Wednesday, 13 July 2022

ಗುರುಪೂರ್ಣಿಮ

ಓಂ  ಶ್ರೀ ಗುರುಭ್ಯೋನಮಃ
ಓಂ ಶ್ರೀ ಮಹಾಗಣಪತಯೇ ನಮಃ

         ಆಷಾಢಮಾಸದ ಹುಣ್ಣಿಮೆಯಂದು ನಾವು ಆಚರಿಸುವ ಶ್ರೇಷ್ಠ ಹಬ್ಬವೆಂದರೆ ಅದು ಗುರುಪೂರ್ಣಿಮ  ಈ ದಿನ ನಾವು  ನಮ್ಮ ಗುರುವಿಗೆ ವಂದನೆ ಸಲ್ಲಿಸುವ ದಿನ, ಗುರುವಿನ ಮಹತ್ವವನ್ನು ಸಾರುವ ದಿನ.  ಗುರುವು ನಮಗೆ ಸರಿಯಾದ ದಿಕ್ಕು ಸೂಚುಸುವವ, ನಮ್ಮ ಕೈ ಹಿಡಿದು ನಡೆಸುವವ. ಪರಮಾತ್ಮನ ಅರಿವನ್ನು ತಿಳಿಯಲು ನಮ್ಮೊಳಗಿನ ಆತ್ಮವನ್ನು ಜಾಗೃತಗೊಳಿಸುವ  ಮಹತ್ವದ ವ್ಯಕ್ತಿ ಹಾಗೂ ಶಕ್ತಿ.
       ಸರಿಯಾದ ಹಾದಿಯಲ್ಲಿ  ನಮ್ಮನ್ನು ನಡೆಸಿ, ನಮ್ಮ ಗುರಿಯನ್ನು ಮುಟ್ಟಲು ಸಹಾಯ ಮಾಡುವವನೆ  ಗುರು  ಹುಡುಕಿದರೆ ಸಿಗುವವನಲ್ಲ... ನಮ್ಮೊಳಗೇ ನಮ್ಮನ್ನು ಹುಡುಕಿ, ನಾವು ಗುರುವನ್ನು ಕಾಣುವ ಮಟ್ಟಿಗೆ ಸಾಧನೆ ಮಾಡಿದ್ದರೆ ತಾನಾಗೇ ನಮ್ಮ ಬಳಿಗೆ ಬರುವವರು. ನಾವು ಗುರುವಿನ ಮುಖಾಂತರ  ಪರಮಾತ್ಮನ ಅರಿವನ್ನು ಪಡೆಯಬೇಕಾದ್ದರಿಂದ  ಗುರುಪೂರ್ಣಿಮೆಯಂದು ಮಾತ್ರವಲ್ಲದೇ ಪ್ರತಿದಿನ ಪ್ರತಿಕ್ಷಣ ಗುರುವನ್ನು ಅಂತರಂಗದಿಂದಲೇ ಪೂಜಿಸುತ್ತ ನಮ್ಮನ್ನು ನಾವು ಸಮರ್ಪಿಸಿಕೊಳ್ಳಬೇಕು. ನಮ್ಮದೇನಿಲ್ಲ ಗುರುಕರುಣೆಯೇ ಎಲ್ಲ ಎನ್ನುವ ಭಾವ ನಮ್ಮಲ್ಲಿ ಜಾಗೃತವಾಗಿಟ್ಟು ಕೊಂಡು ಗುರುವಲ್ಲಿ ಶರನಾದರೆ ಮಾತ್ರ ನಮ್ಮ ಗುರಿ ಮುಟ್ಟುವಲ್ಲಿನ ಪ್ರಯತ್ನ ಸಫಲವಾಗುತ್ತದೆ

ಗುರು ಬ್ರಹ್ಮ, ಗುರು ವಿಷ್ಣು | ಗುರು ದೇವೋ ಮಹೇಶ್ವರ 
ಗುರು ಸಾಕ್ಷಾತ್ ಪರಬ್ರಹ್ಮ | ತಸ್ಮೈಶ್ರೀ ಗುರುವೇ ನಮಃ ||

ಗುರುವು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರಣ ಸ್ವರೂಪವಾಗಿದ್ದು ಅದಕ್ಕೂ ಮಿಗಿಲಾದ ಪರಬ್ರಹ್ಮ ತತ್ವವೇ ಆಗಿದ್ದಾನೆ ಅಂತ ಗುರುಗಳಿಗೆ ಪ್ರಣಾಮಗಳು  ಎಂಬ ಅರ್ಥಪೂರ್ಣ ವಾದ ಈ ಸಾಲುಗಳೇ ಗುರುವಿನ ಮಹತ್ವವನ್ನು ಸಂಪೂರ್ಣವಾಗಿ ತಿಳಿಸಿಬಿಡುತ್ತವೆ. ಇಲ್ಲಿ ಗುರುವೇ ಎಲ್ಲವೂ ಮತ್ತು ಅವರಿಂದಲೇ ಎಲ್ಲವೂ ಅನ್ನುವುದು ಸ್ಪಷ್ಟವಾಗುತ್ತದೆ. ಗುರುವಿನ ಸ್ಥಾನ ತುಂಬಾ ಪವಿತ್ರವಾದದ್ದು, ಜವಾಬ್ದಾರಿಯುತವಾದದ್ದು. ಈ ಸಮಾಜಕ್ಕೆ ಉತ್ತಮ ನಾಗರಿಕರನ್ನು ಕೊಡುವ ಸೃಷ್ಟಿಕರ್ತರು. ಮನುಷ್ಯನಾದ ಮೇಲೆ ತನ್ನ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂದುಕೊಂಡಿರುತ್ತಾರೆ ಈ ಸಾಧನೆಗೆ ಸೇತುವೆ ನಿರ್ಮಿಸುವವರು ಈ ನಮ್ಮ ಗುರುಗಳು. ಶಿಷ್ಯರಿಗೆ ಗುರಿ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದವರು ಗುರು. ‘ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು’ ಅನ್ನೋ ಗಾದೆಮಾತು ತುಂಬಾ ಅರ್ಥಪೂರ್ಣವಾಗಿದೆ. ನಾವು ತಮ್ಮ ಗುರಿಯನ್ನು ತಲುಪಬೇಕೆಂದರೆ ಗುರುವಿನ ಸಲಹೆ, ಸಹಕಾರ ಮತ್ತು ಮಾರ್ಗದರ್ಶನ ಇರಲೇಬೇಕು. ಗುರುವಿನ ಸಹಾಯದಿಂದ ಮಾತ್ರ ನಾವು ಅಂದುಕೊಂಡ ಗುರಿ ತಲುಪಬಹುದು. 

        ವೇದ ಉಪನಿಷತ್ತಿನ ಪ್ರಕಾರ " ಗು " ಎಂದರೆ ಅಂಧಕಾರವೆಂದೂ " ರು " ಎಂದರೆ ಅಜ್ಞಾನದ ಅಂಧಕಾರವನ್ನು ನಿವಾರಿಸಿ ಜ್ಞಾನದ ಹಾದಿಗೆ ನಡೆಸುವವ ಎಂದರ್ಥ. ಸಂಸ್ಕ್ರುತ ದಲ್ಲಿ ಗುರು ಪದಕ್ಕೆ ಭಾರವಾದ ಎನ್ನುವ ಅರ್ಥವೂ ಇದೆ. ಯಾರು ಜ್ಞಾನದ ಭಾರದಿಂದ ತೂಗುವರೋ ಅವರೇ ಗುರು ಎಂದು ಅರ್ಥೈಸಬಹುದು.

        ಸ್ಕಾನ್ದ ಪುರಾಣದ ಗುರುಗೀತೆಯಲ್ಲಿ ಗುರುವನ್ನು ನಂದಾದೀಪದಂತೆ ಬೆಳಗುವ ಪ್ರಣತೆ ಎಂದು ಗುರುವಿನ ಮಹಿಮೆಯನ್ನು ವಿಸ್ತಾರವಾಗಿ ತಿಳಿಸಲಾಗಿದೆ.

          ಅಖಂಡಮಂಡಲಾಕಾರಮ್ 
           ವ್ಯಾಪ್ತಯೇನ ಚರಾಚರಂ
           ತತ್ಪದಂ ದರ್ಶಿತಂ ಯೇನ
           ತಸ್ಮೈ ಶ್ರೀ ಗುರವೇನಮಃ

ಆದಿಗುರು ಶ್ರೀ ಶಂಕರಾಚಾರ್ಯರು ಗುರುಸ್ತೋತ್ರವನ್ನು ಹೀಗೆ ಹೇಳುತ್ತಾರೆ

          ಅಜ್ಞಾನ ತಿಮಿರಾಂಧಸ್ಯ
          ಜ್ಞಾನಾಂಜನ ಶಾಲಾಕಯ
          ಚಕ್ಷುರಂಮೇಲಿತಮ್ ಯೇನ
          ತಸ್ಮೈ ಶ್ರೀ ಗುರವೇನಮಃ

ನಮ್ಮಲ್ಲಿರುವ ಅಜ್ಞಾನವೆಂಬ ಕಣ್ಣಿಗೆ ಅಂಟಿದ ಅಂಧಕಾರವನ್ನು ಜ್ಞಾನವೆಂಬ  ಕಡ್ಡಿಯಿಂದ ಗುಣಪಡಿಸಿ ಶಿಷ್ಯನ ಏಳಿಗೆಗೆ ಬೇಕಾದ ಸೋಪಾನವನ್ನು ಹತ್ತಿಸುವ ಸಾಧನೆಯ ಮಾರ್ಗದರ್ಶನ ಮಾಡುವ ಗುರುವಿಗೆ ವಂದನೆಗಳು

        ಹೀಗೆ ನಮ್ಮ ಪರಂಪರೆಯಲ್ಲಿ ಅನಾದಿಕಾಲದಿಂದಲೂ ಗುರುವಿನ ಮಹತ್ವವನ್ನು ಸಾರುತ್ತಾ......
        ನ ಗುರೋರಧಿಕಮ್ ತತ್ವಂ
        ನ ಗುರೋರಧಿಕಮ್ ತಪಃ
        ತತ್ವ ಜ್ಞಾನಾತ್ ಪರಂ ನಾಸ್ತಿ
        ತಸ್ಮೈ ಶ್ರೀ ಗುರವೇನಮಃ
ಅಂದರೆ ಗುರುವಿಗೆ ಮೀರಿದ ತತ್ವ ತಪಸ್ಸು ಬೇರೆ ಯಾವುದೂ ಇಲ್ಲ, ಜ್ಞಾನದ ದಾರಿದೀಪ ತೋರುವವನಾದ ಶ್ರೀ ಗುರುವಿಗೆ ನಮನ್ ಎಂದು ಹೇಳಿದ್ದಾರೆ.

       ಧರ್ಮದ ಪುನರ್ಸ್ಥಾಪಣೆಗಾಗಿಯೇ ಅವತರಿಸಿದ ಶ್ರೀ ಶಂಕರಾಚಾರ್ಯರು, ಶ್ರೀ ರಾಮಾನುಜಾಚಾರ್ಯರು, ಶ್ರೀ ಮಧ್ವಾಚಾರ್ಯರು ಈ ಮೂವರೂ ಆಚಾರ್ಯತ್ರಯರೆಂದೇ ಪ್ರಸಿದ್ಧರಾದವರು. ಇವರುಗಳು ಬೋಧಿಸಿದ್ದ  ಅದ್ವೈತ, ವಿಶಿಷ್ಟಾಅದ್ವೈತ, ದ್ವೈತ ಸಿದ್ಧಾಂತಗಳನ್ನು ಅನುಸರಿಸುವ ಗುರುಪರಂಪರೆಯೇ ಬೆಳೆದು ಅನೇಕ ಶಾಖೆಗಳಾಗಿ ವಿಭಜಿತವಾಗಿದ್ದರೂ ಗುರುಪರಂಪರೆ ಅನಾಹತವಾಗಿ ಮುಂದುವರೆದಿದೆ.. ಈ ಪರಂಪರೆಯಲ್ಲಿ ಈಗಿರುವ ಗುರುವಿನ ಗುರುವಿಗೆ ಪರಮಗುರು  ಎಂತಲೂ, ಪರಮಗುರುವಿನ ಗುರುವಿಗೆ ಪರಾಪರ ಗುರು ಎಂತಲೂ, ಪರಾಪರ ಗುರುವಿಗೆ ಪರಮೇಷ್ಠಿ ಗುರು ಎಂತಲೂ ಗುರುತಿಸಲ್ಪಡುತ್ತಾರೆ.  ಈ ಗುರುಪೂರ್ಣಿಮೆಯಂದು ಸಮಸ್ತ ಗುರುಪರಂಪರೆಯೇ ಪೂಜಿಸಲ್ಪಡುತ್ತದೆ.  ಈ ಗುರುಪೂರ್ಣಿಮೆಯನ್ನು ವ್ಯಾಸಪೂರ್ಣಿಮ ಎಂತಲೂ ಕರೆಯುತ್ತಾರೆ.

       ವೇದದಲ್ಲಿನ ಬ್ರಹ್ಮತತ್ವವನ್ನು ಅರಿತಿದ್ದ, ವಿಷ್ಣುವಿನ ಅವತಾರವೆಂದೇ ಕರೆಯಲ್ಪಡುವ ವೇದವ್ಯಾಸರನ್ನು ನಾವು ವಿಶೇಷವಾಗಿ ಗುರುಪರಂಪರೆಯ ಜೊತೆಗೆ ಈ ಗುರುಪೂರ್ಣಿಮೆಯಂದು ಪೂಜಿಸುತ್ತೇವೆ. ಲೋಕಗುರು, ಪರಮಗುರು ಎಂದೇ ಪ್ರಖ್ಯಾತರಾಗಿರುವ ಈ ವ್ಯಾಸರು  ವೇದಗಳನ್ನು ನಾಲ್ಕುಭಾಗಗಳನ್ನಾಗಿ ವಿಂಗಡಿಸಿದ್ದರಿಂದ ಇವರನ್ನು ವೇದವ್ಯಾಸರು ಎಂದು ಕರೆಯಲಾಯಿತು. ಇಡೀ ಮಾನವ ಕುಲಕ್ಕೇ ಒಳಿತಾಗಲೆಂದು ಮತ್ತು ವೇದಗಳ ರಹಸ್ಯ ಸಾಮಾನ್ಯರೂ ಅರಿಯುವಂತಾಗಬೇಕೆಂದು ಅವರು ನಮಗಾಗಿ ಮಹಾಭಾರತವೆಂಬ ಪಂಚಮವೇದವನ್ನು ರಚಿಸಿಕೊಟ್ಟರು. ಜೊತೆಗೆ ಭಾಗವತ, 18 ಪುರಾಣಗಳನ್ನು ರಚಿಸಿದರು. ಇಂತಹ ವ್ಯಾಸಮಹರ್ಷಿಗಳನ್ನು ವೇದವ್ಯಾಸರೆಂದು, ಲೋಕಾಗುರುವೆಂದು ಕರೆದು ಶ್ರದ್ಧೆ ಹಾಗೂ ಭಕ್ತಿಯಿಂದ ಗುರುಪೂರ್ಣಿಮೆಯಂದು ಪೂಜಿಸುತ್ತೇವೆ. 
" ಗುರು " ವನ್ನು ಒಬ್ಬ ವ್ಯಕ್ತಿ ಎಂದು ತಿಳಿಯದೆ ಒಂದು " ಶಕ್ತಿ " ಎಂದು ಅರ್ಥೈಸಿಕೊಂಡರೆ ನಮಗೆ ಗುರುವಿನ ಮಹತ್ವ ಇನ್ನೂ ಹೆಚ್ಚು ಆಳವಾಗಿ ತಿಳಿಯುತ್ತದೆ. ಬೇರೆ ಬೇರೆ ಗುರುಗಳು ಭೌತಿಕ ಶರೀರದಿಂದ ಬೇರೆ ಬೇರೆ ಎನಿಸಿದರೂ ಅವರೆಲ್ಲರ ಒಳಗಿನ ಗುರುತತ್ವ ಮಾತ್ರ ಒಂದೇ ಆಗಿರುತ್ತದೆ. ಅವರೆಲ್ಲರೂ ಹೊರಹೊಮ್ಮಿಸುವ, ಪಸರಿಸುವ ಲಹರಿಗಳು ತುಂಬಾ ಚೈತನ್ಯ ದಾಯಕವಾಗಿರುತ್ತದೆ. ವೇದಶಾಸ್ತ್ರಪುರಾಣಗಳಲ್ಲಿ ಮಾತ್ರವಲ್ಲದೆ ಭಕ್ತಿಮಾರ್ಗದಲ್ಲೂ ಗುರುವಿಗೆ ಅತ್ಯಂತ ಮಹತ್ವದ  ಸ್ಥಾನವಿದೆ.  ಭಗವದ್ಗೀತೆ ಯಲ್ಲಿ ಶ್ರೀ ಕೃಷ್ಣಾರ್ಜುನರ ಸಂಬಂಧ, ರಾಮಾಯಣದಲ್ಲಿ ಶ್ರೀರಾಮಾಂಜನೆಯರ ಸಂಬಂಧ ಗುರುಶಿಷ್ಯರ ಉತ್ತಮ ಸಂಬಂಧಕ್ಕೆ ಅತಿ ಸೂಕ್ತವಾದ ನಿದರ್ಶನಗಳು .

ಗುರುವಿಗೆ ಯಾವಾಗಲೂ ಶಿಷ್ಯನ ಉನ್ನತಿಯ ಬೆಳವಣಿಗೆಯ ಚಿಂತನೆಯೇ ಆಗಿರುತ್ತದೆ. ಜಗತ್ತಿನ ಸಮಸ್ತ ಗುರುಪರಂಪರೆಗೆ ವಂದಿಸುತ್ತಾ  ನನ್ನ ಸರ್ವತೋಮುಖ ಬೆಳವಣಿಗೆಗೆ ಕಾರಣರಾದ ನನ್ನೆಲ್ಲಾ ಗುರುಗಳಿಗೆ ನನ್ನ ಸಾಷ್ಟಾಂಗ ನಮನಗಳು🙏🙏         

ಗುರುಪೂರ್ಣಿಮಾದ  ಈ  ಶುಭ  ಸಂದರ್ಭದಲ್ಲಿ  ನನ್ನೆಲ್ಲಾ  ಜ್ಯೋತಿಷ್ಯ  ಗುರುಗಳಿಗಾಗಿ.... ಈ ಬರಹ ಸಮರ್ಪಿತ
               🙏🙏🙏🙏

ವಂದನೆ ಗುರುಗಳೇ ನಿಮಗೆ ಸಾಸಿರ ವಂದನೆ
ಅರಿವಿಲ್ಲದ ತಿಳಿವಿಲ್ಲದ ಮಂದಮತಿಯ ಅಜ್ಞಾನವಳಿಸಿ
ಸುಜ್ಞಾನವಿತ್ತ  ಗುರುಗಳೇ ನಿಮಗೆ  ಸಾಸಿರ  ವಂದನೆ ||

ಹೇ ಶುದ್ಧಾಂತಃಕರಣದ  ವಿಶುದ್ಧ ವಿದ್ಯಾಸಾಗರರೆ
ಈ ಮಿಥ್ಯ ಜಗದ  ಅನಿತ್ಯ  ಬದುಕ ಸತ್ಯಾಸತ್ಯತೆಯ ನ್ನು  ಅರಿವ ಜ್ಞಾನವನಿತ್ತ  ಗುರುವಿದೋ ನಿಮಗೆ  ಸಾಸಿರ  ವಂದನೆ

ಕಾಡ  ಕಗ್ಗಲ್ಲನು  ಸುಂದರ ಹೂವನಾಗಿಸಿ ಕೆತ್ತಿ
ಜ್ಯೋತಿಷ್ಯದ ಗಂಧವ ಪೂಸಿದ  ಸೌಗಂಧಿಕಾ  ಪುಷ್ಪದ ಜನಕ  ಅದ್ಬುತ ಶಿಲ್ಪಿಯೇ ನಿಮಗೆ  ಸಾಸಿರ  ವಂದನೆ

ಹೇಗೆ  ಹೇಳಲಿ ಗುರುವೆ ನಿಮಗೆ  ಅಭಿನಂದನೆಯ   ಹೇಗೆ ಹೊಗಳಲಿ  ಗುರುವೇ ನಿಮ್ಮ  ಕೃಪೆಯಾ
ಬಣ್ಣಿಸಲು ಪದವಿಲ್ಲ  ನಿಮ್ಮ ಸರಳ  ಸಜ್ಜನಿಕೆಯ
ಹೇ ಜ್ಯೋತಿಷ್ಯ ವಿದ್ಯಾ ಗುರುಗಳೇ ನಿಮಗಿದೋ 
ನನ್ನ ನುಡಿ ನಮನ.....
🙏🙏🙏🙏🙏🙏🙏🙏
   🌹🌿🌹🌿🌹🌿🌹
✍️  ಡಾ: ಶೈಲಜಾ ರಮೇಶ್.....

No comments:

Post a Comment