Friday, 31 December 2021

ವಾಸ್ತುಶಾಸ್ತ್ರದ ಪ್ರಕಾರ ದಿಕ್ಕುಗಳ ಮಹತ್ವ :----

              
                             ಹರಿಃ ಓಂ
              ಶ್ರೀ ಮಹಾಗಣಪತಯೇ ನಮಃ
                   ಶ್ರೀ ಗುರುಭ್ಯೋ ನಮಃ
ವಾಸ್ತು ಶಾಸ್ತ್ರ :---
Picture source: intern/social media


         ಸೃಷ್ಟಿಯ ಪ್ರತಿಯೊಂದು ಜೀವಿಯೂ ಬ್ರಹ್ಮಾಂಡದೊಳಗಿನ ಅಂಡಾಣು, ಅಣುವಿನಿಂದ ಪರಮಾಣು, ಪರಮಾಣುವಿನಿಂದ ವಿಶ್ವ ಸೃಷ್ಟಿಯಾಗಿದೆ. ಅಣುಗಳು ಪರಮಾಣುವನ್ನು ನಿಯಂತ್ರಿಸುವಂತೆ ಇಡೀ ವಿಶ್ವವನ್ನು ನಿಯಂತ್ರಿಸುವ ಅಗೋಚರ ಅದಮ್ಯ ಶಕ್ತಿಯೊಂದಿದೆ ಎಂಬುದು ನಮ್ಮ ಸನಾತನ ನಂಬಿಕೆ. ನಾವು ಹೆಚ್ಚೆಚ್ಚು ಪ್ರಕೃತಿಯೊಂದಿಗೆ ಬೆರೆತಾಗ, ಪ್ರಕೃತಿಯ ಲಯದೊಂದಿಗೆ ಸ್ಪಂದಿಸಿದಾಗ ಅದರ ಸಕಾರಾತ್ಮಕ ಶಕ್ತಿ ನಮ್ಮ ದೇಹದ ಅಣು ಅಣುವನ್ನೂ ಚೇತನಗೊಳಿಸುತ್ತದೆ.
          ವಾಸ್ತು ಕೂಡ ವೇದ ವಿಜ್ಞಾನದ ಒಂದು ಅವಿಭಾಜ್ಯ ಅಂಗ. ಪಂಚಭೂತ ಶಕ್ತಿಗಳ ಬಗ್ಗೆ ಆಳವಾಗಿ ಅಧ್ಯಯನ ನಡೆಸಿ, ಮಾನವ ಕಲ್ಯಾಣಕ್ಕೆ ಈ ಶಕ್ತಿಗಳನ್ನು ಹೇಗೆ ಸದುಪಯೋಗ ಪಡಿಸಿ ಕೊಳ್ಳಬಹುದು ಎಂಬುದನ್ನು ವಾಸ್ತು ವಿಜ್ಞಾನ ತಿಳಿಸುತ್ತದೆ. ಆಧುನಿಕ ವಿಜ್ಞಾನ ಸೌರವ್ಯೂಹವನ್ನು ತೀರಾ ಇತ್ತೀಚೆಗಷ್ಟೇ ಅರ್ಥ ಮಾಡಿಕೊಂಡಿದೆ. ಅದರ ಅಧ್ಯಯನಗಳ ಪ್ರಕಾರ, ಸೌರವ್ಯೂಹದ ಕೇಂದ್ರ ಬಿಂದುವೇ ಸೂರ್ಯ.  ಸೂರ್ಯ ಅಗಾಧ ಶಕ್ತಿಯ ಕಣಜ ಎಂದು ಆಧುನಿಕ ವಿಜ್ಞಾನ ಹೇಳುತ್ತದೆ. ಸೋಜಿಗವೆಂದರೆ, ಈ ಅಂಶವನ್ನು ವಾಸ್ತು ತಜ್ಞರು ಸಹಸ್ರಾರು ವರ್ಷಗಳ ಹಿಂದೆಯೇ ಹೇಳಿದ್ದರು.
         ವಾಸ್ತು +ಸೂರ್ಯ
         ***************
Picture source: intern/social media

        ಸೂರ್ಯನಲ್ಲಿರುವ ಸಪ್ತವರ್ಣಗಳು ಹಾಗೂ ಸೂರ್ಯ ಕಿರಣಗಳು ಹೊರಸೂಸುವ ಅತಿ ನೇರಳೆ ಕಿರಣಗಳು, ಅವುಗಳಿಂದಾಗುವ ಒಳಿತು-ಕೆಡಕುಗಳು ಹಾಗೂ ಅವುಗಳನ್ನು ಸದುಪಯೋಗಪಡಿಸಿಕೊಳ್ಳುವ ಬಗೆಯನ್ನು ವಾಸ್ತು ವಿಜ್ಞಾನ ಬಹಳ ಹಿಂದೆಯೇ ತಿಳಿಸಿದೆ. ಆದ್ದರಿಂದಲೇ ವಾಸ್ತು ಪೂರ್ವ ದಿಕ್ಕಿಗೆ ಎಲ್ಲಿಲ್ಲದ ಪ್ರಾಮುಖ್ಯತೆ ನೀಡಿದೆ. ಪೂರ್ವ ದಿಕ್ಕು ಹಾಗೂ ಸೂರ್ಯನ ಶಕ್ತಿಯನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಪ್ರತಿಯೊಬ್ಬರು ಹೇಗೆ ಉದ್ಧಾರವಾಗಬಹುದು ಎಂಬುದನ್ನು ವಾಸ್ತು ಗ್ರಂಥವಾದ ‘ಮಾನವ ಶಿಲ್ಪ’ ಹಾಗೂ ‘ದೇವಶಿಲ್ಪ’ದಲ್ಲಿ ವಿವರಿಸಲಾಗಿದೆ.

ವಾಸ್ತುಶಾಸ್ತ್ರದ ಪ್ರಕಾರ ದಿಕ್ಕುಗಳ ಮಹತ್ವ :----
*********************************
Picture source: intern/social media

           ಸೂರ್ಯ ಉದಯಿಸುವ ದಿಕ್ಕನ್ನು ಪೂರ್ವ ಎಂದು ಕರೆಯಲಾಗುತ್ತದೆ. ಇದನ್ನು ಮೂಡಲ ದಿಕ್ಕು ಎಂದೂ ಕರೆಯುವುದಿದೆ. ಮುಂಜಾನೆ ಸೂರ್ಯನ ಕಿರಣದಲ್ಲಿ ದೊರೆಯುವ ಅಲ್ಟ್ರಾವೈಲೆಟ್, ನೇರಳೆ ಹಾಗೂ ನೀಲ ವರ್ಣಗಳು ಮನುಷ್ಯನ ದೇಹಕ್ಕೆ ಅತ್ಯಮೂಲ್ಯವಾಗಿದೆ. ಪ್ರಥಮ ಕಿರಣ ಯಾವುದೇ ಕಟ್ಟಡ ಪ್ರವೇಶಿಸುವುದೇ ಈಶಾನ್ಯ ದಿಕ್ಕಿನ ಮೂಲಕ. ನೇರಳೆ ಹಾಗೂ ನೀಲವರ್ಣ ಪ್ರವೇಶಿಸುವುದು ಪೂರ್ವ ದಿಕ್ಕಿನ ಮೂಲಕ. ಆದ್ದರಿಂದಲೇ ಮನೆಯ ಪ್ರವೇಶ ದ್ವಾರ ಉತ್ತರ, ಈಶಾನ್ಯ ಇಲ್ಲವೇ ಪೂರ್ವದಲ್ಲಿರಬೇಕು ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ಉಷಾಕಿರಣಗಳು ಸುಲಭವಾಗಿ ಕಟ್ಟಡ ಅಥವಾ ಮನೆ ಪ್ರವೇಶಿಸಬೇಕೆಂಬ ಕಾರಣಕ್ಕಾಗಿಯೇ ಪೂರ್ವ ಹಾಗೂ ಈಶಾನ್ಯ ದಿಕ್ಕಿನಲ್ಲಿ ಹೆಚ್ಚು ಸ್ಥಳಾವಕಾಶ ಬಿಡುವುದರ ಜತೆಗೆ ಅದನ್ನು ತೆರವಾಗಿರಿಸಬೇಕು ಎನ್ನುವುದು.
          ಪೂರ್ವ ದಿಕ್ಕು :----
          ****************

Picture source: intern/social media
Picture source: intern/social media
           ಪೂರ್ವ ದಿಕ್ಕಿನ  ಅಧಿಪತಿ ರವಿ, ಅಧಿದೇವತೆ ಇಂದ್ರ. ಈ ದಿಕ್ಕಿಗೆ   ಪಿತೃಸ್ಥಾನದ ಮಾನ್ಯತೆ ನೀಡಲಾಗಿದೆ. ಇಲ್ಲಿ ಯಾವ ತರಹದ ಅಡೆತಡೆಗಳು ಇರಕೂಡದು. ವಂಶಾಭಿವೃದ್ಧಿ ಅಪೇಕ್ಷಿಸುವವರು ಈ ಸ್ಥಾನದಲ್ಲಿ ದೋಷವಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಯಾರ ಕಟ್ಟಡದಲ್ಲಿ ಪೂರ್ವ ದಿಕ್ಕು ದೋಷ ಪೂರಿತ ವಾಗಿರುತ್ತದೋ ಅಲ್ಲಿ ಪಿತೃದೋಷ ಕಾಣಿಸಿಕೊಂಡು ಮಾಲೀಕ ಅಥವಾ ಯಜಮಾನನಿಗೆ ಮಾನನಷ್ಟವಾಗುತ್ತದೆ.
           ಪೂರ್ವದಿಕ್ಕು ಜ್ಞಾನ ಮತ್ತು ಉನ್ನತಿಗಳ ಸಂಕೇತ, ಈ ದಿಕ್ಕು ನಮ್ಮ ಐಶ್ವರ್ಯ, ಖ್ಯಾತಿಯನ್ನು ವೃದ್ಧಿಗೊಳಿಸುತ್ತೆ,  ಈ ದಿಕ್ಕಿನಲ್ಲಿ ಸೌರಶಕ್ತಿಯು ಅತ್ಯಧಿಕ ಪ್ರವಹಿಸುತ್ತೆ, ಮನೆ ನಿರ್ಮಿಸುವಾಗ ಈ ದಿಕ್ಕಿನಲ್ಲಿ ಹೆಚ್ಚಿನ ತೆರೆದ ಜಾಗವಿರಬೇಕು, ಈ ದಿಕ್ಕಿನಲ್ಲಿ ಮುಖ್ಯದ್ವಾರವಿದ್ದರೆ ಯಜಮಾನನಿಗೆ ದೀರ್ಘಆಯು, ಮಾನ ಸಮ್ಮಾನ ಹಾಗೂ ಸಂತಾನ ಸುಖವಿರುತ್ತದೆ.
           ಪೂರ್ವದಿಕ್ಕಿನಲ್ಲಿ ಭೂಮಿಯು ಕೆಳಮಟ್ಟದಲ್ಲಿರಬೇಕು, ಎತ್ತರವಿರಬಾರದು,  ಬಾಗಿಲು ಹಾಗೂ ಕಿಟಕಿಗಳು ಹೆಚ್ಚಾಗಿ ಈ ದಿಕ್ಕಿನಲ್ಲಿಯೇ ಇರಬೇಕು,  ಮಕ್ಕಳೂ ಕೂಡ ಪೂರ್ವಕ್ಕೆ ಮುಖ ಮಾಡಿ ಕುಳಿತು ಓದಿದರೆ ಹೆಚ್ಚು ವಿದ್ಯಾಲಾಭವಾಗುತ್ತದೆ.

         ನಿವೇಶನ ಅಥವಾ ಮನೆಯ ಪೂರ್ವದ ಕಡೆ ತಗ್ಗಾಗಿರಬೇಕು. ಈ ದಿಕ್ಕಿನ ಕಾಂಪೌಂಡ್ ಗೋಡೆ ಕೂಡ ಎತ್ತರಕ್ಕಿರಬಾರದು. ಪೂರ್ವದ ಗೋಡೆ ಎತ್ತರವಾಗಿದ್ದ ಪಕ್ಷದಲ್ಲಿ ಅಂತಹ ಮನೆಯ ಹಿರಿಯ ಮಗ ತಂದೆ-ತಾಯಿಯರೊಂದಿಗೆ ವೈಮನಸ್ಯ ಕಟ್ಟಿಕೊಂಡು ಮನೆಬಿಟ್ಟು ಹೋಗುತ್ತಾನೆ. ಉತ್ತರ ಈಶಾನ್ಯ ದಿಕ್ಕಿನಂತೆಯೇ ಪೂರ್ವ ದಿಕ್ಕಿನಲ್ಲೂ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಪೂರ್ವ ದಿಕ್ಕಿನಲ್ಲಿ ಯಾವುದೇ ಕಾರಣಕ್ಕೂ ಶೌಚಾಲಯ ನಿರ್ಮಿಸಬಾರದು. ಪೂರ್ವದಲ್ಲಿ ಶೌಚಾಲಯವಿರುವ ಮನೆಯಲ್ಲಿ ಸದಾ ಅನಾರೋಗ್ಯ ಕಾಡುತ್ತದೆ.

ಗಮನದಲ್ಲಿಡಬೇಕಾದ ಅಂಶಗಳು :---
********************************
             1. ಪೂರ್ವ ದಿಕ್ಕಿಗೆ ಒತ್ತರಿಸಿ ಕಟ್ಟಿದ ಮನೆಗೆ ಪೂರ್ವ ದಿಕ್ಕಿನ ದೋಷದ ಜತೆಗೆ ಪೈಶಾಚ ವಿಭಾಗ ಖಾಲಿ ಬಿಡದ ದೋಷವೂ ಕಾಡುತ್ತದೆ. ಅಂತಹ ಮನೆಯಲ್ಲಿ ಮನೆ ಮಂದಿಯಲ್ಲಿ ಸಹನೆಯಿರುವುದಿಲ್ಲ. ಮನೆಯವರು ಮಾದಕ ವ್ಯಸನಿಗಳಾಗುತ್ತಾರೆ.
             2. ಪೂರ್ವದಲ್ಲಿ ಖಾಲಿಬಿಟ್ಟ ಜಾಗದಲ್ಲಿ ಭಾರದ ವಸ್ತುಗಳು, ಕಸ, ಕಲ್ಲು, ಮಣ್ಣು ರಾಶಿ ಹೇರಬಾರದು. ಸಂತಾನ ಹಾನಿಗೆ ಪೂರಕವಾಗುತ್ತವೆ.
             3. ಮನೆಯ ಸಿಂಹ ದ್ವಾರವನ್ನು ಪೂರ್ವದಲ್ಲಿ ಇರಿಸುವುದಾದರೆ ಪೂರ್ವದ ಕಡೆ ಒಂಬತ್ತು ವಿಭಾಗ ವಿಭಾಗಿಸಿ, ಬಲಗಡೆಯಿಂದ 3-4ನೇ ವಿಭಾಗದಲ್ಲಿ ಮುಖ್ಯದ್ವಾರ ಇರಿಸಬೇಕು. ಅದನ್ನು ಉಚ್ಚ ಸ್ಥಾನವೆನ್ನುತ್ತಾರೆ.
           4. ಪೂರ್ವದ ಮುಖ್ಯದ್ವಾರದ ಮನೆಗೆ ಉತ್ತರ ಹಾಗೂ ಪಶ್ಚಿಮದಲ್ಲಿ ಬಾಲ್ಕನಿ ನಿರ್ಮಿಸಕೂಡದು. ಈಶಾನ್ಯದಲ್ಲಿ ಬಾಲ್ಕನಿ ಶ್ರೇಯಸ್ಕರ. ಈ ದೋಷ ಇದ್ದಂತಹ ಮನೆಯ ಯಜಮಾನನಿಗೆ ಕಳ್ಳ-ಕಾಕರರ ಭಯ ಕಾಡುತ್ತಿರುತ್ತದೆ

               ದಕ್ಷಿಣ ದಿಕ್ಕು :----
               ************
Picture source: intern/social media



Picture source: intern/social media


           ದಕ್ಷಿಣದ ದಿಕ್ಕಿಗೆ ಅಧಿಪತಿ  ಕುಜಗ್ರಹ,  ದಿಕ್ಪಾಲಕ  ಯಮ  ,  ಕುಜಗ್ರಹ ವು ಧೈರ್ಯಕ್ಕೆ  ಬ್ರಾತ್ರುವಿಗೆ ಕಾರಕನು, ಮುಂಗೋಪ, ಮನೆಯ ಯಜಮಾನ ನಿಗೆ ಧೈರ್ಯ ಸಾಹಸಗಳನ್ನು     ತುಂಬುತ್ತಾನೆ, ಕ್ರೀಡಾಭಿಮಾನಿ, ಅಚಲ ನಿರ್ಧಾರಗಳನ್ನು  ತೆಗೆದುಕೊಳ್ಳುವರು .
          ಉತ್ತರ ದಿಕ್ಕು ಸ್ತ್ರೀ ಭಾಗವಾದಾಗ ಅದರ ವಿರುದ್ದದ ದಕ್ಷಿಣ ವೂ ಸಹ ಸ್ತ್ರೀ ಭಾಗವಾಗುತ್ತದೆ, ಹಾಗಾಗಿ ಈ ದಿಕ್ಕು ಮನೆಯ ಹೆಂಗಸರ ಮೇಲೂ ಪರಿಣಾಮ ಬೀರುತ್ತದೆ,  ಜೊತೆಗೆ ಸಾಹಸ ಉತ್ಸಾಹ ಗಳನ್ನು ಪ್ರತಿನಿಧಿಸುತ್ತದೆ.
          ದಕ್ಷಿಣದ ದಿಕ್ಕು ಎತ್ತರವಾಗಿದ್ದರೆ,  ಆ ಮನೆಯಲ್ಲಿ ವಾಸಿಸುವವರು ಆರೋಗ್ಯವಂತರು, ಹಣಬಲವುಳ್ಳವರೂ  ಆಗುತ್ತಾರೆ, ಆದ್ದರಿಂದ ದಕ್ಷಿಣ ವನ್ನು  ಎತ್ತರವಾಗಿರಿಸಿ ಮನೆಯಲ್ಲಿ  ಬೇಡವಾದ , ಉಪಯೋಗಿಸದ ವಸ್ತುಗಳನ್ನು  ಈ ಭಾಗದಲ್ಲಿ ಹಾಕಿದರೆ ಶುಭ, ಈ .ಭಾಗದಲ್ಲಿ  ಎತ್ತರದಲ್ಲಿ ಕೋಣೆಗಳನ್ನು ಕಟ್ಟಿದರೆ  ಹಣವಂತರಾಗುತ್ತಾರೆ.
           ದಕ್ಷಿಣದ ದಿಕ್ಕಿನಲ್ಲಿ ಹೆಚ್ಚು ಖಾಲಿ ಜಾಗ ವಿರಬಾರದು,  ಹೆಚ್ಚು ತಗ್ಗಿರಬಾರದು,  ಯಾವುದೇ ರೀತಿಯ ಹಳ್ಳ,  ಶೌಚಾಲಯ ಇರಬಾರದು,  ಈ ದಿಕ್ಕಿನ ದಿಕ್ಪಾಲಕ ಯಮ ನಾದ್ದರಿಂದ,  ವಾಸ್ತು ಲೋಪವಿದ್ದಲ್ಲಿ  ಮನೆಯ ಸ್ತ್ರೀ,  ಯಜಮಾನ  ಅಕಾಲ ಮರಣಕ್ಕೀಡಾಗುವ ಸಂಭವ,  ಆರ್ಥಿಕ ನಷ್ಟ,  ಕಳ್ಳತನ ವಾಗುವ ಸಂಭವವೂ  ಇರುತ್ತದೆ, ಈ ದಿಕ್ಕು  ಎತ್ತರವಿದ್ದು,  ಭವನವೂ  ಎತ್ತರವಿದ್ದು,  ಸಾಕಷ್ಟು  ಭಾರವಾಗಿದ್ದಲ್ಲಿ  ಮನೆಯ ಯಜಮಾನ ಹಾಗೂ ಮನೆಯ ಸ್ತ್ರೀಯರು ಸುಖವಾಗಿಯೂ ನಿರೋಗಿಗಳಾಗಿಯೂ ಇರುತ್ತಾರೆ,
           ಈ  ದಿಕ್ಕಿನಲ್ಲಿ  ಎತ್ತರದ ಮರಗಳನ್ನು  ಬೆಳೆಸಬಹುದು,  ಈ ದಿಕ್ಕಿನಲ್ಲಿ ಹಣ ಇರಿಸುವುದರಿಂದ  ಆರ್ಥಿಕ ಒಳ ಹರಿವು ಹೆಚ್ಚಾಗುತ್ತದೆ.
              ಪಶ್ಚಿಮ ದಿಕ್ಕು  :---
              *****************

Picture source: intern/social media

Picture source: intern/social media


             ಈ ದಿಕ್ಕಿನ ಅಧಿಪತಿ  ಶನಿ... ದೇವರು  ವರುಣ,  ಶನಿಯು ಕರ್ಮಕಾರಕನಾಗಿರುವುದರಿಂದ  ಕರ್ಮದಲ್ಲಿ (ಕೆಲಸದಲ್ಲಿ)  ಆಸಕ್ತಿ, ಆಧ್ಯಾತ್ಮ ದಲ್ಲಿ ಆಸಕ್ತಿ.  ಈ  ದಿಕ್ಕು ಸಂತತಿಯ ಮೇಲೆ,  ಆಯಸ್ಸು , ಕೀರ್ತಿ ಪ್ರತಿಷ್ಠೆ ಯ ಮೇಲೆ ಪರಿಣಾಮ ಬೀರುತ್ತದೆ.
         ಪಶ್ಚಿಮ ದಿಕ್ಕಿನಲ್ಲೂ ವಿಪರೀತ ವಾದ  ಸೌರಶಕ್ತಿಯಿರುತ್ತದೆ,  ಅದಕ್ಕೇ ಅತ್ಯಧಿಕವಾಗಿ ಇಲ್ಲಿ  ಮುಚ್ಚಿರಬೇಕು,  ಈ ದಿಕ್ಕಿನಲ್ಲಿ  ಬಾಗಿಲು,  ಕಿಟಕಿಗಳನ್ನಿಡುವುದು ಒಳ್ಳೆಯದಲ್ಲ.
         ಪಶ್ಚಿಮ ದಿಕ್ಕು ಎತ್ತರವಾಗಿದ್ದರೆ  ಶುಭ,  ಹಾಗೂ  ಈ. ಭಾಗದಲ್ಲಿ ಕಲ್ಲುಗುಂಡು,  ಕಸದರಾಶಿ, ಮುಂತಾದವನ್ನು ಹಾಕಿದರೆ  ಒಳ್ಳೆಯ ಫಲಿತಾಂಶ ಪಡೆಯಬಹುದು,  ಎತ್ತರವಾದ, ಬಲವಾದ ಮರಗಳನ್ನು ಬೆಳೆಸುವುದು ಕೂಡ ಒಳ್ಳೆಯದು,  ಈ ಭಾಗದಲ್ಲಿ  ತಗ್ಗು ಇರಬಾರದು, ಇದ್ದರೆ ಯಾವುದೇ ರೀತಿಯ ಏಳಿಗೆ ಅಭಿವೃದ್ಧಿ ಗಳು ಆಗುವುದಿಲ್ಲ,
          ಪಶ್ಚಿಮ ದಿಕ್ಕಿನಲ್ಲಿರುವ  ಕೊಠಡಿಗಳು ಅಥವಾ ನಿವೇಶನದ ಪಶ್ಚಿಮ ದಿಕ್ಕು ತಗ್ಗಾಗಿದ್ದಲ್ಲಿ ಅಪಕೀರ್ತಿ,  ಆರ್ಥಿಕ ನಷ್ಟ, ದುಃಖ ಉಂಟಾಗುತ್ತದೆ, ಪಶ್ಚಿಮ ದಿಕ್ಕಿನಲ್ಲಿ ಹೆಚ್ಚಾದ ಖಾಲಿ ಜಾಗ ಇರಬಾರದು,  ಹಾಗಿದ್ದಲ್ಲಿ ಮನೆಯ ಗಂಡುಮಕ್ಕಳು ಅಪ್ರಯೋಜಕರಾಗುತ್ತಾರೆ.
ಆದ್ದರಿಂದ ಪಶ್ಚಿಮ ದಿಕ್ಕು ಎತ್ತರವಾಗಿ,  ಭಾರವಾಗಿ ಇದ್ದಲ್ಲಿ ಸಫಲತೆ ಹಾಗೂ  ಕೀರ್ತಿ ನಮ್ಮದಾಗುತ್ತದೆ.
             ಉತ್ತರ ದಿಕ್ಕು :---
             ************

Picture source: intern/social medi


Picture source: intern/social media


         ಉತ್ತರ ದಿಕ್ಕಿಗೆ ಅಧಿಪತಿ  ಬುಧ,  ದಿಕ್ಪಾಲಕ ದೇವರು ಕುಬೇರ,  ಹಾಗಾಗಿ ಈ ದಿಕ್ಕು ಲಕ್ಷ್ಮಿ ಸ್ತಾನವಾಗಿದೆ. ಭವಿಷ್ಯ ಹಾಗೂ  ಧನದ ಬಗ್ಗೆ ಸೂಚಿಸುತ್ತದೆ.  ಈ ದಿಕ್ಕನ್ನು ಮಾತೃಸ್ಥಾನವೆಂತಲೂ ಪರಿಗಣಿಸಬಹುದು.
          ಉತ್ತರ ದಿಕ್ಕಿನಲ್ಲಿ ಅಯಸ್ಕಾಂತೀಯ ತರಂಗಗಳು ಮನೆಯನ್ನ ಪ್ರವೇಶಿಸುತ್ತವೆ, ಇದರಿಂದಾಗಿ ಮಾನವನ ಶರೀರದಲ್ಲಿನ ರಕ್ತ ಸಂಚಾರ  ಪ್ರ ಭಾವಿತಗೊಂಡು  ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ, ಹಾಗಾಗಿ ಗೃಹ ನಿರ್ಮಾಣ ಸಂದರ್ಭದಲ್ಲಿ ಕೆಲವು ವಿಶೇಷ ವಿಷಯಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ.
        ಉತ್ತರದಿಕ್ಕಿನಲ್ಲಿ ಹೆಚ್ಚು ಖಾಲಿ ಜಾಗವಿರಬೇಕು, ಕೆಳಬಾಗದಲ್ಲಿರಬೇಕು,  ಈ ದಿಕ್ಕು ಎತ್ತರವಾಗಿರಬಾರದು, ಮನೆಯಲ್ಲಿ ಉಪಯೋಗಿಸಿದ ನೀರು ಉತ್ತರದಿಂದ ಹೊರಹೊಗುವಂತಿರಬೇಕು,   ಬಾಲ್ಕನಿಯ ನಿರ್ಮಾಣ ಈ ದಿಕ್ಕಿನಲ್ಲಿ ಮಾಡಿದರೆ ಒಳಿತು,  ಅತ್ಯಧಿಕವಾದ ಬಾಗಿಲು ಕಿಟಕಿಗಳನ್ನು ಈ ದಿಕ್ಕಿನಲ್ಲಿಟ್ಟರೆ ತುಂಬಾ ಒಳ್ಳೆಯದು,  ವಾರಾಂಡ ಈ ದಿಕ್ಕಿನಲ್ಲಿದ್ದರೆ ಉತ್ತಮ.
 
        ಈ ದಿಕ್ಕು ಮಾತೃ ಸ್ಥಾನವಾದ್ದರಿಂದ , ಹಾಗೂ  ಲಕ್ಷ್ಮೀ ಸ್ಥಾನವಾದ್ದರಿಂದ  ಮೇಲಿನ  ನಿಯಮಗಳನ್ನು ಪಾಲಿಸಿದರೆ  ಮನೆಯ ಸ್ತ್ರೀಯರಿಗೆ ( ತಾಯಿ,  ಹೆಂಡತಿ, ಮಗಳು, ಸೊಸೆ, ಅತ್ತೆ ,ಅಜ್ಜಿ, )
ಆರೋಗ್ಯ , ಸುಖ ಲಭಿಸುತ್ತದೆ,  ಉತ್ತರದ ಸ್ಥಾನವು ಲೋಪವಿಲ್ಲದಿದ್ದರೆ  ಮನೆಯ ಯಜಮಾನನು ಬುದ್ಧಿವಂತನು ವ್ಯವಹಾರ  ಚತುರನು ಉತ್ತಮ ಸಂತಾನ,  ಕಲೆಗಳಲ್ಲಿ ಅಭಿರುಚಿ,  ಮುಖ್ಯವಾಗಿ  ಐಶ್ವರ್ಯ ವಂತರಾಗುತ್ತಾರೆ.
          ಪ್ರಮುಖ ನಾಲ್ಕು ದಿಕ್ಕುಗಳಂತೆಯೇ  ಉಪದಿಕ್ಕುಗಳೂ ಸಹ  ವಾಸ್ತು ಶಾಸ್ತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ,  ಮೊದಲಿಗೆ ಆಗ್ನೇಯ ದಿಕ್ಕಿನ ಫಲಾಫಲಗಳು ನೋಡೋಣ.
          ಆಗ್ನೇಯ ದಿಕ್ಕು :----
          ************
Picture source: intern/social media


Picture source: intern/social media


          ಪೂರ್ವ ದಿಕ್ಕು ಹಾಗೂ ದಕ್ಷಿಣದ ದಿಕ್ಕಿನ ಮೂಲೆಯೇ  ಆಗ್ನೇಯ ದಿಕ್ಕು,  ಈ ದಿಕ್ಕಿಗೆ ಅಧಿಪತಿ  ಶುಕ್ರ,  ದಿಕ್ಪಾಲಕ  ಅಗ್ನಿ,  ಈ ಭಾಗವು ಮನೆಯ ಸ್ತ್ರೀಯರು ಹಾಗೂ ಮನೆಯ ಎರಡನೇ ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ,   ಹಾಗಾಗಿಯೇ ನಮ್ಮ ಪೂರ್ವಿಕರು  ಆಗ್ನೇಯ ಭಾಗದಲ್ಲಿಯೇ  ಅಡುಗೆ ಮನೆಯನ್ನು ನಿರ್ಮಿಸುವಂತೆ ಹೇಳಿದ್ದಾರೆ.
          ಆಗ್ನೇಯ ದಿಕ್ಕು ಬೆಳೆದರೂ,  ಹೆಚ್ಚು ಖಾಲಿ ಜಾಗವಿದ್ದರೂ ಪರಿಣಾಮ ಕೆತ್ತದಿರುತ್ತದೆ,  ನೈಋತ್ಯ ದಿಕ್ಕಿಗಿಂತ  ತಗ್ಗಾಗಿಯೂ,  ಈಶಾನ್ಯ ದಿಕ್ಕಿಗಿಂತ ಎತ್ತರವಾಗಿಯೂ ಇರುವಂತೆ ನೋಡಿಕೊಳ್ಳಬೇಕು,  ಆಗ್ನೇಯ ದಿಕ್ಕಿನಲ್ಲಿ ಹಳ್ಳ, ಭಾವಿ  ಮುಂತಾದುವಿದ್ದರೆ  ಮನೆಯ ಹೆಣ್ಣು ಮಕ್ಕಳು(ಎರಡನೇ) ನಡತೆಗೆಡುತ್ತಾರೆ, ಎರಡನೆಯ ಮಗ ಅಕಾಲ ಮರಣಕ್ಕೀಡಾಗುತ್ತಾನೆ.
         ಆಗ್ನೇಯ ದಿಕ್ಕಿನಲ್ಲೂ ಎರಡು ರೀತಿಯಾಗಿ ವಿಂಗಡಿಸಬಹುದು,  ಪೂರ್ವ ಆಗ್ನೇಯ ಹಾಗೂ  ದಕ್ಷಿಣ ಆಗ್ನೇಯ. 
           ಪೂರ್ವ ಆಗ್ನೇಯ ದೋಷಪೂರಿತವಾಗಿದ್ದು  ಲೋಪವಾದರೆ ಮನೆಯ ಯಜಮಾನಿ/ ಪತ್ನಿ ಗೆ  ಅನಾರೋಗ್ಯ , ಆಯುಷ್ಯ ಕ್ಕೆ ತೊಂದರೆ, ದ್ವಿತೀಯ ಪುತ್ರಿಯ ವೈವಾಹಿಕ ಜೀವನಕ್ಕೆ ತೊಂದರೆ,ದಾಂಪತ್ಯ ದಲ್ಲಿ ವಿರಸ ಮುಂತಾದ ದುಷ್ಫಲಗಳು.
          ದಕ್ಷಿಣ ಆಗ್ನೇಯ ಲೋಪವಾಗಿ ದೋಷಪೂರಿತವಾಗಿದ್ದರೆ, ಯಜಮಾನ ನಿಗೆ ದುರಾಭ್ಯಾಸ, ದೂರ್ವ್ಯಸನಗಳು,ಸಾಂಸಾರಿಕ ಕಲಹ, ವಿವಾಹದ.ವಿಷಯದಲ್ಲಿ ತೊಂದರೆ,  ಸ್ತ್ರೀ ಪ್ರಾಭಲ್ಯ ಹೆಚ್ಚು.
         ಆಗ್ನೇಯ ದಿಕ್ಕು ಪ್ರಭಲವಾಗಿ , ವಾಸ್ತು ರೀತ್ಯಾ ಶುದ್ಧವಾಗಿದ್ದರೆ,  ದಾಂಪತ್ಯ ದಲ್ಲಿ ಅನ್ಯೋನ್ಯತೆ, ಸಾಮರಸ್ಯವಿರುತ್ತದೆ. ಈ ದಿಕ್ಕು ಅಗ್ನಿ ಪ್ರಾಧಾನ್ಯವಾದ್ದರಿಂದ  ಈ ದಿಕ್ಕಿನಲ್ಲಿಯೇ ಅಡುಗೆ ಮನೆ, .ಟ್ರಾನ್ಸ್ಫಾರ್ಮರ್,  ಜನರೇಟರ್,  ಬಾಯ್ಲರ್ ಮುಂತಾದ  ಅಗ್ನಿ ಸಂಭ೦ದಿ ವಸ್ತುಗಳಿದ್ದರೆ ಒಳ್ಳೆಯದು.
             ನೈಋತ್ಯ ದಿಕ್ಕು :----
             ************

Picture source: intern/social media

          ದಕ್ಷಿಣ ಹಾಗೂ  ಪಶ್ಚಿಮ ದಿಕ್ಕಿನ ಮೂಲೆಯೇ ನೈಋತ್ಯ. ದಿಕ್ಕು.
          ನೈಋತ್ಯ ದಿಕ್ಕಿಗೆ ರಾಹು ಅಧಿಪತಿ,  (ಕೆಲವರ ಪ್ರಕಾರ  ರಾಹು ಕೇತುಗಳಿಬ್ಬರೂ ಈ ದಿಕ್ಕಿಗೆ ಅಧಿಪತಿ ) ಅಷ್ಟದಿಕ್ಪಾಲಕ ರಲ್ಲಿ ನಿರುಋತಿ   ಈ  ಭಾಗದ ದಿಕ್ಪಾಲಕ.  ವಾಸ್ತು ನಿಯಮದ.ಪ್ರಕಾರ  ಈ ದಿಕ್ಕು ರಾಕ್ಷಸರ ದಿಕ್ಕೆಂದು  ಕರೆಯಲ್ಪಟ್ಟಿದೆ.  ಈ ದಿಕ್ಕು  ಮನೆಯ ಯಜಮಾನನ ಆಳ್ವಿಕೆ,  ಧನಾಗಮ, ನೆಮ್ಮದಿ,  ಸುಖ ಸಂತೋಷ ಇವುಗಳನ್ನು ಪ್ರತಿನಿಧಿಸುತ್ತದೆ.
           ಈ ದಿಕ್ಕಿನ ಅಧಿಪತಿ ರಾಹು ಪಾಪಗ್ರಹವಾದ್ದರಿಂದ,  ಈ ದಿಕ್ಕಿನ  ಮೇಲೆ ಹೆಚ್ಚು ಭಾರ ಮತ್ತು  ಹೊರೆಯನ್ನು ಇಡಬೇಕೆಂಬ ದೃಷ್ಟಿಯಿಂದ  ಈ ದಿಕ್ಕು  ಎತ್ತರವಾಗಿರಬೇಕು,  ಈ ದಿಕ್ಕಿನಲ್ಲಿ ಹೆಚ್ಚಿನ  ಭಾರ ಇರುವಂತೆ ಮನೆಯ ಮೇಲೆ ಎತ್ತರವಾಗಿ ಕಟ್ಟಿಸಬೇಕು,  ನೀರಿನ ಟ್ಯಾಂಕ್ ಈ.ದಿಕ್ಕಿನಲ್ಲಿಯೇ ಇಡಬೇಕು.  ಇದಲ್ಲದೆ ಮೆಟ್ಟಿಲುಗಳನ್ನೂ  ಈ ದಿಕ್ಕಿನಲ್ಲಿ ನಿರ್ಮಿಸ ಬಹುದು.
          ಮನೆಯ ಯಜಮಾನ ನ ಕೋಣೆಯು  ಈ ದಿಕ್ಕಿನಲ್ಲಿಯೇ ಇರಬೇಕು, ಕಚ್ಚಾ ಸಾಮಗ್ರಿ ಗಳನ್ನಿರಿಸಲು ಮೆಶೀನು,  ಹಣದ ಗಲ್ಲಾಪೆಟ್ಟಿಗೆ ( ಉತ್ತರದಿಕ್ಕಿಗೆ ಮುಖವಿರುವಂತೆ) ಯನ್ನೂ ಈ ದಿಕ್ಕಿನಲ್ಲಿಯೇ ಇರಿಸಬೇಕು.  ಹೀಗೆ ಯಾವುದೇ ರೀತಿಯ ಲೋಪವಿಲ್ಲದೆ ಶುದ್ಧವಾಗಿದ್ದರೆ  ಮನೆಯ ಯಜಮಾನನಿಗೆ ಉತ್ತಮ ಆರೋಗ್ಯ, ಧನಾಗಮ, ನೆಮ್ಮದಿ ಸುಖ ಸಂತೋಷ ವಿರುತ್ತದೆ.
          ನೈಋತ್ಯ ದಿಕ್ಕಿನಲ್ಲಿ  ಹಳ್ಳ,  ಭಾವಿ, ಕೆರೆ,  ಕುಂಟೆ ಇದ್ದರೆ,  ನಿವೇಶನ  ನೈಋತ್ಯ ಭಾಗದಲ್ಲಿ  ತಗ್ಗಿದ್ದರೆ ತೊಂದರೆ,  ಪಾಪಗ್ರಹಗಳ ಬಲ ಹೆಚ್ಚಾಗಿ, ಕ್ರೂರ ಫಲಗಳನ್ನು ಪಡೆಯಬೇಕಾಗುತ್ತದೆ.
          ನೈರುತ್ಯ ದಿಕ್ಕಿನಲ್ಲೂ  ಎರಡು ಭಾಗವಾಗಿ ವಿಂಗಡಿಸಬಹುದು .  ದಕ್ಷಿಣ ನೈಋತ್ಯ  ಹಾಗೂ ಪಶ್ಚಿಮ ನೈಋತ್ಯ.
        ದಕ್ಷಿಣದ ನೈಋತ್ಯ  ಲೋಪವಾಗಿದ್ದಲ್ಲಿ ಮನೆಯ ಯಜಮಾನನಿಗೆ  ಆಯುಷ್ಯದ ತೊಂದರೆ,  ಆಕಸ್ಮಿಕ ಅಪಘಾತಗಳು, ಮೃತ್ಯು,  ಆತ್ಮಹತ್ಯೆ ಪ್ರಯತ್ನ ಗಳು ನಡೆಯುತ್ತವೆ.
          ಪಶ್ಚಿಮ  ನೈಋತ್ಯ ಲೋಪವಾಗಿದ್ದರೆ,  ಯಜಮಾನನಿಗೆ ದುಶ್ಚಟಗಳು,  ಕಾನೂನಿನ ಉಲ್ಲಂಘನೆ,  ಗೌರವ ಮರ್ಯಾದೆಗೆ ಧಕ್ಕೆ,  ಅನಾರೋಗ್ಯ  , ದುರ್ಮರಣಕ್ಕೀಡಾಗುವುದು,  ಹತ್ಯೆ, ಪುತ್ರಸಂತತಿ  ಇಲ್ಲದಿರುವಿಕೆ, ಸ್ರೀಸ್ವತ್ತು, ಸ್ತ್ರೀಯರ ಪ್ರಭಾವ ಜಾಸ್ತಿಯಾಗುತ್ತದೆ.
          ಈ ದಿಕ್ಕಿನಲ್ಲಿ  ತೆರೆದಿಡುವಿಕೆ ಅಂದರೆ.ಕಿಟಿಕಿಗಳು  ಬಾಗಿಲುಗಳು ಇರಬಾರದು,  ಶೌಚಾಲಯ,  ಬೋರ್ವೆಲ್ ಗಳೂ ಇರಬಾರದು.
          ನೈಋತ್ಯ ದಿಕ್ಕಿನಲ್ಲಿ  ಆವರಣದಲ್ಲಿ ಖಾಲಿ ಜಾಗವಿದ್ದರೆ  ಎತ್ತರವಾದ ಗಿಡಮರಗಳನ್ನು  ಬೆಳೆಸುವ ಮೂಲಕ  ದೋಷವನ್ನು ಸ್ವಲ್ಪಮಟ್ಟಿಗೆ  ಕಡಿಮೆ ಮಾಡಿಕೊಳ್ಳಬಹುದು.

            ವಾಯುವ್ಯ ದಿಕ್ಕು  :----
            **************
Picture source: intern/social media

Picture source: intern/social media

          ಪಶ್ಚಿಮ ಹಾಗೂ  ಉತ್ತರದಿಕ್ಕಿನ ಮೂಲೆಯೇ ವಾಯುವ್ಯದಿಕ್ಕು.  ಈ ದಿಕ್ಕಿನ ದಿಕ್ಪಾಲಕ ವಾಯುದೇವ,  ಅಧಿಪತಿ  ಚಂದ್ರ, ಚಂದ್ರನ ಸ್ವಭಾವ ನಡತೆ,  ಗುಣಗಳನ್ನು ಈಭಾವ  ಪ್ರತಿನಿಧಿಸುತ್ತದೆ. ಚಂದ್ರನು  ಸ್ರೀಗ್ರಹವಾದ್ದರಿಂದ  ಈ  ಭಾಗದ ಫಲಾಪಲಗಳು ಮನೆಯ ಹೆಂಗಸರ ಮೇಲೆ ಹಾಗೂ  ಮೂರನೆಯ  ಸಂತಾನದ ಮೇಲೆ , ಮನೆಯವರ ನಡತೆ ಹಾಗೂ  ವ್ಯವಹಾರವನ್ನು  ಪ್ರತಿಬಿಂಬಿಸುತ್ತದೆ.

          ವಾಯುವ್ಯ ದಿಕ್ಕಿನಲ್ಲಿಯೂ ಎರಡು ಭಾಗವಾಗಿ ವಿಂಗಡಿಸಬಹುದು,  ಪಶ್ಚಿಮ ವಾಯುವ್ಯ ಹಾಗೂ ಉತ್ತರ ವಾಯುವ್ಯ
           ಪಶ್ಚಿಮ ವಾಯುವ್ಯ ದಿಕ್ಕಿಗೆ ಶನಿ ಮತ್ತು  ಚಂದ್ರರ ಅಧಿಪತ್ಯ ಉಂಟಾಗುತ್ತದೆ.  ಶನಿಯು ಕರ್ಮ ಕಾರಕ ಹಾಗೂ  ಅಧ್ಯಾತ್ಮ ಕಾರಕ, ಹಾಗೂ  ಸೇವಾ ಮನೋಭಾವವನ್ನು  ಸೂಚಿಸುತ್ತಾನೆ.  ಚಂದ್ರನು ಮನಃಕಾರಕ,  ಸದಾ ಅಲೋಚನೆಯುಳ್ಳವನು,  ವಾಯುವ್ಯ ಮೂಲೆಯು  ಬೆಳೆದಿರುವುದಾಗಲೀ,  ಕಡಿತವಾಗಿರುವುದಾಗಲೀ ಆಗಿರಬಾರದು, ಸಮವಾಗಿರಬೇಕು,  ಹಾಗಿದ್ದಲ್ಲಿ  ಮನೆಯ ಯಜಮಾನ  ಕರ್ಮದಲ್ಲಿ ಆಸಕ್ತಿ ಯುಳ್ಳವನು ಸದಾ ಕರ್ಮನಿರತನು, ಅಧ್ಯಾತ್ಮಕ್ಕೆ ಹೆಚ್ಚು ಆಸಕ್ತಿ, ಒಲವನ್ನು ತೋರಿಸುವವು, ಈ ದಿಕ್ಕು ಲೋಪವಿಲ್ಲದೆ ಶುದ್ಧವಾಗಿದ್ದಲ್ಲಿ  ಯಜಮಾನನ ವ್ಯವಹಾರ ಉತ್ತಮವಾಗಿರುತ್ತದೆ, ಸಿರಿತನವಿರುತ್ತದೆ.
           ಈ ದಿಕ್ಕು ಲೋಪವಾಗಿದ್ದಲ್ಲಿ  ದುರ್ವ್ಯಸನಗಳಿಗೆ ಒಳಗಾಗಿ ಸಂಸಾರದಲ್ಲಿ ನಿರಾಸಕ್ತಿ ಉಂಟಾಗಿ ಸನ್ಯಾಸ ಸ್ವೀಕರಿಸುವ ಸಂಭವ ಅಥವಾ ಅಪಮೃತ್ಯುವಿಗೆ ತುತ್ತಾಗಬಹುದು.
             ಉತ್ತರ ವಾಯುವ್ಯ ವನ್ನು ಪ್ರತಿನಿಧಿಸುವ ಗ್ರಹರು  ಬುಧ ಮತ್ತು ಚಂದ್ರರು.  ಈ ದಿಕ್ಕು  ಪ್ರಭಲವಾಗಿದ್ದಲ್ಲಿ  ಮನೆಯ ಯಜಮಾನಿ ಹಾಗೂ ಮನೆಯ ಹೆಣ್ಣುಮಕ್ಕಳು  ಬುದ್ಧಿವಂತರು ಆರೋಗ್ಯವಂತರು ಆಗಿರುತ್ತಾರೆ.
        ಈ ದಿಕ್ಕು ಲೋಪವಾಗಿದ್ದಲ್ಲಿ  ಮನೆಯ  ಹೆಂಗಸರ ಅನಾರೋಗ್ಯ,  ಮಾನಸಿಕ ಅಸ್ವಸ್ಥತೆ, ಕೃತ್ರಿಮ ವ್ಯವಹಾರಗಳು  ವ್ಯವಹಾರದಲ್ಲಿ  ಅಪಜಯ, ಹಲವು ದೂರಭ್ಯಾಸಕ್ಕೆ ತುತ್ತಾಗುವುದು,  ಕೋರ್ಟ್ ಕೇಸು,  ಕಳ್ಳರ ಭಯ,  ಮನಃಶಾಂತಿ ಇಲ್ಲದಿರುವುದು ಚಂಚಲತೆ,  ಕಷ್ಟನಷ್ಟಗಳು, ಪರಾಧೀನತೆ ಉಂಟಾಗುತ್ತದೆ.
         ಈ ದಿಕ್ಕು ತಗ್ಗಾಗಿದ್ದು,  ಭಾವಿ , ಹಳ್ಳ ಮುಂತಾದುವಿದ್ದರೆ,  ವ್ಯಾಧಿ  ಹಾಗೂ ಜಗಳಗಳು, ಮನೆಯ ಯಜಮಾನಿಯ  ಮನಸ್ಸಿನ ಮೇಲೆ ಕೆಟ್ಟ  ಪರಿಣಾಮ ಬೀರುತ್ತದೇ.
          ವಾಯುವ್ಯ ಭಾಗವು ಎತ್ತರವಾಗಿದ್ದರೆ  ಯಜಮಾನನು ಸಾಲಗಾರನಾಗಬೇಕಾಗುತ್ತದೆ.  ವಾಯುವ್ಯ ದೊಷವಿರುವ ಮನೆಯಲ್ಲಿ ಹುಟ್ಟಿದ ಮಕ್ಕಳು ಅಂಗಹೀನರಾಗುತ್ತಾರೆ.
            ವಾಯುವ್ಯ ಭಾಗವು  ಈಶಾನ್ಯ ಕ್ಕಿಂತ ಸ್ವಲ್ಪ ಎತ್ತರವಾಗಿರಬೇಕು,  ನೈಋತ್ಯ  ಭಾಗಕ್ಕಿಂತ ತಗ್ಗಾಗಿರಬೇಕು.  ವಾಯುವ್ಯ ಭಾಗವು ಬೆಳೆದಿರಬಾರದು ಹಾಗೂ ಕಡಿತವಾಗಿರಬಾರದು,  90°  ಸಮವಾಗಿರಬೇಕು.  ಈ ದಿಕ್ಕಿನಲ್ಲಿ ಮಲಗುವ ಕೋಣೆ,  ದನದಕೊಟ್ಟಿಗೆ,  ಗ್ಯಾರೇಜ್,  ಅತಿಥಿ ಹಾಗೂ  ನೌಕರರ ಕೋಣೆಗಳೂ ನಿರ್ಮಾಣ ಮಾಡಬಹುದು,  ಆಗ್ನೇಯ ದಿಕ್ಕಿನಲ್ಲಿ ಅಡುಗೆ ಮನೆ ನಿರ್ಮಿಸಲಾಗದ ಸಂದರ್ಭದಲ್ಲಿ ಈ ದಿಕ್ಕಿನಲ್ಲಿ ಅಡುಗೆ ಮನೆಯನ್ನು  ನಿರ್ಮಿಸಬಹುದು.  ಚಂದ್ರನು ಜಲಗ್ರಹವಾದ್ದರಿಂದ  ಈ ದಿಕ್ಕಿನಲ್ಲಿ  ಸ್ನಾನದ ಮನೆಯನ್ನೂ  ನಿರ್ಮಿಸಬಹುದು.

            ಈಶಾನ್ಯ ದಿಕ್ಕು :---
           ************
.
Picture source: intern/social media


Picture source: intern/social media

           ಪೂರ್ವ ಹಾಗೂ ಉತ್ತರದಿಕ್ಕಿನ  ಸಂಗಮ ಸ್ಥಳವೇ ಈಶಾನ್ಯ ದಿಕ್ಕು.  ಈ ದಿಕ್ಕು ಜಲತತ್ವ ಪ್ರಧಾನವಾಗಿದ್ದು, ಜೊತೆಗೇ ಎರಡು ಪ್ರಮುಖ ಶಕ್ತಿಗಳ ಸಂಗಮವಾಗಿದೆ. ಇಲ್ಲಿ ಆಯಸ್ಕಾಂತೀಯ  ತರಂಗಗಳ ಜೊತೆ ಸೌರಶಕ್ತಿಯೂ ದೊರಕುತ್ತದೆ,  ಆದ್ದರಿಂದಲೇ ಇದನ್ನು *ದೇವತೆಗಳ  ಅವಾಸಸ್ಥಾನ* ವೆಂದೂ *ದೇವಮೂಲೆ* ಎಂದೂ  ಕರೆಯಲಾಗಿದೆ.
          ಈಶಾನ್ಯ ದಿಕ್ಕಿಗೆ  ಅಧಿಪತಿ  ಗುರು ಹಾಗೂ  ಕೇತು,  ಈ ದಿಕ್ಕಿನ ಅಷ್ಟದಿಕ್ಪಾಲಕ  ದೇವತೆ ಈಶಾನ.     ಗುರುವು ಜೀವಕಾರಕನಾಗಿ, ಪುತ್ರಕಾರಕನಾಗಿ,  ಧರ್ಮಕಾರಕನಾಗಿ,  ಈಶಾನ್ಯ ದಿಕ್ಕಿನ ಅಧಿಪತ್ಯವನ್ನು ವಹಿಸಿಕೊಂಡು ಈ ದಿಕ್ಕಿನ ಫಲಾಫಲಗಳನ್ನ ಯಜಮಾನನ ಮೇಲೆ ಹಾಗೂ ಗಂಡು  ಮಕ್ಕಳಮೇಲೆ ಅದರಲ್ಲಿಯೂ ಮೊದಲನೇ ಮಗನ ಮೇಲೆ ಪ್ರತಿಫಲಿಸುವಂತೆ ಮಾಡುತ್ತಾನೆ.
          ಈ ದಿಕ್ಕಿನಲ್ಲಿ  ಹೆಚ್ಚು ತೆರೆದಂಥ ಪ್ರದೇಶ ಕಡ್ಡಾಯವಾಗಿ ಇರಬೇಕು, ನೀರಿನ ಭಾವಿ, ಬೋರ್ವೆಲ್, ಈಜುಕೊಳ ನೀರಿನ ತೊಟ್ಟಿ ಈ ದಿಕ್ಕಿನಲ್ಲಿ ನಿರ್ಮಾಣ ಮಾಡಬೇಕು. ಮನೆಯ ಒಳಗಡೆ ಪೂಜಾಸ್ಥಳ,  ಅಧ್ಯಯನದ ಕೋಣೆ ಈ ದಿಕ್ಕಿನಲ್ಲಿದ್ದರೆ ಅತ್ಯುತ್ತಮ,  ಮನೆಯ ಮುಖ್ಯದ್ವಾರವೂ ಇದೇ ದಿಕ್ಕಿನಲ್ಲಿದ್ದರೆ ತುಂಬಾ ಶುಭಪ್ರದವೆಂದು ನಂಬಲಾಗುತ್ತದೆ.
         ಈಶಾನ್ಯ ದಿಕ್ಕಿನಲ್ಲಿಯೂ ಎರಡು ವಿಭಾಗಗಳನ್ನು ಮಾಡಬಹುದು. *ಉತ್ತರ ಈಶಾನ್ಯ ಹಾಗೂ ಪೂರ್ವ ಈಶಾನ್ಯ,*
          ಉತ್ತರ ಈಶಾನ್ಯವು  ಅತ್ಯಂತ ಶುಭಗ್ರಹಗಳಾದ ಬುಧ ಹಾಗೂ ಗುರುಗ್ರಹಗಳ ಯುತಿಯ ಪ್ರಭಾವದಿಂದ ಮಕ್ಕಳು ಬುದ್ಧಿವಂತರು, ಗುರು, ದೈವ, ಹಿರಿಯರಲ್ಲಿ ಭಕ್ತಿ ಶ್ರದ್ಧೆ ಗೌರವಗಳುಳ್ಳವರೂ, ಧರ್ಮಕಾರ್ಯಾಚರಣೆ,  ಜನೋಪಯೋಗಿ ಕಾರ್ಯಗಳಲ್ಲಿ ಆಸಕ್ತಿ ಉಳ್ಳವರೂ  ಆಗುತ್ತಾರೆ.  ಈ ದಿಕ್ಕು ಲೋಪವಾದಲ್ಲಿ,  ಮಕ್ಕಳಿಂದ  ತೊಂದರೆ, ಮಕ್ಕಳು  ದೂರದ  ವಿದೇಶಗಳಲ್ಲಿ ವಾಸ,  ಅತೀ ಬುದ್ಧಿವಂತಿಕೆಯಿಂದ  ತಮ್ಮ ಭವಿಷ್ಯಕ್ಕೇ ಕುತ್ತು ತಂದುಕೊಳ್ಳುವುದು, ಗುರು - ಹಿರಿಯ - ದೈವದ  ಅನಾದರಣೆ ಮುಂತಾದ ಕೆಟ್ಟ ಫಲಗಳು.
          ಪೂರ್ವ ಈಶಾನ್ಯ ದಿಕ್ಕಿಗೆ  ರವಿ ಹಾಗೂ  ಗುರುಗಳ ಯುತಿಯು ಯಜಮಾನನ ಮೇಲೆ ಉತ್ತಮ ಪ್ರಭಾವ ಬೀರುತ್ತದೆ,  ಉತ್ತಮ  ಸಂತಾನ, ಮಕ್ಕಳೊಂದಿಗೆ ಉತ್ತಮ ಬಾಂಧವ್ಯ,  ಕುಟುಂಬ ಸೌಖ್ಯ, ಧೃಢ ಮನೋಬಲ, ದೈವಿಕ ಗುಣ, ಆಚಾರ - ವಿಚಾರ - ಸಂಪ್ರದಾಯ ದಲ್ಲಿ ನಂಬಿಕೆ ಉಳ್ಳವರು ಆಗಿರುತ್ತಾರೆ. 
      
          ಈ ದಿಕ್ಕು ಲೋಪವಾಗಿದ್ದಲ್ಲಿ  ತಂದೆಗೆ ಅಪಘಾತಗಳು ಅಂಗಹೀನತೆ,  ಮೃತ್ಯು, ತಂದೆ ಮಕ್ಕಳ ನಡುವೆ ಉತ್ತಮ ಬಾಂಧವ್ಯ ಇಲ್ಲದಿರುವುದು,  ಮಗನು ಅದರಲ್ಲೂ  ಮೊದಲನೇ ಮಗನು ಅಪಮೃತ್ತ್ಯುವಿಗೆ  ಒಳಗಾಗುವುದು ಹಣದ ತೊಂದರೆ , ಅವಮಾನ, ಮಗನು ಮನೆ ಬಿಟ್ಟು ಹೋಗುವುದು ಈ ರೀತಿಯಾದ ದುಷ್ಫಲಗಳು ಎದುರಿಸಬೇಕಾಗುತ್ತದೆ.
           ಈಶಾನ್ಯ ದಿಕ್ಕು  ಬೆಳೆದಿದ್ದರೆ ಆ ಮನೆಯವರು ಬಹಳಷ್ಟು ಭಾಗ್ಯವಂತರು, ಪೂರ್ವ ದಿಕ್ಕಿನತ್ತ  ಬೆಳೆದಿದ್ದರೆ, ಧನ ಕೀರ್ತಿ ಪ್ರತಿಷ್ಠೆ, ಧರ್ಮ ಬುದ್ಧಿಯುಳ್ಳವರಾಗುತ್ತಾರೆ. ಉತ್ತರ ದಿಕ್ಕಿನತ್ತ ಬೆಳೆದಿದ್ದರೆ ಧನವಂತರಾಗಿ  ಜಿಪುಣ ಬುದ್ಧಿಯವರಾಗಿರುತ್ತಾರೆ. ಈ ದಿಕ್ಕು  ಎಲ್ಲಾ ದಿಕ್ಕುಗಳಿಗಿಂತಲೂ ತಗ್ಗಾಗಿರಬೇಕು ಹಾಗೂ  ಪಶ್ಚಿಮದ ದಿಕ್ಕಿಗಿಂತ ಪೂರ್ವದಲ್ಲಿ... ದಕ್ಷಿಣ ದಿಕ್ಕಿಗಿಂತ ಉತ್ತರ ದಲ್ಲಿ ಹೆಚ್ಚಿನ ಖಾಲಿ ಜಾಗವಿದ್ದರೆ , ನಿವೇಶನದ ಈಶಾನ್ಯ  ಭಾಗಕ್ಕೆ ಹತ್ತಿರದಲ್ಲಿ ಕೆರೆ ಬಾವಿ  ಮುಂತಾದುವಿದ್ದರೆ,  ಆ  ಕುಟುಂಬದಲ್ಲಿ ವಾಸಿಸುವವರಿಗೆ ಎಲ್ಲಾ ತೆರನಾದ ಸುಖ ಸಂಪತ್ತುಗಳೂ ಲಭಿಸುತ್ತವೆ.
       ✍  ಡಾ :   B. N. ಶೈಲಜಾ ರಮೇಶ್...