ಹರಿಃ ಓಂ
ಶ್ರೀ ಗುರುಭ್ಯೋ ನಮಃ
ಶ್ರೀ.ಮಹಾಗಣಪತಯೇ ನಮಃ
ಬೇವಿನ ಕಹಿಯ ಮರೆತು
ಬೆಲ್ಲದ ಸಿಹಿಯ ಜೊತೆಗೆ
ಬೇಳೆಯ ಸವಿ ಹೂರಣ
ಹಳೆಯದೆಲ್ಲ ಕಹಿ ಮರೆತು
ಹೊಸವರ್ಶದ ಸಂಭ್ರಮದೇ
ಬದುಕಾಗಲಿ ಪೂರ್ಣ
ನನ್ನೆಲ್ಲ ಸನ್ಮಿತ್ರರಿಗೆ ಶ್ರೀ ವಿಕಾರಿ ನಾಮ ಸಂವತ್ಸರವು ಸಕಲ ವಿಧವಾದ ಸುಖ ಸಂಪದ ತರಲೆಂದು ಹಾರೈಸುವೆ
ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು
ನವಯುಗಾದಿ ಆಚರಣೆ, ಜ್ಯೋತಿಷ್ಯ ಹಾಗೂ ವೈಜ್ಞಾನಿಕ ಹಿನ್ನಲೆ:---
ಯುಗಾದಿ ಹೆಸರೇ ಹೇಳುವಂತೆ ಯುಗದ ಆದಿ. "ಯುಗಾದಿ" ಪದದ ಉತ್ಪತ್ತಿ "ಯುಗ+ಆದಿ" - ಹೊಸ ಯುಗದ ಆರಂಭ ಎಂದು.
ಯುಗಾದಿ ಅಥವಾ ಉಗಾದಿ ಎಂದರೆ ಸೃಷ್ಟಿಯ ಆರಂಭ ಅಥವಾ ಹೊಸ ಸಂವತ್ಸರ ಎಂದು ಹಿರಿಯರು ಹೇಳುತ್ತಾರೆ. ಸೃಷ್ಟಿಕರ್ತನಾದ ಬ್ರಹ್ಮದೇವನು ಈ ದಿನದಿಂದಲೇ ತನ್ನ ಸೃಷ್ಟಿ ಕ್ರಿಯೆ ಆರಂಭಿಸಿದ್ದು ಎನ್ನುವ ಅಂಶವೂ ಯುಗಾದಿಯ ಆಚರಣೆಯೊಂದಿಗೆ ಸೇರಿಕೊಂಡಿದೆ.
ಯುಗಾದಿ ತತ್ಸಮ ಪದವಾದರೆ ಉಗಾದಿ ತದ್ಭವ, ಯುಗಾದಿ ಹಬ್ಬವು ಪೌರಾಣಿಕ ಹಾಗೂ ಐತಿಹಾಸಿಕ ವಿಶೇಷತೆಗಳ ದಿನವಾಗಿದೆ. ಇದು ಬ್ರಹ್ಮದೇವನ ಸೃಷ್ಟಿಯ ದಿನ. ಚೈತ್ರಶುದ್ಧ ಪಾಡ್ಯದಂದು ಸೂರ್ಯೋದಯವಾಗುತ್ತಿರುವಾಗ ಬ್ರಹ್ಮನು ವಿಶ್ವವನ್ನು ಸೃಷ್ಟಿಸಿದನೆಂದೂ, ಅಂದಿನಿಂದ ಕಾಲಗಣನೆಗಾಗಿ ಗ್ರಹ-ನಕ್ಷತ್ರ-ಮಾಸ-ಋತು-ವರ್ಷ ಇವುಗಳನ್ನು ಏರ್ಪಡಿಸಿದನೆಂದು ಪುರಾಣಗಳಲ್ಲಿ ಉಲ್ಲೇಖವಿದೆ.
ಯುಗಾದಿ ಅತಿ ದೊಡ್ಡ ಹಬ್ಬ. ಗುಜರಾತ್- ರಾಜಸ್ಥಾನದ ಕೆಲವು ಭಾಗಗಳನ್ನು ಹೊರತುಪಡಿಸಿ ಇತರ ಕಡೆಗಳಲ್ಲಿ ಚೈತ್ರಮಾಸದಿಂದ ಹಿಂದೂ ಸಂವತ್ಸರದ ಹೊಸವರ್ಷಾಚರಣೆ ನಡೆದು ಬಂದಿದೆ. ಉತ್ತರ ಕನ್ನಡ- ದಕ್ಷಿಣ ಕನ್ನಡದ ಕೆಲವು ಭಾಗ, ಕೇರಳ, ತಮಿಳುನಾಡುಗಳಲ್ಲಿ ಸೌರಮಾನದ ರೀತ್ಯ ಯುಗಾದಿ ಆಚರಿಸುತ್ತಾರೆ.
ಚಾಂದ್ರಮಾನ ಯುಗಾದಿಯನ್ನು ಚಂದ್ರಾ ಚಾರದಿಂದಲೂ, ಸೌರಮಾನ ಯುಗಾದಿಯನ್ನು ಸೂರ್ಯ ಭಗವಾನನು ಮೇಷ ರಾಶಿಯನ್ನು ಪ್ರವೇಶಿಸುವ ದಿನದಿಂದ ಆಚರಿಸುತ್ತಾರೆ. ಬಾರ್ಹಸ್ಪತ್ಯಮಾನ ಎಂಬ ಆಚರಣೆಯೂ ಭಾರತದಲ್ಲಿ ಚಾಲ್ತಿಯಲ್ಲಿದೆ. ಯುಗಾದಿಯೆಂದರೆ ಹೊಸವರ್ಷದ ಆರಂಭದ ದಿನವಾದರೂ ಭಾರತದಲ್ಲಿ ಈ ದಿನವನ್ನು ನಿರ್ಧರಿಸುವ ರೀತಿ ಹಲವಾರಿವೆ. ಮುಖ್ಯವಾಗಿ ಚಾಂದ್ರಮಾನ ಹಾಗೂ ಸೌರಮಾನ ಎಂಬ ಎರಡು ಪ್ರಭೇದಗಳಿದ್ದು, ಹಿಂದೂಧರ್ಮದ ವೇದಾಂಗ ಜ್ಯೋತಿಷ ಶಾಸ್ತ್ರದಿಂದ ನಿರ್ಣಯಗೊಳ್ಳುತ್ತವೆ. ಚಂದ್ರನ ಚಲನೆಯನ್ನಾಧರಿಸಿ, ದಿನಗಣನೆ ಮಾಡುವುದನ್ನು ಚಾಂದ್ರಮಾನ ಹಾಗೂ ಸೂರ್ಯನ ಗತಿಯಿಂದ ಎಣಿಕೆ ಮಾಡುವುದನ್ನು ಸೌರಮಾನ ಎನ್ನುತ್ತಾರೆ.
ಕರ್ನಾಟಕದಲ್ಲಿ ಚಾಂದ್ರಮಾನಪದ್ಧತಿ ಮೊದಲಿನಿಂದ ರೂಢಿಯಲ್ಲಿದೆ. ಭೂಮಿಯಿಂದ ನೋಡಿದಾಗ, ಸೂರ್ಯ, ಚಂದ್ರ, ಗ್ರಹಗಳು, ನಕ್ಷತ್ರಮಂಡಲದಿಂದ ಉಂಟಾದ ರಾಶಿಚಕ್ರದಲ್ಲಿ ದಿನೇ ದಿನೇ ಸ್ವಲ್ಪ ಸ್ವಲ್ಪವಾಗಿ ಸಂಚರಿಸಿದಂತೆ ಕಾಣುತ್ತವೆ. ವೇದಾಂಗ ಜ್ಯೋತಿಷದಂತೆ, ಮೊದಲ ನಕ್ಷತ್ರ ಅಶ್ವಿನಿ - ಅಂದರೆ ಮೇಷ ರಾಶಿಯ ೦ - ೧೩:೨೦ ಭಾಗ (ಡಿಗ್ರಿ). ಅಲ್ಲಿ ಸೂರ್ಯನಿದ್ದಾಗ ಭೂಮಿಯ ಉತ್ತರಾರ್ಧಗೋಳದಲ್ಲಿ ಸಸ್ಯಗಳಲ್ಲಿ ಚಿಗುರು ಕಾಣುತ್ತದೆ, ಅಂದರೆ ಹೊಸಹುಟ್ಟು, ಆದ್ದರಿಂದ ಅಶ್ವಿನೀ ನಕ್ಷತ್ರಕ್ಕೆ ರವಿಯು ಪ್ರವೇಶಿಸುವ ಕಾಲವನ್ನು ಹೊಸವರ್ಷ ಎಂದು ಪರಿಗಣಿಸುತ್ತಾರೆ. ಇದೇ ಸೌರಮಾನ ಯುಗಾದಿ. ಸಾಮಾನ್ಯವಾಗಿ ಈಗ ಇದು ಏಪ್ರಿಲ್ ತಿಂಗಳ 14 ಅಥವಾ ೧೫ ನೇ ತಾರೀಖಿಗೆ ಬೀಳುತ್ತದೆ. ಆದರೆ ಚಂದ್ರನ ಗತಿ ಅತಿವೇಗವಾದ್ದರಿಂದ ಪ್ರತಿ ಪ್ರದಕ್ಷಿಣೆಗೂ ಒಂದೊಂದು ತಿಂಗಳಾಗಿ, ಹನ್ನೆರಡು ಪ್ರದಕ್ಷಿಣೆಗಳಿಗೆ ಸರಿಯಾಗಿ ಒಂದು ಚಾಂದ್ರಮಾನ ಸಂವತ್ಸರವಾಗುತ್ತದೆ. ರವಿಚಂದ್ರರ ಗತಿಯನ್ನವಲಂಬಿಸಿ, ೧೧ ರಿಂದ ೧೩ ಪೂರ್ಣಿಮೆ/ಅಮಾವಾಸ್ಯೆಗಳಿಗೊಂದು ಚಾಂದ್ರಮಾನ ಯುಗಾದಿಯಾಗುತ್ತದೆ. ಈ ಯುಗಾದಿ ನಿರ್ಣಯದ ಹಿಂದೆ ವೇದಾಂಗ ಜ್ಯೋತಿಷದ ಮಹತ್ತರ ಸಾಧನೆಗಳೇ ಅಡಗಿವೆ; ಅದರಿಂದ ನಮ್ಮ ಪೂರ್ವಿಕರ ಖಗೋಲಗಣಿತದ ಅಪಾರ ಜ್ಞಾನ ವ್ಯಕ್ತವಾಗುತ್ತದೆ.
ಯುಗಾದಿ ಹಬ್ಬದ ಸಾಂಪ್ರದಾಯಿಕ ಆಚರಣೆಗಳಲ್ಲಿ ಕೆಲವೆಂದರೆ ಸೂರ್ಯ ನಮಸ್ಕಾರ, ಪಂಚಾಂಗ ಪೂಜೆ, ಹಾಗೂ ಸರ್ವೇ-ಸಾಮಾನ್ಯವಾಗಿ ಬೇವು - ಬೆಲ್ಲ ಜೀವನದ ಸಿಹಿ-ಕಹಿಗಳೆರಡನ್ನೂ ಪಡೆಯಬೇಕೆಂದು ನೆನಪಿಸಲು ಬೇವು-ಬೆಲ್ಲಗಳ ಮಿಶ್ರಣವನ್ನು ತಿನ್ನಲಾಗುತ್ತದೆ.
ಯುಗಾದಿಯಂದು ಹೆಚ್ಚಿನ ವಿಶೇಷ ಆಚರಣೆಗಳಿಲ್ಲವಾದರೂ, ಸಾಮಾನ್ಯ ಜನರು ಆ ದಿನ ಉಷಾಕಾಲದಲ್ಲಿ ಪರಮಾತ್ಮನ ಸ್ಮರಿಸುತ್ತಾ ಹಾಸಿಗೆಯಿಂದೆದ್ದು, ನಿತ್ಯಕರ್ಮ ಮುಗಿಸಿ, ಮನೆಯ ಮುಖ್ಯದ್ವಾರ ಹಾಗೂ ದೇವರ ಮನೆಯ ದ್ವಾರವನ್ನು ಮಾವಿನ ತಳಿರು ತೋರಣದಿಂದ ಅಲಂಕರಿಸಿ ಮನೆಯ ಮುಂದೆ ಬಣ್ಣಬಣ್ಣದ ರಂಗೋಲಿ ಹಾಕಿ, ಅಭ್ಯಂಜನಸ್ನಾನ ಮಾಡಿ, ದೇವತಾರ್ಚನೆ ಮಾಡಿ, ಬೇವು ಬೆಲ್ಲ ತಿಂದು, ಹೊಸಬಟ್ಟೆ ತೊಟ್ಟು, ಪರಸ್ಪರ ಶುಭಾಶಯ ಕೋರಿ, ದೇವಾಲಯಗಳಿಗೆ ಹೋಗಿ ಬಂದು, ಸಿಹಿಯೂಟ ಮಾಡುವಲ್ಲಿಗೆ ಯುಗಾದಿ ಹಬ್ಬ ಮುಗಿದಂತೆ.
ಆದರೆ, ಹಳ್ಳಿಗಳಲ್ಲಿ ಹಾಗೂ ಇನ್ನೂ ಸಂಪ್ರದಾಯ - ಆಚರಣೆ ಉಳಿಸಿಕೊಂಡಿರುವ ಅಗ್ರಹಾರಗಳಲ್ಲಿ ಪುರೋಹಿತರು, ಪಂಡಿತರು ಯುಗಾದಿಯಂದು ಸ್ನಾನ ಸಂಧ್ಯಾದಿ ಮುಗಿದ ಬಳಿಕ ಕುಲದೇವರನ್ನೂ, ಪಂಚಾಗವನ್ನೂ ಪೂಜಿಸಿ, ಅಗಲ ಬಾಯಿಯ ಪಾತ್ರೆಯಲ್ಲಿ ತುಪ್ಪ ಹಾಕಿ ಮನೆಮಂದಿಯೆಲ್ಲ ಅದರಲ್ಲಿ ಮುಖ ನೋಡಿಕೊಳ್ಳುತ್ತಾರೆ. ಆನಂತರ ಕನ್ನಡಿಯಲ್ಲಿ ಮುಖ ನೋಡಿಕೊಳ್ಳುತ್ತಾರೆ. (ಹೀಗೆ ಮಾಡುವುದರಿಂದ ಸರ್ವದೋಷ ಪರಿಹಾರ ಆಗತ್ತೆ ಎಂಬುದು ನಂಬಿಕೆ.) ಸಂಜೆ ಊರಿನ ಅರಳಿ ಕಟ್ಟೆಯಲ್ಲಿ ಸೇರಿ, ಪಂಡಿತರು ಊರಿನ ಜನಕ್ಕೆ ಪಂಚಾಂಗ ಓದಿ ಹೇಳುತ್ತಾರೆ. ವರ್ಷಫಲ ಕೇಳುವ ಸಂಪ್ರದಾಯ ಹಳ್ಳಿಗಳ ಕಡೆ ಇನ್ನೂ ಜೀವಂತವಾಗಿದೆ.
ಕಾಲ ದೇಶ ಪರಿಸರಕ್ಕನುಗುಣವಾಗಿ ಕರ್ನಾಟಕದ ಕೆಲವು ಭಾಗಗಳಲ್ಲಿ ಯುಗಾದಿಯ ದಿನ ಜೂಜಾಡುವುದೂ ಒಂದು ಸಂಪ್ರದಾಯವಾಗಿ ಬೆಳೆದುಬಿಟ್ಟಿದೆ. ಯುಗಾದಿಯ ಮಾರನೇ ದಿನವನ್ನು ವರ್ಷತೊಡಕು ಎಂದೂ ಆಚರಿಸುತ್ತಾರೆ. ಅಂದು ಮಾಂಸಾಹಾರಿಗಳು ಕಡ್ಡಾಯವಾಗಿ ಮಾಂಸದ ಊಟ ಮಾಡುತ್ತಾರೆ. ಮದ್ಯ ಸೇವನೆಯೂ ಈ ವರ್ಷತೊಡಗಿನ ಆಚರಣೆಯ ಭಾಗಗಳಲ್ಲೊಂದು.
ಈ ಹಬ್ಬವನ್ನು ಹೆಚ್ಚಾಗಿ ಕರ್ನಾಟಕ ಆಂಧ್ರ ಮತ್ತು ಮಹಾರಾಷ್ಟ್ರ ದಲ್ಲಿ ಆಚರಿಸುವರು. ಆಂಧ್ರ ಮತ್ತು ಕರ್ನಾಟಕಗಳಲ್ಲಿ ಇದು ಯುಗಾದಿಯಾದರೆ, ಮಹಾರಾಷ್ಟ್ರದಲ್ಲಿ ಇದು ಗುಡಿಪಾಡ್ವ. ಪಾಡ್ಯಮಿ ದಿವಸ ಗುಡಿಯನ್ನು ಏರಿಸುವುದೇ ಗುಡಿಪಾಡ್ವ - ಒಂದು ಕೋಲಿಗೆ ವಸ್ತ್ರವನ್ನು ಕಟ್ಟಿ, ಹೂವಿನ ಹಾರವನ್ನು ಏರಿಸಿ 'ಗುಡಿ' ಎಂದು ಮೂಲೆಯಲ್ಲಿ ಇರಿಸುವರು. ಇದು ಹೊಸ ವರುಷದ ಆಗಮನಕ್ಕೆ ಬಾವುಟವನ್ನು ಹಾರಿಸುವುದರ ಸಂಕೇತ. ಹುಣಿಸೇಹಣ್ಣು, ಬೆಲ್ಲ, ಮಾವಿನಕಾಯಿ ಉಪ್ಪು, ಮೆಣಸು, ಬೇವು ಇತ್ಯಾದಿಗಳ ಮಿಶ್ರಣ ಮಾಡಿ ಯುಗಾದಿ ಪಚ್ಚಡಿ ಎಂಬ ಹೆಸರಿನ ಪದಾರ್ಥವನ್ನು ಸೇವಿಸುವರು. ಅಂದು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಇರುವುದು. ತಳಿರು ತೋರಣವನ್ನು (ಎಳೆಯ ಹಸಿರು ಮಾವಿನೆಲೆ ಮಧ್ಯೆ ಮಧ್ಯೆ ಬೇವಿನ ಎಲೆ ಹೂಗಳ ಗೊಂಚಲು) ಮನೆಗಳ ಮುಂಬಾಗಿಲಿಗೆ ಮತ್ತು ದೇವರ ಮನೆಯ ಬಾಗಿಲಿಗೆ ತಳಿರು ತೋರಣವಾಗಿ ಕಟ್ಟುವರು. ಮನೆಯ ಮುಂದೆ ಬಣ್ಣ ಬಣ್ಣದ ರಂಗವಲ್ಲಿಗಳನ್ನಿಡುವುದು,. ಮುಂಜಾನೆ ಬೇಗನೆದ್ದು ಅಭ್ಯಂಜನ ಸ್ನಾನ ಮಾಡಿ ಪುಣ್ಯಾಹ ಮಂತ್ರಗಳನ್ನು ಉಚ್ಚರಿಸಿ ಮಾವಿನೆಲೆಯಿಂದ ಮನೆಯ ಎಲ್ಲ ಕಡೆ ಕಳಶದ ನೀರನ್ನು ಸಿಂಪಡಿಸುವರು. ನಂತರ ಹೊಸ ಬಟ್ಟೆ ಧರಿಸಿ ಪಂಚಾಂಗವನ್ನು ಮನೆಯ ಹಿರಿಯರು ಓದುವರು ಮತ್ತೆಲ್ಲರೂ ಅದನ್ನು ಕೇಳುವರು,
ಪಂಚಾಂಗವು ಹಿಂದೂ ಸಂಪ್ರದಾಯದ ಕ್ಯಾಲೆಂಡರ್. ಇದು ದಿನಸೂಚಿಯಷ್ಟೆ ಅಲ್ಲದೇ ಆ ವರುಷದಲ್ಲಿ ಮಳೆ ಬೆಳೆ ಹೇಗಿದೆ, ರಾಶಿಫಲ, ಮದುವೆ ಉಪನಯನಗಳಿಗೆ ಒಳ್ಳೆಯ ಮುಹೂರ್ತಗಳು, ಒಟ್ಟಾರೆಯಾಗಿ ಜನಜೀವನದ ಸ್ಥಿತಿಯನ್ನು ಸೂಚಿಸಿರುವುದು. ಅಂದು ಹಿರಿಯ ಕಿರಿಯರೆಲ್ಲರೂ ಹೊಸ ಬಟ್ಟೆಗಳನ್ನು ಧರಿಸಿ ಸಂತೋಷದಿಂದ ಹಾಡಿ ನಲಿವರು
ಕರಾವಳಿಯ ಸೌರಮಾನ ಯುಗಾದಿಯ ವಿಶೇಷತೆ ಖಣಿ ಇಡುವುದು. ಬಾಳೆ ಎಲೆ, ತಟ್ಟೆಯಲಿ ಅಕ್ಕಿ ಹಾಕಿ ಅದರ ಮೇಲೆ ತೆಂಗಿನಕಾಯಿ, ಸೌತೇಕಾಯಿ, ರವಿಕೆ ಕಣ, ಹೊಸ ಬಟ್ಟೆ, ಚಿನ್ನ, ಬತ್ತದ ತೆನೆ, ಹಣ್ಣು, ದೇವರ ಪ್ರತಿಮೆ ಅದರ ಮುಂದೆ ಒಂದು ಕನ್ನಡಿ ಇಟ್ಟು ಆ ಕನ್ನಡಿಯಲಿ ದೇವರ ಪ್ರತಿಮೆ ಹಾಗೂ ತಟ್ಟೆಯಲಿ ಇಟ್ಟಂತಹ ವಸ್ತುಗಳನ್ನು ಕಾಣುವ ಹಾಗೆ ಇಡುತ್ತಾರೆ. ಇವೆಲ್ಲವನ್ನೂ ದೇವರ ಮುಂದೆ ಹಿಂದಿನ ರಾತ್ರಿ ಮಲಗುವ ಮುನ್ನ ಇಡುತ್ತಾರೆ. ಯುಗಾದಿ ಹಬ್ಬದಂದು ಬೆಳಿಗ್ಗೆ ಬೇಗ ಎದ್ದು ದೇವರ ದೀಪ ಹಚ್ಚಿ ಖಣಿಯಲ್ಲಿನ ಕನ್ನಡಿಯಲಿ ದೇವ ದರ್ಶನ ಪಡೆಯುವುದು ಅಂದಿನ ವಿಶೇಷ. ನಂತರ ಸ್ನಾನ, ಹೋಳಿಗೆ ಚಿತ್ರಾನ್ನದೂಟ, ದೇಗುಲಕ್ಕೆ ಹಾಗೂ ಹಿರಿಯರ ಭೇಟಿ, ಪಂಚಾಂಗ ಶ್ರವಣ ಮಾಡುತ್ತಾರೆ.
ಯುಗಾದಿಯ ದಿನ ಸುಖದ ಸಂಕೇತವಾದ ಬೆಲ್ಲವನ್ನೂ ಮತ್ತು ಕಷ್ಟದ ಸಂಕೇತವಾದ ಬೇವನ್ನೂ ಸಮನಾಗಿ ಸ್ವೀಕರಿಸುವರು. ತಿಂದ ಮೇಲೆ ಬೆಲ್ಲವು ಹೊಟ್ಟೆಯೊಳಗೆ ಉರಿಯ ಅಥವಾ ಶಾಖವನ್ನು ಉಂಟು ಮಾಡಿದರೆ ಬೇವು ಆ ಉರಿಯ ಶಮನಕಾರಿ. ಬೇವು - ಬೆಲ್ಲದ ಮಿಶ್ರಣವನ್ನು ತಿನ್ನುವಾಗ ಹೇಳುವ ಒಂದು ಶ್ಲೋಕ ಹೀಗಿದೆ:
ಶತಾಯು: ವಜ್ರದೇಹಾಯ ಸರ್ವಸಂಪತ್ಕರಾಯಚ|ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ|| -
ಅದರರ್ಥ ಹೀಗಿದೆ - ನೂರು ವರುಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು ಬೆಲ್ಲ ಸೇವನೆ ಮಾಡುತ್ತೇನೆ.
ಪಂಚಾಂಗ ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಭದಿನ ಹಾಗೂ ಅತ್ಯಂತ ಶುಭ ಮೂಹೂರ್ತದ ಮೂರುವರೆ ದಿನಗಳೆಂದರೆ ಯುಗಾದಿ, ವಿಜಯದಶಮಿ, ಬಲಿಪಾಡ್ಯಮಿ ಮತ್ತು ಅಕ್ಷಯ ತದಿಗೆ. ಅದರಲ್ಲಿ ಯುಗಾದಿ ಅತೀಶ್ರೇಷ್ಠ ಮೂಹೂರ್ತ ಎಂದು ಭಾರತಿಯರು ನಂಬುತ್ತಾರೆ.
ಯುಗಾದಿಯು, ಧಾರ್ಮಿಕ, ಸಾಮಾಜಿಕ, ವೈಜ್ಞಾನಿಕ ತಳಹದಿಯ ಮೇಲೆ ಆಚರಿಸಲ್ಪಡುವ ಸಾಂಪ್ರದಾಯಿಕ ಹಬ್ಬ. ಪ್ರಕೃತಿಯೊಂದಿಗಿನ ಮಾನವನ ಅವಿನಾಭಾವ ಸಂಬಂಧದ ದ್ಯೋತಕವಾದ ಈ ಹಬ್ಬವು ನಳನಳಿಸುವ ಹೊಸ ಚಿಗುರಿನಂತೆಯೇ ಪ್ರತಿಯೊಬ್ಬರ ಬಾಳಿನಲ್ಲಿಯೂ ಹೊಸತನವನ್ನು ತರಲಿ, ಈ ಶ್ರೀ ವಿಕಾರಿ ನಾಮ ಸಂವತ್ಸರವು ಸರ್ವರಿಗೂ ಶುಭ ತರಲಿ.
ಮತ್ತೊಮ್ಮೆ ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು
✍ ಡಾ: B.N. ಶೈಲಜಾ ರಮೇಶ್
ಜ್ಯೋತಿಷಿ