ಓಂ ಶ್ರೀ ಗುರುಭ್ಯೋನಮಃ
ಓಂ ಶ್ರೀ ಮಹಾಗಣಪತಯೇ ನಮಃ
ಜ್ಯೋತಿಷ್ಯದ ಪ್ರಕಾರ ಶನಿ ಗ್ರಹದ ಮಹತ್ವ. ಹಾಗೂ ಹನ್ನೆರಡು ಭಾವಗಳಲ್ಲಿ ಶನಿ ಸ್ಥಿತ ಫಲ ಹಾಗೂ ಪರಿಹಾರಗಳು
ನೀಲಾಂಜನ ಸಮಾಭಾಸಮ್
ರವಿಪುತ್ರಂ ಯಮಾಗ್ರಜಮ್
ಛಾಯಾ ಮಾರ್ತಾಂಡ ಸಂಭೂತಮ್
ತಂ ನಮಾಮಿ ಶನೈಶ್ಚರಮ್
ವಿಭವ ಸಂವತ್ಸರದ ಮಾಘಮಾಸ ಕೃಷ್ಣಪಕ್ಷದ ಚತುರ್ದಶಿಯಲ್ಲಿ. ( ಕೆಲವರ ಪ್ರಕಾರ ವೈಶಾಖ ಕೃಷ್ಣ ಚತುರ್ದಶಿ ) ರವಿ ಛಾಯಾದೇವಿಯರ ಮಗನಾಗಿ ಜನ್ಮ ತಾಳುತ್ತಾನೆ. ಈತನ ಜನ್ಮ ನಕ್ಷತ್ರ -- ಧನಿಷ್ಠ, ಗೋತ್ರ -- ಕಾಶ್ಯಪ, ಶರೀರ -- ಗಾಢ ನೀಲವರ್ಣ, ಈತನ ಹಸ್ತಸಂಖ್ಯೆ -- 8 , ಗ್ರಹಮಂಡಲದಲ್ಲಿ ಪಶ್ಚಿಮ ಸ್ಥಾನ, ಧಾನ್ಯ -- ತಿಲ ( ಕರಿ ಎಳ್ಳು ) , ವಸ್ತ್ರ -- ನೀಲ ( ಕಪ್ಪು ), ರತ್ನ. -- ನೀಲಮಣಿ, , ನೀಲರಥ, ಧನುರಾಕಾರ ಮಂಡಲ, ಪತ್ನಿಯರು -- ಜೇಷ್ಠ ಮತ್ತು ನೀಲದೇವಿ, ವಾಹನ --ನೀಲ ಗೃದ್ರ, ಅಧಿದೇವತೆ -- ಯಮ, ಅಭಿಮಾನದೇವತೆ -- ತ್ರಿಮೂರ್ತಿಗಳು, ಶನೈಶ್ಚರ ಹೆಸರೇ ಹೇಳುವಂತೆ ನಿಧಾನ ಗತಿಯ ಚಲನೆ, ಚಾಲನೆ ನಿಧಾನವಾದ್ದರಿಂದ ಶನಿಯನ್ನು ಕುಂಟ ಅಂತಲೂ ಹೇಳ್ತಾರೆ. ಕರ್ಮಕಾರಕ, ದುಃಖಕಾರಕ, ಆಯುಷ್ಯಕಾರಕ, ನಾಶಕಾರಕ, ಮೃತ್ಯ ಕಾರಕ, ಸೇವಕನು , ಪಾಪಗ್ರಹ, ಮಂದಗ್ರಹ, ಪಕ್ಷಿಗ್ರಹ, ನಪುಂಸಕಗ್ರಹ, , ಶಿಶಿರಋತುವಿಗೆ ಅಧಿಪತಿ, ಸ್ನಾಯು ಮಾಂಸಖಂಡಗಳಿಗೆ ಅಧಿಪತಿ, ವಾಸ -- ಪರ್ವತ ಗುಡ್ಡ ಪ್ರದೇಶ, ಕಸದರಾಶಿ, ಹರಿದಬಟ್ಟೆ, ಧಾತು -- ಕಬ್ಬಿಣ, ಎತ್ತರವಾದ ತೆಳುದೇಹ , ವೃದ್ದನು, ವಾಯು ಮತ್ತು ಭೂತತ್ವದ ಗ್ರಹನು, ಶ್ರಮದಿಂದ ಸಂಪಾದನೆ, ಧರ್ಮಶಾಸ್ತ್ರದಲ್ಲಿ ಆಸಕ್ತಿ, ಶತ್ರುಭಯ, ಪ್ರಾರಬ್ಧಕರ್ಮದ ಪ್ರಕಾರ ಫಲಕೊಡುತ್ತಾನೆ, ಎಲ್ಲಾಕೆಲಸದಲ್ಲೂ ನಿಧಾನ ಪ್ರಗತಿ, ವಿಪರೀತವಾದ ಖರ್ಚು, ತಮೋಗುಣವುಳ್ಳ ಗ್ರಹ, ಶೂದ್ರಜಾತಿ,
ರುಚಿ -- ಎಣ್ಣೆಯಲ್ಲಿ ಕರಿದ ಪದಾರ್ಥಗಳು ಇಷ್ಟ, ಒಗರು ಪದಾರ್ಥಗಳು, "ದುಃಖೋಮಾರ್ಥಾ0ಡಾತ್ಮಜಹ" ಎನ್ನುವಂತೆ ತಾನು ದುಃಖವನ್ನು ಅನುಭವಿಸಿ ಪ್ರಪಂಚಕ್ಕೆ ಸುಖವನ್ನುಂಟುಮಾಡುವ ಶ್ರಮಜೀವಿಗಳು, ಶನಿಯೇ ಆದ್ದರಿಂದ ಜೀವಿತಾಂತ್ಯದಲ್ಲಿ ಬರುವ ಸುಖ ಸಂಪತ್ತು, ಭಯ ದುಃಖ ಅವಮಾನ, ಅನಾರೋಗ್ಯ, ದಾರಿದ್ರ್ಯಕ್ಕೆಲ್ಲಾ ಶನಿಯೇ ಕಾರಕನಾಗುತ್ತಾನೆ.
ವೈದ್ಯ ಶಾಸ್ತ್ರ, ಜೀವಶಾಸ್ತ್ರ, ರಸಾಯನಶಾಸ್ತ್ರ, ವಾಹನದ ಬಿಡಿ ಭಾಗಗಳು, ಗಣಿಕೆಲಸ, ಭೂಗರ್ಭಶಾಸ್ತ್ರ, ಇವೆಲ್ಲವೂ ಶನಿಯ ಕಾರಕತ್ವಕ್ಕೊಳಪಟ್ಟಿದೆ.
ಹಿಂದೂ ಧರ್ಮದಲ್ಲಿ ಗ್ರಹಗಳಿಗೆ ದೇವತೆಗಳ ಸ್ಥಾನವನ್ನು ನೀಡಿ ಗೌರವಿಸಲಾಗಿ ದೆ. ಶನಿ ಗ್ರಹವು ಕರ್ಮಕಾರಕ ಗ್ರಹವಾಗಿರುವುದರಿಂದ ಲೌಕಿಕ ದೃಷ್ಟಿಯಲ್ಲಿ ಇತರ ಗ್ರಹಗಳ ತುಲನೆಯಲ್ಲಿ ಈ ಗ್ರಹಕ್ಕೆ ಮಹತ್ವದ ಸ್ಥಾನವಿದೆ. ಶಿವನು ತನ್ನ ದಂಡಾಡಿಕಾರಿಯ ಪದವಿಯನ್ನು ಶನಿದೇವನಿಗೆ ನೀಡಿದ ಕಾರಣ ಶನಿಯು " ಶನೇಶ್ವರ" ನಾದ. ಪುಷ್ಯ, ಅನುರಾಧ, ಉತ್ತರಾಭಾದ್ರ ನಕ್ಷತ್ರಗಳು ಶನಿಯ ನಕ್ಷತ್ರ ಗಳು. ಶನಿ ಗ್ರಹಕ್ಕೆ ಮಕರ ಮತ್ತು ಕುಂಭ ಇವು ಸ್ವಂತ ರಾಶಿಗಳು. ತುಲಾ ರಾಶಿಯಲ್ಲಿ ಶನಿಯು ಉಚ್ಚ ಸ್ಥಾನದಲ್ಲಿರುತ್ತದೆ. ಮೇಶರಾಶಿ ಶನಿಯ ನೀಚಸ್ಥಾನವಾಗುತ್ತದೆ. ‘ಒಂದು ಗ್ರಹವು ಉಚ್ಚ ರಾಶಿಯಲ್ಲಿರುವಾಗ, ಅದು ಯಾವ ವಿಷಯಗಳಿಗೆ ಕಾರಣೀಭೂತವಾಗಿರುತ್ತದೆಯೋ ಮತ್ತು ಜಾತಕದಲ್ಲಿ ಯಾವ ಸ್ಥಾನಗಳ ಸ್ವಾಮಿತ್ವವಿದೆಯೋ, ಆ ವಿಷಯಗಳ ಬಗ್ಗೆ ಶುಭಫಲವನ್ನು ನೀಡುತ್ತದೆ’ ಎಂಬ ನಿಯಮವಿದೆ. ನಮ್ಮ ಪಾಪಪುಣ್ಯ ಕರ್ಮಗಳಿಗನುಸಾರವಾಗಿ ಶುಭಾಶುಭ ಫಲಗಳನ್ನು ಶನಿದೇವ ಕೊಡುತ್ತಾನೆ. ಶನಿ ಗ್ರಹವು ವಾಯುತತ್ತ್ವದ್ದಾಗಿದ್ದು ಮಾನವನನ್ನು ಆಸಕ್ತಿಯಿಂದ ವಿರಕ್ತಿಯೆಡೆಗೆ ಕೊಂಡುಯ್ಯುತ್ತದೆ. ಮನುಷ್ಯನನ್ನು, ಜೀವನದಲ್ಲಿ ಬರುವಂತಹ ಮಾನ, ಅಪಮಾನ ಮತ್ತು ಅವಹೇಳನೆಯಿಂದ ಪರಮಾರ್ಥದ ದಿಕ್ಕಿನಲ್ಲಿ ಹೊರಳಿಸುತ್ತದೆ ಈ ಶನಿ ಗ್ರಹ. ಪೂರ್ವಪುಣ್ಯವನ್ನು ತೋರಿಸುವ ಈ ಗ್ರಹವು ಮೋಕ್ಷದ ದಾರಿದೀಪವಾಗಿದೆ.
ಜ್ಯೋತಿಷ್ಯ ಶಾಸ್ತ್ರಕ್ಕನುಸಾರ ಪ್ರತಿಯೊಂದು ಗ್ರಹದ ಶುಭ (ಗುಣ) ಮತ್ತು ಅಶುಭ (ದೋಷ) ಹೀಗೆ ಎರಡು ಮಗ್ಗಲುಗಳಿರುತ್ತವೆ. ಯಾವುದೇ ಗ್ರಹವು ಕೇವಲ ಅಶುಭವೇ ಅಥವಾ ಕೇವಲ ಶುಭವೇ ಇರುತ್ತದೆ ಎಂದಿಲ್ಲ. ಈ ನಿಮಯಕ್ಕನುಸಾರ ಶನಿ ಗ್ರಹಕ್ಕೂ ಎರಡು ಮಗ್ಗಲುಗಳಿವೆ; ಆದರೆ ಶನಿ ಗ್ರಹದ ಬಗ್ಗೆ ಕೇವಲ ಒಂದೇ ಕಡೆಯ ವಿಚಾರ ಮಾಡಲಾಗುತ್ತದೆ; ಆದ್ದರಿಂದ ಜನರ ಮನಸ್ಸಿನಲ್ಲಿ ಶನಿ ಗ್ರಹದ ಬಗ್ಗೆ ಭಯವು ನಿರ್ಮಾಣವಾಗಿದೆ. ಮನುಷ್ಯ ಜೀವನದ ಅಸ್ತಿತ್ವ, ಸಾರ್ಥಕತೆಯನ್ನು ಗುರ್ತಿಸಿ ಕೊನೆಗೆ ಗಟ್ಟಿಯಾದ ಮನಸ್ಸು, ಶಾಶ್ವತ ಸಂತೋಷವನ್ನು ಹೊಂದುವ ಮಾರ್ಗವನ್ನು ತೋರಿಸಿಕೊಡುತ್ತಾನೆ ಶನಿದೇವ. ಆಯಸ್ಸು, ಮರಣ, ದುಃಖ, ಪರಸ್ಥಳ, ನಪುಂಸಕತ್ವ, ದುರ್ವ್ಯಸನಗಳು , ನೀಚವಿದ್ಯೆ, ನೀಚಜೀವನ, ನೀಚೋಪಾಸನೆ, ದುರ್ವತನೆ, ಸೆರೆಮನೆ, ಅಸತ್ಯ, ಅಧರ್ಮ, ದೈನ್ಯಸ್ಥಿತಿ, ಪಿತೃಶಾಪ ಇನ್ನೂ ಅನೇಕ ವಿಚಾರದಲ್ಲಿ ಶನಿಯು ಅಧಿಕಾರ ಹೊಂದಿದ್ದು, ಊಹೆಗೂ ನಿಲುಕದ ರೀತಿಯಲ್ಲಿ ಕಾಡಬಲ್ಲನು, ಮತ್ತು ಶುಭಪರನಾದರೆ ವಿಸ್ಮಯಕಾರಿ ರಾಜಯೋಗವನ್ನು ಸಹ ನೀಡಬಲ್ಲನು, ಈತ ಡಂಬಾಚಾರದ ಪೂಜೆಗಾಗಲೀ, ಆಡಂಬರದ ಭಕ್ತಿಗಾಗಲೀ, ಒಡವೆವಸ್ತ್ರ ಹಣ ಯಾವುದೇ ವೇಷ ಭೂಷಣಗಳಿಗಾಗಲೀ ಕರುಣೆ ತೋರುವುದಿಲ್ಲ, ಈತನು ಸತ್ಯನಿಷ್ಠೆಗೆ , ಶುದ್ಧಮನಸ್ಸಿನ ಭಕ್ತಿಗೆ, ಪರಿಶುದ್ಧ ಹೃದಯವಂತರಿಗೆ, ನಿಷ್ಕಪಟತೆಗೆ , ಸರಳತೆಗೆ, ಯಾರಿಗೂ ದ್ರೋಹಮಾಡದೇ ಧರ್ಮದ ಹಾದಿಯಲ್ಲಿ ನಡೆಯುವಂತಹವರ ಮೇಲೆ ತನ್ನ ಶುಭ ಪ್ರಭಾವವನ್ನು ಬೀರುತ್ತಾನೆ
ಜನರ ಕಷ್ಟಗಳಿಗೆ ಶನಿಯೇ ಕಾರಣ. ಶನಿಯಿಂದ ಬರುವ ತೊಂದರೆಗಳು ಮೊದಲು ತಿಳಿಯುವುದಿಲ್ಲ. ಅದು ತಿಳಿದಾಗ ಅವನು ಎಲ್ಲವನ್ನೂ ಅನುಭವಿಸಿ ಆಗಿರುತ್ತದೆ. ಶನಿಯು ಜಾತಕದಲ್ಲಿ ಪ್ರಬಲನಾದಾಗ ದುಃಖಗಳು ಕಡಿಮೆಯಾಗುತ್ತದೆ. ಶನಿ ನೀಚ, ಮಾರಕ ಸ್ಥಾನ ,ಪಾಪ ಸ್ಥಾನದಲ್ಲಿದ್ದರೆ ಅವನು ಜಾಸ್ತಿ ದುಃಖವನ್ನು ಕೊಡುತ್ತಾನೆ. ಶನಿಯು ತನ್ನ ಸ್ವಂತ ಕ್ಷೇತ್ರ , ಉಚ್ಛ ಕ್ಷೇತ್ರ, ಗುರುವಿನ ಮನೆಯಲ್ಲಿದ್ದಾಗ ದುಃಖಗಳು ಕಡಿಮೆಯಾಗುತ್ತದೆ. ಗೋಚಾರದಲ್ಲಿ ಶನಿ 3-6-11ರಲ್ಲಿದ್ದಾಗ ಸ್ವಲ್ಪ ಶುಭ ಫಲ ಕೊಡುತ್ತಾನೆ.
ಶನಿಯು ಜನ್ಮ ರಾಶಿಯಿಂದ 12ನೇ ಸ್ಥಾನ ಜನ್ಮರಾಶಿ ಮತ್ತು ಜನ್ಮರಾಶಿಯಿಂದ ದ್ವಿತೀಯ ಸ್ಥಾನದಲ್ಲಿ ಇದ್ದಾಗ ಅಂತವರಿಗೆ ಏಳರಾಟ ಶನಿ ಎಂದು ಹೇಳುತ್ತಾರೆ.
ಶನಿ ಗ್ರಹವು ಗರ್ವ, ಅಹಂಕಾರ, ಪೂರ್ವಾಗ್ರಹ ಇವುಗಳನ್ನು ದೂರ ಮಾಡಿ ಮನುಷ್ಯನಿಗೆ ಮನುಷ್ಯತ್ವವನ್ನು ಕಲಿಸುತ್ತದೆ ಹಾಗೂ ಅಂತರಂಗದಲ್ಲಿನ ಉಚ್ಚ ಗುಣಗಳ ಪರಿಚಯ ಮಾಡಿಸಿಕೊಡುತ್ತದೆ. ಶನಿಯು ಅನುಭವದಿಂದ ಶಿಕ್ಷಣವನ್ನು ನೀಡುವ ಶಿಕ್ಷಕನಾಗಿದ್ದಾನೆ. ಯಾರು ಶಿಸ್ತುಬದ್ಧ, ವಿನಯಶೀಲ ಹಾಗೂ ವಿನಮ್ರರಾಗಿರುತ್ತಾರೋ, ಅವರನ್ನು ಶನಿಯು ಉಚ್ಚ ಪದವಿಗೆ ಕರೆದೊಯ್ಯುತ್ತಾನೆ, ಹಾಗೂ ಯಾರು ಅಹಂಕಾರಿ, ಗರ್ವಿಷ್ಠ ಹಾಗೂ ಸ್ವಾರ್ಥಿಗಳಾಗಿರುತ್ತಾರೆಯೋ, ಅವರಿಗೆ ಶನಿಯು ತೊಂದರೆ ನೀಡುತ್ತಾನೆ. ಇಂತಹ ಕೆಟ್ಟ ಸಮಯದಲ್ಲಿಯೇ ಮನುಷ್ಯನ ಯೋಗ್ಯ ಪರೀಕ್ಷೆಯ ಕಾಲ ಅಂತ ಹೇಳಬಹುದು, ಈ ಕಾಲದಲ್ಲಿ ವ್ಯಕ್ತಿಗೆ ತಮ್ಮವರು -ಪರಕೀಯರು ಯಾರೆಂದು ಅರಿವಾಗುತ್ತದೆ. ತಮ್ಮ ಗುಣ-ದೋಷಗಳು ಗಮನಕ್ಕೆ ಬರುತ್ತವೆ. ಗರ್ವಹರಣವಾಗುತ್ತದೆ, ಅಹಂಕಾರ ಸೋರಿ ಹೋಗುತ್ತದೆ. ಮನುಷ್ಯತ್ವದ ಅರಿವಾಗುತ್ತದೆ. ಓರ್ವ ಮನುಷ್ಯನಾಗಿ ಹೇಗೆ ಜೀವಿಸಬೇಕೆಂಬುದರ ಜ್ಞಾನವುಂಟಾಗುತ್ತದೆ.
ಶನಿಯು ನ್ಯಾಯದ ದೇವತೆಯಾಗಿದ್ದಾನೆ. ಧರ್ಮಮಾರ್ಗದಲ್ಲಿ ನಡೆದವರಿಗೆ ಒಳ್ಳೆಯದನ್ನು ಮತ್ತು ಅಧರ್ಮದಲ್ಲಿ ನಡೆಯುತ್ತಿರುವವರಿಗೆ ಶಿಕ್ಷೆಯನ್ನು ನೀಡುವ ಗ್ರಹ ಶನಿ ಗ್ರಹವಾಗಿದೆ. ಶನಿಗ್ರಹದ ಸಿಟ್ಟಿಗೆ ತುತ್ತಾದವರು ಹೆಚ್ಚಿನ ಕಷ್ಟ ನಷ್ಟಗಳನ್ನು ಅನುಭವಿಸಬೇಕಾಗುತ್ತದೆ.
ಜಾತಕದಲ್ಲಿ ಶನಿ ಗ್ರಹವು ಯಾವ ಮನೆಯಲ್ಲಿ ಸ್ಥಿತವಾಗಿದೆ ಎಂಬುದರ ಆಧಾರದ ಮೇಲೆ ವ್ಯಕ್ತಿಯ ಲಾಭ ನಷ್ಟಗಳ ಬಗ್ಗೆ ಲೆಕ್ಕಾಚಾರ ಹಾಕಬಹುದಾಗಿದೆ. ಹೌದು, ಜಾತಕದಲ್ಲಿ ಗ್ರಹಗಳು ಯಾವ ಮನೆಯಲ್ಲಿ ಸ್ಥಿತವಾಗಿದೆ ಎಂಬುದನ್ನು ತಿಳಿದುಕೊಳ್ಳುವ ಮೂಲಕ ವ್ಯಕ್ತಿಯ ಭವಿಷ್ಯದ ವಿಚಾರಗಳನ್ನು ಅರಿಯಬಹುದಾಗಿದೆ. ವ್ಯಕ್ತಿಯ ಹಣಕಾಸಿನ ಸ್ಥಿತಿಯಾಗಿರಬಹುದು, ವಿವಾಹ, ವ್ಯಾಪಾರ ವ್ಯವಹಾರ, ಉದ್ಯೋಗ ಕ್ಷೇತ್ರಗಳು, ಸಂತಾನ ಇತ್ಯಾದಿ ವಿಚಾರಗಳ ಬಗ್ಗೆ ಕೂಲಂಕುಷವಾಗಿ ತಿಳಿಯಬಹುದಾಗಿದೆ. ಹಾಗೆಯೇ ಶನಿ ಗ್ರಹವು ಕರ್ಮಕ್ಕೆ ತಕ್ಕ ಫಲ ನೀಡುವ ಗ್ರಹವಾಗಿದೆ. ಹಾಗಾಗಿ ಜಾತಕದಲ್ಲಿ ಶನಿ ಗ್ರಹವು ಯಾವ ಸ್ಥಾನದಲ್ಲಿ ಸ್ಥಿತವಾಗಿದೆ ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯಕ. ಜಾತಕದ ಕೆಲವು ಸ್ಥಾನದಲ್ಲಿ ಶನಿ ಗ್ರಹವು ಸ್ಥಿತವಾಗಿದ್ದರೆ ವ್ಯಕ್ತಿಗೆ ಲಾಭವಾಗುತ್ತದೆ. ಅದೇ ಇನ್ನು ಬೇರೆ ಸ್ಥಾನದಲ್ಲಿ ಸ್ಥಿತವಾಗಿದ್ದರೆ ವ್ಯಕ್ತಿಯು ಹಲವು ರೀತಿಯಲ್ಲಿ ಕಷ್ಟ ನಷ್ಟ ಅನುಭವಿಸಬೇಕಾಗುತ್ತದೆ. ಒಂದೊಮ್ಮೆ ಶನಿ ಗ್ರಹವು ಹೆಚ್ಚು ನಷ್ಟವಾಗುವ ಸ್ಥಾನದಲ್ಲಿ ಸ್ಥಿತವಾಗಿದ್ದರೆ. ಅದಕ್ಕೆ ತಕ್ಕ ಪರಿಹಾರಗಳನ್ನು ಸಹ ಮಾಡಿಸಿಕೊಳ್ಳಬಹುದಾಗಿದೆ. ಜಾತಕದಲ್ಲಿ ಶನಿಗ್ರಹವು ಯಾವ ಸ್ಥಾನದಲ್ಲಿದ್ದರೆ ಯಾವ ಫಲ ಎಂಬುದನ್ನು ತಿಳಿಯೋಣ...
ದ್ವಾದಶ ಭಾವಗಳಲ್ಲಿ ಸ್ಥಿತನಾದ ಶನಿಯ ಶುಭಾಶುಭ ಫಲಗಳು :--
ಪ್ರಥಮ ಭಾವ :--
ಪ್ರಥಮ ಭಾವವನ್ನು ಲಗ್ನ, ತನುಸ್ಥಾನ(ಭಾವ) ಅಂತಲೂ ಕರೀತೀವಿ. ಈ ಭಾವ ಶನಿದೇವನಿಗೆ ಮೂಲತ್ರಿಕೋನ, ಉಚ್ಚಕ್ಷೇತ್ರ, ಸ್ವಕ್ಷೇತ್ರ ವಾದರೆ ಶಶಯೋಗವಾಗುತ್ತೆ. ಆಗ ಜಾತಕರು ಆತ್ಮಜ್ಞಾನಿಗಳು, ವೇದಾಂತಿ, ಧಾರ್ಮಿಕ ಮುಂದಾಳು, ಸತ್ಕಾರ್ಯ ನಿರತನು ಕುಲಧರ್ಮದಂತೆ ನಡೆಯುವವರೂ ಆಗುತ್ತಾರೆ.
ಪ್ರಥಮ ಭಾವಸ್ಥ ಶನಿಯು ಶುಭನಾಗಿದ್ದರೆ, ಜಾತಕನು ಧೀರ್ಘಆಯು, ಬಲಶಾಲಿ, ಸತ್ಯನಿಷ್ಠ, ವಿದ್ವಾಂಸ, ನಿರ್ಭೀತ, ನ್ಯಾಯಪ್ರಿಯ, ಧನವಂತ, ರಾಜನೀತಿಯಲ್ಲಿ ಪರಿಣಿತ, ಭಾಗ್ಯವೃದ್ಧಿಗಾಗಿ ಪರಿಶ್ರಮ ವಹಿಸುವವ, ಶತ್ರುಗಳನ್ನು ಜಯಿಸುವವ, ಯಾತ್ರೆಗಳಿಂದ ಲಾಭ.
ಪ್ರಥಮ ಭಾವಸ್ಥ ಶನಿಯು ಆಶುಭನಾಗಿದ್ದರೆ, ಜಾತಕನು ದರಿದ್ರನು, ಆಲಸಿ, ದುಃಖಿ, ಅನಾರೋಗ್ಯದಿಂದ ಪೀಡಿತ, ಕೀಲುಗಳ ನೋವು , ಮಲಬದ್ಧತೆ, ದಂತರೋಗ ಹಾಗೂ ನೇತ್ರ ರೋಗದಿಂದ ಭಾದಿತ, ಪಿತ್ರಾರ್ಜಿತ ಧನದಿಂದಲೂ ವಂಚಿತ, ಮಾದಕವಸ್ತುಗಳ ವ್ಯಸನಿ, ಸಾಮಾನ್ಯ ಮಟ್ಟದ ದಾಂಪತ್ಯ ಹಾಗೂ ಸಂತಾನದಿಂದ ವ್ಯಸನಿ.
ಶನಿಗ್ರಹವು ಜಾತಕದ ಪ್ರಥಮ ಸ್ಥಾನದಲ್ಲಿ ಸ್ಥಿತವಾಗಿದ್ದು, ಸಪ್ತಮ ಮತ್ತು ದಶಮ ಸ್ಥಾನದಲ್ಲಿ ಯಾವುದೇ ಗ್ರಹಗಳು ಸ್ಥಿತವಾಗಿಲ್ಲದಿದ್ದರೆ ಅದನ್ನು ಲಾಭದ ಸ್ಥಾನವೆಂದು ಕೂಡ ಕರೆಯಲಾಗುತ್ತೆ. ಅಷ್ಟೇ ಅಲ್ಲದೆ ಈ ಸ್ಥಾನದಲ್ಲಿದ್ದಾಗ ಸಾಲ ವೃದ್ಧಿಯಾಗುತ್ತದೆ ಎಂದು ಸಹ ಹೇಳಲಾಗುತ್ತದೆ. ಹಾಗಾಗಿ ಜಾತಕದಲ್ಲಿ ಹೀಗಿದ್ದಾಗ ಸಾಲವನ್ನು ಪಡೆಯುವಾಗ ಎಚ್ಚರಿಕೆ ವಹಿಸುವುದು ಅತ್ಯಗತ್ಯ. ಜೊತಗೆ ವಿವಾದ ಕಲಹಗಳಲ್ಲಿ ತೊಡಗಿಕೊಳ್ಳದಂತೆ ಜಾಗರೂಕರಾಗಿರಬೇಕು.
ಲಗ್ನದಲ್ಲೇ ಶನಿ ಇರುವವರ ಉದ್ಯೋಗ ಜೀವನ ಬಹಳ ಚೆನ್ನಾಗಿರುತ್ತದೆ. ಏಕೆಂದರೆ ಅ ಸ್ಥಾನದಲ್ಲಿ ಇರುವ ಶನಿ ಹತ್ತನೇ ಮನೆ ಅಂದರೆ ವೃತ್ತಿ ಬದುಕಿನ ಸ್ಥಾನವನ್ನು ವೀಕ್ಷಣೆ ಮಾಡುತ್ತಾನೆ. ಇನ್ನೊಂದು ಬಗೆಯಲ್ಲಿ ನೋಡಿದರೆ ಶಿಸ್ತು ಹೆಚ್ಚಾಗಿರುತ್ತದೆ. ಶ್ರಮ ಜೀವಿಗಳು ಹಾಗೂ ಮಹತ್ವಾಕಾಂಕ್ಷಿಗಳು ಆಗಿರುತ್ತಾರೆ. ತಮ್ಮ ಅಸಲಿ ವಯಸ್ಸಿಗಿಂತ ಸ್ವಲ್ಪ ಹೆಚ್ಚು ವಯಸ್ಸಾದಂಥ ಭಾವ ಇರುತ್ತದೆ. ಇನ್ನು ಶನಿಯು ಏಳನೇ ಮನೆಯನ್ನೂ ದೃಷ್ಟಿಸುವುದರಿಂದ ಇವರಿಗಿಂತ ವಯಸ್ಸಿನಲ್ಲಿ ಹಿರಿಯರಾದವರು ಪತ್ನಿಯಾಗಿ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಮೂರನೇ ಮನೆಯ ಮೇಲೂ ದೃಷ್ಟಿ ಬೀರುವುದರಿಂದ ಸೋದರ ಸಂಬಂಧ ಚೆನ್ನಾಗಿರುವುದಿಲ್ಲ.
ದ್ವಿತೀಯ ಭಾವ :--
ದ್ವಿತೀಯ ಭಾವಸ್ಥ ಶನಿಯು ಶುಭನಾಗಿದ್ದರೆ, ಜಾತಕನು ಭಾಗ್ಯಶಾಲಿ, ಸಿರಿವಂತರು, ಸತ್ಯವಾದಿ, ಪರೋಪಕಾರಿ, ಗುರುಭಕ್ತ, ನ್ಯಾಯವಾದಿ, ತಾಯ್ತನ್ಡೆಯರ ಸಂಪೂರ್ಣ ಪ್ರೀತಿ ಪಡೆದವ, ವ್ಯಾಪಾರದಲ್ಲೂ ಉನ್ನತಿ, ಪರಿಶ್ರಮಿ.
ದ್ವಿತೀಯ ಭಾವಸ್ಥ ಶನಿಯು ಆಶುಭನಾಗಿದ್ದರೆ, ಜಾತಕನು ಸಂದೇಹ ಪ್ರವೃತ್ತಿಯವ, ಅಪೂರ್ಣ ವಿದ್ಯೆ, ಅಧಿಕ ಪರಿಶ್ರಮ ವಹಿಸಿದರೂ ಪೂರ್ಣ ಲಾಭ ಸಿಗುವುದಿಲ್ಲ, ಧನಹಾನಿ.
ಎರಡನೇ ಮನೆಯ ಶನಿ ಯಶಸ್ಸು ದೊರೆಯುವಂತೆ ಮಾಡುತ್ತಾನೆಯಾದರೂ ಕುಟುಂಬದಿಂದ, ಅದರಲ್ಲೂ ತಾಯಿಯಿಂದ ದೂರ ಆಗುವಂತೆ ಮಾಡುತ್ತಾನೆ. ಮೂವತ್ನಾಲ್ಕನೇ ವಯಸ್ಸಿನ ತನಕ ಮನೆ ಆಸ್ತಿ ಖರೀದಿ ಮಾಡಲು ಕಷ್ಟವಾಗುತ್ತದೆ. ಮನೆಯಲ್ಲಿ ತುಂಬ ಕಠಿಣ ನಿಯಮಗಳನ್ನು ವಿಧಿಸಿ, ವಿಪರೀತ ಶಿಸ್ತಿನಿಂದ ಬೆಳೆಯುವಂತಾಗುತ್ತದೆ. ಇವರ ಬಗ್ಗೆ ತಾಯಿ ತುಂಬ ಕಠಿಣವಾಗಿ ನಡೆದುಕೊಳ್ಳುತ್ತಾರೆ.
ಶನಿ ದಶೆ ನಡೆಯುವಾಗ ಹೆಚ್ಚಿನ ಲಾಭ. ಶನಿಗ್ರಹವು ಜಾತಕದ ಎರಡನೇ ಮನೆಯಲ್ಲಿ ಸ್ಥಿತವಾಗಿದ್ದರೆ ಸಂತೋಷದಿಂದ ಕೆಲಸ ನಿರ್ವಹಿಸಬೇಕು. ದುರಾಸೆಗೆ ಬಲಿಯಾದರೆ ಕಷ್ಟಗಳನ್ನು ಎದುರಿಸಬೇಕಾಗುತ್ತದೆ.
ತೃತೀಯಭಾವ :--
ತೃತೀಯ ಭಾವಸ್ಥ ಶನಿಯು ಶುಭನಾಗಿದ್ದರೆ, ಜಾತಕನು ಧೀರ್ಘಆಯು, ಧಾರ್ಮಿಕ ಪ್ರವೃತ್ತಿಯವ, ಸತ್ಯವಾದಿ, ಧನವಂತ, ಪ್ರಾಮಾಣಿಕ, ಪರಿಶ್ರಮಿ, ನ್ಯಾಯಪ್ರಿಯ, ಸಭ್ಯಸ್ಥ, ಸಜ್ಜನವ್ಯಕ್ತಿ, ವಿದ್ಯಾವಂತ, ವೈದ್ಯಕೀಯ ಹಾಗೂ ರಾಜನೀತಿ ಯ ಕ್ಷೇತ್ರದಲ್ಲಿ ಸಫಲತೆಯನ್ನು ಪಡೆಯುವವ, ಸಹನಶೀಲ, ಸಹೋದರರಿಗೆ ಶುಭ, ಅವರಿಂದ ಅನೇಕ ಪ್ರಕಾರದ ಸಹಕಾರ ಪಡೆಯುತ್ತಾನೆ.
ತೃತೀಯ ಭಾವಸ್ಥ ಶನಿಯು ಆಶುಭನಾಗಿದ್ದರೆ, ಜಾತಕನು ಭಾಗ್ಯಹೀನ, ಚಾರಿತ್ರ್ಯಹೀನ, ಜಗಳಗಂಟಿ, ಅಲ್ಪಾಯು, ರೋಗಿ, ಕುರೂಪಿ, ಸಹೋದರರಿಗೆ ಅನಿಷ್ಟ, ಯಾತ್ರೆಗಳಲ್ಲಿ ನಷ್ಟ, ದುಃಖಿತ.
ಲಗ್ನದಿಂದ ಮೂರನೇ ಮನೆಯಲ್ಲಿ ಶನಿಯಿದ್ದರೆ ಈ ವ್ಯಕ್ತಿಗಳು ತಮಗೆ ತಾವೇ ಬಾಸ್ ನಂತೆ ಇರುತ್ತಾರೆ. ಕಾದಂಬರಿಕಾರರು, ಆರ್ ಜೆ ಹೀಗೆ ವೃತ್ತಿ ಅಥವಾ ವ್ಯಾಪಾರ ಕೈಗೊಳ್ಳುತ್ತಾರೆ. ಒಂದು ವೇಳೆ ಈ ಸ್ಥಾನದಲ್ಲಿ ಶನಿಯ ಜತೆಗೆ ರವಿ ಗ್ರಹ ಇದ್ದರೆ ತಂದೆಯ ಜತೆಗಿನ ಸಂಬಂಧ ಚೆನ್ನಾಗಿರುವುದಿಲ್ಲ. ಜತೆಗೆ ಸೋದರ-ಸೋದರಿ ಜತೆಗೆ ಸಂಬಂಧವೂ ಚೆನ್ನಾಗಿರುವುದಿಲ್ಲ. ಉನ್ನತ ಶಿಕ್ಷಣಕ್ಕೆ ನಾನಾ ಅಡ್ಡಿಗಳು ಬರುತ್ತವೆ. ಧಾರ್ಮಿಕ- ಆಧ್ಯಾತ್ಮಿಕ ಕಾರ್ಯಗಳಲ್ಲೂ ನಾನಾ ಅಡಚಣೆಗಳು ಬರುತ್ತವೆ ನಕಾರಾತ್ಮಕ ಭಾವನೆಗಳು ಹೆಚ್ಚುತ್ತವೆ. ಇದರಿಂದ ಅನೇಕ ತೊಂದರೆಗಳು ಎದುರಾಗುತ್ತವೆ.
ಚತುರ್ಥ ಭಾವ :--
ಚತುರ್ಥ ಭಾವವೂ ಕೇಂದ್ರಸ್ಥಾನವಾದ್ದರಿಂದ, ಈ ಭಾವವೇನಾದರೂ ಶನಿದೇವನಿಗೆ ಸ್ವಕ್ಷೇತ್ರ, ಉಚ್ಚಕ್ಷೇತ್ರ, ಮೂಲತ್ರಿಕೋನ ಆಗಿದ್ದರೆ ಶಶಯೋಗವಾಗುತ್ತೆ. ಆಹಾ ಜಾತಕರು ಊರಿನ ಮುಖ್ಯಸ್ಥ, ಭೂಮಿಯಿಂದ ಲಾಭ, ಧಾರ್ಮಿಕ ಮನೋಭಾವ ಇರುತ್ತೆ.
ಚತುರ್ಥ ಭಾವಸ್ಥ ಶನಿಯು ಶುಭನಾಗಿದ್ದರೆ, ಜಾತಕನು ಸ್ವಂತ ಮನೆ, ವಾಹನ , ಸೇವಕರುಳ್ಳವನಾಗಿರುತ್ತಾನೆ, ಭಾಗ್ಯವಂತ, ಧನವಂತ, ದಾನವಂತ, ಶನಿಯು 2, 7, 11, ನೇ ಅಧಿಪತಿಯರೊಂದಿಗೆ ಶುಭರೂಪದಲ್ಲಿ ಸ್ಥಿತನಿದ್ದರೆ, ಪಿತ್ರಾರ್ಜಿತ ಸಂಪತ್ತು ಪ್ರಾಪ್ತಿಯಾಗುತ್ತೆ, ವಿದೇಶಯಾತ್ರೆ ಯೋಗವಿದ್ದು ಯಶಸ್ಸು ದೊರೆಯುತ್ತದೆ, ಎಲ್ಲರಿಗೂ ಪ್ರಿಯನಾದವನಾಗಿ ಎಲ್ಲರಿಂದ ಸಹಕಾರ ಪಡೆಯುತ್ತಾನೆ.
ಚತುರ್ಥ ಭಾವಸ್ಥ ಶನಿಯು ಆಶುಭನಾಗಿದ್ದರೆ, ಜಾತಕನ ಶಿಕ್ಷಣ ಅಪೂರ್ಣ, ಜೀವನ ನಿರ್ವಹಣೆಗೆ ಕಠಿಣ ಪರಿಶ್ರಮ ಪಡಬೇಕಾಗುತ್ತದೆ, ಆ ಸಂದರ್ಭದಲ್ಲಿ ಪಿತ್ರಾರ್ಜಿತ ಸ್ಥಾನದಲ್ಲಿ ವಾಸಮಾಡುವುದು ಒಳ್ಳೆಯದಲ್ಲ . ಅದರಿಂದ ದುಃಖ, ಸ್ವಂತ ಮನೆ ನಿರ್ಮಿಸುವುದರಿಂದ ತಾಯಿಗೆ ಅಶುಭ, ತಾಯಿ ಧೀರ್ಘತಮ ಕಾಯಿಲೆಯಿಂದ ನರಳುತ್ತಾರೆ.
ಶನಿಗ್ರಹವು ಜಾತಕದ ನಾಲ್ಕನೇ ಮನೆಯಲ್ಲಿ ಸ್ಥಿತವಾಗಿದ್ದರೆ ಹೊಸ ಮನೆಯನ್ನು ಖರೀದಿಸುವುದು ಒಳಿತಲ್ಲ. ಶನಿಯು ಈ ಸ್ಥಾನದಲ್ಲಿ ಇದ್ದಾಗ ಹೊಸ ಮನೆಯನ್ನು ಖರೀದಿಸಿದರೆ ಅಥವಾ ಜಮೀನು - ಆಸ್ತಿಯನ್ನು ಖರೀದಿಸಿದರೆ ಹೆಚ್ಚು ದಿನ ನಿಲ್ಲುವುದಿಲ್ಲ.
ಲಗ್ನದಿಂದ ನಾಲ್ಕನೇ ಭಾವದ ಶನಿಯು
ಮನೆಯಲ್ಲಿ ಶಿಸ್ತುಬದ್ಧ ವಾತಾವರಣ ನಿರ್ಮಿಸುತ್ತಾನೆ. ತಾಯಿ ಜತೆಗೆ ಬಾಂಧವ್ಯ ದೀರ್ಘ ಕಾಲ ಇರುವುದಿಲ್ಲ. ಅನಾರೋಗ್ಯ ಸಮಸ್ಯೆಗಳು ಬಹಳ . ಜತೆಗೆ ಶತ್ರುಗಳ ವಿರುದ್ಧ ಕೈ ಮೇಲಾಗಿರುತ್ತದೆ. ಒಂದು ವೇಳೆ ಈ ಸ್ಥಾನದಲ್ಲಿ ಶನಿ ನೀಚನಾಗಿದ್ದರೆ ಮೂಳೆ ಹಾಗೂ ಸಂದು ನೋವುಗಳು ಕಾಣಿಸಿಕೊಳ್ಳಬಹುದು. ಇನ್ನು ಉದ್ಯೋಗ ಹಾಗೂ ವೃತ್ತಿ ಬದುಕಿನಲ್ಲಿ ಬೆಳೆಯಲು ಸಹಕಾರಿ ಆಗಿರುತ್ತದೆ.
ಪಂಚಮಭಾವ :--
ಪಂಚಮಭಾವಸ್ಥ ಶನಿಯು ಶುಭನಾಗಿದ್ದರೆ, ಜಾತಕನು ಧಾರ್ಮಿಕ, ನ್ಯಾಯವಾದಿ, ಪರೋಪಕಾರಿ, ಸಂಯಮಿ, ಸಭ್ಯ, ಸನ್ಮಾನಿತ, ಮಾತೇ ದುರ್ಗೆಯ ಭಕ್ತ, ಉತ್ತಮ ಲೇಖಕ, ಹೊಸ ಹೊಸ ಆವಿಷ್ಕಾರ ಗಳಲ್ಲಿ ಆಸಕ್ತಿ, ಹಿರಿಯರ ಸಂಗದಲ್ಲಿರಲು ಆಸೆ, ಅವರ ಅನುಭವದ ಜ್ಞಾನವನ್ನು ಪಡೆಯಲು ಉತ್ಸುಕನಾಗುತ್ತಾನೆ, ಚಿತ್ರರಂಗ ಹಾಗೂ ಛಾಯಾಚಿತ್ರ ಕ್ಷೇತ್ರದಲ್ಲಿ ಸಫಲನಾಗುತ್ತಾನೆ.
ಪಂಚಮಭಾವಸ್ಥ ಶನಿಯು ಆಶುಭನಾಗಿದ್ದರೆ, ಜಾತಕನು ಜೂಜು, ಸಟ್ಟಾ, ಲಾಟರಿ, ಅಭಿನಯ, ಚಲನಚಿತ್ರರಂಗ, ಮುಂತಾದ ಕ್ಷೇತ್ರದಲ್ಲಿ ಹಾನಿಯನ್ನು ಹೊಂದುತ್ತಾನೆ, ಪ್ರೇಮಪ್ರಕರಣಗಳು ಅಸಫಲವಾಗುತ್ತವೆ ಅಲ್ಪ ಸಂತಾನ, ಅನ್ಯ ಸ್ತ್ರೀ ಸಂಗ, ವಿಶೇಷವಾಗಿ ವಿಧವೆಯರೊಡನೆ ವ್ಯಭಿಚಾರ, ವಿರೋಧಿ ಗಳಿಂದ ಹಾನಿ.
ಜಾತಕದ ಐದನೇ ಮನೆಯಲ್ಲಿ ಶನಿ ಗ್ರಹವು ಸ್ಥಿತವಾಗಿದ್ದಾಗ ಮಕ್ಕಳಿಗೆ ತೊಂದರೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅಷ್ಟೇ ಅಲ್ಲದೆ ಎಲ್ಲವನ್ನೂ ಕಳೆದುಕೊಳ್ಳುವ ಸಾಧ್ಯತೆಯೂ ಹೆಚ್ಚಿರುತ್ತದೆ. ಹಾಗಾಗಿ ಹೊಸ ಕಾರ್ಯಗಳನ್ನು ಕೈಗೊಳ್ಳದಿರುವುದು ಉತ್ತಮ.
ಲಗ್ನದಿಂದ ಐದನೇ ಮನೆಯಲ್ಲಿ ಶನಿಯಿದ್ದರೆ ಕ್ರಿಯಾತ್ಮಕತೆಗೆ ತಡೆ. ತನ್ನ ಮೂರನೇ ದೃಷ್ಟಿಯಿಂದ ಸಪ್ತಮವನ್ನು ದೃಷ್ಟಿಸುವುದರಿಂದ ಮದುವೆ ವಿಳಂಬ. ಜೊತೆಗೆ ಸಂತಾನ ವಿಚಾರ ತಡ ಆಗುತ್ತದೆ. ಒಂದು ವೇಳೆ ಶನಿಯು ಬುಧ ಅಥವಾ ಶುಕ್ರನ ಜತೆಗೆ ಇದ್ದರೆ ಕ್ರಿಯೇಟಿವಿಟಿ ಹೆಚ್ಚುತ್ತದೆ. ಪ್ರಬುದ್ಧ ಹಾಗೂ ಶಿಸ್ತುಬದ್ಧ ಸಂಗಾತಿ ಸಿಗುತ್ತಾರೆ. ಅನಿರೀಕ್ಷಿತವಾದ ಲಾಭಗಳನ್ನು ಪಡೆಯುತ್ತಾರೆ. ಈ ವ್ಯಕ್ತಿಗಳಿಗೆ ನಾಚಿಕೆ ಸ್ವಭಾವ ಇರುತ್ತದೆ.
ಷಷ್ಟ ಭಾವ :--
ಈ ಭಾವಕ್ಕೆ ಕಾರಕಗ್ರಹ ಶನಿ ಮತ್ತು ಕುಜ.
ಜಾತಕದ ಆರನೇ ಮನೆಯಲ್ಲಿ ಶನಿ ಗ್ರಹವು ಸ್ಥಿತವಾಗಿದ್ದರೆ ಶುಭ ಸೂಚಕವೆಂದು ಹೇಳಲಾಗುತ್ತದೆ. ಏಕೆಂದರೆ ಈ ಸ್ಥಾನ ಉಪಚಯ ಸ್ಥಾನವಾಗುತ್ತೆ. ಇದರಿಂದ ಆರೋಗ್ಯ ಉತ್ತಮವಾಗಿರುತ್ತದೆ ಮತ್ತು ಜಮೀನು - ಆಸ್ತಿಗಳನ್ನು ಹೊಂದುವ ಸಾಧ್ಯತೆಯೂ ಇರುತ್ತದೆ. ಇದರ ಜೊತೆಗೆ ಯಾವುದೇ ಕೆಟ್ಟ ಕೆಲಸಗಳನ್ನು ಮಾಡದೆ ಮತ್ತು ಮದ್ಯಪಾನ - ಧೂಮಪಾನದಿಂದ ದೂರವಿದ್ದರೆ ಉತ್ತಮ.
ಷಷ್ಟ ಭಾವಸ್ಥ ಶನಿಯು ಶುಭನಾಗಿದ್ದರೆ, ಜಾತಕನು ಧನವಂತ, ಕರ್ಮಠ, ಕಾನೂನಿನಲ್ಲಿ ಪರಿಣಿತ, ರಾಜಕೀಯದಲ್ಲಿ ಮುಂದಾಳು, ಜೀವನದಲ್ಲಿ ಸಫಲತೆ ಯನ್ನು ಪಡೆಯುವವ, ಸರ್ಕಾರಿ ನೌಕರಿಯಲ್ಲಿ ಉನ್ನತ ಪದವಿ, ಯಾತ್ರೆಗಳಲ್ಲಿ ಲಾಭ, ಭೌತಿಕ ಸುಖ ಸಾಧನಗಳು ಹಾಗೂ ಸಂತಾನ ಸುಖವನ್ನು ಪಡೆಯುವವನಾಗುತ್ತಾನೆ.
ಶನಿದೇವ ಶುಭನಾಗಿದ್ರೆ..
ಶತ್ರುಗಳು ನಾಶವಾಗುತ್ತಾರೆ. ವಿರೋಧಿಗಳ ವಿರುದ್ಧ ಕೈ ಮೇಲಾಗುತ್ತದೆ. ಸರಿಯಾದ ಸಮಯಕ್ಕೆ ಉದ್ಯೋಗ- ವೃತ್ತಿ ಬದುಕಿನ ಏಳ್ಗೆ ಆಗುತ್ತದೆ. ದೀರ್ಘಾಯುಷ್ಯ ನೀಡುತ್ತದೆ. ಸಾಲ- ವ್ಯಾಜ್ಯಗಳ ವಿಚಾರವನ್ನು ಇವರು ತುಂಬ ಚೆನ್ನಾಗಿ ನಿರ್ವಹಿಸುತ್ತಾರೆ. ವಿದೇಶಗಳಿಗೆ ಪ್ರಯಾಣ ಮಾಡುತ್ತಾರೆ. ಇವರು ಉದ್ಯೋಗಿಗಳಾಗಿಯೇ ಉಳಿಯುವ ಸಾಧ್ಯತೆ ಹೆಚ್ಚು. ಮಾಲೀಕರಾಗುವ, ಅಧಿಕಾರಿಗಳಾಗುವ ಅವಕಾಶ ಕಡಿಮೆ. ಸೋದರ- ಸೋದರಿಯರ ನೆರವು ದೊರೆಯುತ್ತದೆ. ಶನಿ ಹೀನಸ್ಥಿತಿಯಲ್ಲಿದ್ದಲ್ಲಿ ಮೂಳೆ ಕ್ಯಾನ್ಸರ್, ಕೀಲು, ಪಾರ್ಶ್ವವಾಯು, ಅಜೀರ್ಣ, ನರ, ಮಾಂಸಖಂಡಗಳು, ಹಲ್ಲುನೋವು, ಮುಂತಾದ ರೋಗಗಳು ಕಾಡುತ್ತವೆ.
ಸಪ್ತಮ ಭಾವ :--
ಸಪ್ತಮ ಭಾವದಲ್ಲಿ ಶನಿದೇವನಿಗೆ ದಿಗ್ಬಲ. ಈ ಭಾವ ಕೇಂದ್ರಸ್ಥಾನವೂ ಆದ್ದರಿಂದ, ಶನಿಯು ತನ್ನ ಉಚ್ಚಕ್ಷೇತ್ರ, ಸ್ವಕ್ಷೇತ್ರ, ಮೂಲತ್ರಿಕೋನ ದಲ್ಲಿ ಸ್ಥಿತನಾದರೆ ಮತ್ತೆ ಶಶಯೋಗವಾಗುತ್ತೆ. ಇದರಿಂದ ವಿವಾಹಾತ್ಪರ ಭಾಗ್ಯ, ಉತ್ತಮ ಗುಣದ ಪತ್ನಿ, ಪತ್ನೀ ಪುತ್ರರಿಂದ ಅನುಕೂಲ, ವೃದ್ಧಸ್ತ್ರೀಯರಿಂದ ಧನಲಾಭ. ಪಾಲುದಾರಿಕೆ ವ್ಯಾಪಾರದಲ್ಲಿ ಲಾಭ, ಧರ್ಮಕಾರ್ಯದಲ್ಲಿ ಆಸಕ್ತಿ, ಕೋರ್ಟ್ ವ್ಯವಹಾರಗಳಲ್ಲಿ ಜಯ, ಸಾಹಸವಂತರು, ಉನ್ನತ ವಿದ್ಯಾಭ್ಯಾಸ ಮಾಡುವ ಅವಕಾಶ ಇರುತ್ತೆ, ಹಾಗೆಯೇ ವ್ಯವಹಾರ ಬುದ್ಧಿಯೂ ಇರುತ್ತೆ.
ಸಪ್ತಮಭಾವಸ್ಥ ಶನಿಯು ಶುಭನಾಗಿದ್ದರೆ, ಜಾತಕನು ಭಾಗ್ಯಶಾಲಿ, ಶ್ರೀಮಂತ, ಆದರ್ಶವಾದಿ, ಸತ್ಯವಾದಿ, ಒಳ್ಳೆಯ ರಾಜಕೀಯ ಮುಖಂಡ, ನ್ಯಾಯಪ್ರಿಯ, ಸ್ವಾಭಿಮಾನಿ, ಸುಖಿ, ವಿವಾಹ ವಿಳಂಬ, ಸುಂದರ , ಸುಶೀಲ, ಸುಸಂಸ್ಕೃತ ಹಾಗೂ ವಿಶೇಷ ಕಾಳಜಿಯುಕ್ತ ಪತ್ನಿ.
ಸಪ್ತಮಭಾವಸ್ಥ ಶನಿಯು ಆಶುಭನಾಗಿದ್ದರೆ, ಜಾತಕನು ಹಣವನ್ನು. ದುರುಪಯೋಗ ಮಾಡುವವ, ಧೂರ್ತ, ಸಂಗಾತಿಯ ವಿಷಯದಲ್ಲಿ ಅಪ್ರಾಮಾಣಿಕ, ದುರ್ಗುಣಗಳಿಂದ ಕೂಡಿದವ ಅಲ್ಪ ಸಂತಾನ.
ಆರ್ಥಿಕ ನಷ್ಟ ಮತ್ತು ಸಾಮಾಜಿಕ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಈ ಸಮಯದಲ್ಲಿ ಅನ್ಯ ಮಹಿಳೆಯರ ಬಗ್ಗೆ ಉತ್ತಮ ಭಾವನೆಯನ್ನು ಹೊಂದುವುದು ಮತ್ತು ಹಣದ ಸರಿಯಾದ ಬಳಕೆ ಮಾಡುವುದು ತುಂಬಾ ಅವಶ್ಯವಾಗಿರುತ್ತದೆ. ಲಗ್ನದಿಂದ ಏಳನೇ ಮನೆ ತುಲಾ ರಾಶಿ ಆಗಿದ್ದು, ಅಲ್ಲೇ ಶನಿಯಿದ್ದರೆ ಬಹಳ ಉತ್ತಮ. ಇಲ್ಲದಿದ್ದರೆ ತುಂಬ ಗಂಭೀರ ಸ್ವಭಾವದ ಹಾಗೂ ವಿಪರೀತ ಶಿಸ್ತಿನ ಸಂಗಾತಿ ದೊರೆಯುತ್ತಾರೆ. ಈ ಸಂಬಂಧ ದೀರ್ಘಾವಧಿ ಇರುತ್ತದಾದರೂ ಪ್ರೀತಿ ಹಾಗೂ ಭಾವನೆಗಳಿಗೆ ಅವಕಾಶ ಇರುವುದಿಲ್ಲ. ಈ ಜನರು ಜನರ ಜತೆ ಹೆಚ್ಚು ಬೆರೆಯುವುದಿಲ್ಲ. ಮನೆಯಲ್ಲಿ ಕೂಡ ನಿರ್ಬಂಧಗಳು ಇರುತ್ತವೆ.
ಅಷ್ಟಮಭಾವ :--
ಅಷ್ಟಮಭಾವ ಕಾರಕ ಶನಿಯೇ ಆಗುತ್ತಾನೆ.
ಅಷ್ಟಮಭಾವಸ್ಥ ಶನಿಯು ಶುಭನಾಗಿದ್ದರೆ, ಜಾತಕನು ಧೀರ್ಘಆಯು, ಸಭ್ಯ, ಧಾರ್ಮಿಕತೆ, ಭಾಗ್ಯಶಾಲಿ, ಸ್ವಾಭಿಮಾನಿ, ರಾಜನೀತಿಜ್ಞ, ಶ್ರೇಷ್ಠ ತತ್ವಜ್ಞಾನಿ, ಗುಣವಂತ, ದಯಾಳು, ಶನಿಗೆ ಸಂಬಂಧ ಪಟ್ಟ ವ್ಯಾಪಾರ ದಿಂದ ಅತ್ಯಧಿಕ ಲಾಭ,ಸುಖ ದಾಂಪತ್ಯ.
ಅಷ್ಟಮ ಭಾವಸ್ಥ ಶನಿಯು ಆಶುಭನಾಗಿದ್ದರೆ, ಜಾತಕನು ಭಾಗ್ಯಹೀನ, ಧನಹೀನ, ಚಾರಿತ್ರ್ಯ ಹೀನ, ಮೊಸಗಾರ, ದುಷ್ಟ, ಎಲ್ಲರಿಂದಲೂ ಉಪೇಕ್ಷೆಗೊಳಪಟ್ಟವನು, ವ್ಯಾಪಾರ ದಲ್ಲಿ ವಿಫಲ, ಶನಿಯು ಎಷ್ಟು ಗ್ರಹಗಳೊಡನೆ ಸ್ಥಿತನಿರುತ್ತಾನೋ ಅಷ್ಟು ಸದಸ್ಯರ ಮರಣ ಸಂಭವ, ಇವರ ವೈವಾಹಿಕ ಜೀವನ ದುಃಖಮಯ. ಶನಿ ಗ್ರಹವು ಎಂಟನೇ ಮನೆಯಲ್ಲಿ ಸ್ಥಿತವಾಗಿ ಕುಜ ಗ್ರಹದ
ಯುತಿಯಾದಾಗ ( ಒಂದೇ ಮನೆಯಲ್ಲಿದ್ದಾಗ ) ಗುಪ್ತ ರೋಗಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುವುದು ಅವಶ್ಯಕ. ಆರ್ಥಿಕ ನಷ್ಟವನ್ನು ಅನುಭವಿಸುವ ಸಾಧ್ಯತೆ ಹೆಚ್ಚಿರುವ ಕಾರಣ ಹಣವನ್ನು ಖರ್ಚುಮಾಡುವಾಗ ಮಿತಿ ಹಾಕಿಕೊಳ್ಳುವುದು ಉತ್ತಮ. ಎಂಟರ ಶನಿ ಧೀರ್ಘಾಯುಷ್ಯವನ್ನು ನೀಡುವ ಜತೆಗೆ ದುರದೃಷ್ಟವನ್ನೂ ತರುತ್ತಾನೆ. ಈ ಸ್ಥಾನದಲ್ಲಿ ಶನಿ ಇದ್ದರೆ ಭೂಮಿಯ ಒಳ ಭಾಗದಲ್ಲಿನ ಕೆಲಸಗಳು, ಉದಾಹರಣೆಗೆ ಒಳಚರಂಡಿ ಕಾಮಗಾರಿ ಭೂಗರ್ಭಶಾಸ್ತ್ರ, ಗಣಿಗಾರಿಕೆ, ಭಾವಿ, ಕೊಳವೆಭಾವಿ, ಇತ್ಯಾದಿ ಮಾಡಿದರೆ ಲಾಭ ಆಗುತ್ತದೆ. ಜೀವನ ಸ್ಥಿರವಾಗಿರುತ್ತದೆ. ಜೀವನದ ಆರಂಭಿಕ ಹಂತದಲ್ಲೇ ಇವರು ಕುಟುಂಬದಿಂದ ದೂರ ಆಗುವ ಸಾಧ್ಯತೆ ಹೆಚ್ಚು. ಕುಟುಂಬಕ್ಕೆ ಸಂಬಂಧಿಸಿದ ರಹಸ್ಯವೊಂದು ಇರುತ್ತದೆ. ಶಿಕ್ಷಣದಲ್ಲಿ ಅಡೆತಡೆಗಳು ಹಾಗೂ ಸಂತಾನ ವಿಚಾರದಲ್ಲಿ ಸಮಸ್ಯೆಗಳಾಗುತ್ತವೆ.
ನವಮಭಾವ :---
ಶನಿಗ್ರಹವು ಜಾತಕದ ಒಂಭತ್ತನೇ ಮನೆಯಲ್ಲಿ ಸ್ಥಿತವಾಗಿದ್ದರೆ ಶುಭ ಎಂದು ಹೇಳಲಾಗುತ್ತದೆ. ಏಕೆಂದರೆ ಶನಿದೇವ ಧಾರ್ಮಿಕನೂ ಹೌದು, ಧರ್ಮಭಾವವಾದ ನವಮಭಾವದಲ್ಲಿ ಶನಿ ಸ್ಥಿತನಾಗಿದ್ದರೆ, ವ್ಯಕ್ತಿಗೆ ಆಧ್ಯಾತ್ಮಿಕ ಭಾವನೆಯ ಹಸಿವಿರುತ್ತದೆ, ಸಾಂಸಾರಿಕ ಜೀವನದಲ್ಲಿ ಹೆಚ್ಚಿನ ಆಸಕ್ತಿ ಇರುವುದಿಲ್ಲ
ನವಮಭಾವಸ್ಥ ಶನಿಯು ಶುಭನಾಗಿದ್ದರೆ, ಜಾತಕನು ಜನ್ಮದಿಂದಲೇ ಭಾಗ್ಯವಂತ, ದಾರ್ಶನಿಕ, ವಿಜ್ಞಾನಿ, ಮಾತೇ ದುರ್ಗೆಯ ಭಕ್ತ, ಜ್ಯೋತಿಷ್ಯ ಶಾಸ್ತ್ರದಲ್ಲಿ ಪಂಡಿತ, ಧಾರ್ಮಿಕ ವಿಚಾರಧಾರೆಯುಳ್ಳವ, ಭವ್ಯ ಮನೆ, ವಾಹನ ಸೇವಕರುಳ್ಳವ, ವಿದೇಶ ಯಾತ್ರಾಯೋಗ, ಉತ್ತಮ ತಂದೆತಾಯಿಯರನ್ನು ಪಡೆದವನಾಗಿರುತ್ತಾನೆ. ಧಾರ್ಮಿಕ ಆಧ್ಯಾತ್ಮಿಕ ಬರವಣಿಗೆಯಲ್ಲಿ ಆಸಕ್ತಿ ಇರುತ್ತೆ, ಸಾಲದಿಂದ, ಅಡೆತಡೆಗಳಿಂದ, ಅನಾರೋಗ್ಯ ಸಮಸ್ಯೆಯಿಂದ ಬೇಗ ನಿವಾರಣೆ ಆಗುತ್ತೆ. ಕಾನೂನು ಕಟ್ಟಳೆಗಳನ್ನು ಗೌರವಿಸುತ್ತಾರೆ. ಧರ್ಮ, ಗುರುಹಿರಿಯರು, ಪೋಷಕರ ಬಗ್ಗೆ ಗೌರವ ಇರುತ್ತೆ. ಇವರಿಗೆ ಶನಿ ದಶಾದಲ್ಲಿ ಉತ್ತಮ ಫಲ.
ನವಮ ಭಾವಸ್ಥ ಶನಿಯು ಆಶುಭನಾಗಿದ್ದರೆ, ಜಾತಕನು ಅಪೂರ್ಣ ವಿದ್ಯೆ, ಭಾಗ್ಯಹೀನ, ಅಧರ್ಮಿ, ಅಪ್ರಾಮಾಣಿಕ, ಲೋಭಿ, ಕಲಹಪ್ರಿಯ, ಕೃಶಕಾಯ, ಯಾತ್ರೆಗಳಲ್ಲಿ ನಷ್ಟ. ಬಾಲ್ಯದಲ್ಲೇ ತಂದೆಯಿಂದ ದೂರ ಆಗಬೇಕಾಗುತ್ತದೆ. ಉನ್ನತ ಶಿಕ್ಷಣದಲ್ಲಿ ತೊಂದರೆಗಳು ಎದುರಾಗುತ್ತವೆ.
ದಶಮಭಾವ :---
ಇದನ್ನು ಕರ್ಮಭಾವ ಅಂತಲೂ ಕರೆಯುತ್ತಾರೆ. ಶನಿ ಈ ಭಾವ ಕಾರಕ. (ಇತರ ಕಾರಕರು ರವಿ ಬುಧ ಗುರು)
ಶನಿ ಗ್ರಹವು ಹತ್ತನೆ ಮನೆಯಲ್ಲಿ ಸ್ಥಿತವಾಗಿದ್ದರೆ ಶುಭ ಎಂದೇ ಹೇಳಬಹುದು. ಶನಿದೇವನಿಗೆ ಈ ಭಾವ ಉಚ್ಚಕ್ಷೇತ್ರ, ಸ್ವಕ್ಷೇತ್ರ, ಮೂಲತ್ರಿಕೋನವಾಗಿದ್ರೆ ಶಶಯೋಗವಾಗುತ್ತೆ.
ಲಕ್ಷ್ಮಿ ಕೃಪೆ ಸಿಗುತ್ತದೆ ಮನೆಯಲ್ಲಿ ಧನ -ಧಾನ್ಯ ವೃದ್ಧಿಯಾಗುತ್ತದೆ. ಜಾತಕನು ಶುಭಕರ್ಮಾಚರಣೆ, ದೇವತಾಕಾರ್ಯ ಮಾಡುವವನು, ತಾಳ್ಮೆಯಿಂದ ಕೆಲಸ ಮಾಡುವವನು, ಧರ್ಮದ ಸಂಪಾದನೆ, ಉದ್ಯೋಗ ದಲ್ಲಿ ವಿಶೇಷ ಲಾಭ, ಉತ್ತಮ ಆಡಲಿತಗಾರನಾಗುತ್ತಾನೆ.
ದಶಮ ಭಾವಸ್ಥ ಶನಿಯು ಶುಭನಾಗಿದ್ದರೆ, ಜಾತಕನು ಬಲಶಾಲಿ, ಗುಣಶಾಲಿ, ಆಯುಷ್ಯವಂತ, ಧಾರ್ಮಿಕ, ಎಲ್ಲಾ ವಿಷಯದಲ್ಲೂ ಸಫಲತೆಯನ್ನು ಪಡೆಯುವವ, ಉಚ್ಛಮಟ್ಟದ ರಾಜನೀತಿಜ್ಞ, ಸಫಲ ಯಾತ್ರಾಫಲ, ನೀತಿವಂತ ಹೆತ್ತವರು, ಮಧುರ ದಾಂಪತ್ಯ, ಹತ್ತನೇ ಸ್ಥಾನದ ಶನಿಯಿಂದ ಉದ್ಯೋಗ ಅಥವಾ ವೃತ್ತಿ ಬದುಕು ಅದ್ಭುತವಾಗಿರುತ್ತದೆ. ಗಣಿಗಾರಿಕೆ ಹಾಗೂ ತೈಲಕ್ಕೆ ಸಂಬಂಧಿಸಿದ ಉದ್ಯೋಗ- ವೃತ್ತಿ ಚೆನ್ನಾಗಿ ಕೈ ಹಿಡಿಯುತ್ತದೆ. ಆದರೆ ಇತರ ಗ್ರಹಗಳ ಬೆಂಬಲವೂ ಇರಬೇಕು. ಸಾಮಾನ್ಯವಾಗಿ ಸರಕಾರಿ ಕೆಲಸ ದೊರೆಯುವ ಸಾಧ್ಯತೆ ಇರುತ್ತದೆ. ಯಾವುದೇ ಉದ್ಯೋಗ ಇದ್ದರೂ ಗಂಭೀರವಾಗಿ ತೊಡಗಿಕೊಳ್ಳುತ್ತಾರೆ. ಶ್ರಮಜೀವಿಗಳು, ಮಹತ್ವಾಕಾಂಕ್ಷಿಗಳಾಗಿ ಇರುತ್ತಾರೆ. ಉದ್ಯೋಗದ ಸಲುವಾಗಿ ವಿದೇಶಕ್ಕೆ ತೆರಳುವ ಅವಕಾಶಗಳು ದೊರೆಯುತ್ತವೆ. ಇವರಿಗೆ ದೊರೆಯುವ ಸಂಗಾತಿ ಕೂಡ ಉದ್ಯೋಗ- ವೃತ್ತಿ ಬದುಕಿನ ಬಗ್ಗೆ ಅಷ್ಟೇ ಗಂಭೀರವಾಗಿ ಇರುತ್ತಾರೆ. ಕೆಲಸ- ವೃತ್ತಿ ಕಾರಣಕ್ಕಾಗಿಯೇ ತಮ್ಮ ಮದುವೆಯನ್ನು ಮುಂದಕ್ಕೆ ಹಾಕುತ್ತಾರೆ.
ದಶಮ ಭಾವಸ್ಥ ಶನಿಯು ಆಶುಭನಾಗಿದ್ದರೆ, ಜಾತಕನು ವ್ಯಾಪಾರದಲ್ಲಿ ಹಾನಿ, ರೋಗಪೀಡಿತ ತಾಯಿ, ನೌಕರಿಯಿಂದ ಲಾಭ, ಮಾದಕ ವಸ್ತುಗಳ ವ್ಯಸನಿ, ದುಃಖಮಯ ದಾಂಪತ್ಯ .
ಏಕಾದಶ ಭಾವ :---
ಉಪಚಯ ಸ್ಥಾನವಾದ ಈ ಭಾವದಲ್ಲಿ ಶನಿ ಸ್ಥಿತನಾದರೆ ಉತ್ತಮ.
ಏಕಾದಶ ಭಾವಸ್ಥ ಶನಿಯು ಶುಭನಾಗಿದ್ದರೆ, ಜಾತಕನು ಧೀರ್ಘಆಯು, ಭಾಗ್ಯಶಾಲಿ, ಅಪಾರ ಧನ - ಸಂಪತ್ತಿನ ಒಡೆಯ, ಪಿತ್ರಾರ್ಜಿತ ಆಸ್ತಿಯನ್ನು ಹೊಂದಿರುವವ, ವ್ಯಾಪಾರದಲ್ಲಿ ನಿರಂತರ ಪ್ರಗತಿ, ಕುಟುಂಬದಲ್ಲಿ ಗೌರವಾನ್ವಿತ, ಹಾಗೂ ಗೌರವಾನ್ವಿತ ಕುಟುಂಬದವ, ಶ್ರೇಷ್ಠ ಮಿತ್ರರು, ಸುಖ ಸುಂದರ ದಾಂಪತ್ಯ. ಈ ಭಾವ ಶನಿಯ ಸ್ವಕ್ಷೇತ್ರ, ಉಚ್ಚ ಕ್ಷೇತ್ರ ಅಥವಾ ಮಿತ್ರ ಕ್ಷೇತ್ರ ಅಗಿದ್ದಲ್ಲಿ ಸಕಾರಾತ್ಮಕ ಫಲಿತಾಂಶ ದೊರೆಯುತ್ತದೆ. ದೊಡ್ಡ ಪ್ರಮಾಣದ ಆಸ್ತಿ, ಸಮಾಜದಲ್ಲಿ ಉತ್ತಮ ಸ್ಥಾನ-ಮಾನ ದೊರೆಯುತ್ತದೆ. ಜಾತಕದಲ್ಲಿ ಶುಕ್ರನ ಜೊತೆಗೆ ಚಂದ್ರ ಇದ್ದು, ಅಲ್ಲೇ ಶನಿಯೂ ಇದ್ದರೆ ಯಶಸ್ಸು, ಅತ್ಯುನ್ನತ ಸ್ಥಾನ ಮಾನ ದೊರೆಯುತ್ತದೆ.
ಒಂದು ವೇಳೆ ಶನಿ ನೀಚನಾಗಿದ್ದರೆ ಜೂಜು, ಸಟ್ಟಾ ವ್ಯವಹಾರದ ಮೂಲಕ ಹಣಗಳಿಸುತ್ತಾರೆ. ಇದರಿಂದ ಸಮಸ್ಯೆಯನ್ನೂ ಎದುರಿಸಬೇಕಾಗುತ್ತದೆ. ಸಮಾಜದಲ್ಲಿ ಅಪಾರ ಸಂಖ್ಯೆಯ ಸ್ನೇಹಿತರು ಇರುತ್ತಾರೆ. ಕುಜ ಅಥವಾ ಪಾಪ ಗ್ರಹಗಳು ಯಾವುದಾದರೂ ಗ್ರಹ ಲಗ್ನದಲ್ಲಿ ಇದ್ದಲ್ಲಿ ಆರೋಗ್ಯ ಸಮಸ್ಯೆಗಳು ಆಗುತ್ತವೆ. ಮಕ್ಕಳು ಮತ್ತು ತಮ್ಮ ಕ್ರಿಯಾತ್ಮಕ ಆಲೋಚನೆ ಮೂಲಕ ಅಪಾರ ಗಳಿಕೆ ಪಡೆಯುತ್ತಾರೆ.
ದ್ವಾದಶ ಭಾವ :--
ಈ ಭಾವವನ್ನು ವ್ಯಯಭಾವ, ಮೋಕ್ಷಭಾವ ಎಂತಲೂ ಕರೆಯುತ್ತಾರೆ. ಈ ಭಾವಕ್ಕೆ ಶನಿ ಮತ್ತು ಕೇತು ಕಾರಕರು.
ದ್ವಾದಶ ಭಾವಸ್ಥ ಶನಿಯು ಶುಭನಾಗಿದ್ದರೆ, ಜಾತಕನು ವಿದ್ವಾಂಸ, ದಯೆಯುಳ್ಳವ, ಭಾಗ್ಯವಂತ, ಪ್ರಸಿದ್ಧಿ ಪಡೆಯುವವ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಾರ ವ್ಯಾವಹಾರ ಇರುವವ, ಸುಂದರ ಸುಮಧುರ ದಾಂಪತ್ಯ. ವಿದೇಶಿ ವ್ಯಾಪಾರ ವ್ಯವಹಾರದಿಂದ ಅತ್ಯಧಿಕ ಧನಲಾಭ, ವಿರೋಧಿಗಳ ವಿನಾಶ.
ದ್ವಾದಶ ಭಾವಸ್ಥ ಶನಿಯು ಆಶುಭನಾಗಿದ್ದರೆ, ಜಾತಕನು ಕೃಶಕಾಯ, ಏಕಾಂತಪ್ರಿಯ, ವಿರೋಧಿಗಳಿಂದ ಪರಾಜಯ ಹೊಂದುವವ, ವಿದೇಶೀ ಯಾತ್ರೆಗಳಲ್ಲಿ ಅಶುಭ, ನಷ್ಟ, ಅಲ್ಪ ಸಂತಾನ.
ಶನಿ ಗ್ರಹವು ಹನ್ನೆರಡನೇ ಮನೆಯಲ್ಲಿ ಸ್ಥಿತವಾಗಿದ್ದರೆ ಅಶುಭ ಎಂದೇ ಹೇಳಲಾಗುತ್ತದೆ. ಈ ಸಮಯದಲ್ಲಿ ಯಾವುದೇ ನೂತನ ಕಾರ್ಯಗಳನ್ನು ಆರಂಭಿಸುವುದು ಒಳ್ಳೆಯದಲ್ಲ.
ಹನ್ನೆರಡನೇ ಮನೆ ಶನಿಗೆ ಉತ್ತಮವಲ್ಲ. ಇದರಿಂದ ಒತ್ತಡ ಹೆಚ್ಚಾಗುತ್ತದೆ. ಆಸ್ತಿ ಕಳೆದುಕೊಳ್ಳುತ್ತಾರೆ. ಪಿತ್ರಾರ್ಜಿತವಾಗಿ ಬಂದ ಆಸ್ತಿಯನ್ನೂ ಉಳಿಸಿಕೊಳ್ಳಲು ಆಗುವುದಿಲ್ಲ. ಒಂದು ಕಡೆಯಿಂದ ಆಸ್ತಿ ಸಂಪಾದನೆಗೆ ಶ್ರಮ ಪಡುತ್ತಿದ್ದರೂ ಅದನ್ನು ಉಳಿಸಿಕೊಳ್ಳಲು ಆಗುವುದಿಲ್ಲ. ಆಧ್ಯಾತ್ಮಿಕ ಚಿಂತನೆಗಳು ಬರುತ್ತವೆ. ಅದು ಕೂಡ ತಡವಾಗಿ ಬರುತ್ತದೆ. ವಿದೇಶಿ ವ್ಯವಹಾರಗಳನ್ನು ಮಾಡುವ ಸಾಧ್ಯತೆ ಇರುತ್ತದೆ. ವಿದೇಶಿ ಮೂಲದಿಂದ ಅದ್ಭುತವಾದ ಗಳಿಕೆಯನ್ನೂ ನೀಡುತ್ತದೆ. ವಿರೋಧಿ ಪಾಳಯ್ದ ವಿರುದ್ಧ ಇವರ ಕೈ ಮೇಲಾಗುತ್ತದೆ. ಶನಿ ಮಹರ್ದಶಾ ನಡೆಯುವ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ.
ಇನ್ನು ದ್ವಾದಶ ರಾಶಿಗಳಲ್ಲಿ ಶನಿ ಸ್ಥಿತ ಫಲಗಳನ್ನು ನೋಡೋಣ
ಮೇಷರಾಶಿಯಲ್ಲಿ ಶನಿ
ಮೇಷ ರಾಶಿಯಲ್ಲಿ ಶನಿ ನೀಚ ಸ್ಥಾನದಲ್ಲಿರುತ್ತಾನೆ. ಶನಿ ನೀಚ ಸ್ಥಾನದಲ್ಲಿದ್ದರೆ ಅಶುಭ ಫಲವನ್ನು ನೀಡುತ್ತಾನೆ. ಈ ರಾಶಿಯಲ್ಲಿ ಶನಿ ಇದ್ದಾಗ, ಮೇಷ ರಾಶಿಯವರ ವ್ಯಕ್ತಿತ್ವದಲ್ಲಿ ಕೆಲವು ಬದಲಾವಣೆಗಳಾಗುತ್ತವೆ. ಆತ್ಮವಿಶ್ವಾಸದ ಕೊರತೆಯಾಗುತ್ತದೆ. ಹಟ ಮತ್ತು ಕೋಪಕ್ಕೆ ದಾಸರಾಗುತ್ತಾರೆ. ಕೆಟ್ಟ ಅಭ್ಯಾಸಗಳತ್ತ ಮನಸ್ಸು ವಾಲುತ್ತದೆ. ಯಂತ್ರ ಸಂಬಂಧಿ ಕೆಲಸಗಳಲ್ಲಿ ಮುಂದುವರಿಯಬಹುದು. ಮೇಷ ರಾಶಿಯ ವ್ಯಕ್ತಿಗಳಿಗೆ ಶನಿದಶೆ ನಡೆಯುತ್ತಿದ್ದರೆ ಅಂತಹ ಸಮಯದಲ್ಲಿ ಸಂಬಂಧಿಕರು ಮತ್ತು ಸ್ನೇಹಿತರ ಜೊತೆ ಮನಸ್ಥಾಪ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ.
ವೃಷಭದಲ್ಲಿ ಶನಿ
ಜಾತಕದಲ್ಲಿ ಶನಿಯು ವೃಷಭ ರಾಶಿಯಲ್ಲಿದ್ದಾಗ ಧನಕಾರಕ ಶುಕ್ರನ ಪ್ರಭಾವದಿಂದ ಹಣಕಾಸಿನ ಅಭಿವೃದ್ಧಿ ಇರುತ್ತೆ. ವೈಭವ ಸಂಬಂಧವಾದ ವ್ಯಾಪಾರ ವೃತ್ತಿಯನ್ನು ಮಾಡುತ್ತಾರೆ. ಈ ವ್ಯಕ್ತಿಗಳು ಚತುರರು ಮತ್ತು ಶಕ್ತಿಶಾಲಿಯಾಗಿರುತ್ತಾರೆ ಆದರೆ ವಿಶ್ವಾಸಕ್ಕೆ ಅರ್ಹರಾಗಿರುವುದಿಲ್ಲ. ಮೋಸ, ವಂಚನೆಗಳನ್ನು ಮಾಡುವ ಮನಃಸ್ಥಿತಿ ಉಳ್ಳವರಾಗಿರುತ್ತಾರೆ. ಜಾತಕದಲ್ಲಿ ಬೇರೆ ಗ್ರಹಗಳು ಶುಭ ಸ್ಥಿತಿಯಲ್ಲಿರದಿದ್ದರೆ ಅನ್ಯ ಸಂಬಂಧವನ್ನು ಮಾಡುವ ಮನಃಸ್ಥಿತಿ ಇವರದ್ದಾಗುತ್ತದೆ.
ಶನಿ ಮಿಥುನ ರಾಶಿಯಲ್ಲಿದ್ದಾಗ
ಜಾತಕರು ವ್ಯಾಪಾರ ಸಂಬಂಧಿ ವೃತ್ತಿಯಲ್ಲಿರ್ತಾರೆ. ಲೆಕ್ಕಾಚಾರ ಬುದ್ಧಿ ಇರುತ್ತೆ. ಇದು ಧೈರ್ಯ ಸ್ಥಾನವೂ ಆಗಿರುವುದರಿಂದ
ಇಲ್ಲಿ ಶನಿಯು ವ್ಯಕ್ತಿಯನ್ನು ಹುಚ್ಚು ಸಾಹಸಕ್ಕೆ ಕೈ ಹಾಕುವಂಥ ಮನಸ್ಸನ್ನು ನೀಡುತ್ತಾನೆ. ಚತುರನಾಗಿದ್ದರೂ ಮೋಸ ಮಾಡುವ ಪ್ರವೃತ್ತಿಯನ್ನು ಹೊಂದುತ್ತಾನೆ. ರಾಜನೀತಿ ಮತ್ತು ಕೂಟನೀತಿಯಂಥ ಕ್ಷೇತ್ರದಲ್ಲಿ ಉತ್ತಮನಾಗಿರುತ್ತಾನೆ. ಮಿಥುನ ರಾಶಿಯಲ್ಲಿ ಶನಿ ಇದ್ದರೆ ಸಂತಾನಕ್ಕೆ ಅಷ್ಟು ಉತ್ತಮವಲ್ಲ. ಸಾಹಿತ್ಯ, ಸಂಗೀತ ಮತ್ತು ಸೌಂದರ್ಯದ ಬಗ್ಗೆ ಹೆಚ್ಚು ಒಲವು ಮೂಡುತ್ತದೆ.
ಕಟಕದಲ್ಲಿ ಶನಿ
ಜಾತಕದ ನಾಲ್ಕನೇ ಮನೆಯಲ್ಲಿ ಶನಿ ಇದ್ದಾಗ ಕಲೆಯಲ್ಲಿ ಆಸಕ್ತಿ, ಜಲ ಸಂಬಂಧಿ ಕೆಲಸ ಇರುತ್ತೆ. ಸದಾ ಸಂಚಾರ ಇರುತ್ತೆ, ಈ ಜಾತಕರ ವ್ಯವಹಾರಗಳಲ್ಲಿ ಸುಳ್ಳು ಮೋಸವೂ ಸಹ ಇರುತ್ತೆ. ಹಟ ಮತ್ತು ಈರ್ಷೆಯಂಥ ಸ್ವಭಾವ ಹೆಚ್ಚಾಗುತ್ತದೆ. ತಾಯಿಯಿಂದ ಹೆಚ್ಚು ಪ್ರೇಮ ಲಭಿಸುವುದಿಲ್ಲ. ಈ ರಾಶಿಯವರಿಗೆ ಶನಿದೆಶೆ ನಡೆಯುತ್ತಿದ್ದಾಗ ಹೆಚ್ಚು ಕಷ್ಟವನ್ನು ಪಡಬೇಕಾಗುತ್ತದೆ. ಜೊತೆಗೆ ಸಂಸಾರದಲ್ಲಿ ಮನಸ್ಥಾಪ, ಅಶಾಂತಿ ಉಂಟಾಗುತ್ತದೆ.
ಸಿಂಹದಲ್ಲಿ ಶನಿ
ಸರ್ಕಾರಿ ಸಂಬಂಧ ಅಥವಾ ಗೌರವಾಯುತವಾದ ಹುದ್ದೆಯಲ್ಲಿರ್ತಾರೆ.
ಅಶುಭ ಪ್ರಭಾವವನ್ನೆ ಹೆಚ್ಚು ನೀಡುವ ಶನಿ ಸಿಂಹದಲ್ಲಿದ್ದಾಗ ವ್ಯಕ್ತಿಯನ್ನು ಗಂಭೀರ ಮತ್ತು ಚಿಂತನೆ ಮಾಡುವಂತೆ ಮಾಡುತ್ತಾನೆ. ಕಾರ್ಯದಲ್ಲಿ ನೈಪುಣ್ಯತೆಯನ್ನು ಮತ್ತು ಪರಿಶ್ರಮವನ್ನು ತೋರುತ್ತಾನೆ. ಶನಿಯ ಪ್ರಭಾವಕ್ಕೊಳಪಟ್ಟ ಈ ರಾಶಿಯವರು ಮಾತಿನಂತೆ ನಡೆಯುವವರಾಗುತ್ತಾರೆ. ಶನಿದಶೆ ನಡೆಯುತ್ತಿದ್ದಾಗ ಮಾತ್ರ ಹೆಚ್ಚು ಪರಿಶ್ರಮ ಪಡಬೇಕಾಗುತ್ತದೆ. ಹೆಚ್ಚು ಧನ ವ್ಯಯವಾಗುವ ಸಾಧ್ಯತೆ ಇರುತ್ತದೆ. ನಿರಾಶೆಯಂಥ ಮನಃಸ್ಥಿತಿ ಉಂಟಾಗುತ್ತದೆ.
ಕನ್ಯಾದಲ್ಲಿ ಶನಿ
ಜಾತಕದಲ್ಲಿ ಕನ್ಯಾರಾಶಿಯಲ್ಲಿ ಶನಿ ಇದ್ದರೆ ಪರೋಪಕಾರಿ ಮತ್ತು ಗುಣವಂತರಾಗಿರುತ್ತಾರೆ. ಈ ರಾಶಿಯಲ್ಲಿ ಶನಿ ಇದ್ದಾಗ ಹಣವಂತ ಮತ್ತು ಶಕ್ತಿಶಾಲಿಯಾಗುತ್ತಾರೆ. ಬುದ್ಧಿ ಉಪಯೋಗಿಸಿ ಸುಲಭದಲ್ಲಿ ಸಂಪಾದನೆ ಮಾಡುವ ಚತುರತೆ ಇರುತ್ತೆ. ಕಡಿಮೆ ಮಾತನಾಡುವ ಇವರು ಗಂಭೀರ ವಿಷಯಗಳಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ. ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ. ಈ ರಾಶಿಯವರಿಗೆ ಶನಿದಶೆಯು ಶುಭ, ಲಾಭವನ್ನು ತರುತ್ತದೆ.
ತುಲಾರಾಶಿಯಲ್ಲಿ ಶನಿ
ಶನಿ ತುಲಾ ರಾಶಿಯಲ್ಲಿದ್ದರೆ ಈ ರಾಶಿಯವರಿಗೆ ಉತ್ತಮ ಫಲವನ್ನು ನೀಡುತ್ತಾನೆ. ಸ್ವಾಭಿಮಾನಿ ಮತ್ತು ಮಹತ್ವಾಕಾಂಕ್ಷಿಗಳಾಗಿರುತ್ತಾರೆ. ಇಲ್ಲಿ ಶನಿಯು ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವುದಲ್ಲದೇ, ಮಾನಸಿಕ ಸ್ಥಿರತೆಯನ್ನು ನೀಡುತ್ತಾನೆ. ಹಣಕಾಸುಗಳ ವ್ಯವಹಾರ, ವೈಭವೋಪೇತ ಸಂಸ್ಥೆಗಳಲ್ಲಿ ವೃತ್ತಿಯಿರುತ್ತೆ.
ವೃಶ್ಚಿಕದಲ್ಲಿ ಶನಿ
ಯಾರ ಜಾತಕದಲ್ಲಿ ವೃಶ್ಚಿಕ ರಾಶಿಯಲ್ಲಿ ಶನಿ ಇರುತ್ತಾನೋ ಅಂಥವರು ಭಾವೋದ್ರೇಕ ಮತ್ತು ಕೋಪಕ್ಕೆ ಬುದ್ಧಿ ಕೊಡುತ್ತಾರೆ. ಜೊತೆಗೆ ನಿರಾಸಕ್ತಿ ಉಂಟಾಗುವುದಲ್ಲದೆ ಅಸೂಯೆಯ ಗುಣ ಹೆಚ್ಚಾಗುತ್ತದೆ. ಮೆಕ್ಯಾನಿಕಲ್, ಇಂಜಿನಿಯರಿಂಗ್, ಯಂತ್ರ ಸಂಬಂಧಿ ಕೆಲಸ, ಭೂ ಖನಿಜ ಸಂಬಂಧದ ವೃತ್ತಿಯಲ್ಲಿ ಶ್ರಮಜೀವನ ಇರುತ್ತೆ. ಈ ರಾಶಿಯವರಿಗೆ ಶನಿದಶೆ ಇದ್ದಾಗ ಆರ್ಥಿಕ ನಷ್ಟ ಮತ್ತು ಮರ್ಯಾದೆಗೆ ದಕ್ಕೆ ಉಂಟಾಗುತ್ತದೆ.
ಧನು ರಾಶಿಯಲ್ಲಿ ಶನಿ
ರಾಶಿಚಕ್ರದಲ್ಲಿ ಶನಿಯದು ನವಮ ಸ್ಥಾನ. ಈ ರಾಶಿಯಲ್ಲಿ ಶನಿ ಇದ್ದಾಗ ವ್ಯಕ್ತಿಗಳು ವ್ಯಾವಹಾರಿಕವಾಗಿ ಚುರುಕಾಗುತ್ತಾರೆ ಮತ್ತು ಜ್ಞಾನವಂತರಾಗುತ್ತಾರೆ. ಪರಿಶ್ರಮವನ್ನು ಪಡುವುದಲ್ಲದೇ, ಉತ್ತಮ ಚಿಂತನೆಗಳನ್ನು ಮಾಡುತ್ತಾರೆ. ಚತುರತೆಯಿಂದ ಕಾರ್ಯ ನಿರ್ವಹಿಸುವುದಲ್ಲದೇ, ಪರರ ಉಪಕಾರವನ್ನು ಸದಾ ನೆನೆಯುತ್ತಾರೆ. ದೈವಿಕ, ಸಾತ್ವಿಕವಾದ ಬುದ್ಧಿಯನ್ನು ಅನುಸರಿಸಿ ಸುಲಭದ ದಾರಿಯಲ್ಲಿ ಜೀವನ ನಡೆಸುತ್ತಾರೆ. ಈ ರಾಶಿಯವರಿಗೆ ಶನಿದಶೆ ಇದ್ದಾಗ ಇವರು ಸುಖ ಮತ್ತು ಉತ್ತಮ ಫಲವನ್ನು ಪಡೆಯುತ್ತಾರೆ. ಶಿಕ್ಷಣ ಕ್ಷೇತ್ರದಲ್ಲಿ ಸಫಲತೆಯನ್ನು ಕಾಣುತ್ತಾರೆ.
ಮಕರದಲ್ಲಿ ಶನಿ
ಮಕರ ರಾಶಿಯಲ್ಲಿ ಶನಿ ಇದ್ದರೆ ಇಂತವರು ಪರಿಶ್ರಮಿಗಳಾಗಿರುತ್ತಾರೆ. ದೇವರಲ್ಲಿ ಹೆಚ್ಚು ಭಕ್ತಿಯನ್ನು ಹೊಂದುತ್ತಾರೆ. ವ್ಯವಹಾರದಲ್ಲಿ ಏಳಿಗೆಯನ್ನು ಕಾಣುತ್ತಾರೆ. ಆರ್ಥಿಕ ಲಾಭವನ್ನು ಪಡೆಯುತ್ತಾರೆ. ಆಸ್ತಿ-ಭೂಮಿಯ ಲಾಭವನ್ನು ಶನಿ ತಂದುಕೊಡುತ್ತಾನೆ. ವ್ಯವಸಾಯದಲ್ಲಿ ಆಸಕ್ತಿ ಇರುತ್ತೆ.
ಕುಂಭರಾಶಿ ಶನಿ
ಯಾರ ಜಾತಕದಲ್ಲಿ ಶನಿ ದಶಮ ಸ್ಥಾನದಲ್ಲಿ ಅಥವಾ ಕುಂಭ ರಾಶಿಯಲ್ಲಿ ಇರುವನೋ ಇಂತವರು ಅಹಂಕಾರಿಗಳಾಗುತ್ತಾರೆ. ಆರ್ಥಿಕ ಪರಿಸ್ಥಿತಿ ಸಾಧಾರಣವಾಗಿರುತ್ತದೆ. ಗುಪ್ತ ವಿಷಯಜ್ಞಾನ, ಸರ್ಕಾರೀ ಸಹಕಾರದಿಂದ ಅಭಿವದ್ಧಿ ಕಾಣಬಹುದು. ಕೂಟನೀತಿಯಂಥ ಕ್ಷೇತ್ರದಲ್ಲಿ ಸಫಲರಾಗುತ್ತಾರೆ. ಕಣ್ಣಿಗೆ ಸಂಬಂಧ ಪಟ್ಟ ರೋಗದಿಂದ ಬಳಲುತ್ತಾರೆ. ವ್ಯವಹಾರದಲ್ಲಿ ಕುಶಲತೆಯನ್ನು, ಭಾಗ್ಯವನ್ನು ಹೊಂದುತ್ತಾರೆ.
ಮೀನದಲ್ಲಿ ಶನಿ
ಶನಿ ಮೀನರಾಶಿಯಲ್ಲಿದ್ದರೆ ಇಂಥ ವ್ಯಕ್ತಿಯು ಗಂಭೀರನಾಗುತ್ತಾನೆ. ದೈವೀಕ ಗುರುಪೀಠ, ಉಪದೇಶ ಸಂಬಂಧ ಮುಂದುವರೆಯುತ್ತಾನೆ. ಹೇಗಾದರೂ ಅಧಿಪತಿಯ ಸ್ಥಾನ ಗಳಿಸುವಲ್ಲಿ ಸಫಲನಾಗುತ್ತಾನೆ. ಅಸೂಯೆ ಪಡುವವನಾಗುತ್ತಾನೆ, ಮಹತ್ವಾಕಾಂಕ್ಷಿ ಗುಣವನ್ನು ಹೊಂದಿರುತ್ತಾನೆ. ಈ ರಾಶಿಯಲ್ಲಿ ಶನಿ ಇದ್ದಾಗ ಉದಾರತೆಯ ಗುಣವನ್ನು ಹೊಂದುತ್ತಾನೆ ಮತ್ತು ಸಮಾಜದಲ್ಲಿ ಗೌರವವನ್ನು ಪಡೆಯುತ್ತಾನೆ. ಆರ್ಥಿಕ ಸ್ಥಿತಿಯನ್ನು ಸಾಧಾರಣವಾಗಿಸುತ್ತಾನೆ ಶನಿ.
ಶನೈಶ್ಚರ ಸ್ವಾಮಿಯ ಶುಭದೃಷ್ಟಿಯಿಂದ ಮನುಷ್ಯ ತುಂಬಾ ಪ್ರಬಲವಾಗಿ ದೊಡ್ಡ ಮನೆತನ ಹೊಂದಿ, ತನ್ನ ಮನೆತನದ ಹಿರಿಯರ ಸೇವೆ ಮಾಡಿ ಅವರ ಹಾರೈಕೆಯಿಂದ ವಂಶಾಭಿವೃದ್ಧಿಯನ್ನು, ಪಿತ್ರಾರ್ಜಿತ ಉಡುಗೊರೆಯನ್ನು, ಕುಟುಂಬದಲ್ಲಿ ಸಂತೋಷವನ್ನು , ಧೀರ್ಘಯುಷ್ಯ ಹೊಂದಿ ಸುಖಿಯಾಗುತ್ತಾನೆ. ಶುಭದೃಷ್ಟಿ ಪ್ರಬಲವಾಗಿದ್ರೆ ನ್ಯಾಯಾದೀಶರಾಗುತ್ತಾರೆ, ವಾಕ್ಚಾತುರ್ಯವನ್ನು ಪಡೆದವರಾಗುತ್ತಾರೆ, ಸ್ವಾಭಿಮಾನಿಯಾಗುತ್ತಾರೆ.
ಶನಿ ದೇವ ಇತರ ಗ್ರಹಗಳ ಜೊತೆಯಲ್ಲಿದ್ದಾಗ ಫಲಗಳು*
ಶನಿ + ರವಿ
ಜಾತಕರ ತಂದೆ ತುಂಬಾ ಕಷ್ಟದಿಂದ ಮೇಲೆ ಬಂದಿರುತ್ತಾರೆ, ಜಾತಕರೂ ಸಹ ಅನೇಕ ಕಷ್ಟ ಶತ್ರುಗಳನ್ನ ಜಯಿಸಿ ಮುಂದೆ ಬರಬೇಕು. ನಂತರ ಗೌರವಾಯುತವಾದ ಉದ್ಯೋಗ, ಜೀವನ ಸಿಗುತ್ತೆ ಜಾತಕರು ತನ್ನ ತಂದೆಯ ವೃತ್ತಿಯನ್ನೇ ಅನುಸರಿಸಬೇಕಾಗುತ್ತೆ. ತಂದೆಯ ಜೊತೆಗೆ misunderstanding ಇರುತ್ತೆ. ಜಾತಕರ ಮಗ ನೀಚರ ಸಹವಾಸ, ಸೋಮಾರಿತನ ಹೊಂದಿದ್ದು ನಂತರ ಉತ್ತಮ ಮಾರ್ಗಕ್ಕೆ ಬರ್ತಾನೆ.
ಶನಿ + ಚಂದ್ರ
ಜಾತಕನಿಗೆ ಚಲನೆ ಇರತಕ್ಕ ಕೆಲಸ, ತಿರುಗಾಟ ಜಾಸ್ತಿ, ತಾಯಿ ಸದಾ ಕರ್ಮನಿರತಳು, ತಾಯಿಗೆ ವಾತ ಕಫದ ತೊಂದ್ರೆ ಇರುತ್ತೆ. ಅಧಿಕ ಖರ್ಚು, ಕೆಲಸದಲ್ಲಿ ಅಪವಾದ ನಿಂದನೆಗಳು ಬರುತ್ತಿರುತ್ತವೆ. ಮನೆಯಲ್ಲಿ ಸದಾ ಅಶಾಂತಿ, ಮನೆಯ ಹೆಣ್ಣುಮಕ್ಕಳಿಗೆ ಸುಖವಿಲ್ಲ, ಎಲ್ಲದರಲ್ಲೂ ಅನುಮಾನ, ಜೊತೆಗೆ ಶೀತಕ್ಕೆ ಸಂಬಂಧಪಟ್ಟ ಕಾಯಿಲೆ ಇರುತ್ತೆ.
ಶನಿ + ಕುಜ
ಯಂತ್ರ ಸಂಬಂಧವಾದ ವೃತ್ತಿ, ವೃತ್ತಿಯಲ್ಲಿ ಬೇಸರ, ವೃತ್ತಿಭಂಗ, ವೃತ್ತಿಯಲ್ಲಿ ಬದಲಾವಣೆ , ಒಂದುವೇಳೆ ಜಾತಕರು ಉನ್ನತ ಅಧಿಕಾರ ಪಡೆದರೂ, ಶತ್ರುಗಳು ಇವರನ್ನು ಆ ಪಡವಿಯಿಂದ ಕೆಳಗಿಳಿಸಲು ಹೊಂಚುಹಾಕ್ತಿರ್ತಾರೆ.
ಶನಿ + ಬುಧ
ಈ ಯುತಿಯಲ್ಲಿ ಜಾತಕರು ಬುದ್ಧಿವಂತರಾದರೂ ತೋರಿಸಿಕೊಳ್ಳಿವುದಿಲ್ಲ, ನೋಡುವವರಿಗೆ ಮಂಕುಬಡಿದವರಂತೆ ಕಾಣುತಾರೆ. ಆಡಂಬರ ಇರಲ್ಲ, ಚುಕುಕುತನ ಕಡಿಮೆ, ಯಾವುದೇ ವಿಷಯವನ್ನಾದರೂ ನಾಲ್ಕಾರು ಬಾರಿ ತಿಳಿಸಿದ ನಂತರವೇ ಗ್ರಹಿಸಿಕೊಳ್ಳುವುದು. ಸೋಮಾರಿತನ. ಭೂಮಿ ಸಂಬಂಧ ವ್ಯಾಪಾರ ವ್ಯವಹಾರಗಳಲ್ಲಿ ಅಭಿವೃದ್ಧಿ ಕಾಣುವರು.
ಶನಿ + ಗುರು
ಇದು ಧರ್ಮಕರ್ಮಾಧಿಪತಿಗಳ ಸಂಬಂಧವಾಗುತ್ತೆ. ಜೊತೆಗೆ ಗುರುವು ಜ್ಞಾನಕಾರಕನೂ ಆಗಿರುವುದರಿಂದ ಜಾತಕರಿಗೆ ಆಧ್ಯಾತ್ಮಿಕತೆಯಲ್ಲಿ ಒಲವಿರುತ್ತೆ. ಒಳ್ಳೆಯ ನ್ಯಾಯವಾದಿಯೂ ಆಗಬಲ್ಲರು, ಗೌರವಾಯುತವಾದ ಕೆಲಸ. ಶನಿಯು ಹಲ್ಲು, ಗಲ್ಲಕ್ಕೆ ಕಾರಕ, ಗುರುವು ಮೂಗಿಗೆ ಕಾರಕ... ಹಾಗಾಗಿ ಜಾತಕರ ಹಲ್ಲು ಮೂಗುಗಳು ಚೆನ್ನಾಗಿರುತ್ತೆ. ಒಳ್ಳೆಯ ಪದಾರ್ಥಗಳನ್ನು ತಿನ್ನೋಕ್ಕೆ ಇಷ್ಟಪಡ್ತಾರೆ. ಗುರುಪೀಠವನ್ನು ಅಲಂಕರಿಸುವ ಯೋಗವೂ ಬರಬಹುದು. ದೈವೀಕ ಚಿಂತನೆ ಉಳ್ಳವರಾದ್ದರಿಂದ ಜಗಳ ಕದನಕ್ಕೆ ಹೋಗುವುದಿಲ್ಲ. ತಮ್ಮ ಗೌರವ ಕಾಪಾಡಿಕೊಳ್ಳುವುದಕ್ಕೆ ವಿವೇಚನೆಯಿಂದ ಕಾರ್ಯ ನಿರ್ವಹಿಸುವರು.
ಶನಿ + ಶುಕ್ರ
ಈ ಯುತಿಯ ಜಾತಕರಿಗೆ ವಿವಾಹಾತ್ಪರ ಭಾಗ್ಯ ಇರುತ್ತೆ, ಸುಂದರ ಮನೆ, ಆಸ್ತಿ ಪಡೆಯುವ ಯೋಗ ಇರುತ್ತೆ. ಹಣಕಾಸು ಸಂಸ್ಥೆ, ಬ್ಯಾಂಕ್, ದ್ರವ್ಯಸಂಬಂಧ ವ್ಯವಹಾರ ಸಂಸ್ಥೆಯಲ್ಲಿ ಕೆಲಸ ಇರುತ್ತೆ. ಎಲ್ಲಾ ಭಾಗ್ಯಗಳು ಇದ್ದರೂ ಸಹ ಆಡಂಬರದ ಜೀವನ ನಡೆಸೋಲ್ಲ. ತುಂಬಾ ಸರಳವಾಗಿರ್ತಾರೆ.
ಶನಿ + ರಾಹು
ಛಾಯಾಗ್ರಹ ರಾಹುವಿನೋಡನೆ ಶನಿ, ಹಾಗಾಗಿ ಕತ್ತಲಲ್ಲಿ ಮಾಡುವ ಕೆಲಸ, ಶುಭವಾಗಿದ್ದರೆ ಛಾಯಾಗ್ರಹಣ, ಕ್ಯಾಮರಾಮನ್ ಆಗಿ, ಕೆಲಸ ಮಾಡಬಹುದು, ಚಲನಚಿತ್ರ, ಚಕ್ರ ಸಂಬಂಧ ವೃತ್ತಿ ಮಾಡಬಹುದು. ಗುಪ್ತ ವಾಗಿ ಹಣವನ್ನು ಕೂಡಿಡ್ತಾರೆ. ಅಶುಭವಾದ್ರೆ ಕಳ್ಳತನ, ಸ್ಮಗ್ಲಿಂಗ್ ಮಾಡುವವರಾಗ್ತಾರೆ.
ಶನಿ + ಕೇತು
ಇವರಿಗೆ ವೈರಾಗ್ಯ ಚಿಂತನೆ ಇರುತ್ತೆ, ಯಾವುದೇ ಕೆಲಸದಲ್ಲೂ ಆಸಕ್ತಿ ಇರಲ್ಲ. ಮಾಡುವ ವೃತ್ತಿಯಲ್ಲಿ ಅಡಚನೆಗಳಿರುತ್ತವೆ. ಒಂದುವೇಳೆ ಉನ್ನತ ಹುದ್ದೆಯಿದ್ದರೂ ನಿರಾಸಕ್ತಿಯಿಂದ, ಹೆದರಿಕೆಯಿಂದ ಕೆಲಸ ಬಿಡುವ ಯೋಗ. ನೇಯ್ಗೆ, ಪ್ರಿಂಟಿಂಗ್ ಪ್ರೆಸ್, ಟೈಲರಿಂಗ್ ಕೆಲಸದಿಂದ ಜೀವನ ಸಾಗಿಸ್ತಾರೆ.
ರವ್ಯಾದಿ ಗ್ರಹಗಳ ಮೇಲೆ ಶನಿ ಸಂಚರಿಸುವಾಗ ಫಲಗಳು :-
ರವಿಯ ಮೇಲೆ ಶನಿ ಸಂಚರಿಸುವ ಸಂದರ್ಭದಲ್ಲಿ, ಜಾತಕರಿಗೆ ಕೆಲಸದಲ್ಲಿ ಅಭಿವೃದ್ಧಿ ಕುಂಠಿತ, ಹಣದ ಅಭಾವ, ವಿಶ್ರಾಂತಿ ಇಲ್ಲದ ಜೀವನ, ತಂದೆಗೆ ಕಾಯಿಲೆ, ಜಾತಕರಿಗೆ ಕೆಟ್ಟ ಹೆಸರು, ಸರಕಾರದಿಂದ ತೊಂದರೆ ಯಾಗುತ್ತದೆ.
ಚಂದ್ರನ ಮೇಲೆ ಶನಿ ಸಂಚಾರದಿಂದ, ಜಾತಕರಿಗೆ ಸ್ಥಳ ಬದಲಾವಣೆ, ತಿರುಗಾಟ, ಉದ್ಯೋಗ ಬದಲಾವಣೆ, ತಾಯಿಯ ಆರೋಗ್ಯದಲ್ಲಿ ಏರುಪೇರು, ನೀಚ ಚಂದ್ರನ ಮೇಲೆ ಶನಿ ಸಂಚಾರ ಕಾಲದಲ್ಲಿ ನೀಚ ಹೆಂಗಸರಿಂದ ತೊಂದರೆ.
ಕುಜನ ಮೇಲೆ ಶನಿ ಸಂಚಾರ ಕಾಲದಲ್ಲಿ, ಉದ್ಯೋಗಕ್ಕೆ ತೊಂದರೆ, ಶತ್ರುಗಳಿಂದ ತೊಂದರೆ, ಅಫಘಾತಗಳಾಗುವ ಸಂಭವ, ಆಸ್ತಿ ಖರೀದಿ ಮಾಡಬಹುದು, ಸ್ತ್ರೀ ಜಾತಕವಾದ್ರೆ, ಕುಜನ ಮೇಲೆ ಶನಿ ಸಂಚಾರ ಕಾಲದಲ್ಲಿ ಗಂಡನ ಕೆಲಸಕ್ಕೆ ತೊಂದರೆ, ಉದ್ಯೋಗ ಕಳೆದುಕೊಳ್ಳುವ ಸಂಭವವೂ ಉಂಟು.
ಬುಧನ ಮೇಲೆ ಶನಿ ಸಂಚಾರ ಕಾಲದಲ್ಲಿ ವ್ಯಾಪಾರ ವ್ಯವಹಾರ ಶುಭ, ವಿದ್ಯಾಭಾಸದಲ್ಲಿ ತಡವಾದರೂ ಯಶಸ್ಸು ಸಿಗುತ್ತದೆ, ಸ್ನೇಹಿತರಿಂದ ಸಹಕಾರ, ಸೋದರರಿಗೆ ಲಾಭ, ಭೂಮಿ ಲಾಭ.
ಗುರುವಿನ ಮೇಲೆ ಶನಿ ಸಂಚಾರ ಕಾಲದಲ್ಲಿ ಉದ್ಯೋಗದಲ್ಲಿ ಬದಲಾವಣೆ, ಬಡ್ತಿ ಸಿಗುತ್ತದೆ, ಜಾತಕರಿಗೆ ಒಳ್ಳೇ ಸಮಯ, ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ, ಗ್ಯಾಸ್ಟ್ರಿಕ್ ಸಮಸ್ಯೆ ಕೂಡ ಬರುತ್ತದೆ.
ಶುಕ್ರನ ಮೇಲೆ ಶನಿ ಸಂಚರಿಸುವಾಗ ಹೆಂಡತಿಯಿಂದ ಲಾಭ, ಭೂಮಿ ಖರೀದಿ ಅಥವಾ ಮಾರಾಟ, ವಾಹನ ಖರೀದಿ, ಅಭಿವೃದ್ಧಿ ಕಾರ್ಯಗಳು ನಡೆಯುತ್ತದೆ, ಜೊತೆಗೆ ಹೆಂಡತಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಬರುವ ಸಾಧ್ಯತೆ ಹೆಚ್ಚು.
ಜಾತಕದ ಶನಿಯ ಮೇಲೆ ಗೋಚರದ ಶನಿ ಸಂಚಾರಕಾಲದಲ್ಲಿ,ಕೆಲಸದದಲ್ಲಿ ಕಷ್ಟ ನಷ್ಟಗಳು, ನಿಧಾನಗತಿಯಲ್ಲಿ ಕೆಲಸಕಾರ್ಯಗಳು, ತೊಂದರೆ.
ರಾಹುವಿನ ಮೇಲೆ ಶನಿ ಸಂಚಾರ ಕಾಲದಲ್ಲಿ ನಿರುದ್ಯೋಗಿ ಯಾಗುವ ಸಂಭವ, ಕೀಳ್ದರ್ಜೆ ಕೆಲಸ, ಸೋಮಾರಿ, ಮಾಡುವ ಕೆಲಸದಲ್ಲೂ ತೊಂದರೆ, ವಿನಾಕಾರಣ ಜಗಳ, ಪಿತೃಕರ್ಮಗಳನ್ನು ಮಾಡುವ ಯೋಗ. ವಾಹನ ಯೋಗವೂ ಇರುತ್ತದೆ.
ಕೇತುವಿನ ಮೇಲೆ ಶನಿ ಸಂಚರಿಸುವಾಗ ಉದ್ಯೋಗ ಕಳೆದುಕೊಳ್ಳುವ ಸಂಭವ, ತಕರಾರು, ವ್ಯಾಜ್ಯ, ಪುಣ್ಯಕ್ಷೇತ್ರ ಸಂಸರ್ಶನ.
ವಕ್ರೀ ಶನಿ
ಸೂರ್ಯನಿಂದ ಶನಿಯು 5, 6, 7, 8 ರಲ್ಲಿ ಇರುವಾಗ ಅಂದರೆ, 135° ಯಿಂದ 210°ಯ ಒಳಗೆ ವಕ್ರತ್ವವನ್ನು ಪಡೆಯುತ್ತಾನೆ, ಯಾವುದೇ ಸ್ಥಾನದಲ್ಲಿರಲಿ, ಯಾವುದೇ ಅವಸ್ಥೆಯಲ್ಲಿರಲಿ ಆ ಸ್ಥಾನದ ಕಾರಕತ್ವಗಳಲ್ಲಿ ನಿಧಾನ ಗತಿಯ ಪ್ರಗತಿಯನ್ನು ಕೊಡುತ್ತಾನೆ ಶನಿ, ಆದ್ರೆ perfection ಇರುತ್ತೆ, ನಿಂತುಹೋದ ಕೆಲಸಗಳನ್ನು ಮಾಡಿಸಿಯೇ ತೀರುತ್ತಾನೆ. ಶನಿ ವಕ್ರೀಯಾಗೋದೇ ನಮ್ಮ ಕರ್ಮವನ್ನು ತೀರಿಸಿ ಋಣಮುಕ್ತರಾಗಲು, ಪ್ರಬುದ್ಧತೆಯನ್ನು ಪಡೆಯಲು, ವ್ಯಕ್ತಿಗಳನ್ನು ಗಟ್ಟಿ ಮಾಡಲು, ಚೌಕಟ್ಟು ಮುಕ್ತರನ್ನಾಗಿ ಮಾಡಲು, ಕಳೆದ ಜನ್ಮದ ನಿಂತುಹೋದ ಕಾರ್ಯಕ್ಷೇತ್ರದಲ್ಲಿ ಮುಂದುವರೆಸಲು. ಶನಿ ವಕ್ರೀ ಆದರೆ ಸಾತ್ವಿಕತೆ, ತಾರ್ಕಿಕತೆ, ತಾತ್ವಿಕತೆ ಬರುತ್ತೆ, ಆಧ್ಯಾತ್ಮಿಕತೆಯಲ್ಲಿ ಒಲವು ಮೂಡುತ್ತೆ.
ಶನಿಯು ತನ್ನ ಸ್ವಂತ ಮನೆಯಲ್ಲಿ ವಕ್ರೀಯಾಗಿದ್ರೆ, ಜಾತಕರ ಪ್ರಯತ್ನಗಳಲ್ಲಿ ಮೊದಲು ಸೋಲು ಕಂಡರೂ, ತೊಂದರೆ ಅನುಭವಿಸಿದರೂ ಕೊನೆಗೆ ಶುಭವನ್ನೇ ಕೊಡ್ತಾನೆ, ಶನಿಯ ದಶಾ, ಭುಕ್ತಿಯಲ್ಲಿ ಜಯವನ್ನೇ ಕೊಡ್ತಾನೆ.
ಸಿಂಹ ರಾಶಿಯಲ್ಲಿ ಶನಿಯು ವಕ್ರತ್ವ ಪಡೆದರೆ ತಂದೆಯ ಕರ್ಮವನ್ನು (ಋಣವನ್ನು) ತೀರಿಸುತ್ತಾನೆ, ದುಸ್ಥಾನ ದಲ್ಲಿ ವಕ್ರೀಯಾದಾಗ ರಾಜಯೋಗವನ್ನು ಕೊಡ್ತಾನೆ.
ಶನಿಯು ವಕ್ರೀಯಾದಾಗ ಯಾವಾಗಲೂ ಅಶುಭಫಲವನ್ನೇ ಕೊಡುವುದಿಲ್ಲ, ತನ್ನ ಸಂಬಂಧಿತ ಕಾರ್ಯಗಳ ಮರು ಪರಿಶೀಲನೆಗೆ ಪ್ರೇರೇಪಿಸುತ್ತಾನೆ.
ಜೀವಿಗಳ ಜಾತಕದಲ್ಲಿ ಇತರ ಎಂಟು ಗ್ರಹಗಳ ಅಶುಭದೃಷ್ಟಿಯುದ್ದರು ಶನಿದೇವನ ಶುಭದೃಷ್ಟಿಯೊಂದೇ ಎಂತಹ ಸಂಕಟ ಗಂಡಾಂತರಗಳನ್ನು ಪಾರುಮಾಡಬಲ್ಲದು. ಶನಿದೇವರ ಅಶುಭ ದೃಷ್ಟಿಯಿದ್ದು, ಉಳಿದ ಎಂಟು ಗ್ರಹಗಳು ಶುಭರಾಗಿದ್ದರೂ ಗಂಡಾಂತರ ತಪ್ಪಿಸಲು ಅಸಾಧ್ಯ.
ವ್ಯಕ್ತಿಯ ಭವಿಷ್ಯದ ಬಗ್ಗೆ ನಿಖರವಾಗಿ ತಿಳಿಯಲು ಜಾತಕದಲ್ಲಿ ಉಳಿದ ಗ್ರಹಗಳ ಸ್ಥಾನ ಮತ್ತು ಸ್ಥಿತಿಯನ್ನು ನೋಡಬೇಕಾಗುತ್ತದೆ. ಅಷ್ಟೇ ಅಲ್ಲದೆ ಶನಿ ಗ್ರಹವು ಶುಭ ಪ್ರಭಾವವನ್ನು ಬೀರಲು ಅನೇಕ ಪರಿಹಾರಗಳನ್ನು ಸಹ ಮಾಡಿಕೊಳ್ಳ ಬಹುದಾಗಿರುತ್ತದೆ.
ಜಾತಕದಲ್ಲಿ ಶನಿದೇವನಿಂದ ಉಂಟಾಗುವ ಕಷ್ಟ ನಷ್ಟಗಳಿಗೆ ಈ ಕೆಳಗಂಡ ಪೂಜಾ ಕ್ರಮದಿಂದ ಸ್ವಲ್ಪಮಟ್ಟಿನ ಪರಿಹಾರಗಳನ್ನು ಪಡೆಯಬಹುದು.
ಪರಿಹಾರ:-
(ಲಾಲ್ ಕಿತಾಬ್ ಪರಿಹಾರಾಕ್ರಮಗಳು)
1 ).ಹನುಮಂತನನ್ನು ಆರಾಧಿಸಿರಿ.
2 ).ಆಹಾರ ಸೇವನೆ ಮುಂಚೆ ಸ್ವಲ್ಪ ಆಹಾರವನ್ನು ನಾಯಿ ಅಥವ ಕಾಗೆಗಳಿಗೆ ನೀಡಿ
3 ). ಉದ್ದು, ಎಳ್ಳಿನ ಎಣ್ಣೆ, ಚರ್ಮ, ಬಾದಾಮಿ ಇವುಗಳನ್ನು ನಿರ್ಗತಿಕರಿಗೆ ನೀಡಿ.
4 ). ಎಮ್ಮೆಗೆ ಮೇವನ್ನು ನೀಡಿ,
5 ). ಸೂರ್ಯಾಸ್ತದ ನಂತರ ಕಪ್ಪು ಇರುವೆಗಳಿಗೆ ಧಾನ್ಯ ನೀಡಿ .
6 ). ನಡುವಿನ ಬೆರಳಿಗೆ ಕಬ್ಬಿಣದ ಸ್ಟೀಲ್ ಕುದುರೆ ಲಾಳದ ಉಂಗುರವನ್ನು ಧರಿಸಿರಿ.
7 ). ಹರಿಯುವ ನೀರಲ್ಲಿ ೬ ಬಾದಾಮಿ ೬ ಸಿಪ್ಪೆ ಸಹಿತ ತೆಂಗಿನಕಾಯಿ೬ಶನಿವಾರದ ದಿನಗಳ ಕಾಲ ಹಾಕಿರಿ.
8 ). ಮನೆಯ ಕತ್ತಲೆಯ ಕೋಣೆಯಲ್ಲಿ ದಕ್ಷಿಣ ದಿಕ್ಕಿನಲ್ಲಿ ೧೨ ಬಾದಾಮಿಗಳನ್ನು ಅಥವ ಜೇನುತುಪ್ಪ ಅಥವ ತಾಮ್ರವನ್ನು ಕಪ್ಪು ಬಟ್ಟೆಯಲ್ಲಿ ಕಟ್ಟಿ ನೆಲದಲ್ಲಿ ಹುದುಗಿಸಿರಿ.
9 ). ಮಾಂಸ,ಮೀನು ಅಥವ ಮದ್ಯವನ್ನು ದೂರವಿಡಿ.
1೦ ). ಶನಿವಾರಗಳಂದು ಉಪವಾಸವನ್ನು ಮಾಡಿ
11 ). ಆಲದಮರದ ಬುಡಕ್ಕೆ ಹಾಲನ್ನು ಹಾಕಿ ಆ ಹಸಿಯ ಮಣ್ಣನ್ನು ತಿಲಕದಂತೆ ಹಣೆಗೆ ಹಚ್ಚಿಕೊಳ್ಳಿ.
12 ). ಮಕ್ಕಳಿಗೆ ತೊಂದರೆಯ ನಿವಾರಣೆಗೆ ಕಪ್ಪು ನಾಯಿಯನ್ನು ಸಾಕಿರಿ.
13 ). ಮಣ್ಣಿನ ಕುಡಿಕೆಯಲ್ಲಿ ಎಳ್ಳಿನ ಎಣ್ಣೆಯನ್ನು ಹಾಕಿ ನದಿಯ ಅಥವ ಕೊಳದ ದಡದ ಬಳಿ ನೀರಲ್ಲಿ ಮುಳುಗುವಂತೆ ಹುದುಗಿಸಿರಿ.
೧4). ಮುಖ್ಯವಾದ ಕೆಲಸಗಳನ್ನು ರಾತ್ರಿಗಳಲ್ಲಿ ಅಥವ ಕೃಷ್ಣಪಕ್ಷದಲ್ಲಿ ಮಾಡಿರಿ.
15 ). ಬೆಳ್ಳಿಯ ಚೌಕಾಕಾರದ ತುಂಡನ್ನು ನಿಮ್ಮ ಬಳಿಯಲ್ಲಿ ಇಟ್ಟುಕೊಂಡಿರಿ .
16 ). ೮೦೦ಗ್ರಾಂ ಉದ್ದು ಶನಿವಾರದಿಂದ ಆರಂಭಿಸಿ ೮ ದಿನಗಳ ಕಾಲ ಹರಿಯುವ ನೀರಿಗೆ ಹಾಕಿರಿ.
17 ). ಸ್ವಲ್ಪ ಎಣ್ಣೆಯನ್ನು ೪೩ ದಿನಗಲ ಕಾಲ ನೆಲದ ಮೇಲೆ ಹಾಕುತ್ತಿರಿ. ಮದ್ಯ ವನ್ನು ಸಹ ಹಾಕಬಹುದು.
18 ). ೨ನೇ ಸ್ಥಾನದಲ್ಲಿ ಅಶುಭಗ್ರಹಗಳಿದ್ದರೆ ೧೦ ಬಾದಾಮಿಗಳನ್ನು ದೇವಾಲಯಕ್ಕೆ ಕೊಟ್ಟು ಅದರಲ್ಲಿ ೫ಅನ್ನು ಮನೆಗೆ ಹಿಂದಕ್ಕೆ ತಂದು ಮನೆಯಲ್ಲಿಟ್ಟಿರಿ ಆದರೆ ಅವುಗಳನ್ನು ನೀವು ತಿನ್ನಬಾರದು.
19 ). ಒಳ್ಳೆಯ ದಾಂಪತ್ಯ ಜೀವನಕ್ಕೆ ಕಪ್ಪು ಕೊಳಲಿನಲ್ಲಿ ಜೇನನ್ನು ಹಾಕಿ ನಿರ್ಜನ ಪ್ರದೇಶದಲ್ಲಿ ನೆಲದಲ್ಲಿ ಹುದುಗಿಸಿಬಿಡಿ.
20 ). ಸಂಪತ್ತಿಗಾಗಿ,ಗಂಗಾಜಲವನ್ನು ಹಿತ್ತಾಳೆಯ ಪಾತ್ರೆಯಲ್ಲಿ ಇಡಿರಿ.
21 ). ಮಾನಸಿಕ ಶಾಂತಿಗಾಗಿ ತಾಯಿಯ ಆರೋಗ್ಯಕಾಗಿ ಹಳೆಯ ಅಕ್ಕಿ ಅಥವ ಬೆಳ್ಳಿಯನ್ನು ಹರಿಯುವ ನೀರಲ್ಲಿ ಹಾಕಿರಿ.
22 ). ೨ನೇ ಸ್ಥಾನದಲ್ಲಿ ಶನಿಯು ಕಲುಶಿತನಾಗಿದ್ದರೆ ಬರಿಗಾಲಲ್ಲಿ ದೇವಾಲಯಕ್ಕೆ ಹೋಗಿ ಸರ್ಪಗಳಿಗೆ ಹಾಲನ್ನು ನೀಡಿರಿ.
23 ). ಏಳರಾಟದ ಶನಿಕಾಟಕ್ಕೆ ನಿವಾರಣೆಗಾಗಿ ಶನಿವಾರದ ಸಂಜೆ ಮಣ್ಣಿನ ಕುಂಡದಲ್ಲಿ ತಾಮ್ರದಲ್ಲಿ ಕೆತ್ತಿದ ಒಂದು ಜೊತೆ ಸರ್ಪ ಮತ್ತು ಕಪ್ಪು ಉದ್ದನ್ನು ಅಶ್ವತ್ತ ಮರದ ಬೇರಿನ ಬುಡದಲ್ಲಿ ಹುದುಗಿಸಿರಿ.
24). ಎಲ್ಲಕ್ಕಿಂತ ಹೆಚ್ಚಾಗಿ ತಂದೆತಾಯಿ, ಹಿರಿಯರ ಸೇವೆ ಮಾಡಿ.
25). ತಿಲಾಭಿಷೇಕವನ್ನು ಶನಿತ್ರಯೋದಶಿಯಂದು, ಶನಿಜಯಂತಿಯಂದು ಮತ್ತು ಶನಿ- ಅಮಾವಾಸ್ಯೆ ದಿನಗಳಂದು ಮಾಡಿಸಿ .
27). ಕರಿ ಎಳ್ಳನ್ನು ದಾನ ಮಾಡಿ
28). ಕಪ್ಪು ಹಸುವಿಗೆ (ಕಪಿಲ ಗೋವು ) ಕರಿ ಎಳ್ಳು , ಬೆಲ್ಲದ ಮಿಶ್ರಣವನ್ನು ತಿನ್ನಿಸಿ
29 ). ಶನಿವಾರದಂದು ಉಪವಾಸ ಮಾಡುವುದು ಒಳ್ಳೆಯದು
30 ). ದೈಹಿಕ ಅಂಗವಿಕಲರಿಗೆ ಆಹಾರ
31 ). ನವಗ್ರಹ ಪ್ರದಕ್ಷಿಣೆ ಮಾಡುವುದು
32 ). ಪ್ರತಿದಿನ ಮನೆಯ ಮುಖ್ಯದ್ವಾರದ ಮುಂದೆ , ಸೂರ್ಯ ಮುಳುಗಿದ ಮೇಲೆ ಎರಡು ಎಳ್ಳೆಣ್ಣೆಯ ದೀಪಗಳನ್ನು ಹಚ್ಚಿಡಬೇಕು.
33 ). ದಶರಥ ಮಹಾರಾಜನಿಂದ ರಚಿಸಲ್ಪಟ್ಟ ಶನಿ ಸ್ತೋತ್ರದ ಪಠಣ.
34 ). ಶನಿ ಜಪಂ, ೧೯೦೦೦ ಮೂಲಮಂತ್ರದ ಜೊತೆಗೆ , ಪುನರ್ ಚರಣ , ಹವನಂ , ದಾನ .
35 ). ರಾಮ - ನಾಮ ', ಹನುಮಾನ್ ಚಾಲೀಸ , ದುರ್ಗಾ ಸ್ತುತಿಯ ಪಠಣ
36 ). ಮೆಣಸು ಬೆರೆಸಿದ ಮೊಸರನ್ನವನ್ನು ದೇವರಿಗೆ ಅರ್ಪಿಸಿ ನಂತರ ಕಾಗೆಗೆ ಉಣಬಡಿಸುವುದು.
ಶನಿಯ ಶುಭದೃಷ್ಟಿ ಪಡೆಯಲು ಆಂಜನೆಯನಿಗೆ ಹುಚ್ಚೆಳ್ಳು ( ಎಳ್ಳೆಣ್ಣೆ) ಎಣ್ಣೆಯಿಂದ ಅಭಿಷೇಕ, ಮತ್ತು ಇದೇ ಎಣ್ಣೆಯಿಂದ ದೀಪ ಹಚ್ಚುವುದು, ನೀಲ ಅಥವಾ ಕಪ್ಪುವಸ್ತ್ರ, ಶಂಕದ ಹೂವು, ಎಳ್ಳು, ಕಬ್ಬಿಣ ದಾನ ಮಾಡಬೇಕು, ಜಗತ್ತಿನ ಯಾವುದೇ ಕೆಳಮಟ್ಟದ ವಸ್ತುವಾಗಲೀ, ಪ್ರಾಣಿಗಳನ್ನಾಗಲೀ ತಿರಸ್ಕಾರದಿಂದ ಅವಮಾನಿಸಬಾರದು , ಅಧರ್ಮ, ಅನ್ಯಾಯ, ಮೋಸ ಕಪಟ, ವಂಚನೆ ಇವುಗಳು ಶನಿಯ ಮಹಾನ್ ಶತ್ರುಗಳು.
ಮನೆಯ ಹಿರಿಯರನ್ನು ತಾತ್ಸಾರ ಮಾಡುವುದು, ಎಲ್ಲಾ ಪುಣ್ಯವನ್ನೂ ಕೊಂದು ಹಾಕುತ್ತದೆ, ಏಕೆಂದರೆ ಮನೆಯ ಹಿರಿಯರ ಪ್ರತೀಕವೆ ಶನಿದೇವ, ಹಾಗೆಯೇ ಮರಣ ಹೊಂದಿದವರಿಗೆ ಕಾರ್ಯಗಳನ್ನು ಮಾಡದೇ ಹೋದರೆ ಶನಿಯ ಅವಕೃಪೆಗೆ ಪಾತ್ರರಾಗಬೇಕಾಗುತ್ತದೆ, ಏಕೆಂದರೆ ಶನಿಯು ಪ್ರೇತಕಾರಕ ಗ್ರಹವೂ ಆಗಿದ್ದಾನೆ, ಆದ್ದರಿಂದ ಗತಿಸಿದವರ ಸದ್ಗತಿಯಿಂದ ಹಿರಿಯರ ಹಾರೈಕೆಯಿಂದ ಶನಿಯ ಶುಭದೃಷ್ಟಿ ಪಡೆಯಬಹುದು.
ವ್ಯಕ್ತಿಯ ಭವಿಷ್ಯದ ಬಗ್ಗೆ ನಿಖರವಾಗಿ ತಿಳಿಯಲು ಜಾತಕದಲ್ಲಿ ಉಳಿದ ಗ್ರಹಗಳ ಸ್ಥಾನ ಮತ್ತು ಸ್ಥಿತಿಯನ್ನು ನೋಡಬೇಕಾಗುತ್ತದೆ. ಅಷ್ಟೇ ಅಲ್ಲದೆ ಶನಿ ಗ್ರಹವು ಶುಭ ಪ್ರಭಾವವನ್ನು ಬೀರಲು ಅನೇಕ ಪರಿಹಾರಗಳನ್ನು ಸಹ ಮಾಡಿಕೊಳ್ಳಬಹುದಾಗಿರುತ್ತದೆ
✍ ಡಾ|| B. N. ಶೈಲಜಾ ರಮೇಶ್..
.
.
No comments:
Post a Comment