ಓಂ ಶ್ರೀ ಗುರುಭ್ಯೋನಮಃ
ಸುಖ ಜೀವನ
( ಜನ್ಮಕುಂಡಲಿಯಲ್ಲಿ )
ಮಾನವನಿಗೆ ಸೃಷ್ಟಿಯ ಎಲ್ಲಾ ಜೀವಿಗಳಿಗಿಂತ ಹೆಚ್ಚಿನ ಆಸೆ ಬಯಕೆಗಳು, ಇದು ಸಹಜವೂ ಕೂಡ, ಏಕೆಂದರೆ ಎಲ್ಲಾ ಜೀವಿಗಳಿಗಿಂತ ಮನುಜ ಬುದ್ಧಿವಂತ ಜೀವಿ, ತನ್ನ ಬೆಳವಣಿಗೆಗೆ ಪೂರಕವಾದ ಬೇಕುಬೇಡಗಳನ್ನು ಬಯಸುವುದು ತಪ್ಪೇನಲ್ಲ. ಅಲ್ಲದೆ ಆಸೆ ಕನಸುಗಳಿಲ್ಲದಿದ್ದರೆ ಬದುಕು ಬರಡಾದಂತೆ, ಒಂದು ಪುಟ್ಟ ಮಗುವನ್ನು ಏನಾಗಲು ಬಯಸುತ್ತೀಯಾ ಎಂದು ಕೇಳಿದರೆ ಡಾಕ್ಟರ್, ಇಂಜಿನಿಯರ್, ಆಕ್ಟರ್, ಸಿಂಗರ್, ಪೊಲೀಸ್.... ಹೀಗೆ ತನ್ನಾಸೆಯನ್ನೆಲ್ಲ ಹೇಳುತ್ತದೆ ಅಲ್ಲವೇ.? ಹುಟ್ಟುವಾಗಲೇ ಆಸೆಯ ಮೂಟೆಯನ್ನೇ ಹೊತ್ತುಕೊಂಡು ಬಂದಿರುತ್ತಾನೆ ಮನುಜ, ಒಬ್ಬೊಬ್ಬರಿಗೆ ಒಂದೊಂದು ತೆರೆನಾದ ಆಸೆ ಕನಸುಗಳು..! ಈ ಆಸೆ ಕನಸುಗಳು ಈಡೇರಿದಾಗ ಸಿಗುವ ಒಂದು ಆಹ್ಲಾದಕರ ಭಾವವೇ ಸುಖ. ಆಸೆ ಮತ್ತು ಸುಖ ಈ ಎರಡೂ ಒಂದೇ ನಾಣ್ಯದ ಎರಡು ಮುಖಗಳು ಎಂದು ಹೇಳಬಹುದು.
ತತ್ವಶಾಸ್ತ್ರದಲ್ಲಿ, ಸುಖ ಕೇವಲ ಒಂದು ಭಾವನೆಯನ್ನು ಸೂಚಿಸದೆ ಒಳ್ಳೆ ಜೀವನ, ಅಥವಾ ಏಳಿಗೆಯನ್ನು ಸೂಚಿಸುತ್ತದೆ.
ಆಸೆಯೇ ಇಲ್ಲದವನು ಈಶನಾಗುತ್ತಾನೆ ಎಂದು ತಿಳಿಸುತ್ತದೆ ತತ್ವಜ್ಞಾನ. ಹೆಣ್ಣು ಹೊನ್ನು ಮಣ್ಣುಗಳ ಆಸೆ ಬಿಟ್ಟವರು ಸಾಧುಸಂತರಾಗುತ್ತಾರೆ. ಆಸೆ ಪಡುವುದಕ್ಕಿಂತ ಮುಂಚೆಯೇ ಬಯಕೆ ಕಣ್ಮುಂದೆ ಇದ್ದರೆ ಅವರು ಪುಣ್ಯವಂತರು. ಬಯಸಿದ್ದು ಅನಾಯಾಸವಾಗಿ ಸಿಕ್ಕರೆ ಅವರು ಭಾಗ್ಯವಂತರು, ಆಸೆ ಬಯಕೆಯ ಬೆಂಬತ್ತಿ ಕಷ್ಟನಷ್ಟಗಳಿಗೆ ಸಿಲುಕಿದವರು ಭಾಗ್ಯಹೀನರು. ಆನಂತರವೂ ಬೆನ್ನಟ್ಟಿ ಪಡೆದೇ ತೀರಬೇಕೆಂಬ ಜಿದ್ದಿಗೆ ಬಿದ್ದು ಎಡರುತೊಡರಲ್ಲಿ ಸಿಲುಕಿ ತಪ್ಪೆಸಗಿದವರನ್ನು ನಾವು ಪೊಲೀಸ್ ಠಾಣೆಯಲ್ಲಿ ಹಾಗೂ ಜೈಲಿನಲ್ಲಿ ಕಾಣಬಹುದು. ಸಿರಿವಂತರ ಮನೆಯಲ್ಲಿ ಜನಿಸಿದವರೂ ಹೆಚ್ಚಿನ ಸುಖಿಗಳು ಅಂತಲ್ಲ, ಹಾಗೆಯೇ ಬಡತನದಲ್ಲಿ ಜನಿಸಿದವರೆಲ್ಲ ಕಷ್ಟಪಡಬೇಕಂತೆನೂ ಇಲ್ಲ. ಸುಖ ಎಂಬುದು ಯಾರ ಸ್ವತ್ತೂ ಅಲ್ಲ, ಇವೆಲ್ಲಾ ಅವರವರು ತಮ್ಮ ಪೂರ್ವ ಜನ್ಮದಲ್ಲಿ ಮಾಡಿದ ಪಾಪಪುಣ್ಯಗಳ ಮೊತ್ತದ ಆಧಾರದ ಮೇಲೆ ಆ ದೇವರು ನಿರ್ಧರಿಸುತ್ತಾರೆ ಎಂದು ಭಗವದ್ಗೀತೆ ತಿಳಿಸುತ್ತದೆ. ಹಾಗೆಯೇ ಪೂರ್ವ ಜನ್ಮದಲ್ಲಿನ ಪಾಪ ಪುಣ್ಯಗಳು ಜನ್ಮಕುಂಡಲಿಯ ರೂಪದಲ್ಲಿ ಆಯಾ ವ್ಯಕ್ತಿಗೆ ಕನ್ನಡಿಯಂತೆ ಗೋಚರಿಸುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ. ಈ ಸುಖ ಎಂಬುದು ಹೇಗೆ ಸಿಗುತ್ತದೆ ಎಂಬುದನ್ನು ನೋಡೋಣ ಬನ್ನಿ.
ಜನ್ಮಜಾತಕದಲ್ಲಿ ಲಗ್ನದಿಂದ ಚತುರ್ಥ ಸ್ಥಾನವು ಸುಖದ ಸ್ಥಾನ. ಈ ಸ್ಥಾನದಲ್ಲಿ ಶುಭಗ್ರಹರಿದ್ದು, ಯಾವುದೇ ಅಶುಭಗ್ರಹಗಳ ಸಂಬಂಧ ಇಲ್ಲದಿದ್ದರೆ ಜಾತಕರು ಬಹುತೇಕ ಸುಖದ ಜೀವನ ನಡೆಸುತ್ತಾರೆ. ನಾಲ್ಕನೇ ಸ್ಥಾನದಲ್ಲಿರುವ ಶುಭಗ್ರಹವು ಉಚ್ಚಸ್ಥಾನ ಅಥವಾ ಸ್ವಕ್ಷೇತ್ರ ಸ್ಥಿತನಾಗಿ ಶುಭಗ್ರಹಗಳ ಯುತಿ ಅಥವಾ ಸಂಬಂಧವಿದ್ದರೆ, ಜೊತೆಗೆ ಲಗ್ನಅಧಿಪತಿ ಕೂಡ ಬಲವಾಗಿದ್ದರೆ, ಅಂತಹ ಜಾತಕರು ಅಧಿಕ ಸುಖವಂತರಾಗಿರುತ್ತಾರೆ.
ಚತುರ್ಥ ಸ್ಥಾನದಲ್ಲಿ ಅಶುಭಗ್ರಹರು ಸ್ಥಿತರಿದ್ದು, ಲಗ್ನಅಧಿಪತಿಯೂ ದುರ್ಬಲನಾಗಿದ್ದರೆ ಬಹುತೇಕ ಕಷ್ಟದ ಜೀವನ ಎದುರಿಸಬೇಕಾಗುತ್ತೆ. 4 ರಲ್ಲಿ ಅಶುಭಗ್ರಹರಿದ್ದು ಅದು ಆ ಗ್ರಹದ ಶತ್ರು, ನೀಚಕ್ಷೇತ್ರವೇನಾದರೂ ಆಗಿದ್ದು , ಜೊತೆಗೆ ಅಶುಭಗ್ರಹಗಳ ಯುತಿ, ಸಂಬಂಧವೇರ್ಪಟ್ಟರೆ, ಲಗ್ನಅಧಿಪತಿಯೂ ದುರ್ಬಲನಾಗಿದ್ದರೆ ಅಂತಹ ಜಾತಕರು ಅತ್ಯಂತ ಕಷ್ಟ ಜೀವನವನ್ನು ನಡೆಸಬೇಕಾಗುತ್ತದೆ.
ಗುರು, ಶುಕ್ರ, ಬುಧ, ವೃದ್ಧಿ ಚಂದ್ರರು ಶುಭಗ್ರಹಗಳೆಂತಲೂ... ರವಿ, ಕುಜ, ಶನಿ, ರಾಹು ಕೇತುಗಳು ಅಶುಭ ಗ್ರಹರೆಂತಲೂ.. ಬುಧ ಗ್ರಹ ಯಾರ ಜೊತೆಗೆ ಇರುತ್ತಾನೋ ಅವರಂತೆ ನಡೆದುಕೊಳ್ಳುತ್ತಾನೆಂತಲೂ... ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಈ ಗ್ರಹಗಳು ಜನ್ಮಕುಂಡಲಿಯಲ್ಲಿ ಸುಖಸ್ಥಾನದಲ್ಲಿದ್ದಾಗ , ಯಾವರೀತಿಯಲ್ಲಿ, ಹೇಗೆ ಸುಖ ದೊರೆಯುತ್ತದೆ ಎಂಬುದನ್ನು ನೋಡೋಣ ಬನ್ನಿ.
ಸೂರ್ಯ :-- ಸೂರ್ಯನು ಬಲಿಷ್ಠನಾಗಿ ಚತುರ್ಥದಲ್ಲಿದ್ದು, ಶುಭ ಸಂಬಂಧ ಹೊಂದಿದ್ದು ಲಗ್ನಾಧಿಪತಿಯೂ ಸಹ ಬಲಿಷ್ಠನಾಗಿದ್ದರೆ ಅಂತಹ ಜಾತಕರು ತಂದೆಯಿಂದ, ತಂದೆಯ ಕಡೆಯವರಿಂದ, ಪಿತ್ರಾರ್ಜಿತ ಆಸ್ತಿಯಿಂದ, ಸರ್ಕಾರದಿಂದ, ಸರ್ಕಾರಿ ಅಧಿಕಾರಿಗಳಿಂದ, ರಾಜಕಾರಣಿಗಳಿಂದ , ಸಂಘಸಂಸ್ಥೆಗಳಿಂದ, ನಾಯಕತ್ವದಿಂದ, ಸಮಾಜದಿಂದ, ಸಹಾಯ ದೊರೆತು ಸುಖ ಪಡೆಯುತ್ತಾರೆ.
ಕೆಂಪು ವರ್ಣದ ವಸ್ತುಗಳು, ಬೆಂಕಿ, ಉಷ್ಣಕ್ಕೆ ಸಂಬಂಧಿಸಿದ ವಸ್ತುಗಳಾದ ಗೋಧಿ, ರವೆ ಮುಂತಾದ ವ್ಯಾಪಾರ ವಹಿವಾಟಿನಿಂದ ಕೂಡ ಅಧಿಕ ಲಾಭಗಳಿಸಿ ಸುಖ ಪಡುತ್ತಾರೆ.
ಚಂದ್ರ:-- ಚಂದ್ರನು ಬಲಾಢ್ಯನಾಗಿ ಅಶುಭಗ್ರಹಗಳ ಸಂಬಂಧವಿಲ್ಲದೆ, ಶುಭ ಸಂಬಂಧ ಹೊಂದಿ, ಲಗ್ನಾಧಿಪತಿಯೂ ಸಹ ಬಲಿಷ್ಠ ನಾಗಿದ್ದರೆ, ಅಂಥ ಜಾತಕರು ತಾಯಿಯಿಂದ, ತಾಯಿಯ ಕಡೆಯವರಿಂದ, ನೀರು, ಇನ್ನಿತರೆ ದ್ರವಪದಾರ್ಥಗಳಿಂದ, ಅಕ್ಕಿ , ಬಿಳಿಯ ಪದಾರ್ಥಗಳು, ಹೋಟೆಲ್, ತಂಪುಪಾನೀಯಗಳ ವ್ಯಾಪಾರ ವಹಿವಾಟಿನಿಂದ, ಮನೋವಿಜ್ಞಾನಕ್ಕೆ ಸಂಬಂಧಪಟ್ಟ ವೃತ್ತಿಯಿಂದ, ಜಿಮ್, ಯೋಗಚಿಕಿತ್ಸೆ, ಅಲಂಕಾರ ಕ್ಕೆ ಸಂಬಂಧಪಟ್ಟಂತಹ ಕಾರ್ಯಗಳಿಂದ, ಜಲಯಾನಕ್ಕೆ ಸಂಬಂಧಿಸಿದಂತೆ ಅಧಿಕ ಲಾಭ ಪಡೆದು ಸುಖ ಹೊಂದುತ್ತಾರೆ.
ಕುಜ:-- ಜಾತಕದಲ್ಲಿ ಕುಜನು ಬಲಾಢ್ಯನಾಗಿ ಅಶುಭ ಸಂಪರ್ಕವಿಲ್ಲದೆ, ಶುಭ ಸಂಬಂಧ ಹೊಂದಿ, ಲಗ್ನಾಧಿಪತಿಯೂ ಬಲಿಶ್ಟನಾಗಿದ್ದರೆ.. ಭೂಮಿ, ವ್ಯವಸಾಯ, ರಿಯಲ್ ಎಷ್ಟೇಟ್, ಗೃಹನಿರ್ಮಾಣ, ಬೆಂಕಿ, ವಿದ್ಯುತ್, ಪೊಲೀಸ್, ಮಿಲಿಟರಿ, ಸೆಕ್ಯೂರಿಟಿ ಏಜೆನ್ಸಿ, ಸಾಹಸ ಪ್ರವೃತ್ತಿ, ವೈದ್ಯಕೀಯ, ಔಷಧ ವ್ಯಾಪಾರ, ರಕ್ತಗೆಂಪು ವರ್ಣದ ವಹಿವಾಟು, ಶಸ್ತ್ರಾಸ್ತ್ರಗಳ ವಹಿವಾಟುಗಳಿಂದ, ಒಡಹುಟ್ಟಿದವರಿಂದ ಸಹಾಯ ದೊರೆತು ಸುಖ ಹೊಂದುತ್ತಾರೆ.
ಬುಧ:-- ಬುಧನು ಬಲಾಢ್ಯನಾಗಿ ಅಶುಭರ ಸಂಬಂಧವಿಲ್ಲದೆ , ಶುಭರ ಸಂಪರ್ಕ ಹೊಂದಿದ್ದು ಲಗ್ನಾಧಿಪತಿಯೂ ಸಹ ಬಲಿಷ್ಠನಾಗಿದ್ದರೆ, ತಮ್ಮ ಬುದ್ಧಿಶಕ್ತಿಯಿಂದ, ಟ್ಯೂಷನ್, ಲೇಖನ, ಪತ್ರಿಕೆ, ಪುಸ್ತಕ ಪ್ರಕಾಶನ, T.V ವಾರ್ತೆಗಳು, ಗಣಿತ, ಖಗೋಳ ಶಾಸ್ತ್ರ, ಜ್ಯೋತಿಷ್ಯ, ವಾಸ್ತು, ಸಂಖ್ಯಾಶಾಸ್ತ್ರ, ಗಾಯನ, ಭಾಷಣ, ವ್ಯಾಪಾರದಿಂದ, ಹಸಿರು ವರ್ಣದ ವಸ್ತುಗಳ ವಹಿವಾಟಿನಿಂದ, ಮಿತ್ರರ ಸಹಾಯದಿಂದ ಅಧಿಕ ಸುಖವನ್ನು ಪಡೆಯುತ್ತಾರೆ.
ಗುರು:-- ಗುರುವು ಭಲಾಢ್ಯನಾಗಿ, ಅಶುಭಗ್ರಹಗಳ ಸಂಪರ್ಕವಿಲ್ಲದೆ, ಶುಭ ಸಂಬಂಧ ಹೊಂದಿದ್ದರೆ, ಲಗ್ನಾಧಿಪತಿಯೂ ಬಲಿಷ್ಠನಾಗಿದ್ದರೆ, ಅಂತಹ ಜಾತಕರು, ಪೌರೋಹಿತ್ಯ, ಬ್ರಾಹ್ಮಣತ್ವ, ಅರ್ಚಕವೃತ್ತಿ, ಸಂಸ್ಕೃತ - ವೇದ- ತತ್ವಜ್ಞಾನ ಪ್ರವಚನಗಳಿಂದ, ಧಾರ್ಮಿಕ ಸಂಸ್ಥೆಗಳಿಂದ, ಗುರುವೃತ್ತಿಯಿಂದ, ಶಿಕ್ಷಣ ಸಂಸ್ಥೆ ನಡೆಸುವುದರಿಂದ, ಚಿನ್ನ, ಕಡಲೆ ವ್ಯಾಪಾರ ವಹಿವಾಟಿನಿಂದ, ಸಾಧು ಸಂತ.ಗುರುಗಳ ಸಹಾಯ ದೊರೆತು ಅಧಿಕ ಸುಖ ಹೊಂದುತ್ತಾರೆ.
ಶುಕ್ರ:-- ಶುಕ್ರನು ಬಲಿಶ್ಟನಾಗಿ, ಅಶುಭಗ್ರಹಗಳ ವೀಕ್ಷಣೆ ಇಲ್ಲದೆ, ಶುಭ ಗ್ರಹಗಳ ಸಂಪರ್ಕದಲ್ಲಿದ್ದು, ಲಗ್ನಾಧಿಪತಿಯೂ ಬಲಾಢ್ಯನಾಗಿ ಇದ್ದರೆ, ಅಂತಹ ಜಾತಕರು ಲಲಿತಕಲೆಗಳಲ್ಲಿ ( ಸಂಗೀತ, ಗಾಯನ, ನೃತ್ಯ, ಶಿಲ್ಪಕಲೆ, ಚಿತ್ರಕಲೆ, ಕಥೆ ಕಾವ್ಯ ರಚನೆ, ಸಿನಿಮಾ , ನಾಟಕ ದಿಂದ.ಸಂಗಾತಿಯಿಂದ ಹಣಕಾಸು ಲಾಭ, ಭೋಗದ ವಸ್ತುಗಳ ವಹಿವಾಟಿನಿಂದ ಶೃಂಗಾರ - ದೇಹಪುಷ್ಠಿಗೆ ಸಂಬಂಧಿಸಿದ ವ್ಯಾಪಾರ ವಹಿವಾಟಿನಿಂದ, ವಿವಾಹ - ಕಲ್ಯಾಣ ಮಂಟಪದಿಂದ ಲಾಭ ಪಡೆದು ಅಧಿಕ ಸುಖ ಪಡೆಯುತ್ತಾರೆ.
ಶನಿದೇವ:-- ಬಲಿಷ್ಠನಾದ ಶನಿಯು ಅಶುಭ ಗ್ರಹಗಳ ಸಂಪರ್ಕ ಪಡೆಯದೆ ಶುಭ ಸಂಬಂಧ ಹೊಂದಿದ್ದರೆ, ಲಗ್ನಾಧಿಪತಿಯೂ ಬಲಿಷ್ಠನಾಗಿದ್ದರೆ, ಅಂತಹ ಜಾತಕರು, ಕಬ್ಬಿಣದ ವಸ್ತುಗಳು, ಫ್ಯಾಕ್ಟರಿ, ಮೆಷಿನರಿ, ಎಣ್ಣೆ, ಸೇವಕವರ್ಗ, ಕೆಳದರ್ಜೆ ( ಕಸ - ಚರಂಡಿ) ಮಂಡಲಿಗಳಿಂದ, ಕಪ್ಪು ನೀಲಿ ವಸ್ತುಗಳ ವ್ಯಾಪಾರ ವಹಿವಾಟುಗಳಿಂದ, ಪಾದರಕ್ಷೆ ತಯಾರಿಕೆ, ಮಾರಾಟಗಳ ಲಾಭದಿಂದ ಸುಖ ಪಡೆಯುತ್ತಾರೆ.
ರಾಹು:-- ಶುಭ ಸಂಪರ್ಕ ಹೊಂದಿರುವ, ಅಶುಭ ಸಂಬಂಧವಿಲ್ಲದ ಬಲಾಢ್ಯ ರಾಹು ಹಾಗೂ ಬಲಿಸ್ಟ ಲಗ್ನಾಧಿಪತಿ ಹೊಂದಿರುವ ಜಾತಕರು, ವಿದೇಶಕ್ಕೆ ಸಂಬಂಧಿಸಿದಂತೆ ವಹಿವಾಟು, ಪ್ಲಾನಿಂಗ್ ಕಮೀಷನ್ ಕಾರ್ಯ, ಸಿನೆಮಾ, TV ಫೋಟೋಗ್ರಫಿ, ಆನಿಮೇಶನ್, ಗ್ರಾಫಿಕ್ಸ್, ಏರೊನಾಟಿಕ್ಸ್, ಖಗೋಳಶಾಸ್ತ್ರ, ಜ್ಯೋತಿಷ್ಯ, ಹಾಗೂ ಉದ್ದು ಧಾನ್ಯಕ್ಕೆ ಸಂಬಂಧಿಸಿದ ವ್ಯಾಪಾರದಿಂದ ಲಾಭಗಳಿಸಿ ಸುಖ ಪಡೆಯುತ್ತಾರೆ.
ಕೇತು:-- ಬಲಾಢ್ಯನಾದ ಕೇತುವಿಗೆ ಅಶುಭರ ಸಂಪರ್ಕವಿಲ್ಲದೆ, ಶುಭ ದೃಷ್ಟಿಯಿದ್ದು, ಜನ್ಮ ಲಗ್ನಾಧೀಶ ಬಲಿಷ್ಠನಾಗಿದ್ದರೆ, ಮಾಟ ಮಂತ, ಮ್ಯಾಜಿಕ್, ಕಂಪ್ಯೂಟರ್, ಮದ್ಯ, ತಂಬಾಕು, ಕ್ರಿಮಿನಾಶಕ ಗಳ ವ್ಯಾಪಾರ ವಹಿವಾಟಿನಿಂದ ಹುರುಳಿ ಧಾನ್ಯದ ವ್ಯಾಪಾರದಿಂದ ಸುಖ ಗಳಿಸುತ್ತಾರೆ.
ಪೂರ್ವಾರ್ಜಿತ ಕರ್ಮಫಲದಿಂದ ಸುಖಸ್ಥಾನ ಬಲಹೀನವಾಗಿದ್ದು, ಅಶುಭಫಲಗಳೇ ಹೆಚ್ಚಾಗಿ ಜೀವನ ಕಷ್ಟ ಎನಿಸಿದಾಗ, ಶುಭಫಲಕ್ಕಾಗಿ ಜನ್ಮಕುಂಡಲಿಯ 5 ನೇ ಮನೆಗೆ ಸಂಬಂಧಿಸಿದ ದೇವರನ್ನು ಆರಾಧನೆ ಮಾಡಬೇಕು.
ಡಾ: B. N. ಶೈಲಜಾ ರಮೇಶ್
No comments:
Post a Comment