Tuesday, 24 December 2019

ಗುರುವಿನ ಗೋಚಾರ ಫಲ

                                 ಹರಿಃ ಓಂ
                   ಓಂ. ಶ್ರೀ ಗಣೇಶಾಯ ನಮಃ
                    ಓಂ ಶ್ರೀ ಗುರುಭ್ಯೋನಮಃ

*ಗುರುವಿನ ಗೋಚಾರ ಫಲ ಯಾವಾಗ ?* 

ಮನುಷ್ಯ ಜೀವನದಲ್ಲಿ ಸುಖಿಯಾಗಿರಬೇಕು, ಆತ ಸುಖವಾಗಿರಬೇಕಿದ್ದರೆ ಯಾವ ಕೊರತೆಯೂ ಇರಬಾರದು, ಇಂಥ ಸುಖವನ್ನು ಕಂಡುಕೊಳ್ಳಲಿಕ್ಕೆ ಮನುಷ್ಯನಿಗೆ ಜ್ಞಾನ ಬೇಕು.  ಈ ಸುಖ ಹಾಗೂ ಅರಿವು ಎರಡನ್ನೂ ನಮ್ಮ ಅನುಭವಕ್ಕೆ ತಂದುಕೊಡುವ ಗ್ರಹವೇ ಗುರುಗ್ರಹ. ಹೀಗಾಗಿ ಗುರುಗ್ರಹಕ್ಕೆ  ಜ್ಯೋತಿಷ ಶಾಸ್ತ್ರದಲ್ಲಿ ಶ್ರೇಷ್ಠ ಸ್ಥಾನವಿದೆ *.  ‘‘ಬೃಹಸ್ಪತಿ: ಶ್ರೇಷ್ಠ ಮತಿ:’’* ಅಂತ ಕರೀತಾರೆ. ಅಂದರೆ ಗುರುವು ಶ್ರೇಷ್ಠ ಬುದ್ಧಿಯನ್ನು ಹೊಂದಿರುವಾತ ಎಂದರ್ಥ.


              ಬೃಹಜ್ಜಾತಕದಲ್ಲಿ ಉಲ್ಲೇಖಿಸಿದಂತೆ *‘‘ಹೋರಾಸ್ವಾಮಿ ಗುರುಜ್ಞವೀಕ್ಷಿತಯುತಾನಾನ್ಯೈಶ್ಚ ವೀರ್ಯೋತ್ಕಟಾ ಭವತಿ’’* ಎಂಬ ಭದ್ರ ಬಲವನ್ನು ಕೊಡುತ್ತಾನೆ ಈ ಗುರು.    ಹಾಗಂದರೆ ಒಬ್ಬರ ಜಾತಕದಲ್ಲಿ ಅವರ ರಾಶಿಯನ್ನೋ, ಅಥವಾ ಲಗ್ನವನ್ನೋ ಗುರುಗ್ರಹ ನೋಡಿದರೆ, ಅಥವಾ ಸೇರಿದ್ದರೆ ಆ ವ್ಯಕ್ತಿ  ಅತ್ಯಂತ ಬಲಿಷ್ಠ ವ್ಯಕ್ತಿಯಾಗುತ್ತಾನೆ. ಹೀಗಾಗಿ ಜಾತಕದಲ್ಲಿ ಗುರು ಗ್ರಹಕ್ಕೆ ಯಾರಿಗೂ ಇಲ್ಲದ ಪ್ರಾಶಸ್ತ್ಯವನ್ನ ಕೊಟ್ಟಿದ್ದಾರೆ. ಅಷ್ಟೇ ಯಾಕೆ ನಮ್ಮ ಮನೆಯಲ್ಲಿ ಒಂದು ಮಂಗಳಕಾರ್ಯ ನಡೆಯಬೇಕಿದ್ದರೆ ಗುರುಬಲ ಅತ್ಯವಶ್ಯಕ, ಅದರಲ್ಲೂ ವಿವಾಹ, ಉಪನಯನದಂಥ ಕಾರ್ಯಕ್ರಮಗಳಿಗೆ ಗುರುಬಲವೇ ಜೀವಬಲ. ಇಂಥ ಗುರು ಈಗ ಸ್ಥಾನಬದಲಾವಣೆ ಮಾಡಿದ್ದಾನೆ. ಇಷ್ಟು ದಿನ ವೃಶ್ಚಿಕ ರಾಶಿಯಲ್ಲಿದ್ದ ಗುರು ಈಗ ಧನಸ್ಸು ರಾಶಿಯನ್ನು ಪ್ರವೇಶ ಮಾಡಿದ್ದಾನೆ. 

         ಈ ಗುರುವಿನ ಗೋಚಾರ ದಿಂದ ಕೆಲವು ರಾಶಿಗಳಿಗೆ ಶುಭಫಲ,  ಹಾಗೆಯೇ ಕೆಲವು ರಾಶಿಗಳಿಗೆ ಸಾಮಾನ್ಯ ಪಲಗಳುಂಟಾಗುತ್ತದೆ,  ಹಾಗಾದರೆ  ....ಈ ಫಲಗಳು ಯಾವಾಗ ದೊರೆಯುತ್ತದೆ, ಸ್ಥಾನ.ಬದಲಾವಣೆ ಆದ ತಕ್ಷಣವೇ ಫಲ ದೊರೆಯಬಹುದೇ? ಅಥವಾ  ಯಾವಾಗ? ಈ ಪ್ರಶ್ನೆ ಕಾಡುತ್ತದೆ.  ಪೃಚ್ಛಕರು ನಮ್ಮ ಬಳಿ ಬಂದಾಗ ಗ್ರಹಗಳ ಬದಲಾವಣೆ ಆದ ನಂತರ ಫಲವೆಂದು ಹೇಳುತ್ತೇವೆ.  ಆದರೆ ಗ್ರಹಗಳ ಬದಲಾವಣೆ ಆದ ನಂತರವೂ ಪರಿಸ್ಥಿತಿಯಲ್ಲಿ ಬದಲಾವಣೆ ಆಗದೇ ಇದ್ದಾಗ ... ನಮ್ಮ ಪ್ರಿಡಿಕ್ಷನ್ ತಪ್ಪೇನೂ ಅನ್ನುವ ಅನುಮಾನ ಬರದೇ ಇರೋಲ್ಲ...  ಹಾಗಾದರೆ ಗುರುವಿನ ಫಲ ಯಾವಾಗ..?

     ಒಂದು ಗ್ರಹ ಸ್ಥಾನ ಬದಲಾವಣೆ ಮಾಡಿದ ಕೂಡಲೆ ಫಲ ಕೊಟ್ಟುಬಿಡುತ್ತದೆ ಎಂಬುದು ಕೇವಲ ಕಲ್ಪನೆಯಾಗುತ್ತದೆ. ಒಂದು ಗ್ರಹ ಫಲ ಕೊಡಬೇಕಿದ್ದರೆ ಆ ಗ್ರಹಕ್ಕೆ ಬಲವಿರಬೇಕು. ಅಂದರೆ ಆ ಗ್ರಹ ತನ್ನ ಸ್ವಂತ ಮನೆಯಲ್ಲೋ, ತನ್ನ ಉಚ್ಚರಾಶಿಯಲ್ಲೋ, ತನ್ನ ಮೂಲ ತ್ರಿಕೋಣ ರಾಶಿಯಲ್ಲೋ ಇರಬೇಕು. ಅದನ್ನು ಸ್ಥಾನ ಬಲವೆಂದು ಕರೆಯುತ್ತಾರೆ. ಈಗ ಗುರು ಪ್ರವೇಶವಾಗಿರುವುದು ಧನಸ್ಸು ರಾಶಿಗೆ. ಧನಸ್ಸು ರಾಶಿ ಗುರುವಿನ ಸ್ವಂತ ಮನೆ. ಅಲ್ಲದೆ ಮೂಲ ತ್ರಿಕೋಣ ಸ್ಥಾನವೂ ಹೌದು. ( ಪ್ರಾರಂಭದ 10 ಅಂಶ ( ಡಿಗ್ರಿ ) ಮೂಲ ತ್ರಿಕೋಣ ನಂತರದ 20 ಡಿಗ್ರಿ ಸ್ವಕ್ಷೇತ್ರವಾಗಿದೆ. ) ಹೀಗಾಗಿ ಗುರುವಿಗೆ ಸಂಪೂರ್ಣಬಲ ಬಂದಿದೆ. ಬಲ ಬಂದಿದೆ ಆದರೆ ಶಾಸ್ತ್ರದ ಪ್ರಕಾರ ಗುರು ತನ್ನ ಫಲವನ್ನು ಕೊಡಲಿಕ್ಕೆ ಇನ್ನೂ ಕೆಲವು ದಿನಗಳಕಾಲ ಹೋಗಬೇಕು. ಯಾಕೆಂದರೆ ಅದಕ್ಕೊಂದು ಆಧಾರವನ್ನು ಕೊಡುತ್ತಾರೆ ಪಿತಾಮಹ ವರಾಹಮಿಹಿರರು.

 *" *ದಿನಕರ ರುಧಿರೌ ಪ್ರವೇಶ ಕಾಲೇ ಗುರು ಬೃಗುಜೌ ಭವನಸ್ಯ* *ಮಧ್ಯಯಾತೌ* 
 *ರವಿಸುತ ಶಶಿನೌ ವಿನರ್ಗಮಸ್ಥೌ*ಶಶಿತನಯ: ಫಲದಸ್ತು ಸಾರ್ವಕಾಲಂ "*
ಜ್ಯೋತಿಷದಲ್ಲಿ ಈ ಸೂತ್ರ ಪ್ರಧಾನವಾಗಿದೆ. ಇದರ ಆಧಾರದ ಮೇಲೆಯೇ ಗ್ರಹಗಳು ಫಲಕೊಡುವ ಕಾಲವನ್ನು ನಿರ್ಣಯಿಸಬೇಕಾಗುತ್ತದೆ.  ಈ ಸೂತ್ರ ವಿವರಿಸುವ ಹಾಗೆ ಕೆಲವು ಗ್ರಹಗಳು ಒಂದು ರಾಶಿಯನ್ನು ಪ್ರವೇಶ ಮಾಡಿದ ಕೂಡಲೇ ಫಲಕೊಡಲಿಕ್ಕೆ ಸಮರ್ಥವಾಗಿರುತ್ತವೆ. ಇನ್ನೂ ಕೆಲವು ಕಾಲಾನಂತರದಲ್ಲಿ ಫಲ ಕೊಡಲಿಕ್ಕೆ ಯೋಗ್ಯವಾಗುತ್ತವೆ. ಅವುಗಳನ್ನ ಅರಿಯದೇ ಫಲವನ್ನು ಹೇಳುವುದು ಕಷ್ಟವಾಗುತ್ತದೆ. ಹಾಗಾದರೆ ಯಾವ ಗ್ರಹಗಳು ಯಾವಾಗ ಫಲ ಕೊಡುತ್ತವೆ ಎಂಬುದು ನಮಗೆ ಅರ್ಥವಾಗಬೇಕು. ಮೇಲಿನ ಸೂತ್ರವೇ ವಿವರಿಸುವ ಹಾಗೆ ರಾಶಿಯನ್ನು ಪ್ರವೇಶ ಮಾಡಿದ ತಕ್ಷಣವೇ ಫಲಕೊಡುವ ಗ್ರಹಗಳೆಂದರೆ ರವಿ ಹಾಗೂ ಕುಜರು.

ಇನ್ನೂ ಕೆಲವು ಗ್ರಹಗಳು *ಭವನಸ್ಯ ಮಧ್ಯಯಾತೌ* ಅಂದರೆ, ರಾಶಿಯ ಮಧ್ಯಭಾಗದಲ್ಲಿ ಫಲವನ್ನು ಕೊಡುತ್ತಾರೆ, ಹಾಗೆ ರಾಶಿಯ ಮಧ್ಯಭಾಗದಲ್ಲಿ ಫಲ ಕೊಡುವ ಗ್ರಹಗಳು *ಗುರು ಹಾಗೂ ಶುಕ್ರರು.* ಇನ್ನೂ ಕೆಲವು ರಾಶಿಯ ಕೊನೆಯ ಭಾಗದಲ್ಲಿ ಫಲವನ್ನು ಕೊಟ್ಟು ಮುಂದಿನ ರಾಶಿಗೆ ಹೋಗಲಿವೆ. ಆ ಗ್ರಹಗಳೆಂದರೆ *ಶನಿ ಹಾಗೂ* *ಚಂದ್ರರು* . ಇನ್ನು *ಬುಧ ಗ್ರಹ* ಮಾತ್ರ ಎಲ್ಲ ಕಾಲದಲ್ಲೂ ಅಂದರೆ ರಾಶಿಯ ಪ್ರವೇಶದಿಂದ ಹಿಡಿದು ಮತ್ತೊಂದು ರಾಶಿಗೆ ಹೋಗುವವರೆಗೆ ಎಲ್ಲ ಸಮಯದಲ್ಲೂ ಫಲಕೊಡುತ್ತಾನೆ ಅಂತ. 

        ಅಲ್ಲಿಗೆ ಗುರು ಗ್ರಹ ಪ್ರವೇಶವಾದ ಕೂಡಲೇ ಸಂಪೂರ್ಣ ಫಲವನ್ನು ಕೊಡುವುದಿಲ್ಲ ರಾಶಿಯ ಮಧ್ಯಭಾಗದಲ್ಲಿ ತನ್ನ ಫಲವನ್ನು ಕೊಡಲಿಕ್ಕೆ ಸಂಪೂರ್ಣ ಬಲಿಷ್ಠನಾಗಿರುತ್ತಾನೆ. ರಾಶಿಯ ಮಧ್ಯ ಭಾಗ ಅಂದರೆ ಒಂದು ರಾಶಿಗೆ 30 ಅಂಶ. ಆ 30 ಅಂಶಗಳನ್ನ ಮೂರು ಭಾಗ ಮಾಡಿದರೆ ಅದನ್ನೇ ದ್ರೇಕ್ಕಾಣ ಅಂತಾರೆ. ಮೊದಲ ಭಾಗವನ್ನು ಪ್ರಥಮ ದ್ರೆಕ್ಕಾಣ ವೆಂತಲೂ ದ್ರೇಕ್ಕಾಣಗಳನ್ನು ಕಳೆದು 10 ಡಿಗ್ರಿಯಿಂದ 20 ಡಿಗ್ರಿಯವರಿದೆ ದ್ವಿತೀಯ ದೇಕ್ಕಾಣ ಎಂತಲೂ 20 ಡಿಗ್ರಿಯಿಂದ 30 ಡಿಗ್ರಿಯವರೆಗೆ ತೃತೀಯ ದೇಕ್ಕಾಣ ವೆಂತಲೂ ಕರೆಯುತ್ತಾರೆ.10 ನೇ ಡಿಗ್ರಿಯಿಂದ 20 ನೇ ಡಿಗ್ರಿಯ ಈ ದ್ವಿತೀಯ ದೇಕ್ಕಾಣದ ಭಾಗವನ್ನೇ ರಾಶಿಯ ಮಧ್ಯಭಾಗ ಅಂತ ಕರೀತಾರೆ. ಹಾಗಾಗಿ ಗುರು ಆ ಮಧ್ಯ ದ್ರೇಕ್ಕಾಣಕ್ಕೆ ಬರಲಿಕ್ಕೆ ಇನ್ನೂ ಕೆಲ ದಿನಗಳು ಬೇಕು. ಹಾಗಂತ ಫಲವಿಲ್ಲ ಅಂತಲ್ಲ, ಫಲವಿದೆ ... ಸಂಪೂರ್ಣ ಫಲ ಬರಲಿಕ್ಕೆ ಕಾಯಬೇಕು ಅಷ್ಟೆ. 

ಮುಂದುವರಿಯುತ್ತದೆ......

 *✍️ ಡಾ: B.N. ಶೈಲಜಾ ರಮೇಶ್*

No comments:

Post a Comment