Wednesday, 6 November 2019

ಗುರುವಿನ ಗೋಚಾರ ಫಲ

                                 ಹರಿಃ ಓಂ
                   ಓಂ. ಶ್ರೀ ಗಣೇಶಾಯ ನಮಃ
                    ಓಂ ಶ್ರೀ ಗುರುಭ್ಯೋನಮಃ

*ಗುರುವಿನ ಗೋಚಾರ ಫಲ ಯಾವಾಗ ?* 


ಮನುಷ್ಯ ಜೀವನದಲ್ಲಿ ಸುಖಿಯಾಗಿರಬೇಕು, ಆತ ಸುಖವಾಗಿರಬೇಕಿದ್ದರೆ ಯಾವ ಕೊರತೆಯೂ ಇರಬಾರದು, ಇಂಥ ಸುಖವನ್ನು ಕಂಡುಕೊಳ್ಳಲಿಕ್ಕೆ ಮನುಷ್ಯನಿಗೆ ಜ್ಞಾನ ಬೇಕು.  ಈ ಸುಖ ಹಾಗೂ ಅರಿವು ಎರಡನ್ನೂ ನಮ್ಮ ಅನುಭವಕ್ಕೆ ತಂದುಕೊಡುವ ಗ್ರಹವೇ ಗುರುಗ್ರಹ. ಹೀಗಾಗಿ ಗುರುಗ್ರಹಕ್ಕೆ  ಜ್ಯೋತಿಷ ಶಾಸ್ತ್ರದಲ್ಲಿ ಶ್ರೇಷ್ಠ ಸ್ಥಾನವಿದೆ *.  ‘‘ಬೃಹಸ್ಪತಿ: ಶ್ರೇಷ್ಠ ಮತಿ:’’* ಅಂತ ಕರೀತಾರೆ. ಅಂದರೆ ಗುರುವು ಶ್ರೇಷ್ಠ ಬುದ್ಧಿಯನ್ನು ಹೊಂದಿರುವಾತ ಎಂದರ್ಥ.


              ಬೃಹಜ್ಜಾತಕದಲ್ಲಿ ಉಲ್ಲೇಖಿಸಿದಂತೆ *‘‘ಹೋರಾಸ್ವಾಮಿ ಗುರುಜ್ಞವೀಕ್ಷಿತಯುತಾನಾನ್ಯೈಶ್ಚ ವೀರ್ಯೋತ್ಕಟಾ ಭವತಿ’’* ಎಂಬ ಭದ್ರ ಬಲವನ್ನು ಕೊಡುತ್ತಾನೆ ಈ ಗುರು.    ಹಾಗಂದರೆ ಒಬ್ಬರ ಜಾತಕದಲ್ಲಿ ಅವರ ರಾಶಿಯನ್ನೋ, ಅಥವಾ ಲಗ್ನವನ್ನೋ ಗುರುಗ್ರಹ ನೋಡಿದರೆ, ಅಥವಾ ಸೇರಿದ್ದರೆ ಆ ವ್ಯಕ್ತಿ  ಅತ್ಯಂತ ಬಲಿಷ್ಠ ವ್ಯಕ್ತಿಯಾಗುತ್ತಾನೆ. ಹೀಗಾಗಿ ಜಾತಕದಲ್ಲಿ ಗುರು ಗ್ರಹಕ್ಕೆ ಯಾರಿಗೂ ಇಲ್ಲದ ಪ್ರಾಶಸ್ತ್ಯವನ್ನ ಕೊಟ್ಟಿದ್ದಾರೆ. ಅಷ್ಟೇ ಯಾಕೆ ನಮ್ಮ ಮನೆಯಲ್ಲಿ ಒಂದು ಮಂಗಳಕಾರ್ಯ ನಡೆಯಬೇಕಿದ್ದರೆ ಗುರುಬಲ ಅತ್ಯವಶ್ಯಕ, ಅದರಲ್ಲೂ ವಿವಾಹ, ಉಪನಯನದಂಥ ಕಾರ್ಯಕ್ರಮಗಳಿಗೆ ಗುರುಬಲವೇ ಜೀವಬಲ. ಇಂಥ ಗುರು ಈಗ ಸ್ಥಾನಬದಲಾವಣೆ ಮಾಡಿದ್ದಾನೆ. ಇಷ್ಟು ದಿನ ವೃಶ್ಚಿಕ ರಾಶಿಯಲ್ಲಿದ್ದ ಗುರು ಈಗ ಧನಸ್ಸು ರಾಶಿಯನ್ನು ಪ್ರವೇಶ ಮಾಡಿದ್ದಾನೆ. 

         ಈ ಗುರುವಿನ ಗೋಚಾರ ದಿಂದ ಕೆಲವು ರಾಶಿಗಳಿಗೆ ಶುಭಫಲ,  ಹಾಗೆಯೇ ಕೆಲವು ರಾಶಿಗಳಿಗೆ ಸಾಮಾನ್ಯ ಪಲಗಳುಂಟಾಗುತ್ತದೆ,  ಹಾಗಾದರೆ  ....ಈ ಫಲಗಳು ಯಾವಾಗ ದೊರೆಯುತ್ತದೆ, ಸ್ಥಾನ.ಬದಲಾವಣೆ ಆದ ತಕ್ಷಣವೇ ಫಲ ದೊರೆಯಬಹುದೇ? ಅಥವಾ  ಯಾವಾಗ? ಈ ಪ್ರಶ್ನೆ ಕಾಡುತ್ತದೆ.  ಪೃಚ್ಛಕರು ನಮ್ಮ ಬಳಿ ಬಂದಾಗ ಗ್ರಹಗಳ ಬದಲಾವಣೆ ಆದ ನಂತರ ಫಲವೆಂದು ಹೇಳುತ್ತೇವೆ.  ಆದರೆ ಗ್ರಹಗಳ ಬದಲಾವಣೆ ಆದ ನಂತರವೂ ಪರಿಸ್ಥಿತಿಯಲ್ಲಿ ಬದಲಾವಣೆ ಆಗದೇ ಇದ್ದಾಗ ... ನಮ್ಮ ಪ್ರಿಡಿಕ್ಷನ್ ತಪ್ಪೇನೂ ಅನ್ನುವ ಅನುಮಾನ ಬರದೇ ಇರೋಲ್ಲ...  ಹಾಗಾದರೆ ಗುರುವಿನ ಫಲ ಯಾವಾಗ..?

     ಒಂದು ಗ್ರಹ ಸ್ಥಾನ ಬದಲಾವಣೆ ಮಾಡಿದ ಕೂಡಲೆ ಫಲ ಕೊಟ್ಟುಬಿಡುತ್ತದೆ ಎಂಬುದು ಕೇವಲ ಕಲ್ಪನೆಯಾಗುತ್ತದೆ. ಒಂದು ಗ್ರಹ ಫಲ ಕೊಡಬೇಕಿದ್ದರೆ ಆ ಗ್ರಹಕ್ಕೆ ಬಲವಿರಬೇಕು. ಅಂದರೆ ಆ ಗ್ರಹ ತನ್ನ ಸ್ವಂತ ಮನೆಯಲ್ಲೋ, ತನ್ನ ಉಚ್ಚರಾಶಿಯಲ್ಲೋ, ತನ್ನ ಮೂಲ ತ್ರಿಕೋಣ ರಾಶಿಯಲ್ಲೋ ಇರಬೇಕು. ಅದನ್ನು ಸ್ಥಾನ ಬಲವೆಂದು ಕರೆಯುತ್ತಾರೆ. ಈಗ ಗುರು ಪ್ರವೇಶವಾಗಿರುವುದು ಧನಸ್ಸು ರಾಶಿಗೆ. ಧನಸ್ಸು ರಾಶಿ ಗುರುವಿನ ಸ್ವಂತ ಮನೆ. ಅಲ್ಲದೆ ಮೂಲ ತ್ರಿಕೋಣ ಸ್ಥಾನವೂ ಹೌದು. ( ಪ್ರಾರಂಭದ 10 ಅಂಶ ( ಡಿಗ್ರಿ ) ಮೂಲ ತ್ರಿಕೋಣ ನಂತರದ 20 ಡಿಗ್ರಿ ಸ್ವಕ್ಷೇತ್ರವಾಗಿದೆ. ) ಹೀಗಾಗಿ ಗುರುವಿಗೆ ಸಂಪೂರ್ಣಬಲ ಬಂದಿದೆ. ಬಲ ಬಂದಿದೆ ಆದರೆ ಶಾಸ್ತ್ರದ ಪ್ರಕಾರ ಗುರು ತನ್ನ ಫಲವನ್ನು ಕೊಡಲಿಕ್ಕೆ ಇನ್ನೂ ಕೆಲವು ದಿನಗಳಕಾಲ ಹೋಗಬೇಕು. ಯಾಕೆಂದರೆ ಅದಕ್ಕೊಂದು ಆಧಾರವನ್ನು ಕೊಡುತ್ತಾರೆ ಪಿತಾಮಹ ವರಾಹಮಿಹಿರರು.

 *" *ದಿನಕರ ರುಧಿರೌ ಪ್ರವೇಶ ಕಾಲೇ ಗುರು ಬೃಗುಜೌ ಭವನಸ್ಯ* *ಮಧ್ಯಯಾತೌ* 
 *ರವಿಸುತ ಶಶಿನೌ ವಿನರ್ಗಮಸ್ಥೌ*ಶಶಿತನಯ: ಫಲದಸ್ತು ಸಾರ್ವಕಾಲಂ "*
ಜ್ಯೋತಿಷದಲ್ಲಿ ಈ ಸೂತ್ರ ಪ್ರಧಾನವಾಗಿದೆ. ಇದರ ಆಧಾರದ ಮೇಲೆಯೇ ಗ್ರಹಗಳು ಫಲಕೊಡುವ ಕಾಲವನ್ನು ನಿರ್ಣಯಿಸಬೇಕಾಗುತ್ತದೆ.  ಈ ಸೂತ್ರ ವಿವರಿಸುವ ಹಾಗೆ ಕೆಲವು ಗ್ರಹಗಳು ಒಂದು ರಾಶಿಯನ್ನು ಪ್ರವೇಶ ಮಾಡಿದ ಕೂಡಲೇ ಫಲಕೊಡಲಿಕ್ಕೆ ಸಮರ್ಥವಾಗಿರುತ್ತವೆ. ಇನ್ನೂ ಕೆಲವು ಕಾಲಾನಂತರದಲ್ಲಿ ಫಲ ಕೊಡಲಿಕ್ಕೆ ಯೋಗ್ಯವಾಗುತ್ತವೆ. ಅವುಗಳನ್ನ ಅರಿಯದೇ ಫಲವನ್ನು ಹೇಳುವುದು ಕಷ್ಟವಾಗುತ್ತದೆ. ಹಾಗಾದರೆ ಯಾವ ಗ್ರಹಗಳು ಯಾವಾಗ ಫಲ ಕೊಡುತ್ತವೆ ಎಂಬುದು ನಮಗೆ ಅರ್ಥವಾಗಬೇಕು. ಮೇಲಿನ ಸೂತ್ರವೇ ವಿವರಿಸುವ ಹಾಗೆ ರಾಶಿಯನ್ನು ಪ್ರವೇಶ ಮಾಡಿದ ತಕ್ಷಣವೇ ಫಲಕೊಡುವ ಗ್ರಹಗಳೆಂದರೆ ರವಿ ಹಾಗೂ ಕುಜರು.

ಇನ್ನೂ ಕೆಲವು ಗ್ರಹಗಳು *ಭವನಸ್ಯ ಮಧ್ಯಯಾತೌ* ಅಂದರೆ, ರಾಶಿಯ ಮಧ್ಯಭಾಗದಲ್ಲಿ ಫಲವನ್ನು ಕೊಡುತ್ತಾರೆ, ಹಾಗೆ ರಾಶಿಯ ಮಧ್ಯಭಾಗದಲ್ಲಿ ಫಲ ಕೊಡುವ ಗ್ರಹಗಳು *ಗುರು ಹಾಗೂ ಶುಕ್ರರು.* ಇನ್ನೂ ಕೆಲವು ರಾಶಿಯ ಕೊನೆಯ ಭಾಗದಲ್ಲಿ ಫಲವನ್ನು ಕೊಟ್ಟು ಮುಂದಿನ ರಾಶಿಗೆ ಹೋಗಲಿವೆ. ಆ ಗ್ರಹಗಳೆಂದರೆ *ಶನಿ ಹಾಗೂ* *ಚಂದ್ರರು* . ಇನ್ನು *ಬುಧ ಗ್ರಹ* ಮಾತ್ರ ಎಲ್ಲ ಕಾಲದಲ್ಲೂ ಅಂದರೆ ರಾಶಿಯ ಪ್ರವೇಶದಿಂದ ಹಿಡಿದು ಮತ್ತೊಂದು ರಾಶಿಗೆ ಹೋಗುವವರೆಗೆ ಎಲ್ಲ ಸಮಯದಲ್ಲೂ ಫಲಕೊಡುತ್ತಾನೆ ಅಂತ. 

        ಅಲ್ಲಿಗೆ ಗುರು ಗ್ರಹ ಪ್ರವೇಶವಾದ ಕೂಡಲೇ ಸಂಪೂರ್ಣ ಫಲವನ್ನು ಕೊಡುವುದಿಲ್ಲ ರಾಶಿಯ ಮಧ್ಯಭಾಗದಲ್ಲಿ ತನ್ನ ಫಲವನ್ನು ಕೊಡಲಿಕ್ಕೆ ಸಂಪೂರ್ಣ ಬಲಿಷ್ಠನಾಗಿರುತ್ತಾನೆ. ರಾಶಿಯ ಮಧ್ಯ ಭಾಗ ಅಂದರೆ ಒಂದು ರಾಶಿಗೆ 30 ಅಂಶ. ಆ 30 ಅಂಶಗಳನ್ನ ಮೂರು ಭಾಗ ಮಾಡಿದರೆ ಅದನ್ನೇ ದ್ರೇಕ್ಕಾಣ ಅಂತಾರೆ. ಮೊದಲ ಭಾಗವನ್ನು ಪ್ರಥಮ ದ್ರೆಕ್ಕಾಣ ವೆಂತಲೂ ದ್ರೇಕ್ಕಾಣಗಳನ್ನು ಕಳೆದು 10 ಡಿಗ್ರಿಯಿಂದ 20 ಡಿಗ್ರಿಯವರಿದೆ ದ್ವಿತೀಯ ದೇಕ್ಕಾಣ ಎಂತಲೂ 20 ಡಿಗ್ರಿಯಿಂದ 30 ಡಿಗ್ರಿಯವರೆಗೆ ತೃತೀಯ ದೇಕ್ಕಾಣ ವೆಂತಲೂ ಕರೆಯುತ್ತಾರೆ.10 ನೇ ಡಿಗ್ರಿಯಿಂದ 20 ನೇ ಡಿಗ್ರಿಯ ಈ ದ್ವಿತೀಯ ದೇಕ್ಕಾಣದ ಭಾಗವನ್ನೇ ರಾಶಿಯ ಮಧ್ಯಭಾಗ ಅಂತ ಕರೀತಾರೆ. ಹಾಗಾಗಿ ಗುರು ಆ ಮಧ್ಯ ದ್ರೇಕ್ಕಾಣಕ್ಕೆ ಬರಲಿಕ್ಕೆ ಇನ್ನೂ ಕೆಲ ದಿನಗಳು ಬೇಕು. ಹಾಗಂತ ಫಲವಿಲ್ಲ ಅಂತಲ್ಲ, ಫಲವಿದೆ ... ಸಂಪೂರ್ಣ ಫಲ ಬರಲಿಕ್ಕೆ ಕಾಯಬೇಕು ಅಷ್ಟೆ. 

ಮುಂದುವರಿಯುತ್ತದೆ......

 *✍️ ಡಾ: B.N. ಶೈಲಜಾ ರಮೇಶ್*

Tuesday, 5 November 2019

ವೃಶ್ಚಿಕ ರಾಶಿಯಿಂದ ಧನಸ್ಸು ರಾಶಿಗೆ ಗುರು ಗೋಚಾರದಿಂದ ಶುಭತ್ವ ಪಡೆವ ರಾಶಿಗಳು

                               ಹರಿಃ ಓಂ
              ಓಂ ಶ್ರೀ ಮಹಾಗಣಪತಯೇ ನಮಃ
                   ಓಂ ಶ್ರೀ ಗುರುಭ್ಯೋನಮಃ


*ಗುರುಗ್ರಹವು ಧನಸ್ಸು ರಾಶಿಗೆ ಪ್ರವೇಶದಿಂದ  ಅನುಕೂಲವಾಗುವ ರಾಶಿಗಳು:--* 


         ಗುರು ಗ್ರಹ ನಮ್ಮ ಸೌರವ್ಯೂಹದಲ್ಲಿ ಅತಿ ದೊಡ್ಡ ಗ್ರಹ,  ಗುರು ಎಂದರೆ ದೊಡ್ಡದು ಜ್ಞಾನವುಳ್ಳದ್ದು  ಎಂದರ್ಥ.  ಗುರುಗ್ರಹ ತನ್ನ ಶಕ್ತಿಯಿಂದ ಪಾಪಗ್ರಹಗಳ ದೃಷ್ಟಿಯನ್ನು ಕಡಿಮೆಮಾಡುತ್ತದೆ ಗುರುಗ್ರಹವು ದ್ವಾದಶ ರಾಶಿಗಳಲ್ಲಿ ಸಂಚಾರ ಮಾಡುವಾಗ ಎಲ್ಲಾ ರಾಶಿಯಲ್ಲಿ ಒಂದು ವರ್ಷದ ಕಾಲ ಇರುತ್ತದೆ , ಒಬ್ಬ ವ್ಯಕ್ತಿಯ ಜಾತಕ ಚಕ್ರದಲ್ಲಿ ಗುರುವು ಶುಭ ಸ್ಥಾನದಲ್ಲಿರುವವರಿಗೆ ಕೀರ್ತಿ ಯಶಸ್ಸು ವಿದ್ಯೆ ಸಂಪತ್ತು ಮತ್ತು ವೈವಾಹಿಕ ಜೀವನ ಉತ್ತಮ ಇರುವಂತೆ ಮಾಡುತ್ತದೆ ಮತ್ತು ಒಳ್ಳೆಯ ಅದೃಷ್ಟವನ್ನು ತಂದುಕೊಡುತ್ತದೆ. ಗುರು ಗ್ರಹವನ್ನು ಸಂಪೂರ್ಣವಾದ ಶುಭಗ್ರಹ ಅಂತಾನೆ ಹೇಳಬಹುದು ದೇವರ ಮೇಲೆ ಭಕ್ತಿ ಹೆಚ್ಚಾಗುವಂತೆ ಮಾಡುತ್ತದೆ ಉಳಿದ ಗ್ರಹಗಳ ಗೋಚಾರದ ಫಲಾಫಲಗಳು ಗುರುಗ್ರಹದ ಮೇಲೆ ಆಧಾರವಾಗಿರುತ್ತದೆ. ಅಂತಹ ಗುರು ಗ್ರಹವು ಶುಭಸ್ಥಾನದಲ್ಲಿದ್ದರೆ ಅನುಕೂಲ ಫಲಿತಾಂಶಗಳನ್ನು ಕಾಣಬಹುದು. ನಮ್ಮ ಕೆಲಸಗಳು ನಿಧಾನವಾಗುವುದು ಇನ್ನಿತರ ಕೆಲಸಕಾರ್ಯಗಳಲ್ಲಿ ತಡೆ ಮತ್ತು ಮದುವೆ ಕಾರ್ಯದಲ್ಲಿ ತಡವಾಗುವುದು  ಆಗುತ್ತಿದ್ದರೆ  ಜಾತಕದಲ್ಲಿ ಗುರುವಿನ ಸ್ಥಾನವು ಅನುಕೂಲವಾಗಿಲ್ಲ ಎಂದು ತಿಳಿಯಬಹುದು.  

           ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 2019ರ ನವೆಂಬರ್ 5ನೆ ತಾರೀಖು  ಬೆಳಿಗ್ಗೆ 2 - 45 ರಿಂದ 3  ಗಂಟೆಯ ಮಧ್ಯದಲ್ಲಿ , ಅಂದರೆ ಇಂದು ಬೆಳಗಿನ ಜಾವ ಗುರು ಗ್ರಹವು ವೃಶ್ಚಿಕ ರಾಶಿಯಿಂದ  ತನ್ನ ಸ್ವಸ್ಥಾನವಾದ ಧನಸ್ಸುವಿಗೆ  ಪ್ರವೇಶಿಸಿದೆ.  

         ಗುರುವು ಧನುರ್ ರಾಶಿಗೆ  ಪ್ರವೇಶಿಸಿರುವುದರಿಂದ  ದ್ವಾದಶ ರಾಶಿಗಳಲ್ಲಿ ಕೆಲವು ರಾಶಿಗಳಿಗೆ ಲಾಭದಾಯಕವಾಗಿದೆ.... ಆ ರಾಶಿಗಳು ಯಾವುದೆಂದು ತಿಳಿಯೋಣ.
         *ಗುರುಗ್ರಹವು ಗೋಚಾರದಲ್ಲಿ   ಎರಡನೇ ಸ್ಥಾನ 5 ನೇ ಸ್ಥಾನ ಏಳನೇ ಸ್ಥಾನ 9ನೇ ಸ್ಥಾನ ಮತ್ತು 11ನೇ ಸ್ಥಾನದಲ್ಲಿ  ಸಂಚರಿಸುವಾಗ ಒಳ್ಳೆಯ ಫಲಿತಾಂಶ ನೀಡುತ್ತದೆ . ಗುರುವು ಈ ಸ್ಥಾನಗಳಲ್ಲಿ ಸಂಚರಿಸುವಾಗ ಗುರುಬಲ ಇದೆಯೆಂದು ತಿಳಿಯಬೇಕು.* 

     ಮೊದಲಿಗೆ *ಮೇಷ ರಾಶಿಗೆ* ಗುರುವು  9ನೇ ಸ್ಥಾನದಲ್ಲಿ ಸಂಚರಿಸುವುದರಿಂದ ಈ ಸಮಯದಲ್ಲಿ ಮೇಷ ರಾಶಿಯವರಿಗೆ ಅದ್ಭುತವಾದ ಫಲಿತಾಂಶ ಸಿಗುತ್ತದೆ.  ಮುಖದಲ್ಲಿ ಶಾಂತಿ ಹೆಚ್ಚಾಗುತ್ತದೆ. ವೇದಶಾಸ್ತ್ರಗಳು ಕಲಿಯಬೇಕು ಎಂಬ ಆಸೆಗಳು ಹೆಚ್ಚಾಗುತ್ತದೆ . ವ್ಯಾಪಾರದಲ್ಲಿ ಆರ್ಥಿಕವಾಗಿ ಅಭಿವೃದ್ಧಿಯನ್ನು ಕಾಣುತ್ತಾರೆ. ಮದುವೆ ಪ್ರಯತ್ನ ಮಾಡುವವರಿಗೆ ಇದು ಒಳ್ಳೆಯ ಸಮಯ . ಶತ್ರುಗಳ ಮೇಲೆ ಜಯಭೇರಿಯನ್ನು ಸಾಧಿಸಬಹುದು,  9 ನೇ ಸ್ಥಾನದಲ್ಲಿ ಅದೂ ತನ್ನ ಸ್ವಸ್ಥಾನದಲ್ಲಿ ಗುರು  ಇರುವಾಗ ಕಾರ್ಯಸಿದ್ದಿ ,ಕುಟುಂಬ ಸೌಖ್ಯ ,ಅಧಿಕಾರವಿರುತ್ತದೆ .ಮತ್ತು ಅಭಿವೃದ್ಧಿಯನ್ನು ಕಾಣಲು ಅನುಕೂಲವಾಗಿರುವುದು ರಿಂದ ಇದು ಒಳ್ಳೆಯ ಯೋಗ ಅಂತಾನೆ ಹೇಳಬಹುದು.

        *ಮಿಥುನ ರಾಶಿ :* ನಿಮಗೆ ಗುರು ಏಳನೇ ಸ್ಥಾನದಲ್ಲಿ ಇರುವುದರಿಂದ ಆರೋಗ್ಯವನ್ನು ಸುಧಾರಿಸುತ್ತದೆ. ಮತ್ತು  ಪ್ರಶಾಂತತೆಯಿಂದ ಸಂತಸದಿಂದ ಇರುವ ಯೋಗ, ಆರ್ಥಿಕವಾಗಿ ಅಭಿವೃದ್ಧಿಯನ್ನು  ಕಾಣಬಹುದು, ವಿದೇಶ ಪ್ರಯಾಣಕ್ಕೆ ಅನುಕೂಲವಾಗುತ್ತದೆ. ವಿವಾಹ ಪ್ರಯತ್ನ ಮಾಡುವವರಿಗೆ ಒಳ್ಳೆಯ ಸಮಯ ಅಂತಾನೆ ಹೇಳಬಹುದು ವಿದ್ಯಾರ್ಥಿಗಳಿಗೆ ಅನುಕೂಲವಾದ ಸಮಯ ಇರುತ್ತದೆ. ಪುಣ್ಯಕ್ಷೇತ್ರ ತೀರ್ಥಕ್ಷೇತ್ರ ದರ್ಶನ. ಧನಲಾಭ, ಕುಟುಂಬ ಸೌಖ್ಯ, ಆರ್ಥಿಕವಾಗಿ ಅಭಿವೃದ್ಧಿ ಕಾಣಬಹುದು,ದೈವಾನುಗ್ರಹದಿಂದ  ಇದು ಒಳ್ಳೆಯ ಸಮಯ ಅಂತಾನೆ ಹೇಳಬಹುದು.

         *ಸಿಂಹ ರಾಶಿ:*  ಈ ರಾಶಿಗೆ ಗುರುವು ಐದನೇ ಸ್ಥಾನದಲ್ಲಿ ಇರುವುದರಿಂದ ಮಾಡುವ ಕೆಲಸದಲ್ಲಿ ವ್ಯಾಪಾರದಲ್ಲಿ ಒಳ್ಳೆಯ ಅದ್ಭುತವಾದ ಫಲಿತಾಂಶ ಕಾಣುವುದು. ಉದ್ಯೋಗದಲ್ಲಿರುವವರಿಗೆ ವೇತನ ಹೆಚ್ಚಾಗುತ್ತದೆ. ವ್ಯಾಪಾರ ವಿಸ್ತಾರವಾಗಿ ಆರ್ಥಿಕವಾಗಿ ಅಭಿವೃದ್ಧಿ ಕಾಣಬಹುದು ಮತ್ತು  ತುಂಬಾ ದಿನದಿಂದ ಅನುಭವಿಸುತ್ತಿರುವ ಸಮಸ್ಯೆಗಳು ದೂರವಾಗುತ್ತದೆ. ಮಾನಸಿಕ ಚಿಂತೆ ದೂರವಾಗುತ್ತದೆ . ಪ್ರತಿಭೆಗಳಿಗೆ ಪ್ರಶಾಂತತೆ ಸಿಗುತ್ತದೆ. ಸಿಂಹ ರಾಶಿಗೆ ಗುರುವು ಶುಭ ಸ್ಥಾನದಲ್ಲಿರುವುದರಿಂದ ಧನಲಾಭ, ಶತ್ರುನಾಶ , ಶುಭಕಾರ್ಯ ನಡೆಯುತ್ತದೆ ಆರ್ಥಿಕವಾಗಿ ಅಭಿವೃದ್ಧಿ ಕಾಣುತ್ತಿದೆ.

       *ವೃಶ್ಚಿಕ ರಾಶಿಗೆ :* ಗುರುವು ಎರಡನೇ ಸ್ಥಾನದಲ್ಲಿ ಇರುವುದರಿಂದ  ಆರ್ಥಿಕವಾಗಿ ಒಳ್ಳೆಯ ಫಲಿತಾಂಶ ಕಾಣಲಿದೆ. ಅದೃಷ್ಟ ಒಲಿದು ಬಂದು ಗೌರವ ಪ್ರಾಪ್ತಿಯಾಗುತ್ತದೆ. ಆಕಸ್ಮಿಕ ಧನಲಾಭ ಸಿಗುತ್ತದೆ. ಉದ್ಯೋಗದಲ್ಲಿ ಅದ್ಭುತವಾದ ಫಲಿತಾಂಶವನ್ನು ಕಾಣಬಹುದು.  ಬಾಳಸಂಗಾತಿಯ ಜೊತೆ ಬಾಂಧವ್ಯ ಹೆಚ್ಚಾಗುತ್ತದೆ. ಋಣಬಾಧೆ ತೀರುತ್ತದೆ. ಅನಾರೋಗ್ಯ ಸಮಸ್ಯೆಯಿಂದ ಹೊರ ಬರುಬಹುದು.  ಗುರುವು ಅನುಕೂಲ ವಾಗಿರುವುದರಿಂದ ಈಗ ಒಳ್ಳೆಯ ಕಾಲ ಅಂತನೇ ಹೇಳಬಹುದು.

      *ಕುಂಭ ರಾಶಿ:*  ಈ ರಾಶಿಗೆ ಗುರು 11 ನೆ ಸ್ಥಾನದಲ್ಲಿರುವುದರಿಂದ  ಉದ್ಯೋಗ ಹುಡುಕುವವರಿಗೆ ಇದು ಒಳ್ಳೆಯ ಸಮಯ.  ಮತ್ತು  ವ್ಯಾಪಾರದಲ್ಲಿ ಒಳ್ಳೆಯ ಲಾಭವನ್ನು ಕಾಣುಬಹುದು. ಆತ್ಮವಿಶ್ವಾಸದಿಂದ ತೆಗೆದುಕೊಳ್ಳುವ ನಿರ್ಣಯದಿಂದ ವೃತ್ತಿ ವ್ಯಾಪಾರದಲ್ಲಿ ವಿಜಯವನ್ನು ಸಾಧಿಸಬಹುದು, ಆರೋಗ್ಯ ಚೆನ್ನಾಗಿರುತ್ತದೆ.  ಹೊಸ ವಾಹನ ಖರೀದಿಯಿಂದ ಒಳ್ಳೆಯ ಲಾಭವಾಗುತ್ತದೆ ಆರ್ಥಿಕವಾಗಿ ಅಭಿವೃದ್ಧಿ ಕಾಣುಬಹುದು. ಮಾನಸಿಕವಾಗಿ ಪ್ರಶಾಂತತೆಯಿಂದ ಕುಟುಂಬ ಸದಸ್ಯರ ಜೊತೆ ಸಂತೋಷದಿಂದ
ಇರಬಹುದು. ಗುರುವು ಈ ರಾಶಿಗೆ 11ನೇ ಸ್ಥಾನದಲ್ಲಿ ಸಂಚರಿಸುತ್ತಿರುವುದರಿಂದ  ಧನಲಾಭ ಕೀರ್ತಿ ಯಶಸ್ಸು ಕುಟುಂಬ ಸೌಖ್ಯ ಸಿಗುತ್ತದೆ.

    ✍️ *ಡಾ: B.N. ಶೈಲಜಾ ರಮೇಶ್*