Sunday, 27 September 2026

ಅಷ್ಟಕವರ್ಗ (ಭಾಗ - 3)

                              ಹರಿಃ ಓಂ 
                 ಓಂ ಶ್ರೀ ಗಣಪತಯೇ ನಮಃ 
                    ಓಂ ಶ್ರೀ ಗುರವೇ ನಮಃ 

ಅಷ್ಟಕವರ್ಗ :---
     
      ಹಿಂದಿನ ಲೇಖನದಲ್ಲಿ ಸರ್ವಾಷ್ಟಕ ವರ್ಗ, ತ್ರಿಕೋಣ ಹಾಗೂ ಏಕಾಧಿಪತ್ಯ ಶೋಧನೆಯ ಬಗ್ಗೆ ತಿಳಿದುಕೊಂಡೆವು. 
     ಮುಂದುವರೆದ ಭಾಗವನ್ನು ನೋಡೋಣ...

ಅಷ್ಟಕವರ್ಗ ಮತ್ತು ದಾಂಪತ್ಯ ಹೊಂದಾಣಿಕೆ (Marriage Compatibility)

    ಮದುವೆಯ ಗುಣಮಿಲನ ಮಾಡುವಾಗ ಕೇವಲ ನಕ್ಷತ್ರಗಳನ್ನು ನೋಡುವುದಕ್ಕಿಂತ, ಅಷ್ಟಕವರ್ಗವನ್ನು ನೋಡುವುದು ದಾಂಪತ್ಯ ಯಶಸ್ಸಿಗೆ ತುಂಬಾ ಸಹಕಾರಿ. ನಾವೆಲ್ಲರೂ ಜಾತಕ ಹೊಂದಾಣಿಕೆ ಮಾಡುವಾಗ ಕೇವಲ ಅಷ್ಟಕೂಟ ಕೂಟಗಳನ್ನು (36 ಗುಣಗಳು) ನೋಡುತ್ತೇವೆ. ಮದುವೆ ಹೊಂದಾಣಿಕೆಯಲ್ಲಿ 36 ಗುಣಗಳು ಮ್ಯಾಚ್ ಆದರೂ ಮದುವೆ ಮುರಿದುಬೀಳುವ ಉದಾಹರಣೆಗಳನ್ನು ನಾವು ನೋಡಿದ್ದೇವೆ. ಅದಕ್ಕೆ ಕಾರಣ ಅಷ್ಟಕವರ್ಗದ ಈ ಬಿಂದುಗಳ ರಹಸ್ಯ. 
      ಅಷ್ಟಕವರ್ಗದಲ್ಲಿ ದಂಪತಿಗಳ ಅಥವಾ ಪಾಲುದಾರರ (Business Partners) ನಡುವಿನ ಹೊಂದಾಣಿಕೆಯನ್ನು ಅಳೆಯಲು ಒಂದು ಅದ್ಭುತ  ಸೂತ್ರವಿದೆ. 

ಅದೇನೆಂದರೆ..
      ಜಾತಕದಲ್ಲಿ ಯಾವ ರಾಶಿಯಲ್ಲಿ 30 ಕ್ಕಿಂತ ಹೆಚ್ಚು ಬಿಂದುಗಳು ಇರುತ್ತವೆಯೋ, ಅದೇ ರಾಶಿಯನ್ನು ಜನ್ಮರಾಶಿಯನ್ನಾಗಿ ಹೊಂದಿರುವ ವ್ಯಕ್ತಿಗಳು (ಸ್ನೇಹಿತರು, ಸಂಗಾತಿ ಅಥವಾ ಉದ್ಯೋಗಿ) ನಮ್ಮ ಜೀವನಕ್ಕೆ ಬಂದರೆ, ಅವರು ಸದಾ ಲಾಭ ಮತ್ತು ಅದೃಷ್ಟವನ್ನು ತರುತ್ತಾರೆ.              ವರನ ಜಾತಕದಲ್ಲಿ ಶುಕ್ರ ಗ್ರಹವು ಯಾವ ರಾಶಿಯಲ್ಲಿದೆಯೋ, ವಧುವಿನ ಜಾತಕದ ಸಮುದಾಯ ಅಷ್ಟಕವರ್ಗದಲ್ಲಿ ಅದೇ ರಾಶಿಗೆ ಹೆಚ್ಚು ಬಿಂದುಗಳಿರಬೇಕು. ಹಾಗೆಯೇ ವಧುವಿನ ಜಾತಕದ ಗುರುವಿನ ರಾಶಿಗೆ, ವರನ ಜಾತಕದಲ್ಲಿ ಹೆಚ್ಚು ಬಿಂದುಗಳಿರಬೇಕು. ಹೀಗಿದ್ದರೆ ಆ ದಂಪತಿಗಳ ನಡುವೆ ಪರಸ್ಪರ ಗೌರವ, ಪ್ರೀತಿ ಮತ್ತು ಆಕರ್ಷಣೆ ಜೀವಮಾನವಿಡೀ ಇರುತ್ತದೆ. ವಿವಾಹದಲ್ಲಿ ಹುಡುಗನಿಗೆ ಅತಿ ಹೆಚ್ಚು ಬಿಂದುಗಳಿರುವ ರಾಶಿಯೇ ಹುಡುಗಿಯ ಜನ್ಮರಾಶಿಯಾಗಿದ್ದರೆ, ಆ ದಾಂಪತ್ಯ ನೂರಾರು ವರ್ಷ ಸುಖವಾಗಿರುತ್ತದೆ."
        ಒಂದು ವೇಳೆ ಜಾತಕದ ಯಾವುದಾದರೂ ರಾಶಿಯಲ್ಲಿ 22 ಕ್ಕಿಂತ ಕಡಿಮೆ ಬಿಂದುಗಳು ಇದ್ದರೆ, ಆ ರಾಶಿಯನ್ನು ಜನ್ಮರಾಶಿಯನ್ನಾಗಿ ಹೊಂದಿರುವ ವ್ಯಕ್ತಿಗಳು ಎಷ್ಟೇ ಒಳ್ಳೆಯವರಾಗಿದ್ದರೂ, ಅವರ ಜೊತೆಗಿನ ಒಡನಾಟ ನಷ್ಟ, ಅಪವಾದ ಅಥವಾ ಮಾನಸಿಕ ನೆಮ್ಮದಿ ಭಂಗ ಉಂಟುಮಾಡುತ್ತದೆ

       ಸರಳವಾಗಿ ಹೇಳುವುದಾದರೆ, ಗ್ರಹ ಮೈತ್ರಿ ಮತ್ತು ದಶೆಗಳು ಜಾತಕದ ಹವಾಮಾನ (Weather) ಇದ್ದಂತೆ, ಆದರೆ ಅಷ್ಟಕವರ್ಗವು ಜಾತಕದ ಭೂಮಿಯ ಫಲವತ್ತತೆ (Soil Fertility) ಇದ್ದಂತೆ. ಹವಾಮಾನ ಎಷ್ಟೇ ಚೆನ್ನಾಗಿದ್ದರೂ ಭೂಮಿ ಫಲವತ್ತಾಗಿದ್ದರೆ ಮಾತ್ರ ಬೆಳೆ (ಫಲಿತಾಂಶ) ಚೆನ್ನಾಗಿ ಬರುತ್ತದೆ!

      ಮದುವೆಯ ಕಾಲ: ಶುಕ್ರನ ಶೋಧ್ಯಪಿಂಡದ ಸಂಖ್ಯೆಯನ್ನು ಗುರುವಿನ ಬಿಂದುಗಳಿಂದ ಗುಣಿಸಿ, 27 ರಿಂದ ಭಾಗಿಸಿದಾಗ ಬರುವ ನಕ್ಷತ್ರಕ್ಕೆ ಗೋಚಾರದ ಗುರು ಬಂದಾಗ ವ್ಯಕ್ತಿಯ ವಿವಾಹ ಮಹೋತ್ಸವ ನಡೆಯುತ್ತದೆ.

      ಶುಕ್ರನ ಅಷ್ಟಕವರ್ಗದಲ್ಲಿ ಅತಿ ಹೆಚ್ಚು ಬಿಂದುಗಳನ್ನು ಹೊಂದಿರುವ ರಾಶಿಯು ಯಾವ ಮಾಸವನ್ನು ಪ್ರತಿನಿಧಿಸುವುದೋ ಆ ಮಾಸದಲ್ಲಿ ವಿವಾಹ ಆಗುತ್ತೆ.

    ಕಳತ್ರ ಭಾವ ಮತ್ತು ಸಂಗಾತಿಯ ಗುಣ" 
       ಕೇವಲ ಜಾತಕದ 7 ನೇ ಮನೆಯನ್ನು ನೋಡಿ ಸಂಗಾತಿಯ ಗುಣ ಹೇಳುವುದಕ್ಕಿಂತ, ಅಷ್ಟಕವರ್ಗದಲ್ಲಿ ನಿಖರವಾದ ಸೂತ್ರವಿದೆ.
       ಶುಕ್ರನ ಭಿನ್ನಾಷ್ಟಕವರ್ಗವನ್ನು ನೋಡಿ. ಅದರಲ್ಲಿ 7 ನೇ ಮನೆಯಲ್ಲಿ ಎಷ್ಟು ಬಿಂದುಗಳಿವೆಯೋ ಅಷ್ಟು ಬಿಂದುಗಳನ್ನು ಕೊಟ್ಟ ಗ್ರಹಗಳು ಯಾವುವು, ಆ ಬಿಂದುಗಳನ್ನು ಕೊಟ್ಟ ಗ್ರಹಗಳು ಶುಭ ಗ್ರಹಗಳಾಗಿದ್ದರೆ (ಗುರು, ಬುಧ, ಚಂದ್ರ), ಸಂಗಾತಿಯು ಅತ್ಯಂತ ಸುಂದರ, ಗುಣವಂತ ಮತ್ತು ಧಾರ್ಮಿಕ ಗುಣ ಉಳ್ಳವರಾಗಿರುತ್ತಾರೆ. ಒಂದು ವೇಳೆ ಪಾಪ ಗ್ರಹಗಳು (ಶನಿ, ಮಂಗಳ, ) ಬಿಂದು ಕೊಟ್ಟಿದ್ದರೆ, ಸಂಗಾತಿಯು ಕೋಪಿಷ್ಠ ಅಥವಾ ಕಠಿಣ ಸ್ವಭಾವದವರಾಗಿರುತ್ತಾರೆ.  
        
 "ಪ್ರಥಮ ಗರ್ಭ ಮತ್ತು ಸಂತಾನ ಲಿಂಗ" ನಿರ್ಣಯ:
ಗುರುಗ್ರಹದಿಂದ ಸಂತಾನ ಯೋಗ:--
     ಗುರುವಿನ ಭಿನ್ನಾಷ್ಟಕವರ್ಗದಲ್ಲಿ 5 ನೇ ಮನೆಯನ್ನು (ಸಂತಾನ ಸ್ಥಾನ) ನೋಡಿ. ಆ 5ನೇ ಮನೆಗೆ ಬಿಂದುಗಳನ್ನು ಕೊಟ್ಟ ಗ್ರಹಗಳ ಸಂಖ್ಯೆಯನ್ನು ಲೆಕ್ಕ ಹಾಕಿ.
     ಆ ಮನೆಗೆ ಬಿಂದು ಕೊಟ್ಟ ಗ್ರಹಗಳಲ್ಲಿ ಪುರುಷ ಗ್ರಹಗಳು (ಸೂರ್ಯ, ಮಂಗಳ, ಗುರು) ಹೆಚ್ಚಿದ್ದರೆ, ಮೊದಲ ಸಂತಾನ ಗಂಡು ಮಗುವಾಗುವ ಸಾಧ್ಯತೆ ಶೇ. 8೦ ರಷ್ಟಿರುತ್ತದೆ. ಸ್ತ್ರೀ ಗ್ರಹಗಳು (ಶುಕ್ರ, ಚಂದ್ರ) ಹೆಚ್ಚಿದ್ದರೆ ಹೆಣ್ಣು ಮಗುವಾಗುವ ಯೋಗವಿರುತ್ತದೆ. 
ಇದು ಪ್ರಕೃತಿಯ ನಿಯಮವನ್ನು ಅಷ್ಟಕವರ್ಗ ಹೇಗೆ ಸೂಕ್ಷ್ಮವಾಗಿ ಹಿಡಿದಿಡುತ್ತದೆ ಎಂಬುದಕ್ಕೆ ಸಾಕ್ಷಿ.

        ಗುರುವಿನ ಭಿನ್ನಾಷ್ಟಕವರ್ಗದಲ್ಲಿ 5ನೇ ಮನೆಯಲ್ಲಿ ಕನಿಷ್ಠ 5 ಬಿಂದುಗಳು ಇರಬೇಕು. ಒಂದು ವೇಳೆ ಅಲ್ಲಿ 2 ಅಥವಾ 3 ಬಿಂದುಗಳಿದ್ದರೆ, ಜಾತಕದಲ್ಲಿ ಎಷ್ಟೇ ದೊಡ್ಡ ಪುತ್ರಕಾರಕ ಯೋಗಗಳಿದ್ದರೂ ಸಂತಾನ ಪ್ರಾಪ್ತಿ ತಡವಾಗುತ್ತದೆ ಅಥವಾ ವೈದ್ಯಕೀಯ ನೆರವು ಬೇಕಾಗುತ್ತದೆ.
 ಗುರುಸ್ಥಿತ ರಾಶಿಯಿಂದ ಪಂಚಮದಲ್ಲಿ ಇರುವ ಬಿಂದುಗಳನ್ನು ಗುರುವಿನ ಶೋಧ್ಯಪಿಂಡದಿಂದ ಗುಣಿಸಿ, 27 ರಿಂದ ಭಾಗಿಸಿದಾಗ ಬರುವ ಶೇಷಸಂಖ್ಯೆ ಸೂಚಿಸುವ ನಕ್ಷತ್ರ ಅಥವಾ ಅದರ ತ್ರಿಕೋಣ ನಕ್ಷತ್ರದಲ್ಲಿ ಗುರು ಸಂಚಾರ ಮಾಡುವ ಸಮಯದಲ್ಲಿ ಸಂತಾನ ಪ್ರಾಪ್ತಿ.
 
        ಸಾಮಾನ್ಯವಾಗಿ ಜಾತಕದಲ್ಲಿ 6,8,12 ನೇ ಮನೆಗಳನ್ನು ದುಸ್ಥಾನಗಳು ಅಥವಾ ಕೆಟ್ಟ ಮನೆಗಳು ಎನ್ನಲಾಗುತ್ತದೆ. ಆದರೆ ಸರ್ವಾಷ್ಟಕವರ್ಗದಲ್ಲಿ . ದುಸ್ಥಾನಗಳಲ್ಲಿ ಬಿಂದುಗಳ ಸಂಖ್ಯೆ 18 ರಿಂದ 22 ಕ್ಕಿಂತ ಕಡಿಮೆ ಇದ್ದರೆ, ಆ ಜಾತಕನಿಗೆ ಶತ್ರುಗಳ ಕಾಟ ಇರುವುದಿಲ್ಲ, ರೋಗಗಳು ಬೇಗ ಗುಣವಾಗುತ್ತವೆ ಮತ್ತು ಸಾಲದ ಬಾಧೆ ಇರುವುದಿಲ್ಲ!

         ಸಾಮಾನ್ಯ ಜಾತಕದಲ್ಲಿ ದುಸ್ಥಾನ ಮನೆಗಳು ಬಲವಾದರೆ ಕಷ್ಟ ಹೆಚ್ಚುತ್ತದೆ. ಆದರೆ ಅಷ್ಟಕವರ್ಗದಲ್ಲಿ ಈ ಮನೆಗಳ ಬಿಂದುಗಳು ಕಡಿಮೆಯಾದಷ್ಟೂ ಜಾತಕನಿಗೆ ರಾಜಯೋಗ ಸಿಗುತ್ತದೆ.

​         ದೈನಂದಿನ ಜೀವನ/ಗೋಚಾರ:     
      ಸರ್ವಾಷ್ಟಕವರ್ಗದಲ್ಲಿ 30 ಕ್ಕಿಂತ ಹೆಚ್ಚು ಬಿಂದುವಿರುವ ರಾಶಿಗೆ ಚಂದ್ರ ಅಥವಾ ಲಗ್ನಾಧಿಪತಿ ಬಂದ ದಿನಗಳು ಜಾತಕನಿಗೆ ಅತ್ಯಂತ ಲಾಭದಾಯಕ ಮತ್ತು ಸಂತೋಷದಾಯಕ ದಿನಗಳಾಗಿರುತ್ತವೆ.

     
     ಚಂದ್ರನ ಅಷ್ಟಕವರ್ಗದಲ್ಲಿ ಯಾವ ರಾಶಿಯಲ್ಲಿ ಹೆಚ್ಚು ಬಿಂದುಗಳು ಬರುವುವೋ ಆ ರಾಶಿಯಿಂದ ತಾಯಿಗೆ ಕ್ಷೇಮಕರ.

     ​ ದಿಕ್ಕಿನ ಬಲ: ಕುಂಡಲಿಯಲ್ಲಿ ಪೂರ್ವ , ದಕ್ಷಿಣ  ಪಶ್ಚಿಮ ಮತ್ತು ಉತ್ತರ ರಾಶಿಗಳ ಬಿಂದುಗಳನ್ನು ಕೂಡಿ . ಯಾವ ದಿಕ್ಕಿಗೆ ಅತಿ ಹೆಚ್ಚು ಬಿಂದು ಬರುತ್ತದೆಯೋ, ಜಾತಕನು ಆ ದಿಕ್ಕಿನಲ್ಲಿ ಉದ್ಯೋಗ ಅಥವಾ ವ್ಯಾಪಾರ ಮಾಡಿದರೆ ಅತ್ಯಂತ ವೇಗವಾಗಿ ಭಾಗ್ಯೋದಯವಾಗುತ್ತದೆ.

ಇಂದ್ರ ಧ್ವಜ" ಮತ್ತು "ಮಂಡೂಕ ಗತಿ" (ರಾಶಿಗಳ ಏರಿಳಿತ)
           ಸರ್ವಷ್ಟಕ ಅಥವಾ ಸಮುದಾಯ ಅಷ್ಟಕವರ್ಗದಲ್ಲಿ 12 ಮನೆಗಳ ಬಿಂದುಗಳನ್ನು ಸಾಲಾಗಿ ಬರೆದಾಗ, ಒಂದು ಮನೆಯಿಂದ ಮತ್ತೊಂದು ಮನೆಗೆ ಬಿಂದುಗಳ ಸಂಖ್ಯೆ ಹೇಗೆ ಬದಲಾಗುತ್ತದೆ ಎಂಬುದರ ಮೇಲೆ ಜೀವನದ ಪ್ರಗತಿ ನಿರ್ಧಾರವಾಗುತ್ತದೆ:

      ಆರೋಹಣ (Climbing):1 ನೇ ಮನೆಯಿಂದ ಮುಂದಿನ ಮನೆಗಳಿಗೆ ಹೋದಂತೆ ಬಿಂದುಗಳ ಸಂಖ್ಯೆ ಹೆಚ್ಚುತ್ತಾ ಹೋದರೆ (ಉದಾಹರಣೆಗೆ: 9ನೇ ಮನೆಗಿಂತ 10 ರಲ್ಲಿ, ಹತ್ತನೇ ಮನೆಗಿಂತ 11 ರಲ್ಲಿ ಬಿಂದುಗಳು ಹೆಚ್ಚಿದ್ದರೆ.. ಆ ವ್ಯಕ್ತಿಯ ಜೀವನ ವಯಸ್ಸಾದಂತೆಲ್ಲಾ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮೇಲೇರುತ್ತಾ ಹೋಗುತ್ತದೆ. ಇದನ್ನು 'ಇಂದ್ರ ಧ್ವಜ' ಯೋಗ ಎನ್ನಬಹುದು.

       ಅವರೋಹಣ (Falling):. ಒಂದು ವೇಳೆ 9, 10, ನೇ ಮನೆಗಳಿಗಿಂತ 11 ಮತ್ತು 12 ನೇ ಮನೆಯಲ್ಲಿ ಬಿಂದುಗಳು ದಿಢೀರನೆ ಕುಸಿದರೆ, ಜೀವನದ ಉತ್ತರಾರ್ಧದಲ್ಲಿ ಅಥವಾ ಉದ್ಯೋಗದ ಕೊನೆಯ ದಿನಗಳಲ್ಲಿ ಜಾಗರೂಕರಾಗಿರಬೇಕು.
 
ಭಾಗ್ಯೋದಯ ಯಾವಾಗ?
ದಿನ ವರ್ಷಗಳ ಲೆಕ್ಕಾಚಾರ:
     ಜೀವನದ ಸುವರ್ಣ ಕಾಲ ಅಥವಾ ಅದೃಷ್ಟದ ವಯಸ್ಸು ಯಾವುದು ಎಂಬುದನ್ನು ಅಷ್ಟಕವರ್ಗದ ಮೂಲಕ ಅತ್ಯಂತ ಸುಲಭವಾಗಿ ಕಂಡುಹಿಡಿಯಬಹುದು.
ನಿಯಮ: ಜಾತಕದ ಲಗ್ನದಿಂದ ಆರಂಭಿಸಿ, ಯಾವ ಮನೆಯಲ್ಲಿ ಅತಿ ಹೆಚ್ಚು ಬಿಂದುಗಳಿವೆಯೋ ಆ ಮನೆಯೇ ನಮ್ಮ ಭಾಗ್ಯದ ತಾಣ.

      ಉದಾಹರಣೆ: ಜಾತಕದಲ್ಲಿ 4ನೇ ಮನೆಯಲ್ಲಿ (ಸುಖ/ಮಾತೃ ಸ್ಥಾನ) 28 ಬಿಂದುಗಳಿದ್ದರೆ 4 ನೇ ಮನೆಗೆ ಸಂಬಂಧಿಸಿದ ವಯಸ್ಸಿನಲ್ಲಿ (ಅಂದರೆ ಸುಮಾರು 28 ರಿಂದ 32 ನೇ ವಯಸ್ಸಿನಲ್ಲಿ) ಸ್ವಂತ ಮನೆ, ವಾಹನ ಯೋಗ ಅಥವಾ ವೃತ್ತಿಯಲ್ಲಿ ದೊಡ್ಡ ಯಶಸ್ಸು ಸಿಗುತ್ತದೆ.

      11 ನೇ ಮನೆಯಲ್ಲಿ ಅತಿ ಹೆಚ್ಚು ಬಿಂದುಗಳಿದ್ದರೆ 3೦ರ ಹರೆಯದ ನಂತರ ಅಪಾರ ಧನಲಾಭವಾಗುತ್ತದೆ.

. ಶೋಧ್ಯ ಪಿಂಡ ಮತ್ತು ದಿಕ್ಕಿನ ರಹಸ್ಯ (Direction of Success)
      ಮುಂಚೆ ಹೇಳಿದಂತೆ ತ್ರಿಕೋಣ ಮತ್ತು ಏಕಾಧಿಪತ್ಯ ಶೋಧನೆಗಳ ನಂತರ ನಮಗೆ ಪ್ರತಿಯೊಂದು ಗ್ರಹಕ್ಕೂ ಒಂದು 'ಶೋಧ್ಯ ಪಿಂಡ' ಸಿಗುತ್ತದೆ. ಈ ಶೋಧ್ಯ ಪಿಂಡದ ಸಂಖ್ಯೆಯನ್ನು ಬಳಸಿಕೊಂಡು ಕೆಲವು ವಿಶೇಷ ವಿಷಯಗಳನ್ನು ತಿಳಿಯಬಹುದು:

    ಯಾವ ದಿಕ್ಕಿನಲ್ಲಿ ಅದೃಷ್ಟವಿದೆ?: ಗುರುವಿನ ಭಿನ್ನಾಷ್ಟಕವರ್ಗದಲ್ಲಿ ಯಾವ ದಿಕ್ಕಿಗೆ (ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ) ಸೇರಿದ ರಾಶಿಗಳಲ್ಲಿ ಹೆಚ್ಚು ಬಿಂದುಗಳಿವೆಯೋ, ಆ ದಿಕ್ಕಿಗೆ ಪ್ರಯಾಣ ಬೆಳೆಸಿದರೆ ಅಥವಾ ಆ ದಿಕ್ಕಿನ ಊರುಗಳಲ್ಲಿ ಉದ್ಯೋಗ/ವ್ಯಾಪಾರ ಮಾಡಿದರೆ ಅತ್ಯಂತ ವೇಗವಾಗಿ ಯಶಸ್ಸು ಸಿಗುತ್ತದೆ.

     ಗೋಚಾರ ಶನಿಯ "ಬಿಂದು ರಹಸ್ಯ" (Saturn's Transit)
     ಶನಿ ಗ್ರಹವು ಒಂದು ರಾಶಿಯಲ್ಲಿ ಎರಡುವರೆ ವರ್ಷ ಇರುತ್ತದೆ. ಅಷ್ಟಕವರ್ಗದಲ್ಲಿ ಶನಿಗೆ ಕೇವಲ 39 ಬಿಂದುಗಳಿರುವುದರಿಂದ, ಪ್ರತಿಯೊಂದು ರಾಶಿಯಲ್ಲೂ ಅದಕ್ಕೆ ಸಿಗುವ ಬಿಂದುಗಳು ತೀರಾ ಕಡಿಮೆ ಇರುತ್ತವೆ.
 ಶನಿಯು ಪ್ರಸ್ತುತ ಸಂಚರಿಸುವ ರಾಶಿಯಲ್ಲಿ 4 ಅಥವಾ ಅದಕ್ಕಿಂತ ಹೆಚ್ಚು ಬಿಂದುಗಳಿದ್ದರೆ ಆ ಎರಡುವರೆ ವರ್ಷ ಶನಿಯು ನಮಗೆ ಯಾವುದೇ ಕಷ್ಟ ಕೊಡುವುದಿಲ್ಲ. ಬದಲಿಗೆ ಸ್ಥಿರ ಆಸ್ತಿ ಅಥವಾ ಉದ್ಯೋಗದಲ್ಲಿ ಪ್ರಗತಿ ನೀಡುತ್ತಾನೆ.
     ಒಂದು ವೇಳೆ ಶನಿ ಇರುವ ರಾಶಿಯಲ್ಲಿ 0, 1, 2, ಬಿಂದುಗಳು ಮಾತ್ರ ಇದ್ದರೆ, ಆ ಅವಧಿಯಲ್ಲಿ ಆರೋಗ್ಯದಲ್ಲಿ ಏರುಪೇರು, ಅನಗತ್ಯ ವಿವಾದಗಳು ಅಥವಾ ಮಾನಸಿಕ ಒತ್ತಡ ಹೆಚ್ಚಾಗಬಹುದು. ಅಂತಹ ಸಮಯದಲ್ಲಿ ಶನಿ ಶಾಂತಿ ಅಥವಾ ಆಂಜನೇಯ ಸ್ವಾಮಿ ಆರಾಧನೆ ಮಾಡುವುದು ಸೂಕ್ತ.

       ಸಾಮಾನ್ಯವಾಗಿ ಅಷ್ಟಮ ಶನಿ ಅಶುಭ ಎನ್ನಲಾಗುತ್ತದೆ. ಆದರೆ, ಜಾತಕದ 8ನೇ ಮನೆಯಲ್ಲಿ 30 ಕ್ಕಿಂತ ಹೆಚ್ಚು ಬಿಂದುಗಳು ಇದ್ದರೆ, ಅಷ್ಟಮ ಶನಿಯು ಜಾತಕನಿಗೆ ತೊಂದರೆ ಕೊಡುವ ಬದಲು ಹಠಾತ್ ಧನಲಾಭ ಮತ್ತು ಲಾಟರಿ ಯೋಗವನ್ನು ನೀಡುತ್ತಾನೆ.

 ಜಾತಕದ ಶನಿಯು ಯಾವ ನಕ್ಷತ್ರದಲ್ಲಿರುವನೋ ಆ ನಕ್ಷತ್ರದಿಂದ 8 ನೇ ನಕ್ಷತ್ರದಲ್ಲಿ ಶನಿಯು ಸಂಚಾರವಾಗುವಾಗ ತಂದೆಯ ತಂದೆ (ತಾತನ) ಮರಣ.


  "ಸರ್ವಾಷ್ಟಕವರ್ಗ" ಮತ್ತು ವಯಸ್ಸಿನ ಕಾಲಚಕ್ರ (Age Cycles)

     ನಮ್ಮ ಇಡೀ ಜೀವನದ 120 ವರ್ಷಗಳ ಪರಮಾಯುಷ್ಯವನ್ನು ಅಷ್ಟಕವರ್ಗವು ಮೂರು ಪ್ರಮುಖ ಭಾಗಗಳಾಗಿ ವಿಂಗಡಿಸಿ ಭವಿಷ್ಯ ಹೇಳುತ್ತದೆ. ಜಾತಕದ 12 ಮನೆಗಳನ್ನು ತಲಾ 4 ಮನೆಗಳಂತೆ 3 ಭಾಗ ಮಾಡಲಾಗುತ್ತದೆ:

    ಮೊದಲ ಭಾಗ (1 ರಿಂದ 4 ನೇ ಮನೆಗಳು) ಇದು ಜೀವನದ ಬಾಲ್ಯ ಮತ್ತು ಯೌವನದ ಕಾಲ (ಅಂದಾಜು 1 ರಿಂದ 3೦ ವರ್ಷ). ಈ ನಾಲ್ಕು ಮನೆಗಳ ಒಟ್ಟು ಬಿಂದುಗಳು ಹೆಚ್ಚಾಗಿದ್ದರೆ, ವ್ಯಕ್ತಿಯ ಬಾಲ್ಯ ಸುಖಮಯವಾಗಿರುತ್ತದೆ, ಉತ್ತಮ ಶಿಕ್ಷಣ ಮತ್ತು ತಂದೆ-ತಾಯಿಯ ಬೆಂಬಲ ಸಿಗುತ್ತದೆ.

    ಎರಡನೇ ಭಾಗ (5 ರಿಂದ 8ನೇ ಮನೆಗಳು): ಇದು ಜೀವನದ ಮಧ್ಯಭಾಗ ಅಥವಾ ಯೌವನೋತ್ತರ ಕಾಲ (ಅಂದಾಜು 31 ರಿಂದ 60 ವರ್ಷ). ಇಲ್ಲಿ ಬಿಂದುಗಳು ಹೆಚ್ಚಾಗಿದ್ದರೆ ವೃತ್ತಿಜೀವನ, ಸಂಪಾದನೆ, ಮದುವೆ, ಸಂತಾನ ಮತ್ತು ಸಮಾಜದಲ್ಲಿ ದೊಡ್ಡ ಯಶಸ್ಸು ಸಿಗುತ್ತದೆ.

    ಮೂರನೇ ಭಾಗ (9 ರಿಂದ 12 ನೇ ಮನೆಗಳು): ಇದು ಜೀವನದ ಉತ್ತರಾರ್ಧ ಅಥವಾ ವೃದ್ಧಾಪ್ಯದ ಕಾಲ (6೦ ವರ್ಷದ ನಂತರ). ಇಲ್ಲಿ ಬಿಂದುಗಳು ಹೆಚ್ಚಾಗಿದ್ದರೆ ನಿವೃತ್ತಿಯ ನಂತರದ ಜೀವನ ನೆಮ್ಮದಿಯಾಗಿರುತ್ತದೆ, ಆಧ್ಯಾತ್ಮಿಕ ಉನ್ನತಿ ಮತ್ತು ಗೌರವ ಸಿಗುತ್ತದೆ.

    ಈ ಮೂರು ಭಾಗಗಳಲ್ಲಿ ಯಾವ ಭಾಗದಲ್ಲಿ ಅತಿ ಹೆಚ್ಚು ಬಿಂದುಗಳಿರುತ್ತವೆಯೋ, ಜೀವನದ ಆ ಕಾಲಘಟ್ಟವೇ ಆ ವ್ಯಕ್ತಿಯ ಪಾಲಿಗೆ ಸುವರ್ಣ ಯುಗ ಆಗಿರುತ್ತದೆ.

    . ಪ್ರತಿದಿನದ ಶುಭ-ಅಶುಭ ತಿಳಿಯುವ "ಚಂದ್ರನ ನಡೆ" ದಿನನಿತ್ಯ ರಾಶಿ ಭವಿಷ್ಯ ನೋಡುತ್ತೇವೆ.  ಗೋಚಾರದಲ್ಲಿ ಚಂದ್ರನು ಪ್ರತಿದಿನ ಒಂದೊಂದು ನಕ್ಷತ್ರ, ರಾಶಿಯನ್ನು ಬದಲಾಯಿಸುತ್ತಾನೆ. ಚಂದ್ರನು ಪ್ರಸ್ತುತ ಸಂಚರಿಸುವ ರಾಶಿಯಲ್ಲಿ, ಜಾತಕದ ಚಂದ್ರನ ಭಿನ್ನಾಷ್ಟಕವರ್ಗದಲ್ಲಿ 6, 7, ಅಥವಾ 8 ಬಿಂದುಗಳಿದ್ದರೆ, ಅಂದು ಅತ್ಯಂತ ಸಂತೋಷದ ದಿನ, ಅನಿರೀಕ್ಷಿತ ಧನಲಾಭ ಅಥವಾ ಒಳ್ಳೆಯ ಸುದ್ದಿ ಸಿಗುತ್ತದೆ.

     ಅದೇ ರಾಶಿಯಲ್ಲಿ ಚಂದ್ರನಿಗೆ ಕೇವಲ ೦, 1 ಅಥವಾ 2 ಬಿಂದುಗಳಿದ್ದರೆ, ಅಂದು ಮನಸ್ಸಿಗೆ ಅಶಾಂತಿ, ಕೆಲಸದಲ್ಲಿ ನಷ್ಟ ಅಥವಾ ಜಗಳಗಳು ಆಗಬಹುದು. ಅಂತಹ ದಿನಗಳಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು.

. ಗ್ರಹಗಳ ಸಾಮರ್ಥ್ಯ
      ಒಂದು ಗ್ರಹವು ಜಾತಕದಲ್ಲಿ ರಾಜಯೋಗವನ್ನು ಕೊಡುತ್ತದೆಯೇ ಇಲ್ಲವೇ ಎಂಬುದನ್ನು ಅದರ ಭಿನ್ನಾಷ್ಟಕವರ್ಗದ ಬಿಂದುಗಳು ನಿರ್ಧರಿಸುತ್ತವೆ:

    ಸೂರ್ಯ ಮತ್ತು ಸರ್ಕಾರಿ ಉದ್ಯೋಗ: ಸೂರ್ಯನ ಭಿನ್ನಾಷ್ಟಕವರ್ಗದಲ್ಲಿ ಸೂರ್ಯನಿರುವ ಮನೆಗೆ 6 ಕ್ಕಿಂತ ಹೆಚ್ಚು ಬಿಂದುಗಳಿದ್ದರೆ, ಆ ವ್ಯಕ್ತಿಗೆ ಸರ್ಕಾರಿ ಕೆಲಸ ಅಥವಾ ರಾಜಕೀಯದಲ್ಲಿ ಉನ್ನತ ಹುದ್ದೆ ಸಿಗುವುದು ಖಚಿತ.

    ಕುಜ ಮತ್ತು ಸ್ವಂತ ಮನೆ: ಕುಜನ ಭಿನ್ನಾಷ್ಟಕವರ್ಗದಲ್ಲಿ 4ನೇ ಮನೆಗೆ (ಭೂಮಿ ಸ್ಥಾನ) 5 ಕ್ಕಿಂತ ಹೆಚ್ಚು ಬಿಂದುಗಳಿದ್ದರೆ, ಆ ವ್ಯಕ್ತಿ ಸ್ವಂತ ಪರಿಶ್ರಮದಿಂದ ಭವ್ಯವಾದ ಮನೆ ಅಥವಾ ಜಮೀನನ್ನು ಖರೀದಿಸುತ್ತಾನೆ.

    ಶುಕ್ರ ಮತ್ತು ವಾಹನ/ಸಂಗಾತಿ: ಶುಕ್ರನ ಭಿನ್ನಾಷ್ಟಕವರ್ಗದಲ್ಲಿ 7 ಅಥವಾ 8 ಬಿಂದುಗಳಿದ್ದರೆ, ಅತ್ಯಂತ ಸುಂದರ, ಗುಣವಂತ ಸಂಗಾತಿ ಮತ್ತು ಐಷಾರಾಮಿ ವಾಹನ ಯೋಗ ಸಿಗುತ್ತದೆ.

   . ಶತ್ರು ಮತ್ತು ರೋಗ ಜಯದ ಸೂತ್ರ (6ನೇ ಮನೆ)
ಜಾತಕದಲ್ಲಿ 6ನೇ ಮನೆಯನ್ನು ಶತ್ರು, ರೋಗ ಮತ್ತು ಸಾಲದ ಮನೆ ಎನ್ನಲಾಗುತ್ತದೆ. ಸಮುದಾಯ ಅಷ್ಟಕವರ್ಗದಲ್ಲಿ ಇದರದ್ದೇ ಒಂದು ವಿಚಿತ್ರ ನಿಯಮವಿದೆ. ಲಗ್ನ ಸ್ಥಾನಕ್ಕಿಂತ (1ನೇ ಮನೆ) 6ನೇ ಮನೆಯಲ್ಲಿ ಬಿಂದುಗಳು ಕಡಿಮೆ ಇರಬೇಕು. ಲಗ್ನದಲ್ಲಿ 32 ಬಿಂದುಗಳಿದ್ದು, 6 ನೇ ಮನೆಯಲ್ಲಿ 22 ಬಿಂದುಗಳಿದ್ದರೆ, ಶತ್ರುಗಳು ನಮ್ಮ ಮುಂದೆ ತಲೆ ಎತ್ತಲು ಸಾಧ್ಯವಿಲ್ಲ. ಯಾವುದೇ ರೋಗ ಬಂದರೂ ಬೇಗ ಗುಣಮುಖರಾಗುವ ಯೋಗ ಇರುತ್ತೆ.
      ಒಂದು ವೇಳೆ ಲಗ್ನಕ್ಕಿಂತ 6ನೇ ಮನೆಯಲ್ಲಿ ಬಿಂದುಗಳು ಹೆಚ್ಚಾದರೆ, ಸಾಲದ ಬಾಧೆ ಮತ್ತು ಅನಾರೋಗ್ಯದ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತವೆ.

 . "ಕಕ್ಷಾ" ಪದ್ಧತಿ (The Micro-Transits)

     ಇದು ಅಷ್ಟಕವರ್ಗದ ಅತ್ಯಂತ ಸೂಕ್ಷ್ಮವಾದ ಭಾಗ. ಒಂದು ರಾಶಿಯನ್ನು (30 ಡಿಗ್ರಿ) ತಲಾ 3° 45' ನಂತೆ 8 ಸಮಾನ ಭಾಗಗಳಾಗಿ (ಕಕ್ಷಾಗಳಾಗಿ) ಹಂಚಲಾಗುತ್ತದೆ. ಪ್ರತಿಯೊಂದು ಭಾಗಕ್ಕೂ ಒಬ್ಬೊಬ್ಬ ಗ್ರಹ ಅಧಿಪತಿಯಾಗಿರುತ್ತಾನೆ (ಶನಿ, ಗುರು, ಕುಜ, ಸೂರ್ಯ, ಶುಕ್ರ, ಬುಧ, ಚಂದ್ರ ಮತ್ತು ಲಗ್ನ).

     ಗೋಚಾರದಲ್ಲಿ ಒಂದು ಗ್ರಹವು (ಉದಾಹರಣೆಗೆ ಗುರು) ಒಂದು ರಾಶಿಯಲ್ಲಿ ಸಾಗುವಾಗ, ಆ ರಾಶಿಯ ಯಾವ ಕಕ್ಷೆಯಲ್ಲಿ ಅದಕ್ಕೆ ಬಿಂದು ಸಿಕ್ಕಿರುತ್ತದೆಯೋ, ಆ ಕಕ್ಷೆಗೆ ಗುರು ಬಂದಾಗ ಮಾತ್ರ (ಅಂದರೆ ಆ ನಿರ್ದಿಷ್ಟ ದಿನಗಳಲ್ಲಿ ಮಾತ್ರ) ಜಾತಕನಿಗೆ ಲಾಟರಿ ಹೊಡೆದಂತೆ ಯಶಸ್ಸು ಸಿಗುತ್ತದೆ! ಉಳಿದ ದಿನಗಳು ಸಾಧಾರಣವಾಗಿರುತ್ತವೆ. ಇದಕ್ಕಾಗಿಯೇ ಒಂದೇ ರಾಶಿಯಲ್ಲಿದ್ದರೂ ಗುರು ಇಡೀ ವರ್ಷ ಶುಭ ಫಲ ಕೊಡುವುದಿಲ್ಲ, ಕೇವಲ ಕೆಲವು ದಿನಗಳು ಮಾತ್ರ ಅದ್ಭುತ ಫಲ ಕೊಡುತ್ತಾನೆ.
    ಗೋಚಾರ ಗ್ರಹವು ತನಗೆ ಬಿಂದು ಕೊಟ್ಟಿರುವ ಗ್ರಹದ ಕಕ್ಷೆಯೊಳಗೆ ಪ್ರವೇಶಿಸಿದಾಗ ಮಾತ್ರ ಆ ದಿನ ಅಥವಾ ಆ ವಾರದಲ್ಲಿ ಶುಭ ಘಟನೆ ನಡೆಯುತ್ತದೆ. ಬಿಂದು ಕೊಡದ ಕಕ್ಷೆಯಲ್ಲಿದ್ದಾಗ ಗ್ರಹ ಒಳ್ಳೆಯದನ್ನು ಮಾಡುವುದಿಲ್ಲ. 
ಅಷ್ಟಕವರ್ಗ ಎಂಬುದು ಜ್ಯೋತಿಷ್ಯದ ಎಕ್ಸ್‌-ರೇ (X-ray) ಇದ್ದಂತೆ. ಮೇಲ್ನೋಟಕ್ಕೆ ಕಾಣಿಸದ ಗ್ರಹಗಳ ನೈಜ ಶಕ್ತಿಯನ್ನು ಇದು ಎಳೆಎಳೆಯಾಗಿ ಬಿಚ್ಚಿಡುತ್ತದೆ.

      ಧನಾಗಮನ ಮತ್ತು ದರಿದ್ರ ಯೋಗ:--
ಜಾತಕದಲ್ಲಿ ಕೇವಲ ಗ್ರಹಗಳ ಯೋಗಗಳನ್ನು ನೋಡಿ ಧನವಂತರಾಗುತ್ತಾರೋ ಇಲ್ಲವೋ ಎಂದು ಹೇಳಲು ಬರುವುದಿಲ್ಲ. ಅದಕ್ಕೆ ಸರ್ವಾಷ್ಟಕವರ್ಗದಲ್ಲಿ ಒಂದು ಅದ್ಭುತ ಗಣಿತವಿದೆ:

       ಸೂತ್ರ: 11ನೇ ಮನೆಯ (ಲಾಭ) ಮತ್ತು 1೦ನೇ ಮನೆಯ (ಕರ್ಮ) ಬಿಂದುಗಳನ್ನು ಒಟ್ಟುಗೂಡಿಸಿ. ಹಾಗೆಯೇ, 12 ನೇ ಮನೆಯ (ವ್ಯಯ) ಮತ್ತು 1 ನೇ ಮನೆಯ (ಲಗ್ನ/ದೇಹ) ಬಿಂದುಗಳನ್ನು ಒಟ್ಟುಗೂಡಿಸಿ.

  (1೦ + 11) ರ ಮೊತ್ತವು (1+ 12 ) ರ ಮೊತ್ತಕ್ಕಿಂತ ಹೆಚ್ಚಾಗಿದ್ದರೆ: ಆ ವ್ಯಕ್ತಿ ಜೀವಮಾನವಿಡೀ ರಾಜನಂತೆ ಬದುಕುತ್ತಾನೆ. ಸಂಪತ್ತು ತಾನಾಗಿಯೇ ಹುಡುಕಿಕೊಂಡು ಬರುತ್ತದೆ. ಭೌತಿಕ ಸುಖಕ್ಕೆ ಕೊರತೆಯಿರುವುದಿಲ್ಲ.

  (1 + 12) ರ ಮೊತ್ತವು (10 + 11) ಕ್ಕಿಂತ ಹೆಚ್ಚಾಗಿದ್ದರೆ: ಆ ವ್ಯಕ್ತಿ ಎಷ್ಟು ಸಂಪಾದಿಸಿದರೂ ಹಣ ಕೈಯಲ್ಲಿ ನಿಲ್ಲುವುದಿಲ್ಲ, ಕಠಿಣ ಪರಿಶ್ರಮ ಪಟ್ಟರೂ ತಕ್ಕ ಪ್ರತಿಫಲ ಸಿಗದೆ ಸಾಲ ಅಥವಾ ವ್ಯರ್ಥ ಖರ್ಚುಗಳು ಬೆನ್ನಟ್ಟಿ ಬರುತ್ತವೆ.

 . "ಬಂಧು-ಮಿತ್ರರಿಂದ ಮೋಸ" ತಿಳಿಯಲೂ ಸಹ ಅಷ್ಟಕವರ್ಗವನ್ನು  ನೋಡಬಹುದು.
    ನಮ್ಮನ್ನು ನಂಬಿದವರೇ ನಮಗೆ ಬೆನ್ನಿಗೆ ಚೂರಿ ಹಾಕುತ್ತಾರಾ ಅಥವಾ ನಮಗೆ ನಿಷ್ಠಾವಂತರಾಗಿರುತ್ತಾರಾ ಎಂಬುದನ್ನು ಅಷ್ಟಕವರ್ಗ ಹೇಳುತ್ತದೆ.

     ಸೂತ್ರ: ನಮ್ಮ ಜನ್ಮ ಲಗ್ನದಿಂದ 4ನೇ ಮನೆ (ಬಂಧುಗಳು/ಸ್ನೇಹಿತರು) ಮತ್ತು 9ನೇ ಮನೆ (ಭಾಗ್ಯ/ಗುರುಗಳು) ಇವುಗಳ ಬಿಂದುಗಳನ್ನು ಗಮನಿಸಿ. 4ನೇ ಮನೆಯಲ್ಲಿ 3೦ಕ್ಕೂ ಹೆಚ್ಚು ಬಿಂದುಗಳಿದ್ದು, 9ನೇ ಮನೆಯಲ್ಲಿ 22 ಬಿಂದುಗಳಿದ್ದರೆ, ನಮ್ಮ ಸ್ವಂತ ಬಂಧುಗಳೇ ನಮ್ಮ ಪ್ರಗತಿಯನ್ನು ಸಹಿಸದೆ ಅಸೂಯೆ ಪಡುತ್ತಾರೆ ಅಥವಾ ನಮಗೆ ಅಡ್ಡಿಪಡಿಸುತ್ತಾರೆ.

    ಒಂದು ವೇಳೆ 9ನೇ ಮನೆಯಲ್ಲಿ ಬಿಂದುಗಳು ಹೆಚ್ಚಿದ್ದು, 4ನೇ ಮನೆಯಲ್ಲಿ ಕಡಿಮೆಯಿದ್ದರೆ, ಹುಟ್ಟಿದ ಊರಿಗಿಂತ ದೂರದ ಊರಿನಲ್ಲಿ, ಅಪರಿಚಿತ ಜನರಿಂದ ಮತ್ತು ಗುರುತು ಇಲ್ಲದವರಿಂದ ಅಪಾರ ಸಹಾಯ ಮತ್ತು ಅದೃಷ್ಟ ಒಲಿದು ಬರುತ್ತದೆ.

   "ಮರಣ ಕಾರಕ ರಾಶಿ" ಮತ್ತು ಅಪಘಾತಗಳ ಮುನ್ಸೂಚನೆ

     ಅಷ್ಟಕವರ್ಗದಲ್ಲಿ ಆಯುಷ್ಯ ಮತ್ತು ಕಷ್ಟದ ಕಾಲವನ್ನು ತಿಳಿಯಲು ಶನಿಯ ಭಿನ್ನಾಷ್ಟಕವರ್ಗವನ್ನು ಬಳಸಲಾಗುತ್ತದೆ.
     ಸೂತ್ರ: ಶನಿಯ ಭಿನ್ನಾಷ್ಟಕವರ್ಗದಲ್ಲಿ ಯಾವ ರಾಶಿಯಲ್ಲಿ ಅತ್ಯಂತ ಕಡಿಮೆ ಬಿಂದುಗಳಿವೆಯೋ (೦, 1 ಅಥವಾ 2 ಬಿಂದುಗಳು), ಆ ರಾಶಿಯನ್ನು ಜಾತಕನ ಅತ್ಯಂತ ದುರ್ಬಲ ಬಿಂದು ಎನ್ನಲಾಗುತ್ತದೆ.

     ರಹಸ್ಯ: ಗೋಚಾರದಲ್ಲಿ ಶನಿ ಗ್ರಹವು ಅಥವಾ ರಾಹು ಗ್ರಹವು ಆ ನಿರ್ದಿಷ್ಟ ರಾಶಿಗೆ ಪ್ರವೇಶಿಸಿದಾಗ, ಜಾತಕನಿಗೆ ತೀವ್ರ ಆರೋಗ್ಯದ ಏರುಪೇರು, ಶಸ್ತ್ರಚಿಕಿತ್ಸೆ (Surgery), ಆಸ್ತಿ ನಷ್ಟ ಅಥವಾ ಅಪಘಾತಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಆ ಕಾಲದಲ್ಲಿ ಅತ್ಯಂತ ಜಾಗರೂಕರಾಗಿರಬೇಕು.
ಪರಿಹಾರವಾಗಿ ಮಹಾಮೃತ್ಯುಂಜಯ ಜಪ ಅಥವಾ ದಾನ ಧರ್ಮಗಳನ್ನು ಮಾಡಬೇಕು.

   "ಶೋಧ್ಯ ಪಿಂಡ"ದಿಂದ ಮಕ್ಕಳ ಭಾಗ್ಯೋದಯ 

    ಗುರು ಗ್ರಹದ ಶೋಧ್ಯ ಪಿಂಡವನ್ನು (Reduction ಮಾಡಿದ ನಂತರ ಸಿಗುವ ಒಟ್ಟು ಅಂಕ) ಬಳಸಿಕೊಂಡು ಸಂತಾನದ ಯೋಗವನ್ನು ಲೆಕ್ಕ ಹಾಕಲಾಗುತ್ತದೆ.
ಗುರುವಿನ ಶೋಧ್ಯ ಪಿಂಡದ ಸಂಖ್ಯೆಯನ್ನು 7 ರಿಂದ ಗುಣಿಸಿ, 27 ರಿಂದ ಭಾಗಿಸಿದಾಗ ಬರುವ ಶೇಷದ (Remainder) ಆಧಾರದ ಮೇಲೆ ಒಂದು ನಕ್ಷತ್ರ ಸಿಗುತ್ತದೆ.
 ಗೋಚಾರದಲ್ಲಿ ಗುರು ಗ್ರಹವು ಆ ನಿರ್ದಿಷ್ಟ ನಕ್ಷತ್ರಕ್ಕೆ ಬಂದಾಗ ಆ ಜಾತಕನಿಗೆ ಸಂತಾನ ಪ್ರಾಪ್ತಿಯಾಗುತ್ತದೆ. ಅಥವಾ ಆ ನಕ್ಷತ್ರದಲ್ಲಿ ಹುಟ್ಟುವ ಮಗುವಿನಿಂದ ಆ ತಂದೆ/ತಾಯಿಗೆ ಜಗತ್ತಿನಲ್ಲಿ ಅತ್ಯಂತ ದೊಡ್ಡ ಕೀರ್ತಿ, ಗೌರವ ಮತ್ತು ಭಾಗ್ಯೋದಯವಾಗುತ್ತದೆ!

 . "ಸರ್ಪ ಶಾಪ / ಪಿತೃ ದೋಷ" 
     ಜಾತಕದಲ್ಲಿ ಪಿತೃ ದೋಷವಿದೆಯೇ ಎಂಬುದನ್ನು ಸೂರ್ಯನ ಅಷ್ಟಕವರ್ಗದಿಂದ ತಿಳಿಯಬಹುದು.
ಸೂತ್ರ: ಸೂರ್ಯನ ಭಿನ್ನಾಷ್ಟಕವರ್ಗದಲ್ಲಿ 9ನೇ ಮನೆಗೆ (ಪಿತೃ ಸ್ಥಾನ) ಸೂರ್ಯನೇ ಕೇವಲ 1 ಅಥವಾ 2 ಬಿಂದುಗಳನ್ನು ನೀಡಿದ್ದರೆ, ಅಲ್ಲಿ ಪಿತೃ ದೋಷವಿದೆ ಎಂದರ್ಥ. ಇಂತಹ ಜಾತಕದವರಿಗೆ ವಂಶ ಪಾರಂಪರ್ಯವಾಗಿ ಬರಬೇಕಾದ ಆಸ್ತಿ ಕೈತಪ್ಪುತ್ತದೆ, ತಂದೆಯ ಜೊತೆ ಸದಾ ವೈಚಾರಿಕ ಭಿನ್ನಾಭಿಪ್ರಾಯಗಳಿರುತ್ತವೆ ಅಥವಾ ಸಮಾಜದಲ್ಲಿ ಎಷ್ಟು ಒಳ್ಳೆಯ ಕೆಲಸ ಮಾಡಿದರೂ ಬೇಗನೆ ಅಪಕೀರ್ತಿ ಬರುತ್ತದೆ
 ಇದಕ್ಕೆ.....
ಗಯಾ ಶ್ರಾದ್ಧ ಅಥವಾ ಪಿತೃ ತರ್ಪಣಗಳ ಮೂಲಕ ಪರಿಹಾರ ಕಂಡುಕೊಳ್ಳಬಹುದು.

    "ಅಷ್ಟಕವರ್ಗವು ಕೇವಲ ಗಣಿತವಲ್ಲ, ಅದು ಬ್ರಹ್ಮದೇವನು ನಮ್ಮ ಹಣೆಯ ಮೇಲೆ ಬರೆದ ಹಣೆಬರಹದ ತೀವ್ರತೆಯನ್ನು ಅಳೆಯುವ ಮಾಪಕ".

     ಜಾತಕದಲ್ಲಿ ಗ್ರಹಗಳು ಎಷ್ಟೇ ಕೆಟ್ಟದಾಗಿ ಕುಳಿತಿದ್ದರೂ, ಅಷ್ಟಕವರ್ಗದ ಬಿಂದುಗಳು ಚೆನ್ನಾಗಿದ್ದರೆ ಆ ವ್ಯಕ್ತಿಯನ್ನು ಯಾರೂ ಸೋಲಿಸಲು ಸಾಧ್ಯವಿಲ್ಲ.

    ಜೀವನದಲ್ಲಿ ನಮಗೆ ಸಾಡೇಸಾತಿ ಶನಿ, ಅಷ್ಟಮ ಶನಿ ಅಥವಾ ರಾಹು ದಶೆ ಬಂದಾಗ ತೀವ್ರ ಮಾನಸಿಕ ಹಿಂಸೆ ಅನುಭವಿಸುತ್ತೇವೆ. ಈ ಕಷ್ಟದ ಕಾಲ ಯಾವಾಗ ಕೊನೆಗೊಳ್ಳುತ್ತದೆ ಎಂಬುದನ್ನು ದಿನಗಳ ಸಮೇತ ಲೆಕ್ಕ ಹಾಕಬಹುದು.
        ಪ್ರತಿ ರಾಶಿಯಲ್ಲಿ 8 ಕಕ್ಷೆಗಳಿರುತ್ತವೆ ಎಂದು ನಾವು ಮುಂಚೆ ನೋಡಿದ್ದೇವೆ. ಶನಿ ಸಂಚರಿಸುವಾಗ ಶನಿಗೆ ಆ ರಾಶಿಯಲ್ಲಿ ಒಟ್ಟು ಬಿಂದುಗಳು ಕಡಿಮೆ ಇದ್ದರೂ, ಯಾವ ಬೇರೆ ಗ್ರಹಗಳ ಕಕ್ಷೆಗಳಲ್ಲಿ ಶನಿಗೆ 'ಬಿಂದು' ಸಿಕ್ಕಿರುತ್ತದೆಯೋ, ಶನಿ ಆ ಕಕ್ಷೆಯ ಡಿಗ್ರಿಗಳಿಗೆ ಬಂದಾಗ ಆ ಕಷ್ಟದ ಅವಧಿಯಲ್ಲೂ ವ್ಯಕ್ತಿಗೆ ದಿಢೀರ್ ರಿಲೀಫ್ (ನೆಮ್ಮದಿ) ಸಿಗುತ್ತದೆ. ಕಷ್ಟದ ನಡುವೆಯೂ ಅದೃಷ್ಟದ ಹಾದಿ ತೆರೆಯುತ್ತದೆ.

     (The Golden Dynamic Transit)
      ನಾವು ಗೋಚಾರದಲ್ಲಿ ಕೇವಲ ಶನಿ ಅಥವಾ ಗುರುವನ್ನು ಮಾತ್ರ ದೊಡ್ಡ ಗ್ರಹಗಳೆಂದು ಗಮನಿಸುತ್ತೇವೆ. ಆದರೆ ಸೂರ್ಯ, ಬುಧ, ಶುಕ್ರರಂತಹ ವೇಗವಾಗಿ ಚಲಿಸುವ ಗ್ರಹಗಳೂ ಸಹ ಅಷ್ಟಕವರ್ಗದ ಮೂಲಕ ದಿನನಿತ್ಯದ ಅದೃಷ್ಟವನ್ನು ಬದಲಾಯಿಸುತ್ತವೆ.

     ಸರ್ವಾಷ್ಟಕವರ್ಗದಲ್ಲಿ ಯಾವ ರಾಶಿಗೆ 3೦ ಕ್ಕಿಂತ ಹೆಚ್ಚು ಬಿಂದುಗಳಿವೆಯೋ , ಆ ರಾಶಿಗೆ ಗೋಚಾರದಲ್ಲಿ ಒಂದೇ ಬಾರಿಗೆ 3 ಅಥವಾ 4 ಗ್ರಹಗಳು ಬಂದು ಕುಳಿತರೆ (ಇದನ್ನು ಗ್ರಹಗಳ ಕೂಟ ಎನ್ನಲಾಗುತ್ತದೆ), ಆ 1 ಅಥವಾ 2 ತಿಂಗಳ ಅವಧಿಯಲ್ಲಿ ಜಾತಕನಿಗೆ ಜೀವನದ ಅತಿ ದೊಡ್ಡ ಸುವರ್ಣಾವಕಾಶ ಸಿಗುತ್ತದೆ.

 . "ಬಿಂದು ಹೀನ ಗ್ರಹ" ಮತ್ತು ನಿರರ್ಥಕ ದಶೆ
ಜಾತಕದಲ್ಲಿ ಒಂದು ಗ್ರಹವು ಅತ್ಯಂತ ಬಲಿಷ್ಠವಾಗಿರಬಹುದು (ಉದಾಹರಣೆಗೆ ಉಚ್ಚ ಸ್ಥಾನದಲ್ಲೋ ಅಥವಾ ಸ್ವಕ್ಷೇತ್ರದಲ್ಲೋ ಇರಬಹುದು). ಮೇಲ್ನೋಟಕ್ಕೆ ಆ ಗ್ರಹದ ದಶೆ ಬಂದರೆ ಜಾತಕನಿಗೆ ಅಪಾರ ಐಶ್ವರ್ಯ ಸಿಗುತ್ತದೆ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ಅಷ್ಟಕವರ್ಗ ಇಲ್ಲಿ ಅಸಲಿ ರಹಸ್ಯವನ್ನು ಬಿಚ್ಚಿಡುತ್ತದೆ. ಆ ಗ್ರಹವು ಕುಳಿತಿರುವ ರಾಶಿಗೆ, ಅದರ ಸ್ವಂತ ಭಿನ್ನಾಷ್ಟಕವರ್ಗದಲ್ಲಿ ಕೇವಲ 1 ಅಥವಾ 2 ಬಿಂದುಗಳು ಮಾತ್ರ ಸಿಕ್ಕಿದ್ದರೆ, ಆ ಗ್ರಹದ 1೦-2೦ ವರ್ಷಗಳ ಮಹಾದಶೆಯು ಸಂಪೂರ್ಣ ನಿರರ್ಥಕವಾಗುತ್ತದೆ! ಹೊರಗಿನಿಂದ ನೋಡಲು ಗ್ರಹ ರಾಜನಂತೆ ಕಂಡರೂ, ಅಷ್ಟಕವರ್ಗದ ಬಿಂದುಗಳು ಇಲ್ಲದಿದ್ದರೆ ಅದು "ಕೈಯಲ್ಲಿ ಆಯುಧವಿಲ್ಲದ ರಾಜನಂತೆ" ಅಸಹಾಯಕನಾಗಿಬಿಡುತ್ತದೆ.

 . "ಆಯುರ್ದಾಯ ಲೆಕ್ಕಾಚಾರ" (The Longevity Secret)

     ಅಷ್ಟಕವರ್ಗದಲ್ಲಿ ಒಬ್ಬ ವ್ಯಕ್ತಿಯ ಆಯುಷ್ಯವನ್ನು ವರ್ಷ, ತಿಂಗಳು ಮತ್ತು ದಿನಗಳ ಸಮೇತ ಲೆಕ್ಕ ಹಾಕುವ 'ಅಷ್ಟಕವರ್ಗ ಆಯುರ್ದಾಯ' ಎಂಬ ಪ್ರತ್ಯೇಕ ಗಣಿತವೇ ಇದೆ.

       ಸೂತ್ರ: ಶನಿ ಭಿನ್ನಾಷ್ಟಕವರ್ಗದ ಬಿಂದುಗಳನ್ನು ಹಾಗೂ 'ಶೋಧ್ಯ ಪಿಂಡ'ವನ್ನು ಗುಣಿಸಿ, ನಿರ್ದಿಷ್ಟ ಸಂಖ್ಯೆಯಿಂದ ಭಾಗಿಸಿದಾಗ ಒಂದು ವರ್ಷದ ಸಂಖ್ಯೆ ಸಿಗುತ್ತದೆ. ಆ ವರ್ಷದಲ್ಲಿ ಗೋಚಾರ ಶನಿಯು ಜಾತಕದ ಅತ್ಯಂತ ಕಡಿಮೆ ಬಿಂದುವಿರುವ ಕಕ್ಷೆಯನ್ನು ದಾಟುವಾಗ ಆಯುಷ್ಯಕ್ಕೆ ಕಂಟಕಗಳು ಬರುತ್ತವೆ. ಇದನ್ನು ಮುಂಚಿತವಾಗಿಯೇ ಅರಿತು ಮಹಾಮೃತ್ಯುಂಜಯ ಹೋಮಗಳ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಇದು ಅಷ್ಟಕವರ್ಗದ ಅತ್ಯಂತ ಗುಪ್ತವಾದ ಗಣಿತ.

  "ವಾಸ್ತು ಮತ್ತು ಅಷ್ಟಕವರ್ಗ" (Vastu Alignment)
     ಇಡೀ ಸರ್ವಾಷ್ಟಕವರ್ಗ ಕುಂಡಲಿಯನ್ನು ಬಳಸಿ, ಜೀವನದಲ್ಲಿ ಯಾವ ದಿಕ್ಕು ಅತ್ಯಂತ ಶ್ರೇಷ್ಠ ಮತ್ತು ಅದೃಷ್ಟ ತರುತ್ತದೆ ಎಂಬುದನ್ನು ವಾಸ್ತು ಪ್ರಕಾರ ನಿರ್ಧರಿಸಬಹುದು.

ಸೂತ್ರ: 12 ರಾಶಿಗಳನ್ನು ನಾಲ್ಕು ದಿಕ್ಕುಗಳಾಗಿ ವಿಂಗಡಿಸಲಾಗುತ್ತದೆ:

ಪೂರ್ವ ದಿಕ್ಕು:- ಮೇಷ, ಸಿಂಹ, ಧನು ರಾಶಿಗಳ ಒಟ್ಟು ಬಿಂದುಗಳ ಮೊತ್ತ.

ದಕ್ಷಿಣ ದಿಕ್ಕು:- ವೃಷಭ, ಕನ್ಯಾ, ಮಕರ ರಾಶಿಗಳ ಒಟ್ಟು ಬಿಂದುಗಳ ಮೊತ್ತ.

ಪಶ್ಚಿಮ ದಿಕ್ಕು:-- ಮಿಥುನ, ತುಲಾ, ಕುಂಭ ರಾಶಿಗಳ ಒಟ್ಟು ಬಿಂದುಗಳ ಮೊತ್ತ.

ಉತ್ತರ ದಿಕ್ಕು :-- ಕರ್ಕಾಟಕ, ವೃಶ್ಚಿಕ, ಮೀನ ರಾಶಿಗಳ ಒಟ್ಟು ಬಿಂದುಗಳ ಮೊತ್ತ.

 ಈ ನಾಲ್ಕು ದಿಕ್ಕುಗಳ ಮೊತ್ತದಲ್ಲಿ ಯಾವ ದಿಕ್ಕಿಗೆ ಅತ್ಯಂತ ಹೆಚ್ಚು ಬಿಂದುಗಳು ಬರುತ್ತವೆಯೋ, ಆ ದಿಕ್ಕಿಗೆ ಮುಖ್ಯದ್ವಾರ ಇರುವ ಮನೆಯಲ್ಲಿ ವಾಸಿಸಿದರೆ ಭಾಗ್ಯೋದಯ.

  ಸ್ವಂತ ಮನೆ ಅಥವಾ ಜಮೀನು ಖರೀದಿಸುವಾಗ ಕೂಡ ಅಷ್ಟಕವರ್ಗವನ್ನು ಬಳಸಬಹುದು.

    ನಿಯಮ: ಜಾತಕದ 4ನೇ ಮನೆ (ವಾಹನ/ಮನೆ) ಮತ್ತು 2ನೇ ಮನೆ (ಧನ) ಯಲ್ಲಿ 30 ಕ್ಕಿಂತ ಹೆಚ್ಚು ಬಿಂದುಗಳಿದ್ದು, 4ನೇ ಮನೆಯ ಅಧಿಪತಿ ಶುಭ ಕಕ್ಷೆಯಲ್ಲಿದ್ದಾಗ ಮಾತ್ರ ಮನೆ ಕಟ್ಟಲು ಆರಂಭಿಸಬೇಕು.
ಜಾತಕದ 4ನೇ ಮನೆಯಲ್ಲಿ ಎಷ್ಟು ಬಿಂದುಗಳಿವೆಯೋ, ಆ ಸಂಖ್ಯೆಗೆ ಹೊಂದಿಕೆಯಾಗುವ ದಿಕ್ಕಿನ ಮುಖವಿರುವ ಮನೆಯನ್ನು ಖರೀದಿಸಿದರೆ ಆ ವ್ಯಕ್ತಿ ಜನ್ಮವಿಡೀ ಸುಖವಾಗಿರುತ್ತಾನೆ.

ಬಾಹ್ಯ ಮತ್ತು ಅಭ್ಯಂತರ" ಫಲ 

    ಸೂತ್ರ: ಸರ್ವಾಷ್ಟಕವರ್ಗದಲ್ಲಿ 1, 2, 4, 9, 10 ಮತ್ತು 11 ನೇ ಮನೆಗಳನ್ನು 'ಅಭ್ಯಂತರ' (ಒಳಗಿನ) ಮನೆಗಳು ಎನ್ನಲಾಗುತ್ತದೆ. 3, 5, 6, 7, 8 ಮತ್ತು 12 ನೇ ಮನೆಗಳನ್ನು 'ಬಾಹ್ಯ' (ಹೊರಗಿನ) ಮನೆಗಳು ಎನ್ನಲಾಗುತ್ತದೆ.

    ನಿಯಮ: ಅಭ್ಯಂತರ ಮನೆಗಳ ಒಟ್ಟು ಬಿಂದುಗಳ ಮೊತ್ತವು, ಬಾಹ್ಯ ಮನೆಗಳ ಒಟ್ಟು ಬಿಂದುಗಳಿಗಿಂತ ಹೆಚ್ಚಾಗಿರಬೇಕು.

     ಫಲಿತಾಂಶ: ಯಾರ ಜಾತಕದಲ್ಲಿ ಅಭ್ಯಂತರ ಮನೆಗಳ ಬಲ ಹೆಚ್ಚಿರುತ್ತದೆಯೋ, ಅವರು ರಾಜನಂತೆ ವೈಭೋಗದ ಜೀವನ ನಡೆಸುತ್ತಾರೆ. ಒಂದು ವೇಳೆ ಬಾಹ್ಯ ಮನೆಗಳ ಬಿಂದುಗಳು ಹೆಚ್ಚಾದರೆ, ಆ ವ್ಯಕ್ತಿ ಎಷ್ಟು ಸಂಪಾದಿಸಿದರೂ ನೆಮ್ಮದಿ ಇಲ್ಲದೆ ಆಧ್ಯಾತ್ಮಿಕವಾಗಿ ಸಂನ್ಯಾಸಿಯಂತೆ ಬಾಳುತ್ತಾನೆ.

 "ಶೋಧ್ಯಪಿಂಡ" ಮತ್ತು ಮರಣ/ರೋಗ ಕಾಲ ನಿರ್ಣಯ (The Longevity Secret)

       "ಮಹರ್ಷಿ ಪರಾಶರರು ಆಯುಷ್ಯ ಮತ್ತು ರೋಗದ ಕಾಲವನ್ನು ನಿಖರವಾಗಿ ತಿಳಿಯಲು ಶೋಧ್ಯಪಿಂಡದ ಅದ್ಭುತ ಗಣಿತವನ್ನು ನೀಡಿದ್ದಾರೆ. ಗೋಚಾರ ಶನಿಯು ಆ ಕಂಟಕ ನಕ್ಷತ್ರಕ್ಕೆ ಬಂದಾಗ ಜಾತಕನಿಗೆ ತೀವ್ರ ಅನಾರೋಗ್ಯ ಅಥವಾ ಮರಣ ಸಂಭವಿಸುತ್ತದೆ."

     ಸೂತ್ರ: ಅಷ್ಟಕವರ್ಗದ ತ್ರಿಕೋಣ ಮತ್ತು ಏಕಾಧಿಪತ್ಯ ಶೋಧನೆ ಮುಗಿದ ನಂತರ ಸಿಗುವ ಸಂಖ್ಯೆಯೇ 'ಶೋಧ್ಯಪಿಂಡ' (Shodhya Pinda). ಇದು ಅಷ್ಟಕವರ್ಗದ ಅತ್ಯುನ್ನತ ಗಣಿತ.

     ನಿಯಮ: ಶನಿಯ ಶೋಧ್ಯಪಿಂಡವನ್ನು ತಗೆದುಕೊಂಡು, ಅದನ್ನು ಶನಿ ಇರುವ ಮನೆಯ ಬಿಂದುಗಳಿಂದ ಗುಣಿಸಿ, 27 ರಿಂದ ಭಾಗಿಸಿದಾಗ ಬರುವ ಶೇಷವೇ (Remainder) ಆ ವ್ಯಕ್ತಿಯ ಜೀವನದ ಕಂಟಕ ನಕ್ಷತ್ರವಾಗಿರುತ್ತದೆ!

       ಆಯುಷ್ಯ ಕಾರಕ ಶನಿ ಮತ್ತು ಮೃತ್ಯು ಭಾಗ" ರಹಸ್ಯ (The Exact Year of Longevity)

   ಶನಿದೇವನು ಆಯುಷ್ಯ ಕಾರಕ. ಆತ ತಾನು ಕುಳಿತ ಮನೆಯಲ್ಲಿ ಎಷ್ಟು ಬಿಂದುಗಳನ್ನು ಪಡೆದಿದ್ದಾನೆ ಎಂಬುದರ ಆಧಾರದ ಮೇಲೆ ಮನುಷ್ಯನ ಆಯುಷ್ಯದ ರೇಖೆ ನಿರ್ಧಾರವಾಗುತ್ತದೆ."
   ಜಾತಕನ ಆಯುಷ್ಯದ ವರ್ಷವನ್ನು ನಿಖರವಾಗಿ ತಿಳಿಯಲು ಅಷ್ಟಕವರ್ಗದಲ್ಲಿ ಒಂದು ಅದ್ಭುತ ಗಣಿತವಿದೆ.
ಶನಿಯ ಭಿನ್ನಾಷ್ಟಕವರ್ಗದಲ್ಲಿ, ಶನಿ ಗ್ರಹವು ಜನ್ಮಕುಂಡಲಿಯಲ್ಲಿ ಯಾವ ರಾಶಿಯಲ್ಲಿ ಕುಳಿತಿದ್ದಾನೋ ಆ ರಾಶಿಯ ಬಿಂದುಗಳನ್ನು ತೆಗೆದುಕೊಳ್ಳಿ.
 ಶನಿ ಕುಳಿತ ರಾಶಿಯ ಬಿಂದುಗಳ ಸಂಖ್ಯೆಯನ್ನು, ಆತನ ಮಹಾದಶೆ ಅಥವಾ ಗೋಚಾರದ ಪ್ರಮುಖ ವರ್ಷಗಳಿಗೆ ಗುಣಿಸಿ ಲೆಕ್ಕ ಹಾಕಿದಾಗ, ಜಾತಕನಿಗೆ ಬರುವ ಅಪಮೃತ್ಯು ಅಥವಾ ತೀವ್ರ ಗಂಡಾಂತರದ ವರ್ಷ ನಿಖರವಾಗಿ ತಿಳಿಯುತ್ತದೆ.

. "ರಾಹು-ಕೇತುಗಳ ಗುಪ್ತ ಬಿಂದು ಸಮನ್ವಯ" (The Shadow Planet Secret)

   ಅಷ್ಟಕವರ್ಗದಲ್ಲಿ ರಾಹು ಮತ್ತು ಕೇತುಗಳಿಗೆ ಪ್ರತ್ಯೇಕ ಚಾರ್ಟ್ ಇರುವುದಿಲ್ಲ. ಆದರೆ ನಾಡಿ ಜ್ಯೋತಿಷ್ಯದಲ್ಲಿ ಇವುಗಳಿಗೂ ಒಂದು ರಹಸ್ಯ ನಿಯಮವಿದೆ.

  ರಾಹು ಜಾತಕದಲ್ಲಿ ಯಾವ ರಾಶಿಯಲ್ಲಿ ಕುಳಿತಿದ್ದಾನೋ, ಆ ರಾಶಿಗೆ ಶನಿಯ ಭಿನ್ನಾಷ್ಟಕವರ್ಗದಲ್ಲಿ ಎಷ್ಟು ಬಿಂದುಗಳಿವೆ ಎಂದು ನೋಡಿ. ಅದೇ ರೀತಿ ಕೇತು ಕುಳಿತ ರಾಶಿಗೆ ಮಂಗಳನ ಭಿನ್ನಾಷ್ಟಕವರ್ಗದಲ್ಲಿ ಎಷ್ಟು ಬಿಂದುಗಳಿವೆ ಎಂದು ನೋಡಿ.

   ನಿಯಮ: ಶನಿಯ ಭಿನ್ನಾಷ್ಟಕದಲ್ಲಿ ರಾಹು ಇರುವ ಮನೆಗೆ 5 ಕ್ಕಿಂತ ಹೆಚ್ಚು ಬಿಂದುಗಳಿದ್ದರೆ, ಆ ರಾಹು ತನ್ನ ದಶೆಯಲ್ಲಿ ಅನಿರೀಕ್ಷಿತ ರಾಜಯೋಗ, ವಿದೇಶ ಯೋಗ ಮತ್ತು ಕೋಟ್ಯಂತರ ಹಣವನ್ನು ನೀಡುತ್ತಾನೆ. ಬಿಂದುಗಳು ಕಡಿಮೆ ಇದ್ದರೆ ಸರ್ಪದೋಷ ಅಥವಾ ತೀವ್ರ ಮಾನಸಿಕ ಅಶಾಂತಿ ತರುತ್ತಾನೆ.

 "ಸರ್ವಾಷ್ಟಕವರ್ಗದಿಂದ ಅದೃಷ್ಟ
 
     ಸೂತ್ರ: ಜಾತಕದ 1, 4, 7 10 ನೇ ಮನೆಗಳನ್ನು (ಕೇಂದ್ರ ಸ್ಥಾನಗಳು) ಮತ್ತು 1, 5 9 ನೇ ಮನೆಗಳನ್ನು (ತ್ರಿಕೋಣ ಸ್ಥಾನಗಳು) ಒಟ್ಟಿಗೆ ಸೇರಿಸಿ ಬಿಂದುಗಳನ್ನು ಲೆಕ್ಕ ಹಾಕಿ.
ಯಾರ ಜಾತಕದಲ್ಲಿ ಕೇಂದ್ರ ಮತ್ತು ತ್ರಿಕೋಣ ಸ್ಥಾನಗಳ ಒಟ್ಟು ಬಿಂದುಗಳ ಮೊತ್ತವು 180 ಕ್ಕಿಂತ ಹೆಚ್ಚಿರುತ್ತದೆಯೋ, ಅವರು ಈ ಭೂಮಿಯ ಮೇಲೆ ಅತ್ಯಂತ ಅದೃಷ್ಟವಂತರು. ಅವರು ಯಾವುದೇ ಬಡ ಕುಟುಂಬದಲ್ಲಿ ಹುಟ್ಟಿದರೂ, ತಮ್ಮ ಸ್ವಪ್ರಯತ್ನ ಮತ್ತು ಅದೃಷ್ಟದಿಂದ ಸಮಾಜದ ಅತ್ಯುನ್ನತ ಶಿಖರವನ್ನು ತಲುಪುತ್ತಾರೆ.

   ಗ್ರಹಯುದ್ಧ :--
       ಜಾತಕದಲ್ಲಿ ಎರಡು ಶತ್ರು ಗ್ರಹಗಳು (ಉದಾಹರಣೆಗೆ ಶನಿ ಮತ್ತು ಮಂಗಳ) ಒಂದೇ ಮನೆಯಲ್ಲಿ ಕುಳಿತಾಗ ಸಾಮಾನ್ಯವಾಗಿ 'ಗ್ರಹಯುದ್ಧ ' 'ದ್ವಂದ್ವ ಯುದ್ಧ' ಅಥವಾ ಕೆಟ್ಟ ಫಲ ಸಿಗುತ್ತದೆ ಎನ್ನಲಾಗುತ್ತದೆ. ಆದರೆ ಅಷ್ಟಕವರ್ಗದಲ್ಲಿ ಇದರ ಸತ್ಯವೇ ಬೇರೆ.

    ಆ ರಾಶಿಯಲ್ಲಿ ಯಾರ ಭಿನ್ನಾಷ್ಟಕವರ್ಗದಲ್ಲಿ ಹೆಚ್ಚು ಬಿಂದುಗಳಿವೆಯೋ, ಆ ಗ್ರಹವೇ ಯುದ್ಧದಲ್ಲಿ ಗೆಲ್ಲುತ್ತದೆ! ಉದಾಹರಣೆಗೆ ಮಂಗಳನಿಗೆ 6 ಬಿಂದುಗಳು ಮತ್ತು ಶನಿಗೆ 2 ಬಿಂದುಗಳಿದ್ದರೆ, ಆ ವ್ಯಕ್ತಿಗೆ ಶನಿಯ ದೋಷ ತಟ್ಟುವುದಿಲ್ಲ, ಬದಲಿಗೆ ಮಂಗಳನ ಶೌರ್ಯ ಮತ್ತು ಭೂಮಿ ಲಾಭ ಸಿಗುತ್ತದೆ.

. "ರಾಜಯೋಗ ಭಂಗ" ಮತ್ತು ನೀಚ ಗ್ರಹದ ಚಮತ್ಕಾರ (The Debilitated Planet Savior)

   ಗ್ರಹವೊಂದು ನೀಚ ರಾಶಿಯಲ್ಲಿದ್ದರೆ (Debilitated) ಅದು ಕೆಟ್ಟ ಫಲ ನೀಡುತ್ತದೆ ಎಂಬುದು ಸಾಮಾನ್ಯ ನಂಬಿಕೆ. ಆದರೆ ಪರಾಶರರು ಒಂದು ವಿನಾಯಿತಿ ನೀಡಿದ್ದಾರೆ.
ಏನೆಂದರೆ...
  ನೀಚನಾಗಿರುವ ಗ್ರಹದ ಭಿನ್ನಾಷ್ಟಕವರ್ಗದಲ್ಲಿ, ಆ ನೀಚ ರಾಶಿಗೆ 7 ಅಥವಾ 8 ಬಿಂದುಗಳು ಬಂದಿದ್ದರೆ, ಆ ಗ್ರಹವು ನೀಚತ್ವವನ್ನು ಕಳೆದುಕೊಂಡು 'ವಿಪರೀತ ರಾಜಯೋಗ'ವನ್ನು ನೀಡುತ್ತದೆ. ಆ ವ್ಯಕ್ತಿ ಶೂನ್ಯದಿಂದ ಕೋಟ್ಯಧಿಪತಿಯಾಗುತ್ತಾನೆ.

. "ಸರ್ವಾಷ್ಟಕವರ್ಗ ಮತ್ತು ಆಯುಷ್ಯದ ಕೊನೆಯ ದಿನಗಳು" (The Final Transition)

      ನಿಯಮ: ವ್ಯಕ್ತಿಯ ಜೀವನದ ಕೊನೆಯ ದಿನಗಳು ನೆಮ್ಮದಿಯಾಗಿರುತ್ತವೆಯೇ ಅಥವಾ ಕಷ್ಟದಿಂದ ಕೂಡಿರುತ್ತವೆಯೇ ಎಂಬುದನ್ನು ತಿಳಿಯಲು ಈ ನಿಯಮ ಉಪಯುಕ್ತ.
      ಸೂತ್ರ: ಜಾತಕದ ಕೊನೆಯ ಮೂರು ಮನೆಗಳಾದ 1೦, 11 ಮತ್ತು 12 ನೇ ಮನೆಗಳ ಬಿಂದುಗಳನ್ನು ನೋಡಿ. 10 ಮತ್ತು 11 ಕ್ಕಿಂತ 12 ನೇ ಮನೆಯಲ್ಲಿ ಬಿಂದುಗಳು ತೀರಾ ಕಡಿಮೆ ಇದ್ದು, 9 ಮತ್ತು 1 ನೇ ಮನೆಯಲ್ಲಿ ಬಿಂದುಗಳು ಹೆಚ್ಚಿದ್ದರೆ, ಆ ವ್ಯಕ್ತಿಯ ಮರಣವು ಯಾವುದೇ ನೋವಿಲ್ಲದೆ, ಅತ್ಯಂತ ಧಾರ್ಮಿಕ ಮತ್ತು ನೆಮ್ಮದಿಯ ವಾತಾವರಣದಲ್ಲಿ (ಮೋಕ್ಷದ ದಾರಿಯಲ್ಲಿ) ಆಗುತ್ತದೆ.

  "ಲಗ್ನಾಧಿಪತಿಯ ಬಿಂದು ಬಲ" ಮತ್ತು ಆರೋಗ್ಯದ ರಹಸ್ಯ (The Immunity Law)

   ಜಾತಕದ ಲಗ್ನಾಧಿಪತಿ ಯಾವ ರಾಶಿಯಲ್ಲಿ ಕುಳಿತಿದ್ದಾನೋ, ಆ ರಾಶಿಗೆ ಅವನದೇ ಭಿನ್ನಾಷ್ಟಕವರ್ಗದಲ್ಲಿ ಎಷ್ಟು ಬಿಂದುಗಳಿವೆ ಎಂದು ನೋಡಿ.
   ಲಗ್ನಾಧಿಪತಿ ಕುಳಿತ ಮನೆಗೆ ಅವನ ಭಿನ್ನಾಷ್ಟಕದಲ್ಲಿ 5 ಕ್ಕಿಂತ ಹೆಚ್ಚು ಬಿಂದುಗಳಿದ್ದರೆ, ಆ ವ್ಯಕ್ತಿಗೆ ಯಾವುದೇ ದೊಡ್ಡ ಕಾಯಿಲೆಗಳು ಬರುವುದಿಲ್ಲ. ಬಂದರೂ ಬೇಗ ಗುಣವಾಗುತ್ತಾರೆ (Immunity). ಒಂದು ವೇಳೆ ಅಲ್ಲಿ 2 ಕ್ಕಿಂತ ಕಡಿಮೆ ಬಿಂದುಗಳಿದ್ದರೆ, ಜಾತಕದಲ್ಲಿ ಎಷ್ಟೇ ದೊಡ್ಡ ಆಯುಷ್ಯ ಯೋಗವಿದ್ದರೂ ಆ ವ್ಯಕ್ತಿ ಸದಾ ರೋಗಪೀಡಿತನಾಗಿರುತ್ತಾನೆ.

. "ಗುರು ಮತ್ತು ಶನಿಯ ಮಹಾ ಮಿಲನ" ನಿಯಮ (The Grand Event Trigger)
    ಸರ್ವಾಷ್ಟಕವರ್ಗದಲ್ಲಿ ಅತ್ಯಂತ ಹೆಚ್ಚು ಬಿಂದುಗಳಿರುವ (ಉದಾಹರಣೆಗೆ 35 ಕ್ಕಿಂತ ಹೆಚ್ಚು) ರಾಶಿ ಯಾವುದು ಎಂದು ಕಂಡುಹಿಡಿದು, ಗೋಚಾರದ ಗುರು ಮತ್ತು ಶನಿ ಇಬ್ಬರೂ ತಮ್ಮ ಸಂಚಾರದ ಅವಧಿಯಲ್ಲಿ ಒಂದೇ ಬಾರಿಗೆ ಆ ರಾಶಿಯನ್ನು ನೋಡಿದಾಗ ಅಥವಾ ಆ ರಾಶಿಯಲ್ಲಿದ್ದಾಗ, ಜಾತಕನ ಜೀವನದ ಅತ್ಯಂತ ದೊಡ್ಡ ಶುಭ ಘಟನೆ (ಮದುವೆ, ದೊಡ್ಡ ಉದ್ಯೋಗ, ವಿದೇಶ ಪ್ರಯಾಣ ಅಥವಾ ಮಗುವಿನ ಜನನ) ಸಂಭವಿಸುತ್ತದೆ.

      ದೂರ ಪ್ರಯಾಣ (Long-distance Travel) ಮತ್ತು ತೀರ್ಥಯಾತ್ರೆಗಳ (Pilgrimage) ಸಮಯ ಹಾಗೂ ಯಶಸ್ಸನ್ನು ನಿರ್ಧರಿಸುವಲ್ಲಿ ಅಷ್ಟಕವರ್ಗ ಪದ್ಧತಿಯು ಅತ್ಯಂತ ನಿಖರವಾದ ಲೆಕ್ಕಾಚಾರವನ್ನು ನೀಡುತ್ತದೆ. ಜಾತಕದಲ್ಲಿ ಒಂಬತ್ತನೇ ಮನೆ (9th House - ತೀರ್ಥಯಾತ್ರೆ/ಭಾಗ್ಯ) ಮತ್ತು ಹನ್ನೆರಡನೇ ಮನೆ (12th House - ದೂರ ಪ್ರಯಾಣ/ವಿದೇಶ ಪ್ರವಾಸ) ಇವುಗಳನ್ನು ಪ್ರಧಾನವಾಗಿ ನೋಡಲಾಗುತ್ತದೆ. ಜಾತಕದ 9ನೇ ಮನೆಯಲ್ಲಿ ಸರ್ವಾಷ್ಟಕವರ್ಗದಲ್ಲಿ ಎಷ್ಟು ಬಿಂದುಗಳಿವೆ ಎಂದು ನೋಡಿ.
      ಗೋಚಾರದ ಗುರು ಗ್ರಹವು ಜಾತಕದ 9 ನೇ ಮನೆಗೆ ಬಂದಾಗ ಅಥವಾ ಗುರುವಿನ ಭಿನ್ನಾಷ್ಟಕವರ್ಗದಲ್ಲಿ 5 ಕ್ಕಿಂತ ಹೆಚ್ಚು ಬಿಂದುಗಳಿರುವ ರಾಶಿಗೆ ಪ್ರವೇಶಿಸಿದಾಗ, ಜಾತಕನಿಗೆ ಅತ್ಯಂತ ಪವಿತ್ರವಾದ ಪುಣ್ಯಕ್ಷೇತ್ರಗಳ ದರ್ಶನ ಹಾಗೂ ತೀರ್ಥಯಾತ್ರೆ ಮಾಡುವ ಸೌಭಾಗ್ಯ ಒದಗಿಬರುತ್ತದೆ. ಆ ಪ್ರಯಾಣವು ಅತ್ಯಂತ ಸುಖಕರ ಮತ್ತು ಆಧ್ಯಾತ್ಮಿಕ ಉನ್ನತಿ ನೀಡುವಂತದ್ದಾಗಿರುತ್ತದೆ.

.    "ಶನಿ-ಮಂಗಳ ಮತ್ತು ಪ್ರಯಾಣದ ಕಂಟಕ"  (The Travel Danger Alert)
      ಸೂತ್ರ: ಜಾತಕದ 8ನೇ ಮನೆ (ಅಪಘಾತ/ಗಂಡಾಂತರ) ಮತ್ತು 12 ನೇ ಮನೆ (ದೂರ ಪ್ರಯಾಣ) ಇವುಗಳ ಬಿಂದುಗಳನ್ನು ಗಮನಿಸಬೇಕು.
ಒಂದು ವೇಳೆ 12 ನೇ ಮನೆಯಲ್ಲಿ ಸರ್ವಾಷ್ಟಕವರ್ಗ ಬಿಂದುಗಳು ಹೆಚ್ಚಿದ್ದು (3೦+), ಆದರೆ ಅಲ್ಲಿ ಶನಿ ಅಥವಾ ಮಂಗಳನ ಭಿನ್ನಾಷ್ಟಕವರ್ಗದಲ್ಲಿ ಕೇವಲ ೦ ಅಥವಾ 1 ಬಿಂದು ಇದ್ದರೆ, ಆ ರಾಶಿಗೆ ಗೋಚಾರ ಗ್ರಹಗಳು ಬಂದಾಗ ದೂರ ಪ್ರಯಾಣ ಮಾಡಬಾರದು.ಅಂತಹ ಸಮಯದಲ್ಲಿ ಪ್ರಯಾಣ ಬೆಳೆಸಿದರೆ ಹಣದ ನಷ್ಟ, ಅಪಘಾತ, ಅಥವಾ ತೀರ್ಥಯಾತ್ರೆಗೆ ಹೋದ ಜಾಗದಲ್ಲಿ ತೀವ್ರ ಅನಾರೋಗ್ಯ ಎದುರಾಗುತ್ತದೆ. ಇದನ್ನು 'ಯಾತ್ರಾ ಭಂಗ ಯೋಗ' ಎನ್ನಲಾಗುತ್ತದೆ.

. "ಚಂದ್ರ ಮತ್ತು ಜಲಾವೃತ ತೀರ್ಥಕ್ಷೇತ್ರಗಳ" ರಹಸ್ಯ 
   ಚಂದ್ರನು ಜಲ ಗ್ರಹ ಮತ್ತು ಆತ ಪ್ರಯಾಣಕ್ಕೆ ಕಾರಕ. ಚಂದ್ರನ ಭಿನ್ನಾಷ್ಟಕವರ್ಗದಲ್ಲಿ ಜಲ ರಾಶಿಗಳಾದ ಕರ್ಕಾಟಕ, ವೃಶ್ಚಿಕ ಮತ್ತು ಮೀನ ರಾಶಿಗಳ ಬಿಂದುಗಳನ್ನು ಲೆಕ್ಕ ಹಾಕಿ....  ಈ ಜಲ ರಾಶಿಗಳಲ್ಲಿ ಚಂದ್ರನಿಗೆ 5 ಕ್ಕಿಂತ ಹೆಚ್ಚು ಬಿಂದುಗಳಿದ್ದರೆ, ಆ ವ್ಯಕ್ತಿ ತನ್ನ ಜೀವನದಲ್ಲಿ ಕಾಶಿ, ರಾಮೇಶ್ವರ, ಜಗನ್ನಾಥ ಪುರಿ ಅಥವಾ ಸಮುದ್ರ/ನದಿ ತೀರದಲ್ಲಿರುವ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುತ್ತಾನೆ. ಗೋಚಾರ ಚಂದ್ರನು ಆ ಬಿಂದು ಬಲವಿರುವ ರಾಶಿಗೆ ಬಂದ ದಿನಗಳಲ್ಲೇ ತೀರ್ಥಯಾತ್ರೆಯ ಯೋಗ ಕೂಡಿಬರುತ್ತದೆ.

,    ಇಂದಿನ ದಿನಗಳಲ್ಲಿ ಜನರು ತೀರ್ಥಯಾತ್ರೆಗೆ ಅಥವಾ ವಿದೇಶ ಪ್ರವಾಸಕ್ಕೆ ಹೋಗುವಾಗ ಕೇವಲ ವಾರ-ತಿಂಗಳುಗಳನ್ನಷ್ಟೇ ನೋಡುತ್ತಾರೆ. ಆದರೆ ಅಷ್ಟಕವರ್ಗದ 9 ಮತ್ತು 12 ನೇ ಮನೆಯ ಬಿಂದು ಬಲವನ್ನು ನೋಡದೆ ಹೋದರೆ, ಪುಣ್ಯಕ್ಷೇತ್ರಕ್ಕೆ ಹೋದರೂ ನೆಮ್ಮದಿ ಸಿಗುವುದಿಲ್ಲ. ಬಿಂದುಗಳು ಬಲಿಷ್ಠವಾಗಿದ್ದಾಗ ಹೋಗುವ ಯಾತ್ರೆಯು ಮಾತ್ರ ಮನುಷ್ಯನಿಗೆ ನಿಜವಾದ ಆತ್ಮಶಾಂತಿ ಮತ್ತು ದೈವಾನುಗ್ರಹವನ್ನು ತಂದುಕೊಡುತ್ತದೆ.. ಹಾಗೆಯೇ ರವಿ ಸಂಚಾರದಿಂದ ಕೂಡಾ ನಾವುಗಳು ಯಾತ್ರೆಯ ಯಶಸ್ಸನ್ನು ನಿರೀಕ್ಷಿಸಬಹುದು.. ಹೇಗೆಂದರೆ, ಸರ್ವಾಷ್ಟಕವರ್ಗದಲ್ಲಿ ಅತಿ ಹೆಚ್ಚು ಬಿಂದುಗಳಿರುವ ರಾಶಿಯಲ್ಲಿ ಸೂರ್ಯನು ಸಂಚರಿಸುವಾಗ ಕೈಗೊಳ್ಳುವ ಪ್ರಯಾಣವು ಅತ್ಯಂತ ಯಶಸ್ವಿ, ಗೌರವಯುತ ಮತ್ತು ಲಾಭದಾಯಕವಾಗಿರುತ್ತದೆ.

      ಸೂರ್ಯನೇ ಆತ್ಮಕಾರಕ ಮತ್ತು ಬೆಳಕು: ಜ್ಯೋತಿಷ್ಯದಲ್ಲಿ ಸೂರ್ಯನನ್ನು ರಾಜ, ಕೀರ್ತಿ, ಯಶಸ್ಸು ಮತ್ತು ಅಧಿಕಾರದ ಕಾರಕ ಎನ್ನಲಾಗುತ್ತದೆ. ಸರ್ವಾಷ್ಟಕವರ್ಗದಲ್ಲಿ 3೦ ಕ್ಕಿಂತ ಹೆಚ್ಚು ಬಿಂದುಗಳಿರುವ ಬಲಿಷ್ಠ ರಾಶಿಗೆ ಸೂರ್ಯನು ಪ್ರವೇಶಿಸಿದಾಗ ಆ ರಾಶಿಗೆ ವಿಶೇಷವಾದ 'ಪ್ರಕಾಶ' (Energy) ಸಿಗುತ್ತದೆ.
ಪ್ರಯಾಣದಲ್ಲಿ ರಾಜಗೌರವ (The Royal Travel): ಸೂರ್ಯನು ಅತಿ ಹೆಚ್ಚು ಬಿಂದುಗಳಿರುವ ರಾಶಿಯಲ್ಲಿ ಸಂಚರಿಸುವ ಆ ಒಂದು ತಿಂಗಳ ಅವಧಿಯಲ್ಲಿ (ಸಂಕ್ರಮಣದಿಂದ ಸಂಕ್ರಮಣದವರೆಗೆ) ಕೈಗೊಳ್ಳುವ ದೂರ ಪ್ರಯಾಣ, ಉದ್ಯೋಗದ ನಿಮಿತ್ತ ಪ್ರಯಾಣ ಅಥವಾ ತೀರ್ಥಯಾತ್ರೆಗಳು ಯಾವುದೇ ಅಡೆತಡೆಗಳಿಲ್ಲದೆ ಪೂರ್ಣಗೊಳ್ಳುತ್ತವೆ. ಸರ್ಕಾರಿ ಕೆಲಸಗಳು, ಉನ್ನತ ಅಧಿಕಾರಿಗಳ ಭೇಟಿ ಅಥವಾ ಉದ್ಯಮದ ಮಾತುಕತೆಗಾಗಿ ಮಾಡುವ ಪ್ರಯಾಣವಾಗಿದ್ದರೆ ಅದರಲ್ಲಿ ಭಾರಿ ಜಯ ಸಿಗುತ್ತದೆ.

     ದೂರ ಪ್ರಯಾಣ ಅಥವಾ ವಿದೇಶ ಪ್ರವಾಸಕ್ಕೆ ವರ್ಷದ ಯಾವ ತಿಂಗಳು ಶ್ರೇಷ್ಠ ಎಂದು ತಿಳಿಯಲು ಸೂರ್ಯನ ಗೋಚಾರವೇ ಆಧಾರ. ನಾವು ದಿನದ ಮುಹೂರ್ತಕ್ಕೆ ಚಂದ್ರಬಲವನ್ನು ನೋಡುತ್ತೇವೆ. ಆದರೆ ಇಡೀ ತಿಂಗಳ ಯಶಸ್ಸಿಗೆ ಸೂರ್ಯಬಲ ಅತ್ಯಾವಶ್ಯಕ. ಸರ್ವಾಷ್ಟಕವರ್ಗದ ಗರಿಷ್ಠ ಬಿಂದುಗಳ ರಾಶಿಯಲ್ಲಿ ಸೂರ್ಯನಿರುವಾಗ ಹೊರಟರೆ, ಆ ಪ್ರಯಾಣದಲ್ಲಿ ನಮಗೆ ರಾಜಗೌರವ ಸಿಗುತ್ತದೆ ಎಂಬುದು ಅಷ್ಟಕವರ್ಗದ ಪ್ರಾಯೋಗಿಕ ಸತ್ಯ...

    ವಿದ್ಯಾಭ್ಯಾಸ, ಬುದ್ಧಿಶಕ್ತಿ, ಮತ್ತು ಜ್ಞಾನಾರ್ಜನೆಯ ನಿಖರವಾದ ವಿಶ್ಲೇಷಣೆಗೆ ಬುಧನ ಭಿನ್ನಾಷ್ಟಕವರ್ಗವನ್ನು ನೋಡುವುದು ಅತ್ಯಗತ್ಯ.
ಜ್ಯೋತಿಷ್ಯದಲ್ಲಿ ಬುಧನನ್ನು 'ಬುದ್ಧಿಕಾರಕ' ಮತ್ತು 'ವಿದ್ಯಾಕಾರಕ' ಎನ್ನಲಾಗುತ್ತದೆ. 
ಬುಧನ ಬಿಂದು ಬಲ" ಮತ್ತು ಏಕಾಗ್ರತೆ (Concentration & Intellect) ಜಾತಕರಿಗೆ ಯಾವ ರೀತಿ ಸಹಾಯಕ ಆಗುತ್ತೆ ಎಂದು ನೋಡುವಾಗ.....
  ಜನ್ಮ ಲಗ್ನದಿಂದ 4ನೇ ಮನೆ (ವಿದ್ಯಾ ಸ್ಥಾನ) ಮತ್ತು 5ನೇ (ಬುದ್ಧಿ ಸ್ಥಾನ) ಆ ಮನೆಗಳಿಗೆ ಬುಧನ ಭಿನ್ನಾಷ್ಟಕವರ್ಗದಲ್ಲಿ ಎಷ್ಟು ಬಿಂದುಗಳು ಬಂದಿವೆ ಎಂಬುದನ್ನು ಲೆಕ್ಕ ಹಾಕಬೇಕು.
ಬುಧನ ಭಿನ್ನಾಷ್ಟಕದಲ್ಲಿ 4 ಮತ್ತು 5ನೇ ಮನೆಗಳಿಗೆ 5 ಅಥವಾ ಅದಕ್ಕಿಂತ ಹೆಚ್ಚು ಬಿಂದುಗಳು ಇದ್ದರೆ, ಆ ಮಗುವಿಗೆ ಅದ್ಭುತವಾದ ಜ್ಞಾಪಕ ಶಕ್ತಿ, ಏಕಾಗ್ರತೆ ಮತ್ತು ಬುದ್ಧಿವಂತಿಕೆ ಇರುತ್ತದೆ. ಪರೀಕ್ಷೆಗಳಲ್ಲಿ ಸದಾ ಮುಂಚೂಣಿಯಲ್ಲಿರುತ್ತಾರೆ.
, "ಜಾತಕದಲ್ಲಿ ಬುಧ ಉಚ್ಚನಾಗಿದ್ದರೂ, ಅವನ ಭಿನ್ನಾಷ್ಟಕದಲ್ಲಿ ವಿದ್ಯಾ ಸ್ಥಾನಕ್ಕೆ ಬಿಂದುಗಳು ಕಡಿಮೆ ಇದ್ದರೆ ಮಗುವಿಗೆ ಓದಿನಲ್ಲಿ ಆಸಕ್ತಿ ಇರುವುದಿಲ್ಲ. ಅಷ್ಟಕವರ್ಗದ ಬಿಂದುಗಳೇ ನಿಜವಾದ ಬುದ್ಧಿಶಕ್ತಿಯ ಅಳತೆಗೋಲು."

   ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಉನ್ನತ ಶಿಕ್ಷಣಕ್ಕೆ (Competitive Exams & Degrees) ಜಾತಕದ 6ನೇ ಮನೆ (ಸ್ಪರ್ಧೆ/ಪರೀಕ್ಷೆ) ಮತ್ತು 9ನೇ ಮನೆ (ಉನ್ನತ ಶಿಕ್ಷಣ/Higher Studies) ಇವುಗಳನ್ನು ಗಮನಿಸಬೇಕು.

    ಬುಧನ ಭಿನ್ನಾಷ್ಟಕವರ್ಗದಲ್ಲಿ 5 ನೇ ಮನೆಗಿಂತ 6ನೇ ಮನೆಯಲ್ಲಿ ಬಿಂದುಗಳು ಹೆಚ್ಚಿದ್ದರೆ, ಆ ವಿದ್ಯಾರ್ಥಿಯು ಐಎಎಸ್ (IAS), ಬ್ಯಾಂಕಿಂಗ್ ಅಥವಾ ಯಾವುದೇ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸುಲಭವಾಗಿ ಪಾಸ್ ಮಾಡುತ್ತಾನೆ. 9ನೇ ಮನೆಯಲ್ಲಿ ಬಿಂದುಗಳು ಹೆಚ್ಚಿದ್ದರೆ ವಿದೇಶಕ್ಕೆ ಹೋಗಿ ಉನ್ನತ ಪದವಿ ಪಡೆಯುವ ಯೋಗವಿರುತ್ತದೆ.

   ಬುಧ ಗೋಚಾರ ಮತ್ತು ಫಲಿತಾಂಶದ ಕಾಲ (Exam Results & Success)
    ಗೋಚಾರದ ಬುಧನು ವರ್ಷದಲ್ಲಿ ಯಾವ ಸಮಯದಲ್ಲಿ ಬಲಿಷ್ಠವಾಗಿರುತ್ತಾನೆ ಎಂದರೆ ಬುಧನ ಭಿನ್ನಾಷ್ಟಕವರ್ಗದಲ್ಲಿ 6 ,7 ಅಥವಾ 8 ಬಿಂದುಗಳಿರುವ ಬಲವಾದ ರಾಶಿಯಲ್ಲಿ ಸಂಚರಿಸುತ್ತಿರುವ ಕಾಲ. ಒಂದು ವೇಳೆ ವಿದ್ಯಾರ್ಥಿಗಳ ಪರೀಕ್ಷಾ ಸಮಯದಲ್ಲಿ ಬಲವಾದ ರಾಶಿಯಲ್ಲಿ ಬುಧನ ಸಂಚಾರ ವಿದ್ದರೆ, ಆ ವಿದ್ಯಾರ್ಥಿಗೆ ಅತ್ಯಂತ ಪ್ರಶಂಸನೀಯ ಅಂಕಗಳು ಮತ್ತು ಯಶಸ್ಸು ಸಿಗುತ್ತದೆ.

    ಬುಧನ ಅಷ್ಟಕವರ್ಗದಲ್ಲಿ ಒಂದು ರಾಶಿಗೆ ೦ ಬಿಂದುವಿದ್ದು, ಗೋಚಾರ ಬುಧ ಅಲ್ಲಿಗೆ ಬಂದಾಗ ವ್ಯಕ್ತಿಯ ಬುದ್ಧಿ ಸಂಪೂರ್ಣ ಭ್ರಮಿತಗೊಳ್ಳುತ್ತದೆ, ವ್ಯಾಪಾರದಲ್ಲಿ ದಿಢೀರ್ ನಷ್ಟ ಅಥವಾ ತಪ್ಪು ನಿರ್ಧಾರಗಳಿಂದ ಹಾನಿಯಾಗುತ್ತದೆ.

   "ಬಾಹುಬಲ ಗ್ರಹ" ಮತ್ತು ಲಾಟರಿ ಯೋಗ
ಜಾತಕದ 12ಮನೆಗಳಲ್ಲಿ ಗ್ರಹಗಳು ಹಂಚಿಹೋಗಿರುತ್ತವೆ. ಆದರೆ ಯಾವ ಮನೆಯಲ್ಲಿ ಅತಿ ಹೆಚ್ಚು ಬಿಂದುಗಳಿರುತ್ತವೆಯೋ, ಆ ಮನೆಯಲ್ಲಿ ಕುಳಿತಿರುವ ಗ್ರಹಕ್ಕೆ 'ಬಾಹುಬಲಿ ಗ್ರಹ' ಅಥವಾ ಸರ್ವಾಧಿಕಾರಿ ಗ್ರಹ ಎನ್ನಲಾಗುತ್ತದೆ. ಆ ಗ್ರಹವು ಜಾತಕದಲ್ಲಿ ಎಷ್ಟೇ ದುರ್ಬಲವಾಗಿದ್ದರೂ (ನೀಚವಾಗಿದ್ದರೂ ಅಥವಾ ಶತ್ರು ಮನೆಯಲ್ಲಿದ್ದರೂ), ತನ್ನ ದಶೆ ಅಥವಾ ಭುಕ್ತಿ ಬಂದಾಗ ವ್ಯಕ್ತಿಗೆ ಅನಿರೀಕ್ಷಿತ ಧನಲಾಭ, ಲಾಟರಿ ಹೊಡೆದಂತಹ ಅದೃಷ್ಟ ಅಥವಾ ಸಮಾಜದಲ್ಲಿ ದೊಡ್ಡ ಹುದ್ದೆಯನ್ನು ತಂದುಕೊಡುತ್ತದೆ. ಅಷ್ಟಕವರ್ಗದ ಬಿಂದುಗಳು ಗ್ರಹದ ಬಾಹ್ಯ ದೋಷಗಳನ್ನು ತೊಡೆದುಹಾಕುತ್ತವೆ!

. "ತ್ರಿಕೋಣ ಶೋಧನೆ"ಯಿಂದ ಶತ್ರುಗಳ ನಾಶ (The Enemy Reduction)
   ತ್ರಿಕೋಣ ಶೋಧನೆಯ ನಂತರ 6 ನೇ ಮನೆಯಲ್ಲಿ (ಶತ್ರು ಸ್ಥಾನ) ಬಿಂದುಗಳ ಸಂಖ್ಯೆ ಶೂನ್ಯವಾದರೆ ಅಥವಾ ತೀರಾ ಕಡಿಮೆಯಾದರೆ, ಆ ವ್ಯಕ್ತಿಯ ಜೀವನದಲ್ಲಿ ಶತ್ರುಗಳೇ ಇರುವುದಿಲ್ಲ. ಒಂದು ವೇಳೆ ಶತ್ರುಗಳು ಹುಟ್ಟಿಕೊಂಡರೂ ಅವರು ತಾವಾಗಿಯೇ ನಾಶವಾಗುತ್ತಾರೆ ಅಥವಾ ಜಾತಕನ ಮುಂದೆ ಶರಣಾಗುತ್ತಾರೆ. ಇದನ್ನು ಅಜಾತಶತ್ರು ಯೋಗ ಎನ್ನಬಹುದು.

 "ದಿಗ್ಬಲ" ಮತ್ತು ಗ್ರಹಗಳ ದಿಕ್ಕಿನ ರಹಸ್ಯ

   ಪ್ರತಿಯೊಂದು ಗ್ರಹಕ್ಕೂ ಅಷ್ಟಕವರ್ಗದಲ್ಲಿ ಒಂದು ನಿರ್ದಿಷ್ಟ ದಿಕ್ಕಿನಲ್ಲಿ ಅತಿ ಹೆಚ್ಚು ಬಿಂದುಗಳು ಸಿಗುತ್ತವೆ.
  ಸೂರ್ಯ ಮತ್ತು ಕುಜನಿಗೆ 1೦ನೇ ಮನೆಯಲ್ಲಿ (ದಕ್ಷಿಣ ದಿಕ್ಕು), ಬುಧ, ಗುರುವಿಗೆ 1 ನೇ ಮನೆಯಲ್ಲಿ (ಪೂರ್ವ ದಿಕ್ಕು), ಶನಿಗೆ 7 ನೇ ಮನೆಯಲ್ಲಿ (ಪಶ್ಚಿಮ ದಿಕ್ಕು) ಶುಕ್ರ ಚಂದ್ರ ರಿಗೆ 4 ನೇ ಮನೆಯಲ್ಲಿ ಬಿಂದುಗಳು ಹೆಚ್ಚಿದ್ದರೆ ಆ ಗ್ರಹಗಳಿಗೆ ದಿಗ್ಬಲ ಬರುತ್ತದೆ. ಜಾತಕದಲ್ಲಿ ಈ ದಿಕ್ಕುಗಳ ಬಲ ಚೆನ್ನಾಗಿದ್ದರೆ, ವ್ಯಕ್ತಿಯು ಆಯಾ ದಿಕ್ಕಿಗೆ ಸಂಬಂಧಿಸಿದ ಉದ್ಯೋಗ ಅಥವಾ ಆಯಾ ಗ್ರಹಕ್ಕೆ ಸಂಬಂಧ ಪಟ್ಟಂತೆ ವ್ಯಾಪಾರ ವ್ಯವಹಾರ ಮಾಡಿದರೆ ಜಗತ್ಪ್ರಸಿದ್ಧನಾಗುತ್ತಾನೆ.

"ಅಷ್ಟಕವರ್ಗ ಮತ್ತು ನವಮಾಂಶ (Navamsa Connection)
    ನಾವಿಲ್ಲಿಯವರೆಗೆ ಕೇವಲ ರಾಶಿ ಕುಂಡಲಿಯಲ್ಲಿ (D-1) ಬಿಂದುಗಳನ್ನು ನೋಡಿದ್ದೆವು. ಆದರೆ ಫಲಿತಾಂಶದ ನೈಜ ತೀವ್ರತೆಯನ್ನು ತಿಳಿಯಲು ಇದನ್ನು ನವಮಾಂಶಕ್ಕೂ ಅನ್ವಯಿಸಬಹುದು.
    ಗೊಚಾರದಲ್ಲಿ ಯಾವುದಾದರೂ ಒಂದು ಗ್ರಹವು (ಉದಾಹರಣೆಗೆ ಗುರು ಅಥವಾ ಶನಿ) ಸಾಗುತ್ತಿರುವಾಗ, ಅದು ನವಮಾಂಶ ಕುಂಡಲಿಯಲ್ಲಿ ಯಾವ ರಾಶಿಯನ್ನು ಪ್ರವೇಶಿಸುತ್ತದೆಯೋ, ಆ ರಾಶಿಗೆ ರಾಶಿ ಕುಂಡಲಿಯ ಸರ್ವಾಷ್ಟಕವರ್ಗದಲ್ಲಿ ಎಷ್ಟು ಬಿಂದುಗಳಿವೆ ಎಂದು ನೋಡಬೇಕು.
   ನವಮಾಂಶದಲ್ಲಿ ಗ್ರಹ ಇರುವ ರಾಶಿಗೆ ಮೂಲ ಸರ್ವಾಷ್ಟಕವರ್ಗದಲ್ಲಿ 32 ಕ್ಕಿಂತ ಹೆಚ್ಚು ಬಿಂದುಗಳಿದ್ದರೆ ಆ ಗ್ರಹವು ಮೇಲ್ನೋಟಕ್ಕೆ ಗೋಚಾರದಲ್ಲಿ ಕೆಟ್ಟ ಸ್ಥಾನದಲ್ಲಿದ್ದರೂ (ಉದಾಹರಣೆಗೆ 8 ಅಥವಾ 12ನೇ ಮನೆಯಲ್ಲಿದ್ದರೂ), ನವಮಾಂಶದ ಬಲದಿಂದಾಗಿ ವ್ಯಕ್ತಿಗೆ ಕೇವಲ ಒಳ್ಳೆಯ ಫಲಗಳನ್ನೇ ನೀಡುತ್ತದೆ! ಕಷ್ಟಗಳು ಧೂಳೀಪಟವಾಗುತ್ತದೆ.

       ಸರ್ವಾಷ್ಟಕವರ್ಗದಲ್ಲಿ ಕೆಲವು ಮನೆಗಳ ಬಿಂದುಗಳ ಪರಸ್ಪರ ಸಂಬಂಧದಿಂದ ಅತ್ಯಂತ ವಿರಳವಾದ ಯೋಗಗಳು ಸೃಷ್ಟಿಯಾಗುತ್ತವೆ.
   ಹೇಗೆಂದರೆ... ಜಾತಕದಲ್ಲಿ 1ನೇ ಮನೆ (ಲಗ್ನ), 4ನೇ ಮನೆ (ಸುಖ), 9 ನೇ ಮನೆ (ಭಾಗ್ಯ) ಮತ್ತು 11ನೇ ಮನೆ (ಲಾಭ)—ಈ ನಾಲ್ಕೂ ಮನೆಗಳಲ್ಲಿ ತಲಾ 3೦ ಅಥವಾ ಅದಕ್ಕಿಂತ ಹೆಚ್ಚು ಬಿಂದುಗಳಿದ್ದರೆ ಅದನ್ನು ಅಷ್ಟಕವರ್ಗದ ಅತ್ಯುನ್ನತ 'ಕಾಮಧೇನು ಯೋಗ' ಎನ್ನಲಾಗುತ್ತದೆ.
  ಫಲ: ಇಂತಹ ಜಾತಕದವರು ಯಾವುದೇ ಬಡ ಕುಟುಂಬದಲ್ಲಿ ಹುಟ್ಟಿದರೂ, ಸ್ವಂತ ಬುದ್ಧಿವಂತಿಕೆ ಮತ್ತು ದೈವಬಲದಿಂದ ಅದ್ಭುತ ಸಾಮ್ರಾಜ್ಯವನ್ನು ಕಟ್ಟುತ್ತಾರೆ. ಇವರ ಜೀವನದಲ್ಲಿ ಸೋಲು ಎನ್ನುವುದು ತೀರಾ ವಿರಳ.

 "ಗ್ರಹಗಳ ಯುದ್ಧ"
    ಜಾತಕದಲ್ಲಿ ಎರಡು ಗ್ರಹಗಳು ಒಂದೇ ಮನೆಯಲ್ಲಿ ತೀರಾ ಹತ್ತಿರದ ಡಿಗ್ರಿಗಳಲ್ಲಿ ಕುಳಿತಾಗ ಅದಕ್ಕೆ 'ಗ್ರಹ ಯುದ್ಧ' (Planetary War) ಎನ್ನಲಾಗುತ್ತದೆ. ಸಾಮಾನ್ಯವಾಗಿ ಇಂತಹ ಸಮಯದಲ್ಲಿ ಯಾವ ಗ್ರಹ ಗೆದ್ದಿದೆ ಎಂದು ತಿಳಿಯಲು ಗೊಂದಲವಾಗುತ್ತದೆ. ಆಗ ಯಾವ ಗ್ರಹದ ಭಿನ್ನಾಷ್ಟಕವರ್ಗದಲ್ಲಿ ಆ ನಿರ್ದಿಷ್ಟ ರಾಶಿಗೆ ಹೆಚ್ಚು ಬಿಂದುಗಳು ಸಿಕ್ಕಿರುತ್ತವೆಯೋ, ಆ ಗ್ರಹವೇ ಯುದ್ಧದಲ್ಲಿ ವಿಜಯಶಾಲಿ ಎಂದು ತೀರ್ಮಾನಿಸಲಾಗುತ್ತದೆ! ಆ ಗ್ರಹವೇ ಜಾತಕನ ಜೀವನದ ದಿಕ್ಕನ್ನು ಬದಲಾಯಿಸುವ ಶಕ್ತಿ ಹೊಂದುತ್ತದೆ.

ಗ್ರಹಗಳ ಉದಯ-ಅಸ್ತಂಗತ" ಮತ್ತು ಬಿಂದುಗಳು (Combustion vs Points)
    ಸಾಮಾನ್ಯವಾಗಿ ಜ್ಯೋತಿಷ್ಯದಲ್ಲಿ ಯಾವುದೇ ಗ್ರಹವು ಸೂರ್ಯನ ಹತ್ತಿರ ಬಂದು ಅಸ್ತಂಗತ (Combust) ಆದಾಗ, ಆ ಗ್ರಹ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ ಮತ್ತು ಕೆಟ್ಟ ಫಲ ನೀಡುತ್ತದೆ ಎಂದು ಹೇಳಲಾಗುತ್ತದೆ. ಆದರೆ ಅಷ್ಟಕವರ್ಗ ಈ ನಿಯಮಕ್ಕೆ ಒಂದು ದೊಡ್ಡ ವಿನಾಯಿತಿ ನೀಡುತ್ತದೆ! ಹೇಗೆಂದರೆ..
    ಒಂದು ಗ್ರಹವು ಜಾತಕದಲ್ಲಿ ಅಸ್ತಂಗತವಾಗಿದ್ದರೂ (Combust), ಭಿನ್ನಾಷ್ಟಕವರ್ಗದಲ್ಲಿ ಆ ಗ್ರಹಕ್ಕೆ ಆ ಮನೆಯಲ್ಲಿ 6 ಅಥವಾ ಅದಕ್ಕಿಂತ ಹೆಚ್ಚು ಬಿಂದುಗಳು ಸಿಕ್ಕಿದ್ದರೆ, ಆ ಗ್ರಹವು ಅಸ್ತಂಗತ ದೋಷದಿಂದ ಮುಕ್ತವಾಗುತ್ತದೆ!
ಫಲಿತಾಂಶ: ಆ ಗ್ರಹವು ತನ್ನ ದಶೆ ಅಥವಾ ಮುಹೂರ್ತದಲ್ಲಿ ಯಾವುದೇ ಕಂಟಕವನ್ನು ಕೊಡುವುದಿಲ್ಲ, ಬದಲಿಗೆ ಅತ್ಯಂತ ಶುಭ ಫಲಗಳನ್ನೇ ನೀಡುತ್ತದೆ. ಏಕೆಂದರೆ ಅಷ್ಟಕವರ್ಗದ ಬಿಂದುಗಳು ಆ ಗ್ರಹಕ್ಕೆ ಆಂತರಿಕವಾಗಿ 'ದಿಗ್ಬಲ' ಮತ್ತು 'ಚೇಷ್ಟಾಬಲ'ವನ್ನು ಒದಗಿಸುತ್ತವೆ.

"ಹೀಗೆ ಅಷ್ಟಕವರ್ಗ ಎಂಬುದು ಕೇವಲ ಅಂಕಿ-ಅಂಶಗಳ ಆಟವಲ್ಲ. ಇದು ಪರಾಶರ ಮಹರ್ಷಿಗಳು ನಮಗೆ ನೀಡಿರುವ ದಿವ್ಯ ಜ್ಞಾನದ ಗಣಿ. ಸಾಮಾನ್ಯ ದೃಷ್ಟಿಗೆ ಕಾಣಿಸದ ಜಾತಕದ ಗುಪ್ತ ರಹಸ್ಯಗಳನ್ನು ಈ ಬಿಂದುಗಳು ನಮಗೆ ಕನ್ನಡಿಯಂತೆ ತೋರಿಸುತ್ತವೆ..."

      ಮಹರ್ಷಿ ಪರಾಶರರು ಅನುಗ್ರಹಿಸಿದ ಅಷ್ಟಕವರ್ಗದ ಈ ಅದ್ಭುತ ಜ್ಞಾನಗಂಗೆಯಿಂದ  ಬಿಂದುಗಳ ರಹಸ್ಯ, ಭಿನ್ನಾಷ್ಟಕವರ್ಗ, ಸರ್ವಾಷ್ಟಕವರ್ಗದ ತತ್ವಗಳು ಹಾಗೂ ಶೋಧ್ಯಪಿಂಡದ ಅತ್ಯುನ್ನತ ಗಣಿತದಿಂದ ಜೀವನದ ಆಗುಹೋಗುಗಳನ್ನು ನಿಖರವಾಗಿ ತಿಳಿಯಬಹುದು.

ಅಷ್ಟಕವರ್ಗ ಮಹಾಕಾವ್ಯ
***********************
​ಲಗ್ನವನ್ನೊಳಗೊಂಡು ಸಪ್ತಗ್ರಹಗಳ ಕೂಡಿ,
ಎಂಟು ಕೋನದಿ ಜಾತಕದ ಬಲವ ನೋಡಿ.
ರವಿ-ಚಂದ್ರ-ಕುಜ-ಬುಧ-ಗುರು-ಶುಕ್ರ-ಶನಿ ಸೇರಿ,
ಹಂಚುವರು ಬಿಂದುಗಳ ರಾಶಿಚಕ್ರವನೇರಿ.

​ತನು-ಧನ-ಸಹಜ-ಸುಖ-ಪುತ್ರ-ರಿಪು ಭಾವಗಳು,
ಕಳತ್ರ-ಆಯುಷ್ಯ-ಧರ್ಮ-ಕರ್ಮ-ಲಾಭ-ವ್ಯಯಗಳು.
ಮೂವತ್ತಕ್ಕೂ ಹೆಚ್ಚಿದರೆ ಶುಭಫಲದ ಶುಭ ಸ್ಥಿತಿ,
ಒಟ್ಟು ಮುನ್ನೂರ ಮೂವತ್ತೇಳು ಬಿಂದುಗಳ ಮಿತಿ.

​ಏಳು ಗ್ರಹ, ಜೊತೆಗೆ ಲಗ್ನದ ಶಕ್ತಿಯು ಸೇರಿ,
ಎಂಟು ಗರಿಷ್ಠ ಬಿಂದುಗಳ ನೀಡಲಿಕೆ ದಾರಿ.
ಜಾತಕದ ನಿರ್ದಿಷ್ಟ ಮನೆಗಳಿಗೆ ಸಪ್ತ ಗ್ರಹಗಳು,
ಹಂಚುವುವು ಶುಭ-ಅಶುಭ ಲೆಕ್ಕದ ಭಾವಗಳು.

​ಎಂಟು ಬಿಂದುಗಳಲ್ಲಿ ಗ್ರಹಕೆ ಅತಿ ಬಲವು ಸಿಗಲು,
ಶುಭ ಫಲದ ಸುರಿ ಮಳೆ ನಿರಂತರವು ಹರಿಯಲು.
ಬಿಂದುವೆಂದರೆ ಶುಭವು, ರೇಖೆ ಶೂನ್ಯದ ಫಲವು,
ಬಿಂದುಗಳ ಲೆಕ್ಕದಲ್ಲಿದೆ ಶುಭಾಶುಭದ ಬಲವು.

​ಸಾಮುದಾಯಿಕ ವರ್ಗದಲ್ಲಿ ಬಿಂದುಗಳು ಹರಿದು,
ಮೂವತ್ತು ದಾಟಿದರೆ ಯಶಸ್ಸಿನ ಹಾದಿ ತೆರೆದು.
ಇಪ್ಪತ್ತನಾಲ್ಕಕ್ಕಿಂತ ಕೆಳಗೆ ಬಿದ್ದಾಗ ಬಿಂದುಗಳ ಲೆಕ್ಕ,
ಸವಾಲಿನ ಹಾದಿಯಿದು, ಜಾರೆ ತೊಂದರೆಯು ಪಕ್ಕಾ.

​ತ್ರಿಕೋಣ ಶೋಧನೆಯಲ್ಲಿ ರಾಶಿ ಶೋಧಿಸುತ ,
ಏಕಾಧಿಪತ್ಯದಲಿ ಶೋಧ, ದೋಷ ಕಳೆಯುತ
ಪಿಂಡ ಶೋಧನೆಯ ಮಾಡಿ ಗುಣಕವ ಕೊಟ್ಟು,
ಆಯುಷ್ಯ-ಸಂಪತ್ತು- ಶುಭತ್ವದ ಲೆಕ್ಕವ ಇಟ್ಟು.

​ಗೋಚಾರ ಶನಿಯು ಬಂದು ತ್ರಿಕೋಣದಿ ನಿಂತಾಗ,
ಕಡಿಮೆ ಬಿಂದುವಿದ್ದರೆ ಕಂಟಕವು ಜಾತಕಗೆ ಆಗ.
ಅಧಿಕ ಬಿಂದುವಿನ ರಾಶಿಗೆ ಗುರುವು ಬಂದಾಗ,
ಸಂಪತ್ತು ಸನ್ಮಾನ ದೈವಕೃಪೆ ಒದಗುವುದು ಬೇಗ 

​ಜ್ಯೋತಿಷ್ಯ ಸಾಗರದಿ ಅಷ್ಟಕವರ್ಗವೇ ದೋಣಿ,
ಇದನರಿತ ಜ್ಯೋತಿಷಿಯರಿಯುವ ದೈವವಾಣಿ!
ಗ್ರಹಬಲದ ರಹಸ್ಯವನು ಅರಿತಮೇಲಿನ್ನು,
ನಿಖರವಾಗಿ ನುಡಿಯಬಹುದು ಭವಿಷ್ಯವನು.

                 ಡಾ : ಶೈಲಜಾ ರಮೇಶ್

"ಜ್ಞಾನಿನಾಮ್ ಅಗ್ರಗಣ್ಯಂ ತಂ ಪ್ರಣಮಾಮಿ ಮುಹುರ್ಮುಹುಃ |
ಶ್ರೀ ಕೃಷ್ಣಾರ್ಪಣಮಸ್ತು..."

                      ಧನ್ಯವಾದಗಳು 🙏🙏

                  ✍️ ಡಾ : ಶೈಲಜಾ ರಮೇಶ್ 


No comments:

Post a Comment