Tuesday, 6 August 2024

ಲಾಲ್ ಕಿತಾಬ್... ಒಂದು ಪಕ್ಷಿನೋಟ...

                           ಓಂ 
               ಶ್ರೀ ಗಣೇಶಾಯ ನಮಃ
            ಓಂ ಶ್ರೀ ಗುರುಭ್ಯೋ ನಮಃ

ಲಾಲ್ ಕಿತಾಬ್.... ಒಂದು ಪಕ್ಷಿನೋಟ...

          ಗ್ರಹಗಳು,  ತನ್ನ ಸ್ವಭಾವ, ಅನ್ಯ ಗ್ರಹಗಳೊಂದಿಗಿನ ಸಂಯೋಗ, ದೃಷ್ಟಿ, ಸ್ಥಿತಿ, ದಶಾದ ಕಾರಣ, ನಿರಂತರ ಪರಿವರ್ತನೆ ಹೊಂದುತ್ತಿರುತ್ತವೆ. ಹಾಗಾಗಿ ಗ್ರಹಗಳು ಒಮ್ಮೊಮ್ಮೆ ಅತ್ಯಂತ ಶುಭಪ್ರದವಾದರೆ, ಒಮ್ಮೊಮ್ಮೆ ಅಶುಭದಾಯಕವೂ ಆಗುತ್ತವೆ. ಹೀಗೆ ಗ್ರಹಗಳ ಸ್ಥಿತಿ ಆಗಾಗ ಪರಿವರ್ತನೆ ಆಗುವುದರಿಂದ ಅದರ ಪ್ರಭಾವ ನೇರವಾಗಿ ಜಾತಕನ ಜೀವನದ ಮೇಲೆ  ಬೀರುತ್ತವೆ. ಉಚ್ಚರಾಶಿ, ಮಿತ್ರರಾಶಿ, ಮಿತ್ರಗ್ರಹಗಳೊಂದಿಗಿನ ಸಂಯೋಗ ಶುಭಫಲವನ್ನು ಕೊಟ್ಟರೆ ಶತ್ರುರಾಶಿ, ನೀಚಸ್ಥಾನದಲ್ಲಿ ಸ್ಥಿತ ಗ್ರಹ ಅಶುಭಫಲವನ್ನು ಕೊಡುತ್ತವೆ. ಅಶುಭ ಹಾಗೂ ಪಾಪ ಗ್ರಹಗಳ ಕಾರಣ ಮನುಷ್ಯನಿಗೆ ಅಪಾರ ದುಃಖ ಕಷ್ಟಗಳು ಬಾಧಿಸುತ್ತವೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಅಶುಭ ಗ್ರಹಗಳ ಅಶುಭತ್ವ ನಿವಾರಣೆ ಹಾಗೂ ಶುಭತ್ವದ ವೃದ್ಧಿಗಾಗಿ ಅನೇಕ ಪರಿಹಾರೋಪಾಯವನ್ನು ತಿಳಿಸಲಾಗಿದೆ, ಆ ನಿಟ್ಟಿನಲ್ಲಿ ಸರಳ ಉಪಾಯಗಳಿಂದ  ಸುಲಭವಾಗಿ ಪರಿಹಾರವನ್ನು ಕಂಡುಕೊಳ್ಳುವುದಕ್ಕೆ ಲಾಲ್ ಕಿತಾಬ್ ಅತ್ಯಂತ ಪರಿಣಾಮಕಾರಿಯಾಗಿದೆ.

          ಏನಿದು, ಲಾಲ್ ಕಿತಾಬ್..?     

      ಜ್ಯೋತಿಷಿಗಳಿಂದ "ಮ್ಯಾಜಿಕ್ ಬುಕ್" ಎಂದು ಕರೆಯಲ್ಪಡುವ, ಲಾಲ್ ಕಿತಾಬ್, ಅಥವಾ 'ಕೆಂಪು ಪುಸ್ತಕ' ಹಿಂದೂ ಜ್ಯೋತಿಷ್ಯ ಮತ್ತು ಹಸ್ತಸಾಮುದ್ರಿಕ ಶಾಸ್ತ್ರವನ್ನು ಆಧರಿಸಿದ ಐದು ಪುಸ್ತಕಗಳ ಗುಂಪಾಗಿದೆ, ಲಾಲ್ ಕಿತಾಬ್ನ ಮೂಲ ಸೃಷ್ಟಿಕರ್ತನ ಹೆಸರು ತಿಳಿದಿಲ್ಲ,  ಇದರ ಮೂಲದ ಬಗ್ಗೆ ಮಾತನಾಡಿದರೆ , ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಉತ್ಖನನ ಮಾಡುವಾಗ ಇದು ತಾಮ್ರದ ಪಟ್ಟಿಯ ಮೇಲೆ ಉರ್ದು ಮತ್ತು ಪರ್ಷಿಯನ್ ಭಾಷೆಗಳಲ್ಲಿ ಕಂಡುಬಂದಿದೆ, ನಂತರ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ  ಪಂಡಿತ್ ರೂಪ್ ಚಂದ್ರ ಜೋಶಿ ಜಿ ಅವರು  ಇದನ್ನು 19 ನೇ ಶತಮಾನದಲ್ಲಿ ಉರ್ದು ಭಾಷೆಯಲ್ಲಿ ಬರೆದರು.  ಉರ್ದು ಭಾಷೆಯಲ್ಲಿರುವ ಈ ಜ್ಯೋತಿಷ್ಯ ಪುಸ್ತಕದಿಂದಾಗಿ, ಇದು ಅರಬ್ ದೇಶಕ್ಕೆ ಸಂಬಂಧಿಸಿದೆ ಎಂದು ಕೆಲವರು ನಂಬುತ್ತಾರೆ, ಇದು ಈಗ ವಿವಿಧ ಭಾಷೆಗಳಿಗೆ ಅನುವಾದಗೊಂಡಿದೆ. 

            ಲಾಲ್ ಕಿತಾಬ್ ಜ್ಯೋತಿಷ್ಯವು ಸಾಮುದ್ರಿಕಾ ಶಾಸ್ತ್ರದಿಂದ ಬಂದಿದೆ. .ಲಾಲ್ ಕಿತಾಬ್ ಅನ್ನು ವೈದಿಕ ಜ್ಯೋತಿಷ್ಯದ ಪ್ರಮುಖ ಪುಸ್ತಕಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಆದಾಗ್ಯೂ, ಇದರ ಭವಿಷ್ಯವು ವೈದಿಕ ಜ್ಯೋತಿಷ್ಯಕ್ಕಿಂತ ಬಹಳ ಭಿನ್ನವಾಗಿದೆ. . ಇದು ಜ್ಯೋತಿಷ್ಯದ ಸ್ವತಂತ್ರ ಮೂಲಭೂತ ತತ್ವಗಳನ್ನು ಆಧರಿಸಿದ ಪುಸ್ತಕವಾಗಿದ್ದು, ಅದು ತನ್ನದೇ ಆದ ಕೆಲವು ವಿಶಿಷ್ಟ ಲಕ್ಷಣಗಳನ್ನು ಹೊಂದಿದೆ. ಈ ಪುಸ್ತಕದಲ್ಲಿ ವಿವರಿಸಿದ ಮುಖ್ಯ ಪರಿಹಾರಗಳನ್ನು ,  ಜಾತಕದಲ್ಲಿನ ಗ್ರಹದ ದೋಷಗಳನ್ನು ತೆಗೆದುಹಾಕಲು ಬಳಸಬಹುದು.  ಇದರಲ್ಲಿನ ಪರಿಹಾರಗಳನ್ನು ಅನುಸರಿಸಿ, ಜಾತಕರು  ಗರಿಷ್ಠ ಲಾಭವನ್ನು ಸುಲಭವಾಗಿ ಪಡೆಯಬಹುದು. ಲಾಲ್ ಕಿತಾಬ್ ಸ್ವತಃ ಒಂದು ವಿಜ್ಞಾನ ಎಂದು ಹೇಳಬಹುದು

     ಪುರಾಣದಲ್ಲಿ ಲಾಲ್ ಕಿತಾಬ್..!

ಲಾಲ್ ಕಿತಾಬ್ ಗೆ "ಅರುಣ ಸಂಹಿತ" ಎಂಬ ಹೆಸರು ಕೂಡ ಇದೆ ಅಂತ ಹೇಳಲಾಗುತ್ತೆ. ಲಾಲ್ ಕಿತಾಬ್ ಗೆ ಸಂಬಂಧಿಸಿದ ಸಮಸ್ತ ಜ್ಞಾನವನ್ನು ಸೂರ್ಯಭಾಗವಾನ್ ರ ಸಾರಥಿ ಅರುಣ ನು ಲಂಕಾಧೀಶ ರಾವಣನಿಗೆ ನೀಡಿದ್ದ ಅಂತ ಹೇಳ್ತಾರೆ. ರಾವಣನು ತನ್ನ ಇಚ್ಛೆಯಂತೆ ಎಲ್ಲಾ ಗ್ರಹಗಳನ್ನು ನಿಯಂತ್ರಿಸಲು ಲಾಲ್ ಕಿತಾಬ್ ಅನ್ನು ಬಳಸಿದ್ದ ಅನ್ನುವ ಊಹೆ ಇದೆ. ನಂತರ ಅವನ  ಸಾಮ್ರಾಜ್ಯದ ನಾಶದ ನಂತರ, ಪುಸ್ತಕವು ತಪ್ಪಾಗಿ ಸ್ಥಳಾಂತರಗೊಂಡಿತು, ನಂತರ ಆಧುನಿಕ ಕಾಲದಲ್ಲಿ ಅರಬ್ನಲ್ಲಿ ಕಂಡುಬಂದಿತು ಅಂತ ಕೂಡ  ಹೇಳಲಾಗುತ್ತದೆ.

         ಲಾಲಕಿತಾಬ್ ಮೂಲಕ ಭವಿಶ್ಯ ತಿಳಿಯಲು, ಜಾತಕನ ಜನ್ಮ ಸಮಯದ ತಿಳುವಳಿಕೆಯ ಅವಶ್ಯಕತೆ ಇಲ್ಲ. ಲಾಲ್ ಕಿತಾಬ್ ಜ್ಯೋತಿಷ್ಯವು ಮುಖ್ಯವಾಗಿ ಜಾತಕದಲ್ಲಿನ ಗ್ರಹಗಳ ಸ್ಥಾನವನ್ನು ಅವಲಂಬಿಸಿರುತ್ತದೆ. ಇದು ವೈದಿಕ ಜ್ಯೋತಿಷ್ಯದ ನಿಯಮಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಉದಾಹರಣೆಗೆ, ವೈದಿಕ ಜ್ಯೋತಿಷ್ಯದಲ್ಲಿ ಲಗ್ನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡ್ತೀವಿ, ಜನ್ಮ  ಸಮಯದಲ್ಲಿ, ಪೂರ್ವ ದಿಗಂತದಲ್ಲಿ ಉದಯವಾದ ಲಗ್ನ ವನ್ನು ಜನ್ಮಲಗ್ನ, ಅದೇ ಜಾತಕದ ಮೊದಲನೇ ಮನೆ, ಅಲ್ಲಿಂದಲೇ ಜಾತಕದ ಫಲಾಫಲಗಳನ್ನ ನಿರ್ಣಯಿಸುತ್ತೀವಿ,. ಆದರೆ ಲಾಲ್ ಕಿತಾಬ್ ನಲ್ಲಿ ಈ ರೀತಿ ಏನೂ ಇಲ್ಲ. ಅದರಲ್ಲಿ, ಕುಂಡಲಿಯ ಪ್ರಥಮ ಭಾವವು ಕಾಲ ಪುರುಷ ಕುಂಡಲಿಯಯ ಪ್ರಥಮ ಭಾವವಾದ ಮೇಶವೇ ಜನ್ಮಲಜ್ಞ ವಾಗುತ್ತೆ. ಉದಾಹರಣೆಗೆ, ನಮ್ಮ ವೇದಿಕ್ ಅಷ್ಟ್ರಾಲಜಿಯಲ್ಲಿ ಜನ್ಮ ಸಮಯದಲ್ಲಿ  ಪೂರ್ವದಲ್ಲಿ ಉದಯಿಸಿದ  ರಾಶಿ ಧನಸ್ಸು ಆದರೆ, ಅದೇ ಜನ್ಮಲಗ್ನವಾಗಿ ಪ್ರಥಮ ಭಾವವಾಗುತ್ತೆ. ಆದರೆ ಲಾಲ್ ಕಿತಾಬ್ ನಲ್ಲಿ ಹಾಗಾಗುವುದಿಲ್ಲ. ಲಾಲ್ ಕಿತಾಬ್ ಪ್ರಕಾರ, ಮೊದಲ ಮನೆ ಅಥವಾ ಲಗ್ನದ ಮನೆಯನ್ನು ಮೇಷ ರಾಶಿಯಲ್ಲಿ ಬರೆಯಲಾಗುತ್ತದೆ.

ಲಾಲ್ ಕಿತಾಬ್ ಪ್ರಕಾರ  ಜಾತಕದಲ್ಲಿ ಎರಡು ರೀತಿಯ ಮನೆಗಳಿವೆ. ಒಂದು ಪಕ್ಕಾ ಘರ್. ಮತ್ತು ಇನ್ನೊಂದು ಸೋಯಾ ಘರ್

    ಪಕ್ಕಾ ಘರ್ (ಸ್ಥಿರ ರಾಶಿ ) :-- ಯಾವುದೇ ಗ್ರಹಗಳು ತನ್ನ ಸ್ವಂತ ಮನೆಯಲ್ಲಿ ಸ್ಥಿತವಿದ್ದರೆ ಅದು ಪಕ್ಕಾ ಘರ್ ಆಗುತ್ತೆ. Ex:-- ಕುಜ ತನ್ನ ಸ್ವಕ್ಷೇತ್ರ ವಾದ ಮೇಷ ಅಥವಾ ವೃಶ್ಚಿಕ ದಲ್ಲಿ ಸ್ಥಿತವಿದ್ದರೆ ಅದು ಪಕ್ಕಾಘರ್ ಆಗುತ್ತೆ. 

         ಸೋಯಾ ಹುವಾ ಘರ್:-- sleeping house:--

  ಕುಂಡಲಿಯಲ್ಲಿ ಯಾವುದೇ ಮನೆಯಲ್ಲಿ ಯಾವೊಂದು ಗ್ರಹವೂ ಇಲ್ಲದಿದ್ದರೆ ಮತ್ತು ಯಾವುದೇ ಮನೆಗೆ ಯಾವ ಗ್ರಹದ ದೃಷ್ಟಿಯೂ ಇಲ್ಲದಿದ್ದರೆ ಅದು ಸೋಯಾ ಹುವಾ ಘರ್ ಆಗುತ್ತೆ. ಆ ಮನೆಯಿಂದ ಯಾವ ಶುಭ ಫಲಗಳನ್ನೂ ನಿರೀಕ್ಷಿಸಲಾಗುವುದಿಲ್ಲ.

 ಅಲ್ಲದೆ ಈ ಸಿಸ್ಟಮ್ ನಲ್ಲಿ , ಸೋಯಾ ಹುವಾ ಗ್ರಹ್, ಸಹವರ್ತಿ ಗ್ರಹಗಳು (companion planet)  ಕುರುಡು ತೇವಾ,(blind chart), ಅರ್ಧ ಕುರುಡು ಜಾತಕ (Half blind chart),  ಧಾರ್ಮಿಕ ತೇವಾ  ಮತ್ತು ನವಲಿಕ್ ತೇವಾ(minor chart) ಎಂಬ ಪದಗಳನ್ನು ಸಹ ಬಳಸಲಾಗುತ್ತದೆ. , ಇದು ಲಾಲ್ ಕಿತಾಬ್ ಪ್ರಕಾರ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ.    

          Sleeping planet, or, ಸೋಯಾ ಹುವಾ ಗ್ರಹ:--- ಲಾಲ್ ಕಿತಾಬ್ ಜಾತಕದ ಪ್ರಕಾರ, ಒಂದು ಗ್ರಹವು ಯಾವುದೇ ಗ್ರಹಕ್ಕೆ ದೃಷ್ಟಿ ನೀಡದಿದ್ದರೆ, ಅಂತಹ ಗ್ರಹವನ್ನು sleeping planet  ಸೋಯಾ ಹುವಾ ಗ್ರಹ್ ಅಂತ ಕರೆಯಲಾಗುತ್ತೆ. ಉದಾಹರಣೆಗೆ, ಕುಂಡಲಿಯ ನಾಲ್ಕನೇ ಮನೆಯಲ್ಲಿ ಶುಕ್ರ ಸ್ಥಿತನಾಗಿದ್ದರೆ ಮತ್ತು ಹತ್ತನೇ ಮನೆ ಖಾಲಿಯಾಗಿದ್ದರೆ, ಈ ಸ್ಥಿತಿಯಲ್ಲಿ ಶುಕ್ರನನ್ನು ಸೋಯಾ ಹುವಾ ಗ್ರಹ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಶುಕ್ರನ ಏಳನೇ ದೃಷ್ಟಿ ಹತ್ತನೇ ಮನೆಯ ಮೇಲೆ ಇದೆ ಆದರೆ ಯಾವುದೇ ಗ್ರಹವಿಲ್ಲ ಮತ್ತು ನಾಲ್ಕನೇ ಮನೆಯು ಶುಕ್ರನ ಪಕ್ಕ ಘರ್ ಕೂಡ ಅಲ್ಲ. ಈ ಪರಿಸ್ಥಿತಿಯಲ್ಲಿ, ಶುಕ್ರನ ಪ್ರಭಾವವು ನಾಲ್ಕನೇ ಮನೆಗೆ ಮಾತ್ರ ಇರುತ್ತದೆ ಮತ್ತು ಅದರ ಆಧಾರದ ಮೇಲೆ, ಅದು ಫಲಿತಾಂಶಗಳನ್ನು ತೋರಿಸುತ್ತದೆ.  ಆದರೆ ಒಂದು ಗ್ರಹವು ಅದರ ಪಕ್ಕಾ ಘರ್ ನಲ್ಲಿ ಸ್ಥಿತವಿದ್ದು ಯಾವುದೇ ಗ್ರಹವನ್ನು ದೃಷ್ಟಿಸದಿದ್ದರೂ ಕೂಡ ಅದು ಸೋಯಾ ಹುವಾ ಗ್ರಹ ಆಗೋಲ್ಲ.

      ಕಂಪ್ಯಾನಿಯನ್ ಪ್ಲಾನೆಟ್ (ಸಹವರ್ತಿ ಗ್ರಹ):--

      ಲಾಲ್ ಕಿತಾಬ್‌ನಲ್ಲಿ, ಸಹವರ್ತಿ ಗ್ರಹದ ಪರಿಕಲ್ಪನೆಯನ್ನು ಸಹ ಪರಿಗಣಿಸಲಾಗುತ್ತೆ.

ಸಪ್ತ ಗ್ರಹಗಳಲ್ಲಿ ಯಾವುದೇ  ಗ್ರಹಗಳು ಪರಸ್ಪರ ಸ್ಥಾನ ಬದಲಾವಣೆ ಮಾಡಿಕೊಂಡರೆ, ಆ ಗ್ರಹಗಳನ್ನು ಸಹವರ್ತಿ ಗ್ರಹ ಎಂದು ಕರೆಯಲಾಗುತ್ತೆ. ಆ ಗ್ರಹಗಳು ಶತ್ರುಗ್ರಹಗಳಾದರೂ ಪರಸ್ಪರ ಕೆಟ್ಟ ಪರಿಣಾಮ ಬೀರುವುದಿಲ್ಲ. ಆದ್ದರಿಂದ ಅವು  ಸಹವರ್ತಿ ಗ್ರಹಗಳಾಗುತ್ತವೆ ಮತ್ತು ಉತ್ತಮ ಪರಿಣಾಮವನ್ನು ನೀಡುತ್ತವೆ. ಉದಾಹರಣೆಗೆ, ಶನಿಯು ಹನ್ನೊಂದನೇ ಮನೆಯ  ಅಧಿಪತಿ ಮತ್ತು ಸೂರ್ಯನು ಐದನೇ ಮನೆಯ ಅಧಿಪತಿ. ಸೂರ್ಯನು ಹನ್ನೊಂದನೇ ಮನೆಯಲ್ಲಿ ಸ್ಥಿತನಾಗಿ ಮತ್ತು ಶನಿಯು ಐದನೇ ಮನೆಯಲ್ಲಿ ಸ್ಥಿತನಾಗಿದ್ದರೆ,  ಅವು ಸಹವರ್ತಿ ಗ್ರಹಗಳಾಗುತ್ತವೆ. ವೈದಿಕ ಜ್ಯೋತಿಷ್ಯದ ಪ್ರಕಾರ ಅದು ಪರಸ್ಪರ ಶತ್ರುವಾಗಿದ್ದರೂ, ಲಾಲ್ ಕಿತಾಬ್ ಪ್ರಕಾರ ಅದನ್ನು ಪರಸ್ಪರರ ಒಡನಾಟವೆಂದು ಪರಿಗಣಿಸಲಾಗುತ್ತದೆ ಮತ್ತು ಪರಸ್ಪರರ ಮನೆಯ ಮೇಲೆ ಪರಿಣಾಮ ಬೀರುವುದಿಲ್ಲ.

ಅಂಧ ತೇವಾ Blind chart ಅಥವಾ ಕುರುಡು ಜಾತಕ :--

      ಲಾಲ್ ಕಿತಾಬ್ ಪ್ರಕಾರ,  ಕುಂಡಲಿಯ 10 ನೇ ಮನೆಯಲ್ಲಿ ಎರಡು ಪರಸ್ಪರ ಶತ್ರು ಗ್ರಹಗಳನ್ನು ಒಟ್ಟಿಗೆ ಇದ್ದರೆ ಅಥವಾ 10 ನೇ ಮನೆಯಲ್ಲಿ ಯಾವುದೇ ಗ್ರಹವಿಲ್ಲದಿದ್ದರೆ, ಜಾತಕವನ್ನು ಅಂಧ ಕುಂಡಲಿ ಅಥವಾ ಕುರುಡು ಕುಂಡಲಿ ಎಂದು ಕರೆಯಲಾಗುತ್ತದೆ.  10 ನೇ ಮನೆಯು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ ಏಕೆಂದರೆ ಈ ಮನೆಯು ಸ್ಥಾನಮಾನ, ವೃತ್ತಿ ಮತ್ತು ಮೇಲಧಿಕಾರಿಗಳೊಂದಿಗೆ ಸಂಬಂಧವನ್ನು ತೋರಿಸುತ್ತೆ .  ಕುಂಡಲಿಯಲ್ಲಿ 10 ನೇ ಮನೆಯು ಯಾವುದೇ ವ್ಯಕ್ತಿಯ ಕೆಲಸದ ಸ್ಥಳವಾಗಿದೆ, ಹಾಗೂ ಗಳಿಕೆಗೆ ಸಂಬಂಧಿಸಿದೆ, ಆದ್ದರಿಂದ, ಎರಡು ಅಥವಾ ಹೆಚ್ಚಿನ ಶತ್ರು ಗ್ರಹಗಳು ಈ ಮನೆಯಲ್ಲಿ ಒಟ್ಟಿಗೆ ನೆಲೆಗೊಂಡಿದ್ದರೆ, ಅದು ವ್ಯಕ್ತಿಯ ಕೆಲಸದ ಪ್ರದೇಶದಲ್ಲಿ ಅಸಮತೋಲನವನ್ನು ಉಂಟುಮಾಡುತ್ತದೆ.  ವ್ಯಕ್ತಿಯ ಸೇವೆ ಅಥವಾ ವ್ಯವಹಾರದಲ್ಲಿ ಸಂಪೂರ್ಣ ಸ್ಥಿರತೆ ಇಲ್ಲದಿರಬಹುದು. ಹಾಗಾಗಿ ಅದು blind chart ಆಗುತ್ತೆ.

ಅರ್ಧ ಕುರುಡು ಗ್ರಹಗಳ ಜಾತಕ Half blind chart:---

     ಲಾಲ್ ಕಿತಾಬ್ ಪ್ರಕಾರ, ಸೂರ್ಯನು 4 ನೇ ಮನೆಯಲ್ಲಿ ಮತ್ತು ಶನಿ 7 ನೇ ಮನೆಯಲ್ಲಿ ಸ್ಥಿತನಾಗಿದ್ದರೆ, ಕುಂಡಲಿಯನ್ನು ಅರ್ಧ ಕುರುಡು ಗ್ರಹಗಳ ಕುಂಡಲಿ ಎಂದು ಕರೆಯಲಾಗುತ್ತದೆ.  ಈ ಗ್ರಹಗಳ ಸ್ಥಿತಿಯು ವ್ಯಕ್ತಿಯ ಮಾನಸಿಕ ಮತ್ತು ವೃತ್ತಿಪರ ಜೀವನದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ.  ವ್ಯಕ್ತಿಯ ಮಾನಸಿಕ ಶಾಂತಿ ತೀವ್ರವಾಗಿ ಕುಸಿಯಬಹುದು.  4 ನೇ ಮನೆಯು ನಮ್ಮ ಕುಟುಂಬದ ಸಂತೋಷದ ಮನೆಯಾಗಿದೆ ಮತ್ತು ಈ ಗ್ರಹಗಳ ಸಂಯೋಜನೆಯಿಂದಾಗಿ, ಕುಟುಂಬದ ಸಂತೋಷವು ಕಡಿಮೆಯಾಗಬಹುದು.

ಧಾರ್ಮಿಕ ತೇವಾ ಅಥವಾ ಧಾರ್ಮಿಕ ಜಾತಕ:---

      ಲಾಲ್ ಕಿತಾಬ್ ಪ್ರಕಾರ,  ಶನಿ ಮತ್ತು ಗುರು  ಕುಂಡಲಿಯ ಯಾವುದೇ ಮನೆಯಲ್ಲಿ  ಇದ್ದರೆ ಅಥವಾ ಶನಿಯು 11 ನೇ ಮನೆಯಲ್ಲಿದ್ದರೆ ಅದನ್ನು ಧರ್ಮಿ ತೇವಾ ಎಂದು ಕರೆಯಲಾಗುತ್ತದೆ. ಧರ್ಮ ಕರ್ಮಾಧಿಪತಿಯರಾದ  ಗುರು ಮತ್ತು ಶನಿಯ ಸಂಯೋಜನೆಯು ಅನೇಕ ಪ್ರತಿಕೂಲ ಪರಿಸ್ಥಿತಿಯನ್ನು ತಪ್ಪಿಸುವ ಸಾಮರ್ಥ್ಯವನ್ನು ಹೊಂದಿದೆ.  ಅಂತಹ ಜಾತಕಕ್ಕೆ ದೈವಿಕ ಆಶೀರ್ವಾದ ಇರುತ್ತದೆ.  4ನೇ ಮನೆಯಲ್ಲಿ ರಾಹು ಅಥವಾ ಕೇತು ಇದ್ದರೆ ಜಾತಕನು ಧರ್ಮಿಯಾಗುತ್ತಾನೆ.  ಜಾತಕದ ಯಾವುದೇ ಮನೆಯಲ್ಲಿ ರಾಹು ಅಥವಾ ಕೇತು ಜೊತೆ ಚಂದ್ರನ ಸಂಯೋಜನೆಯು  ಧರ್ಮಿ ತೇವೆಯನ್ನಾಗಿ ಮಾಡುತ್ತದೆ.  ಈ ಸ್ಥಿತಿಯಲ್ಲಿ, ವ್ಯಕ್ತಿಯು ತನ್ನ ಜೀವನದಲ್ಲಿ ಯಾವುದೇ ದೊಡ್ಡ ಸಮಸ್ಯೆಗಳನ್ನು ಎದುರಿಸುವುದಿಲ್ಲ, ಎಂದು ಹೇಳಲಾಗುತ್ತೆ.

ಮೈನರ್ ಚಾರ್ಟ್ ಅಥವಾ ನಬಾಲಿಕ್ ತೇವಾ :--

       ಲಾಲ್ ಕಿತಾಬ್ ಪ್ರಕಾರ ಜಾತಕವು 1, 4, 7 ಮತ್ತು 10 ನೇ (ಕೇಂದ್ರ ಮನೆಗಳು) ಮನೆಗಳಲ್ಲಿ ಗ್ರಹವಿಲ್ಲದಿದ್ದರೆ ಅಥವಾ ಶನಿ, ರಾಹು ಅಥವಾ ಕೇತುಗಳನ್ನು ಮಾತ್ರ ಇದ್ದರೆ ಅಥವಾ ಬುಧ ಮಾತ್ರ ಇದ್ದರೆ ಜಾತಕವನ್ನು ಅಪ್ರಾಪ್ತ ಅಥವಾ  ಶಿಶು ಕುಂಡಲಿ ಎಂದು ಕರೆಯಲಾಗುತ್ತದೆ.  ಆ ವ್ಯಕ್ತಿಯ ಭವಿಷ್ಯವು ಹನ್ನೆರಡು ವರ್ಷಗಳವರೆಗೆ ಅನುಮಾನದಲ್ಲಿರುತ್ತದೆ.(ಅಲ್ಪಾಯುಷ್ಯವನ್ನು ಸೂಚಿಸುತ್ತದೆ).  ಏಕೆಂದರೆ ಅಂತಹ ಸ್ಥಿತಿಯಲ್ಲಿ 12 ವರ್ಷ ವಯಸ್ಸಿನವರೆಗೆ, ವ್ಯಕ್ತಿಯು ಹಿಂದಿನ ಜನ್ಮದ ಆಧಾರದ ಮೇಲೆ ಮಾತ್ರ ಫಲಿತಾಂಶಗಳನ್ನು ಪಡೆಯುತ್ತಾನೆ. ಲಾಲ್ ಕಿತಾಬ್ ಪ್ರಕಾರ, ಶಿಶು ಕುಂಡಲಿ ಹೊಂದಿರುವ ವ್ಯಕ್ತಿಯು ನಿರಂತರವಾಗಿ 12 ವರ್ಷಗಳವರೆಗೆ ಪ್ರತಿ ವರ್ಷವೂ ಒಂದೊಂದು  ಗ್ರಹದ  ಪರಿಣಾಮಗಳನ್ನು ಪಡೆಯುತ್ತಾನೆ.  

  • ಏಳನೇ ಮನೆಯ ಗ್ರಹವು ಹುಟ್ಟಿದ ಮೊದಲ ವರ್ಷದ ಮೇಲೆ ಪರಿಣಾಮ ಬೀರುತ್ತದೆ.
  • ನಾಲ್ಕನೇ ಮನೆಯ ಗ್ರಹವು ಹುಟ್ಟಿದ ಎರಡನೇ ವರ್ಷದ ಮೇಲೆ ಪರಿಣಾಮ ಬೀರುತ್ತದೆ.
  • ಒಂಬತ್ತನೇ ಮನೆಯ ಗ್ರಹವು ಹುಟ್ಟಿದ ಮೂರನೇ ವರ್ಷದ ಮೇಲೆ ಪರಿಣಾಮ ಬೀರುತ್ತದೆ.
  • ಹತ್ತನೇ ಮನೆಯ ಗ್ರಹವು ಹುಟ್ಟಿದ ನಾಲ್ಕನೇ ವರ್ಷದ ಮೇಲೆ ಪರಿಣಾಮ ಬೀರುತ್ತದೆ.
  • ಹನ್ನೊಂದನೇ ಮನೆಯ ಗ್ರಹವು ಹುಟ್ಟಿದ ಐದನೇ ವರ್ಷದ ಮೇಲೆ ಪರಿಣಾಮ ಬೀರುತ್ತದೆ.
  • ಮೂರನೇ ಮನೆಯ ಗ್ರಹವು ಹುಟ್ಟಿದ ಆರನೇ ವರ್ಷದ ಮೇಲೆ ಪರಿಣಾಮ ಬೀರುತ್ತದೆ.
  • ಎರಡನೇ ಮನೆಯ ಗ್ರಹವು ಹುಟ್ಟಿದ ಏಳನೇ ವರ್ಷದ ಮೇಲೆ ಪರಿಣಾಮ ಬೀರುತ್ತದೆ.
  • ಐದನೇ ಮನೆಯ ಗ್ರಹವು ಹುಟ್ಟಿದ ಎಂಟನೇ ವರ್ಷದ ಮೇಲೆ ಪರಿಣಾಮ ಬೀರುತ್ತದೆ.
  • ಆರನೇ ಮನೆಯ ಗ್ರಹವು ಹುಟ್ಟಿದ ಒಂಬತ್ತನೇ ವರ್ಷದ ಮೇಲೆ ಪರಿಣಾಮ ಬೀರುತ್ತದೆ.
  • ಹನ್ನೆರಡನೆಯ ಮನೆಯ ಗ್ರಹವು ಹುಟ್ಟಿದ ಹತ್ತನೇ ವರ್ಷದ ಮೇಲೆ ಪರಿಣಾಮ ಬೀರುತ್ತದೆ.
  • ಮೊದಲ ಮನೆಯ ಗ್ರಹವು ಹುಟ್ಟಿದ ಹನ್ನೊಂದನೇ ವರ್ಷದ ಮೇಲೆ ಪರಿಣಾಮ ಬೀರುತ್ತದೆ.
  • ಎಂಟನೇ ಮನೆಯ ಗ್ರಹವು ಹುಟ್ಟಿದ ಹನ್ನೆರಡನೇ ವರ್ಷದ ಮೇಲೆ ಪರಿಣಾಮ ಬೀರುತ್ತದೆ.

          ಜಾತಕನು ತನ್ನ ಭಾಗ್ಯವನ್ನು ಹುಟ್ಟುವಾಗಲೇ ತನ್ನ ಜೊತೆಗೆ ಹೊತ್ತು ತಂದಿರುತ್ತಾನೆ, ಮತ್ತು ಅದನ್ನು ಬದಲಿಸಲಾಗುವುದಿಲ್ಲ, ಆದರೆ ಅದರ ದುಷ್ಪ್ರಭಾವವನ್ನು ಕಡಿಮೆ ಗೊಳಿಸಬಹುದು. ಲಾಲಕಿತಾಬ್ ಪ್ರಕಾರ ಗ್ರಹಗಳ ಅಶುಭತ್ವ ಎರಡು ಪ್ರಕಾರದ್ದು. ಉದಾಹರಣೆಗೆ ಜಾತಕದ ಯಾವುದಾದರೂ ಭಾವದಲ್ಲಿ ಸ್ಥಿತಗ್ರಹ ಅಶುಭ ಫಲಗಳನ್ನು ನೀಡುತ್ತಿದ್ದರೆ ಆಗ ಪರಿಹಾರೋಪಾಯಗಳು ಕೆಲಸ ಮಾಡುತ್ತವೆ. ಆದರೆ ಅದೇ ಗ್ರಹ ಒಂದು ವೇಳೆ ತನ್ನ ಸ್ವಕ್ಷೇತ್ರದಲ್ಲಿ ಸ್ಥಿತವಿದ್ದು ಸ್ವಯಂ ಅಶುಭಫಲ ನೀಡುತ್ತಿದ್ದರೆ ಯಾವುದೇ ಉಪಾಯಗಳು ಫಲಿಸುವುದಿಲ್ಲ. 

         ಲಾಲ್ ಕಿತಾಬ್ ನಲ್ಲಿ ಪರಿಹಾರಗಳನ್ನು ಮಂತ್ರ - ತಂತ್ರ, ಉಪಾಯ ಮತ್ತು ಸದಾಚರಣೆ ಎಂದು ಮೂರು ಭಾಗದಲ್ಲಿ ವಿಂಗಡಿಸಲಾಗಿದೆ. ಮಂತ್ರ - ತಂತ್ರಗಳು ತಕ್ಷಣ ಉಪಶಮನ ನೀಡಿದರೆ, ಉಪಾಯಗಳು ದೀರ್ಘಕಾಲದ ಉಪಶಮನ ನೀಡುತ್ತವೆ, ಸದಾಚಾರವನ್ನು ರೂಢಿಸಿಕೊಂಡರೆ ಸದಾಕಾಲ ಉಪಶಮನ ಪ್ರಧಾನಿಸುತ್ತವೆ. ಸದಾಚಾರ ನಮ್ಮ ಸಂಸ್ಕೃತಿ ಸಂಸ್ಕಾರಗಳ ಒಂದು ಭಾಗ..! ಸದಾಚಾರ ಮನುಶ್ಯ ಧರ್ಮವೂ ಹೌದು.  ಈ ಧಾರ್ಮಿಕವಾದ ಸದಾಚಾರವು ಜಾತಕದ ಅದೆಷ್ಟೋ ದೋಷಗಳನ್ನು ತೊಡೆದುಹಾಕುತ್ತವೆ. ಸಾತ್ವಿಕತೆಯನ್ನು ಬಿಂಬಿಸುವ ಸದಾಚಾರದ ಉಪಾಯಗಳು ಸರಳವೂ ಹೌದು, ಪರಿಣಾಮಕಾರಿಯೂ ಹೌದು. 

        ಜಾತಕನ ಕುಂಡಲಿಯಲ್ಲಿ ಗ್ರಹಗಳು  ಬಲಹೀನರಾಗಿದ್ದರೆ ಉಂಟಾಗುವ ತೊಂದರೆಗಳು* *ಮತ್ತು  ಇವುಗಳ ಪರಿಹಾರಗಳ ಬಗ್ಗೆ ಸ್ವಲ್ಪ ಗಮನ ಹರಿಸೋಣ

ಗ್ರಹಗಳು
೧)ನೀಚತ್ವದಲ್ಲಿ
೨)ಶತೃಕ್ಷೇತ್ರಗಳಲ್ಲಿ
೩)ದುಸ್ಥಾನಗಳಲ್ಲಿ ಅಶುಭರ ಸಂಪರ್ಕದಲ್ಲಿದ್ದರೆ
೪)ಅಸ್ತಂಗತರಾಗಿದ್ದರೆ
5) ೬, ೮ ೧೨ನೇ ಸ್ಥಾನಗಳಲ್ಲಿದ್ದರೆ.
೬)ಕೇಂದ್ರಾದಿಪತಿಯಾಗಿ ತನ್ನದಲ್ಲದ ಮತ್ತೊಂದು ಕೇಂದ್ರದಲ್ಲಿದ್ದರೆ.
೭)ಗ್ರಹ ಯುದ್ದದಲ್ಲಿ ಪರಾಜಿತ ಈ ರೀತಿ ಇದ್ದಾಗ ಗ್ರಹಗಳು ಬಲಹೀನರೆಂದು ಪರಿಗಣಿಸಲಾಗುತ್ತದೆ.

ರವಿ :--

      ಬಲಹೀನ ರವಿಯಿಂದ ಉಂಟಾಗುವ ತೊಂದರೆಗಳು ಮತ್ತು ಅದಕ್ಕೆ ಪರಿಹಾರಗಳು*

ರವಿಯ ಶುಭಾಶುಭ  ಭಾವಗಳು. :--
          ರವಿಯು  ಪ್ರಥಮ, ಪಂಚಮ, ಅಷ್ಟಮ, ನವಮ,  ದಶಮ , ಏಕಾದಶ,  ಭಾವಗಳಲ್ಲಿ  ಶುಭ ಫಲಗಳನ್ನೂ...
     ಷಷ್ಟ,  ಸಪ್ತಮ ಭಾವಗಳಲ್ಲಿ. ಅಶುಭ ಫಲಗಳನ್ನೂ ಪ್ರಸಾದಿಸುತ್ತಾನೆ,  ರವಿಯು  ಏಕಾಂಗಿಯಾಗಿ  ಯಾವುದೇ ಭಾವದಲ್ಲಿ  ಸ್ಥಿತನಿದ್ದರೂ ಸ್ವಪ್ರಯತ್ನದಿಂದಲೇ ಶ್ರೀಮಂತರಾಗುತ್ತಾರೆ,
      ರವಿಯು  ಅಶುಭನಾದರೆ ಪ್ರಥಮ ಭಾವ ಕೂಡ ಹಾಳಾಗುತ್ತೆ,  ಚಂದ್ರನೊಡನೆ ಸಂಬಂಧವಿದ್ದರೆ ಚತುರ್ಥ ಭಾವದ  ಅಶುಭ ಫಲ ಪ್ರಾಪ್ತಿಯಾಗುತ್ತೆ,  ರಾಹುವಿನೋಡನೆ ಸಂಭಂದವಿದ್ದರೆ  ಪಂಚಮ ಭಾವದ ಫಲ ನಾಶವಾಗುತ್ತೆ,  ರವಿಯು  ಷಷ್ಟ ಭಾವದಲ್ಲಿ ಸ್ಥಿತನಿದ್ದರೆ ಪುತ್ರಪ್ರಾಪ್ತಿಯ  ನಂತರವೇ  ಶುಭಫಲ ಪ್ರಾಪ್ತಿ.
ರವಿಯ  ಅಶುಭತ್ವದ ಲಕ್ಷಣ  :--
           ರವಿಯು  ಅಶುಭನಾಗಿದ್ದರೆ,  ಜಾತಕನ  ಶರೀರ ಒಣಗಿ  ಬಿರುಸಾಗಿರುತ್ತದೆ, ಮೂಳೆಗಳ ತೊಂದರೆ,  ಅತ್ಯಂತ ಕಠಿಣತೆಯಿಂದ  ಶರೀರದ  ಅಂಗಗಳ  ಚಲನೆ ಮಾಡುವಂತಾಗುತ್ತೆ,  ಬಾಯಿಯಲ್ಲಿ  ಸದಾ  ಜೊಲ್ಲು ಸುರಿಸುತ್ತಿರುತ್ತಾರೆ,  .
         ಹೃದಯರೋಗ, ಉದರಸಂಭಂದಿ  ವಿಕಾರ, ನೇತ್ರರೋಗ,  ಧನನಾಶ,  ಸಾಲದ ಹೊರೆ,  ಮಾನ ನಷ್ಟ,  ಅಪಯಶಸ್ಸು,  ಮುಂತಾದ ಆನಿಷ್ಠ ಫಲಗಳು.

*ಪರಿಹಾರಗಳು:-*

ಶಿವ ಮತ್ತು ರವಿಯನ್ನು ಆರಾಧಿಸಬೇಕು

೨೩ ರಿಂದ೨೪ ನೇ ವಯಸ್ಸಿನೊಳಗೆ ವಿವಾಹವಾಗಬೇಕು

ರವಿಗೆ ಸಂಬಂದಿಸಿದ  ವಸ್ತುಗಳನ್ನು ದೇವಸ್ಥಾನಕ್ಕೆ  ದಾನಮಾಡಬೇಕು

ಬಿಳಿ ಅಥವ ಗುಲಾಬಿಬಣ್ಣದ ವಸ್ತುಗಳನ್ನು ಉಪಯೋಗಿಸಬೇಕು,

ಸಕ್ಕರೆ ನೀರನ್ನು ಗುಲಾಬಿ ಪುಷ್ಪಗಳೊಂದಿಗೆ ಉದಯಿಸುತ್ತಿರುವ ರವಿಗೆ ಅರ್ಪಿಸಬೇಕು

.ಕುರುಡರಿಗೆ,ಕೋತಿ,ಅಥವ ಹುಂಜಕ್ಕೆ ಆಹಾರವನ್ನು ನೀಡಬೇಕು.

ಸಂಜೆ ಸಮಯದಲ್ಲಿ ಇರುವೆಗಳಿಗೆ ಅಕ್ಕಿ,ಸಕ್ಕರೆ ಎಳ್ಲನ್ನು ಕೊಡಬೇಕು

ಆಹಾರ ತೆಗೆದುಕೊಳ್ಲುವುದಕ್ಕೆ ಮುಂಚೆ ಅಗ್ನಿಗೆ ಸ್ವಲ್ಪ ಅರ್ಪಿಸಿ ನಂತರ ಸೇವಿಸಬೇಕು.

ಬೆಲ್ಲ, ತಾಮ್ರ, ಚಿನ್ನವನ್ನು ದಾನಮಾಡಬೇಕು

ತಾಮ್ರದ ಅಥವ ಲೋಹದ ನಾಣ್ಯವನ್ನು ಹರಿಯುವ ನೀರಿನಲ್ಲಿ ಹಾಕಬೇಕು

ಸೂರ್ಯಗ್ರಹಣದ ದಿನ ಹರಿಯುವ ನೀರಲ್ಲಿ ಇದ್ದಿಲು, ಸಾಸಿವೆ ಅಥವ ಬಾರ್ಲಿಯನ್ನು ಹಾಕಬೇಕು.

ಸುಳ್ಳು ಸಾಕ್ಷ್ಯ ಹೇಳಬಾರದು , ಮಾಂಸ ಮತ್ತು ಮದ್ಯಗಳನ್ನು ಸೇವಿಸಬಾರದು.

ಉಪ್ಪನ್ನು ಕಡಿಮೆ ಉಪಯೋಗಿಸಿ ಮತ್ತು ಭಾನುವಾರಗಳಂದು ಉಪವಾಸಮಾಡಬೇಕು

ವಿಷ್ಣುವನ್ನು ಆರಾಧಿಸಬೇಕು ಮತ್ತು ಹರಿವಂಶವನ್ನು ಓದಬೇಕು.

ಚಂದ್ರ:---

   ಬಲಹೀನ ಚಂದ್ರನಿಂದ ಉಂಟಾಗುವ ತೊಂದರೆಗಳು ಮತ್ತು ಪರಿಹಾರಗಳು:--

       ಜನನ ಕುಂಡಲಿಯಲ್ಲಿ ಚಂದ್ರನು ರಾಹು ಮತ್ತು ಶನಿಗಳ ಸಂಪರ್ಕದಲ್ಲಿ ಮತ್ತು ಕ್ಷೀಣನಾಗಿದ್ದರೆ, ಬಾವನಾತ್ಮಕತೆಯಲ್ಲಿ ಅಸಮತೋಲನ, ಇತರರ ಜೊತೆಗೆ ಆತ್ಮೀಯತೆಯಿಂದಿರಲು ಹೆದರಿಕೆ,  
ಸಂತೃಪ್ತಿ ಇರುವುದಿಲ್ಲ  ರಹಸ್ಯಗಳನ್ನು ಕಾಪಾಡಲಾರರು, ಋಣಾತ್ಮಕತೆ, ಮಂಕು  ಮುಚ್ಚಿದ  ಮನಸ್ಸು, ತಾಯಿಯು ಸಹ ಜೀವನದಲ್ಲಿ  ಹಲವಾರು ರೀತಿಯಲ್ಲಿ  ಕಷ್ಟಗಳನ್ನುಅನುಭವಿಸಿರುವರು,
ಅಶಕ್ತತೆ, ದೇಹದಲ್ಲಿ  ದ್ರವಗಳ ಕೊರತೆ, ತೂಕನಷ್ಟ, ಒಣಗಿದ ಚರ್ಮ,ಮಲಬದ್ದತೆ, ನರಗಳ ಊತ,ಮೂತ್ರಕೋಶದ ತೊಂದರೆ, ಶ್ವಾಸಕೋಶಗಳ ನಿರ್ಬಲತೆ ಇರುತ್ತೆ. ಮದ್ಯವ್ಯಸನಿಗಳಾಗುವರು, ಸೊಸೆಯೊಂದಿಗೆ  ವಿನಾಕಾರಣ ಕಲಹಗಳು,  ಮಕ್ಕಳ ವಿದ್ಯಾಬ್ಯಾಸದಲ್ಲಿ ತೊಂದರೆಗಳು, ಅನಿರೀಕ್ಷಿತ ಅನಾರೋಗ್ಯ, ಹಣಕಾಸು ತೊಂದರೆ,  ಒಳ್ಳೆಕೆಲಸ ಮಾಡಿದರು  ಕೆಟ್ಟ ಹೆಸರು ತಪ್ಪುವುದಿಲ್ಲ, ಆಗಿ ಹೋದದ್ದನ್ನು  ಚಿಂತಿಸಿ ಅತಿಯಾಗಿ ಮರುಗುವಿಕೆ, ಸ್ತ್ರೀಯರಲ್ಲಿ  ಬಂಜೆತನ  ಮತ್ತು ಋತುಚಕ್ರದ ತೊಂದರೆಗಳು.

ಪರಿಹಾರಗಳು:-

  ದುರ್ಗೆ ಅಥವ ಚಾಮುಂಡಿಯನ್ನು ಆರಾಧಿಸಿಬೇಕು.

 ಚಂದ್ರನು ಮೇಷ ಅಥವ ವೃಶ್ಚಿಕದಲ್ಲಿ ಇದ್ದರೆ, ಶಿವಲಿಂಗಕ್ಕೆ ಅಭಿಷೇಕ ಮಾಡಿಸಬೇಕು.

 ಹಾಲು ಮತ್ತು ನೀರನ್ನು ಕುಡಿಯಲು ಬೆಳ್ಳಿಯ ಲೋಟವನ್ನು ಉಪಯೋಗಿಸಬೇಕು

 ತಾಯಿಯ ಕೈಯಿಂದ  ಅಕ್ಕಿ ಮತ್ತು ಬೆಳ್ಳಿಯ ನಾಣ್ಯವನ್ನು ತಗೆದುಕೊಂಡು ಒಂದು ಬಿಳಿಯ ವಸ್ತ್ರದಲ್ಲಿ ಕಟ್ಟಿ ಮನೆಯಲ್ಲಿಡಬೇಕು.

  ಬಿಳಿಯ ಬಟ್ಟೆಯಲ್ಲಿ ಸ್ವಲ್ಪ ಅಕ್ಕಿಯನ್ನು ಕಟ್ಟಿ ಸೋಮವಾರಗಳಂದು ಹರಿಯುವ ನೀರಲ್ಲಿ ಹಾಕಬೇಕು.

  ೪೦ ದಿನಗಳಕಾಲ ಮಲಗುವಾಗ ತಲೆಯ ಬಳಿ ಒಂದುಪಾತ್ರೆಯಲ್ಲಿ ನೀರನ್ನು ಇಟ್ಟುಕೊಂಡು ಅಶ್ವತ್ತ ಮರದ ಬುಡಕ್ಕೆ ಹಾಕಬೇಕು.

 ರಾತ್ರಿಯ ಹೊತ್ತು ಹಾಲನ್ನು ಕುಡಿಯಬಾರದು.

  ತಾಯಿಯನ್ನು  ಜೊತೆಯಲ್ಲಿ ಇಟ್ಟುಕೊಂಡು ಸೇವೆ ಮಾಡಬೇಕು.,
.
 ೨೪ನೇ ವಯಸ್ಸಿಗೆ ಮುಂಚೆ ವಿವಾಹವಾಗಬಾರದು

  ಹಾಲು ತುಂಬಿದ ಪಾತ್ರೆ ಅಥವ ಬಾಟಲನ್ನು ನಿರ್ಜನ ಪ್ರದೇಶದಲ್ಲಿ ನೆಲದಲ್ಲಿ ಹುದುಗಿಸಬೇಕು.

 ಅನಾಥ ಮಕ್ಕಳೀಗೆ ಹಾಲನ್ನು ಕೊಡಬೇಕು
.
 ಬೆಳ್ಳಿಯ ಉಂಗುರದಲ್ಲಿ ಮುತ್ತನ್ನು ಹಾಕಿ ಉಂಗುರದ ಬೆರಳಿಗೆ ಹಾಕಿಕೊಳ್ಳಬೇಕು ಮತ್ತು ಸೋಮವಾರಗಳಂದು ಉಪವಾಸ ಮಾಡಬೇಕು.

    ಕುಜ:---

    ಬಲಹೀನ ಕುಜನಿಂದ ಉಂಟಾಗುವ ತೊಂದರೆಗಳು ಮತ್ತು ಪರಿಹಾರಗಳು:--

        ಜಾತಕದಲ್ಲಿ ಕುಜನು ಅಶುಭನಾದರೆ,
ಜಾತಕರು ಉತ್ಸಾಹ ರಹಿತರು,  ಯಾವುದೇ ಕೆಲಸವನ್ನು ಮಾಡಲು ಅನರ್ಹತೆ,  ನಿರ್ಬೀತಿಯಿಂದ ಇರಲಾರರು,   ಹಾಗು ತಮ್ಮ ಸ್ವಂತ ಬಲದ ಮೇಲೆ ನಿಲ್ಲರಾರರು,   ಇತರರ ಅಧಿಕಾರಕ್ಕೆ ದಬ್ಬಾಳಿಕೆಗೆ ಸುಲಭವಾಗಿ   ಒಳಗಾಗುವವರು,  ಕೋರ್ಟು ವ್ಯವಹಾರಗಳಲ್ಲಿ  ಸಿಲುಕುವವರು,  ಇದರಿಂದ ನಷ್ಟಗಳನ್ನು  ಅನುಭವಿಸಿವವರು.   ಅನಿರೀಕ್ಷಿತವಾಗಿ ಸ್ಥಿರಾಸ್ಥಿಯು  ಮಾರಾಟಕ್ಕೆ  ಬರುತ್ತದೆ,  ಅಥವ ಇತರರ  ಪಾಲಾಗುತ್ತದೆ,   ಅಗ್ನಿಅನಾಹುತ  ಕಳ್ಳತನ ಮುಂತಾದ   ಸಮಸ್ಯೆಗಳಿಂದ ತೊಂದರೆಗೊಳಗಾಗುತ್ತಾರೆ,  ರೋಗ   ನಿರೋದಕ ಶಕ್ತಿ ಇರುವುದಿಲ್ಲ.  ಹಸಿವಿಲ್ಲದಿರುವಿಕೆ  ,ದೇಹ ತೂಕವನ್ನು ಕಳೆದುಕೊಳ್ಳುತ್ತದೆ,  ಬಲಹೀನರಾಗ್ತಾರೆ.  ಜಠರ-ಕರುಳಿನ ತೊಂದರೆಗಳು,  ರಕ್ತಸೋರುವ ಗಾಯಗಳು,  ರಕ್ತಹೀನತೆ  ಪುರುಷರಲ್ಲಿ  ನಿರ್ವೀರ್ಯತೆ , ಕಿವಿ,  ಕೀಲು,  ಮಂಡಿ,  ಕಾಲುಗಳು   ನೋವಿರುತ್ತದೆ,  ಪತ್ನಿಗೆ ಅನಾರೋಗ್ಯವಿರುತ್ತದೆ,  ದಾಂಪತ್ಯ ಸುಖವಿರುವುದಿಲ್ಲ,  ಗರ್ಭಪಾತ  ಅಥವ  ಹುಟ್ಟಿದ ಮಕ್ಕಳೆಲ್ಲಾ   ಸಾಯುವುದು,  ಕುಟುಂಬದಲ್ಲಿ   ಹೆಚ್ಚಿನ   ಸಾವು  ದಾಂಪತ್ಯದ ಹೊರಗೂ ಸಂಬಂದಗಳು  ಮಗನ   ತಪ್ಪಿನಿಂದ ಬಾಧೆ,  ಸುಖವಿರುವುದಿಲ್ಲ    ಬಂದುಗಳು   ಅಥವ   ಸ್ನೇಹಿತರೊಂದಿಗಿನ  ಸಂಬಂದಗಳು ಹಿತವಾಗಿರುವುದಿಲ್ಲ   ಶತೃಗಳು   ಹೆಚ್ಚಾಗುವಿಕೆ. ಮುಂತಾದ ತೊಂದರೆಗಳು ಕಾಡುತ್ತವೆ.

ಲಾಲ್ ಕಿತಾಬ್ ಪರಿಹಾರಗಳು :--

. ಸುಬ್ರಮಣ್ಯ,ಹನುಮಂತರನ್ನು ಬೆಸ ರಾಶಿಯವರು/ಚಾಮುಂಡಿ  ಅಥವ   ಭದ್ರಕಾಳಿಯನ್ನು ಸಮರಾಶಿಯವರು  ಆರಾಧಿಸಬೇಕು.

ಮಂಗಳವಾರಗಳಂದು  ಉಪವಾಸವನ್ನು  ಮಾಡಿ ಸಿಹಿಯನ್ನು ಹಂಚಬೇಕು

 ಕರ್ಪೂರ,  ಮೊಸರು, ಸುಗಂಧ  ದ್ರವ್ಯಗಳನ್ನು ಕೆಂಪು  ವಸ್ತ್ರದಲ್ಲಿ  ಇರಿಸಿ  ನಿರ್ಜನ  ಪ್ರದೇಶದಲ್ಲಿ ನೆಲದಲ್ಲಿ  ಹುದುಗಿಸಬೇಕು

 ಹಾಲನ್ನು  ಆಲದ  ಮರದ  ಬುಡಕ್ಕೆ  ಹಾಕಿ  ಹಸಿಯ ಮಣ್ಣನ್ನು  ತಿಲಕದಂತೆ  ಹಣೆಗೆ ಹಚ್ಚಿಕೊಳ್ಳಬೇಕು.
 .
ಬೇವಿನ ಮರವನ್ನು ನೆಟ್ಟು ನೀರು ಹಾಕುತ್ತಿರಬೇಕು.

ಸೋದರ  ಮತ್ತು  ಸೋದರ ಮಾವನನ್ನು ಸತ್ಕರಿಸಬೇಕು.

ನಾಯಿಗಳಿಗೆ  ತಂದೂರಿ  ಸಿಹಿರೊಟ್ಟಿಯನ್ನು  ೪೫ ದಿನಗಳ  ಕಾಲ  ಕೊಡಬೇಕು.

. ಸದಾ  ಗಾಯತ್ರಿ  ಮಂತ್ರ  ಅಥವ  ಹನುಮಾನ್ ಚಾಲೀಸವನ್ನು ಪಠಿಸುತ್ತಿರಬೇಕು.

 ರಕ್ತ ದಾನ ಮಾಡಿದರೆ ತುಂಬಾ ಒಳ್ಳೆಯದು.

 ಮಂಗಳವಾರ  ಮದ್ಯಾಹ್ನಗಳಂದು  ಹರಿಯುವ ನೀರಲ್ಲಿ  ಬತ್ತಾಸು  ಹಾಕಬೇಕು.

 ಬಂಗಾರ, ಬೆಳ್ಳಿ, ತಾಮ್ರದ ಉಂಗುರವನ್ನು ಧರಿಸಬೇಕು.

ತುಕ್ಕು ಹಿಡಿದ ವಸ್ತುಗಳನ್ನು ಮನೆಯಲ್ಲಿ ಇಡಬಾರದು.

. ಕೆಂಪು ವಸ್ತ್ರಗಳನ್ನು , ಸೋದರತ್ತೆ, ಸೋದರಿ, ತಾಯಿಗೆ ಹಾಗು ಹೆಂಡತಿಗೆ ಕೊಡಿಸಬೇಕು.

. ಪಕ್ಷಿಗಳಿಗೆ ಸಿಹಿಯನ್ನು ತಿನ್ನಿಸಬೇಕು.

 ರೋಗಗಳಿಂದ ಮುಕ್ತರಾಗಲು ಜಿಂಕೆ ಚರ್ಮದ ಮೇಲೆ ಮಲಗಬೇಕು..

. ಪತ್ನಿ ಅಥವ ಮಕ್ಕಳಿಗೆ ತೊಂದರೆ ಇದ್ದರೆ ಮಣ್ಣಿನ ಪಾತ್ರೆಯಲ್ಲಿ ಜೇನು ತುಪ್ಪವನ್ನು ಇಟ್ಟು ರುದ್ರಭೂಮಿಯಲ್ಲಿ ಹುದುಗಿಸಿಡಬೇಕು.

 . ೮ನೇ ಸ್ಥಾನದಲ್ಲಿ ಕುಜನು ಅಶುಭನಾಗಿದ್ದರೆ ಆನೆಗೆ ಸಂಬಂದಿಸಿದ ದಂತದ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು.

೬ನೇ ಸ್ಥಾನದಲ್ಲಿ ಕುಜನು ಅಶುಭನಾಗಿದ್ದರೆ ೬ ಮಂದಿ ಕನ್ಯಾ ಮುತ್ತೈದೆಯರ ಅಶೀರ್ವಾದವನ್ನು ೬ ದಿನಗಳ ಕಾಲ ಪಡೆದರೆ ಒಳ್ಳೆಯದು.

ಬುಧ:---

     ಬಲಹೀನ  ಬುಧನಿಂದ ಉಂಟಾಗುವ ತೊಂದರೆಗಳು ಹಾಗೂ ಪರಿಹಾರಗಳು:--

      ಬುದ್ದಿಮಾಂದ್ಯತೆ,  ವಿಚಾರಗಳನ್ನು ತಿಳಿಸುವಲ್ಲಿ  ಅಸಮರ್ಥತೆ, ಮೂರ್ಖತನ,  ಅಪ್ರಬುದ್ದತೆ,  ವಾಕ್ ತೊಂದರೆ,  ನೆನಪಿನ ಶಕ್ತಿಯ ಕೊರತೆ,  ತಮ್ಮ ಮೇಲೆಯೇ ಹತೋಟಿಯಿಲ್ಲದಿರುವಿಕೆ,  ಹಗಲು ಗನಸು ಗಾರರು,   ತಾರ್ಕಿಕತೆಯ ಕೊರತೆ,  ಸಂಸಾರದಲ್ಲಿ   ಹುಡುಗಿಯರಿಗೆ  ಸಮಸ್ಯೆಗಳು,   ನರದೌರ್ಬಲ್ಯತೆ,  ಕ್ಷಯ,   ನಿದ್ರಾಹೀನತೆ,  ತಲೆಸುತ್ತುವಿಕೆ,  ಚರ್ಮದ ತುರಿಕೆ,  ಅಲರ್ಜಿ,  ಹೃದಯ   ಮತ್ತು   ಶ್ವಾಸಕೋಶಗಳ ದುರ್ಬಲತೆ,  ವ್ಯಾಪಾರ  ವ್ಯವಹಾರ  ,ಷೇರು ಪೇಟೆ  ವ್ಯವಹಾರಗಳಲ್ಲಿ   ನಷ್ಟ,  ಹಲ್ಲಿನ ತೊಂದರೆ  ವಿದ್ಯಾಬ್ಯಾಸದಲ್ಲಿ  ಅಡಚಣೆ,  ಏಕಾಂತತೆ,  ಮಾನಸಿಕ   ತೊಳಲಾಟ,  ಮದುವೆಯ ನಂತರವೂ ಹೆಣ್ಣಿನ   ತಾಯಿಯ   ಮನೆಯವರಿಗೆ ತೊಂದರೆಗಳು,  ನಾದಿನಿಯಿಂದ ಕೆಟ್ಟ ಹೆಸರು,  ಕಛೇರಿಯಲ್ಲಿ ಸ್ವಾರ್ಥತೆ,  ಜಾತಕರು ಸುಳ್ಳುಗಾರರು,  ಮೋಸಗಾರರು,  ಮದ್ಯವ್ಯಸನಿ,  ಬಂದುಗಳ  ಅಥವ ದಾಂಪತ್ಯದ   ಹೊರಗಿನ   ಸಂಬಂದದಿಂದ ಕೆಟ್ಟ ಹೆಸರು . 
ಮುಂತಾದ ತೊಂದರೆಗಳು ಕಾಡುತ್ತದೆ.

ಪರಿಹಾರಗಳು:-

ಗಣೇಶ ಮತ್ತು ವಿಷ್ಣುವಿನ ಆರಾಧನೆ ಮಾಡಬೇಕು. 

 ಹಲ್ಲುಗಳನ್ನು ಸ್ವಚ್ಚವಾಗಿ ಇಟ್ಟುಕೊಳ್ಳಬೇಕು.

. ಹೆಣ್ಣು ಮಕ್ಕಳು ಮೂಗನ್ನು ಚುಚ್ಚಿಕೊಂಡು ಬೆಳ್ಳಿಯ ಉಂಗುರವನ್ನು ಹಾಕಿಕೊಳ್ಳಬೇಕು

 ಗಂಡಸರು ಎಡಕೈಗೆ ಬೆಳ್ಳಿಯ ಕಡಗವನ್ನು ಧರಿಸಿಬೇಕು

 ಸರಸ್ವತಿ ಅಥವ ಗಾಯತ್ರಿಯನ್ನು ಆರಾಧಿಸಿ ಗಾಯತ್ರಿ ಜಪವನ್ನು ಸದಾ ಮಾಡುತ್ತಿರಬೇಕು

 ವಿದ್ಯಾರ್ಥಿಗಳಿಗೆ ಸಹಾಯ ಮಾಡಬೇಕು
ಹಸಿಹುಲ್ಲನ್ನು ಹಸುಗಳಿಗೆ ತಿನ್ನಿಸಬೇಕು

 ಮದ್ಯ,ಮಾಂಸ,ಮೊಟ್ಟೆಗಳನ್ನು ಸೇವಿಸಬಾರದು.

ಊಟಕ್ಕೆ ಮುಂಚೆ ಸ್ವಲ್ಪ ಆಹಾರವನ್ನು ಹಸು, ನಾಯಿ, ಕಾಗೆಗಳಿಗೆ ಹಾಕಬೇಕು

ರಾತ್ರಿ ಉಪ್ಪುನೀರಲ್ಲಿ ನೆನೆಸಿದ ಹೆಸರುಬೇಳೆಯನ್ನು ಮಾರನೆ ದಿನ ಬೆಳಗ್ಗೆ ಪಕ್ಷಿಗಳಿಗೆ ನೀಡಿರಬೇಕು.

 ಬುಧವಾರದಿಂದ ೮ ದಿನಗಳ ಕಾಲ ತೂತಿರುವ ತಾಮ್ರದ ಸಣ್ಣ ಬಿಲ್ಲೆಗಳನ್ನು ಹರಿಯುವ ನೀರಲ್ಲಿ ಹಾಕಬೇಕು.

ಮಣ್ಣಿನ ಪಾತ್ರೆಯಲ್ಲಿ ಜೇನು ತುಪ್ಪ ಕಲ್ಲುಸಕ್ಕರೆಯನ್ನು  ಹಾಕಿ ನಿರ್ಜನ ಪ್ರದೇಶದಲ್ಲಿ ನೆಲದಲ್ಲಿ ಹುದುಗಿಸಿಡಬೇಕು.

ಮಾದಕ ವಸ್ತುಗಳಿಂದ  ದೂರವಿರಬೇಕು
ಹೆಸರುಕಾಳು ದಾನ ಮಾಡಬೇಕು.

ತಾಯಿ,  ಸಹೋದರಿ, ಸೋದರತ್ತೆ,  ಸೋದರ  ಸಂಬಂಧವನ್ನು  ಗೌರವದಿಂದ  ಕಾಣಬೇಕು.

 ಕಟುವಾದ ಮಾತುಗಳನ್ನಾಡದೆ,  ನಾಲಿಗೆಯ ಮೇಲೆ  ನಿಯಂತ್ರಣವಿದ್ದರೆ  ಬುಧನ  ಅಶುಭತ್ವದಿಂದ  ರಕ್ಷಣೆ ದೊರೆಯುತ್ತದೆ.

ಗುರು:--

ಬಲಹೀನ ಗುರುವಿನಿಂದ ಉಂಟಾಗುವ ತೊಂದರೆಗಳು ಮತ್ತು ಪರಿಹಾರಗಳು:--

      ನಿರುತ್ಸಾಹ,  ಚಂಚಲತೆ, ನಾಸ್ತಿಕತೆ, ನಿರಾಸೆ, ದುಗುಡ, ದುಃಖ  ಆರ್ಥಿಕ ತೊಂದರೆಗಳು,  ಅನುಕಂಪ ರಹಿತ ವರ್ತನೆ,  ದಬ್ಬಾಳಿಕೆ,  ಸಂತಾನ ಇಲ್ಲದಿರುವಿಕೆ,  ಇದ್ದರೂ ಅವರಿಗೆ ಕಷ್ಟಗಳು,  ನಿರ್ವೀರ್ಯತೆ,  ದೇಹವು ಕೃಷಗೊಳ್ಳುವುದು,  ನರಗಳು ಮತ್ತು ಕೋಶಗಳು  ಸಮರ್ಪಕವಾಗಿ ಕೆಲಸಮಾಡದಿರುವಿಕೆ,  ಸದಾರೋಗಿ,  ಮನೆಯಲ್ಲಿಟ್ಟ ಬಂಗಾರವು   ಕಳವಾಗುವುದು   ಅಥವ ಆಭರಣಗಳನ್ನು   ಮಾರುವುದು,  ಅನಿರೀಕ್ಷಿತವಾಗಿ ವಿದ್ಯಾಬ್ಯಾಸವು  ನಿಂತುಹೋಗುವುದು,  ಧರ್ಮದಲ್ಲಿ ಅನಾಸಕ್ತಿ,  ಪತ್ನಿ ಅಥವ ಮಕ್ಕಳಿಗೆ ಅನಾರೋಗ್ಯ,  ಸಂಪತ್ತು   ಬರುವುದರಲ್ಲಿ   ಅಡಚಣೆ,  ಸಂತಾನದಿಂದ   ಸುಖವಿಲ್ಲದಿರುವಿಕೆ,  ಮದುವೆಯು ತಡವಾಗುವಿಕೆ,   ವಿಧವೆ  ಅಥವ ಕೀಳು   ಹೆಂಗಸಿನ   ಸಂಪರ್ಕ,  ಜಾತಕರ   ತಂದೆಗೆ ಉಸಿರಾಟದ   ತೊಂದರೆ   ಅಥವ   ಮಾನಸಿಕ ತೊಳಲಾಟ.  ಕಿವಿನೋವು,  ಮಧುಮೇಹ ತೊಂದರೆ,  ಕಾಮಾಲೆ   ಅಥವ   ಮೂತ್ರಪಿಂಡ ತೊಂದರೆ, ಮಗಳ   ಮದುವೆಗೆ   ಅಡಚಣೆಗಳು.  ವ್ಯಾಪಾರದಲ್ಲಿ ನಷ್ಟವಾಗುವಿಕೆ.  ಮುಂತಾದ ತೊಂದರೆಗಳು ಕಾಡುತ್ತವೆ.

ಪರಿಹಾರಗಳು:-

ಇಂದ್ರದೇವನನ್ನು ಆರಾಧಿಸಬೇಕು.

ಸಂತರನ್ನು,  ಹಿರಿಯರನ್ನು, ಹೆಂಗಸರನ್ನು, ಹೆಣ್ಣುಮಕ್ಕಳನ್ನು  ಆದರಿಸಬೇಕು.

ಬಂಗಾರದ  ಸರವನ್ನು  ಕೊರಳಲ್ಲಿ  ಹಾಕಿಕೊಳ್ಳಬೇಕು.

 ದೇವಾಲಯಗಳಿಗೆ  ನಿತ್ಯವೂ  ಹೋಗಬೇಕು.

ಸಿ0ಧೂರವನ್ನು  ಹಣೆಗೆ  ತಿಲಕವಾಗಿ  ಇಟ್ಟುಕೊಳ್ಲಬೇಕು.

ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು.
ಗುರುವಾರಗಳಂದು  ಉಪವಾಸ ವ್ರತವನ್ನು ಮಾಡಬೇಕು.

ಮಕ್ಕಳಿಂದ ತೊಂದರೆ ಇದ್ದಲ್ಲಿ ವಿಷ್ಣುವನ್ನು ಪೂಜಿಸಬೇಕು.

ತಂದೆಗೆ ಅನಾರೋಗ್ಯ ಇದ್ದರೆ ಹರಿಯುವ ನೀರಲ್ಲಿ ೪೫ ದಿನಗಳ ಕಾಲ ತಾಮ್ರದ ನಾಣ್ಯವನ್ನು ಹಾಕಬೇಕು.

ದಾಂಪತ್ಯದಿಂದ ಹೊರಗೆ ಸಂಬಂದಗಳನ್ನು ಇಟ್ಟುಕೊಳ್ಳಬಾರದು.

ಅಶ್ವತ್ತ ವೃಕ್ಷಕ್ಕೆ ೮ ಗುರುವಾರಗಳು ಅರಿಸಿನದ ದಾರವನ್ನು ೮ ಸುತ್ತು ಕಟ್ಟಿ ಪೂಜಿಸಬೇಕು.

ಗುರುವು ೭ರಲ್ಲಿ ಅಶುಭನಾಗಿದ್ದರೆ ಹಳದಿ ವಸ್ತ್ರವನ್ನು ಅರ್ಚಕರಿಗೆ ದಾನಮಾಡಬೇಕು.

ಗುರುವು  ಅಸ್ತನಾಗಿದ್ದರೆ   ಬೆಲ್ಲ ಅಥವ  ಗೋಧಿಯನ್ನು  ಭಾನುವಾರ  ಹರಿಯುವ ನೀರಲ್ಲಿ  ಹಾಕಬೇಕು

 ಬುಧನೊಡನೆ  ಗುರುವಿದ್ದರೆ  ಬುಧನಿಗೆ ಸಂಬಂದಿಸಿದ  ವಸ್ತುಗಳನ್ನು  ದಾನಮಾಡಬೇಕು.

 ಗುರುಗಳ ಸೇವೆಯನ್ನು ಮಾಡಬೇಕು.
ಓದುವ ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ಪಾಠ ಪ್ರವಚನಗಳನ್ನು ಮಾಡಬೇಕು.

ಗುರುಕುಲ, ಮಠಗಳಲ್ಲಿ ಪುಸ್ತಕ, ಪೆನ್ನು ವಿದ್ಯಾರ್ಥಿಗಳಿಗೆ   ಬೇಕಾದ   ಅಗತ್ಯ  ವಸ್ತುಗಳನ್ನು ನೀಡಬೇಕು.

ಶುಕ್ರ:--

ಶುಕ್ರ ಗ್ರಹವು  ಜಾತಕದಲ್ಲಿ  ಬಲಹೀನವಾದಾಗ  ಉಂಟಾಗುವ  ತೊಂದರೆಗಳು  :--

         ಕುರೂಪಿ, ಕಳಾಹೀನತೆ, ಪ್ರೀತಿ ವಾತ್ಸಲ್ಯಗಳಿರುವುದಿಲ್ಲ, ಒರಟುತನ,  ನೀಚತ್ವ,  ದಾಂಪತ್ಯ ಸಮಸ್ಯೆಗಳು, ಪುರುಷರಿಗೆ ಅನ್ಯ ಸ್ತ್ರೀಯೊಡನೆ ಸಂಬಂದಗಳು, ಸ್ತ್ರೀಯರಲ್ಲಿ  ಕೋಮಲತೆಯ  ಗುಣಗಳು ಇಲ್ಲದಿರುವುದು,  ಮೂತ್ರಪಿಂಡ ತೊಂದರೆಗಳು,  ಅತಿಯಾದ ಲೈಂಗಿಕತೆ,  ಮಿತಿಮೀರಿದ  ತಿನ್ನುವಿಕೆ, ಕುಡಿತ, ವಯಸ್ಸಾದ ನಂತರವೂ  ಇತರ  ಹೆಂಗಸ ರೊಡನೆ ಸಂಬಂದಗಳು, ಪತ್ನಿ  ಅಥವ  ಪರಸ್ತ್ರೀಯರಿಂದ  ಸಂಪತ್ತಿನ ಹಾನಿ, ಜಾತಕರಿಗೆ  ಹೆಚ್ಚಾಗಿ  ಹೆಣ್ಣು ಸಂತಾನ, ಮಾದಕ  ದ್ರವ್ಯ  ವ್ಯಸನಿ, ತಕ್ಕ ಮಟ್ಟಿಗೆ ಸಂಪಾದನೆ  ಇದ್ದರೂ  ಸದಾ  ಸಾಲಗಾರರು, ಲೈಂಗಿಕ  ವ್ಯಾಧಿಗಳು, ತಮ್ಮ ಸ್ಥಾನ ಮಾನಗಳು, ಮತ್ತು  ಅಧಿಕಾರಿಗಳಿಂದ  ಎಂದೂ ತೃಪ್ತರಲ್ಲ, ಶುಭಸಮಾರಂಭಗಳಲ್ಲಿ  ಅನಿರೀಕ್ಷಿತ ಅಪಘಾತಗಳು ಮುಂತಾದ ತೊಂದರೆಗಳು ಕಾಡುತ್ತವೆ.

ಪರಿಹಾರಗಳು:-

 ಶಚಿದೇವಿ ಅಥವ ಲಕ್ಷ್ಮಿಯನ್ನು ಪೂಜಿಸಬೇಕು.

 ಸದಾ ಶುಭ್ರರಾಗಬೇಕು.
ಪತ್ನಿಯನ್ನು ಸಂತೋಷದಿಂದ ಇರಿಸಿಕೊಳ್ಳಬೇಕು.

೨೫ ನೇ ವಯಸ್ಸಿನ ನಂತರ ವಿವಾಹ ಮಾಡಿಕೊಳ್ಳಬೇಕು.

ಹಸುವಿನ ತುಪ್ಪ ಮೊಸರು, ಕರ್ಪೂರ, ಮುತ್ತು, ಬಿಳಿಯ  ಬಟ್ಟೆ  ಅಥವ  ಸೌಂದರ್ಯ ಸಾಧನಗಳನ್ನು ದಾನಮಾಡಬೇಕು.

 ಕರಿ ಹಸುವಿಗೆ ಜೋಳ, ಹಸಿಹುಲ್ಲು, ಆಲೂಗಡ್ಡೆ ಅಥವ ಅರಿಸಿನ ಮಿಶ್ರಿತ ಹಿಟ್ಟನ್ನು ತಿನ್ನಿಸಬೇಕು.

ಚಿಕ್ಕ ಬೆಳ್ಳಿಯ ಗುಂಡನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕು.

ಮಗುವನ್ನು ದತ್ತು ತೆಗೆದುಕೊಳ್ಳಬಾರದು.

 ಪತ್ನಿಗೆ ಅನಾರೋಗ್ಯವಾಗಿದ್ದರೆ ಆಕೆಯ ತೂಕದಷ್ಟು ಬೆಲ್ಲವನ್ನು ದೇವಾಲಯಕ್ಕೆ ದಾನ ಮಾಡಬೇಕು.

 ೬ ದಿನಗಳ ಕಾಲ ಕನ್ಯಾಮುತೈದೆಯರಿಗೆ ಹಾಲು ಮತ್ತು ಜೇನನ್ನು ಕೊಡಬೇಕು.

ಯಾವುದೇ ಕೆಲಸದ ಪ್ರಾರಂಭದಲ್ಲಿಯೂ ಸ್ವಲ್ಪ ಸಿಹಿ ಮತ್ತು ನೀರನ್ನು ಸೇವಿಸಬೇಕು.

ಬೆಳ್ಳಿಯ ಚೂರನ್ನು ಜೇನಿನೊಂದಿಗೆ ನೆಲದಲ್ಲಿ ಹುದುಗಿಸಿಡಬೇಕು.

 ಪರಸ್ತ್ರೀಯರಲ್ಲಿ  ವ್ಯಾಮೋಹ ಬೇಡ.
ಮದ್ಯ,  ಮಾಂಸ ಸೇವನೆಯಿಂದ  ದೂರವಿದ್ದರೆ ಒಳ್ಳೆಯದು.

 ತಾಯಿ  ತಂದೆಗೆ  ವಿಧೇಯರಾಗಿ, ಚನ್ನಾಗಿ  ನೋಡಿಕೊಂಡು  ಪ್ರತಿದಿನ  ಅವರ  ಆಶೀರ್ವಾದ ಪಡೆಯಬೇಕು.

ಶನಿಗ್ರಹ:--

ಶನಿ ಗ್ರಹವು  ಜಾತಕದಲ್ಲಿ  ಬಲಹೀನವಾದಾಗ  ಉಂಟಾಗುವ  ತೊಂದರೆಗಳು  :--

       ಕಳವಳ,  ಒತ್ತಡಗಳನ್ನು ನಿಬಾಯಿಸುವಲ್ಲಿ   ಅಸಮರ್ಥತೆ,  ಸರ್ಕಾರ  ಅಥವ ಇತರೆ  ಸಂಸ್ಥೆಗಳಿಂದ  ಆರ್ಥಿಕ  ತೊಂದರೆಗಳಿಗೆ ಸಿಲುಕುವುದು, ಆಲಸ್ಯ ನಿದಾನ,  ನಿರಾಸೆ,  ನಿರುತ್ಸಾಹ,  ನರ  ಮತ್ತು  ಮೂಳೆಗಳ ದುರ್ಬಲತೆಸಾಂಕ್ರಾಮಿಕ  ರೋಗಗಳಿಗೆ ತುತ್ತಾಗುವಿಕೆ,  ಜ್ವರ, ಕುಷ್ಟ,  ಕಾಮಾಲೆ,  ಕಿವುಡುತನ,  ದಡಾರ,  ಮೂರ್ಛೆ,  ಕ್ಯಾನ್ಸರ್(ಅರ್ಬುದ)  ಪೆರಾಲಿಸೀಸ್.  ಇತ್ಯಾದಿಗಳಿಂದ ಬಾದಿತರು,  ವಿದ್ಯಾಭಂಗ,  ಕುಟುಂಬದಿಂದ  ದೂರ ಹೋಗುವಿಕೆ,
ನರಗಳ ದೌರ್ಬಲ್ಯತೆ  ,ಕೀಲುಗಳ ನೋವು,  ಹೊಟ್ಟೆಯ  ತೊಂದರೆಗಳು,  ದೀರ್ಘಕಾಲಿಕ ಕಾಯಿಲೆಗಳಾದ   ಪೆರಾಲಿಸಿಸ್,  ಮೂತ್ರಕೋಶದ ವೈಪಲ್ಯತೆ,  ಇತ್ಯಾದಿಗಳಿಂದ   ಬಾಧಿತರು,  ಅಗ್ನಿ ಮತ್ತು   ಇತರ   ಅಪಘಾತಗಳಿಂದ   ಮನೆಗೆ ಅಪಾಯ,  ರಾತ್ರಿ  ಕುರುಡು,  ಕಾಲುಗಳಲ್ಲಿ ನೋವು,  ಕೂದಲು  ಉದರುವಿಕೆ,  ಸರ್ಕಾರದಿಂದ,  ಅಧಿಕಾರಿಗಳಿಂದ   ಅಥವ   ನ್ಯಾಯಾಲಯಗಳಿಂದ ಅನಿರೀಕ್ಷಿತ  ತೊಂದರೆಗಳು,  ಮದ್ಯ ವ್ಯಸನಿ   ಮತ್ತು ಪತ್ನಿಗೆ ತೀರಾ ಅನಾರೋಗ್ಯ, ಪಶುಗಳ ನಷ್ಟ,  ವ್ಯಾಪಾರ  ವ್ಯವಹಾರಗಳಲ್ಲಿ ಅನಿರೀಕ್ಷಿತ ತೊಡಕುಗಳು   ಪ್ರತೀಕಾರದ ಮನೋಭಾವ,  ಶನಿಯು  ೫  ಮತ್ತು  ೮ನೇ ಸ್ಥಾನಗಳಲ್ಲಿ   ಕಲುಶಿತನಾಗಿದ್ದರೆ ೆಮಕ್ಕಳು ಹೇಳಿದ ಮಾತು  ಕೇಳದೆ  ತಮ್ಮ  ದಾರಿಯಲ್ಲಿ ಸಾಗುತ್ತಾರೆ,  ಶನಿಯು  ೨  ಅಥವ  ೭ರಲ್ಲಿ  ಕಲುಶಿತನಾಗಿದ್ದರೆ ಪತ್ನಿ/ಪತಿಯರಲ್ಲಿ  ಸಾಮರಸ್ಯದ  ಕೊರತೆ ಉಂಟಾಗುತ್ತದೆ.  

ಪರಿಹಾರ:-

ಹನುಮಂತನನ್ನು ಆರಾಧಿಸಬೇಕು. ಹನುಮಾನ್ ಚಾಲೀಸಾ ಪಠಿಸಬೇಕು.

ಆಹಾರ ಸೇವನೆ ಮುಂಚೆ ಸ್ವಲ್ಪ ಆಹಾರವನ್ನು ನಾಯಿ ಅಥವ ಕಾಗೆಗಳಿಗೆ ಹಾಕಬೇಕು.

ಉದ್ದು, ಎಳ್ಳಿನ ಎಣ್ಣೆ, ,ಬಾದಾಮಿ ಇವುಗಳನ್ನು ನಿರ್ಗತಿಕರಿಗೆ ನೀಡಬೇಕು

ಎಮ್ಮೆಗೆ ಮೇವನ್ನು ನೀಡಬೇಕು
 ಕಪ್ಪು ಇರುವೆಗಳಿಗೆ ಧಾನ್ಯ ನೀಡಬೇಕು

ಮಧ್ಯದ ಬೆರಳಿಗೆ ಕಬ್ಬಿಣದ ಅಥವಾ ಕುದುರೆ ಲಾಳದ ಉಂಗುರವನ್ನು ಧರಿಸಬೇಕು.

ಹರಿಯುವ ನೀರಲ್ಲಿ ೬ ಬಾದಾಮಿ ೬ ಸಿಪ್ಪೆ ಸಹಿತ ತೆಂಗಿನಕಾಯಿ ೬ ಶನಿವಾರದ ದಿನಗಳ ಕಾಲ ಹಾಕಬೇಕು.

ಮಾಂಸಾಹಾರ, ಮದ್ಯಪಾನದಿಂದ ದೂರವಿದ್ದು ಶನಿವಾರಗಳಂದು ಉಪವಾಸವನ್ನು ಮಾಡಬೇಕು.

ಆಲದಮರದ ಬುಡಕ್ಕೆ ಹಾಲನ್ನು ಹಾಕಿ ಆ ಹಸಿಯ ಮಣ್ಣನ್ನು ತಿಲಕದಂತೆ ಹಣೆಗೆ ಹಚ್ಚಿಕೊಳ್ಳಬೇಕು

 ಬರಿಗಾಲಲ್ಲಿ ದೇವಾಲಯಕ್ಕೆ ಹೋಗಿ ಸರ್ಪಗಳಿಗೆ ಹಾಲನ್ನು ನೀಡಬೇಕು, ಕಪ್ಪುನಾಯಿಯನ್ನು ಸಾಕಬೇಕು.

ರಾಹುಗ್ರಹ:--

ರಾಹು ಗ್ರಹವು ಜಾತಕದಲ್ಲಿ  ಬಲಹೀನ ನಾದಾಗ  ಈ ಕೆಳಕಂಡ ತೊಂದರೆಗಳು  ಕಾಣಿಸಿಕೊಳ್ಳುತ್ತವೆ.    
    
           ಅತಿಯಾದ ಸೂಕ್ಷ್ಮತೆ,  ತೊಳಲಾಟ,  ಆತಂಕ,  ಭಯ, ಭ್ರಮೆಗಳು,  ಮಾದಕವಸ್ತುಗಳ ಸೇವನೆ,  ಮೂರ್ಖತನ,  ನೀರಲ್ಲಿ  ಮುಳುಗುವ  ಅಥವ ಎತ್ತರದಿಂದ  ಬೀಳುವ  ಸಂಭವ,  ವಿವೇಚನಾರಹಿತ ನಿರ್ದಾರಗಳು,  ಎಲ್ಲರೊಡನೆಯೂ  ವಿರಸ,  ಸ್ನೇಹಿತರು ದೂರಾಗುವುದು. ವಿದವೆಯರೊಡನೆ, ಕೀಳು  ಮಟ್ಟದ  ಸ್ತ್ರೀಯರೊಡನೆ  ಅನೈತಿಕ ಸಂಬಂದಗಳು, ವಿದೇಶಿಯರು  ಮತ್ತು  ಕೀಳು ಜನರ ಸಂಪರ್ಕಗಳು, ಇದರಿಂದ  ತೊಂದರೆಗಳು ಇರುತ್ತವೆ, ಕೀಳು ಕೆಲಸಗಳಲ್ಲಿ ನಿರತರಾಗಿರುತ್ತಾರೆ,  ಸಾಂಕ್ರಾಮಿಕ  ರೋಗಗಳಿಗೆ  ತುತ್ತಾಗುವರು,ರೋಗ ನಿರೋಧಕ  ಶಕ್ತಿ  ಇಲ್ಲದಿರುವುದು. ಮಾನಸಿಕ ಅಸಮತೋಲನೆ, ವಿಷ, ಸರ್ಪಗಳ ಭೀತಿ, ಸದಾಕಾಲ ಕಲಹಗಳು, ಅಪಘಾತ, ವಾದ-ವಿವಾದಗಳಲ್ಲಿ ನಿರತರು, ಕಾಮಾಲೆ, ಕಾಲರ, ಪ್ಲೇಗ್ ಇತ್ಯಾದಿ ರೋಗಗಳು ಬಾಧಿಸುತ್ತವೆ.  ಉಗುರುಗಳು ದುರ್ಬಲವಾಗುತ್ತವೆ, ಗುರುತಿಸಲಾಗದ  ವ್ಯಾಧಿಗಳು, ಕಳ್ಳತನದಿಂದ ಸಂಪತ್ತಿನ  ನಷ್ಟ, ೮ ರಲ್ಲಿ  ಅಶುಭ  ರಾಹುವಿನಿಂದ ಗಮನೀಯ  ಏಳು  ಬೀಳುಗಳು ಉಂಟಾಗುತ್ತವೆ.

ಪರಿಹಾರೋಪಾಯಗಳು:-
  ದುರ್ಗೆ ಮತ್ತು ನಾಗಪೂಜೆಯನ್ನು ನೀಲಿ ಪುಷ್ಪಗಳಿಂದ ಮಾಡುವುದು.

. ಒಟ್ಟು ಕುಟುಂಬದೊಂದಿಗೆ ಜೀವಿಸುವುದು.

ಆನೆಯು ತುಳಿದ ಮಣ್ಣನ್ನು ಒಂದು ಬಾವಿಯಲ್ಲಿ ಹಾಕುವುದು.

ಬೆಳ್ಳಿಯಲ್ಲಿ ಮಾಡಿದ ಒಂದು ಆನೆಯನ್ನು ಅಥವ ಒಂದು ಸಣ್ಣ ಕೆಂಪು ಬಣ್ಣದ ಲೋಹದ ಗುಂಡನ್ನು ಮನೆಯಲ್ಲಿ ಇಡುವುದು.

ಅಡುಗೆ ಮನೆಯಲ್ಲಿ ಕುಳಿತು ಊಟಮಾಡಬೇಕು

 ಸಂಪಾದನೆಯ ಸ್ವಲ್ಪಬಾಗವನ್ನು ನಾದಿನಿ,ಮಗಳು,ಅಥವ ಸೋದರಿಗಾಗಿ ಖರ್ಚುಮಾಡಬೇಕು.

ಹರಿಯುವ ನೀರಲ್ಲಿ ಹಾಲಿನಲ್ಲಿ ತೊಳೆದ ಬಾರ್ಲಿ ಅಥವ ವ್ಯಕ್ತಿಯ ತೂಕದಷ್ಟು ಇದ್ದಿಲು ಅಥವ ೮ ನೀಲಿ ಹೂವುಗಳನ್ನು ಹಾಕುವುದು.

 ಸಾಸಿವೆ, ಹೊಗೆಸೊಪ್ಪು, ಕಪ್ಪುಬಂಬಳಿ, ಸೀಸ ಅಥವ ಕಸ್ತೂರಿಯನ್ನು ಅಂತ್ಯಜರಿಗೆ ದಾನ ಮಾಡಬೇಕು. ಈ  ವಸ್ತುಗಳನ್ನು ಮುಸ್ಲಿಂಬಾಂದವರಿಗೂ   ಮಸೀದಿಯಲ್ಲಿ ಕೊಡಬಹುದು.

ಬಿಳಿ ಹಸುವನ್ನು ಸಾಕಿರಿ. ಯಾವುದೇ ಕಾರಣಕ್ಕೂ ಮಾದಕ ವಸ್ತುಗಳ ಸೇವನೆ ಮಾಡಬಾರದು.

 ಅನೈತಿಕ ಸಂಬಂಧಗಳಿಂದ  ದೂರವಿರ ಬೇಕು.
ಯಾಚಕರನ್ನು  ಬರಿಗೈಲಿ ಎಂದೂ  ಕಳಿಸಬಾರದು.

 ವಿಶ್ವಾಸ ಘಾತ ಮಾಡುವ ಪ್ರವೃತ್ತಿ ಯಿಂದ ದೂರವಿರಬೇಕು.

ಕೇತುಗ್ರಹ:--- 

ಬಲಹೀನ ಕೇತುವಿನಿಂದ ಉಂಟಾಗುವ ತೊಂದರೆಗಳು ಹಾಗೂ ಪರಿಹಾರಗಳು:--

   ವಿವೇಚನಾ ರಹಿತರು,  ತಮ್ಮಲ್ಲೇ ನಂಬಿಕೆಯನ್ನು ಕಳೇದುಕೊಂಡವರು,  ಆತ್ಮಘಾತುಕ ಮನೋಬಾವ, ಆತ್ಮಹತ್ಯೆ ಗೆ ಮನಸ್ಸು ಪ್ರೇರೇಪಿಸುತ್ತೆ. ಕ್ರೌರ್ಯದಿಂದ ಗಾಯಗೊಳ್ಳುವವರು,  ಗುಂಪು ಘರ್ಷಣೆಯಲ್ಲಿ ತೊಂದರೆಗೆ ಸಿಲುಕುತ್ತಾರೆ.  ಅಲ್ಸರ್,  ಅಜೀರ್ಣ, ಎಲ್ಲಾ ರೀತಿಯ   ಹುಳುಗಳಿಂದ   ಹೊಟ್ಟೆಯಲ್ಲಿ   ತೊಂದರೆ,  ದೀರ್ಘಕಾಲಿಕ   ಕಾಯಿಲೆಗಳಿಂದ   ನರಳುವವರು,   ಮೊಣಕಾಲುಗಳಿಗೆ ಆಗಾಗ  ಅಪಾಯ ಉಂಟಾಗುತ್ತಿರುತ್ತದೆ,  ಮೂತ್ರದ ಅಥವ  ಮಾನಸಿಕ  ತೊಂದರೆಗಳಿಂದ  ಅಥವ ತಿಳಿಯಲಾರದ  ಕಾಯಿಲೆಗಳಿಂದ ನರಳುವರು.  ಆಗಾಗ  ಆತ್ಮಹತ್ಯ ಮನೋಬಾವನೆ ಸುಳಿಯುತ್ತಿರುತ್ತದೆ,   ಜಲೋದರ,  ಸಾಂಕ್ರಾಮಿಕ ಕಾಯಿಲೆ,  ತೀವ್ರತರವಾದ  ಜ್ವರ,  ಗಾಯಗಳಿಂದ  ಪಾದಗಳಲ್ಲಿ ಉರಿ,  ಸಂದಿವಾತ, ಕುಷ್ಟ ಅಥವ ಚರ್ಮವ್ಯಾಧಿಗಳು,  ಬೆನ್ನು ನೋವು,  ಕಿವಿನೋವು,  ಹರ್ನಿಯಾ  ಗಡ್ಡೆ   ಅಥವ  ನಾಭಿಯ  ಕೆಳಗೆಡೆಯ ಕಾಯಿಲೆಗಳಿಂದ  ನರಳುವವರು,  ಕೇತುವು ೨,೮,ನೇ ಸ್ಥಾನಗಳಲ್ಲಿ  ಬಲಹೀನನಾಗುತ್ತಾನೆ.  ಕೇತುವು  ಅಶುಭನಾಗಿದ್ದರೆ 5, 6, 10  ಭಾವಗಳಿಂದ ಕೂಡ  ಅಶುಭ ಫಲ ಪ್ರಾಪ್ತಿಯಾಗುತ್ತೆ. ವೈರಾಗ್ಯ ಉಂಟಾಗುತ್ತದೆ.

ಪರಿಹಾರೋಪಾಯಗಳು

ಗಣಪತಿಯನ್ನು ಆರಾಧಿಸಬೇಕು
 ಕರಿ ನಾಯಿ ಸಾಕಬೇಕು

ಬಿಳಿ ಅಥವ ಕಪ್ಪು ಕಂಬಳಿಯನ್ನು ದೇವಾಲಯಕ್ಕೆ ಅಥವ ಸಾಧುವಿಗೆ ಕೊಡಬೇಕು.

 ಮಕ್ಕಳ ಒಳಿತಿಗಾಗಿ ಹಾಲು, ಅಕ್ಕಿ, ಕೆಂಪು ಬೇಳೆ, ಕಲ್ಲು ಸಕ್ಕರೆ, ಜೇನು ತುಪ್ಪ, ದಾನ ಮಾಡಬೇಕು

 ಕಿವಿಯನ್ನು ಚುಚ್ಚಿಸಿಕೊಂಡು ಬಂಗಾರದ ಓಲೆ ಹಾಕಿಕೊಳ್ಳಬೇಕು.

ಕಾಲಿನ ಹೆಬ್ಬೆರಳಿಗೆ ಬೆಳ್ಳಿಯ ಉಂಗುರವನ್ನು ಹಾಕಿಕೊಳ್ಳಬೇಕು.
 ಬಂಗಾರದ ಸರವನ್ನು ಕೊರಳಿಗೆ ಧರಿಸಬೇಕು. 

 ಕೇಸರಿಯನ್ನು ಹಣೆಗೆ ಹಚ್ಚಿಕೊಳ್ಳಬೇಕು
 ಮನೆಯ ಗೇಟಿನ ಕಂಬಕ್ಕೆ ತಾಮ್ರದ ತಗಡನ್ನು ಹಾಕಬೇಕು.

ಬೆಳ್ಳಿಯ ಕೊಡದಲ್ಲಿ ಜೇನು ತುಪ್ಪವನ್ನು ತುಂಬಿ ಮನೆಯ ಹೊರಗಡೆ ಹುದುಗಿಸಿಡಬೇಕು

೮ನೇ ಸ್ಥಾನದಲ್ಲಿ ಕೇತುವು ಕಲುಶಿತನಾಗಿದ್ದರೆ ಶಿವನಿಗೆ ಕ್ಷೀರಾಭಿಷೇಕ .ಅಥವ ನಿಂಬೇ ಹಣ್ಣನ್ನು ದಾರ್ಮಿಕ ಸ್ಥಳಗಳಲ್ಲಿ ದಾನ ಮಾಡಬೇಕು

 ನಾಯಿಗೆ ೧೫ ದಿನಗಳ ಕಾಲ ಹಾಲನ್ನು ಹಾಕಬೇಕು.

ಈ ಉಪಾಯಗಳನ್ನು ಮಾಡೋದ್ರಿಂದ ಕೇತುವಿನ ದುಷ್ಪಲಗಳನ್ನು ನಿವಾರಿಸಬಹುದು.

ದಾಂಪತ್ಯ ಸಮಸ್ಯೆಗೂ ಲಾಲ್ ಕಿತಾಬ್ ನಲ್ಲಿ ಸರಳ ಪರಿಹಾರಗಳಿವೆ. 

ಪತಿ - ಪತ್ನಿಯ ನಡುವೆ ಪದೇ ಪದೇ ವಾಗ್ವಾದವು ಸಂಭವಿಸಿದಲ್ಲಿ,  ಗಂಡ ಹೆಂಡತಿ ಇಬ್ಬರೂ  ಪ್ರತಿ ಬುಧವಾರ ಎರಡು ಗಂಟೆಗಳ ಕಾಲ ಮೌನವಾಗಿರಬೇಕು. ಮೌನ ವ್ರತವನ್ನು ಧರಿಸುವುದರಿಂದ  ಕುಟುಂಬದಲ್ಲಿ ಪ್ರೀತಿಯ ವಾತಾವರಣ ಸೃಷ್ಟಿಯಾಗುತ್ತದೆ. ಇದರಿಂದ ಇಬ್ಬರ ವಾಗ್ವಾದವು ಕಡಿಮೆಯಾಗುತ್ತದೆ.

ಪತಿಯು  ಪ್ರತಿ ಶುಕ್ರವಾರದ ದಿನದಂದು ತನ್ನ ಪತ್ನಿಗೆ  ಪರಿಮಳಯುಕ್ತ ಹೂವುಗಳನ್ನು ಮತ್ತು ಸುಗಂಧ ದ್ರವ್ಯಗಳನ್ನು ತಂದು ಕೊಡಬೇಕು. ಮತ್ತು ಬೆಳ್ಳಿ ಬಟ್ಟಲಿನಲ್ಲಿ ಬೆಳ್ಳಿ ಚಮಚದೊಂದಿಗೆ ಮೊಸರು ಮತ್ತು ಸಕ್ಕರೆಯನ್ನು ಬೆರೆಸಿ ಹೆಂಡತಿಗೆ ಕೊಡಬೇಕು. ಲಾಲ್‌ ಕಿತಾಬ್‌ನ ಈ ಉಪಾಯವು ಪತಿ - ಪತ್ನಿಯರ ನಡುವೆ ಸಾಮರಸ್ಯವನ್ನು ಹೆಚ್ಚಿಸುತ್ತದೆ. ಅದರ ಪರಿಣಾಮದಿಂದಾಗಿ, ವಿವಾಹ ವಿಚ್ಛೇದನವನ್ನು ಬಯಸುವವರ ಮನಸ್ಸು ಕೂಡ ಬದಲಾಗುವ ಸಾಧ್ಯತೆಗಳಿವೆ. ಮತ್ತು ದಾಂಪತ್ಯ ಜೀವನವು ಸಂತೋಷವಾಗುತ್ತದೆ

 ಗಂಡನು ತನ್ನ ಹೆಂಡತಿಯ ಹಣೆಗೆ ಸಿಂಧೂರವನ್ನು  ಮತ್ತು ಹೆಂಡತಿ ಗಂಡನ ಹಣೆಯ ಮೇಲೆ ಶ್ರೀಗಂಧದ ತಿಲಕವನ್ನು ಹಚ್ಚವುದರಿಂದ, ವೈವಾಹಿಕ ಜೀವನದಲ್ಲಿ ಪತಿ - ಪತ್ನಿಯರ ನಡುವೆ ಸಂತೋಷ ಹೆಚ್ಚಿಸುತ್ತದೆ ಮತ್ತು ವೈವಾಹಿಕ ಜೀವನಕ್ಕೆ ಸಂಬಂಧಿಸಿದ ಎಲ್ಲಾ ತೊಂದರೆಗಳನ್ನು ನಿವಾರಿಸುತ್ತದೆ.

ಪ್ರತಿದಿನ ಗಂಡ ಹೆಂಡತಿ ಲಕ್ಷ್ಮಿ-ನಾರಾಯಣನ ಅಥವಾ ಶಿವ-ಪಾರ್ವತಿ ದೇವಸ್ಥಾನಕ್ಕೆ ಹೋಗಿ ದಾಂಪತ್ಯ ಜೀವನದಲ್ಲಿ ಸಂತೋಷವನ್ನು ಕರುಣಿಸು ಎಂದು ಬೇಡಿಕೊಳ್ಳಬೇಕು. ಇದರಿಂದ ಆ ಪತಿ -ಪತ್ನಿಯ ಜೀವನದಲ್ಲಿ ಸಾಮರಸ್ಯ ಇರುತ್ತದೆ. ಅಷ್ಟು ಮಾತ್ರವಲ್ಲ, ಇದು ಕುಟುಂಬದಲ್ಲಿ ಕೂಡ ಸುಖ, ಶಾಂತಿ ನೆಮ್ಮದಿಯನ್ನು ತರುತ್ತದೆ.

      ಲಾಲ್‌ ಕಿತಾಬ್‌ನಲ್ಲಿ ಹೇಳಲಾದ ಈ ಕ್ರಮಗಳನ್ನು ಅನುಸರಿಸುವುದರಿಂದ ಕುಟುಂಬದಲ್ಲಿ ಸಂತೋಷವು ನೆಲೆಯಾಗುತ್ತದೆ. ಕುಟುಂಬದಲ್ಲಿನ ಎಲ್ಲಾ ಸಮಸ್ಯೆಗಳು ದೂರಾಗುವುದು,  ಕುಟುಂಬದಲ್ಲಿ ಸಾಮರಸ್ಯ ಹೆಚ್ಚಾಗುವುದು.


        ಸಂಪತ್ತು , ಸಮೃದ್ಧಿಯನ್ನು ಆಕರ್ಷಿಸಲು  ಪರಿಣಾಮಕಾರಿ ಉಪಾಯಗಳು ಕೂಡ ಲಾಲ್ ಕಿತಾಬ್ ನಲ್ಲಿವೆ. 

ಕೆಂಪು ಬಟ್ಟೆಯಲ್ಲಿ ಸುತ್ತಿದ  ಚಿನ್ನ ಅಥವಾ ಬೆಳ್ಳಿಯ ನಾಣ್ಯವನ್ನು  ಬೆಲೆಬಾಳುವ ವಸ್ತುಗಳು ಮತ್ತು ಹಣವನ್ನು ಇಡುವ  ತಿಜೋರಿಯಲ್ಲಿಡಬೇಕು..

 ಮಹಾ ಲಕ್ಷ್ಮಿ ದೇವಿಯ ಆಶೀರ್ವಾದಕ್ಕಾಗಿ "ಶ್ರೀ ಸೂಕ್ತಮ್" ಅನ್ನು  ಪಠಿಸಬೇಕು. ಶ್ರೀ ಯಂತ್ರವನ್ನು ಇರಿಸಿ  ಪೂಜಿಸಬೇಕು

ಹಸುಗಳಿಗೆ ಬೆಲ್ಲವನ್ನು ನೀಡುವುದರಿಂದ ಗುರುಗ್ರಹ ಸಂತೋಷವಾಗಿ  ಆರ್ಥಿಕ ಅಂಶಗಳನ್ನು ಹೆಚ್ಚಿಸುತ್ತದೆ.

 ಮನೆಯ ನಲ್ಲಿಯಲ್ಲಿ ನೀರಿನ ಸೋರಿಕೆಯನ್ನು ಸರಿಪಡಿಸಿದರೆ  ಹಣಕಾಸಿನ ನಷ್ಟ ತಪ್ಪುತ್ತೆ.

ಗೋವಿಗೆ ಗೋಗ್ರಾಸ ಕೊಡುವುದೂ ಕೂಡ ಹಣದ ಹರಿವನ್ನು ಹೆಚ್ಚಿಸುತ್ತೆ.

 ಕೈಚೀಲದಲ್ಲಿ ಮೂರು ತಾಮ್ರದ  ನಾಣ್ಯವನ್ನು ಇಟ್ಟುಕೊಳ್ಳುವುದೂ ಕೂಡ ಅನಿರೀಕ್ಷಿತ ಆರ್ಥಿಕ ನಷ್ಟದಿಂದ  ರಕ್ಷಿಸಿಕೊಳ್ಳಬಹುದು.
ಹೀಗೆ ಇನ್ನೂ ಅನೇಕ  ಉಪಾಯಗಳನ್ನು ಲಾಲ್ ಕಿತಾಬ್ ನಲ್ಲಿ ತಿಳಿಸಲಾಗಿದೆ.

ಲಾಲ್ ಕಿತಾಬ್ ನಲ್ಲಿ... ಅನಿಷ್ಟ, ರೋಗ, ಎಲ್ಲಾ ರೀತಿಯ ಋಣ, ಸಂಕಟಗಳಿಗೆ, ಸಂತಾನ ಸುಖಕ್ಕಾಗಿ,  ಗ್ರಹಗಳ ಅನುಕೂಲಕ್ಕಾಗಿ,  ಕುಜದೋಷ ನಿವಾರಣೆಗಾಗಿ,  ಮನೆಯ ವಾಸ್ತುದೋಷ ಪರಿಹಾರಕ್ಕಾಗಿ ಗ್ರಹಗಳ ಯುತಿಯಿಂದ ಉಂಟಾಗುವ ದೋಷನಿವಾರಣೆಗಾಗಿ ಅನೇಕ ಸರಳ ಉಪಾಯಗಳನ್ನು ಹೇಳಿದೆ. ರಾಶ್ಯಾನುಸಾರ ಸರಳ ಉಪಾಯಗಳೂ ಇವೆ. ವಾರಾನುಸಾರ ನೀಚಗ್ರಹಗಳಿಗೆ ಮಾಡುವ ಉಪಾಯಗಳೂ ಇವೆ. ದಾನ ಸಂಬಂಧಿತ ಉಪಾಯಗಳೂ ಇವೆ. ಗ್ರಹಪೀಡಾ ನಿವಾರಣೆಗೂ ಉಪಾಯಗಳಿವೆ. ಒಟ್ಟಿನಲ್ಲಿ ಮಾನವನು ತನ್ನ ಜನ್ಮಜಾತಕದಲ್ಲಿನ ಎಲ್ಲಾ ದೋಷಗಳನ್ನು ನಿವೃತ್ತಿಗೊಳಿಸಿ, ಆರೋಗ್ಯವಂತರಾಗಿ, ಸಂತಸದಿಂದ  ಜೀವಿಸುವುದಕ್ಕೆ ಬೇಕಾದ ಎಲ್ಲ ರೀತಿಯ ಪರಿಣಾಮಕಾರಿ ಉಪಾಯಗಳು ಈ ಲಾಲ್ ಕಿತಾಬ್ ನಲ್ಲಿವೆ. ಆದರೆ ಈ ಉಪಾಯಗಳನ್ನು ಪ್ರಯೋಗಿಸುವುದಕ್ಕೆ ಮುಂಚೆ ಅವುಗಳ ಸ್ವರೂಪ ಹಾಗೂ ನಿಯಮಗಳನ್ನು ಅರಿತುಕೊಳ್ಳುವುದು ಬಹುಮುಖ್ಯ. 

      ಯಾವುದೇ ಉಪಾಯವನ್ನು ಕನಿಷ್ಠ 40 - 43 ದಿನಗಳ ವರೆಗೆ ನಿಯಮಿತವಾಗಿ ಮಾಡಬೇಕು. ಉಪಾಯ ಮಾಡುವ ಸಮಯದಲ್ಲಿ ಯಾವುದೇ ಅಡ್ಡಿ ಆತಂಕಗಳು ಎದುರಾಗಬಾರದು. ಒಂದುವೇಳೆ ಅಡ್ಡಿಯಾಗಿ ಉಪಾಯ ಮಾಡುವುದು ತಪ್ಪಿದರೆ ಮತ್ತೆ ಮೊದಲಿನಿಂದ ಪ್ರಾರಂಭಿಸಬೇಕು. 

      ಉಪಾಯಗಳನ್ನು ಸೂರ್ಯೋದಯದಿಂದ ಸೂರ್ಯಾಸ್ತದ ವರೆಗಿನ ಮದ್ಯದ ಅವಧಿಯಲ್ಲೇ ಮಾಡಬೇಕು.

      ಒಬ್ಬರಿಗಾಗಿ ಇನ್ನೊಬ್ಬರು ಪರಿಹಾರೋಪಾಯಗಳು ಮಾಡಬಹುದು ಆದರೆ ಅವರು ರಕ್ತಸಂಬಂಧಿಯೇ ಆಗಿರಬೇಕು.

        ಪುರುಶ ಕುಂಡಲಿಯಲ್ಲಿ ದೋಷವಿದ್ದರೆ ವಿವಾಹಕ್ಕೆ ಮುಂಚೆಯೇ ಅಶುಭಗ್ರಹಗಳ ಪರಿಹಾರೋಪಾಯವನ್ನು ಅವಶ್ಯವಾಗಿ ಮಾಡಬೇಕು. ಏಕೆಂದರೆ ಪುರುಷ ಕುಂಡಲಿಯ ಅಶುಭ ಗ್ರಹ ಆತನ ಹೆಂಡತಿಯನ್ನು ಪ್ರಭಾವಿತಗೊಳಿಸುತ್ತೆ.

        ಲಾಲ್ ಕಿತಾಬ್ ಉಪಾಯಗಳು  ಹೆಚ್ಚು ಹಣದ ಖರ್ಚಿಲ್ಲದೇ ಸರಳವಾಗಿದ್ದರೂ ಅತ್ಯಂತ ಪ್ರಭಾವಶಾಲಿ ಹಾಗೂ ಶೀಘ್ರ ಫಲವನ್ನು ಕೊಡುವಂಥದ್ದಾಗಿದೆ. ನಿಯಮಿತ ಅವಧಿಯವರೆಗೆ ಉಪಾಯ ಶ್ರದ್ಧೆಯಿಂದ ಮಾಡಿದರೆ ಶುಭತ್ವ ಪ್ರಾಪ್ತಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
  
ಹಾಗೆಯೇ.....
ಜನ್ಮಕುಂಡಲಿಯ ವಿಶ್ಲೇಷಣೆಯ ನಂತರವಷ್ಟೇ ಸೂಕ್ತ ಉಪಾಯಗಳ ಆಯ್ಕೆ ಮಾಡಿಕೊಳ್ಳಬೇಕು. ಸೂಕ್ತ ಉಪಾಯ ಲಾಭ ಉಂಟುಮಾಡುವಂತೆಯೇ ತಪ್ಪಾದ ಉಪಾಯ ಹಾನಿಯನ್ನೂ ಉಂಟುಮಾಡಬಲ್ಲದು. ಹಾಗಾಗಿ ಜಾತಕ ಪರಿಶೀಲನೆ ಬಹಳ ಮುಖ್ಯ.

ಆದರೆ...
ಮಂತ್ರ - ತಂತ್ರ, ಪರಿಹಾರದ ಉಪಾಯಗಳನ್ನು ಬಿಟ್ಟು , ಸದಾಚಾರ  ಪರಿಪಾಲನೆ ಮಾಡಿದರೆ ಯಾವುದೇ ಹಾನಿ ಇಲ್ಲ, ಜಾತಕ ಪರಿಶೀಲನೆ ಇಲ್ಲದೆಯೂ ಸದಾಚಾರದ ರೆಮಿಡಿ ಶುಭಫಲವನ್ನೇ ಕೊಡುತ್ತೆ, ಸದಾಚಾರ ಮನುಷ್ಯ ಧರ್ಮ ಹಾಗೂ ನಮ್ಮ ಸಂಸ್ಕೃತಿಯ ಭಾಗವೇ ಆಗಿರೋದ್ರಿಂದ ಇದು ಲಾಲ್ ಕಿತಾಬ್ ಉಪಾಯಗಳಲ್ಲಿ ಸಮ್ಮಿಳಿತವಾಗಿದ್ದರೂ ಕೂಡ ಇದನ್ನ ಉಪಾಯ ಅಂತ ಅನ್ನಿಸೋದೂ ಇಲ್ಲ ಹಾಗೂ ಉಪಾಯ ಅಂತ ಪರಿಗಣಿಸಬೇಕಿಲ್ಲ.  ಸದಾಚಾರಣೆಯಲ್ಲಿ , ಅಸತ್ಯ ನುಡಿಯದಿರುವುದು, ಸುಳ್ಳು ಸಾಕ್ಷಿ ಹೇಳದಿರುವುದು, ಕೆಟ್ಟಪದ ಉಪಯೋಗಿಸದಿರುವುದು, ಬೈಯ್ಯದಿರುವುದು, ದೇವರಲ್ಲಿ ವಿಶ್ವಾಸವಿಡುವುದು, ಪೂಜಾರ್ಚನೆ ಮಾಡುವುದು, ಕ್ರೂರತ್ವ ಬಿಡುವುದು, ಮದ್ಯ- ಮಾಂಸಗಳನ್ನು ಸೇವಿಸದಿರುವುದು, ಶಿಷ್ಟಾಚಾರವನ್ನು ಪಾಲಿಸುವುದು, ಕಿವಿ, ಮೂಗು, ಹಲ್ಲುಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಮೂಗು ಚುಚ್ಚಿಸಿಕೊಳ್ಳುವುದು,  ಕೂಡು ಕುಟುಂಬದಲ್ಲಿ ವಾಸಮಾಡುವುದು, ಮಾವನ ಮನೆಯವರೊಡನೆ ಹೊಂದಿಕೊಂಡು ಹೋಗುವುದು, ಕನ್ಯೆಯರಿಗೆ, ಮನೆಯ ಹೆಣ್ಣುಮಕ್ಕಳಿಗೆ, ವಸ್ತ್ರ ಭೋಜನಗಳನ್ನು ನೀಡಿ ಖುಷಿಪಡಿಸುವುದು,  ಸಹೋದರಿ ಮತ್ತು ಪುತ್ರಿಯರಿಗೆ ಸಿಹಿ ತಿನಿಸು ಕೊಡುವುದು,  ಅತ್ತಿಗೆಯ ಸೇವೆ, ವಿಧವೆಯರ ಸೇವೆ, ಕುಟುಂಬದ ಪಾಲನೆ - ಪೋಷಣೆ ಮಾಡುವುದು,  ಸಂತಾನ ಹೀನರ ಸಂಪತ್ತನ್ನು ಪಡೆಯದಿರುವುದು,  ತಾಯಿ ತಂದೆಯರನ್ನು ಪ್ರೀತಿಯಿಂದ ಗೌರವದಿಂದ ಕಂಡು ಅವರ ಸೇವೆ ಮಾಡುವುದು, ಹಿರಿಯರ ಚರಣ ಸ್ಪರ್ಶಮಾಡಿ ಆಶೀರ್ವಾದ ಪಡೆಯುವುದು, ಪತ್ನಿಯನ್ನೂ ಗೌರವದಿಂದ ನಡೆಸಿಕೊಳ್ಳುವುದು, ಪರಸ್ತ್ರೀಯರ ವ್ಯಾಮೋಹದಿಂದ ದೂರವಿರುವುದು, ಯಾವುದೇ ವಸ್ತುಗಳನ್ನು ಪುಕ್ಕಟೆ ಯಾಗಿ ಪಡೆಯದಿರುವುದು, ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡುವುದು, ಅಂಗವಿಕಲರಿಗೆ ಸಹಾಯ ಮಾಡುವುದು, ಇವೆಲ್ಲವೂ ಶಿಷ್ಟಾಚಾರದ, ಮನುಷ್ಯತ್ವದ, ಸಂಸ್ಕೃತಿಯ, ಸಾಮಾಜಿಕತೆಯ, ಧಾರ್ಮಿಕತೆಯ ಭಾಗವಾಗಿರುವುದರಿಂದ ಪ್ರತಿಯೊಬ್ಬರೂ ಇವುಗಳನ್ನು ಪಾಲಿಸುವುದರಿಂದ ಎಲ್ಲ ಗ್ರಹಗಳಿಂದುಂಟಾಗುವ ಅಶುಭತ್ವ ಕಡಿಮೆಯಾಗುತ್ತೆ ಹಾಗೂ  ಕುಟುಂಬದಲ್ಲಿ, ಸಮಾಜದಲ್ಲಿ ಸಾಮರಸ್ಯ ವೃದ್ಧಿಯಾಗುತ್ತೆ. ಹಾಗಾಗಿ ಪ್ರತಿಯೊಬ್ಬರೂ ಸದಾಚಾರಣೆಯನ್ನು ಪಾಲಿಸುವುದು ಅತ್ಯಗತ್ಯ ಎನ್ನುವುದು ನನ್ನ ಅನಿಸಿಕೆ.

ಧನ್ಯವಾದಗಳು🙏🙏

✍ ಡಾ|| B. N ಶೈಲಜಾ ರಮೇಶ್

No comments:

Post a Comment