ಶ್ರೀ ಗಣಪತಯೇ ನಮಃ
ಶ್ರೀ ಗುರುಭ್ಯೋ ನಮಃ
ಅಷ್ಟಕವರ್ಗ:--
ಮುಂದುವರೆದ ಭಾಗ.....
ಹಿಂದಿನ ಲೇಖನದಲ್ಲಿ ಭಿನ್ನಾಷ್ಟಕ ವರ್ಗಗಳ ಬಗ್ಗೆ ತಿಳಿದುಕೊಂಡೆವು.....
ಅಷ್ಟಕವರ್ಗ ಪದ್ಧತಿಯಲ್ಲಿ ಪ್ರತಿಯೊಂದು ಗ್ರಹದ ಭಿನ್ನಾಷ್ಟಕವರ್ಗವು ಮಾನವನ ಜೀವನದ ನಿರ್ದಿಷ್ಟ ಕ್ಷೇತ್ರಗಳನ್ನು ಮತ್ತು ಗ್ರಹಗಳ ನೈಜ ಸಾಮರ್ಥ್ಯವನ್ನು ಸೂಚಿಸುತ್ತದೆ. ಯಾವ ರಾಶಿಯಲ್ಲಿ ನಿರ್ದಿಷ್ಟ ಗ್ರಹಕ್ಕೆ 4 ಅಥವಾ ಅದಕ್ಕಿಂತ ಹೆಚ್ಚು ಬಿಂದುಗಳಿರುತ್ತವೆಯೋ, ಆ ರಾಶಿಗೆ ಆ ಗ್ರಹ ಬಂದಾಗ ಶುಭ ಫಲಗಳನ್ನು ನೀಡುತ್ತದೆ.
ಗ್ರಹಗಳ ಗೋಚಾರ (ಸಂಚಾರ) ಫಲಗಳನ್ನು ತಿಳಿಯಲು ಮತ್ತು ವೃತ್ತಿಜೀವನ, ಆರ್ಥಿಕ ಸ್ಥಿತಿ, ಆಯಸ್ಸು ಮುಂತಾದವುಗಳನ್ನು ಹೆಚ್ಚು ನಿಖರವಾಗಿ ಲೆಕ್ಕಹಾಕಲು ಅಷ್ಟಕವರ್ಗವನ್ನು ಬಳಸಲಾಗುತ್ತದೆ.
ಸರ್ವಾಷ್ಟಕವರ್ಗ ನಿಯಮ.
ಎಲ್ಲಾ 7 ಗ್ರಹಗಳ ಒಟ್ಟು ಬಿಂದುಗಳನ್ನು ಸೇರಿಸಿದಾಗ (48+49+39+54+56+52+39) ಒಟ್ಟು 337 ಬಿಂದುಗಳು ಬರುತ್ತವೆ. ಜಾತಕದಲ್ಲಿ ಈ 337 ಬಿಂದುಗಳನ್ನು 12 ರಾಶಿಗಳಿಗೆ ಹಂಚಲಾಗುತ್ತದೆ.
ಸಾಮಾನ್ಯವಾಗಿ ಯಾವುದೇ ರಾಶಿಯಲ್ಲಿ 28 ಅಂಕಗಳನ್ನು ಸರಾಸರಿ ಎಂದು ಪರಿಗಣಿಸಲಾಗುತ್ತದೆ.
ಫಲಿತಾಂಶಗಳು: 28 ಕ್ಕಿಂತ ಹೆಚ್ಚು ಬಿಂದುಗಳನ್ನು ಹೊಂದಿರುವ ಮನೆಗಳು/ರಾಶಿಗಳು ಅತ್ಯಂತ ಮಂಗಳಕರ ಫಲಿತಾಂಶಗಳನ್ನು ನೀಡುತ್ತವೆ. 25 ಕ್ಕಿಂತ ಕಡಿಮೆ ಬಿಂದುಗಳಿದ್ದಲ್ಲಿ ಆ ಪ್ರದೇಶದಲ್ಲಿ ಹೆಚ್ಚು ಶ್ರಮ ಮತ್ತು ತಾಳ್ಮೆ ಅಗತ್ಯವಿರುತ್ತದೆ.
35 ಕ್ಕಿಂತ ಹೆಚ್ಚು ಬಿಂದು ಬಿದ್ದ ರಾಶಿ ಅತಿ ಉತ್ತಮ ಫಲ
25 ಕ್ಕಿಂತ ಹೆಚ್ಚು ಬಿಂದು ಬಿದ್ದ ರಾಶಿ ಮಧ್ಯಮ ಫಲ
20 ಕ್ಕಿಂತ ಕಡಿಮೆ ಬಿಂದು ಬಿದ್ದ ರಾಶಿ ಕನಿಷ್ಠ ಫಲ
ಅಷ್ಟಮಕ್ಕಿಂತ ಲಗ್ನದಲ್ಲಿ, ಚಂದ್ರಾಷ್ಟಮಕ್ಕಿಂತ ಚಂದ್ರ ಲಗ್ನದಲ್ಲಿ ಹೆಚ್ಚು ಬಿಂದುಗಳಿದ್ದರೆ ದೀರ್ಘ ಆಯಸ್ಸನ್ನು ಸೂಚಿಸುತ್ತದೆ.
ಸ್ವಂತ ಮನೆ ಅಥವಾ ಜಮೀನು ಖರೀದಿಸುವಾಗ ಕೂಡ ಅಷ್ಟಕವರ್ಗವನ್ನು ಬಳಸಬಹುದು.
ಜಾತಕದ 4ನೇ ಮನೆ (ವಾಹನ/ಮನೆ) ಮತ್ತು 2ನೇ ಮನೆ (ಧನ) ಯಲ್ಲಿ 30 ಕ್ಕಿಂತ ಹೆಚ್ಚು ಬಿಂದುಗಳಿದ್ದು, 4ನೇ ಮನೆಯ ಅಧಿಪತಿ ಶುಭ ಕಕ್ಷೆಯಲ್ಲಿದ್ದಾಗ ಮಾತ್ರ ಮನೆ ಕಟ್ಟಲು ಆರಂಭಿಸಬೇಕು.
ಜಾತಕದ 4ನೇ ಮನೆಯಲ್ಲಿ ಎಷ್ಟು ಬಿಂದುಗಳಿವೆಯೋ, ಆ ಸಂಖ್ಯೆಗೆ ಹೊಂದಿಕೆಯಾಗುವ ದಿಕ್ಕಿನ ಕಡೆಗೆ ಮುಖ್ಯ ದ್ವಾರವಿರುವ ಮನೆಯನ್ನು ಖರೀದಿಸಿದರೆ ಆ ವ್ಯಕ್ತಿ ಜನ್ಮವಿಡೀ ಸುಖವಾಗಿರುತ್ತಾನೆ.
ಅಷ್ಟಕವರ್ಗದಲ್ಲಿ ದಿಕ್ಕುಗಳನ್ನು ಆಧರಿಸಿ ಕೂಡ ಜಾತಕರ ಅಭಿವೃದ್ಧಿ ಬಗ್ಗೆ ತಿಳಿಯಬಹುದು
ಜ್ಯೋತಿಷ್ಯದ ಮೂಲ ತತ್ವದ ಪ್ರಕಾರ
ಪೂರ್ವ ದಿಕ್ಕು 1 5 9
ದಕ್ಷಿಣ ದಿಕ್ಕು 2 6 10
ಪಶ್ಚಿಮ ದಿಕ್ಕು 3 7 11
ಉತ್ತರ ದಿಕ್ಕು 4 8 12
ಬೃಹತ್ ಪರಾಶರ ಹೋರಾಶಾಸ್ತ್ರದ 'ಕೋಷ್ಟಕ ವಿಭಜನೆ' (ರಾಶಿ ಮತ್ತು ಭಾವಗಳ ಸಂಬಂಧ) ಪ್ರಕಾರ
ಸರ್ವಾಷ್ಟಕವರ್ಗದಲ್ಲಿ ಜಾತಕದ 12 ಭಾವಗಳನ್ನು ಸಮಾನವಾಗಿ 4 ದಿಕ್ಕುಗಳಾಗಿ ಹಂಚಲು (ಭಾವ 1 ರಿಂದ ಭಾವ 12 ರವರೆಗೆ) ಪರಾಶರ ಮಹರ್ಷಿಗಳು 3-3 ಭಾವಗಳ ಗುಂಪನ್ನು ಮಾಡಿದ್ದಾರೆ. ಇದನ್ನು "ಭಾವ ತ್ರಿಕೋಣ ವಿಭಜನೆ" ಎನ್ನಲಾಗುತ್ತದೆ.
ಅದರ ಪ್ರಕಾರ
ಪೂರ್ವ:1, 12, 11 ಭಾವಗಳು
ದಕ್ಷಿಣ: 8, 9, 10 ಭಾವಗಳು
ಪಶ್ಚಿಮ: 5, 6, 7 ಭಾವಗಳು
ಉತ್ತರ:2, 3, 4 ಭಾವಗಳು
ಜಾತಕದ ಚಕ್ರವನ್ನು ಲೌಕಿಕವಾಗಿ ಅಥವಾ ಭೌಗೋಳಿಕವಾಗಿ ನೋಡಿದಾಗ 1 ನೇ ಮನೆ ಪೂರ್ವ, 7 ನೇ ಮನೆ ಪಶ್ಚಿಮ, 10 ನೇ ಮನೆ ದಕ್ಷಿಣ ಮತ್ತು 4 ನೇ ಮನೆ ಉತ್ತರ ಎಂದೇ ನಾವೆಲ್ಲರೂ ಕಲಿತಿದ್ದೇವೆ . ಹಾಗಾಗಿ 11, 12 ಪೂರ್ವಕ್ಕೆ ಅಥವಾ 5, 6 ಪಶ್ಚಿಮಕ್ಕೆ ಹೇಗೆ ಸೇರುತ್ತವೆ ಎನ್ನುವ ಗೊಂದಲ ಕಾಡಬಹುದು.
(ಲಗ್ನ ಎಂಬುದು ಪೂರ್ವದ ಆರಂಭವಾದರೆ, ಸೂರ್ಯನು ಮಧ್ಯಾಹ್ನದ ದಕ್ಷಿಣ ಬಿಂದುವನ್ನು (10 ನೇ ಮನೆ) ತಲುಪುವ ಮೊದಲು ದಾಟುವ ಮನೆಗಳೇ 12 ಮತ್ತು 11. ಹಾಗಾಗಿ ಲಗ್ನದ ಮುಂಭಾಗದ ಪೂರ್ವದ ವಲಯಕ್ಕೆ 11 ಮತ್ತು 12 ನೇ ಮನೆಗಳು ಸೇರುತ್ತವೆ.")
. ಸೂರ್ಯನ ಚಲನೆ ಮತ್ತು ದಿನದ 24 ಗಂಟೆಗಳ ಕಾಲಾವಧಿ (The Logic of Sun's Motion)
ಅಷ್ಟಕವರ್ಗದಲ್ಲಿ ಈ ದಿಕ್ಕುಗಳ ವಿಭಜನೆಯು ಕೇವಲ ಭೌಗೋಳಿಕ ದಿಕ್ಕನ್ನು ಆಧರಿಸಿಲ್ಲ, ಬದಲಿಗೆ ಸೂರ್ಯನು ಜಾತಕ ಚಕ್ರದಲ್ಲಿ ದಿನದ 24 ಗಂಟೆಗಳಲ್ಲಿ ಹೇಗೆ ಚಲಿಸುತ್ತಾನೆ ಎನ್ನುವುದರ ಮೇಲೆ ಆಧಾರಿತವಾಗಿದೆ.
ಲಗ್ನ (1 ನೇ ಮನೆ): ಇದು ಸೂರ್ಯೋದಯದ ಸಮಯ (ಪೂರ್ವ ದಿಗಂತ).
12 ಮತ್ತು 11 ನೇ ಮನೆಗಳು: ಸೂರ್ಯ ಉದಯಿಸಿದ ನಂತರ (ಬೆಳಗ್ಗೆ 6 ಗಂಟೆಯ ನಂತರ), ಜಾತಕ ಚಕ್ರದಲ್ಲಿ ಸೂರ್ಯನು ಮುಂದಕ್ಕೆ ಹೋಗುವುದಿಲ್ಲ, ಬದಲಿಗೆ 12 ನೇ ಮನೆಗೆ, ನಂತರ 11 ನೇ ಮನೆಗೆ, ತದನಂತರ 10 ನೇ ಮನೆಗೆ (ಮಧ್ಯಾಹ್ನ 12 ಗಂಟೆಗೆ) ಚಲಿಸುತ್ತಾನೆ. ಅಂದರೆ, ಸೂರ್ಯೋದಯದ ನಂತರದ ಮೊದಲ 4 ಗಂಟೆಗಳ ಕಾಲ ಸೂರ್ಯನು ಪೂರ್ವ ದಿಗಂತದ ಆಕಾಶದಲ್ಲೇ ಇರುತ್ತಾನೆ. ಅದಕ್ಕಾಗಿಯೇ 1, 12, 11 ಈ ಮೂರೂ ಭಾವಗಳನ್ನು "ಪೂರ್ವದ ಆಕಾಶ ಅಥವಾ ಪೂರ್ವ ದಿಕ್ಕು" ಎಂದು ಪರಿಗಣಿಸಲಾಗುತ್ತದೆ.
ಇದೇ ತರ್ಕವನ್ನು ಉಳಿದ ದಿಕ್ಕುಗಳಿಗೂ ಅನ್ವಯಿಸಲಾಗುತ್ತದೆ.
10 ನೇ ಮನೆ: ಇದು ಮಧ್ಯಾಹ್ನ 12 ಗಂಟೆಯ ಸಮಯ. ಸೂರ್ಯನು ಆಕಾಶದ ಅತಿ ಎತ್ತರದಲ್ಲಿ (ದಕ್ಷಿಣ ಭಾಗದಲ್ಲಿ) ಇರುತ್ತಾನೆ.
9 ಮತ್ತು 8 ನೇ ಮನೆಗಳು: ಮಧ್ಯಾಹ್ನದ ನಂತರ ಸೂರ್ಯನು ಪಶ್ಚಿಮದ ಕಡೆಗೆ ಸರಿಯುವ ಮುನ್ನ ದಕ್ಷಿಣದ ಆಕಾಶದಲ್ಲೇ ಸಾಗುತ್ತಾನೆ (ಮಧ್ಯಾಹ್ನ 12 ರಿಂದ ಸಂಜೆ 4 ರವರೆಗೆ). ಆದ್ದರಿಂದ 10, 9, 8 ನೇ ಮನೆಗಳು "ದಕ್ಷಿಣ ದಿಕ್ಕು" ಆಗುತ್ತವೆ.
7 ನೇ ಮನೆ: ಇದು ಸೂರ್ಯಾಸ್ತದ ಸಮಯ (ಸಂಜೆ 6 ಗಂಟೆ - ಪಶ್ಚಿಮ ದಿಗಂತ).
6 ಮತ್ತು 5 ನೇ ಮನೆಗಳು: ಸೂರ್ಯ ಮುಳುಗಿದ ತಕ್ಷಣದ ಅವಧಿ (ಸಂಜೆ 6 ರಿಂದ ರಾತ್ರಿ 10 ರವರೆಗೆ). ಸೂರ್ಯನು ಪಶ್ಚಿಮ ದಿಗಂತದ ಕೆಳಗೆ ಜಾರಿರುತ್ತಾನೆ. ಆದ್ದರಿಂದ 7, 6, 5 ನೇ ಮನೆಗಳು "ಪಶ್ಚಿಮ ದಿಕ್ಕು" ಆಗುತ್ತವೆ.
4 ನೇ ಮನೆ: ಇದು ಮಧ್ಯರಾತ್ರಿ 12 ಗಂಟೆಯ ಸಮಯ (ಉತ್ತರ ದಿಗಂತದ ಕೆಳಭಾಗ).
3 ಮತ್ತು 2 ನೇ ಮನೆಗಳು: ಮಧ್ಯರಾತ್ರಿಯ ನಂತರ ಸೂರ್ಯನು ಮತ್ತೆ ಪೂರ್ವಕ್ಕೆ ಬರುವ ಮುನ್ನ ಇರುವ ರಾತ್ರಿಯ ಕೊನೆಯ ಭಾಗ (ರಾತ್ರಿ 12 ರಿಂದ ಮುಂಜಾನೆ 4 ರವರೆಗೆ). ಆದ್ದರಿಂದ 4, 3, 2 ನೇ ಮನೆಗಳು "ಉತ್ತರ ದಿಕ್ಕು" ಆಗುತ್ತವೆ.
ಪೂರ್ವ ದಿಕ್ಕಿನ ಒಟ್ಟು ಬಿಂದುಗಳು = 1 ನೇ ಭಾವ + 12 ನೇ ಭಾವ + 11 ನೇ ಭಾವದ ಬಿಂದುಗಳು.
ದಕ್ಷಿಣ ದಿಕ್ಕಿನ ಒಟ್ಟು ಬಿಂದುಗಳು = 10 ನೇ ಭಾವ + 9 ನೇ ಭಾವ + 8 ನೇ ಭಾವದ ಬಿಂದುಗಳು.
ಪಶ್ಚಿಮ ದಿಕ್ಕಿನ ಒಟ್ಟು ಬಿಂದುಗಳು = 7 ನೇ ಭಾವ + 6 ನೇ ಭಾವ + 5 ನೇ ಭಾವದ ಬಿಂದುಗಳು.
ಉತ್ತರ ದಿಕ್ಕಿನ ಒಟ್ಟು ಬಿಂದುಗಳು = 4 ನೇ ಭಾವ + 3 ನೇ ಭಾವ + 2 ನೇ ಭಾವದ ಬಿಂದುಗಳು.
ಯಾವ ದಿಕ್ಕಿನಲ್ಲಿ ಹೆಚ್ಚು ಬಿಂದುಗಳಿರುತ್ತವೆಯೋ ಆ ದಿಕ್ಕಿನಲ್ಲಿ ಸುಖ ಸಂಪತ್ತು, ಆ ದಿಕ್ಕಿನಲ್ಲಿ ಶುಭ ಗ್ರಹಗಳಿದ್ದರೆ ಶುಭ ಫಲ ಜಾಸ್ತಿ. ಲಗ್ನದ ಅಧಿಪತಿ ಇರುವ ದಿಕ್ಕಿನಲ್ಲಿ ಆತನ ಜೀವನ, 8 ನೇ ಅಧಿಪತಿ ಇರುವ ದಿಕ್ಕು ಆತನಿಗೆ ಕಂಟಕ.
ಇದರೊಂದಿಗೆ ಜಾತಕದಲ್ಲಿ ಗ್ರಹಗಳು ಯಾವ ರಾಶಿ/ಭಾವದಲ್ಲಿವೆ ಎಂಬುದನ್ನು ನೋಡುವಾಗ ಸಾಂಪ್ರದಾಯಿಕ ರಾಶಿ ದಿಕ್ಕುಗಳನ್ನು (ಮೇಷ-ಸಿಂಹ-ಧನು = ಪೂರ್ವ ಇತ್ಯಾದಿ) ಬಳಸುತ್ತೇವೆ. ಆದರೆ, ಸರ್ವಾಷ್ಟಕವರ್ಗದ ಬಿಂದುಗಳ ಮೂಲಕ ವ್ಯಕ್ತಿಯ ಜೀವನದ ದಿಕ್ಕು, ಭಾಗ್ಯೋದಯದ ದಿಕ್ಕು ಮತ್ತು ಕಂಟಕದ ದಿಕ್ಕನ್ನು ನಿರ್ಣಯಿಸುವಾಗ ಈ ವಿಶೇಷ ಭಾವ ತ್ರಿಕೋಣ ತತ್ವವೇ ಅತ್ಯಂತ ನಿಖರವಾದ ಫಲಿತಾಂಶವನ್ನು ನೀಡುತ್ತದೆ.
ಲಗ್ನ 1, 2, 4, 9, 10, 11 ಈ ಭಾವಗಳ ಒಟ್ಟು ಬಿಂದು 164 ಕ್ಕಿಂತ ಹೆಚ್ಚಿದ್ದರೆ ಶ್ರೀಮಂತ ಸಂತೃಪ್ತ ಜೀವನ.
6-8-12 ರಲ್ಲಿಯ ಬಿಂದುಗಳನ್ನು ಕೂಡಿಸಿದರೆ 76 ಕ್ಕಿಂತ ಹೆಚ್ಚಾದರೆ ಖರ್ಚು ಜಾಸ್ತಿ.
ಅಷ್ಟಕವರ್ಗದಿಂದ ವಿಶೇಷವಾಗಿ ಯಾವ ಅವಸ್ಥೆಯಲ್ಲಿ ಜಾತಕರ , ಸುಖ ಸಂತೋಷ ಇರುತ್ತೆ ಅಂತ ಕೂಡ ನೋಡಬಹುದು, ಉದಾಹರಣೆ: ಬಾಲ್ಯ, ಯೌವನ, ವೃದ್ಧಾಪ್ಯ ಇವು ಮೂರು ಅವಸ್ಥೆಯಲ್ಲಿ ಯಾವುದು ಉತ್ತಮವಾಗಿರುತ್ತೆ ಅಂತ ನೋಡುವಾಗ...
ರಾಶಿ ಚಕ್ರದ 12 ಭಾವಗಳನ್ನು ತಲಾ 4 ಭಾವಗಳಂತೆ ಮೂರು ಭಾಗಗಳಾಗಿ ಪ್ರತ್ಯೇಕಿಸಬೇಕು:
ಮೊದಲನೇ ಭಾಗ (ಬಾಲ್ಯ / ಪ್ರಥಮ ಖಂಡ): 1 ನೇ ಭಾವದಿಂದ 4 ನೇ ಭಾವದವರೆಗೆ. (1, 2, 3, 4)
ಎರಡನೇ ಭಾಗ (ಯೌವನ / ದ್ವಿತೀಯ ಖಂಡ): 5 ನೇ ಭಾವದಿಂದ 8 ನೇ ಭಾವದವರೆಗೆ. (5, 6, 7, 8)
ಮೂರನೇ ಭಾಗ (ವೃದ್ಧಾಪ್ಯ / ತೃತೀಯ ಖಂಡ): 9 ನೇ ಭಾವದಿಂದ 12 ನೇ ಭಾವದವರೆಗೆ. (9, 10, 11, 12)
ವಿಶೇಷ ನಿಯಮ ( ಸ್ಥೂಲ ದೃಷ್ಟಿ)
ಕೆಲವು ಸಂಪ್ರದಾಯಗಳಲ್ಲಿ ಲಗ್ನದಿಂದ ಎಣಿಸಿದರೆ, ಇನ್ನು ಕೆಲವು ಶಾಸ್ತ್ರಗಳಲ್ಲಿ ಗುರು ಇರುವ ಮನೆಯನ್ನೇ ಲಗ್ನ ಮಾಡಿ, ಅಲ್ಲಿಂದ ಮುಂದಿನ ಮನೆಗಳನ್ನು ಲೆಕ್ಕ ಹಾಕಲಾಗುತ್ತದೆ.
ಬೃಹತ್ ಪರಾಶರ ಹೊರಶಾಸ್ತ್ರದಲ್ಲಿ
ಸ್ಥಿರ ರಾಶಿ ಪದ್ಧತಿ "ಖಂಡ ಸ್ಫುಟ" ನಿಯಮ.ಅಥವಾ ರಾಶಿ ವಿಭಾಗ ಎನ್ನಲಾಗುತ್ತದೆ. ಇದು ಇಡೀ ಬ್ರಹ್ಮಾಂಡದ ಕಾಲಚಕ್ರದಲ್ಲಿ ಆಯಾ ರಾಶಿಗಳ ಶಕ್ತಿಯನ್ನು ಆಧರಿಸಿ ಜಾತಕನ ಸ್ಥಿತ್ಯಂತರವನ್ನು ಸ್ಥೂಲವಾಗಿ ಹೇಳುತ್ತದೆ. ಇಲ್ಲಿ
ಮೀನದಿಂದ ಮಿಥುನದವರೆಗೆ - ಬಾಲ್ಯ
ಕಟಕದಿಂದ ತುಲಾದವರೆಗೆ - ಯೌವನ
ವೃಶ್ಚಿಕದಿಂದ ಕುಂಭದವರೆಗೆ - ವೃದ್ಧಾಪ್ಯ
(ರಾಶಿಚಕ್ರದ ಕೊನೆಯ ರಾಶಿಯಾದ ಮೀನವನ್ನು 'ಮೋಕ್ಷ' ಮತ್ತು 'ಹೊಸ ಜನ್ಮದ ಆರಂಭದ ಬಿಂದು' ಎಂದು ಪರಿಗಣಿಸಲಾಗುತ್ತದೆ. ಆತ್ಮವು ಜನ್ಮವೆತ್ತಿ ಭೂಮಿಗೆ ಬರುವ ಆರಂಭಿಕ ಹಂತವನ್ನು ಇದು ಸೂಚಿಸುವುದರಿಂದ, ಮೀನದಿಂದ ಮಿಥುನದವರೆಗಿನ ನಾಲ್ಕು ರಾಶಿಗಳನ್ನು ಬಾಲ್ಯ (ಪ್ರಥಮ ಖಂಡ) ಎಂದು ಕರೆಯಲಾಗಿದೆ.)
ಯಾವ ಭಾಗದಲ್ಲಿ ಹೆಚ್ಚು ಬಿಂದುಗಳು ಇರುತ್ತವೆಯೋ, ಜೀವನದ ಆ ಕಾಲಘಟ್ಟವು ಅತ್ಯಂತ ಸುಖಕರ, ಯಶಸ್ವಿ ಮತ್ತು ಭಾಗ್ಯಶಾಲಿಯಾಗಿರುತ್ತದೆ.
ಬಾಲ್ಯ ಭಾಗದಲ್ಲಿ ಹೆಚ್ಚು ಬಿಂದುಗಳಿದ್ದರೆ: ಜಾತಕನ ಬಾಲ್ಯ ಮತ್ತು ಆರಂಭಿಕ ಜೀವನ (ಶಿಕ್ಷಣ, ಕೌಟುಂಬಿಕ ಸುಖ) ತುಂಬಾ ಚೆನ್ನಾಗಿರುತ್ತದೆ.
ಯೌವನ ಭಾಗದಲ್ಲಿ ಹೆಚ್ಚು ಬಿಂದುಗಳಿದ್ದರೆ: ಜಾತಕನ ಮಧ್ಯ ವಯಸ್ಸು (ಉದ್ಯೋಗ, ಮದುವೆ, ಸಂಪಾದನೆ, ಕೀರ್ತಿ) ಅತ್ಯಂತ ಪ್ರಗತಿದಾಯಕವಾಗಿರುತ್ತದೆ. ಹೆಚ್ಚಿನ ಸಾಧನೆಗಳು ಈ ಹಂತದಲ್ಲೇ ಆಗುತ್ತವೆ.
ವೃದ್ಧಾಪ್ಯ ಭಾಗದಲ್ಲಿ ಹೆಚ್ಚು ಬಿಂದುಗಳಿದ್ದರೆ: ಜಾತಕನ ಇಳಿವಯಸ್ಸು ಅಥವಾ ಕೊನೆಯ ಕಾಲ ಬಹಳ ಸುಖಮಯವಾಗಿರುತ್ತದೆ. ನೆಮ್ಮದಿ, ಆಧ್ಯಾತ್ಮಿಕ ಚಿಂತನೆ ಮತ್ತು ಮಕ್ಕಳಿಂದ ಸುಖ ಸಿಗುತ್ತದೆ.
ಲಗ್ನ, ಲಾಭಗಳಲ್ಲಿ 30 ಕ್ಕಿಂತ ಹೆಚ್ಚು ಬಿಂದುಗಳಿದ್ದರೆ ಧನಿಕ ಮತ್ತು ರಾಜ ಮರ್ಯಾದೆ.
1, 9, 10, 11 ಭಾವಗಳಲ್ಲಿ 30 ಕ್ಕಿಂತ ಹೆಚ್ಚು ಬಿಂದುಗಳಿದ್ದರೆ ಅವನು ಅತ್ಯಂತ ಶ್ರೀಮಂತ. 25 ಕ್ಕಿಂತ ಕಡಿಮೆ ಇದ್ದರೆ ದಾರಿದ್ರ್ಯ.
ಲಗ್ನದಲ್ಲಿ 30 ಕ್ಕಿಂತ ಕಡಿಮೆ ಬಿಂದುವಿದ್ದು 3 ನೇ ಭಾವದಲ್ಲಿ 30 ಕ್ಕಿಂತ ಹೆಚ್ಚು ಬಿಂದುವಿದ್ದರೆ ರಾಜಯೋಗ. ( 3 ನೇ ಭಾವ ಸ್ವಪ್ರಯತ್ನವನ್ನು ತೋರಿಸುತ್ತೇ, ಸ್ವಪ್ರಯತ್ನದಿಂದ ರಾಜಯೋಗ)
ಚಂದ್ರನಿಂದ 10, 11 ರಲ್ಲಿ 30 ಕ್ಕಿಂತ ಹೆಚ್ಚು ಬಿಂದುವಿದ್ದು ಗುರುವೀಕ್ಷಣೆ ಇದ್ದರೆ ಮಂತ್ರಿಯಾಗುತ್ತಾನೆ.
ಲಗ್ನಾಧಿಪತಿ 4 ರಲ್ಲಿದ್ದು 30 ಬಿಂದುಗಳಿದ್ದರೆ ಆ ಮನುಷ್ಯ ಸುಖವಂತ.
28 ಕ್ಕಿಂತ ಹೆಚ್ಚು ಬಿಂದು ಇರುವ ರಾಶಿಯಲ್ಲಿ ಶನಿ ಸಂಚಾರವಿದ್ದಾಗ - ಶನಿಪೀಡೆ ಕಡಿಮೆ. ಲಗ್ನದಲ್ಲಿ ಮತ್ತು 9 ರಲ್ಲಿ 29 ಕ್ಕಿಂತ ಹೆಚ್ಚು ಬಿಂದು ಇದ್ದರೆ ಪಾಪಗ್ರಹಗಳ ಸಂಬಂಧವಿಲ್ಲದಿದ್ದರೆ ಲಾಟರಿಯಲ್ಲಿ ಹಣ.
11 ನೇ ಭಾವಕ್ಕಿಂತ 12 ರಲ್ಲಿ ಕಡಿಮೆ ಬಿಂದು ಇದ್ದರೆ ಧನಿಕ. ಗುರುವು 4 ರಲ್ಲಿ 40 ಬಿಂದುಗಳಿಂದ ಕೂಡಿ ಮೇಷದಲ್ಲಿ ರವಿ ಇದ್ದರೆ ಉನ್ನತ ಅಧಿಕಾರ. .
ಲಗ್ನವು 40 ಬಿಂದುಗಳಿಂದ ಕೂಡಿ ಧನಸ್ಸಿನಲ್ಲಿ ಗುರು , ಮೀನದಲ್ಲಿ ಶುಕ್ರ, ಮಕರದಲ್ಲಿ ಕುಜ ಇದ್ದರೆ ಜಾತಕನು ಕೋಟ್ಯಾಧೀಶ.
11 ರಲ್ಲಿ 10 ಕ್ಕಿಂತ ಹೆಚ್ಚು ಬಿಂದುಗಳಿದ್ದು ಲಗ್ನದಲ್ಲಿ 12 ಕ್ಕಿಂತ ಹೆಚ್ಚು ಬಿಂದುಗಳಿದ್ದಲ್ಲಿ ಸುಖ ಭೋಗಿ.
4, 5 ನೇ ಭಾವದ ಗ್ರಹಗಳು ಭೌತಿಕ ಜಗತ್ತಿನ ಕಡೆಗೆ ಸೆಳೆಯುತ್ತದೆ .
1, 3, 9, 10 ಭಾವಗಳು ಹೆಚ್ಚು ಬಲಿಷ್ಠರಾಗಿದ್ದರೆ ಆಧ್ಯಾತ್ಮಿಕತೆ ಕಡೆಗೆ ಪ್ರೀತಿ.
ಶುಕ್ರ ನೀಚ, ದುಸ್ಥಾನಗಳಲ್ಲಿದ್ದರೂ ಸಹ ಅಲ್ಲಿಗೆ ಹೆಚ್ಚು ಬಿಂದುಗಳಿದ್ದರೆ, ಶುಭ ಫಲಗಳ ಮೊತ್ತ ಜಾಸ್ತಿ ಇರುವುದರಿಂದ ಆ ಭಾವಗಳು ಉತ್ತಮ ಫಲವನ್ನೇ ಕೊಡುತ್ತದೆ.
1, 9, 10, 11 ರಲ್ಲಿ 30 ಬಿಂದುಗಳ ಮೇಲಿದ್ದರೆ ಸುಖಮಯ ಜೀವನ.
ಲಗ್ನದಿಂದ ಗುರು/ ಶುಕ್ರರ ಮನೆಯವರೆಗೆ ಎಣಿಸಿ, ಅದನ್ನು ಏಳರಿಂದ ಗುಣಿಸಿ, 27ರಿಂದ ಭಾಗಿಸಿದರೆ ಬಂದ ಭಾಗಲಬ್ದದ ವರ್ಷದಲ್ಲಿ ಪ್ರಗತಿಪರ ಕಾರ್ಯಗಳು ನಡೆಯುತ್ತವೆ. ಶೇಷವು ನಕ್ಷತ್ರವನ್ನು ಸೂಚಿಸುತ್ತದೆ.
10 ಕ್ಕಿಂತ 11 ರಲ್ಲಿ ಹೆಚ್ಚು ಬಿಂದುಗಳಿಂದ ಕೂಡಿದ್ದರೆ ಕ್ರಿಯಾಶೀಲತೆ ಇರುತ್ತೆ, ತನ್ಮೂಲಕ ಹೆಚ್ಚು ಧನಲಾಭ.
12 ನೇ ಮನೆಯು 2 ಕ್ಕಿಂತ ಪ್ರಬಲವಾಗಿದ್ದರೆ ಪರದೇಶದಿಂದ ಲಾಭ. 12 ನೆ ಭಾವದ ಬಿಂದುಗಳಿಗಿಂತ 2 ನೆ ಭಾವದ ಬಿಂದು ಹೆಚ್ಚಿದ್ದರೆ ಆತ ಜಿಪುಣ.
ರೋಗ ಬಂದಾಗ ಯಾವ ರಾಶಿಯಲ್ಲಿ ಕಡಿಮೆ ಬಿಂದುವಿರುತ್ತದೋ ಆ ದಿನ ಡಾಕ್ಟರನ್ನು ಭೇಟಿ ಮಾಡಿದರೆ ಬೇಗ ಖಾಯಿಲೆ ವಾಸಿ ಆಗುತ್ತೆ, ಆ ದಿನ ಸಾಲ ತೆಗೆದುಕೊಂಡರೂ ಕೂಡ ಬೇಗ ಸಾಲ ತೀರುತ್ತದೆ.
1-5-9 ಭಾವಗಳು (ಧರ್ಮ ತ್ರಿಕೋಣ) ಬಂಧು ಭಾವ
2-6-10 ಭಾವಗಳು (ಅರ್ಥ ತ್ರಿಕೋಣ ) ಸೇವಕಭಾವ
3-7-11 ಭಾವಗಳು (ಕಾಮ ತ್ರಿಕೋಣ ) ಪೋಷಕಭಾವ
4-8-12 ಭಾವಗಳು (ಮೋಕ್ಷ ತ್ರಿಕೋಣ ) ಘಾತಕಭಾವ
ಧರ್ಮ ತ್ರಿಕೋಣ ಇಲ್ಲಿ ಬಿಂದುಗಳು ಚೆನ್ನಾಗಿದ್ದರೆ ವ್ಯಕ್ತಿ ಧರ್ಮನಿಷ್ಠ, ಬುದ್ಧಿವಂತ ಮತ್ತು ಸಮಾಜದಲ್ಲಿ ಗೌರವ ಉಳ್ಳವನಾಗುತ್ತಾನೆ.
ಅರ್ಥ ತ್ರಿಕೋಣದಲ್ಲಿ ಬಿಂದುಗಳು ಹೆಚ್ಚಿದ್ದರೆ ಆರ್ಥಿಕ ಸ್ಥಿತಿ, ಉದ್ಯೋಗ ಮತ್ತು ಶತ್ರು ಜಯ ಪ್ರಬಲವಾಗಿರುತ್ತದೆ.
ಕಾಮ ತ್ರಿಕೋಣ ಇಲ್ಲಿ ಬಿಂದುಗಳು ಹೆಚ್ಚಿದ್ದರೆ ಇಷ್ಟಾರ್ಥ ಸಿದ್ಧಿ, ಉತ್ತಮ ಸ್ನೇಹಿತರು, ದಾಂಪತ್ಯ ಸುಖ ಮತ್ತು ಹೆಚ್ಚಿನ ಲಾಭ ಸಿಗುತ್ತದೆ.
ಮೋಕ್ಷ ತ್ರಿಕೋಣ ಇಲ್ಲಿ ಬಿಂದುಗಳು ಹೆಚ್ಚಿದ್ದರೆ ಆಧ್ಯಾತ್ಮಿಕ ಚಿಂತನೆ, ಮಾನಸಿಕ ನೆಮ್ಮದಿ ಇರುತ್ತದೆ. ಆದರೆ 8 ಮತ್ತು 12 ರಲ್ಲಿ ಅತಿ ಹೆಚ್ಚು ಬಿಂದುಗಳಿದ್ದರೆ ಖರ್ಚು ಮತ್ತು ಕಷ್ಟಗಳೂ ಹೆಚ್ಚಾಗಬಹುದು.
ಈ ನಾಲ್ಕು ವಿಭಾಗದ ಬಿಂದುಗಳನ್ನು ಪ್ರತ್ಯೇಕವಾಗಿ ಕೂಡಿಸಿ ಯಾವ ವರ್ಗದಲ್ಲಿ ಹೆಚ್ಚು ಬಿಂದು ಬರುವುದೋ ಆ ವರ್ಗದಿಂದ ಜಾತಕನ ಸುಖ, ಕೆಲಸಗಳನ್ನು ನಿರ್ಧರಿಸಬಹುದು. ಪೋಷಕ ವರ್ಗದ ಬಿಂದುಗಳು, ಘಾತಕಕ್ಕಿಂತ ಹೆಚ್ಚಿದ್ದರೆ ಆತ ಧನಿಕ. ಇಲ್ಲಿ ಅರ್ಥ ಅಥವಾ ಸೇವಕ ವರ್ಗದ ಬಿಂಧುಗಳು ಪ್ರಭಲವಾಗಿದ್ದರೆ ಆತ ಹಣಕ್ಕೆ ಆಸೆ ಪಡುವವನಾಗಿರುತ್ತಾನೆ. ಧರ್ಮ ಭಾವಗಳು ಪ್ರಭಲವಾಗಿದ್ದರೆ ಜಾತಕರು ಧರ್ಮದಿಂದ ಬದುಕುತ್ತಾರೆ.
ಅಷ್ಟಕವರ್ಗವನ್ನು ಕೇವಲ ಬಿಂದುಗಳಷ್ಟೇ ಅಲ್ಲದೆ, ಮತ್ತಷ್ಟು ಸೂಕ್ಷ್ಮವಾಗಿ ತಿಳಿಯಲು ಎರಡು ಪ್ರಮುಖ ಪ್ರಕ್ರಿಯೆಗಳನ್ನು ಮಾಡಲಾಗುತ್ತದೆ:
ಅವು ತ್ರಿಕೋಣ ಮತ್ತು ಏಕಾಧಿಪತ್ಯ ಶೋಧನೆ
. ಮೂಲ ಭಿನ್ನಾಷ್ಟಕವರ್ಗದಲ್ಲಿ ಕಾಣುವ ಬಿಂದುಗಳು ಕಚ್ಚಾ ವಸ್ತುವಿನಂತೆ (Raw Material). ಅದನ್ನು ಶುದ್ಧೀಕರಿಸುವ ಪ್ರಕ್ರಿಯೆಯೇ "ಶೋಧನೆ". ಇದರಲ್ಲಿ ಎರಡು ಪ್ರಕಾರಗಳಿವೆ.
ತ್ರಿಕೋಣ ಶೋಧನೆ (Triplicity Reduction)
ನಮ್ಮ 12 ರಾಶಿಗಳನ್ನು ನಾಲ್ಕು ತತ್ವಗಳ ತ್ರಿಕೋಣಗಳಾಗಿ ವಿಂಗಡಿಸಲಾಗಿದೆ:
ಅಗ್ನಿ ತ್ರಿಕೋಣ: ಮೇಷ, ಸಿಂಹ, ಧನುಸ್ಸು
ಪೃಥ್ವಿ ತ್ರಿಕೋಣ: ವೃಷಭ, ಕನ್ಯಾ, ಮಕರ
ವಾಯು ತ್ರಿಕೋಣ: ಮಿಥುನ, ತುಲಾ, ಕುಂಭ
ಜಲ ತ್ರಿಕೋಣ: ಕಟಕ, ವೃಶ್ಚಿಕ, ಮೀನ
ತ್ರಿಕೋಣ ಶೋಧನೆಯ ನಿಯಮ:
ಒಂದು ತ್ರಿಕೋಣದ ಮೂರು ರಾಶಿಗಳ ಬಿಂದುಗಳನ್ನು ಗಮನಿಸಿ. ಆ ಮೂರರಲ್ಲಿ ಯಾವ ರಾಶಿಯಲ್ಲಿ ಅತ್ಯಂತ ಕಡಿಮೆ ಬಿಂದು ಇದೆಯೋ, ಆ ಸಂಖ್ಯೆಯನ್ನು ಮೂರು ರಾಶಿಗಳ ಬಿಂದುಗಳಿಂದ ಕಳೆಯಬೇಕು.
ಒಂದು ನಿರ್ದಿಷ್ಟ ಗ್ರಹದ ಭಿನ್ನಾಷ್ಟಕವರ್ಗದಲ್ಲಿ, ಉದಾಹರಣೆಗೆ....ಅಗ್ನಿ ತ್ರಿಕೋಣದ ಮೂರು ರಾಶಿಗಳ ಬಿಂದುಗಳನ್ನು ನೋಡಬೇಕು. ಮೇಷದಲ್ಲಿ 4, ಸಿಂಹದಲ್ಲಿ 5 ಧನುಸ್ಸಿನಲ್ಲಿ 2 ಬಿಂದುಗಳಿವೆ ಎಂದುಕೊಳ್ಳೋಣ. ಈ ಮೂರರಲ್ಲಿ ಅತ್ಯಂತ ಕಡಿಮೆ ಬಿಂದು ಯಾವುದು? '2'. ಈಗ ಈ ಮೂರೂ ರಾಶಿಗಳಿಂದ 2 ಅನ್ನು ಕಳೆಯಬೇಕು. ಆಗ ಮೇಷದಲ್ಲಿ 2, ಸಿಂಹದಲ್ಲಿ 3, ಧನುಸ್ಸಿನಲ್ಲಿ ಶೂನ್ಯ (೦) ಉಳಿಯುತ್ತದೆ.
ಯಾವುದಾದರೂ ಒಂದು ರಾಶಿಯಲ್ಲಿ 0 (ಶೂನ್ಯ) ಬಿಂದು ಇದ್ದರೆ, ಆ ಗುಂಪಿನಲ್ಲಿ ಯಾವುದೇ ಕಡಿತ (ಶೋಧನೆ) ಮಾಡುವಂತಿಲ್ಲ. ಬಿಂದುಗಳು ಹಾಗೇ ಉಳಿಯುತ್ತವೆ.
ಮೂರು ರಾಶಿಗಳಲ್ಲಿ ಸಮಾನ ಬಿಂದುಗಳಿದ್ದರೆ (ಉದಾ: 4, 4, 4), ಮೂರೂ ಶೂನ್ಯವಾಗುತ್ತವೆ (0, 0, 0).
ಮೂರು ರಾಶಿಗಳಲ್ಲಿ 2 ರಾಶಿಯಲ್ಲಿ ಶೂನ್ಯ ಬಿಂದುವಿದ್ದರೆ ಮೂರನೇ ರಾಶಿಯಲ್ಲಿರುವ ಬಿಂದುಗಳನ್ನು ಪರಿಗಣಿಸಬಾರದು.
"ಇದು ಜಾತಕದ ಅಹಂಕಾರವನ್ನು ಕರಗಿಸಿ ನೈಜ ಶಕ್ತಿಯನ್ನು ತೋರಿಸುವ ಗಣಿತ".
ಏಕಾಧಿಪತ್ಯ ಶೋಧನೆ (Dual Lordship Reduction)
ತ್ರಿಕೋಣ ಶೋಧನೆ ಮುಗಿದ ನಂತರ "ಏಕಾಧಿಪತ್ಯ ಶೋಧನೆ" ಮಾಡಬೇಕು. ಸೂರ್ಯ ಮತ್ತು ಚಂದ್ರರನ್ನು ಹೊರತುಪಡಿಸಿ ಉಳಿದ 5 ಗ್ರಹಗಳಿಗೆ ಎರಡೆರಡು ಮನೆಗಳಿವೆ. ಮಂಗಳನಿಗೆ ಮೇಷ-ವೃಶ್ಚಿಕ, ಬುಧನಿಗೆ ಮಿಥುನ-ಕನ್ಯಾ, ಗುರುವಿಗೆ ಧನುಸ್ಸು-ಮೀನ, ಶುಕ್ರನಿಗೆ ವೃಷಭ-ತುಲಾ, ಶನಿಗೆ ಮಕರ-ಕುಂಭ.
ಏಕಾಧಿಪತ್ಯ ಶೋಧನೆಯ ಪ್ರಮುಖ ನಿಯಮಗಳು:
1. ಎರಡೂ ಮನೆಗಳಲ್ಲಿ ಶೋಧಿತ ಬಿಂದುಗಳು ಸಮನಾಗಿದ್ದು, ಎರಡೂ ಮನೆಗಳಲ್ಲಿ ಯಾವುದೇ ಗ್ರಹ ಇಲ್ಲದಿದ್ದರೆ, ಎರಡೂ ಮನೆಗಳ ಬಿಂದುಗಳನ್ನು ಶೂನ್ಯ (0) ಮಾಡಬೇಕು.
2. ಎರಡೂ ಮನೆಗಳಲ್ಲಿ ಬಿಂದುಗಳು ಅಸಮನಾಗಿದ್ದು (ಉದಾ: ಒಂದು ಕಡೆ 4, ಇನ್ನೊಂದು ಕಡೆ 2), ಎರಡೂ ಮನೆಗಳು ಗ್ರಹ ರಹಿತವಾಗಿದ್ದರೆ, ಕಡಿಮೆ ಇರುವ ಬಿಂದುವನ್ನು ಎರಡೂ ಕಡೆ ಕಳೆಯಬೇಕು (ಆಗ 4 ಇದ್ದದ್ದು 2 ಆಗುತ್ತದೆ, 2 ಇದ್ದದ್ದು 0 ಆಗುತ್ತದೆ).
3. ಒಂದು ಮನೆಯಲ್ಲಿ ಗ್ರಹವಿದ್ದು, ಇನ್ನೊಂದು ಮನೆ ಖಾಲಿ ಇದ್ದರೆ, ಖಾಲಿ ಇರುವ ಮನೆಯ ಬಿಂದು ಹೆಚ್ಚಿದ್ದರೆ, ಅದನ್ನು ಗ್ರಹವಿರುವ ಮನೆಯ ಬಿಂದುವಿಗೆ ಸಮ ಮಾಡಬೇಕು.
4. ಖಾಲಿ ಇರುವ ಮನೆಯ ಬಿಂದು ಕಡಿಮೆಯಿದ್ದರೆ, ಆ ಖಾಲಿ ಮನೆಯ ಬಿಂದುವನ್ನು ಶೂನ್ಯ ಮಾಡಬೇಕು, ಗ್ರಹವಿರುವ ಮನೆಯ ಬಿಂದು ಹಾಗೇ ಇರುತ್ತದೆ.
5. ಎರಡೂ ಮನೆಗಳಲ್ಲಿ ಗ್ರಹಗಳಿದ್ದರೆ - ಯಾವುದೇ ಶೋಧನೆ ಮಾಡುವಂತಿಲ್ಲ, ಬಿಂದುಗಳು ಹಾಗೇ ಇರುತ್ತವೆ.ಈ ತರಹ ಶೋಧನೆಯ ನಂತರ ಸಿಗುವ ಬಿಂದುಗಳೇ "ಶೋಧಿತ ಬಿಂದುಗಳು".
ಶೋಧ್ಯಪಿಂಡದ ಗಣಿತ
ಏಕಾಧಿಪತ್ಯ ಶೋಧನೆಯ ನಂತರ ಬಂದ ಬಿಂದುಗಳಿಗೆ ಎರಡು ರೀತಿಯ ಗುಣಾಕಾರಗಳನ್ನು ಮಾಡಲಾಗುತ್ತದೆ:
ರಾಶಿ ಗುಣಕಾರ:-- ಪ್ರತಿಯೊಂದು ರಾಶಿಗೂ ಮಹರ್ಷಿಗಳು ಒಂದು ಸ್ಥಿರ ಸಂಖ್ಯೆಯನ್ನು ನೀಡಿದ್ದಾರೆ.
(ಮೇಷಕ್ಕೆ 7, ವೃಷಭಕ್ಕೆ 10, ಮಿಥುನಕ್ಕೆ 8, ಕಟಕಕ್ಕೆ 4, ಸಿಂಹಕ್ಕೆ 10, ಕನ್ಯಾಕ್ಕೆ 5, ತುಲಾಗೆ 7, ವೃಶ್ಚಿಕ ಕ್ಕೆ 8, ಧನಸ್ಸುವಿಗೆ 9, ಮಕರಕ್ಕೆ 5, ಕುಂಭಕ್ಕೆ 11, ಮೀನಕ್ಕೆ 12 ). ಆಯಾ ರಾಶಿಯ ಶೋಧಿತ ಬಿಂದುವನ್ನು ಈ ಸಂಖ್ಯೆಯಿಂದ ಗುಣಿಸಬೇಕು. ಬಂದ ಮೊತ್ತವೇ 'ರಾಶಿಪಿಂಡ'
ರಾಶಿ ಪಿಂಡ: ಪ್ರತಿ ರಾಶಿಯ ಶೋಧಿತ ಬಿಂದುವನ್ನು ಆಯಾ ರಾಶಿಯ 'ರಾಶಿ ಗುಣಕಾರ'ದಿಂದ ಗುಣಿಸಿ, ಬಂದ ಎಲ್ಲಾ 12 ಮನೆಗಳ ಮೊತ್ತವನ್ನು ಕೂಡಬೇಕು.
ಗ್ರಹ ಗುಣಕಾರ :-- ಆಯಾ ರಾಶಿಯಲ್ಲಿ ಕುಳಿತಿರುವ ಗ್ರಹಗಳಿಗೂ ಸ್ಥಿರ ಸಂಖ್ಯೆಗಳಿವೆ.
(ಸೂರ್ಯನಿಗೆ 5, ಚಂದ್ರನಿಗೆ 5, ಮಂಗಳನಿಗೆ 8. ಬುಧನಿಗೆ 5, ಗುರುವಿಗೆ 10, ಶುಕ್ರನಿಗೆ 7, ಶನಿಗೆ 5.). ಅದರಿಂದ ಗುಣಿಸಿದಾಗ ಬರುವುದು 'ಗ್ರಹಪಿಂಡ'.
ಗ್ರಹ ಪಿಂಡ: ಗ್ರಹಗಳು ಕುಳಿತಿರುವ ಮನೆಗಳ ಶೋಧಿತ ಬಿಂದುವನ್ನು ಆಯಾ 'ಗ್ರಹ ಗುಣಕಾರ' ದಿಂದ ಗುಣಿಸಿ, ಆ ಮೊತ್ತವನ್ನು ಕೂಡಬೇಕು.
ನಿಯಮ 1: ಗ್ರಹವಿರುವ ರಾಶಿಯಲ್ಲಿ ಶೋಧಿತ ಬಿಂದು ಶೂನ್ಯ (0) ಆಗಿದ್ದರೆ ಆ ಗ್ರಹದ ಗುಣಾಕಾರವೂ ಶೂನ್ಯವಾಗುತ್ತದೆ (ಹಾಗಾಗಿ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳುವ ಅಗತ್ಯವಿಲ್ಲ).
ನಿಯಮ 2: ಗ್ರಹವಿಲ್ಲದ (ಖಾಲಿ) ರಾಶಿಯಲ್ಲಿ ಬಿಂದುಗಳು ಎಷ್ಟೇ ಇದ್ದರೂ ಅಲ್ಲಿ ಗ್ರಹವೇ ಇಲ್ಲದ ಕಾರಣ ಆ ಬಿಂದುಗಳನ್ನು ಗ್ರಹಪಿಂಡಕ್ಕೆ ಬಳಸುವಂತಿಲ್ಲ (ಅವು ಬರೀ ರಾಶಿಪಿಂಡಕ್ಕೆ ಮಾತ್ರ ಸೀಮಿತ).
ನಿಯಮ 3: ಗ್ರಹವೂ ಇರಬೇಕು + ಅಲ್ಲಿ ಶೋಧಿತ ಬಿಂದುವೂ ಇರಬೇಕು ಆಗ ಮಾತ್ರ ಆ ಗ್ರಹದ ಗುಣಾಕಾರ ಸಂಖ್ಯೆಯಿಂದ ಆ ಬಿಂದುವನ್ನು ಗುಣಿಸಿ ಗ್ರಹಪಿಂಡವನ್ನು ಕಂಡುಹಿಡಿಯಬೇಕು.
ಈ ರಾಶಿಪಿಂಡ ಮತ್ತು ಗ್ರಹಪಿಂಡ ಎರಡನ್ನೂ ಕೂಡಿಸಿದಾಗ ಬರುವ ಮಹಾ ಮೊತ್ತವೇ "ಶೋಧ್ಯಪಿಂಡ".
ಇದನ್ನು ಭವಿಷ್ಯ ಹೇಳಲು ಬಳಸುವುದು ಹೇಗೆ?
ಮಹರ್ಷಿ ಪರಾಶರರು ಆಯುಷ್ಯ ಮತ್ತು ರೋಗದ ಕಾಲವನ್ನು ನಿಖರವಾಗಿ ತಿಳಿಯಲು ಶೋಧ್ಯಪಿಂಡದ ಅದ್ಭುತ ಗಣಿತವನ್ನು ನೀಡಿದ್ದಾರೆ.
ತಂದೆಯ ಕಷ್ಟ/ಮರಣ ಕಾಲ: ಸೂರ್ಯನ ಶೋಧ್ಯಪಿಂಡದ ಸಂಖ್ಯೆಯನ್ನು ತೆಗೆದುಕೊಂಡು, ಅದಕ್ಕೆ ರವಿಯ ಭಿನ್ನಾಷ್ಟಕವರ್ಗದಲ್ಲಿ 9 ನೇ ಮನೆಯಲ್ಲಿರುವ ಬಿಂದುಗಳಿಂದ ಗುಣಿಸಬೇಕು. ಬಂದ ಒಟ್ಟು ಮೊತ್ತವನ್ನು 27 ರಿಂದ ಭಾಗಿಸಿದಾಗ ಸಿಗುವ ಶೇಷ ಒಂದು ನಕ್ಷತ್ರವನ್ನು ಸೂಚಿಸುತ್ತದೆ. ಗೋಚಾರದ ಶನಿ ದೇವನು ಆ ನಕ್ಷತ್ರಕ್ಕೆ ಅಥವಾ ಆ ನಕ್ಷತ್ರದ ತ್ರಿಕೋಣ ನಕ್ಷತ್ರಕ್ಕೆ ಬಂದಾಗ ಜಾತಕನ ತಂದೆಗೆ ಮರಣಾಂತಿಕ ಕಷ್ಟ ಅಥವಾ ಪಿತೃ ವಿಯೋಗವಾಗುತ್ತದೆ. ಅಥವಾ ಪಿತೃ ಸಮಾನ ವ್ಯಕ್ತಿಯ ಮರಣ ಉಂಟಾಗುತ್ತದೆ.
ತಾಯಿಯ ಕಷ್ಟ/ಮರಣಕಾಲ:--ಚಂದ್ರಾಷ್ಟಕ ವರ್ಗದಿಂದ ಶೋಧ ಬಿಂದುವನ್ನು ಚಂದ್ರನ 4 ರಲ್ಲಿ ಬಿದ್ದ ಸಂಖ್ಯೆಯಿಂದ ಗುಣಿಸಿ 27 ರಿಂದ ಭಾಗಿಸಿದಾಗ ಬರುವ ಶೇಷ ನಕ್ಷತ್ರದಲ್ಲಿ ಶನಿ ಸಂಚಾರವಾಗುವಾಗ ತಾಯಿಯ ಮರಣ ಸಂಭವ.
ಆಯುಷ್ಯ ನಿರ್ಣಯ: ಶನಿಯ ಶೋಧ್ಯಪಿಂಡವನ್ನು 7 ರಿಂದ ಗುಣಿಸಿ 27 ರಿಂದ ಭಾಗಿಸಿದಾಗ ಬರುವ ಶೇಷದ ನಕ್ಷತ್ರಕ್ಕೆ ಗೋಚಾರದಲ್ಲಿ ಶನಿ ಬಂದಾಗ ಜಾತಕನಿಗೆ ಕಷ್ಟಕಾಲ.
ಶನಿಯ ಶೋಧ್ಯಪಿಂಡವನ್ನು ಲಗ್ನ ಭಿನ್ನಾಷ್ಟಕ ವರ್ಗದ ಅಷ್ಟಮದಲ್ಲಿ ಇರುವ ಬಿಂದುವಿನಿಂದ ಗುಣಿಸಿ 27 ರಿಂದ ಭಾಗಿಸಿದರೆ ಬರುವ ಶೇಷ ನಕ್ಷತ್ರದಲ್ಲಿ ಶನಿ ಸಂಚಾರಕಾಲದಲ್ಲಿ ಜಾತಕನ ಮರಣ.
ಗೋಚಾರ ಶನಿಯು ಕಂಟಕ ನಕ್ಷತ್ರಕ್ಕೆ ಬಂದಾಗ ಜಾತಕನಿಗೆ ತೀವ್ರ ಅನಾರೋಗ್ಯ ಅಥವಾ ಮರಣ ಸಂಭವಿಸುತ್ತದೆ."
ಸೂರ್ಯನ ಅಷ್ಟಕವರ್ಗದಿಂದ ಜಾತಕನ ಮರಣ ಮಾಸವನ್ನು ಹೇಳಬಹುದು. ರವಿ ಶೋದ್ಯ ಪಿಂಡಕ್ಕೆ ಸೂರ್ಯನಿಂದ 8 ರಲ್ಲಿದ್ದ ಬಿಂದುಗಳಿಂದ ಗುಣಿಸಿ 120 ರಿಂದ ಭಾಗಿಸಬೇಕು. ಶೇಷ ಮಾಸದಲ್ಲಿ ಮರಣ.
ಜ್ಯೋತಿಷ್ಯದಲ್ಲಿ 'ಶೋಧ್ಯಪಿಂಡ' ಎಂಬುದು ಬ್ರಹ್ಮರಹಸ್ಯವಿದ್ದಂತೆ. ನಾವು ಕೇವಲ ಗ್ರಹಗಳ ದಶೆಯನ್ನು ನೋಡಿ ಸಮಯ ನಿರ್ಧಾರ ಮಾಡುತ್ತೇವೆ. ಆದರೆ ಅಷ್ಟಕವರ್ಗದ ಶೋಧ್ಯಪಿಂಡದ ಗಣಿತವನ್ನು ಅನ್ವಯಿಸಿದರೆ, ಘಟನೆ ನಡೆಯುವ ನಿಖರವಾದ ತಿಂಗಳು ಮತ್ತು ದಿನವನ್ನು ಕೂಡ ನಾವು ಬೆರಳೆಣಿಕೆಯಲ್ಲಿ ಹೇಳಬಹುದು...!!
ಸಹೋದರ ಭಾವ ಮತ್ತು ತ್ರಿಕೋಣ ಶೋಧನೆ" (Sibling & Heritage Secret)
ಸಾಮಾನ್ಯವಾಗಿ ಜಾತಕದಲ್ಲಿ 3 ನೇ ಮನೆ ಸಹೋದರ ಸ್ಥಾನ ಹಾಗೂ 4 ನೇ ಮನೆ ತಾಯಿಯ ಸ್ಥಾನ ಎಂದು ನಮಗೆಲ್ಲರಿಗೂ ಗೊತ್ತು. ಆದರೆ ಅಷ್ಟಕವರ್ಗದಲ್ಲಿ ಇವರ ಭಾಗ್ಯವನ್ನು ತಿಳಿಯಲು ವಿಶಿಷ್ಟ ನಿಯಮವಿದೆ.
ನಿಯಮ : ಮಂಗಳನ ಭಿನ್ನಾಷ್ಟಕವರ್ಗದಲ್ಲಿ 3 ನೇ ಮನೆಗೆ ಮತ್ತು ಚಂದ್ರನ ಭಿನ್ನಾಷ್ಟಕವರ್ಗದಲ್ಲಿ 4 ನೇ ಮನೆಗೆ ತ್ರಿಕೋಣ ಶೋಧನೆ ಮಾಡಿದ ನಂತರ ಉಳಿಯುವ ಬಿಂದುಗಳನ್ನು ನೋಡಬೇಕು.
ಮಂಗಳನ ಶೋಧಿತ ಬಿಂದುಗಳು ಹೆಚ್ಚಿದ್ದರೆ, ಸಹೋದರರು ಜೀವನದಲ್ಲಿ ಅತ್ಯಂತ ಉನ್ನತ ಸ್ಥಾನಕ್ಕೆ ಬೆಳೆಯುತ್ತಾರೆ ಮತ್ತು ಅವರಿಂದ ನಮಗೆ ಲಾಭವಿದೆ. ಒಂದು ವೇಳೆ ಚಂದ್ರನ ಶೋಧಿತ ಬಿಂದುಗಳು 4 ನೇ ಮನೆಯಲ್ಲಿ ಶೂನ್ಯ ಅಥವಾ ಅತ್ಯಂತ ಕಡಿಮೆ ಬಂದರೆ, ಪಿತ್ರಾರ್ಜಿತ ಆಸ್ತಿ ಸಿಗುವುದು ಕಷ್ಟ ಅಥವಾ ತಾಯಿಯ ಕಡೆಯಿಂದ ಆಸ್ತಿ ವಿವಾದಗಳು ಉಂಟಾಗುತ್ತವೆ.
ಮುಂದುವರೆಯುವುದು.......
ಡಾ: B. N. ಶೈಲಜಾ ರಮೇಶ್
No comments:
Post a Comment