Wednesday, 27 July 2022

ಸಂಖ್ಯಾಶಾಸ್ತ್ರ ಭಾಗ 1

                             ಹರಿಃ ಓಂ
                 ಓಂ ಶ್ರೀ ಗಣೇಶಾಯ ನಮಃ
                 ಓಂ ಶ್ರೀ ಗುರುಭ್ಯೋ ನಮಃ
ಸಂಖ್ಯೆ  ಒಂದು (೧) 

           ಒಂದು  ಎನ್ನುವ  ಸಂಖ್ಯೆಯು  ಎಲ್ಲಾ ಸಂಖ್ಯೆಗಳಿಗೂ  ಆಧಾರವಾಗಿದೆ. ಹಲವು ಒಂದುಗಳು ಸೇರಿದರೇ ಎಲ್ಲಾ ಸಂಖ್ಯೆಗಳು ರೂಪುಗೊಳ್ಳುವುದು. 
ಉದಾ :---೧+೧=೨
                ೨+೧=೩
                ೩+೧=೪
         ಇದೇ ರೀತಿ ಕೋಟಿ ವರೆಗೂ ಇರುವ ಸಕಲ ಸಂಖ್ಯೆಗಳೂ ಕೂಡಿಯೇ ರೂಪುಗೊಳ್ಲುತ್ತವೆ.ಮತ್ತು ಒಂದರಿಂದ ಒಂಬತ್ತರವರೆಗಿರುವ ಸಂಖ್ಯೆಗಳಲ್ಲಿ ಒಂದು ಎಂಬ ಸಂಖ್ಯೆಯ ಮಹತ್ವ ಅದಿಕ. ನಿತ್ಯ-ಸತ್ಯ-ಸನಾತನವಾಗಿ ಎಂದೆಂದಿಗೂ ನಿಂತು ನೆಲೆಸಿರುವ ಪರಬ್ರಹ್ಮ ವಸ್ತುವು ಒಂದೇ. ಲೋಕವೆಲ್ಲಾ ಅದೇ ಒಂದಾದ ಪರಬ್ರಹ್ಮವೆಂಬ ವಸ್ತುವಿನಿಂದಲೇ ಸೃಷ್ಟಿಯಾಗಿದೆ. ಹೀಗೆ ಹಲವು ಬಗೆಗಳಾಗಿ ತೋರಿಬರುವ ವಸ್ತುವು ಎಲ್ಲವೂ ಅದೇ ಒಂದರಲ್ಲಿ ಅಡಗಿ ಐಕ್ಯವಾಗುತ್ತದೆ. ಆದುದರಿಂದಲೇ,  ಸಂಖ್ಯೆಗಳಲ್ಲಿ  ಒಂದು  ಎಂಬುದು ಬಹಳ ಮಹತ್ವವುಳ್ಳದ್ದಾಗಿದೆ. ಇಂದಿನ ಪ್ರಪಂಚದಲ್ಲೆಲ್ಲಾ   ಇಂಗ್ಲೀಷ್ ದಿನಾಂಕಗಳೇ ವ್ಯವಹಾರದಲ್ಲಿ ಇರುವದರಿಂದಲೂ ಪಾಶ್ಚಾತ್ಯ ಮತ್ತು ಪೌರ್ವಾತ್ಯ ದೇಶದ ಸಂಖ್ಯಾಶಾಸ್ತ್ರ ನಿಪುಣರೂ,ರೇಖಾಶಾಸ್ತ್ರ ಪಾರಂಗತರೂ ಇಂಗ್ಲೀಷು ತಿಂಗಳಿನ ದಿನಾಂಕಗಳು ಇವುಗಳನ್ನೇ ಆಧಾರವಾಗಿಟ್ಟುಕೊಂಡು ಮಾನವನ ಜೀವನದ ಫಲಿತಾಂಶವನ್ನು ಹೇಳುತ್ತಿರುವುದರಿಂದಲೂ ನಾವು ಕೂಡ ಅದೇ ಆಂಗ್ಲ ದಿನಾಂಕ,ಮಾಸ,ವರ್ಷಗಳನ್ನೇ ಆಧಾರವಾಗಿಟ್ಟುಕೊಂಡು ಫಲಗಳನ್ನು ನೋಡಬೇಕು.
         ಒಂದು ಸಂಖ್ಯೆಯವರು ಜನವರಿಯಿಂದ ಡಿಸೆಂಬರ್ ವರೆಗಿನ ಹನ್ನೇರಡು ತಿಂಗಳಿನಲ್ಲಿ ಯಾವ ತಿಂಗಳಲ್ಲಾದರೂ ಸರಿ ೧,೧೦,೧೯,೨೮ ಈ ದಿನಾಂಕದಲ್ಲಿ ಜನಿಸಿದವರನ್ನು ೧ ಸಂಖ್ಯೆಯುಳ್ಲವರೆಂದು  ತಿಳಿಯಬೇಕು.  ಗ್ರಹಕ್ಕೆ ಸಂಬಂದ ಪಟ್ಟ0ತೆ  ಸೂರ್ಯನೇ  ಮೊದಲಾದ ಒಂಬತ್ತು  ಗ್ರಹಗಳಲ್ಲಿ  ಒಂದನೆ ಸಂಖ್ಯೆಗೆ ಸೂರ್ಯನು ಅಧಿಪತಿಯಾಗಿದ್ದಾನೆ.  ಅವನು ನವಗ್ರಹಗಳ ನಾಯಕನು.  ಸಮಸ್ತ ಜೀವರಾಶಿಗಳಿಗೂ ಸೂರ್ಯನೇ ಆತ್ಮಸ್ವರೂಪನೆಂದು  ಶಾಸ್ತ್ರಗಳು ಹೇಳುತ್ತವೆ. ಆದುದರಿಂದ ಗ್ರಹನಾಯಕನಾದ ಸೂರ್ಯನು ಸಂಖ್ಯೆಗಳಲ್ಲಿ  ಪ್ರಥಮವಾದ ಒಂದನೇ ಸಂಖ್ಯೆಗೆ ಸೇರಿದವನೆಂದು ಹೇಳುವುದು ಸಮಂಜವಾಗಿದೆ.
           ಒಂದನೇ  ಸಂಖ್ಯೆಗೆ ಸೇರಿದ ಗ್ರಹವು ಸೂರ್ಯ ನಾಗಿರುವುದರಿಂದ ಆ ಸಂಖ್ಯೆಯ ದಿನ ಜನಿಸಿದವರಲ್ಲಿ  ಜ್ಯೋತಿಷ್ಯ ಶಾಸ್ತ್ರ ರೀತ್ಯ ಸೂರ್ಯಗ್ರಹಕ್ಕೆ ಕೊಟ್ಟಿರುವ ಸ್ವರೂಪ, ಸ್ವಭಾವ, ಗುಣಗಳೆಲ್ಲಾ ಇರುತ್ತವೆ.
Picture source : Internet/ social media

    ರೂಪ ಮತ್ತು ಆಕಾರ  :---
         ಒಂದನೆ ಸಂಖ್ಯೆಯವರು ಸಾಮಾನ್ಯವಾದ ಎತ್ತರವುಳ್ಳವರಾಗಿರುವರು.ಇವರಿಗೆ ದೀರ್ಘವಾದ ಭುಜಗಳೂ ವಿಶಾಲವಾದ ಹಣೆಯೂ ಇರುವುದು.ತಲೆ ಕೂದಲು ತೆಳುವಾಗಿ  ಹೊಳಪಿನಿಂದ ಕೂಡಿ ನಯವಾಗಿ ಇರುವುದು.  ಅಂದವಾಗಿ ಬಿಲ್ಲಿನಂತೆ ಬಾಗಿದ ಹುಬ್ಬುಗಳು ದೃಡವಾದ ದಂತಪಂಕ್ತಿಯು ಇರುವುವು.
     ಗುಣ ನಡತೆಗಳು  :---
          ನಮ್ಮ ಸೌರಮಾನ ದಲ್ಲಿ ಸೂರ್ಯನೇ ಎಲ್ಲ ಗ್ರಹಗಳ ಅಧಿಪತಿಯಾಗಿರುವುದರಿಂದ, ಬಲಿಷ್ಠನಾಗಿಯೊ ಇರುವುದರಿಂದ  ಈ ಸಂಖ್ಯೆಯಲ್ಲಿ  ಜನಿಸಿದವರು  ಸ್ವಾತಂತ್ರ್ಯ ಪ್ರಿಯರು,  ಇತರರ ಆಶ್ರಯದಲ್ಲಿರಲು ಇಷ್ಟಪಡುವುದಿಲ್ಲ,  ಯಾವುದೇ ಕೆಲಸಕಾರ್ಯಗಳನ್ನು ಸ್ವತಂತ್ರ ವಾಗಿಯೇ ಮಾಡಲಿಚ್ಛಿಸುತ್ತಾರೆ, ಹಠವಾದಿ,  ಧೈರ್ಯ ಶಾಲಿ, ಇತರರ ಮೇಲೆ ಅಧಿಕಾರ ಚಲಾಯಿಸಲು ಬಯಸುತ್ತಾರೆ,  ಇವರದು ನೇರ ಹಾದಿ, ಸಿಂಹದ ಹಾಗೆ ಧೈರ್ಯ,ಸಾಹಸ ಉಳ್ಳವರು, ತಮ್ಮ ವಿಚಾರವನ್ನು ಧ್ಯೇಯವನ್ನೂ ಬಿಟ್ಟುಕೊಡದೆ ಸಾಧಿಸುವ ಸ್ವಭಾವವುಳ್ಳವರು.ತಾವು ಅನ್ಯರ ಅದೀನರಾಗಿರುವುದಕ್ಕಿಂತಲೂ ತಮಗೇ ಇತರರು ಅಧೀನರಾಗಿರಬೇಕೆಂಬ ಮನೋಭಾವವುಳ್ಳವರು. ಎಲ್ಲದರಲ್ಲೂ ತಾನೇ ಮುಂದಾಗಿ ಮುಂದಾಳಾಗಿ ಕೆಲಸ-ಕಾರ್ಯಗಳನ್ನು ಸಾಧಿಸುವ ಸಾಮರ್ಥ್ಯವುಳ್ಳವರು. ಸೇವಾವೃತ್ತಿಗಿಂತ ಸ್ವತಂತ್ರ ಜೀವನ ನಡೆಸುವುದೇ ಇವರಿಗೆ ಪ್ರಿಯವಾದುದು. ಇವರು ಹೆಚ್ಚು ಮಾತನಾಡುವವರಲ್ಲ, ಮಿತಭಾಷಿಗಳು    ಮಾತನಾಡಬೇಕಾಗಿ ಬಂದರೆಮಾತ್ರ ಭಾವ, ಅರ್ಥ, ಹಾಸ್ಯರಸ  ಸೇರಿಸಿ  ಮಾತನಾಡುವರು. ಇವರನ್ನು ಸಕಲ ಕಲಾವಿದರೆಂದು ಹೇಳಬಹುದು.   ಯಾವ ಕಲೆಯಾದರೂ ಸರಿ ಅದನ್ನು ಬೇಗನೆ ಗ್ರಹಿಸುವ ಶಕ್ತಿ, ಉತ್ಸಾಹ ಮತ್ತು ನೈಪುಣ್ಯತೆ ಇವರಲ್ಲಿ ಕಂಡುಬರುತ್ತದೆ,  ಇವರದು  ನಿರ್ಮಲ ಹೃದಯ ಕಪಟ ಇಲ್ಲದೆ ಸ್ನೇಹಭಾವದಿಂದ ಎಲ್ಲರೊಂದಿಗೆ ಒಡನಾಡುವರು.ಇವರಿಗೆ ಯಾವುದನ್ನೂ ರಹಸ್ಯವಾಗಿ ಮನಸ್ಸಿನಲ್ಲಿ ಇಟ್ಟುಕೊಳ್ಳುವುದು ಅಸಾದ್ಯವಾದುದರಿಂದ ಎಲ್ಲವನ್ನೂ ಇತರರಲ್ಲಿ ಹೇಳಿಬಿಡುತ್ತಾರೆ. ತಾವು ಮಾಡಿದ ತಪ್ಪು-ಸರಿಗಳನ್ನು ಇತರರಿಗೆ ಹೇಳಿ ಯಾವಾಗಲೂ ತಮ್ಮ ಮನಸ್ಸನ್ನು ಹಗುರವಾಗಿಟ್ಟುಕೊಳ್ಳಬೇಕೆಂಬ ಪ್ರಯತ್ನದಲ್ಲಿಯೇ ಇರುವರು.ತಾವು ಯಾವುದೇ ಕಳಂಕವಿಲ್ಲದ ನಿರ್ಮಲ ಮನಸ್ಸಿನವರಾಗಿರುವುದರಿಂದ ಸುಳ್ಳುಹೇಳುವವರನ್ನು ,ಮೋಸಮಾಡುವವರನ್ನೂ ಕಂಡರೆ ಇವರಿಗಾಗದು.  ತಮಗೆ ತಿಳಿದಿದ್ದನ್ನು  ದಯಾ -  ದಾಕ್ಷಿಣ್ಯ ವಿಲ್ಲದೇ ಇತರರಿಗೆ ತಿಳಿಸುತ್ತಾರೆ,   ಹಾಗೆಯೇ  ಇತರರ ತಪ್ಪುಗಳನ್ನೂ  ಯಾವುದೇ ದಯಾ - ದಾಕ್ಷಿಣ್ಯ ವಿಲ್ಲದೆ  ನೇರವಾಗಿ ತಿಳಿಸುತ್ತಾರೆ,  ಹಾಗಾಗಿ  ಇವರಿಗೆ  ಶತ್ರುಗಳು ಹೆಚ್ಚು,  ಆದರೆ ಅದಕ್ಕೆಲ್ಲಾ ಭಯಪಡುವ ಪ್ರವೃತ್ತಿ ಇಲ್ಲ.
          ಇವರು ನಿಸರ್ಗಾರಾಧಕರು,  ಉತ್ತಮ ಪರಿಸರ ಸುಂದರ ನಿಸರ್ಗ ಧಾಮದಲ್ಲಿ ವಾಸಿಸಲು ಕಾಲ ಕಳೆಯಲು ಇಷ್ಟಪಡುತ್ತಾರೆ,  ಹಾಗೆಯೇ  ಒಂಟಿತನ ವನ್ನೂ  ಇಷ್ಟಪಡುತ್ತಾರೆ,  ಇವರು ಸದಾ ಚಟುವಟಿಕೆ ಯಿಂದರಲು  ಬಯಸುತ್ತಾರೆ,  ಸೋಮಾರಿತನ ಇವರಿಗಾಗದು,  ತನಗೆ  ಏನೇ ಕಷ್ಟ ಬಂದರೂ ಇತರರಲ್ಲಿ  ಹೇಳಿಕೊಳ್ಳುವ  ಗುಣವಿರುವುದಿಲ್ಲ, ಇನ್ನೊಬ್ಬರ  ಸಹಾಯವನ್ನೂ  ಅಪೇಕ್ಷೆ ಪಡುವುದಿಲ್ಲ,ತಮಗೆ ಸಹಾಯ ಮಾಡಬೇಕೆಂದು ಪರರ ಬಳಿ ಹೋಗುವುದು ಇವರ ಸ್ವಭಾವಕ್ಕೆ ವಿರುದ್ದವಾದುದು,  ಆದರೆ ಇವರ ಪರಿಸ್ಥಿತಿ ನೋಡಿ ಇತರರು ಸಮಯಕ್ಕೆ ಸರಿಯಾಗಿ ಸಹಾಯ ಮಾಡಿದರೆ ಅದನ್ನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸುವರು. 
         ಬಿಳಿಯ ವಸ್ತ್ರವನ್ನು ಧರಿಸುವುದೆಂದರೆ ಇವರಿಗೆ ಬಹಳಪ್ರೀತಿ ಜನಸಮುದಾಯದೊಂದಿಗೆ ಇರುವುದಕ್ಕಿಂತಲೂ ಏಕಾಂತ ವಾಸವು ಇವರಿಗೆ ಪ್ರಿಯವಾದುದು  ಆಲಸ್ಯ ಮಾಡುವವರಲ್ಲ, ಸಮಯ ವ್ಯರ್ಥ ಮಾಡುವವರಲ್ಲ ,  ಪ್ರಯಾಣ ಮಾಡುವುದರಲ್ಲೂ  ಪರ್ವತ, ಬೆಟ್ಟ ಗುಟ್ಟ , ಪ್ರಪಾತ ಮೊದಲಾದ ಪ್ರಾಕೃತಿಕ ದೃಶ್ಯಗಳನ್ನು ನೋಡುವುದೆಂದರೆ ಇವರಿಗೆ ಎಲ್ಲಿಲ್ಲದ ಉತ್ಸಾಹ. ದೈವ ನಂಬಿಕೆಯುಳ್ಳ ಆಸ್ತಿಕರು ಇವರು. 
        ಗೃಹಸ್ಥ ಜೀವನ :---
       ಇವರಿಗೆ ವಯಸ್ಸಾದ ಮೆಲೆಯೇ ವಿವಾಹವು ಆಗುವುದು.ಇವರ ಸಾಂಸಾರಿಕ ಜೀವನವು ಸಾಕಷ್ಟು ಸುಖಮಯವಾಗಿ ಇರುವುದಿಲ್ಲ,  ಯಾವಾಗಲೂ ಸತಿ-ಪತಿಗಳಲ್ಲಿ ಯಾವುದಾದರೊಂದು ಮನಸ್ತಾಪವು ಬರುತ್ತಲೇ ಇರುವುದರಿಂದ ಗೃಹಶಾಂತಿ-ಸಮಾಧಾನವು ನೆಲೆಸಿರಲಾರದು.  ಮುಖ್ಯವಾಗಿ ಈ ಒಂದನೆ  ಸಂಖ್ಯೆಯವರು ಇದೇ ಒಂದನೆ ಸಂಖ್ಯೆಯುವರೊಡನೆ  ವಿವಾಹವಾದರೆ, ಭಿನ್ನಾಭಿಪ್ರಾಯ ಹೆಚ್ಚಾಗುವುವು.  ಏಕೆಂದರೆ ಸ್ವತಂತ್ರ ವಾದಿಗಳು ಇತರರ ಆಶ್ರಯ ದಲ್ಲಿರಲು ಇಷ್ಟಪಡುವುದಿಲ್ಲ , ಪರಸ್ಪರ ಮಾತಿಗೆ ಬೆಲೆ ಕೊಡದೆ  ಕಲಹಗಳಾಗುವ ಸಂಭವವೇ ಹೆಚ್ಚು,  ಆದುದರಿಂದ ಒಂದು ಸಂಖ್ಯೆಯವರು ಪುನಃ ಒಂದು ಸಂಖ್ಯೆಯವರನ್ನು ವಿವಾಹವಾಗಬಾರದೆಂದು ಈ ಶಾಸ್ತ್ರವು ವಿಚಾರಪೂರ್ವಕವಾಗಿ ಎಚ್ಚರಿಸುತ್ತದೆ.
       ಆರ್ಥಿಕ ಪರಿಸ್ಥಿತಿ  :---
         ಇವರ ಆರ್ಥಿಕ ಪರಿಸ್ಥಿತಿಯು ತೃಪ್ತಿಕರವಾಗಿರುವುದಿಲ್ಲ,  ಯಾವಾಗಲೂ ಹಣಕ್ಕಾಗಿ ಕಷ್ಟಪಟ್ಟು ತಮ್ಮ ಕೊರತೆಗಳನ್ನು ನೀಗಿ   ಅವಶ್ಯಕತೆಗಳನ್ನು   ಪೂರ್ತಿ ಮಾಡಿಕೊಳ್ಳಲಾರದೆ ಪರಿತಪಿಸುವ   ಪರಿಸ್ಥಿತಿಯು ಒದಗಿ ಬರುವುದು.  ಸಮಯಕ್ಕೆ ಸಹಾಯವಾಗುವಂತೆ ಇವರ ಬಳಿ ಕೂಡಿಟ್ಟ ಹಣವು ಇರಲಾರದು  ,  ಹಣವನ್ನು ಅಡ್ಡಾದಿಡ್ಡಿ ಖರ್ಚು ಮಾಡುತ್ತಾರೆ,  ಆಡಂಬರ ಜೀವನ ನಡೆಸಲು ಸಾಕಾಗುವಷ್ಟು ಸಂಪಾದನೆ ಇರುತ್ತದೆ,  ಕೆಲವು ಸಲ ಹಣ ಹೊಂದಿಸಲು ಕಷ್ಟ ಪಡಬೇಕಾಗುತ್ತದೆ,  ಉಳಿತಾಯ ಮಾಡಲಾರರು,ಆದರೆ ಇವರ ಆರ್ಥಿಕ ಪರಿಸ್ಥಿತಿಯು ತೃಪ್ತಿಕರವಾಗಿ ಇರದಿದ್ದರೂ ಇವರ  ವ್ಯಕ್ತಿತ್ವ ನಡತೆಯಿಂದ ಇವರು ಧನವಂತರಂತೆಯೇ ಕಾಣುತ್ತಾರೆ,  ದೈವಾನುಗ್ರಹವಿರುತ್ತದೆ, .ಜೀವನದ ಉತ್ತರಾರ್ಧದಲ್ಲಿ  ಇವರು ಒಂದು ರೀತಿಯಲ್ಲಿ ಸುಖಮಯವಾದ  ಜೀವನವನ್ನು ನಡೆಸುವರು, ಅಂದರೆ ಸುಮಾರು ೪೦ ವರ್ಷಗಳ ನಂತರ ಇವರ ಉದ್ಯೋಗದಲ್ಲಿ ,ವ್ಯಾಪಾರದಲ್ಲಿ ಸ್ಥಿರವಾಗಿ ನಿಂತು ಜೀವನವು ಸುಗಮವಾಗಿ ಸಾಗುವುದು,  ಅಲ್ಲಿಯವರೆವಿಗೂ  ಆರ್ಥಿಕ  ಸಂಕಷ್ಟ ವಿರುತ್ತದೆ.
        ದೇಹಾರೋಗ್ಯ :---
          ಒಂದು ಸಂಖ್ಯೆಯುಳ್ಲವರು ಆಹಾರದ ವಿಷಯದಲ್ಲಿ ಮುಂಜಾಗ್ರತೆ ಉಳ್ಳವರಾಗಿರುತ್ತಾರೆ, ಆದುದರಿಂದ ಇವರಿಗೆ ಹೊಟ್ಟೆನೋವು ಮೊದಲಾದ ಕಾಯಿಲೆಯು ಬರುವುದಿಲ್ಲ.ಆದರೂ ಕೂಡ ಇವರುಗಳಿಗೆ ಹಲವುವೇಳೆ ಹೃದಯ ವೇದನೆಯಿಂದ ನರಳುವರು, ಇವರು ಮಾನಸಿಕ ವಾಗಿ    ಬಲಾಢ್ಯರಾದರೂ,  ಕ್ರಮೇಣ  ನರಗಳು ಬಲಹೀನವಾಗಿ ಮಾನಸಿಕ ಉದ್ವೇಗ ಪಡುತ್ತಾರೆ.
ಸಾಮಾನ್ಯವಾಗಿ ಇವರಿಗೆ ಹೃದಯ ಮತ್ತು  ರಕ್ತ ಸಂಬಂಧಿ  ಕಾಯಿಲೆಗಳು ಬರುವ  ಸಾಧ್ಯತೆ ಗಳು  ಜಾಸ್ತಿ,  ರಕ್ತ ಶುದ್ಧೀಕರಣ ಮತ್ತು ರಕ್ತ ಸಂಚಾರ ದ  ವಿಷಯದಲ್ಲಿ  ಎಚ್ಚರಿಕೆ ವಹಿಸಬೇಕು, ಅಲ್ಲದೆ  ವಾತ, ಪಿತ್ತ, ಶ್ಲೇಷ್ಮ  ಎಂಬ ತ್ರಿಧಾತುಗಳಲ್ಲಿ  ಪಿತ್ತಕ್ಕೆ ಸಂಬಂಧಪಟ್ಟ  ರೋಗಗಳು, ಉಷ್ಣಪ್ರಕೋಪವೂ ಇವರಿಗೆ  ಆಗಾಗ  ತಲೆದೋರುತ್ತದೆ. ಈ ಒಂದನೇ ಸಂಖ್ಯೆಯವರಿಗೆ  ದೃಷ್ಟಿದೋಷವೂ ಇರಬಹುದುದಾದರಿಂದ  ಬಹುಮಂದಿ ಸಣ್ಣವಯಸ್ಸಿನಲ್ಲೇ  ಕನ್ನಡಕಗಳನ್ನು ಹಾಕಿಕೊಳ್ಳಬೇಕಾದ  ಸಮಯ .ಬರಬಹುದು.
     ಉದ್ಯೋಗ ಮತ್ತು ವ್ಯಾಪಾರ :---
        ಒಂದನೇ  ಸಂಖ್ಯೆಯುಳ್ಳವರು ಉದ್ಯೋಗದಲ್ಲಿದ್ದರೆ ಆಫೀಸು ಮೇನೇಜರ್ ಅಥವ  ಐ ಎ ಎಸ್ ನಂತಹ ದೊಡ್ಡ ಅಧಿಕಾರಿಯಾಗಿಯೋ ಧಾರ್ಮಿಕ ಸಂಸ್ಥೆಗಳಲ್ಲಿ ಟ್ರಸ್ಟಿಗಳಾಗಿಯೋ ದೊಡ್ಡ ಅಧಿಕಾರವುಳ್ಳ ಒಂದು ಪದವಿಯಲ್ಲಿದ್ದು ಅದನ್ನು ಚೆನ್ನಾಗಿ ನಿರ್ವಹಿಸುವವರಾಗಿ ಇರುವರು.ಇವರು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಸರಕಾರದ ಉದ್ಯೋಗದಲ್ಲಿಯೋ ಅಥವ ಸರಕಾರದೊಂದಿಗೆ ನಿಕಟಸಂಬಂಧವನ್ನು ಇಟ್ಟುಕೊಂಡಿರುವ ಉದ್ಯೋಗದಲ್ಲಿಯೋ ಇರುತ್ತಾರೆ. ಸಾಮಾಜಿಕ ಕೇಂದ್ರ,  ಸಹಕಾರ ಸಂಸ್ಥೆ ಗಳು,  ಸಂಘ ಸಂಸ್ಥೆಗಳು , ಧಾರ್ಮಿಕ  ಕೇಂದ್ರಗಳಲ್ಲಿ,  ವಿದೇಶ ಸಂಬಂಧವಾದ  ಆಮಧ್ಯ ರಫ್ತು,  ಒಳಾಂಗಣ ವಿನ್ಯಾಸ ಗಳಲ್ಲೂ,  ಸಂಶೋಧನೆ ಗಳು,  ಮುಂದಾಳತ್ವ ವಿರುವ  ಇಲಾಖೆಯ ಲ್ಲಿ  ಉನ್ನತ ಸ್ಥಾನ,  ವೈದ್ಯಕೀಯ ವೃತ್ತಿ ( ಸರ್ಜನ್ )  ಆಗಿ,  ವಿದ್ಯುತ್ ಸಂಬಂಧ ಪಟ್ಟ ವೃತ್ತಿ ಯಲ್ಲೂ  ಮುಂದೆ ಬರುತ್ತಾರೆ.
          ಸೂರ್ಯನ ಕಾಲ(ಸಮಯ) ಮಾರ್ಚ್ 21 ರಿಂದ ಏಪ್ರಿಲ್ 21 ನೇ ತಾರೀಖು, ಆ ನಂತರ ಜುಲೈ ೨೨ರಿಂದ ಆಗಸ್ಟ್ ೨೨ ವರೆಗಿನ  ಒಂದುತಿಂಗಳು  ಕಾಲವು ಸೂರ್ಯನಿಗೆ  ಸಂಬಂಧಪಟ್ಟ  ಕಾಲವು.  ಒಂದನೇ ಸಂಖ್ಯೆಯುವರು ಈ ಒಂದು ತಿಂಗಳ ಅವಧಿಯಲ್ಲಿ ಜನಿಸಿದವರಾಗಿದ್ದರೆ ಬಹಳ ಅದೃಷ್ಟಶಾಲಿಗಳಾಗಿ ಇರುತ್ತಾರೆ.  ಭಾನುವಾರವು  ಸೂರ್ಯನಿಗೆ ಸಂಬಂಧಪಟ್ಟದ್ದು,   ಕಾಲ ಪರಿಮಾಣದಲ್ಲಿ  ಆರುತಿಂಗಳ  ಕಾಲವು ಸೂರ್ಯನಿಗೆ ಸೇರಿದೆ. ಸೂರ್ಯನು  ಹಗಲಲ್ಲಿ ಶಕ್ತಿವಂತನಾಗಿರುತ್ತಾನೆ.  ಈ ವಿಷಯಗಳನ್ನು  ಒಂದನೆ ಸಂಖ್ಯೆಯುಳ್ಳವರಿಗೆ ಅನ್ವಯಿಸಿಕೊಳ್ಳಬೇಕು.
      ಸೂರ್ಯನ ದಿಕ್ಕು ಮತ್ತು ಪ್ರದೇಶ :---
       ಸೂರ್ಯನ ದಿಕ್ಕುಪೂರ್ವ, ಪ್ರಾರ್ಥನಾ ಮಂದಿರ, ದೇವಸ್ಥಾನ  ಸೂರ್ಯನಿಗೆ ಸಂಬಂಧಪಟ್ಟ ಪ್ರದೇಶಗಳು. ಯಾವ ಕಾರ್ಯವನ್ನೂ ಯಾವ ಪ್ರಯಾಣವನ್ನೂ  ಕೈಗೊಳ್ಳಬೇಕಾದರೂ ಪೂರ್ವಾಭಿಮುಖವಾಗಿ  ಆರಂಭಿಸುವುದು ಉತ್ತಮ, ಕಾರ್ಯಾಲಯಗಳಲ್ಲಿ ಪೂರ್ವಾಭಿಮುಖವಾಗಿ ಕುಳಿತುಕೊಳ್ಳುವುದರಿಂದ ಅಭಿವೃದ್ಧಿ ಯುಂಟಾಗುವುದು.
       ಅದೃಷ್ಟ ರತ್ನಗಳು :---
     ಸೂರ್ಯಗಹದ  ಅನುಗ್ರಹ  ಪಡೆಯಲು ಅಂದರೆ ಸೂರ್ಯ ಪ್ರೀತ್ಯರ್ಥವಾಗಿ ಮಾಣಿಕ್ಯ ರತ್ನವನ್ನು ಧರಿಸಿಕೊಳ್ಳಬೇಕು. ಮಾಣಿಕ್ಯವನ್ನು ಉಂಗುರದಲ್ಲಿ  ಆಗಲಿ ಸರದಲ್ಲಾಗಲಿ ಇಟ್ಟು ಧರಿಸುವುದರಿಂದ ಇಚ್ಚಿಸಿದ ಎಲ್ಲಾ ಕಾರ್ಯಗಳು ನೆರೆವೇರುವುದು ಮತ್ತು  ಆರೋಗ್ಯ  ಉತ್ತಮವಾಗುವುದು, ತಾಮ್ರ ಲೋಹವು ಸೂರ್ಯನಿಗೆ ಸಂಬಂಧಪಟ್ಟ ಲೋಹವಾಗಿದೆ.
ಅದೃಷ್ಟದ ವರ್ಣ(ಬಣ್ಣ) :---
         ಬೆಳಗಿನ  ಸೂರ್ಯನ ಕಾಂತಿಯಂತೆ ಹಳದಿ, ಕೆಂಪು ಮಿಶ್ರವಾದ ವರ್ಣವೇ ಸೂರ್ಯಗ್ರಹದ ವರ್ಣವು.ಆದುದರಿಂದ ಈ ಬಣ್ಣದ ವಸ್ತ್ರಾಭರಣಗಳನ್ನು ಧರಿಸಿದರೆ ಕಾರ್ಯದಲ್ಲಿ ಜಯವಾಗುವುದು.
    ಅನುಕೂಲ ದಿನಾಂಕಗಳು :----
     ಒಂದನೇ  ಸಂಖ್ಯೆಯವರಿಗೆ ಎಲ್ಲಾ ತಿಂಗಳಲ್ಲಿಯೂ ೧,೪,೧೦.೧೯.೨೨,೨೮(೧,೪) ಈ ದಿನಾಂಕಗಳು ಬಹಳ ಅನುಕೂಲಕರವಾಗಿರುವುವು. ಯಾವುದೇ ಕಾರ್ಯ ಆರಂಭಿಸಲು ಈ ದಿನಾಂಕಗಳು ಸೂಕ್ತ.
ಅನಾನುಕೂಲ ದಿನಾಂಕಗಳು:---
          ಎಲ್ಲ ತಿಂಗಳಲ್ಲಿನ ೮,೧೭,೨೬ ಈ ದಿನಾಂಕಗಳು ಅನಾನುಕೂಲವಾದವು.(೮) ಸಂಖ್ಯೆಯು ಅನಾನುಕೂಲ ವಾಗಿರುತ್ತದೆ ಆದುದರಿಂದ ಈ ದಿನಾಂಕದಲ್ಲಿ ಯಾವುದೇ ಶುಭಕಾರ್ಯಾರಂಭಮಾಡಬಾರದು.
      ಗ್ರಹಪ್ರೀತಿ :---
      
         ಒಂದನೆ ಸಂಖ್ಯೆಯವರಿಗೆ ಸೂರ್ಯ ಆರಾಧ್ಯ ದೈವ,  ಪ್ರತಿದಿನ  ಸೂರ್ಯೋದಯ ದ ದರ್ಶನ,  ಮತ್ತು  ಸೂರ್ಯ ನಮಸ್ಕಾರ ಮಾಡಬೇಕು,  ಸೂರ್ಯ ಗ್ರಹ  ತೃಪ್ತಿಗಾಗಿ ಆದಿತ್ಯ ಹೃದಯ ಸ್ತೋತ್ರ ಪಾರಾಯಣವನ್ನು ಮಾಡಬೇಕು. ಅದರಿಂದ ಆರೋಗ್ಯಭಾಗ್ಯವೂ ಇಷ್ಟಾರ್ಥ ಸಿದ್ದಿಯು ಉಂಟಾಗುತ್ತದೆ.
          ಒಂದನೇ ಸಂಖ್ಯೆಯವರಿಗೆ  ತೊಂದರೆ ಯಾದಾಗ, ಮನಸ್ಸು  ಸರಿಯಿಲ್ಲದಾಗ " ಓಂ ಹ್ರೀಂ ಹ್ರೀಂ ಸೂರ್ಯಾಯ ನಮಃ "   ಈ ಮಂತ್ರ ಪಠಣೆ ಮಾಡಿದಾಗ  ಶೀಘ್ರ ಶುಭಫಲ ದೊರೆಯುತ್ತದೆ.
ಶಿವನ ದೇವಸ್ಥಾನ ಸಂದರ್ಶನ,  ಗೋಧಿ ದಾನ ಇವುಗಳೂ ಉತ್ತಮ ಫಲ ನೀಡುತ್ತವೆ.
   ✍  ಡಾ :  B. N.  ಶೈಲಜಾ ರಮೇಶ್

Tuesday, 19 July 2022

---: ಶನಿ ಗ್ರಹ :---

---:  ಶನಿ  ಗ್ರಹ  :---
ಓಂ  ಶ್ರೀ ಗಣೇಶಾಯನಮಃ
ಓಂ  ಶ್ರೀ  ಗುರುಭ್ಯೋ ನಮಃ

--:  ಶನಿ  ಗ್ರಹ  :--

Picture source: Internet/ social media

     "  ಮಂದೋ  ಮುದ0  ಸರ್ವದಾ "   ಎಂಬಂತೆ   ಶನಿಯು  ಸರ್ವಕಾಲದಲ್ಲಿಯೂ  ಪ್ರೀತಿಯನ್ನು ಹೊಂದಿದ್ದು  ಧೀರ್ಘಆಯುಷ್ಯವನ್ನು   ನೀಡಿದರೆ  ಭೋಗಭಾಗ್ಯಗಳನ್ನು  ಹೊಂದಲು  ಸಾಧ್ಯ, ಆದುದರಿಂದ  ಆಯುರ್ದಾಯಕ್ಕೆ  ಕಾರಣ  ಶನಿಯು.

     ವಿಭವ   ಸಂವತ್ಸರದ  ಮಾಘಮಾಸ  ಕೃಷ್ಣಪಕ್ಷದ  ಚತುರ್ದಶಿ  ಜನನ. (  ಕೆಲವರ ಪ್ರಕಾರ ವೈಶಾಖ ಕೃಷ್ಣ  ಚತುರ್ದಶಿ ) .   ಜನ್ಮ ನಕ್ಷತ್ರ  --  ಧನಿಷ್ಠ,   ಗೋತ್ರ  --  ಕಾಶ್ಯಪ,  ಶರೀರ --  ಗಾಢ  ನೀಲವರ್ಣ, ಹಸ್ತಸಂಖ್ಯೆ  -- 8 , ಗ್ರಹಮಂಡಲದಲ್ಲಿ ಪಶ್ಚಿಮ  ಸ್ಥಾನ,  ಧಾನ್ಯ  --  ತಿಲ ( ಕರಿ ಎಳ್ಳು ) ,  ವಸ್ತ್ರ  --  ನೀಲ ( ಕಪ್ಪು ),  ರತ್ನ. --  ನೀಲಮಣಿ,  ಆಯುಧಗಳು --  ಶೂಲ,  ಛಾಪ, ಬಾಣ, ನರಗಳು,   ನೀಲರಥ, ಧನುರಾಕಾರ ಮಂಡಲ,  ಪತ್ನಿಯರು  -- ಜೇಷ್ಠ  ಮತ್ತು  ನೀಲದೇವಿ,  ವಾಹನ  --ನೀಲ ಗೃದ್ರ, ಅಧಿದೇವತೆ  --  ಯಮ,  ಅಭಿಮಾನದೇವತೆ  --  ತ್ರಿಮೂರ್ತಿಗಳು,  ಸೌರಾಷ್ಟ್ರಕ್ಕೆ  ಅಧಿಪತಿ, ಕರ್ಮಕಾರಕ,  ದುಃಖಕಾರಕ,  ಆಯುಷ್ಯಕಾರಕ,  ನಾಶಕಾರಕ,  ಮೃತ್ಯ ಕಾರಕ,  ಸೇವಕನು , ಪಾಪಗ್ರಹ,  ಮಂದಗ್ರಹ,  ಪಕ್ಷಿಗ್ರಹ,  ನಪುಂಸಕಗ್ರಹ,  ಅಂತ್ಯಜ,  ಕೃಷವಾದ ಶರೀರ,  ಬೆಕ್ಕಿನಂತೆ ವಿಶಾಲವಾದ  ಹಳದಿಬಣ್ಣದ  ಕಣ್ಣುಗಳು ,  ಕಪ್ಪುಬಣ್ಣ,  ಒರಟಾದ  ರೋಮ,  ಅಗಲವಾದ, ದೊಡ್ಡದಾದ  ಹಲ್ಲುಗಳು,  ದಪ್ಪ ಚರ್ಮ,  ಸೋಲು,  ಅಪಜಯ,  ಅಪಾರ್ಥ ಮಾಡಿಕೊಳ್ಳುವವನು, ಕ್ರೂರದೃಷ್ಟಿ,  ಜಿಪುನತನ,  ಸಾವು,  ಆಲಸ್ಯ,  ವಾತರೋಗ, ಮೂರ್ಖತೆ,  ಅಂಗವಿಕಲತೆ,  ಅನಾಚಾರ, ಬಹುಕಾಲ  ಬದುಕುವವನು,  ಶಿಶಿರಋತು ವಿಗೆ  ಅಧಿಪತಿ,  ಮೋಸಗಾರ,  ಅಧಿಕಕೋಪ,  ಸ್ನಾಯು ಮಾಂಸಖಂಡಗಳಿಗೆ  ಅಧಿಪತಿ,  ವಾಸ  --  ಪರ್ವತ  ಗುಡ್ಡ ಪ್ರದೇಶ,  ಕಸದರಾಶಿ,  ಹರಿದಬಟ್ಟೆ,  ಧಾತು --  ಕಬ್ಬಿಣ,   ಎತ್ತರವಾದ  ತೆಳುದೇಹ ,  ವೃದ್ದನು,   ವಾಯು ಮತ್ತು  ಭೂತತ್ವದ  ಗ್ರಹನು,                     ದೀರ್ಘವಾದ  ಕಾಯಿಲೆ,  ಶ್ರಮದಿಂದ  ಸಂಪಾದನೆ,  ಧರ್ಮಶಾಸ್ತ್ರದಲ್ಲಿ  ಆಸಕ್ತಿ,  ಶತ್ರುಭಯ, ಪ್ರರಬ್ಧಕರ್ಮದ  ಪ್ರಕಾರ  ಫಲಕೊಡುತ್ತಾನೆ,   ಅನುಮಾನ,  ಎಲ್ಲಾಕೆಲಸದಲ್ಲೂ  ನಿಧಾನ ಪ್ರಗತಿ,ವಿಪರೀತವಾದ  ಖರ್ಚು,  ತಮೋಗುಣವುಳ್ಳ ಗ್ರಹ,  ಶೂದ್ರಜಾತಿ,  ರುಚಿ  --  ಎಣ್ಣೆಯಲ್ಲಿ  ಕರಿದ ಪದಾರ್ಥಗಳು  ಇಷ್ಟ,  ಒಗರು ಪದಾರ್ಥಗಳು, ಸ್ಮಶಾನ,  ವೈದ್ಯಶಾಸ್ತ್ರ,  ಜೀವಶಾಸ್ತ್ರ,  ರಸಾಯನ ಶಾಸ್ತ್ರ, ವಾಹನ ಬಿಡಿಭಾಗ, ಗಣಿಕೆಲಸ, ಭೂಗರ್ಭಶಾಸ್ತ್ರ, ಇವೆಲ್ಲವೂ ಶನಿಯ ಕಾರಕತ್ವಕ್ಕೊಳಪಡುತ್ತದೆ, ಅವಸಾನ,ಪತಿತನಾಗುವುದು, ಸೆರೆವಾಸ, "ದುಃಖೋಮಾರ್ಥಾ0ಡಾತ್ಮಜಹ" ಎನ್ನುವಂತೆ ತಾನು ದುಃಖವನ್ನು ಅನುಭವಿಸಿ ಪ್ರಪಂಚಕ್ಕೆ ಸುಖವನ್ನುಂಟುಮಾಡುವ  ಶ್ರಮಜೀವಿಗಳು, ಮಂದನಾದ್ದರಿಂದ ಜೀವಿತಾಂತ್ಯದಲ್ಲಿ  ಬರುವ  ಸುಖ ಸಂಪತ್ತು,  ಭಯ  ದುಃಖ  ಅವಮಾನ,  ಅನಾರೋಗ್ಯ,  ದಾರಿದ್ರ್ಯ,  ಸೇವಕ,  ಅಪವಾದಗಳು,  ನಿಂದೆ ಕಷ್ಟಗಳು,  ನೀಚಜನರ  ಸಹವಾಸ,  ಕಪ್ಪುಬಣ್ಣ,  ಸೋಂಬೇರಿತನ,  ಕೃಷಿ ಸಾಧನಗಳು, ಜೈಲುವಾಸ, ಮೊಂಡುತನ,  ವಾತವ್ಯಾಧಿ,  ನಿರಾಶೆ,  ಜೂಜಾಡುವುದು,  ನೀಚಸ್ತ್ರೀಯರ  ಸಹವಾಸ,   ಕೆಳಮಟ್ಟದ ಮೋಜುಮಸ್ತಿ,  ಉದ್ಯೋಗ,  ಜೀವನಮಾರ್ಗ,  ಶ್ರಮ,  ತಾಮಸಪ್ರವೃತ್ತಿ,  ಸಹನೆ  ಆಧ್ಯಾತ್ಮಿಕತೆ, ಧಾರ್ಮಿಕಭಾವ,  ನಾಸ್ತಿಕತೆ,  ಹಲ್ಲುಗಳು,  ಕರ್ಮಕ್ಕೆ  ತಕ್ಕ  ಪ್ರತಿಫಲ  ದೊರೆಯದಿರುವುದು, ಕೃಶವಾದ ಶರೀರ,  ಉಬ್ಬಿದನರಗಳು,  ಎತ್ತರವಾದ  ದೇಹ,  ಉಬ್ಬಿದಹಲ್ಲು,  ಒರಟಾದ  ಉಗುರು,  ಆಲಸ್ಯವಂತ, ನೀಲಿಮಿಶ್ರಿತ ಕಪ್ಪುಬಣ್ಣ, ನಿರ್ದಯಿ, ಮೂರ್ಖ,  " ಶನೈ ಶ್ಚರ " ಹೆಸರೇ ಸೂಚಿಸುವಂತೆ ನಿಧಾನಗತಿಯ  ಚಲನೆ ( ಸಂಸ್ಕೃತದಲ್ಲಿ  " ಶನೈ: " ಎಂದರೆ  ನಿಧಾನವೆಂದರ್ಥ ) ,  ಶನಿಯ  ಚಲನೆ ನಿಧಾನ ಗತಿಯಾದ್ದರಿಂದ ಕೆಲವರು ಇವನನ್ನು ಕುಂಟ ಎಂದಿದ್ದಾರೆ, ಕಲುಷಿತ  ಪ್ರದೇಶ, ಶ್ರಮಜೀವಿಗಳು ಕೆಲಸ ಮಾಡುವ ಜಾಗ, ಶಾಸ್ತಾದೇವತೆಯ ಮಂದಿರ, ಪಶ್ಚಿಮ ದಿಕ್ಕು ಶನಿಯ ಸಂಚಾರ ಸ್ಥಾನವಾಗಿದೆ.

---:  ಪುರಾಣದಲ್ಲಿ  ಶನಿಗ್ರಹ  :---


Picture source: Internet/ social media

   ಕಪ್ಪು  ಎನಿಸಿದ  ಕಡುನೀಲಿ ಬಣ್ಣದ  ಶರೀರ,  ಗುಳಿಬಿದ್ದ  ಕಣ್ಣುಗಳು,  ಚಾಡಿಹೇಳಿ  ಜಗಳ ಹುಟ್ಟಿಸುವ  ಸ್ವಭಾವ,  ಕೋಲುದೇಹ,  ಆಲಸ್ಯ,  ಮೂರ್ಖತೆ  ದೊಡ್ಡ  ಉಗುರು --  ಹಲ್ಲುಗಳು, ರೋಮ  ಮುಚ್ಚಿದ  ಶರೀರ,  ತಾಮಸ  ಪ್ರಕೃತಿ,  ಅತಿಕೋಪ,  ಮುಪ್ಪು,  ಅತಿನೀಲಿ ಬಣ್ಣದ ಉಡುಗೆಗಳು,  ನಾಲ್ಕು ಕೈಗಳಲ್ಲಿ --  ಬಿಲ್ಲು  ಚರ್ಮ  ಬಾಣ  ಶೂಲಗಳನ್ನು  ಧರಿಸಿದ  ಗೃದ್ರವಾಹನ , ಇಂದ್ರನೀಲದಂತೆ  ಮೈಕಾಂತಿ  ಹೊಂದಿದ  ಈತನ  ಚಲನೆ ನಿಧಾನ  ( ಮಂದ ಗತಿಯ  ಚಲನೆ ),  ಇವು ಶಾಸ್ತ್ರಜ್ಞರು  ಶನಿಯನ್ನು  ಕಂಡ ರೀತಿ.

    ಮಂದಗತಿಯ  ಚಲನೆಆದ್ದರಿಂದ ,  ಮಂದ,  ಸ್ಥಿರ,  ಶನೈಶ್ಚರ,  ರವಿಸುತ,  ಸೂರ್ಯಪುತ್ರ  ಇವು ಈತನ  ಪ್ರಸಿದ್ಧ  ನಾಮಗಳು.  ಈತ  ಗ್ರಹಗಳಲ್ಲಿ  ತೀಕ್ಷ್ಣಗ್ರಹ,  ಸ್ವಾಭಿಮಾನಿ.

  ಸೂರ್ಯನಿಗೆ  ಛಾಯಾದೇವಿಯಲ್ಲಿ ಹುಟ್ಟಿದ  ಎರಡನೇ  ಮಗನೇ  ಶನೈಶ್ಚರ,  ಅಣ್ಣ ಸಾವರ್ಣಿಮನು, ತಂಗಿ  ತಪತಿ.

  ಬ್ರಹ್ಮಮಾನಸ  ಪುತ್ರನಾದ  ತ್ವಷ್ಣ  ತನ್ನ ಪುತ್ರಿಯಾದ  ಸಂಜ್ಞಾ  ( ಸಂಧ್ಯಾ)   ದೇವಿಯನ್ನು ಸೂರ್ಯನಿಗೆ  ಕೊಟ್ಟು  ಮದುವೆ ಮಾಡಿದ  ನಂತರ  ಅವರಿಗೆ   ವೈವಸ್ವತ  ಮನು,  ಯಮ  ಹಾಗೂ ಯಮುನೆಗೆ ಜನ್ಮನೀಡಿದರು,  ಕಾಲಕ್ರಮೇಣ  ಸೂರ್ಯನ  ಆ  ಮಹಾಪ್ರಭೆಯನ್ನು  ತಾಳಲಾರದೆ, ಸಂಧ್ಯಾ ತನ್ನದೇ  ಆದ  ಛಾಯಾರೂಪಕ್ಕೆ  ಜೀವನೀಡಿ   ತಂದೆ  ಮನೆಗೆ  ಹೊರಟು ಹೋದಳು,   ಮತ್ತೆ ಸೂರ್ಯಾ ಮತ್ತು  ಛಾಯಾದೇವಿಗೆ ಇಬ್ಬರು ಗಂಡು ಮಕ್ಕಳು,   ಅವರೇ  ಸಾವರ್ಣಿ  ಮತ್ತು  ಶನೈಶ್ಚರ ಮತ್ತು  ತಂಗಿ  ತಪತಿ.   ಶ್ರೇಷ್ಠಯೋಗ, ತಪಸ್ಸಿನಿಂದ  ಮಹಾಜ್ಞಾನಿಯಾಗಿ  ದೇಹವನ್ನು  ದಂಡಿಸಿ ನಿರ್ಮಾಮ್ಸ  ದೇಹ  ಹೊಂದಿದನು.

     ಶನೈಶ್ಚರ  ಸ್ವಾಮಿಯ  ಹೆಸರು  ಕೇಳುತ್ತಿದ್ದಂತೆ  ಪ್ರತಿಯೊಬ್ಬರು  ಒಂದು ಕ್ಷಣ  ದೀರ್ಘವಾದ ಉಸಿರು ತೆಗೆದುಕೊಳ್ಳುತ್ತಾರೆ,  ಕಾರಣ......  ದೇವಾದಿದೇವತೆಗಳೇ  ಈತನ  ಆರ್ಭಟಕ್ಕೆ  ದಂಗಾಗಿ ಹೋಗಿದ್ದಾರೆ, ಕಾರಣ......  ಶ್ರೀಚಕ್ರದೇವತೆಯೂ ಶನಿಗೆ  ಅಂತಹ  ಅಧಿಕಾರ  ನೀಡಿದ್ದಾರೆ,  ಶನಿಯು ಕರ್ಮಕಾರಕ ಗ್ರಹ,  ಈತನ  ಪತ್ನಿಯು  ಜೇಸ್ಟಾದೇವಿಯಾಗಿದ್ದು  ಈಕೆ ಚಿತ್ರರಥನ  ಮಗಳು,  ಒಂದು ಸಲ  ಈಕೆ ಪುತ್ರಾಕಾಂಕ್ಷಿಯಾಗಿ  ಶನಿದೇವನ  ಬಳಿಗೆ  ಬರಲು,  ಧ್ಯಾನಸ್ತನಾಗಿ  ಕುಳಿತಿದ್ದನ್ನು  ಕಂಡು ಬೇಸರಗೊಂಡು,  ಭವಿಷ್ಯದಲ್ಲಿ  ನಿನ್ನದೃಷ್ಟಿಯು  ಕೆಳಮುಖವಾಗಲಿ ನಿನ್ನ ದೃಷ್ಟಿಯಿಂದ ನಾನಾಬಗೆಯ  ತೊಂದರೆಗಳುಂಟಾಗಲಿ  ಎಂದು  ಶಾಪವನ್ನಿಟ್ಟಳು,  ಪತ್ನಿ ಕೋಪದ  ಶಾಪವೇ ಶನಿಯ  ದೃಷ್ಟಿಯಿಂದುಂಟಾಗುವ  ಪರಿಣಾಮಗಳಿಗೆ  ಕಾರಣ.

     ಶನಿಯ  ಅದ್ವಿತೀಯ  ಶಕ್ತಿಗೆ  ಸಮಸ್ತ  ದೈವಶಕ್ತಿಗಳೇ  ಕಂಪಿಸತೊಡಗುತ್ತವೆ  ಆದ್ದರಿಂದ  ಈಶ್ವರನು ಶನಿಯನ್ನು  ತನ್ನ  ಸ್ವಾಧೀನದಲ್ಲಿಟ್ಟುಕೊಂಡು  ಅವರವರ  ಕರ್ಮಗಳಿಗೆ ಅನುಸಾರವಾಗಿ  ಶಿಕ್ಷೆ ನೀಡಲು  ಮಾತ್ರ  ಅಧಿಕಾರ  ನೀಡಿದ್ದಾರೆ,  ಶನಿಯು  ಇತರ ಗ್ರಹಗಳ  ಮೇಲೂ  ಆಕ್ರಮಣ  ಮಾಡಲು ಮುಂದಾದಾಗ ,  ಸೂರ್ಯನಿಗೆ  ಮಗನ  ಈ  ಚಿಂತನೆ  ಒಪ್ಪಿಗೆ  ಆಗದೆ  ಹಲವು ಬಾರಿ  ಬುದ್ದಿ   ಹೇಳಿದರು  ಕೇಳದೆ  ಇದ್ದಾಗ  ಸೂರ್ಯನು  ಈಶ್ವರನ  ಮೊರೆ ಹೋಗಿ  ವಿಷಯ  ತಿಳಿಸಲು , ಈಶ್ವರನು ಶನಿಗೆ  ಎಚ್ಚಸಿದರು ,  ಆತನು  ನಿರ್ಲಕ್ಷಿಸಲು  ಅವರಿಬ್ಬರ  ಮಧ್ಯ  ಯುದ್ಧವಾಯಿತು,  ಶನಿಯು ಶಿವಗಣಗಳನ್ನು  ಹಿಂಸೆಮಾಡತೊಡಗಿದಾಗ  ಸಿಟ್ಟಿನಿಂದ  ಶಿವ  ತನ್ನ  ಮೂರನೇ  ಕಣ್ಣನ್ನು  ತೆರೆದ, ಶನಿಯೂ  ಕೂಡ  ಅದಕ್ಕೆ  ಸಮನಾದ  ಕ್ರೂರದೃಷ್ಟಿ ಬೀರಿ ನಿಂತ,  ಆಗ  ಶಿವನು  ತನ್ನ  ತ್ರಿಶೂಲದಿಂದ ಶನಿದೇವನ  ಮೇಲೆ  ಹರಿಹಾಯಲಾಗಿ  ಶನಿಯು  ಅದೃಶ್ಯನಾದ,  ಆಗ  ಮಗನ  ಈ  ವ್ಯಥೆಯನ್ನು ನೋಡಲಾರದೆ  ಸೂರ್ಯನು  ಮಗನ  ಪರವಾಗಿ ಶಿವನಲ್ಲಿ  ರಕ್ಷಣೆ  ಕೋರಿ  ಯಾಚಿಸಿದನು, ಕರುಣಾಮಯಿಯಾದ  ಶಿವ  ಕ್ಷಮೆಯನ್ನು  ನೀಡಿದನು,  ಶಿವನ  ಸರ್ವಾಧಿಕಾರವನ್ನು  ಶನಿದೇವನು ಒಪ್ಪಿಕೊಂಡಿದ್ದರಿಂದ  ಶಿವನು  ತನ್ನ  ದಂಡಾದಿಕಾರಿ ಪದವಿಯನ್ನು  ಶನಿದೇವನಿಗೆ  ನೀಡಿದ  ಕಾರಣ ಶನಿಯು   "ಶನೇಶ್ವರ" ನಾದ.

     ಶನಿಯ ಚಲನೆ  ನಿಧಾನ ಗತಿಯಾದ್ದರಿಂದ, ಶನಿಯನ್ನು  ಮಂದ, ಕುಂಟು  ಎನ್ನಲಾಗುತ್ತದೆ.  ಬ್ರಹ್ಮ ವೈವರ್ತ  ಪುರಾಣದ  ಪ್ರಕಾರ  ಪಾರ್ವತಿಯ  ಅಂಶದಿಂದ  ಸುಂದರವಾದ  ಮಗು  ಗಣೇಶನು ಹುಟ್ಟಿದ ನಂತರ  ಸಮಸ್ತ  ದೇವತೆಗಳು  ನವಗ್ರಹರು  ಬಂದರು,  ಎಲ್ಲರೂ  ಮಗುವನ್ನು  ನೋಡಿ  ಹಾಡಿ ಹೊಗಳುತ್ತಿದ್ದರೂ  ಶನಿಯು  ಮಾತ್ರ  ಮಗುವನ್ನು  ನೋಡಲಿಲ್ಲ,  ಆಗ  ಮಗುವನ್ನು  ನೋಡು ಎಂದು  ಹೇಳಲಾಗಿ ,  ಶನಿಯು  ತನ್ನ  ವಕ್ರ  ದೃಷ್ಟಿಯಿಂದ   ಮಗುವನ್ನು  ನೋಡಿದ  ತಕ್ಷಣ ಮಗುವಿನ  ತಲೆ  ಹೋಗಿ  ಅಂಗಹೀನವಾಯ್ತು,  ಕೋಪಗೊಂಡ  ಪಾರ್ವತಿಯು ಅಂಗಹೀನನಾಗೆಂದು ಶನಿಯನ್ನು  ಶಪಿಸಲು,  ಶನಿಯು  ಕುಂಟನಾದ.

    ಶನಿಯು  ಹೆಚ್ಚಾಗಿ  ಕೆಟ್ಟದ್ದನ್ನು  ಪ್ರಚೋದಿಸುತ್ತಾನೆ,  ಅಂತೆಯೇ  ವಿನಾಕಾರಣ  ತೊಂದರೆಗೆ ಸಿಲುಕಿಸುತ್ತಾನೆ,  ಮನಸ್ಸನ್ನು  ಚಂಚಲಗೊಳಿಸುತ್ತಾನೆ,  ಆದರೆ  ದೃತಿಗೆಡದೆ  ಯಾರು ಮುನ್ನುಗ್ಗುತ್ತಾರೋ  ಅಂತಹವರನ್ನು  ಮುನ್ನಡೆಸುತ್ತಾನೆ,  ಉದಾ:--  ಸೂರ್ಯವಂಶ  ಪ್ರದೀಪಕ, ರಘುವಂಶ  ತಿಲಕ  ಶ್ರೀರಾಮಚಂದ್ರ...  14  ವರ್ಷ   ಬೆಂಬಿಡದೆ  ಕಾಡಿ,  ಮಡದಿಯಿಂದ  ದೂರ ಮಾಡಿದ,  ಶ್ರೀ  ರಾಮನು  ದೃತಿಗೆಡದೆ  ರಕ್ಕಸ  ಕುಲವನ್ನು  ನಾಶಮಾಡಿ  ಲೋಕೋದ್ದಾರ  ಮಾಡಿದ.

    ಯದುಕುಲ ತಿಲಕ   ಶ್ರೀಕೃಷ್ಣನಿಗೆ  ಕಳ್ಳತನದ  ಆರೋಪ  ಹೊರಿಸಿ,  ಶಮಂತಕ   ಮಣಿಯನ್ನು ಪುನಃ  ತಂದು  ಕೊಡಿಸಿದ,  ಜಾಂಬವಾದಿಗಳಿಗೆ  ದರುಶನ  ಭಾಗ್ಯ  ಕೋಡಿಸಿದ .

    ಭರತ ಕುಲದ  ಸತ್ಯ ಹರಿಶ್ಚಂದ್ರ  ಸತ್ಯಕ್ಕಾಗಿ ರಾಜ್ಯ ಭೋಗಾದಿಗಳನ್ನು ತ್ಯಜಿಸಿ,  ಹೆಂಡತಿ ಮಕ್ಕಳನ್ನು ತೊರೆಸಿ,  ಕೊನೆಗೆ  ಸತ್ಯವನ್ನೇ  ಗೆದ್ದು ಕೊಟ್ಟ  ಶನಿದೇವ.

 ಇನ್ನು  ರಾಜ  ವಿಕ್ರಮಾದಿತ್ಯ  ಶನಿಯನ್ನು  ತುಚ್ಛ  ಮಾತುಗಳಿ0ದ  ದೂಷಿಸಿ  ಅನಂತ ಕಷ್ಟಗಳನ್ನುನುಭವಿಸಿ  ನಂತರ ಶನೇಶ್ವರನ ಪರಮ ಭಕ್ತನೆನಿಸಿದ. ಹೀಗೆ  ಶನಿದೇವ  ಯಾರನ್ನೂ  ಬಿಟ್ಟಿಲ್ಲ.

     ಶನೈಶ್ಚರ  ಸ್ವಾಮಿಯ  ಶುಭದೃಷ್ಟಿಯಿಂದ  ಮನುಷ್ಯ  ತುಂಬಾ  ಪ್ರಬಲವಾಗಿ  ದೊಡ್ಡ  ಮನೆತನ ಹೊಂದಿ,  ತನ್ನ  ಮನೆತನದ  ಹಿರಿಯರ  ಸೇವೆ  ಮಾಡಿ  ಅವರ  ಹಾರೈಕೆಯಿಂದ ವಂಶಾಭಿವೃದ್ಧಿಯನ್ನು,  ಪಿತ್ರಾರ್ಜಿತ  ಉಡುಗೊರೆಯನ್ನು,  ಕುಟುಂಬದಲ್ಲಿ  ಸಂತೋಷವನ್ನು , ಧೀರ್ಘಯುಷ್ಯ  ಹೊಂದಿ  ಸುಖಿಯಾಗುತ್ತಾನೆ.   ಶುಭದೃಷ್ಟಿ  ಪ್ರಬಲವಾಗಿದ್ರೆ ನ್ಯಾಯಾದೀಶರಾಗುತ್ತಾರೆ,  ವಾಕ್ಚಾತುರ್ಯವನ್ನು  ಪಡೆದವರಾಗುತ್ತಾರೆ,  ಸ್ವಾಭಿಮಾನಿಯಾಗುತ್ತಾರೆ. ಇತರೆ  ಎಂಟು ಗ್ರಹಗಳ  ಅಶುಭದೃಷ್ಟಿಯುದ್ದರು  ಶನಿದೇವನ  ಶುಭದೃಷ್ಟಿಯೊಂದೇ  ಎಂತಹ ಸಂಕಟ  ಗಂಡಾಂತರಗಳನ್ನು  ಪಾರುಮಾಡಬಲ್ಲದು.   ಶನಿದೇವರ  ಅಶುಭ ದೃಷ್ಟಿಯಿದ್ದು,  ಉಳಿದ ಎಂಟು  ಗ್ರಹಗಳು  ಶುಭರಾಗಿದ್ದರೂ  ಗಂಡಾಂತರ  ತಪ್ಪಿಸಲು ಅಸಾಧ್ಯ.

ಉದಾ :--  ರಾವಣ

  ರಾವಣನು  ತನ್ನ  ಮಹಾ ತಪಸ್ಸಿನ  ಫಲದಿಂದ  ಆದಿತ್ಯಾದಿ  ನವಗ್ರಹರನ್ನು  ತನ್ನ ಹತೋಟಿಯಲ್ಲಿಟ್ಟು ಕೊಂಡ,  ರಾವಣನು  ತನ್ನ  ಪುತ್ರ ಜನನ  ಸಮಯದಲ್ಲಿ  ಯಾವ  ಕಂಟಕಗಳು ಇಲ್ಲದ  ಲೋಕ ಪ್ರಖ್ಯಾತನಾದ ಧೀರ್ಘಆಯುವಾದ ( ಮರಣವೇ ಇಲ್ಲದ ) ಮಗ  ಜನಿಸಲೆಂದು ನವಗ್ರಹರನ್ನು  ಕರೆಯಿಸಿ  ಶುಭದೃಷ್ಟಿ  ನೀಡಿರೆಂದು  ಅಜ್ಞಾಪಿಸುತ್ತಾನೆ,  ಅದರಂತೆ  ಎಲ್ಲರೂ  ಆಜ್ಞೆ ಪಾಲಿಸ್ಸುತ್ತಾರೆ,   ಆದರೆ  ಇನ್ನೇನು  ಮಗು  ಜನಿಸಬೇಕು  ಅಷ್ಟರಲ್ಲಿ  ಶನಿದೇವನು  ತನ್ನ  ಒಂದು ಕಾಲನ್ನು  ಮಡಿಸಿ ಕೊಂಡು  ಕುಳಿತುಕೊಳ್ಳುತ್ತಾನೆ,   ಆಯುಷ್ಕಾರಕನಾದ  ಶನಿದೇವ  ಮಗುವಿಗೆ ಅಲ್ಪಾಯುವನ್ನು  ನೀಡುತ್ತಾನೆ.  ಎಲ್ಲಾ ತೆರನಾದ  ಭಾಗ್ಯವಿದ್ದರೂ  ರಾವಣನ  ಮಗ ಅಲ್ಪಾಯುವಾಗುತ್ತಾನೆ.

   ಹೀಗೆ  ಶನಿದೇವನ  ಲೀಲೆ  ಅದ್ಭುತ,  ಶನಿದೇವನ  ಅಶುಭದೃಸ್ಟಿಯಿಂದ  ಅಲ್ಪಾಯುಷಿಯೂ, ಬಡವನೂ,  ಅತಿಕಾಮಿಯೂ,  ಮಾನಹೀನನು,  ಮನೋರೋಗಿಯೂ,  ವಂಶಾಭಿವೃದ್ಧಿಗೆ ಅಡಚನೆಯೂ,  ಅಂಗವಿಕಲನು,  ಬಡಕಲು  ಶರೀರದವನು,  ಸೋಮಾರಿಯು,  ಅಭಿವೃದ್ಧಿಗೆ ಜಡತ್ವ, ವಾಯು,  ಸಂಧಿವಾತ,  ಮೂಳೆ ಮುರಿಯುವಿಕೆ,  ಮಲಿನತೆ,  ಮಹಾ ದರಿದ್ರರೂ  ಆಗುತ್ತಾರೆ.

     ಶನಿಯ  ಶುಭದೃಷ್ಟಿ  ಪಡೆಯಲು  ಆಂಜನೆಯನಿಗೆ  ಹುಚ್ಚೆಳ್ಳು ( ಎಳ್ಳೆಣ್ಣೆ)  ಎಣ್ಣೆಯಿಂದ ಅಭಿಷೇಕ,  ಮತ್ತು  ಇದೇ  ಎಣ್ಣೆಯಿಂದ ದೀಪ  ಹಚ್ಚು ವುದು,  ನೀಲ  ಅಥವಾ  ಕಪ್ಪುವಸ್ತ್ರ,  ಶಂಕದ ಹೂವು,  ಎಳ್ಳು,  ಕಬ್ಬಿಣ  ದಾನ  ಮಾಡಬೇಕು,  ಜಗತ್ತಿನ  ಯಾವುದೇ  ಕೆಳಮಟ್ಟದ  ವಸ್ತುವಾಗಲೀ, ಪ್ರಾಣಿಗಳನ್ನಾಗಲೀ  ತಿರಸ್ಕಾರದಿಂದ  ಅವಮಾನಿಸಬಾರದು ,  ಅಧರ್ಮ,  ಅನ್ಯಾಯ,  ಮೋಸ ಕಪಟ, ವಂಚನೆ  ಇವುಗಳು  ಶನಿಯ  ಮಹಾನ್  ಶತ್ರುಗಳು.                        

   ಮನೆಯ  ಹಿರಿಯರನ್ನು  ತಾತ್ಸಾರ  ಮಾಡುವುದು,  ಎಲ್ಲಾ  ಪುಣ್ಯವನ್ನೂ  ಕೊಂದು ಹಾಕುತ್ತದೆ, ಏಕೆಂದರೆ  ಮನೆಯ  ಹಿರಿಯರ  ಪ್ರತೀಕವೆ  ಶನಿದೇವ,  ಹಾಗೆಯೇ  ಮರಣ  ಹೊಂದಿದವರಿಗೆ   ಕಾರ್ಯಗಳನ್ನು  ಮಾಡದೇ  ಹೋದರೆ  ಶನಿಯ  ಅವಕೃಪೆಗೆ  ಪಾತ್ರರಾಗಬೇಕಾಗುತ್ತದೆ,  ಏಕೆಂದರೆ ಶನಿಯು  ಪ್ರೇತಕಾರಕ  ಗ್ರಹವೂ  ಆಗಿದ್ದಾನೆ,  ಆದ್ದರಿಂದ  ಗತಿಸಿದವರ  ಸದ್ಗತಿಯಿಂದ  ಹಿರಿಯರ ಹಾರೈಕೆಯಿಂದ  ಶನಿಯ  ಶುಭದೃಷ್ಟಿ  ಪಡೆಯಬಹುದು.

    ಶನಿಗ್ರಹವು  ಪ್ರತಿಯೊಬ್ಬ  ಜೀವಿಯ  ಜೀವನದಲ್ಲೂ  ಮೂರು ಬಾರಿ  ಪ್ರವೇಶ  ಮಾಡುತ್ತದೆ  ಅದೇ ಸಾಡೇಸಾತ್ ,  ಏಳೂವರೆ  ವರ್ಷದ  ಶನಿ ( ಏಳರಾಟ  ಶನಿಕಾಟ ) .  ಅಂದರೆ....  ನಮ್ಮ  ಜನ್ಮ ರಾಶಿಯ ಹಿಂದಿನ  ಮನೆಯಲ್ಲಿ  ಎರಡೂವರೆ  ವರ್ಷ,  ಜನ್ಮ  ರಾಶಿಯಲ್ಲಿ  ಎರಡೂವರೆ  ವರ್ಷ, ಜನ್ಮರಾಶಿಯಿಂದ  ಎರಡನೇ  ಮನೆಯಲ್ಲಿ  ಎರಡುವರೇವರ್ಷದ  ಶನಿ  ಸಂಚಾರದ  ಕಾಲವನ್ನು ಸಾಡೇ ಸಾತಿ  ಎನ್ನುತ್ತಾರೆ,  ಹೀ ಗೆ  3  ಬಾರಿ ಮನುಷ್ಯನ  ಜೀವನದಲ್ಲಿ  ಪ್ರವೇಶ  ಮಾಡುತ್ತಾನೆ.                        
   ಮೊದಲ ಸಲ  ವಿಪರೀತ  ಕಷ್ಟಗಳ  ಸುರಿಮಳೆ  ಕರೆದು,   ಎರಡನೇ  ಸಲ  ಎಲ್ಲಾ  ಕ್ಷೇತ್ರದಲ್ಲೂ ಅಭಿವೃದ್ಧಿಯಾಗುವಂತೆ  ಮಾಡಿ,  ಮೂರನೇ ಬಾರಿಗೆ  ಧನನಷ್ಟ,  ಮಾನಹಾನಿ,  ಮೃತ್ಯು, ಮೃತ್ಯುವಿಗೆ ಸಮಾನವಾದ  ತೊಂದರೆ  ನೀಡುತ್ತಾನೆ.
   
   ಜನ್ಮರಾಶಿಯ  ಹಿಂದಿನ  ರಾಶಿಯಲ್ಲಿ  (12 ನೇ  ಮನೆ ) ಸಂಚಾರ  ಮಾಡುವಾಗ ........ ವಿಪರೀತ ಧನವ್ಯಯ,  ಸಾಲ,  ಕಷ್ಟ,  ಭೂಮಿಗೆ,  ಕಬ್ಬಿಣಕ್ಕೆ  ಖರ್ಚು  ಮಾಡುವುದು,  ಅಂದುಕೊಂಡ ಕಾರ್ಯಗಳು  ಬಹಳ  ಪ್ರಯತ್ನದಲ್ಲೂ  ವಿಫಲವಾಗುವುದು,  ಹಲವಾರು  ತರಹದ ತೊಂದರೆಗಳುಂಟಾಗುವುದು  ಆಗುತ್ತದೆ.
   
     ಜನ್ಮರಾಶಿಯ  ಸಂಚಾರ ಕಾಲದಲ್ಲಿ..........  ಜನ್ಮ  ರಾಶಿಯು,  ಆರೋಗ್ಯ,  ದೇಹ,  ಜೀವನ ಯಾಪನೆಗೆ  ಸಂಭಂಧಿಸಿದ್ದಾದ್ದರಿಂದ,  ಇಲ್ಲಿ  ಬಂದಾಗ  ಒಂಟಿತನ,  ಅಪಾರ   ಮಾನಸಿಕ  ಹಿಂಸೆ, ಸೋಮಾರಿತನ,  ನಿಶ್ಯಕ್ತಿ,  ನಿದ್ರಾಹೀನತೆ,  ಅಲೆಮಾರಿಯಾಗುವುದು,  ಅಪಮಾನ,  ಪಾದಗಳು, ಮಂಡಿಗಳಲ್ಲಿ  ಅಸಾಧ್ಯನೋವು,  ಆಲಸ್ಯ  ಮುಂತಾದ  ಫಲಗಳು.

   ರಾಶಿಯಿಂದ  ಎರಡನೇ  ಮನೆಯಲ್ಲಿ  ಸಂಚಾರ  ಮಾಡುವಾಗ..........  ನಿಷ್ಕಾರಣವಾಗಿ  ಬಂಧುಗಳಲ್ಲಿ  ದ್ವೇಷ,  ಕುಟುಂಬದಲ್ಲಿ  ನೋವುಗಳು,  ಸ್ವಜನ  ದ್ವೇಷ,  ಕಾರ್ಯಬಂಗ,  ಧನಹಾನಿ,  ಮುಂತಾದ  ಅಶುಭ  ಫಲಗಳನ್ನು ನೀಡುತ್ತಾನೆ.

      ಮನುಷ್ಯ  ಜೀವನದ  ಅಸ್ತಿತ್ವ,  ಸಾರ್ಥಕತೆಯನ್ನು  ಗುರ್ತಿಸಿ  ಕೊನೆಗೆ  ಗಟ್ಟಿಯಾದ  ಮನಸ್ಸು, ಶಾಶ್ವತ  ಸಂತೋಷವನ್ನು  ಹೊಂದುವ  ಮಾರ್ಗವನ್ನು  ತೋರಿಸಿಕೊಡುತ್ತಾನೆ.
ಆಯಸ್ಸು,  ಮರಣ,  ದುಃಖ,  ಪರಸ್ಥಳ,  ನಪುಂಸಕತ್ವ,  ದುರ್ವ್ಯಸನಗಳು ,  ನೀಚವಿದ್ಯೆ,  ನೀಚಜೀವನ, ನೀಚೋಪಾಸನೆ,  ದುರ್ವತನೆ,  ಸೆರೆಮನೆ,  ಅಸತ್ಯ,  ಅಧರ್ಮ,  ದೈನ್ಯಸ್ಥಿತಿ,  ಪಿತೃಶಾಪ  ಇನ್ನೂ ಅನೇಕ ವಿಚಾರದಲ್ಲಿ  ಶನಿಯು  ಅಧಿಕಾರ  ಹೊಂದಿದ್ದು,  ಊಹೆಗೂ   ನಿಲುಕದ  ರೀತಿಯಲ್ಲಿ  ಕಾಡಬಲ್ಲನು, ಮತ್ತು  ಶುಭಪರನಾದರೆ   ವಿಸ್ಮಯಕಾರಿ  ರಾಜಯೋಗವನ್ನು  ನೀಡಬಲ್ಲನು,  ಈತ  ಡಂಬಾಚಾರದ ಪೂಜೆಗಾಗಲೀ,  ಆಡಂಬರದ  ಭಕ್ತಿಗಾಗಲೀ,  ಒಡವೆವಸ್ತ್ರ ಹಣ  ಯಾವುದೇ  ವೇಷ ಭೂಷಣಗಳಿಗಾಗಲೀ  ಕರುಣೆ  ತೋರುವುದಿಲ್ಲ,  ಈತನು  ಸತ್ಯನಿಷ್ಠೆಗೆ , ಶುದ್ಧಮನಸ್ಸಿನ  ಭಕ್ತಿಗೆ, ಪರಿಶುದ್ಧ ಹೃದಯವಂತರಿಗೆ,  ನಿಷ್ಕಪಟತೆಗೆ ,  ಸರಳತೆಗೆ,  ಯಾರಿಗೂ  ದ್ರೋಹಮಾಡದ  ಧರ್ಮದ ಹಾದಿಯಲ್ಲಿ  ನಡೆಯುವಂತಹವರ  ಮೇಲೆ  ತನ್ನ  ಶುಭ  ಪ್ರಭಾವವನ್ನು  ಬೀರುತ್ತಾನೆ                        
ಶನಿದೇವನಿಗೆ  ಎಳ್ಳೆಣ್ಣೆ ಅಭಿಷೇಕ  ಅತ್ಯಂತ  ಪ್ರಿಯ,  ಇದಕ್ಕೊಂದು  ಪೌರಾಣಿಕ  ಕಥೆಯಿದೆ.

        ಶನಿ  ಮಹಾತ್ಮನು  ಚಿಕ್ಕವನಿದ್ದಾಗ  ಅತೀ  ಉತ್ಸುಕತೆಯಿಂದಿರುತ್ತಿದ್ದನು,  ವಿಪರೀತ  ಮೊಂಡು, ವಿಪರೀತ  ಕಾಡಾಟ , ಇವನ  ಕಿಡಿಗೇಡಿ ತನಕ್ಕೆ  ಎಲ್ಲರೂ  ಶಿಕ್ಷೆ  ಅನುಭವಿಸಬೇಕಾಗುತ್ತಿತ್ತು,

Picture source: Internet/ social media

     ಅದೊಂದು ದಿನ  ಶ್ರೀರಾಮ  ಭಕ್ತನಾದ  ಹನುಮಂತನು,ಧ್ಯಾನ  ಮಗ್ನನಾಗಿ  ಕುಳಿತಿದ್ದಾಗ, ಶನಿಯು  ಹನುಮನಿದ್ದೆಡೆಗೆ  ಬಂದು  ವಿಪರೀತ  ಕುಚೇಷ್ಟೆ  ಮಾಡಿದನಂತೆ,  ದ್ಯಾನಭಂಗವಾಗಿ ಹನುಮಂತನು ಎಚ್ಚರಗೊಂಡು,  ನನ್ನ  ಧ್ಯಾನಕ್ಕೆ  ಭಂಗ  ತರಬೇಡ  ಎಂದು  ಹೇಳಿದರೂ, ಚೇಷ್ಟೆಯನ್ನು  ಮುಂದುವರೆಸಿದ  ಶನಿದೇವನ  ಮೇಲೆ  ಅತೀವ  ಕುಪಿತಗೊಂಡ  ಹನುಮ  ತನ್ನ ಬಾಲದಿಂದ  ಶನಿಯನ್ನು ಬಿಗಿಯಾಗಿ  ಸುತ್ತಿ  ಅಷ್ಟ ದಿಕ್ಕುಗಳಲ್ಲೂ  ಗರ ಗರ  ತಿರುಗಿಸಿ  ದೂರ ಬಿಸಾಡಿದನು,  ಆಗ  ತುಂಬಾ  ಮೇಲಿನಿಂದ  ಬಿದ್ದಿದ್ದರಿಂದ  ಶನಿದೇವರಿಗೆ  ಮೈತುಂಬಾ  ಗಾಯಗಳಾಗಿ ದೇಹದಲ್ಲೆಲ್ಲಾ  ರಕ್ತ  ಸೋರಹತ್ತಿತು.   ಆಗ  ತನ್ನ ತಪ್ಪಿನ  ಅರಿವಾಗಿ  ಹನುಮನ  ಬಳಿ ಬಂದು ವಿನಮ್ರತೆಯಿಂದ  ಕೈ  ಮುಗಿದು  ಕ್ಷಮೆ  ಯಾಚಿಸಿದನು,  ಶನಿದೇವನ  ಮುಗ್ಧತೆಗೆ  ಪ್ರಸನ್ನನಾದ ಹನುಮನು  ತನ್ನನ್ನು  ಯಾರು  ಭಕ್ತಿಯಿಂದ  ಪೂಜಿಸುತ್ತಾರೋ  ಅವರನ್ನು  ನೀನು  ಕಾಡಬಾರದು ಎಂದು  ಭಾಷೆ  ತೆಗೆದುಕೊಂಡನು,  ಇದಕ್ಕೊಪ್ಪಿದ  ಶನಿದೇವನು  ಈಗ  ಈ  ನನ್ನ  ನೋವನ್ನು ನಿವಾರಿಸು  ಎಂದು  ಕೇಳುತ್ತಾನೆ,  ನೋವಿನಿಂದ  ನರಳುತ್ತಿದ್ದ  ಶನಿದೇವನಿಗೆ  ಹನುಮಂತನು ಮೈಗೆಲ್ಲಾ  ಎಳ್ಳೆಣ್ಣೆ  ಹಚ್ಚಿ  ಮೈಮೇಲಿದ್ದ  ಗಾಯಗಳನ್ನು  ವಾಸಿಮಾಡಿದನು,  ಗಾಯದಿಂದ ನೊಂದಿದ್ದ  ದೇಹ  ಮತ್ತೆ  ಹುರುಪಾಯಿತು,  ಶನಿದೇವನಿಗೆ  ಆನಂದವಾಯಿತು,  ಹಾಗಾಗಿ  ಎಳ್ಳೆಣ್ಣೆ ಅಭಿಷೇಕ  ಶನಿದೇವನಿಗೆ  ಪ್ರಿಯವಾಯಿತು.

       ದೇವತಾರಾಧನೆ,  ಗ್ರಹಪೂಜೆ,  ಹಿರಿಯರ  ಸೇವೆಯಿಂದ  ವಿಮುಖರಾದ  ಜನರಿಗೆ  ಸಂಕಟವನ್ನು ಕೊಡುವನಾದ್ದರಿಂದಲೇ  ಶನೇಶ್ವರನು  ಹೆಚ್ಚು ಪ್ರಚಾರದಲ್ಲಿದ್ದಾನೆ.

ಶನಿದೇವನನ್ನು  ಸ್ತುತಿಸುವ  ಸ್ತೋತ್ರ  ಹೀಗಿದೆ

" ನೀಲಾಂಜನ  ಸಮಾಭಾಸ0  ರವಿಪುತ್ರಂ  ಯಮಾಗ್ರಜಮ್
ಛಾಯಾ ಮಾರ್ಥಾ0ಡ  ಸಂಭೂತಮ್ ತಂ  ನಮಾಮಿ  ಶನೈಶ್ಚರ0"

ಶ್ರೀಮದ್  ವಾದಿರಾಜ  ವಿರಚಿತ  ಶನಿ  ಸ್ತೋತ್ರ

"  ಶನೇ ದಿನಮಣೇಃ ಸೂನೂಹ್ಯನೆಕಾಗುಣಸನ್ಮಣೇ
ಅರಿಷ್ಟ0ಹರಮೇ ಭೀಷ್ಟಮ್ ಕುರು ಮಾ ಕುರು ಸಂಕಟ0 "

ಶನಿ ಗಾಯತ್ರಿ ಮಂತ್ರ :--

"ಓಂ  ನೀಲಾಂಬರಾಯ  ವಿದ್ಮಹೇ
ಸೂರ್ಯ  ಪುತ್ರಾಯ  ಧೀಮಹಿ
ತನ್ನೋ  ಸೌರಿಃ  ಪ್ರಚೋದಯಾತ್ "

ಶನಿ  ಪೀ ಡಾ  ಪರಿಹಾರ  ಸ್ತೋತ್ರ :--

" ಸೂರ್ಯ ಪುತ್ರೋ  ಧೀರ್ಘದೇಹೋ  ವಿಶಾಲಾಕ್ಷ  ಶಿವಪ್ರಿಯಃ
ಧೀರ್ಘಚಾರ  ಪ್ರಸನ್ನಾತ್ಮಾ ಪೀಡಾ0  ಹರತು  ಮೇ  ಶನಿಃ "

ಶ್ರೀ  ಶನೇಶ್ವರ  ಮೂಲ ಮಂತ್ರ :--

ನಮಸ್ತೇ ಕೋಣ ಸಂಸ್ಥಾಯ ಪಿಂಗಳಾಯ ನಮೋಸ್ತುತೆ
ನಮಸ್ತೇ ವಿಷ್ಣು ರೂಪಾಯ ಕೃಷ್ಣಾಯ ಚ  ನಮೋಸ್ತುತೆ
ನಮಸ್ತೇ ರೌದ್ರ ದೇಹಾಯ  ನಮಸ್ತೇ ಕಾಲ  ಕಾಲಾಯ ಚ
ನಮಸ್ತೇ  ಯಮ ಸಂಜ್ಞಾಯ ಶನೇಶ್ವರ  ನಮೋಸ್ತುತೆ
ಪ್ರಸೀದ ಕುರು ದೇವೇಶ  ದೀನಸ್ಯ ಪ್ರಣತಸ್ಯ ಚ
( ಜಪಸಂಖ್ಯೆ 23,000  , 19 ದಿನಗಳಲ್ಲಿ)

ಏಕಾಕ್ಷರಿ ಬೀಜಮಂತ್ರ :--

ಓಂ  ಶಂ  ಶನೈಶ್ಚರಾಯ  ನಮಃ

ಅನುಕೂಲ  ಮಂತ್ರ :-- 

ಐಮ್  ಕ್ಲೀಮ್ ಹ್ರೀಂ ಶ್ರೀಮ್ ಸೌಃ  ( ಜಪ  ಸಂಖ್ಯೆ  ಒಂದೂ ಕಾಲು  ಲಕ್ಷ)

ತಾಂತ್ರಿಕ  ವಿಧಾನ  ಮಂತ್ರ  :--

ಓಂ  ಪ್ರಾಂ ಪ್ರೀ0 ಪ್ರೌ0 ಸಃ  ಶನೈಶ್ಚರಾಯ ನಮಃ
( ಜಪಸಂಖ್ಯೆ  23,000)

ಶನಿ  ಲತ್ತಾ ಕಾಲದಲ್ಲಿ :--

ದೇಹಪೀಡೆ , ಜೆಸ್ಟಬ್ರಾತೃ ವಿನಿಂದ  ತೊಂದರೆಗಳುಂಟಾಗುತ್ತದೆ.

ಲತ್ತಾಶಾಂತಿ :-- ಕಬ್ಬಿಣ  ಮತ್ತು  ಎಳ್ಳು  ದಾನ,  ಅಶ್ವತ್ಥ  ಪ್ರದಕ್ಷಿಣೆ  ಮಾಡಬೇಕು.

ಶನಿಗ್ರಹದ  ಸ್ವಕ್ಷೇತ್ರವಾದ ಮಕರ ಲಗ್ನದವರು ಪೂಜಿಸಿ  ಧರಿಸ ಬಹುದಾದ ಯಂತ್ರ


ಪಂಚದಶಾಯಂತ್ರ

8
1
6
3
5
7
4
9
2

ಬೀಸಾಯಂತ್ರ

12
7
14
13
11
9
8
15
10

ಓಂ  ಐಮ್ ಕ್ಲೀಮ್ ಹ್ರೀಂ  ಶ್ರೀಮ್ ಸೌಃ

 ಶನಿಯ  ಸ್ವಕ್ಷೇತ್ರವಾದ  ಕುಂಬ  ಲಗ್ನದವರು  ಪೂಜಿಸಿ  ಧರಿಸಬಹುದಾದ  ಯಂತ್ರ

ಪಂಚದಶಾಯಂತ್ರ

2
7
6
9
5
1
4
3
8

ಬೀಸಾಯಂತ್ರ

12
7
14
13
11
9
8
15
10

ಓಂ  ಹ್ರೀಂ  ಐಮ್ ಕ್ಲೀಮ್ ಶ್ರೀಮ್


                        
--:   ವೈಜ್ಞಾನಿಕವಾಗಿ  ಶನಿ ಗ್ರಹ :--

Picture source: Internet/ social media
  ಸೂರ್ಯನಿಂದ  6 ನೇ  ಗ್ರಹ,  ಅನಿಲ ರೂಪಿಯಾದ  ಶನಿಯು  ಗುರು ಗ್ರಹದ  ನಂತರ ಸೌರಮಂಡಲದಲ್ಲಿ  ಎರಡನೇ  ಅತಿ ದೊಡ್ಡ  ಗ್ರಹ.   ಶನಿಯು  ಎದ್ದು ಕಾಣುವಂತ  ಉಂಗುರ ವ್ಯವಸ್ಥೆಯನ್ನು  ಹೊಂದಿದೆ.   ಈ  ಉಂಗುರಗಳು  ಮುಖ್ಯವಾಗಿ  ಮಂಜಿನ  ಪುಡಿಯಿಂದ ರಚಿತವಾಗಿದ್ದು,  ಸ್ವಲ್ಪ  ಕಲ್ಲಿನ  ಚೂರುಗಳು  ಮತ್ತು  ಧೂಳು ಸಹ   ಇವುಗಳಲ್ಲಿ  ಕಂಡುಬರುತ್ತದೆ.

   ಶನಿಯು  ಭೂಮಿಯಂತೆಯೇ  ದೃವಾಗಳಲ್ಲಿ ಸ್ವಲ್ಪ  ಚಪ್ಪಟೆಯಾಗಿದ್ದು,  ಸಮ ಭಾಜಕದಲ್ಲಿ ಉಬ್ಬಿಕೊಂಡಿದೆ.  ಅದರ  ಸಮಭಾಜಕ  ಮತ್ತು  ದೃವಗಳ  ಮೂಲಕ  ವ್ಯಾಸಗಳು  ಸುಮಾರು 10% ವ್ಯತ್ಯಾಸವನ್ನು  ಹೊಂದಿದೆ.  (120.536km  ಮತ್ತು 108.728 km ) .   ಶನಿಯ  ಈ  ಆಕಾರಕ್ಕೆ  ಅದರ ಅನಿಲ ರೂಪ  ಮತ್ತು  ತ್ವರಿತವಾದ  ಅಕ್ಷೀಯ  ಪರಿಭ್ರಮಣಗಳು ಕಾರಣ.  ಉಳಿದ  ಅನಿಲರೂಪಿ ಗ್ರಹಗಳು  ಈ ರೀತಿಯ  ಆಕಾರವನ್ನು  ಹೊಂದಿದ್ದರೂ  ಶನಿಯಲ್ಲಿ  ಇದು  ಎದ್ದು ಕಾಣುತ್ತದೆ . ಸೌರಮಂಡಲದಲ್ಲಿ   ನೀರಿಗಿಂತ  ಕಡಿಮೆ  ಸಾಂದ್ರತೆಯುಳ್ಳ  ಏಕೈಕ  ಗ್ರಹ  ಶನಿ.   ಶನಿಯ  ಸರಾಸರಿ ಸಾಂದ್ರತೆಯು  ನೀರಿನ  69% ರಷ್ಟಿದೆ.  ಇದು  ಕೇವಲ  ಸರಾಸರಿ  ಪ್ರಮಾಣ,  ಶನಿಯ ವಾಯುಮಂಡಲವು  ನೀರಿಗಿಂತ  ಹಗುರವಾಗಿದೆ  ಮತ್ತು  ಗ್ರಹದ  ಒಳಭಾಗವು  ಗಮನಾರ್ಹವಾಗಿ ಹೆಚ್ಚು  ಸಾಂದ್ರತೆಯನ್ನು  ಹೊಂದಿದೆ.  ಶನಿಯು  ಸುಮಾರು  56  ಉಪಗ್ರಹಗಳನ್ನು  ಹೊಂದಿದೆ.

ಕಕ್ಷೆಯ  ಗುಣಗಳು

ಧೀರ್ಘಅರ್ಧ ಅಕ್ಷ.  ---   1,426,725,413 km
Orbital  ಪರಿಧಿ    ---  8.958 ×10^12
ಕಕ್ಷೀಯ  ಕೇಂದ್ರ  ಚ್ಯುತಿ   ---  0.054 150 60
ಸೂರ್ಯನಿಂದ  ಕನಿಷ್ಠ  ದೂರ  ---  1,349,467,375 km
ಸೂರ್ಯನಿಂದ  ಗರಿಷ್ಠ  ದೂರ   ---  1,503, 983,449 km
ಕಕ್ಷೀಯ  ಪರಿಭ್ರಮನ  ಕಾಲ   ---     10,756.1995  ದಿನ
ಸರಾಸರಿ  ಕಕ್ಷಾವೇಗ   ---   9.639 km/ ಪ್ರತಿಕ್ಷಣ 
ಓರೆ   ---  2.484 46°
ನೈಸರ್ಗಿಕ  ಉಪಗ್ರಹಗಳ  ಸಂಖ್ಯೆ.  ---  56                        

ಭೌತಿಕ  ಗುಣಲಕ್ಷಣಗಳು

ಸಮಭಾಜಕ  ರೇಖೆಯ  ವ್ಯಾಸ  ---   120,536 km
ದ್ರುವಗಳ  ಮೂಲಕ  ವ್ಯಾಸ  ---  108,728 km
ಮೇಲ್ಮೈ  ವಿಸ್ತೀರ್ಣ  ---  4.27×10^10 km
ಗಾತ್ರ  ---   8.27×10^14 km
ದ್ರವ್ಯರಾಶಿ  --- 5.6846×10^27 k gram
ಸರಾಸರಿ  ಸಾಂದ್ರತೆ  ---  0.6873 ಗ್ರಾಮ್/ ಪ್ರತಿ  ಸೆ.ಮೀ
ಸಮಭಾಜಕದ ಬಳಿ  ಗುರುತ್ವ  ---  8.96 ಮೀ/ಕ್ಷಣ
ಮುಕ್ತಿವೇಗ  --- 35.49 km/ಪ್ರತಿಕ್ಷಣ
ಅಕ್ಷೀಯ  ಪರಿಭ್ರಮಣ ಕಾಲ --- 0.449 375 ದಿನ
ಅಕ್ಷೀಯ  ಪರಿಭ್ರಮಣ  ವೇಗ  ---  9.87km/ಪ್ರತಿಕ್ಷಣ
ಅಕ್ಷದ  ಓರೆ  ---  26.73°
ಪ್ರತಿಫಲನಾಂಶ  ---  0.47
ಮೇಲ್ಮೈ  ತಾಪಮಾನ  
-----------------------------
   min  ---  82 K
   mean  ---  143 K
   max   ---   N/A

ಮೋಡದ  ಪರದೆಯ ಮೇಲೆ  ಸರಾಸರಿ  ತಾಪಮಾನ  ---  93K

ವಾಯುಮಂಡಲದ  ಗುಣಲಕ್ಷಣಗಳು

ವಾತಾವರಣದ  ಒತ್ತಡ  --- 140k P a
ಜಲಜನಕ  ---  >93%
ಹೀಲಿಯಂ  --- >5%
ಮೀಥೇನ್  --- 0.2%
ನೀರಾವಿ  ---  0.1%
ಅಮೋನಿಯಾ  ---  0.01%
ಈಥೇನ್  ---  0.0005%
ಫಾಸ್ಪೀನ್  ---  0.0001%

**********
✍ ಡಾ: B. N.  ಶೈಲಜಾ ರಮೇಶ್

Wednesday, 13 July 2022

ಗುರುಪೂರ್ಣಿಮ

ಓಂ  ಶ್ರೀ ಗುರುಭ್ಯೋನಮಃ
ಓಂ ಶ್ರೀ ಮಹಾಗಣಪತಯೇ ನಮಃ

         ಆಷಾಢಮಾಸದ ಹುಣ್ಣಿಮೆಯಂದು ನಾವು ಆಚರಿಸುವ ಶ್ರೇಷ್ಠ ಹಬ್ಬವೆಂದರೆ ಅದು ಗುರುಪೂರ್ಣಿಮ  ಈ ದಿನ ನಾವು  ನಮ್ಮ ಗುರುವಿಗೆ ವಂದನೆ ಸಲ್ಲಿಸುವ ದಿನ, ಗುರುವಿನ ಮಹತ್ವವನ್ನು ಸಾರುವ ದಿನ.  ಗುರುವು ನಮಗೆ ಸರಿಯಾದ ದಿಕ್ಕು ಸೂಚುಸುವವ, ನಮ್ಮ ಕೈ ಹಿಡಿದು ನಡೆಸುವವ. ಪರಮಾತ್ಮನ ಅರಿವನ್ನು ತಿಳಿಯಲು ನಮ್ಮೊಳಗಿನ ಆತ್ಮವನ್ನು ಜಾಗೃತಗೊಳಿಸುವ  ಮಹತ್ವದ ವ್ಯಕ್ತಿ ಹಾಗೂ ಶಕ್ತಿ.
       ಸರಿಯಾದ ಹಾದಿಯಲ್ಲಿ  ನಮ್ಮನ್ನು ನಡೆಸಿ, ನಮ್ಮ ಗುರಿಯನ್ನು ಮುಟ್ಟಲು ಸಹಾಯ ಮಾಡುವವನೆ  ಗುರು  ಹುಡುಕಿದರೆ ಸಿಗುವವನಲ್ಲ... ನಮ್ಮೊಳಗೇ ನಮ್ಮನ್ನು ಹುಡುಕಿ, ನಾವು ಗುರುವನ್ನು ಕಾಣುವ ಮಟ್ಟಿಗೆ ಸಾಧನೆ ಮಾಡಿದ್ದರೆ ತಾನಾಗೇ ನಮ್ಮ ಬಳಿಗೆ ಬರುವವರು. ನಾವು ಗುರುವಿನ ಮುಖಾಂತರ  ಪರಮಾತ್ಮನ ಅರಿವನ್ನು ಪಡೆಯಬೇಕಾದ್ದರಿಂದ  ಗುರುಪೂರ್ಣಿಮೆಯಂದು ಮಾತ್ರವಲ್ಲದೇ ಪ್ರತಿದಿನ ಪ್ರತಿಕ್ಷಣ ಗುರುವನ್ನು ಅಂತರಂಗದಿಂದಲೇ ಪೂಜಿಸುತ್ತ ನಮ್ಮನ್ನು ನಾವು ಸಮರ್ಪಿಸಿಕೊಳ್ಳಬೇಕು. ನಮ್ಮದೇನಿಲ್ಲ ಗುರುಕರುಣೆಯೇ ಎಲ್ಲ ಎನ್ನುವ ಭಾವ ನಮ್ಮಲ್ಲಿ ಜಾಗೃತವಾಗಿಟ್ಟು ಕೊಂಡು ಗುರುವಲ್ಲಿ ಶರನಾದರೆ ಮಾತ್ರ ನಮ್ಮ ಗುರಿ ಮುಟ್ಟುವಲ್ಲಿನ ಪ್ರಯತ್ನ ಸಫಲವಾಗುತ್ತದೆ

ಗುರು ಬ್ರಹ್ಮ, ಗುರು ವಿಷ್ಣು | ಗುರು ದೇವೋ ಮಹೇಶ್ವರ 
ಗುರು ಸಾಕ್ಷಾತ್ ಪರಬ್ರಹ್ಮ | ತಸ್ಮೈಶ್ರೀ ಗುರುವೇ ನಮಃ ||

ಗುರುವು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರಣ ಸ್ವರೂಪವಾಗಿದ್ದು ಅದಕ್ಕೂ ಮಿಗಿಲಾದ ಪರಬ್ರಹ್ಮ ತತ್ವವೇ ಆಗಿದ್ದಾನೆ ಅಂತ ಗುರುಗಳಿಗೆ ಪ್ರಣಾಮಗಳು  ಎಂಬ ಅರ್ಥಪೂರ್ಣ ವಾದ ಈ ಸಾಲುಗಳೇ ಗುರುವಿನ ಮಹತ್ವವನ್ನು ಸಂಪೂರ್ಣವಾಗಿ ತಿಳಿಸಿಬಿಡುತ್ತವೆ. ಇಲ್ಲಿ ಗುರುವೇ ಎಲ್ಲವೂ ಮತ್ತು ಅವರಿಂದಲೇ ಎಲ್ಲವೂ ಅನ್ನುವುದು ಸ್ಪಷ್ಟವಾಗುತ್ತದೆ. ಗುರುವಿನ ಸ್ಥಾನ ತುಂಬಾ ಪವಿತ್ರವಾದದ್ದು, ಜವಾಬ್ದಾರಿಯುತವಾದದ್ದು. ಈ ಸಮಾಜಕ್ಕೆ ಉತ್ತಮ ನಾಗರಿಕರನ್ನು ಕೊಡುವ ಸೃಷ್ಟಿಕರ್ತರು. ಮನುಷ್ಯನಾದ ಮೇಲೆ ತನ್ನ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂದುಕೊಂಡಿರುತ್ತಾರೆ ಈ ಸಾಧನೆಗೆ ಸೇತುವೆ ನಿರ್ಮಿಸುವವರು ಈ ನಮ್ಮ ಗುರುಗಳು. ಶಿಷ್ಯರಿಗೆ ಗುರಿ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದವರು ಗುರು. ‘ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು’ ಅನ್ನೋ ಗಾದೆಮಾತು ತುಂಬಾ ಅರ್ಥಪೂರ್ಣವಾಗಿದೆ. ನಾವು ತಮ್ಮ ಗುರಿಯನ್ನು ತಲುಪಬೇಕೆಂದರೆ ಗುರುವಿನ ಸಲಹೆ, ಸಹಕಾರ ಮತ್ತು ಮಾರ್ಗದರ್ಶನ ಇರಲೇಬೇಕು. ಗುರುವಿನ ಸಹಾಯದಿಂದ ಮಾತ್ರ ನಾವು ಅಂದುಕೊಂಡ ಗುರಿ ತಲುಪಬಹುದು. 

        ವೇದ ಉಪನಿಷತ್ತಿನ ಪ್ರಕಾರ " ಗು " ಎಂದರೆ ಅಂಧಕಾರವೆಂದೂ " ರು " ಎಂದರೆ ಅಜ್ಞಾನದ ಅಂಧಕಾರವನ್ನು ನಿವಾರಿಸಿ ಜ್ಞಾನದ ಹಾದಿಗೆ ನಡೆಸುವವ ಎಂದರ್ಥ. ಸಂಸ್ಕ್ರುತ ದಲ್ಲಿ ಗುರು ಪದಕ್ಕೆ ಭಾರವಾದ ಎನ್ನುವ ಅರ್ಥವೂ ಇದೆ. ಯಾರು ಜ್ಞಾನದ ಭಾರದಿಂದ ತೂಗುವರೋ ಅವರೇ ಗುರು ಎಂದು ಅರ್ಥೈಸಬಹುದು.

        ಸ್ಕಾನ್ದ ಪುರಾಣದ ಗುರುಗೀತೆಯಲ್ಲಿ ಗುರುವನ್ನು ನಂದಾದೀಪದಂತೆ ಬೆಳಗುವ ಪ್ರಣತೆ ಎಂದು ಗುರುವಿನ ಮಹಿಮೆಯನ್ನು ವಿಸ್ತಾರವಾಗಿ ತಿಳಿಸಲಾಗಿದೆ.

          ಅಖಂಡಮಂಡಲಾಕಾರಮ್ 
           ವ್ಯಾಪ್ತಯೇನ ಚರಾಚರಂ
           ತತ್ಪದಂ ದರ್ಶಿತಂ ಯೇನ
           ತಸ್ಮೈ ಶ್ರೀ ಗುರವೇನಮಃ

ಆದಿಗುರು ಶ್ರೀ ಶಂಕರಾಚಾರ್ಯರು ಗುರುಸ್ತೋತ್ರವನ್ನು ಹೀಗೆ ಹೇಳುತ್ತಾರೆ

          ಅಜ್ಞಾನ ತಿಮಿರಾಂಧಸ್ಯ
          ಜ್ಞಾನಾಂಜನ ಶಾಲಾಕಯ
          ಚಕ್ಷುರಂಮೇಲಿತಮ್ ಯೇನ
          ತಸ್ಮೈ ಶ್ರೀ ಗುರವೇನಮಃ

ನಮ್ಮಲ್ಲಿರುವ ಅಜ್ಞಾನವೆಂಬ ಕಣ್ಣಿಗೆ ಅಂಟಿದ ಅಂಧಕಾರವನ್ನು ಜ್ಞಾನವೆಂಬ  ಕಡ್ಡಿಯಿಂದ ಗುಣಪಡಿಸಿ ಶಿಷ್ಯನ ಏಳಿಗೆಗೆ ಬೇಕಾದ ಸೋಪಾನವನ್ನು ಹತ್ತಿಸುವ ಸಾಧನೆಯ ಮಾರ್ಗದರ್ಶನ ಮಾಡುವ ಗುರುವಿಗೆ ವಂದನೆಗಳು

        ಹೀಗೆ ನಮ್ಮ ಪರಂಪರೆಯಲ್ಲಿ ಅನಾದಿಕಾಲದಿಂದಲೂ ಗುರುವಿನ ಮಹತ್ವವನ್ನು ಸಾರುತ್ತಾ......
        ನ ಗುರೋರಧಿಕಮ್ ತತ್ವಂ
        ನ ಗುರೋರಧಿಕಮ್ ತಪಃ
        ತತ್ವ ಜ್ಞಾನಾತ್ ಪರಂ ನಾಸ್ತಿ
        ತಸ್ಮೈ ಶ್ರೀ ಗುರವೇನಮಃ
ಅಂದರೆ ಗುರುವಿಗೆ ಮೀರಿದ ತತ್ವ ತಪಸ್ಸು ಬೇರೆ ಯಾವುದೂ ಇಲ್ಲ, ಜ್ಞಾನದ ದಾರಿದೀಪ ತೋರುವವನಾದ ಶ್ರೀ ಗುರುವಿಗೆ ನಮನ್ ಎಂದು ಹೇಳಿದ್ದಾರೆ.

       ಧರ್ಮದ ಪುನರ್ಸ್ಥಾಪಣೆಗಾಗಿಯೇ ಅವತರಿಸಿದ ಶ್ರೀ ಶಂಕರಾಚಾರ್ಯರು, ಶ್ರೀ ರಾಮಾನುಜಾಚಾರ್ಯರು, ಶ್ರೀ ಮಧ್ವಾಚಾರ್ಯರು ಈ ಮೂವರೂ ಆಚಾರ್ಯತ್ರಯರೆಂದೇ ಪ್ರಸಿದ್ಧರಾದವರು. ಇವರುಗಳು ಬೋಧಿಸಿದ್ದ  ಅದ್ವೈತ, ವಿಶಿಷ್ಟಾಅದ್ವೈತ, ದ್ವೈತ ಸಿದ್ಧಾಂತಗಳನ್ನು ಅನುಸರಿಸುವ ಗುರುಪರಂಪರೆಯೇ ಬೆಳೆದು ಅನೇಕ ಶಾಖೆಗಳಾಗಿ ವಿಭಜಿತವಾಗಿದ್ದರೂ ಗುರುಪರಂಪರೆ ಅನಾಹತವಾಗಿ ಮುಂದುವರೆದಿದೆ.. ಈ ಪರಂಪರೆಯಲ್ಲಿ ಈಗಿರುವ ಗುರುವಿನ ಗುರುವಿಗೆ ಪರಮಗುರು  ಎಂತಲೂ, ಪರಮಗುರುವಿನ ಗುರುವಿಗೆ ಪರಾಪರ ಗುರು ಎಂತಲೂ, ಪರಾಪರ ಗುರುವಿಗೆ ಪರಮೇಷ್ಠಿ ಗುರು ಎಂತಲೂ ಗುರುತಿಸಲ್ಪಡುತ್ತಾರೆ.  ಈ ಗುರುಪೂರ್ಣಿಮೆಯಂದು ಸಮಸ್ತ ಗುರುಪರಂಪರೆಯೇ ಪೂಜಿಸಲ್ಪಡುತ್ತದೆ.  ಈ ಗುರುಪೂರ್ಣಿಮೆಯನ್ನು ವ್ಯಾಸಪೂರ್ಣಿಮ ಎಂತಲೂ ಕರೆಯುತ್ತಾರೆ.

       ವೇದದಲ್ಲಿನ ಬ್ರಹ್ಮತತ್ವವನ್ನು ಅರಿತಿದ್ದ, ವಿಷ್ಣುವಿನ ಅವತಾರವೆಂದೇ ಕರೆಯಲ್ಪಡುವ ವೇದವ್ಯಾಸರನ್ನು ನಾವು ವಿಶೇಷವಾಗಿ ಗುರುಪರಂಪರೆಯ ಜೊತೆಗೆ ಈ ಗುರುಪೂರ್ಣಿಮೆಯಂದು ಪೂಜಿಸುತ್ತೇವೆ. ಲೋಕಗುರು, ಪರಮಗುರು ಎಂದೇ ಪ್ರಖ್ಯಾತರಾಗಿರುವ ಈ ವ್ಯಾಸರು  ವೇದಗಳನ್ನು ನಾಲ್ಕುಭಾಗಗಳನ್ನಾಗಿ ವಿಂಗಡಿಸಿದ್ದರಿಂದ ಇವರನ್ನು ವೇದವ್ಯಾಸರು ಎಂದು ಕರೆಯಲಾಯಿತು. ಇಡೀ ಮಾನವ ಕುಲಕ್ಕೇ ಒಳಿತಾಗಲೆಂದು ಮತ್ತು ವೇದಗಳ ರಹಸ್ಯ ಸಾಮಾನ್ಯರೂ ಅರಿಯುವಂತಾಗಬೇಕೆಂದು ಅವರು ನಮಗಾಗಿ ಮಹಾಭಾರತವೆಂಬ ಪಂಚಮವೇದವನ್ನು ರಚಿಸಿಕೊಟ್ಟರು. ಜೊತೆಗೆ ಭಾಗವತ, 18 ಪುರಾಣಗಳನ್ನು ರಚಿಸಿದರು. ಇಂತಹ ವ್ಯಾಸಮಹರ್ಷಿಗಳನ್ನು ವೇದವ್ಯಾಸರೆಂದು, ಲೋಕಾಗುರುವೆಂದು ಕರೆದು ಶ್ರದ್ಧೆ ಹಾಗೂ ಭಕ್ತಿಯಿಂದ ಗುರುಪೂರ್ಣಿಮೆಯಂದು ಪೂಜಿಸುತ್ತೇವೆ. 
" ಗುರು " ವನ್ನು ಒಬ್ಬ ವ್ಯಕ್ತಿ ಎಂದು ತಿಳಿಯದೆ ಒಂದು " ಶಕ್ತಿ " ಎಂದು ಅರ್ಥೈಸಿಕೊಂಡರೆ ನಮಗೆ ಗುರುವಿನ ಮಹತ್ವ ಇನ್ನೂ ಹೆಚ್ಚು ಆಳವಾಗಿ ತಿಳಿಯುತ್ತದೆ. ಬೇರೆ ಬೇರೆ ಗುರುಗಳು ಭೌತಿಕ ಶರೀರದಿಂದ ಬೇರೆ ಬೇರೆ ಎನಿಸಿದರೂ ಅವರೆಲ್ಲರ ಒಳಗಿನ ಗುರುತತ್ವ ಮಾತ್ರ ಒಂದೇ ಆಗಿರುತ್ತದೆ. ಅವರೆಲ್ಲರೂ ಹೊರಹೊಮ್ಮಿಸುವ, ಪಸರಿಸುವ ಲಹರಿಗಳು ತುಂಬಾ ಚೈತನ್ಯ ದಾಯಕವಾಗಿರುತ್ತದೆ. ವೇದಶಾಸ್ತ್ರಪುರಾಣಗಳಲ್ಲಿ ಮಾತ್ರವಲ್ಲದೆ ಭಕ್ತಿಮಾರ್ಗದಲ್ಲೂ ಗುರುವಿಗೆ ಅತ್ಯಂತ ಮಹತ್ವದ  ಸ್ಥಾನವಿದೆ.  ಭಗವದ್ಗೀತೆ ಯಲ್ಲಿ ಶ್ರೀ ಕೃಷ್ಣಾರ್ಜುನರ ಸಂಬಂಧ, ರಾಮಾಯಣದಲ್ಲಿ ಶ್ರೀರಾಮಾಂಜನೆಯರ ಸಂಬಂಧ ಗುರುಶಿಷ್ಯರ ಉತ್ತಮ ಸಂಬಂಧಕ್ಕೆ ಅತಿ ಸೂಕ್ತವಾದ ನಿದರ್ಶನಗಳು .

ಗುರುವಿಗೆ ಯಾವಾಗಲೂ ಶಿಷ್ಯನ ಉನ್ನತಿಯ ಬೆಳವಣಿಗೆಯ ಚಿಂತನೆಯೇ ಆಗಿರುತ್ತದೆ. ಜಗತ್ತಿನ ಸಮಸ್ತ ಗುರುಪರಂಪರೆಗೆ ವಂದಿಸುತ್ತಾ  ನನ್ನ ಸರ್ವತೋಮುಖ ಬೆಳವಣಿಗೆಗೆ ಕಾರಣರಾದ ನನ್ನೆಲ್ಲಾ ಗುರುಗಳಿಗೆ ನನ್ನ ಸಾಷ್ಟಾಂಗ ನಮನಗಳು🙏🙏         

ಗುರುಪೂರ್ಣಿಮಾದ  ಈ  ಶುಭ  ಸಂದರ್ಭದಲ್ಲಿ  ನನ್ನೆಲ್ಲಾ  ಜ್ಯೋತಿಷ್ಯ  ಗುರುಗಳಿಗಾಗಿ.... ಈ ಬರಹ ಸಮರ್ಪಿತ
               🙏🙏🙏🙏

ವಂದನೆ ಗುರುಗಳೇ ನಿಮಗೆ ಸಾಸಿರ ವಂದನೆ
ಅರಿವಿಲ್ಲದ ತಿಳಿವಿಲ್ಲದ ಮಂದಮತಿಯ ಅಜ್ಞಾನವಳಿಸಿ
ಸುಜ್ಞಾನವಿತ್ತ  ಗುರುಗಳೇ ನಿಮಗೆ  ಸಾಸಿರ  ವಂದನೆ ||

ಹೇ ಶುದ್ಧಾಂತಃಕರಣದ  ವಿಶುದ್ಧ ವಿದ್ಯಾಸಾಗರರೆ
ಈ ಮಿಥ್ಯ ಜಗದ  ಅನಿತ್ಯ  ಬದುಕ ಸತ್ಯಾಸತ್ಯತೆಯ ನ್ನು  ಅರಿವ ಜ್ಞಾನವನಿತ್ತ  ಗುರುವಿದೋ ನಿಮಗೆ  ಸಾಸಿರ  ವಂದನೆ

ಕಾಡ  ಕಗ್ಗಲ್ಲನು  ಸುಂದರ ಹೂವನಾಗಿಸಿ ಕೆತ್ತಿ
ಜ್ಯೋತಿಷ್ಯದ ಗಂಧವ ಪೂಸಿದ  ಸೌಗಂಧಿಕಾ  ಪುಷ್ಪದ ಜನಕ  ಅದ್ಬುತ ಶಿಲ್ಪಿಯೇ ನಿಮಗೆ  ಸಾಸಿರ  ವಂದನೆ

ಹೇಗೆ  ಹೇಳಲಿ ಗುರುವೆ ನಿಮಗೆ  ಅಭಿನಂದನೆಯ   ಹೇಗೆ ಹೊಗಳಲಿ  ಗುರುವೇ ನಿಮ್ಮ  ಕೃಪೆಯಾ
ಬಣ್ಣಿಸಲು ಪದವಿಲ್ಲ  ನಿಮ್ಮ ಸರಳ  ಸಜ್ಜನಿಕೆಯ
ಹೇ ಜ್ಯೋತಿಷ್ಯ ವಿದ್ಯಾ ಗುರುಗಳೇ ನಿಮಗಿದೋ 
ನನ್ನ ನುಡಿ ನಮನ.....
🙏🙏🙏🙏🙏🙏🙏🙏
   🌹🌿🌹🌿🌹🌿🌹
✍️  ಡಾ: ಶೈಲಜಾ ರಮೇಶ್.....