ಓಂ ಶ್ರೀ ಗುರುಭ್ಯೋ ನಮಃ |
ವಿಶ್ವಪ್ರಕಾಶಕಂ ವಂದೇ ಸೂರ್ಯಂ ಗ್ರಹಪತಿಂ ಮುದಾ |
ಪರಾಶರಂ ಮುನಿಶ್ರೇಷ್ಠಂ ಜ್ಯೋತಿಃಶಾಸ್ತ್ರ ಪ್ರವರ್ತಕಮ್ ||
ಜ್ಯೋತಿಷ್ಯ ಎಂಬುದು ಕೇವಲ ಭವಿಷ್ಯ ಹೇಳುವ ಕಲೆ ಅಷ್ಟೇ ಅಲ್ಲ, ಅದು ವೇದದ ಕಣ್ಣು—'ವೇದಸ್ಯ ಚಕ್ಷುಃ'..!! ಅಂತ ಹೆಸರಾಗಿದೆ. ಇದರಲ್ಲಿ ಅನೇಕ ವಿಭಾಗಗಳಿವೆ. ಅದರಲ್ಲಿ ಈಗ ತಿಳಿದುಕೊಳ್ಳುತ್ತಿರುವ ವಿಷಯ ಅತ್ಯಂತ ವಿಶಿಷ್ಟವಾದದ್ದು ಮತ್ತು ನಿಖರವಾದದ್ದು. ಅದೇ 'ಅಷ್ಟಕವರ್ಗ ಪದ್ಧತಿ'.
ನಾವು ಜಾತಕವನ್ನು ನೋಡುವಾಗ ಲಗ್ನ ಕುಂಡಲಿ, ನವಾಂಶ ಕುಂಡಲಿ, ಶೋಡಶವರ್ಗ ಕುಂಡಲಿಗಳನ್ನೆಲ್ಲಾ ನೋಡುತ್ತೇವೆ. ಆದರೂ ಕೆಲವೊಮ್ಮೆ ನಮ್ಮ ಭವಿಷ್ಯ ವಾಣಿ ಯಾಕೆ ಸುಳ್ಳಾಗುತ್ತದೆ? ಒಬ್ಬ ವ್ಯಕ್ತಿಗೆ ಉಚ್ಚ ಗ್ರಹಗಳ ದಶೆ ಬಂದರೂ ಆತ ಯಾಕೆ ಬೀದಿಗೆ ಬೀಳುತ್ತಾನೆ? ನೀಚ ಗ್ರಹಗಳ ದಶೆಯಲ್ಲಿ ಕೋಟ್ಯಧಿಪತಿ ಯಾಕೆ ಆಗುತ್ತಾನೆ? ಈ ಎಲ್ಲಾ ಗೊಂದಲಗಳಿಗೆ ಮಹರ್ಷಿ ಪರಾಶರರು ಬರೆದ 'ಬೃಹತ್ ಪರಾಶರ ಹೋರಾಶಾಸ್ತ್ರ'ದಲ್ಲಿ ಉತ್ತರ ನೀಡಿದ್ದಾರೆ. ಅದೇ ಅಷ್ಟಕವರ್ಗ!
. ಅಷ್ಟಕವರ್ಗದ ಹಿನ್ನೆಲೆ
ಮಹರ್ಷಿ ಪರಾಶರರು, ಕಲಿಯುಗದ ಮನುಷ್ಯರ ಆಯುಸ್ಸು, ಬುದ್ಧಿ ಶಕ್ತಿ ಮತ್ತು ಏಕಾಗ್ರತೆ ಕಡಿಮೆಯಿರುತ್ತದೆ ಎಂಬುದನ್ನು ಮುನ್ಸೂಚನೆಯಾಗಿ ಅರಿತಿದ್ದರು. ಗಹನವಾದ ಗಣಿತವನ್ನು ಅರ್ಥಮಾಡಿಕೊಳ್ಳಲಾಗದ ಸಾಮಾನ್ಯ ದೈವಜ್ಞರಿಗೂ ಸಹ ನಿಖರವಾಗಿ ಫಲ ಹೇಳಲು ಬರಲಿ ಎಂಬ ಕರುಣೆಯಿಂದ ಈ ಪದ್ಧತಿಯನ್ನು ಸೃಷ್ಟಿಸಿದರು.
' ಮಹರ್ಷಿ ಪರಾಶರರು ಜಾತಕದ ನೂರಾರು ನಿಯಮಗಳನ್ನು ಹೇಳಿದ ನಂತರ, ಕಲಿಯುಗದ ಮಾನವನಿಗೆ ಗ್ರಹಗಳ ಗೋಚಾರ ಫಲವನ್ನು ಅತ್ಯಂತ ಸುಲಭವಾಗಿ ಮತ್ತು ಗಣಿತದ ರೂಪದಲ್ಲಿ ನಿಖರವಾಗಿ ತಿಳಿಯಲು ನೀಡಿದ ದಿವ್ಯ ಆಯುಧವೇ ಈ ಅಷ್ಟಕವರ್ಗ. ಜಾತಕದಲ್ಲಿ ಗ್ರಹಗಳು ಎಷ್ಟೇ ಬಲವಾಗಿದ್ದರೂ, ಅವು ಪ್ರಸ್ತುತ ಜೀವನದಲ್ಲಿ ಯಾವ ಫಲ ನೀಡುತ್ತವೆ ಎಂಬುದನ್ನು ಅಳೆಯುವ ಅತ್ಯುತ್ತಮ ತಕ್ಕಡಿ ಇದು.
ಅಷ್ಟಕವರ್ಗ ಎಂದರೆ 'ಎಂಟು ವರ್ಗಗಳ ಸಮೂಹ'. ಜನ್ಮ ಕುಂಡಲಿಯಲ್ಲಿ ಒಂದು ಗ್ರಹವು ತಾನು ಕುಳಿತಿರುವ ಸ್ಥಾನದಿಂದ ಮಾತ್ರ ಫಲ ನೀಡುವುದಿಲ್ಲ. ಅದು ಜನ್ಮ ಲಗ್ನ ಸೇರಿದಂತೆ ಉಳಿದ 7 ಗ್ರಹಗಳ (ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ) ಜನ್ಮ ಸ್ಥಾನಗಳಿಂದ ನಿರ್ದಿಷ್ಟ ಮನೆಗಳಿಗೆ ಶುಭ ಅಥವಾ ಅಶುಭ ಪ್ರಭಾವವನ್ನು ಬೀರುತ್ತದೆ. ಈ ಎಂಟು ಮೂಲ ಬಿಂದುಗಳ ಪ್ರಭಾವವನ್ನೇ ಅಷ್ಟಕವರ್ಗ ಎನ್ನಲಾಗುತ್ತದೆ. (ರಾಹು-ಕೇತುಗಳಿಗೆ ಸ್ವಂತ ಆಧಿಪತ್ಯವಿಲ್ಲದ ಕಾರಣ ಅಷ್ಟಕವರ್ಗದಲ್ಲಿ ಅವುಗಳನ್ನು ಪರಿಗಣಿಸುವುದಿಲ್ಲ).
ಈಗ ನಾವು ಈ ಅಷ್ಟಕವರ್ಗದ ಮೂಲ ತತ್ವಗಳು, ಬಿಂದುಗಳ ರಹಸ್ಯ ಮತ್ತು ಪ್ರಾಯೋಗಿಕವಾಗಿ ಜಾತಕಗಳನ್ನು ಹೇಗೆ ವಿಶ್ಲೇಷಣೆ ಮಾಡಬೇಕು ಎಂಬುದನ್ನು ಸೂಕ್ಷ್ಮವಾಗಿ ತಿಳಿಯಲಿದ್ದೇವೆ.
ಅಷ್ಟಕವರ್ಗವು ವೈದಿಕ ಜ್ಯೋತಿಷ್ಯದಲ್ಲಿ (Vedic Astrology) ಬಳಸಲಾಗುವ ಒಂದು ವಿಶಿಷ್ಟ ಮತ್ತು ಗಣಿತೀಯವಾದ ಮುನ್ಸೂಚನಾ ಪದ್ಧತಿಯಾಗಿದೆ. ಇದು ಪ್ರತಿಯೊಂದು ಮನೆಯಲ್ಲಿ ಅಥವಾ ರಾಶಿಯಲ್ಲಿರುವ ಗ್ರಹಗಳ ಬಲವನ್ನು ಅಳೆಯಲು ಸಹಾಯ ಮಾಡುತ್ತದೆ.
ಗ್ರಹಗಳ ಗೋಚಾರ ಫಲಗಳನ್ನು ಮತ್ತು ಜಾತಕದ ಬಲವನ್ನು ಅಳೆಯಲು ಇದನ್ನು ಬಳಸಲಾಗುತ್ತದೆ. ಸರಳವಾಗಿ ಹೇಳಬೇಕೆಂದರೆ, ಇದು ನಮ್ಮ ಜಾತಕದ ಗ್ರಹಗಳು ನಮಗಾಗಿ ಸಿದ್ಧಪಡಿಸುವ ಒಂದು ಪ್ರಗತಿ ಪತ್ರ (Report Card) ಇದ್ದಂತೆ.
'ಅಷ್ಟಕ' ಎಂದರೆ ಎಂಟು ಮತ್ತು 'ವರ್ಗ' ಎಂದರೆ ಗುಂಪು ಎಂದರ್ಥ.
ಅಷ್ಟಕವರ್ಗದ ವಿಧಗಳು
ಭಿನ್ನಾಷ್ಟಕವರ್ಗ: ಪ್ರತಿಯೊಂದು ಗ್ರಹವು 12 ಮನೆಗಳಿಗೆ ಪ್ರತ್ಯೇಕವಾಗಿ ನೀಡುವ ಅಂಕಗಳು.
ಸಮುದಾಯ ಅಷ್ಟಕವರ್ಗ: ಎಲ್ಲಾ 7 ಗ್ರಹಗಳು ಮತ್ತು ಲಗ್ನ ಸೇರಿ ಒಟ್ಟಾಗಿ ಪ್ರತಿ ಮನೆಗೆ ನೀಡುವ ಒಟ್ಟು ಅಂಕಗಳ ಪಟ್ಟಿ.
. ಇದರ ಉಪಯೋಗಗಳು
ಗೋಚಾರ ಫಲ ತಿಳಿಯಲು: ಭವಿಷ್ಯ ಹೇಳಲು ಇದನ್ನು ಪ್ರಮುಖವಾಗಿ ನೋಡಲಾಗುತ್ತದೆ. ಪ್ರಸ್ತುತ ಶನಿ ಅಥವಾ ಗುರು ಯಾವ ರಾಶಿಯಲ್ಲಿದ್ದಾರೆ ಮತ್ತು ಆ ರಾಶಿಯಲ್ಲಿ ಅಷ್ಟಕವರ್ಗದ ಬಿಂದುಗಳು ಎಷ್ಟಿವೆ ಎಂಬುದನ್ನು ನೋಡಿ ಆ ವರ್ಷ ಅಥವಾ ಕಾಲಾವಧಿ ಹೇಗಿರುತ್ತದೆ ಎಂದು ನಿಖರವಾಗಿ ಹೇಳಬಹುದು.
ದಶೆಯ ಫಲ ತಿಳಿಯಲು: ಒಂದು ಗ್ರಹದ ಮಹಾದಶೆ ನಡೆಯುತ್ತಿರುವಾಗ, ಆ ಗ್ರಹ ಕುಳಿತಿರುವ ಮನೆಗೆ ಅಷ್ಟಕವರ್ಗದಲ್ಲಿ ಒಳ್ಳೆ ಅಂಕಗಳಿದ್ದರೆ ಆ ದಶೆಯು ಉತ್ತಮವಾಗಿರುತ್ತದೆ.
ಆಯುಷ್ಯ ಮತ್ತು ವೃತ್ತಿ ನಿರ್ಧಾರ: ಜೀವನದ ಏಳುಬೀಳುಗಳು, ಧನಾಗಮನ ಮತ್ತು ಆರೋಗ್ಯದ ಸ್ಥಿತಿಯನ್ನು ತಿಳಿಯಲು ಇದು ಸುಲಭವಾದ ಮಾರ್ಗ.
ಯಾವುದೇ ಜಾತಕದಲ್ಲಿ ಗ್ರಹಗಳು ಉಚ್ಚವಾಗಿದ್ದರೂ ಅಥವಾ ನೀಚವಾಗಿದ್ದರೂ, ಅಷ್ಟಕವರ್ಗದಲ್ಲಿ ಆ ಮನೆಗೆ ಸಿಗುವ ಬಿಂದುಗಳು ಆ ಗ್ರಹದ ನೈಜ ಸಾಮರ್ಥ್ಯವನ್ನು ತೋರ್ಪಡಿಸುತ್ತವೆ.
ಈ ಪದ್ಧತಿಯಲ್ಲಿ 7 ಗ್ರಹಗಳು (ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ) ಮತ್ತು ಲಗ್ನ ಸೇರಿದಂತೆ ಒಟ್ಟು 8 ಅಂಶಗಳನ್ನು ಪರಿಗಣಿಸಲಾಗುತ್ತದೆ. ಪ್ರತಿ ಗ್ರಹವು ಇತರ ಗ್ರಹಗಳು ಮತ್ತು ಲಗ್ನದ ಸ್ಥಾನಕ್ಕೆ ಅನುಗುಣವಾಗಿ ಪ್ರತಿಯೊಂದು ರಾಶಿಯಲ್ಲಿ ಶುಭ (ಬಿಂದು) ಅಥವಾ ಅಶುಭ (ರೇಖೆ) ಅಂಕಗಳನ್ನು ನೀಡುತ್ತದೆ.
ಇದರ ಪ್ರಮುಖ ಅಂಶಗಳು ಈ ಕೆಳಗಿನಂತಿವೆ:
ಬಿಂದುಗಳು:-- ಪ್ರತಿಯೊಂದು ಗ್ರಹವು ಒಂದು ನಿರ್ದಿಷ್ಟ ರಾಶಿಯಲ್ಲಿ ನೀಡುವ ಶುಭ ಅಂಕಗಳನ್ನು ಬಿಂದುಗಳೆಂದು ಕರೆಯಲಾಗುತ್ತದೆ.
ಗರಿಷ್ಠ ಮತ್ತು ಕನಿಷ್ಠ ಅಂಕಗಳು:-- ಒಂದು ರಾಶಿಗೆ ಕನಿಷ್ಠ 0 ಬಿಂದು ಗರಿಷ್ಠ 8 ಬಿಂದುಗಳು ಸಿಗಬಹುದು.
ಸರ್ವಾಷ್ಟಕವರ್ಗ : -- ಎಲ್ಲಾ 8 ಅಂಶಗಳು 12 ರಾಶಿಗಳಲ್ಲಿ ನೀಡುವ ಒಟ್ಟು ಬಿಂದುಗಳ ಮೊತ್ತವನ್ನು ಇದು ಸೂಚಿಸುತ್ತದೆ. ಇಡೀ ಜಾತಕದ ಒಟ್ಟು ಬಿಂದುಗಳ ಮೊತ್ತ 337 + 49 = 386 ಆಗಿರುತ್ತದೆ. ಇದನ್ನು ಸರ್ವಾಷ್ಟಕವರ್ಗ ಎನ್ನಲಾಗುತ್ತದೆ.
ಇನ್ನು ಭಿನ್ನಾಷ್ಟಕ ವರ್ಗದ ಗಣಿತದ ಬಗ್ಗೆ ತಿಳಿಯೋಣ
ಭಿನ್ನಾಷ್ಟಕವರ್ಗ :--
ಪ್ರತಿಯೊಂದು ಗ್ರಹವೂ ಜಾತಕದ 12 ಮನೆಗಳಿಗೆ ತನ್ನದೇ ಆದ ಶುಭ ಬಿಂದುಗಳನ್ನು ಹಂಚುತ್ತದೆ. ದಕ್ಷಿಣ ಭಾರತದ ಪದ್ಧತಿಯಲ್ಲಿ 'ಬಿಂದು' ಎಂದರೆ ಶುಭ, 'ರೇಖೆ' ಎಂದರೆ ಅಶುಭ (ಶೂನ್ಯ). ಪ್ರತಿಯೊಂದು ಗ್ರಹವು ಗರಿಷ್ಠ ಎಷ್ಟು ಬಿಂದುಗಳನ್ನು ಹಂಚಬಲ್ಲದು ಎಂಬ ಗಣಿತ ಇಲ್ಲಿದೆ:
ರವಿ ಭಿನ್ನಾಷ್ಟಕವರ್ಗ:--
ರವಿ ಭಿನ್ನಾಷ್ಟಕವರ್ಗಕ್ಕೆ ಲಗ್ನ ಸೇರಿದಂತೆ ಏಳೂ ಗ್ರಹಗಳು ತಮ್ಮ ಸ್ವಂತ ಸ್ಥಾನದಿಂದ ನಿರ್ದಿಷ್ಟ ಮನೆಗಳಲ್ಲಿ ಶುಭ ಬಿಂದುಗಳನ್ನು ನೀಡುತ್ತವೆ. ರವಿಗೆ ಒಟ್ಟು 48 ಬಿಂದುಗಳು ಲಭ್ಯವಿದ್ದು, ಪ್ರತಿ ಗ್ರಹವು ಕೊಡುವ ಬಿಂದುಗಳ ವಿವರ ಈ ಕೆಳಗಿನಂತಿದೆ:
ಗ್ರಹಗಳು ಬಿಂದು ಕೊಡುವ ಸ್ಥಾನಗಳು (ರಾಶಿಗಳು)
ರವಿ :--ತನ್ನ ಸ್ಥಾನದಿಂದ 1,2,4,7,8,9,10,11, ನೇ ಮನೆಗಳಿಗೆ ಬಿಂದುಗಳನ್ನು ನೀಡುತ್ತಾನೆ (ಒಟ್ಟು 8 ಬಿಂದುಗಳು).
ಚಂದ್ರ :-- ತನ್ನ ಸ್ಥಾನದಿಂದ 3,6,10,11 ನೇ ಮನೆಗಳಿಗೆ ಬಿಂದುಗಳನ್ನು ನೀಡುತ್ತಾನೆ (ಒಟ್ಟು 4 ಬಿಂದುಗಳು).
ಮಂಗಳ :-- ತನ್ನ ಸ್ಥಾನದಿಂದ 1, 2,4,7,8,9,10,11, ನೇ ಮನೆಗಳಿಗೆ ಬಿಂದುಗಳನ್ನು ನೀಡುತ್ತಾನೆ (ಒಟ್ಟು 8 ಬಿಂದುಗಳು).
ಬುಧ :-- ತನ್ನ ಸ್ಥಾನದಿಂದ 3,5,6,9,10,11,12 ನೇ ಮನೆಗಳಿಗೆ ಬಿಂದುಗಳನ್ನು ನೀಡುತ್ತಾನೆ (ಒಟ್ಟು 7 ಬಿಂದುಗಳು).
ಗುರು :-- ತನ್ನ ಸ್ಥಾನದಿಂದ 5,6,9,11 ನೇ ಮನೆಗಳಿಗೆ ಬಿಂದುಗಳನ್ನು ನೀಡುತ್ತಾನೆ (ಒಟ್ಟು 4 ಬಿಂದುಗಳು).
ಶುಕ್ರ:-- ತನ್ನ ಸ್ಥಾನದಿಂದ 6,7,12, ನೇ ಮನೆಗಳಿಗೆ ಬಿಂದುಗಳನ್ನು ನೀಡುತ್ತಾನೆ (ಒಟ್ಟು 3 ಬಿಂದುಗಳು).
ಶನಿ :-- ತನ್ನ ಸ್ಥಾನದಿಂದ 1,2,4,7,8,9,10,11 ನೇ ಮನೆಗಳಿಗೆ ಬಿಂದುಗಳನ್ನು ನೀಡುತ್ತಾನೆ (ಒಟ್ಟು 8 ಬಿಂದುಗಳು).
ಲಗ್ನ :-- ಲಗ್ನ ಸ್ಥಾನದಿಂದ 1,2,3,4,7,9,10,11 ನೇ ಮನೆಗಳಿಗೆ ಬಿಂದುಗಳನ್ನು ನೀಡುತ್ತದೆ (ಒಟ್ಟು 8 ಬಿಂದುಗಳು).
ರವಿ ಭಿನ್ನಾಷ್ಟಕವರ್ಗವು, ಆತ್ಮ ಮತ್ತು ಯಶಸ್ಸು, ಆರೋಗ್ಯ ಮತ್ತು ಕೀರ್ತಿ, ಜಾತಕನ ದೈಹಿಕ ಶಕ್ತಿ, ರೋಗನಿರೋಧಕ ಶಕ್ತಿ ಮತ್ತು ಸಮಾಜದಲ್ಲಿ ಸಿಗುವ ಗೌರವವನ್ನು ಇದು ನಿರ್ಧರಿಸುತ್ತದೆ.
ವೃತ್ತಿ :ಸರ್ಕಾರಿ ಕೆಲಸ, ಉದ್ಯೋಗದಲ್ಲಿ ಪ್ರಗತಿ ಮತ್ತು ತಂದೆಯೊಂದಿಗಿನ ಬಾಂಧವ್ಯವನ್ನು ತಿಳಿಯಲು ಇದನ್ನು ನೋಡಲಾಗುತ್ತದೆ.
ಸೂರ್ಯ ಆತ್ಮಕಾರಕ ಮತ್ತು ಆರೋಗ್ಯ ಕಾರಕ. ಸೂರ್ಯನ ಅಷ್ಟಕವರ್ಗದಲ್ಲಿ ಯಾವ ಮನೆಗೆ 5 ಅಥವಾ ಅದಕ್ಕಿಂತ ಹೆಚ್ಚು ಬಿಂದುಗಳಿವೆಯೋ, ಆ ಮನೆಯ ವಿಷಯದಲ್ಲಿ ವ್ಯಕ್ತಿಗೆ ಅಪಾರ ಕೀರ್ತಿ, ತಂದೆಯ ಬೆಂಬಲ ಮತ್ತು ಆರೋಗ್ಯ ಸಿಗುತ್ತದೆ.
ಶುಭ ಸಂಖ್ಯೆ: -- ರವಿ ಇರುವ ರಾಶಿಯಲ್ಲಿ 5 ರಿಂದ 8 ಬಿಂದುಗಳಿದ್ದರೆ ರಾಜಯೋಗ ಮತ್ತು ಅಧಿಕಾರ ಸಿಗುತ್ತದೆ.
8 ಬಿಂದುಗಳಿದ್ದರೆ - ರಾಜಕೀಯ ಸಂಘ, ಧನಲಾಭ, ಮಾನ ಸಮ್ಮಾನ
7 ಬಿಂದುಗಳಿದ್ದರೆ - ಮರ್ಯಾದೆ, ಸ್ತ್ರೀಯರಿಂದ ಗೌರವ
6 ಬಿಂದುಗಳಿದ್ದರೆ - ಉನ್ನತಿ, ಶೌರ್ಯ, ಧನ ಕೀರ್ತಿ
5 ಬಿಂದುಗಳಿದ್ದರೆ - ಸಜ್ಜನರ ಸಂಘ, ವಿದ್ಯಾದನ ಪ್ರಾಪ್ತಿ (ಅಧಿಕಾರ ಲಾಭ)
4 ಬಿಂದುಗಳಿದ್ದರೆ - ಸುಖ ದುಃಖ ಸಮ
3 ಬಿಂದು ಇದ್ದರೆ - ಅಶಾಂತಿ, ಶಾರೀರಿಕ ತೊಂದರೆ
2 ಬಿಂದು ಇದ್ದರೆ - ಅಸಮಾಧಾನ, ಚೋರ ಭೀತಿ
1 ಬಿಂದು ಇದ್ದರೆ - ದೇಹಾಲಸ್ಯ, ದುಃಖ
ಹೆಚ್ಚು ಬಿಂದುಗಳಿರುವ ಮಾಸದಲ್ಲಿ ರವಿ ಸಂಚರಿಸುವಾಗ ವಿವಾಹಾದಿ ಮಂಗಳ ಕಾರ್ಯಗಳನ್ನು ಮಾಡಿದರೆ ಶುಭ.. ಕಡಿಮೆ ಬಿಂದು ಇರುವ ಮಾಸದಲ್ಲಿ ದೂರಪ್ರಯಾಣ, ಮಂಗಳ ಕಾರ್ಯಗಳನ್ನು ಮಾಡಬಾರದು.
ರವಿಯ ಅಷ್ಟಕವರ್ಗದಲ್ಲಿ ಹೆಚ್ಚು ಬಿಂದು ಇರುವ ದಿಕ್ಕಿನಲ್ಲಿ ದೇವರ ಮನೆ ಇದ್ದರೆ ಶರೀರ ಸೌಖ್ಯ ಆಯುರಾರೋಗ್ಯವು ದೊರೆಯುತ್ತದೆ.
ರವಿ ಲಗ್ನದಲ್ಲಿದ್ದು 2-3 ಬಿಂದುಗಳಿದ್ದರೆ ಶಾರೀರಿಕ ಸೌಖ್ಯ ಕಡಿಮೆ. .
(ರವಿಯಿಂದ 9 ನೇ ಮನೆ ತಂದೆಯ ಜಾತಕ ಲಗ್ನ, ರವಿಯಿಂದ 10 ನೇ ಮನೆ ತಂದೆಯ ಸಂಪತ್ತು, 12 ನೇ ಮನೆ ತಂದೆಯ ನಿರ್ದಿಷ್ಟ ಸ್ಥಳ ಮೊದಲಾದವುಗಳನ್ನು ತಿಳಿಸುತ್ತದೆ.)
ಯಾವುದೇ ಒಂದು ರಾಶಿಯಲ್ಲಿ ರವಿಗೆ 4 ಅಥವಾ ಅದಕ್ಕಿಂತ ಹೆಚ್ಚು ಬಿಂದುಗಳು ಬಂದರೆ ಆ ರಾಶಿಯಲ್ಲಿ ರವಿಯ ಸಂಚಾರ (ಗೋಚಾರ) ಮತ್ತು ದಶಾ ಕಾಲವು ಅತ್ಯುತ್ತಮ ಫಲಿತಾಂಶಗಳನ್ನು ನೀಡುತ್ತದೆ.
ಚಂದ್ರ ಭಿನ್ನಾಷ್ಟಕವರ್ಗ :--
ಲಗ್ನ ಸೇರಿದಂತೆ ಎಂಟೂ ಗ್ರಹಗಳು ತಮ್ಮ ಸ್ವಂತ ಸ್ಥಾನದಿಂದ ನಿರ್ದಿಷ್ಟ ಮನೆಗಳಲ್ಲಿ ಶುಭ ಬಿಂದುಗಳನ್ನು ನೀಡುತ್ತವೆ. ಚಂದ್ರನಿಗೆ ಒಟ್ಟು 49 ಬಿಂದುಗಳು ಲಭ್ಯವಿದ್ದು, ಪ್ರತಿ ಗ್ರಹವು ಕೊಡುವ ಬಿಂದುಗಳ ವಿವರ ಈ ಕೆಳಗಿನಂತಿದೆ:
ಗ್ರಹಗಳು ಬಿಂದು ಕೊಡುವ ಸ್ಥಾನಗಳು (ರಾಶಿಗಳು)
ರವಿ :-- ತನ್ನ ಸ್ಥಾನದಿಂದ 3, 6, 7, 8, 10, 11, ನೇ ಮನೆಗಳಿಗೆ ಬಿಂದುಗಳನ್ನು ನೀಡುತ್ತಾನೆ (ಒಟ್ಟು 6 ಬಿಂದುಗಳು).
ಚಂದ್ರ :--ತನ್ನ ಸ್ಥಾನದಿಂದ 1,3, 6, 7, 10, 11 ನೇ ಮನೆಗಳಿಗೆ ಬಿಂದುಗಳನ್ನು ನೀಡುತ್ತಾನೆ (ಒಟ್ಟು 6 ಬಿಂದುಗಳು).
ಮಂಗಳ : -- ತನ್ನ ಸ್ಥಾನದಿಂದ 2, 3, 5, 6, 9, 10, 11 ನೇ ಮನೆಗಳಿಗೆ ಬಿಂದುಗಳನ್ನು ನೀಡುತ್ತಾನೆ (ಒಟ್ಟು 7 ಬಿಂದುಗಳು).
ಬುಧ : -- ತನ್ನ ಸ್ಥಾನದಿಂದ 1, 3, 4, 5, 7, 8, 10, 11 ನೇ ಮನೆಗಳಿಗೆ ಬಿಂದುಗಳನ್ನು ನೀಡುತ್ತಾನೆ (ಒಟ್ಟು 8 ಬಿಂದುಗಳು).
ಗುರು :-- ತನ್ನ ಸ್ಥಾನದಿಂದ 1, 4, 7, 8, 10,11,12, ನೇ ಮನೆಗಳಿಗೆ ಬಿಂದುಗಳನ್ನು ನೀಡುತ್ತಾನೆ (ಒಟ್ಟು 7 ಬಿಂದುಗಳು).
ಶುಕ್ರ :-- ತನ್ನ ಸ್ಥಾನದಿಂದ 3, 4, 5, 7, 9, 10, 11 ನೇ ಮನೆಗಳಿಗೆ ಬಿಂದುಗಳನ್ನು ನೀಡುತ್ತಾನೆ (ಒಟ್ಟು 7 ಬಿಂದುಗಳು).
ಶನಿ :-- ತನ್ನ ಸ್ಥಾನದಿಂದ 3, 5, 6, 11ನೇ ಮನೆಗಳಿಗೆ ಬಿಂದುಗಳನ್ನು ನೀಡುತ್ತಾನೆ (ಒಟ್ಟು 4 ಬಿಂದುಗಳು).
ಲಗ್ನ :-- ಲಗ್ನ ಸ್ಥಾನದಿಂದ 3, 6, 10, 11 ನೇ ಮನೆಗಳಿಗೆ ಬಿಂದುಗಳನ್ನು ನೀಡುತ್ತದೆ (ಒಟ್ಟು 4 ಬಿಂದುಗಳು).
ಚಂದ್ರ ಭಿನ್ನಾಷ್ಟಕವರ್ಗ ಮನಸ್ಸು ಮತ್ತು ಸಂಪತ್ತನ್ನು ಸೂಚಿಸುತ್ತದೆ . ಮಾನಸಿಕ ಸ್ಥಿತಿ, ಜಾತಕನ ಮಾನಸಿಕ ನೆಮ್ಮದಿ, ಯೋಚನಾ ಶಕ್ತಿ ಮತ್ತು ತಾಯಿಯ ಆರೋಗ್ಯವನ್ನು ಇದು ಸೂಚಿಸುತ್ತದೆ. ಧನಲಾಭ ಮತ್ತು ಪ್ರಯಾಣ, ದೈನಂದಿನ ಆದಾಯ, ಆರ್ಥಿಕ ಏರಿಳಿತಗಳು ಮತ್ತು ಪ್ರಯಾಣದ ಯಶಸ್ಸನ್ನು ಲೆಕ್ಕ ಹಾಕಲು ಇದು ಮುಖ್ಯ. ಚಂದ್ರನಿಗಿರುವ ಬಿಂದುಗಳು ಮನಸ್ಸಿನ ಸಂತೋಷವನ್ನು ನಿರ್ಧರಿಸುತ್ತವೆ.
ಚಂದ್ರನ ಅಷ್ಟಕವರ್ಗದಲ್ಲಿ
8 ಬಿಂದುಗಳು: ಗೌರವ ಕೀರ್ತಿ, ರುಚಿಕರ ಆಹಾರ ಸೇವನೆ, ಆದಾಯ, ಮಂತ್ರೋಪದೇಶ.
7 ಬಿಂದುಗಳು: ಗಂಧ ಮಾಲ್ಯಾಧಿ ವಸ್ತುಗಳ ಸಂಗ್ರಹಣೆ, ಚೌಲಾದಿ ಧಾರ್ಮಿಕ ಕಾರ್ಯಗಳು.
6 ಬಿಂದುಗಳು: ಮಂತ್ರಶಕ್ತಿ ಬ್ರಾಹ್ಮಣ ಸ್ನೇಹ
5 ಬಿಂದುಗಳು: ಪರಾಕ್ರಮ
4 ಬಿಂದುಗಳು: ಸುಖ ದುಃಖ ಸಮ
3 ಬಿಂದು ಇದ್ದರೆ: ಬಂದು, ಸ್ನೇಹಿತರಲ್ಲಿ ವೈಷಮ್ಯ
2 ಬಿಂದು ಇದ್ದರೆ: ಶತ್ರು ವೃದ್ಧಿ, ಪತಿಪತ್ನಿಯರಲ್ಲಿ ಜಗಳ
1 ಬಿಂದು ಇದ್ದರೆ: ಅನಿರೀಕ್ಷಿತ ತೊಂದರೆಗಳು.
0 ಬಿಂದು ಇದ್ದರೆ: ಕಾಯಿಲೆ ಆತಂಕ
ಹೆಚ್ಚು ಬಿಂದು ಇರುವ ರಾಶಿಯ ಒಡಹುಟ್ಟಿದವರ ಮುಖ ದರ್ಶನ ಮಾಡಿ ಅವರಿಗೆ ವಸ್ತ್ರದಾನ ಮಾಡಿದರೆ ಶುಭಫಲ. ಶೂನ್ಯ ಬಿಂದು ಇರುವ ರಾಶಿಯಲ್ಲಿ ಶನಿ ಚಂದ್ರ ಸಂಚರಿಸುವಾಗ ಶುಭಕಾರ್ಯಗಳು ಬೇಡ. ಚಂದ್ರನಿಂದ 8, 12 ನೇ ಮನೆಯಲ್ಲಿ ಕಡಿಮೆ ಬಿಂದು ಇರುವ ರಾಶಿಯಲ್ಲಿ ಖಂಡಿತ ಶುಭಕಾರ್ಯ ಮಾಡಬಾರದು.
ಚಂದ್ರನು ಲಗ್ನದಲ್ಲಿದ್ದು 1, 2, 3 ಬಿಂದುಗಳಿದ್ದರೆ ರೋಗಿಷ್ಟ. 2-3 ಬಿಂದುವಿದ್ದು ಪಾಪಗ್ರಹವಿದ್ದರೆ ಆ ಜಾತಕನಿಗೆ 37 ನೇ ವಯಸ್ಸಿನಲ್ಲಿ ಮರಣ ಭಯವಿರುತ್ತದೆ.
ಕೇಂದ್ರ, ತ್ರಿಕೋಣ, ಉಚ್ಚ, ಸ್ವಕ್ಷೇತ್ರ, ಮಿತ್ರಕ್ಷೇತ್ರದಲ್ಲಿ ಇದ್ದು ಹೆಚ್ಚು ಬಿಂದುಗಳಿದ್ದರೆ ರಾಜಯೋಗ. ಚಂದ್ರನು ಮಾತೃಕಾರಕನಾದ್ದರಿಂದ ಆಕೆಯ ಸಹೋದರ /ಸಹೋದರಿಯರ ಸಂಖ್ಯೆಯನ್ನು ಚಂದ್ರನ 4 ನೇ ಮನೆಯಿಂದ ತಿಳಿಯಬಹುದು. ಚಂದ್ರನು 6, 11 ರಲ್ಲಿ 6 ಬಿಂದುಗಳ ಮೇಲೆ ಪಡೆದು ಗುರುದೃಷ್ಟಿ ಇದ್ದರೆ ಆ ಜಾತಕನು ಧನಿಕ ಹಾಗೂ ಯೋಗಪುರುಷ . ಚಂದ್ರನಿಂದ ಅಷ್ಟಮಾದಿಪತಿ ನಕ್ಷತ್ರದಲ್ಲಿ ಚಂದ್ರ ಸಂಚರಿಸುವಾಗ ಜಾತಕನು ರೋಗಾದಿಗಳಿಂದ ನರಳುತ್ತಾನೆ.
ಯಾವುದೇ ಒಂದು ರಾಶಿಯಲ್ಲಿ ಚಂದ್ರನಿಗೆ 4 ಅಥವಾ ಅದಕ್ಕಿಂತ ಹೆಚ್ಚು ಬಿಂದುಗಳು ಇದ್ದರೆ, ಆ ರಾಶಿಯಲ್ಲಿ ಚಂದ್ರನ ಗೋಚಾರ (ಪ್ರತಿ ತಿಂಗಳ ಸಂಚಾರ) ಮತ್ತು ದಶಾ ಕಾಲವು ಮಾನಸಿಕ ನೆಮ್ಮದಿ ಹಾಗೂ ಧನಲಾಭವನ್ನು ನೀಡುತ್ತದೆ.
ಕುಜನ ಭಿನ್ನಾಷ್ಟಕವರ್ಗ - ಶಕ್ತಿ ಮತ್ತು ಆಸ್ತಿ
ಪರಾಕ್ರಮ ಮತ್ತು ಸೋದರರು: ಜಾತಕನ ಧೈರ್ಯ, ನಾಯಕತ್ವ ಗುಣ ಮತ್ತು ಒಡಹುಟ್ಟಿದವರಿಂದ ಸಿಗುವ ಸಹಕಾರವನ್ನು ಇದು ತಿಳಿಸುತ್ತದೆ.
ಸ್ಥಿರ ಆಸ್ತಿ: ಭೂಮಿ ಖರೀದಿ, ಮನೆ ಕಟ್ಟುವುದು, ರಿಯಲ್ ಎಸ್ಟೇಟ್ ವ್ಯವಹಾರ ಮತ್ತು ಅಪಘಾತಗಳ ಸಾಧ್ಯತೆಯನ್ನು ತಿಳಿಯಲು ಇದನ್ನು ಬಳಸಲಾಗುತ್ತದೆ.
ಮಂಗಳ ಭಿನ್ನಾಷ್ಟಕವರ್ಗದಲ್ಲಿ - ಒಟ್ಟು ಬಿಂದುಗಳು: 39
ರವಿ: 3, 5, 6, 10, 11 (5 ಬಿಂದು)
ಚಂದ್ರ: 3, 6, 11 (3 ಬಿಂದು)
ಮಂಗಳ: 1, 2, 4, 7, 8, 10, 11 (7 ಬಿಂದು)
ಬುಧ: 3, 5, 6, 11 (4 ಬಿಂದು)
ಗುರು: 6, 8, 11, 12 (4 ಬಿಂದು)
ಶುಕ್ರ: 6, 8, 11, 12 (4 ಬಿಂದು)
ಶನಿ: 1, 4, 7, 8, 9, 10, 11, (7 ಬಿಂದು)
ಲಗ್ನ: 1, 3, 6, 10, 11 (5 ಬಿಂದು)
ಇಲ್ಲಿ ಬಿಂದುಗಳು ಕಡಿಮೆ ಇದ್ದರೆ ಕೋಪ ಮತ್ತು ರಕ್ತದೊತ್ತಡದ ಸಮಸ್ಯೆಗಳು ಕಾಡಬಹುದು.
8 ಬಿಂದು: ಅಣ್ಣ ತಮ್ಮಂದಿರಿಂದ ಲಾಭ ಧನಸಂಪಾದನೆ, ಭೂಮಿಲಾಭ, ಶತ್ರುನಾಶ
7 ಬಿಂದು: ಅಣ್ಣ ತಮ್ಮಂದಿರಿಂದ ಲಾಭ, ಭಾಗ್ಯ
6 ಬಿಂದು: ಯಜಮಾನನ ಪ್ರೀತಿ
5 ಬಿಂದು: ಸದಾಚಾರ
4 ಬಿಂದು: ಸುಖ ದುಃಖ ಸಮ
3 ಬಿಂದು: ಬಂಧು ವಿಯೋಗ
2 ಬಿಂದು: ಕಲಹ, ವಿರೋಧಿಗಳ ಉಪದ್ರವ
1 ಬಿಂದು: ದೇಹಪೀಡೆ
0 ಬಿಂದು: ಮೂರ್ಚಾವಸ್ಥೆ.
ಕುಜನಿಂದ 3 ರಲ್ಲಿ ಇರುವ ಬಿಂದುಗಳಿಂದ ಭ್ರಾತೃಗಳ ಸಂಖ್ಯೆಯನ್ನು ಹೇಳಬಹುದು. ಕುಜನು ಸ್ವಕ್ಷೇತ್ರ ಮತ್ತು 9, 4, 10, 11 ನೇ ಭಾವದಲ್ಲಿದ್ದು 8 ಬಿಂದುಗಳಿಂದ ಕೂಡಿದ್ದರೆ ಕೋಟ್ಯಾಧಿಪತಿ. ಮೇಷ, ಸಿಂಹ, ವೃಶ್ಚಿಕ, ಧನಸ್ಸು, ಮಕರ, ಮೀನ ರಾಶಿಗಳು ಲಗ್ನವಿದ್ದು ಅಲ್ಲಿ ಕುಜನಿಗೆ 4 ಬಿಂದುಗಳಿದ್ದಾಗ ರಾಜಯೋಗ, ಲಗ್ನ & 10 ರಲ್ಲಿ 8 ಬಿಂದುಗಳಿದ್ದರೆ ರಾಜಯೋಗ.
ಕುಜನಿಂದ 3 ನೇ ಮನೆಯಲ್ಲಿ ಬಿದ್ದ ಬಿಂದು ಸಂಖ್ಯೆಗಳಿಂದ Or ತ್ರಿಕೋಣ ಶೋಧನದ ನಂತರ ಬಿದ್ದ ಬಿಂದುಗಳಿಂದ ಭ್ರಾತೃ ಸಂಖ್ಯೆಯನ್ನು ಹೇಳಬಹುದು. (ಪೂರ್ವಾಷಾಢ ನಕ್ಷತ್ರ Or ತ್ರಿಕೋಣ ನಕ್ಷತ್ರದಲ್ಲಿ ಶನಿಯು ಸಂಚಾರ ಮಾಡುವಾಗ ಭ್ರಾತೃವಿಗೆ ಪೀಡೆ.)
ಕುಜನು 4 ನೇ ಅಧಿಪತಿಯಾಗಿದ್ದು ಸ್ವಕ್ಷೇತ್ರದಲ್ಲಿದ್ದು 4 ಬಿಂದುಗಳಿಂದ ಕೂಡಿದ್ದರೆ ಅವನು ರಾಜ ಸಮಾನನು. ದಶಮದಲ್ಲಿದ್ದರೆ ನ್ಯಾಯಾಧೀಶ, ಬ್ರಾಹ್ಮಣನಾಗಿದ್ದರೆ ಅನೇಕ ಯಜ್ಞಗಳನ್ನು ಮಾಡುತ್ತಾನೆ. ವೈಶ್ಯನಾಗಿದ್ದರೆ ವ್ಯಾಪಾರ, ಕೃಷಿಗಳಿಂದ ಸಂಪತ್ತು. ಶೂದ್ರನಾಗಿದ್ದರೆ ಸೇನಾಪತಿ, ಇವು ಸಿಂಹ, ಮಕರ ಲಗ್ನಕ್ಕೆ ಮಾತ್ರ ಸಂಬಂಧ ಪಟ್ಟಿದ್ದು. ಚಂದ್ರ ಮಂಗಳ ಯುತಿ ಇದ್ದರೂ ಅಥವಾ ದೃಷ್ಟಿ ಇದ್ದರೂ ಮಂತ್ರಿಯಾಗುವ ಯೋಗ ಇರುತ್ತದೆ.
ಕುಜನು 4 ಬಿಂದುಗಳಿಂದ ಕೂಡಿದ್ದು ರಾಶಿ ಬಲವಿದ್ದು ಶನಿಯು ಸಂಬಂಧವಿದ್ದರೂ ನ್ಯಾಯಾಧೀಶ. ಕುಜ ಬಲಿಷ್ಠನಾಗಿದ್ದು ಹೆಚ್ಚು ಬಿಂದುಗಳಿಂದ ಕೂಡಿದ್ದರೆ ಮುಖ್ಯ ಅಧಿಕಾರಿ.
. ಕುಜ Or ಶನಿ ಲಗ್ನದಿಂದ 3 ರಲ್ಲಿದ್ದು 3 ಕ್ಕಿಂತ ಕಡಿಮೆ ಬಿಂದುಗಳಿದ್ದರೆ ಭ್ರಾತೃ ನಾಶ. ಕುಜನು ಮತ್ತು ಶನಿ 6-8 ರಲ್ಲಿ 1-3 ಬಿಂದುಗಳಿದ್ದರೆ ಭ್ರಾತೃ ನಾಶ. ಕುಜನು + ಶನಿಯು 6, 8 ರಲ್ಲಿದ್ದು 1-3 ಬಿಂದುಗಳಿದ್ದರೆ ಭ್ರಾತೃವಿಗೆ ಕೇಡು.
ಬುಧ ಭಿನ್ನಾಷ್ಟಕವರ್ಗ -
ಬುದ್ಧಿವಂತಿಕೆ ಮತ್ತು ವ್ಯಾಪಾರ, ಬುದ್ಧಿಶಕ್ತಿ: ಜಾತಕನ ಕಮ್ಯುನಿಕೇಶನ್ (ಮಾತುಗಾರಿಕೆ), ನೆನಪಿನ ಶಕ್ತಿ ಮತ್ತು ಶಿಕ್ಷಣದ ಪ್ರಗತಿಯನ್ನು ಇದು ತೋರಿಸುತ್ತದೆ.
ವ್ಯಾಪಾರ ಮತ್ತು ಸೋದರಮಾವ: ಹೊಸ ಬಿಸಿನೆಸ್ ಆರಂಭಿಸಲು, ಷೇರು ಮಾರುಕಟ್ಟೆ ಹೂಡಿಕೆಗೆ ಮತ್ತು ಸೋದರಮಾವನ ಸಂಬಂಧ ತಿಳಿಯಲು ಇದು ಮುಖ್ಯ.
ಹೆಚ್ಚು ಬಿಂದುಗಳಿದ್ದರೆ ಗಣಿತ, ಬರವಣಿಗೆ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿ ಅದ್ಭುತ ಯಶಸ್ಸು ಸಿಗುತ್ತದೆ.
ಬುಧ ಭಿನ್ನಾಷ್ಟಕವರ್ಗ - ಒಟ್ಟು ಬಿಂದುಗಳು: 54
ರವಿ: 5, 6, 9, 11, 12 (5 ಬಿಂದು)
ಚಂದ್ರ: 2, 4, 6, 8, 10, 11 (6 ಬಿಂದು)
ಮಂಗಳ: 1, 2, 4, 7, 8, 9, 10, 11 (8 ಬಿಂದು)
ಬುಧ: 1, 3, 5, 6, 9, 10, 11, 12 (8 ಬಿಂದು)
ಗುರು: 6, 8, 11, 12 (4 ಬಿಂದು)
ಶುಕ್ರ: 1, 2, 3, 4, 5, 8, 9, 11 (8 ಬಿಂದು)
ಶನಿ: 1, 2, 4, 7, 8, 9, 10, 11 (8 ಬಿಂದು)
ಲಗ್ನ: 1, 2, 4, 6, 8, 10, 11 (7 ಬಿಂದು)
ಬುಧಾಷ್ಟಕವರ್ಗದಲ್ಲಿ
8 ಬಿಂದುಗಳು: ರಾಜಸನ್ಮಾನ ಲಾಭ
7 ಬಿಂದುಗಳು: ಪಾಂಡಿತ್ಯ, ಸಂಪತ್ತು, ಕೀರ್ತಿ
6 ಬಿಂದುಗಳು: ಕಾರ್ಯಸಿದ್ಧಿ, ಯಶಸ್ಸು ಪ್ರಾಪ್ತಿ
5 ಬಿಂದುಗಳು: ಹೊಸ ಮಿತ್ರರು ಬಂಧುಗಳು ದೊರೆಯುತ್ತಾರೆ
4 ಬಿಂದುಗಳು: ತೃಪ್ತಿ ಆದರೆ ಉತ್ಸಾಹ ಕಮ್ಮಿ.
3 ಬಿಂದುಗಳು: ಮಾನಸಿಕ ತೊಂದರೆ
2 ಬಿಂದುಗಳು: ವಾತಾಪಿತ್ತ ಮೂಲಕ ಅನಾರೋಗ್ಯ
1 ಬಿಂದು: ಕಷ್ಟ ನಷ್ಟ
0 ಬಿಂದು: ಸಂಪತ್ತು ಹಾನಿ ಮತ್ತು ಶತ್ರು ಭಯ
ಬುಧನಿಂದ 4 ನೇ ಸ್ಥಾನದಿಂದ ಕುಟುಂಬ ಧನ ಮತ್ತು ಸೋದರ ಮಾವನ ವಿಚಾರಗಳನ್ನು ಹೇಳಬಹುದು. ಬುಧನು ಮಂತ್ರವಿದ್ಯೆಗಳ ಕಾರಕನು ಇವನ ಅಷ್ಟಕವರ್ಗದಲ್ಲಿ ಬುಧನಿಂದ 3 ನೇ ಸ್ಥಾನದಲ್ಲಿ 0 Or 1 ಬಿಂದುವಿದ್ದರೆ ಅವನು ಮೂರ್ಖನಾಗುತ್ತಾನೆ ಅಥವಾ ಮೂಗನಾಗುತ್ತಾನೆ.
ಅಷ್ಟಕವರ್ಗದಲ್ಲಿ ಬುಧನಿಂದ 2 ನೇ ಸ್ಥಾನದಲ್ಲಿ
2 ಬಿಂದುವಿದ್ದರೆ - ಚಂಚಲ ವಾಕ್ಕು ಅಸ್ಪಶ್ಟ ಮಾತು.
3 ಬಿಂದುವಿದ್ದರೆ - ಸಾಧಾರಣ ಮಾತು
4 ಬಿಂದುವಿದ್ದರೆ - ಮಾತುಗಾರ
5-6 ಬಿಂದುವಿದ್ದರೆ - ಆಸಾಧಾರಣವಾದ ಮಾತು, ಮಾತಲ್ಲೇ ಬೇರೆಯವರ ಮನಸೆಳೆಯುವರು
7 ಬಿಂದುವಿದ್ದರೆ - ಕವಿ ಸಮಾನ
8 ಬಿಂದುವಿದ್ದರೆ - ಬೃಹಸ್ಪತಿ ಸಮಾನ
ಬುಧನು ಯಾವುದೇ ರಾಶಿಯಲ್ಲಿ ಸಂಚರಿಸುವಾಗ ಆ ರಾಶಿಯಲ್ಲಿ ಹೆಚ್ಚು ಬಿಂದುಗಳಿದ್ದರೆ ಪೂರ್ತಿ ವಿದ್ಯಾಭ್ಯಾಸ ಪ್ರಾಪ್ತಿ. ಬುಧನ ಅಷ್ಟಕವರ್ಗದಲ್ಲಿ ಬುಧನು 6, 8, 12 ರಲ್ಲಿದ್ದು 1, 2, 3 ಬಿಂದುಗಳಿಂದ ಕೂಡಿದ್ದು ಶುಭಗ್ರಹರ ದೃಷ್ಟಿ ಇಲ್ಲದಿದ್ದಲ್ಲಿ ಜಾತಕನಿಗೆ ನೀಚ ಜನರ ಸಹವಾಸದಿಂದಾಗಿ ಜೂಜು ಇತ್ಯಾದಿ ದುರ್ವ್ಯಸನಕ್ಕೆ ಒಳಗಾಗುತ್ತಾನೆ. ಬುಧನಿಗೆ 5 ಕ್ಕಿಂತ ಹೆಚ್ಚು ಬಿಂದುಗಳಿದ್ದು, ತ್ರಿಕೋಣದಲ್ಲಿದ್ದು ಗುರು, ಶನಿ ದೃಷ್ಟಿ ಇದ್ದರೆ ಆ ಜಾತಕನು ವೇದಾಂತಿಯಾಗುತ್ತಾನೆ. ಬುಧನಿಗೆ 5 ಬಿಂದುಗಳಿದ್ದು ಗುರು-ಮಂಗಳರ ಯುತಿ ಇದ್ದಾಗ ಅಥವಾ ದೃಷ್ಟಿ ಇದ್ದಾಗ ತರ್ಕಶಾಸ್ತ್ರ ಪಂಡಿತನಾಗುತ್ತಾನೆ. ಲಗ್ನದಿಂದ ಪಂಚಮ ಭಾವದಲ್ಲಿ ಬುಧನಿದ್ದು ಹೆಚ್ಚು ಬಿಂದುವಿನಿಂದ ಕೂಡಿ ಕೇತುವಿನ ಸಂಬಂದ ಇದ್ದರೆ.. ಗಣಿತ, ಜ್ಯೋತಿಷ್ಯ ಪ್ರವೀಣನಾಗುತ್ತಾನೆ. ಬುಧನು ತನ್ನ ಮನೆಯಲ್ಲಿ Or ತನ್ನ ನವಾಂಶದಲ್ಲಿದ್ದರೆ ಶಿಲ್ಪಕಲೆ, ಲಲಿತಕಲಾ, ವೇದಗಳಲ್ಲಿ
ಪ್ರವೀಣನಾಗುತ್ತಾನೆ. ಬುಧನು ಶನಿ ಶುಕ್ರ ಚಂದ್ರರ ಸಂಪರ್ಕ ದಲ್ಲಿದ್ದು ಗುರುವಿನ ದೃಷ್ಟಿ ಇದ್ದರೆ ನೃತ್ಯ, ಹಾಸ್ಯ ಪ್ರವೀಣನಾಗುತ್ತಾನೆ. ಬುಧನು 4 ಬಿಂದುಗಳಿಂದ ಕೂಡಿ ಮಂಗಳನ ಮನೆಯಲ್ಲಿದ್ದರೆ ಮತ್ತು ಶುಕ್ರ ನವಾಂಶದಲ್ಲಿ ಗುರುವಿನ Or ಶನಿದೃಷ್ಟಿ ಇದ್ದರೆ ಕವಿ Or ನಾಟಕಕಾರನಾಗುತ್ತಾನೆ. ಬುಧನು 6, 8, 12 ರಲ್ಲಿದ್ದರೆ ವಿದ್ಯಾಭ್ಯಾಸಕ್ಕೆ ತೊಂದರೆ. ಬುಧನು ಭಾವದಲ್ಲಿ ದುರ್ಬಲನಾಗಿದ್ದರೂ 4 Or ಹೆಚ್ಚು ಬಿಂದುಗಳಿದ್ದರೆ ಆ ಭಾವಕ್ಕೆ ಬಲ ಇರುತ್ತದೆ. ಆ ಭಾವಗಳಿಗೆ ಗುರುದೃಷ್ಟಿ ಇದ್ದರೆ ಮತ್ತಷ್ಟು ಆ ಭಾವಕ್ಕೆ ಪುಷ್ಟಿ.
ಬುಧನು ಕೇಂದ್ರ ತ್ರಿಕೋಣಗಳಲ್ಲಿದ್ದು 5 ಬಿಂದುಗಳಿಂದ ಕೂಡಿದ್ದು ಇವನಿಗೆ ಗುರುವಿನ Or ಶನಿಯು ಯುತಿ Or ದೃಷ್ಟಿ ಇದ್ದರೆ ಜಾತಕನು ವೇದಾಂತ ಶಾಸ್ತ್ರ ಪ್ರವೀಣನಾಗುತ್ತಾನೆ.
ಗುರು ಭಿನ್ನಾಷ್ಟಕವರ್ಗ - ಒಟ್ಟು ಬಿಂದುಗಳು: 56
ಜ್ಞಾನ ಮತ್ತು ಭಾಗ್ಯ ಸಂತಾನ ಮತ್ತು ಧನ: ಮಕ್ಕಳ ಭಾಗ್ಯ, ಆಧ್ಯಾತ್ಮಿಕ ಒಲವು, ಉನ್ನತ ಶಿಕ್ಷಣ ಮತ್ತು ಸಂಪತ್ತಿನ ಶೇಖರಣೆಯನ್ನು ಇದು ಸೂಚಿಸುತ್ತದೆ.
ದೈವಕೃಪೆ: ಜೀವನದಲ್ಲಿ ಬರುವ ಅದೃಷ್ಟ ಮತ್ತು ಧಾರ್ಮಿಕ ಕಾರ್ಯಗಳ ಯಶಸ್ಸನ್ನು ಗುರು ಭಿನ್ನಾಷ್ಟಕವರ್ಗದಿಂದ ತಿಳಿಯಬಹುದು.
ಗುರುವಿಗೆ ಹೆಚ್ಚು ಬಿಂದುಗಳಿರುವ ರಾಶಿಯಲ್ಲಿ ಗುರು ಸಂಚರಿಸುವಾಗ ಮದುವೆ, ಸಂತಾನದಂತಹ ಮಂಗಲ ಕಾರ್ಯಗಳು ನಡೆಯುತ್ತವೆ.
ಗುರು ಭಿನ್ನಾಷ್ಟಕ ವರ್ಗದಲ್ಲಿ ಗ್ರಹಗಳು ಕೊಡುವ ಬಿಂಧುಗಳು
ರವಿ: 1, 2, 3, 4, 7, 8, 9, 10, 11 (9 ಬಿಂದು)
ಚಂದ್ರ: 2, 5, 7, 9, 11 (5 ಬಿಂದು)
ಮಂಗಳ: 1, 2, 4, 7, 8, 10, 11 (7 ಬಿಂದು)
ಬುಧ: 1, 2, 4, 5, 6, 9, 10, 11 (8 ಬಿಂದು)
ಗುರು: 1, 2, 3, 4, 7, 8, 10, 11 (8 ಬಿಂದು)
ಶುಕ್ರ: 2, 5, 6, 9, 10, 11 (6 ಬಿಂದು)
ಶನಿ: 3, 5, 6, 12 (4 ಬಿಂದು)
ಲಗ್ನ: 1, 2, 4, 5, 6, 7, 9, 10, 11 (9 ಬಿಂದು)
ಗುರುವು ತನ್ನ ಭಿನ್ನಾಷ್ಟಕ ವರ್ಗಗಳಲ್ಲಿ
8 ಬಿಂದುಗಳಿದ್ದರೆ - ರಾಜಸನ್ಮಾನ
7 ಬಿಂದುಗಳಿದ್ದರೆ - ವಿವಿಧ ರೀತಿ ಧನ ಪ್ರಾಪ್ತಿ
6 ಬಿಂದುಗಳಿದ್ದರೆ - ವಸ್ತ್ರಾಭರಣ ಸಂಗ್ರಹ
5 ಬಿಂದುಗಳಿದ್ದರೆ - ಕಾರ್ಯ ಸಿದ್ಧಿ, ವಿಜಯ
4 ಬಿಂದುಗಳಿದ್ದರೆ - ಲಾಭ ನಷ್ಟ ಸಮಾನ
3 ಬಿಂದುಗಳಿದ್ದರೆ - ಕಿವಿನೋವು ನಿಶ್ಯಕ್ತಿ
2 ಬಿಂದುಗಳಿದ್ದರೆ - ರಾಜಕೋಪ ಧನ ಹಾನಿ
1 ಬಿಂದುಗಳಿದ್ದರೆ - ಧನನಾಶ, ಬಂಧು ಹಾನಿ
0 ಬಿಂದುಗಳಿದ್ದರೆ - ಧನ ಬುದ್ಧಿ, ಸುತ ಹಾನಿ
ಹೆಚ್ಚು ಬಿಂದುಗಳು ಬಿದ್ದಿರುವ ರಾಶಿಯಲ್ಲಿ ದೇವತಾಕಾರ್ಯಗಳು, ವ್ರತಗಳನ್ನು ಆಚರಿಸಬಹುದು . ಗುರುವು ಉಚ್ಛ / ಸ್ವಕ್ಷೇತ್ರಗಳಲ್ಲಿ ಹೆಚ್ಚು ಬಿಂದುಗಳಿಂದ ಕೂಡಿದ್ದರೆ ಮಾನ ಮನ್ನಣೆ, 7 ಬಿಂದುಗಳಿಂದ ಕೂಡಿ ಚಂದ್ರನೊಡನಿದ್ದರೆ ಪತ್ನಿ ಪುತ್ರರ ಅಭಿವೃದ್ಧಿ. 6 ಬಿಂದುಗಳಿದ್ದರೆ ಧನ ವಾಹನ ವಸ್ತ್ರ ಸಂಗ್ರಹ. ಗುರುವಿನಿಂದ 5 ರಲ್ಲಿ ಬಿದ್ದ ಸಂಖ್ಯೆಯಿಂದ ಮಕ್ಕಳ ಸಂಖ್ಯೆಯನ್ನು ಹೇಳಬಹುದು. ಸರ್ವಾಷ್ಟಕವರ್ಗದಲ್ಲಿ ಗುರುವಿಗೆ ಬಿದ್ದ ಬಿಂದುಗಳ ಮೊತ್ತದ ವರ್ಷದಲ್ಲಿ ರಾಜ ಸನ್ಮಾನ. ಗುರುವಿನ ಅಷ್ಟಕವರ್ಗದಲ್ಲಿ ಹೆಚ್ಚು ಬಿಂದುಗಳಿರುವ ರಾಶಿಯಲ್ಲಿ ರವಿ ಸಂಚರಿಸುವಾಗ ಗರ್ಭಧಾರಣೆ ಆದರೆ ಹುಟ್ಟುವ ಮಗು ಪ್ರಖ್ಯಾತನಾಗುತ್ತಾನೆ.
ಚಂದ್ರನು ತನ್ನ ಅಷ್ಟಕವರ್ಗದಲ್ಲಿ 1, 3 ಬಿಂದುಗಳಿಂದ ಕೂಡಿದ್ದು ಗುರುವಿನಿಂದ 6, 8 ರಲ್ಲಿದ್ದರೆ ಅವನಿಗೆ ರಾಜಯೋಗವಿದ್ದರೂ ಸಾಲದ ಭಾದೆ ತಪ್ಪುವುದಿಲ್ಲ. ಗುರು ಯಾವ ರಾಶಿಯಲ್ಲಿದ್ದರೂ ನವಂಶದಲ್ಲಿ ಉಚ್ಛನಾಗಿದ್ದರೆ 5 ಬಿಂದುಗಳಿಂದ ಕೂಡಿದ್ದರೆ ಭೂ ಸೌಖ್ಯ ಪ್ರಾಪ್ತಿ. ಗುರುವು ಕೇಂದ್ರ ತ್ರಿಕೋಣದಲ್ಲಿದ್ದರೂ 1, 3 ಬಿಂದುಗಳಿದ್ದರೆ ಯಾವ ಫಲವನ್ನು ಕೊಡುವುದಿಲ್ಲ. ಗುರುವಿಗೆ 4 ಕ್ಕಿಂತ ಹೆಚ್ಚು ಬಿಂದುಗಳಿದ್ದರೆ , ಶುಕ್ರನ ಯುತಿ Or ದೃಷ್ಟಿ ರಾಜಯೋಗ.
ಶುಕ್ರ ಭಿನ್ನಾಷ್ಟಕವರ್ಗ -
ಸುಖ ಮತ್ತು ವೈವಾಹಿಕ ಜೀವನ
ವೈವಾಹಿಕ ಸುಖ: ವಿವಾಹ ಯೋಗ, ಪತ್ನಿ/ಪತಿಯ ಸುಖ ಮತ್ತು ಪ್ರೇಮ ಜೀವನದ ಯಶಸ್ಸನ್ನು ಇದು ನಿರ್ಧರಿಸುತ್ತದೆ.
ವಿಲಾಸಿ ಜೀವನ: ವಾಹನ ಯೋಗ, ಆಭರಣಗಳು, ಕಲೆ, ಸಂಗೀತ ಮತ್ತು ಐಷಾರಾಮಿ ಜೀವನದ ಸೌಕರ್ಯಗಳನ್ನು ತಿಳಿಯಲು ಇದನ್ನು ನೋಡಲಾಗುತ್ತದೆ.
ಶುಕ್ರನಿಗೆ ಉತ್ತಮ ಬಿಂದುಗಳಿದ್ದರೆ ಜೀವನದಲ್ಲಿ ಎಲ್ಲಾ ಭೌತಿಕ ಸುಖಗಳು ಲಭಿಸುತ್ತವೆ.
ಶುಕ್ರ ಭಿನ್ನಾಷ್ಟಕವರ್ಗ - ಒಟ್ಟು ಬಿಂದುಗಳು: 52
ರವಿ: 8, 11, 12 (3 ಬಿಂದು)
ಚಂದ್ರ: 1, 2, 3, 4, 5, 8, 9, 11, 12 (9 ಬಿಂದು)
ಮಂಗಳ: 3, 5, 6, 9, 11, 12 (6 ಬಿಂದು)
ಬುಧ: 3, 5, 6, 9, 11 (5 ಬಿಂದು)
ಗುರು: 5, 8, 9, 10, 11 (5 ಬಿಂದು)
ಶುಕ್ರ: 1, 2, 3, 4, 5, 8, 9, 10, 11 (9 ಬಿಂದು)
ಶನಿ: 3, 4, 5, 8, 9, 10, 11 (7 ಬಿಂದು)
ಲಗ್ನ: 1, 2, 3, 4, 5, 8, 9, 11 (8 ಬಿಂದು)
ಶುಕ್ರನಿಗೆ ಕುಂಡಲಿಯಲ್ಲಿ
8 ಬಿಂದುವಿದ್ದರೆ - ವಿಲಾಸ ಜೀವನ
7 ಬಿಂದುವಿದ್ದರೆ - ರತ್ನಾಭರಣ ಪ್ರಾಪ್ತಿ
6 ಬಿಂದುವಿದ್ದರೆ - ಪ್ರೀತಿಯುಳ್ಳ ಪತ್ನಿ
5 ಬಿಂದುವಿದ್ದರೆ - ಸನ್ಮಿತ್ರರ ಸಹವಾಸ
4 ಬಿಂದುವಿದ್ದರೆ - ಸಾಮಾನ್ಯ ಸೌಖ್ಯ
3 ಬಿಂದುವಿದ್ದರೆ - ಜನರಿಂದ ಕಲಹ
2 ಬಿಂದುವಿದ್ದರೆ - ಜಾರಿ ಬೀಳುವಿಕೆ
1 ಬಿಂದುವಿದ್ದರೆ - ಕಫ, ಜಲಾದಿಗಳ ರೋಗ
0 ಬಿಂದುವಿದ್ದರೆ - ಹೆಂಡತಿಗೆ ರೋಗ
ಶುಕ್ರಾಷ್ಟಕದಲ್ಲಿ ಶುಕ್ರನಿಂದ 7 ನೇ ಸ್ಥಾನದಲ್ಲಿ ಯಾವ ಗ್ರಹದಿಂದ ಬಿಂದು ಬಿದ್ದಿರುತ್ತದೆಯೋ ಆ ಗ್ರಹದ ನಕ್ಷತ್ರತ್ರಯದಲ್ಲಿ ಒಂದರಲ್ಲಿ ಹೆಣ್ಣು ಹುಟ್ಟಿದ್ದರೆ..., ರವಿಯ ಬಿಂದು ಇದ್ದರೆ ಆಕೆ ಪತಿಗೆ ಪ್ರಿಯಳಾಗುತ್ತಾಳೆ. ಚಂದ್ರನ ಬಿಂದುವಿದ್ದು ಚಂದ್ರನ ನಕ್ಷತ್ರದಲ್ಲಿ ಹುಟ್ಟಿದ್ದರೆ ಅವಳು ಪ್ರೀತಿಸುವ ಹೆಂಡತಿ.
ಕುಜನ ನಕ್ಷತ್ರದಲ್ಲಿ ಜನಿಸಿದ್ದರೆ ಅವರು ಪತಿಗಾಗಿ ಸತ್ಕಾರ್ಯ ಮಾಡುತ್ತಾರೆ. (ಕೇತುವಿನ ನಕ್ಷತ್ರದಲ್ಲಿದ್ದರೂ ಇದೇ ಫಲ.
ಬುಧನ ನಕ್ಷತ್ರ - ಪತಿಗೆ ಆಜ್ಞಾಧಾರಕರು
ಗುರು ನಕ್ಷತ್ರ - ಅವರಲ್ಲಿ ಸತ್ಪುತ್ರರು ಜನಿಸುತ್ತಾರೆ.
ಶುಕ್ರ ನಕ್ಷತ್ರ - ಅಧಿಕ ಸಂಸಾರ ಸುಖ
ಶನಿ ನಕ್ಷತ್ರ - ಪತಿಗೆ ಆಜ್ಞಾಪಾಲಕರು
( ರಾಹು ನಕ್ಷತ್ರದಲ್ಲಿದ್ದಾಗ ಕೂಡಾ ಇದೆ ಫಲ )
ವರನ ಕುಂಡಲಿಯಲ್ಲಿ ಶುಕ್ರನ ಅಷ್ಟಕವರ್ಗದಲ್ಲಿ ಹೆಚ್ಚು ಬಿಂದುಗಳು ಬಿದ್ದಿರುವ ರಾಶಿಯಲ್ಲಿ ಜನಿಸಿದ ಕನ್ಯೆಯನ್ನು ಮದುವೆಯಾದರೆ ಅವರು ಪರಮ ಸುಖಿಗಳು.
ಕುಜ ಅಥವಾ ಶನಿ 2 Or 7 ರಲ್ಲಿದ್ದು ಶುಕ್ರನ 12 ರಲ್ಲಿದ್ದರೆ ಜಾತಕನಿಗೆ ದೈವೀಕ ಯೋಗ.
ಶುಕ್ರನು ಕೇಂದ್ರ Or ತ್ರಿಕೋಣದಲ್ಲಿ 8 ಬಿಂದುವಿನಿಂದ ಕೂಡಿದ್ದರೆ ಸಕಲ ಭೋಗ ಭಾಗ್ಯಗಳನ್ನು ಪಡೆಯುತ್ತಾನೆ. ಕಡಿಮೆ ಬಿಂದುಗಳಿದ್ದರೆ ಸುಖ ಹೀನ.
ಶನಿ ಭಿನ್ನಾಷ್ಟಕವರ್ಗ:--ಆಯಸ್ಸು ಮತ್ತು ಕರ್ಮ
ಜಾತಕನ ಆಯಸ್ಸಿನ ಪ್ರಮಾಣ, ದೀರ್ಘಕಾಲದ ಕಾಯಿಲೆಗಳು ಮತ್ತು ಕಷ್ಟಗಳನ್ನು ಇದು ಸೂಚಿಸುತ್ತದೆ.
ಉದ್ಯೋಗದ ಸ್ಥಿರತೆ: ಕಠಿಣ ಪರಿಶ್ರಮ, ನೌಕರಿ ಅಥವಾ ಉದ್ಯೋಗದಲ್ಲಿ ಎದುರಾಗುವ ಸವಾಲುಗಳನ್ನು ತಿಳಿಯಲು ಇದು ಅತ್ಯಂತ ಮುಖ್ಯ.
ಶನಿಗೆ ಸಾಮಾನ್ಯವಾಗಿ ಬಿಂದುಗಳು ಕಡಿಮೆ ಇರುತ್ತವೆ (39 ಬಿಂದುಗಳು ಮಾತ್ರ). ಶನಿ ಇರುವ ರಾಶಿಯಲ್ಲಿ 4 ಕ್ಕಿಂತ ಹೆಚ್ಚು ಬಿಂದುಗಳಿದ್ದರೆ ಏಳರ ಶನಿ ಅಥವಾ ಅಷ್ಟಮ ಶನಿಯ ಕಷ್ಟಗಳು ಕಡಿಮೆಯಾಗುತ್ತವೆ.
ಶನಿ ಭಿನ್ನಾಷ್ಟಕವರ್ಗದಲ್ಲಿ - ಒಟ್ಟು ಬಿಂದುಗಳು: 39
ರವಿ: 1, 2, 4, 7, 8, 10, 11 (7 ಬಿಂದು)
ಚಂದ್ರ: 3, 6, 11 (3 ಬಿಂದು)
ಮಂಗಳ: 3, 5, 6, 10, 11, 12 (6 ಬಿಂದು)
ಬುಧ: 6, 8, 9, 10, 11, 12 (6 ಬಿಂದು)
ಗುರು: 5, 6, 11, 12 (4 ಬಿಂದು)
ಶುಕ್ರ: 6, 11, 12 (3 ಬಿಂದು)
ಶನಿ: 3, 5, 6, 11 (4 ಬಿಂದು)
ಲಗ್ನ: 1, 3, 4, 6, 10, 11 (6 ಬಿಂದು)
ಶನಿ ಅಷ್ಟಕ ವರ್ಗದ ಫಲ
8 ಬಿಂದು - ನಗರದ ಒಡೆಯ ನಾಗರಾಧಿಕಾರಿ
7 ಬಿಂದು - ವಾಹನ ಲಾಭ
6 ಬಿಂದು - ಚೋರ ನಾಯಕ
5 ಬಿಂದು - ಕೃಷಿಯಿಂದ ಧನಲಾಭ
4 ಬಿಂದು - ಸಾಮಾನ್ಯ ಸುಖ
3 ಬಿಂದು -ಸೇವಕರ (ನೌಕರಿ) ನಾಶ, ಧನ ಹಾನಿ
2 ಬಿಂದು - ಆತುರತೆ, ಬಂಧನ ಭೀತಿ
1 ಬಿಂದು - ಕಾರ್ಯ ಹಾನಿ
0 ಬಿಂದು - ಭಾಗ್ಯ ಕ್ಷಯ
ಲಗ್ನಕ್ಕೆ ಶನಿಯು ಯೋಗ ಕಾರಕನು ಹೌದೋ ಅಲ್ಲವೋ ಎಂಬುದನ್ನು ಗಮನಿಸಬೇಕು. ಶನಿ ತನ್ನ ಅಷ್ಟಕವರ್ಗದಲ್ಲಿ ಹೆಚ್ಚು ಬಿಂದುಗಳು ಬಿದ್ದಿರುವ ರಾಶಿಯಲ್ಲಿ ಸಂಚರಿಸುವಾಗ ಭೂಮಿ, ನೌಕರರಿಂದ ಲಾಭವಿರುತ್ತದೆ. ಶನಿಯ ಶೋಧ್ಯ ಪಿಂಡ ಬಿಂದುವನ್ನು ಶನಿಯಿಂದ 8 ರಲ್ಲಿ ಬಿದ್ದ ಬಿಂದು ಸಂಖ್ಯೆಯಿಂದ ಗುಣಿಸಿ 27 ರಿಂದ ಭಾಗಿಸಿದಾಗ ಶೇಷ ನಕ್ಷತ್ರದಲ್ಲಿ Or ತ್ರಿಕೋಣ ನಕ್ಷತ್ರದಲ್ಲಿ ಶನಿ ಬಂದಾಗ ಮರಣ ಭೀತಿ. ಲಗ್ನದಿಂದ ಶನಿಯವರೆಗೆ ಎರಡನ್ನೂ ಒಳಗೊಂಡು ಬಿಂದುಗಳನ್ನು ಕೂಡಿಸಿ ಬಂದ ಸಂಖ್ಯೆಗೆ 7 ರಿಂದ ಗುಣಿಸಿ 27 ರಿಂದ ಭಾಗಿಸಿದಾಗ ಬಂದ ಶೇಷ ಸಂಖ್ಯೆಯ ನಕ್ಷತ್ರದಲ್ಲಿ ಶನಿ ಸಂಚಾರ ಮಾಡುವಾಗ ಧನ ಸುಖ ಹಾನಿ. ಶನಿಯು 3 ಬಿಂದುಗಳಿಂದ ಕೂಡಿ 10 ನೇ ಮನೆಯಲ್ಲಿದ್ದರೆ Or ದಶಮಾಧಿಪತಿಯಿಂದ ಕೂಡಿದ್ದರೆ ಪರದೇಶ ವಾಸ. ಶನಿ 2-3 ಬಿಂದುಗಳಿಂದ ಕೂಡಿ 2 ನೇ ಮನೆಯಲ್ಲಿದ್ದು ದ್ವಿತೀಯಾಧಿಪತಿಯಿಂದ ಕೂಡಿದ್ದರೆ ಗಂಗಾ ಸ್ನಾನ ಫಲ. ಶನಿ 1, 2, 3 ಬಿಂದುಗಳಿಂದ ಕೂಡಿದ್ದು ಯಾವ ಭಾವದಲ್ಲಿದ್ದರೂ ಪರದೇಶ ವಾಸ.
ಶನಿ, ಗುರು, ರವಿ, ಚಂದ್ರ ಇವರುಗಳು ತಂತಮ್ಮ ಅಷ್ಟಕವರ್ಗದಲ್ಲಿ 1, 2, 3 ಬಿಂದು ಬಿದ್ದ ರಾಶಿಯಲ್ಲಿ ಸಂಚರಿಸುವಾಗ ಅಶುಭ ಫಲಗಳು ಅಧಿಕ.
ಲಗ್ನ ಭಿನ್ನಾಷ್ಟಕ ವರ್ಗ
ಲಗ್ನ ಭಿನ್ನಾಷ್ಟಕವರ್ಗವು - ವ್ಯಕ್ತಿತ್ವ ಮತ್ತು ಜೀವನಶೈಲಿಯನ್ನು ಸೂಚಿಸುತ್ತದೆ.
ಜಾತಕನ ಒಟ್ಟಾರೆ ವ್ಯಕ್ತಿತ್ವ, ನಡವಳಿಕೆ ಮತ್ತು ಆಲೋಚನಾ ಶೈಲಿಯನ್ನು ಇದು ಪ್ರತಿನಿಧಿಸುತ್ತದೆ.
ಯಶಸ್ಸಿನ ಹಾದಿ: ಜೀವನದ ವಿವಿಧ ಹಂತಗಳಲ್ಲಿ ವ್ಯಕ್ತಿಯು ಸ್ವಪ್ರಯತ್ನದಿಂದ ಹೇಗೆ ಯಶಸ್ಸು ಸಾಧಿಸುತ್ತಾನೆ ಎಂಬುದನ್ನು ಇದು ತೋರಿಸುತ್ತದೆ.
ಗ್ರಹಗಳು ಲಗ್ನಕ್ಕೆ ಬಿಂದು ಕೊಡುವ ಸ್ಥಾನಗಳು (ರಾಶಿಗಳು) ಒಟ್ಟು ಬಿಂದುಗಳು 49
ರವಿ:-- ತನ್ನ ಸ್ಥಾನದಿಂದ 3, 4, 6, 11, 12 ನೇ ಮನೆಗಳಿಗೆ ಬಿಂದುಗಳನ್ನು ನೀಡುತ್ತಾನೆ (ಒಟ್ಟು 5 ಬಿಂದುಗಳು)
ಚಂದ್ರ:-- ತನ್ನ ಸ್ಥಾನದಿಂದ 3, 6, 10, 11, 12, ನೇ ಮನೆಗಳಿಗೆ ಬಿಂದುಗಳನ್ನು ನೀಡುತ್ತಾನೆ (ಒಟ್ಟು 5 ಬಿಂದುಗಳು).
ಮಂಗಳ :-- ತನ್ನ ಸ್ಥಾನದಿಂದ 1, 3, 6, 10, 11 ನೇ ಮನೆಗಳಿಗೆ ಬಿಂದುಗಳನ್ನು ನೀಡುತ್ತಾನೆ (ಒಟ್ಟು 5 ಬಿಂದುಗಳು).
ಬುಧ : -- ತನ್ನ ಸ್ಥಾನದಿಂದ 1, 2, 4, 6, 8, 10, 11 ನೇ ಮನೆಗಳಿಗೆ ಬಿಂದುಗಳನ್ನು ನೀಡುತ್ತಾನೆ (ಒಟ್ಟು 7 ಬಿಂದುಗಳು).
ಗುರು :-- ತನ್ನ ಸ್ಥಾನದಿಂದ 1, 2, 4, 5, 6, 7, 9, 10, 11 ನೇ ಮನೆಗಳಿಗೆ ಬಿಂದುಗಳನ್ನು ನೀಡುತ್ತಾನೆ (ಒಟ್ಟು 9 ಬಿಂದುಗಳು).
ಶುಕ್ರ:-- ತನ್ನ ಸ್ಥಾನದಿಂದ 1, 2, 3, 4, 5, 8, 9, 11 ನೇ ಮನೆಗಳಿಗೆ ಬಿಂದುಗಳನ್ನು ನೀಡುತ್ತಾನೆ (ಒಟ್ಟು 8 ಬಿಂದುಗಳು).
ಶನಿ :-- ತನ್ನ ಸ್ಥಾನದಿಂದ 1, 3, 4, 6, 10, 11 ನೇ ಮನೆಗಳಿಗೆ ಬಿಂದುಗಳನ್ನು ನೀಡುತ್ತಾನೆ (ಒಟ್ಟು 6 ಬಿಂದುಗಳು).
ಲಗ್ನ : -- ಲಗ್ನ ಸ್ಥಾನದಿಂದಲೇ 3, 6, 10, 11 ನೇ ಮನೆಗಳಿಗೆ ಬಿಂದುಗಳನ್ನು ನೀಡುತ್ತದೆ (ಒಟ್ಟು 4 ಬಿಂದುಗಳು).
ಲಗ್ನ ಭಿನ್ನಾಷ್ಟಕ ವರ್ಗ ಫಲಗಳು
ಲಗ್ನದ ಅಷ್ಟಕವರ್ಗದಲ್ಲಿ ಒಟ್ಟು 49 ಬಿಂದುಗಳಿರುತ್ತವೆ. ಜಾತಕನ ಜನ್ಮಲಗ್ನದಿಂದ ವಿವಿಧ ರಾಶಿಗಳಲ್ಲಿ ಬಿದ್ದಿರುವ ಬಿಂದುಗಳ ಆಧಾರದ ಮೇಲೆ ಫಲಗಳನ್ನು ಹೀಗೆ ನಿರ್ಣಯಿಸಲಾಗುತ್ತದೆ:
8 ಬಿಂದುಗಳಿದ್ದರೆ: ಜಗತ್ ಪ್ರಸಿದ್ಧಿ, ಅಪ್ರತಿಮ ಕೀರ್ತಿ, ರಾಜಸಮಾನ ಗೌರವ ಮತ್ತು ಸಕಲ ಸುಖ ಭೋಗಗಳು ಲಭಿಸುತ್ತವೆ. ಆರೋಗ್ಯವಂತ.
7 ಬಿಂದುಗಳಿದ್ದರೆ: ಉನ್ನತ ಹುದ್ದೆ, ಸಮಾಜದಲ್ಲಿ ಶ್ರೇಷ್ಠ ಗೌರವ, ವಾಹನ ಮತ್ತು ಧನಲಾಭ.
6 ಬಿಂದುಗಳಿದ್ದರೆ: ಉತ್ತಮ ಆರೋಗ್ಯ, ಕೀರ್ತಿ, ಶೌರ್ಯ ಮತ್ತು ಎಲ್ಲ ಕಾರ್ಯಗಳಲ್ಲೂ ವಿಜಯ.
5 ಬಿಂದುಗಳಿದ್ದರೆ: ಸದಾಚಾರ, ಸಜ್ಜನರ ಸ್ನೇಹ, ಸಾಂಸಾರಿಕ ಸುಖ ಮತ್ತು ಆರ್ಥಿಕ ಪ್ರಗತಿ.
4 ಬಿಂದುಗಳಿದ್ದರೆ: ಸುಖ ಮತ್ತು ದುಃಖ ಸಮಾನವಾಗಿರುತ್ತದೆ (ಮಿಶ್ರ ಫಲ).
3 ಬಿಂದುಗಳಿದ್ದರೆ: ಮಾನಸಿಕ ಅಶಾಂತಿ, ದೈಹಿಕ ಆಯಾಸ ಮತ್ತು ಸಣ್ಣಪುಟ್ಟ ತೊಂದರೆಗಳು.
2 ಬಿಂದುಗಳಿದ್ದರೆ: ಬಂಧುಗಳಿಂದ ವಿರೋಧ, ಧನಹಾನಿ ಮತ್ತು ಅತಿಯಾದ ಶ್ರಮ.
1 ಬಿಂದುವಿದ್ದರೆ: ತೀವ್ರ ದಾರಿದ್ರ್ಯ, ಕಾರ್ಯಹಾನಿ ಮತ್ತು ಅಪಕೀರ್ತಿಯ ಭೀತಿ.
0 ಬಿಂದುವಿದ್ದರೆ: ಅಂಗವೈಕಲ್ಯ, ಸರ್ವಸ್ವ ನಾಶ ಅಥವಾ ತೀವ್ರ ಮಾನಸಿಕ ಭ್ರಷ್ಟತೆ.
ಲಗ್ನವು ನಮ್ಮ ದೇಹ, ಆರೋಗ್ಯ, ಕೀರ್ತಿ, ಸ್ವಭಾವ ಮತ್ತು ಆತ್ಮವಿಶ್ವಾಸವನ್ನು ಸೂಚಿಸುತ್ತದೆ. ಲಗ್ನ ಭಿನ್ನಾಷ್ಟಕವರ್ಗದಲ್ಲಿ ಯಾವ ರಾಶಿಯಲ್ಲಿ 4 ಅಥವಾ ಅದಕ್ಕಿಂತ ಹೆಚ್ಚು ಬಿಂದುಗಳು ಇರುತ್ತವೆಯೋ, ಆ ರಾಶಿಯಲ್ಲಿ ಶುಭ ಗ್ರಹಗಳು ಸಂಚರಿಸುವಾಗ ಜಾತಕನಿಗೆ ಉತ್ತಮ ಆರೋಗ್ಯ, ಯಶಸ್ಸು ಮತ್ತು ಸಮಾಜದಲ್ಲಿ ಗೌರವ ಲಭಿಸುತ್ತದೆ.
ಅಷ್ಟಕವರ್ಗ ಪದ್ಧತಿಯಲ್ಲಿ ಪ್ರತಿಯೊಂದು ಗ್ರಹದ ಭಿನ್ನಾಷ್ಟಕವರ್ಗವು ಮಾನವನ ಜೀವನದ ನಿರ್ದಿಷ್ಟ ಕ್ಷೇತ್ರಗಳನ್ನು ಮತ್ತು ಗ್ರಹಗಳ ನೈಜ ಸಾಮರ್ಥ್ಯವನ್ನು ಸೂಚಿಸುತ್ತದೆ. ಯಾವ ರಾಶಿಯಲ್ಲಿ ನಿರ್ದಿಷ್ಟ ಗ್ರಹಕ್ಕೆ 4 ಅಥವಾ ಅದಕ್ಕಿಂತ ಹೆಚ್ಚು ಬಿಂದುಗಳಿರುತ್ತವೆಯೋ, ಆ ರಾಶಿಗೆ ಆ ಗ್ರಹ ಬಂದಾಗ ಶುಭ ಫಲಗಳನ್ನು ನೀಡುತ್ತದೆ.
ಮುಂದುವರೆಯುವುದು.......
ಡಾ : B. N. ಶೈಲಜಾ ರಮೇಶ್
No comments:
Post a Comment