುದು ನನ್ನದು ಕೆಟ್ಟಕಾರ್ಯಗಳಲ್ಲಿ
ಚಂಚಲೆಯಿತ್ತು ಮನಕೆ ಮುಳುಗಿಸಿ ಬಿಡುವೆ ಆಲಸ್ಯದಲ್ಲಿ
ಅಂಜಿ ಅಳುಕದೆ ದೃತಿಗೆಡದೆ ಮುನ್ನುಗ್ಗುವವರೇನಗಿಷ್ಠ
ನಡೆಯಿರಲು ನಿಸ್ಪೃಹತೆ ಯಲಿ ಹರಿಸುವೆ ಸಕಲ ಸಂಕಷ್ಟ
ಎಣಿಸಿ ಗುಣಿಸಿ ಹಿಂದಿನದನೆಲ್ಲ ಮಾರಣಾಂತಕನಾಗುವವನು
ಕೃತಿಯಂತೆಯೇ ಫಲವೀವ ಆಯುರ್ನಿರ್ಧಾರಕನು
ಮುನಿಸಿಹುದೆನಗೆ ಪಿತನಲ್ಲಿ ನಾನವನ ಕಡುವೈರಿ
ಹರಸಿ ಹಾರೈಸಿ ಹೆಸರಿತ್ತ ಸರ್ವಮಾನ್ಯ ತ್ರಿಪುರಾರಿ
ನಾ ಒಲಿಯೇ ಸಕಲಸುಖಭೋಗ ಹಿರಿತನದ ಜೀವನ
ಹಿರಿಯರ ಪದಸೇವೆಯಲಿಹುದು ಸರ್ವ ಕಷ್ಟ ನಿವಾರಣ
ನಾ ಒಲಿಯೇ ಆಸ್ತಿಕನು ನೀ ಆಧ್ಯಾತ್ಮ ದಲಿ ಪ್ರಗತಿ
ಧಾರ್ಮಿಕತೆ ಯಲಿ  ಮುನ್ನಡೆಯೇ ಕೊಡುವೆ ನಾ  ಪದೋನ್ನತಿ
ಹೇಳು ನೀ  ನಾನ್ಯಾರೆಂದು ದಯೆಯಿರಲಿ ಶ್ರೀ ಶೈಲನಾಥನದು
ನಿಸ್ಪೃಹ ಸೇವಾನಿರತರಿಗೆ ಉತ್ತಮೊತ್ತಮ  ಪದವಿಹುದು
                              ಸಕಲ ಕಾರ್ಯಗಳ ನಿಜ
                              ನಿರೀಕ್ಷಕನು ನೀನು
                              ಮನೋಬಲದ  ಸತ್ವ
                              ಪರೀಕ್ಷಕನು ನೀನು
                              ಕಾಶ್ಯಪಗೋತ್ರ ಸಂಜಾತ
                              ನೀ ಮಾರ್ತಾಂಡ ಸುತ
                              ಜ್ಯೇಷ್ಠಾ ಪತ್ನೀ ಸಮೇತ
                              ಆಯುಃಪ್ರಧಾತ
                              ಪ್ರಾರಬ್ಧದಂತೆ ಫಲವೀವ
                              ಉತ್ತಮ  ಅಧ್ಯಾಪಕ
                              ನಿಸ್ಪೃಹತೆ ಯ ನಡೆಯಿರೆ
                              ಅವ ವಂಶ ಪ್ರದೀಪಕ
                              ತಪ್ಪಿನಡೆದರೆ ಶಿಕ್ಷಿಸುವ
                              ಧರ್ಮದೇವತೆ
                              ಸನ್ಮಾರ್ಗದಲಿ ನಡೆಯಿರೆ
                              ನೀಡುವೆ ಆಧ್ಯಾತ್ಮಿಕತೆ
                              ತನ್ನ ಹೆಸರಿತ್ತು ಪೊರೆದ
                              ಆ ಪರಮೇಶ್ವರ
                              ಶ್ರೀಶೈಲನಾಥನ ದಯೆಯಿರಲಿ
                              ಶ್ರೀ ಶನೈಶ್ಚರ.....

                              
                   

ಹೇಳಿ ..... ನಾನ್ಯಾರು..??
**********************
ಹೂಟ  ಹೂಡುವ ಮಾಟ
ಕುಟಿಲ ಯೋಜನೆಯ ಆಟ
ನೀಡುವೆ ಎಲ್ಲರಿಗೂ ಕಾಟ
ಇದೆನ್ನ  ಪರಿಪಾಠ...!!
ಕೆಡುಕುಂಟುಮಾಡುವ ಕೆಲಸ
ಬದುಕಾಗುವುದು ಅಸ್ತವ್ಯಸ್ತ
ಭೌತಿಕ ರೂಪವೇ ಅಸ್ಪಷ್ಟ
ನಾ ನಶ್ವರತೆಯ ಸಂಕೇತ...!!
ತಂತ್ರ ಕುತಂತ್ರಕೆ ನಾನೆಜಮಾನ
ಅನಿಯಂತ್ರಿತ ಜೀವನಕೆ ಕಾರಣ
ಸುರಳಿ ಸರಪಳಿಗಳ ನೆರಳಿನಾಟದ
ಬವಣೆ ಬದುಕಿಗೆ ಮೂಲ ನಾನೇ...!!
ವಲ್ಮೀಕವೆನ್ನ ಸ್ಥಾನ
ಮೋಡಿ ಗಾರುಡಿ ಸಮ್ಮೋಹನ
ಮಾಯಾ ಮಾಟ ಕೂಟ
ಅಭಿಚಾರದೆಡೆ  ನೋಟ...!!
ನಾ ಒಲಿಯೇ  ಬಲವಿಹುದು
ಚಿತ್ರ - ಛಾಯೆಗಳಲಿ ಒಲವಿಹುದು
ಯಂತ್ರ ತಂತ್ರಗಳ ಸಾರಥ್ಯ
ಕಲೋಪಾಸನೆಗೆ ನಿಮಿತ್ತ...!!
ಭೂಗರ್ಭ ದೊಳಗಣ ಧನ
ಬೃಹತ್ ಬುದ್ಧಿಯ ಮನ
ಅಮೋಘ ಧೈರ್ಯ ಯುಕ್ತಿಬಲ
ನಾನೊಲಿಯೆ ಲೀಲಾಜಾಲ...!!
ಮುನಿದಿರಲು ವಿದ್ವಂಸಕ ಕೃತ್ಯ
ವ್ಯಾಧಿ ಬಾಧೆ ಪ್ರತಿನಿತ್ಯ
ಅಮಂಗಳ ಬೇನೆ ಮೈಲಿ ವಮನ
ವಿಷಪ್ರಾಶನ ಪುತ್ರಹೀನ...!!
ಜಗಚ್ಛಕ್ಷುಗಳೆನ್ನ ವೈರಿ
ಕಾಡಿ ಕಾಡಿಸುವೆ ಬಲು ಕ್ರೂರಿ
ಹಠದಿಂ ಪಡೆದೆ ಸ್ಥಾನಮಾನ
ಸುರರ ದ್ವೇಷ ವಿದಕೆ ಕಾರಣ...!!
ಹೇಳು ನೀ ನಾನ್ಯಾರೆಂದು
ಶ್ರೀಶೈಲನಾಥನರಸಿಯು ಹರಸಿ
ಹಾರೈಸುವಳು ಬಳಿಬಂದು
ಶ್ರೀವಲ್ಲಿನಾಥನ ದಯವಿರಲಿ ಎಂದೂ...!!
                               ಬಾಹುಬಲವೇ ಪ್ರಧಾನ
                               ಮಾಡು ವಿರೋಧ ಶಮನ
                               ಮಹಾಭಯಂಕರ ನೀ
                               ಪೊರೆ ..ಮಾತಾಮಹ
                               ಚಂದ್ರಾದಿತ್ಯರೊಡನೆ ವೈರ
                               ನೀ ಕಾಡಿ ಕಾಡಿಸುವ ಅಸುರ
                               ಸಿಂಹಿಕಾಗರ್ಭಸಂಭೂತ
                               ನೀ ಸಕಲಕಲಾ ಪಾರಂಗತ
                               ಛಾಯಾಗ್ರಹ ನೀನೇ
                               ಹೇ ನಾಗದ್ವಜನೆ
                               ಸರ್ವದೋಷಗಳ ಕ್ಷಯಿಸಿ
                               ನೀಡು ಮಂಗಳವ ಶಿಖೀ
                               ಮಹಾವೀರ ರಾಹು
                               ನೀನೊಲಿದರೆ ಪರಮಸುಖಿ
                               ಶ್ರೀಶೈಲನಾಥನನನುಗ್ರಹದಿ
                               ಕಾಯೋ ಅರ್ಧಕಾಯನೇ
                                         
                     

ಹೇಳಿ....  ನಾನ್ಯಾರು..??
**********************
ಅಸ್ಪಷ್ಟ ಭೌತಿಕ ರೂಪ
ಉರಿಕೆಂಡದಂತ ಕೋಪ
ವಿಷಕಾರುವ  ವಚನ
ಚಿತ್ರಚಿಚಿತ್ರ ವಸನ
ಗೂಢವಿದ್ಯಾಪ್ರವೀಣ
ಮಂತ್ರಶಾಸ್ತ್ರ ಬಲ್ಲವನು ನಾ
ರಜೋಗುಣವೇ ಪ್ರಧಾನ
ಚಿತ್ರಾಂಗ ಧೂಮ್ರವರ್ಣ
ಮಾಯಾಮಾಟ ಅಭಿಚಾರ
ತಂತ್ರಕುತಂತ್ರದ ವಿಚಾರ
ಅನ್ಯಸಂಸ್ಕೃತಿ ಸಂಸ್ಕಾರ
ನೀಚಸಂಗ ಹೀನ  ಆಚಾರ
ಕೃಪೆಯಿರಲು ಜ್ಞಾನವನೀವೆ
ಮೋಕ್ಷಜ್ಞಾನ ಪ್ರಧಾನಿಸುವೆ
ಗಂಗಾಸ್ನಾನ ಪುಣ್ಯಫಲ
ಬ್ರಹ್ಮಜ್ಞಾನ ಅಚಲ
ತಪಸ್ಸಿನೋಳಾಸಕ್ತಿ
ದೈವೀಕತೆ  ಸಂಸಾರ ನಿರಾಸಕ್ತಿ
ಮಹಾ ಮೇಧಾವಿ ವಿದ್ಯಾಪೂರ್ಣ
ಮುನಿದೊಡೆಲ್ಲವೂ ಅಪೂರ್ಣ
ಚಿತ್ತಭ್ರಮೆಯ ಘೋರ
ಮಾಯೆ ಮೋಡಿ ಚೋರ
ಸುಳಿಯೇ ಪ್ರೇಮ ಕಾಮ
ಅದಃಪತನ ನಿರ್ನಾಮ
ಒಲಿದರಿಹುದು ಯೋಗಾಯೋಗ
ಯಾತ್ರಾಫಲ ಯಜ್ಞಯಾಗ
ದೈವಸೇವಾಯೋಗ
ಆಧ್ಯಾತ್ಮಿಕತೆಯ ಪ್ರಭಾವ
ಹೇಳು ನೀ ನಾನ್ಯಾರೆಂದು
ಕೀರ್ತಿ ಪತಾಕೆ ಹಾರಿಸುವೆ ಬಂದು
ಕುಲೋಸ್ಯೋನ್ನತಿಯನೀವೆ
ಮೋಕ್ಷಜ್ಞಾನ ವಿತ್ತು ಕಾಯ್ವೆ
ಶ್ರೀಶೈಲನಾಥನ ಸುತನ
ದಯೆಯಿರಲು ಕಾಯ್ವೆ
ಉದ್ಧರಿಸಿ ಕುಲವನ್ನು
ಸತ್ಸಂತಾನಾಭಿವೃದ್ಧಿಯನೀವೆ..
                                       ರಕ್ತ ಕಾಂತಿಯುಕ್ತ
                                       ಭಯಂಕರ ನೇತ್ರ
                                       ವಸ್ತ್ರವೋ ಚಿತ್ರವಿಚಿತ್ರ
                                       ನಾನಾ ವರ್ಣಯುಕ್ತ
                                       ಸಕಲರಲಿ.ದುರ್ಬಲ
                                       ಹೇ ಧೂಮ್ರವರ್ಣ
                                       ಕ್ರೂರತೆಯ ಪ್ರತೀಕ
                                       ದೇಹವೆಲ್ಲ ವ್ರಣ
                                       ಮಂತ್ರಶಾಸ್ತ್ರ ದಷ್ಟ್ರಾರ
                                       ಮೋಕ್ಷ ಪ್ರದಾತ
                                       ಹರಸಿ ಹಾರೈಸಲು
                                       ಕೀರ್ತಿ ದ್ವಜದ ಸಂಕೇತ
                                       ಗೂಢವಿದ್ಯಾ ಚತುರ
                                       ಹೇ ಪಿತಾಮಹ
                                       ಚಿತ್ರಲೇಖಾ ಸಮೇತ
                                      ಪೀಡಾಂಹರತು ಮೇ ತಮ
                                       ಶ್ರೀಶೈಲನಾಥನ
                                       ಸುತನ ದಯವಿರಲಿ
                                       ಕುಲಸ್ಯೋನ್ನತಿಯ ನೀಡು
                                       ಕೇತುನಿನ್ನನುಗ್ರಹವಿರಲಿ
                                   
                               
🙏🙏🙏
    ನಮೋ ಮಾರ್ತಾಂಡ ನಮೋ ಶಶಧರ 
     ನಮೋ ಭೂಮಿಸುತ ನಮೋ ಸೋಮಾತ್ಮಜ
 ನಮೋ ಗುರುರ್ಗೌರವಾಧೀಶ ನಮೋ ಭಾರ್ಗವ
   ನಮೋ ನೀಲಾಂಬರ ಛಾಯಾಸುತ ನಮೋ ಶನೈಶ್ಚರ 
             ನಮೋ ಸಿಂಹಿಕಾಸೂನು ಧೀರ್ಘಬಾಹವೇ
                       ನಮೋ ಶಿಖೀ ಶತಕೇತವೇ  
     ಭಕ್ತಿಯಲಿ  ಬೇಡುವೆನು ನಿಮ್ಮಲ್ಲಿ ಶುಭಮತಿಯ ನೀಡಿ                                     ಪಾಲಿಸಿರಿ ಎನ್ನ 
                                       🙏🙏
          ✍    ಡಾ||  B. N. ಶೈಲಜಾ ರಮೇಶ್.....

6 comments:

  1. ಜ್ಯೋತಿಷ ಶಾಸ್ತ್ರದಲ್ಲಿ ಹೊಸ ಅವಿಷ್ಕಾರ / ಬೆಳವಣಿಗೆ ಎಂದು ಹೇಳಬಹುದು.ನಿಮ್ಮ ಹೊಸ ಪ್ರಯೋಗಗಳಿಗೆ ಅಭಿನಂದನೆಗಳು.

    ReplyDelete
    Replies
    1. ಧನ್ಯವಾದಗಳು ಸರ್🙏🙏🙏

      Delete