ಹರಿಃ ಓಂ
ಓಂ ಶ್ರೀ ಮಹಾಗಣಪತಯೇ ನಮಃ
ಓಂ ಶ್ರೀ ಗುರುಭ್ಯೋನಮಃ
ರಾಶಿ ಪ್ರಕಾರ ವ್ಯಾಪಾರ ವೃದ್ಧಿಗೆ ಸರಳ ಉಪಾಯಗಳು :----
ವ್ಯಾಪಾರದ ಉನ್ನತಿಗಾಗಿ ಜ್ಯೋತಿಷ್ಯದ ಪ್ರಕಾರ ಅನೇಕ ರೀತಿಯ ಉಪಾಯಗಳನ್ನು ಮಾಡುವುದು ಜನಜನಿತವಾಗಿದೆ. ಸರಳ ರೀತಿಯ ಈ ಉಪಾಯಗಳು ಪ್ರಭಾವಶಾಲಿಯಾದದ್ದು. ಯಾರ ಹೆಸರಿನಲ್ಲಿ ವ್ಯಾಪಾರ ಮಾಡುತ್ತಿದ್ದಾರೆ, ಆ ವ್ಯಕ್ತಿಯ ರಾಶಿಗೆ ಅನುಗುಣವಾಗಿ ಮಾಡಬಹುದಾದ ಚಿಕ್ಕ, ಚೊಕ್ಕ,ವಿಶಿಷ್ಟ, ಸರಳ ಉಪಾಯಗಳು ಇಲ್ಲಿವೆ....
ನೀವುಗಳೂ ಅನುಸರಿಸಿ ನೋಡಿ😊
ಮೊದಲಿಗೆ :-----
ಮೇಶರಾಶಿ / ಲಗ್ನ
ಮೇಶರಾಶಿಯ ಜಾತಕರು ತಮ್ಮ ವ್ಯಾಪಾರ ವೃದ್ಧಿಗಾಗಿ, ವ್ಯಾಪಾರದ ಸ್ಥಳದಲ್ಲಿ ಮಣ್ಣಿನ ಅಥವಾ ಗಾಜಿನ ಪಾತ್ರೆಯಲ್ಲಿ ಮಾತ್ರವೇ ನೀರನ್ನು ತುಂಬಿ ಇಡಬೇಕು. ಯಾವುದೇ ಲೋಹ, ಪ್ಲಾಸ್ಟಿಕ್ ಬಳಸಬಾರದು. ವ್ಯಾಪಾರದ ಸ್ಥಳದ ಗೋಡೆಗಳಿಗೆ, ನೆಲ, ಪೀಠೋಪಕರಣ, ಕಿಟಕಿ ಪರದೆಗಳಿಗೆ ಗಾಢವಾದ ಬಣ್ಣಗಳಾದ ಕಪ್ಪು, ಕೆಂಪು, ಕಂದು, ನೀಲಿ ಬಣ್ಣಗಳನ್ನು ಉಪಯೋಗಿಸಬಾರದು. ಮೇಷ ರಾಶಿಯ ಜಾತಕರು ಖಾರವಾದ ಹಾಗೂ ಹುಳಿಯ ಪದಾರ್ಥಗಳನ್ನು ಸೇವಿಸಿ ವ್ಯಾಪಾರ ಸ್ಥಳಕ್ಕೆ ಹೋಗಬಾರದು. ಹೊಸ ವ್ಯಾಪಾರಗಳಿಗೆ, ವ್ಯಾಪಾರದ ವೃದ್ಧಿಗಾಗಿ ಕೈಗೊಳ್ಳುವ ಕಾರ್ಯಗಳಿಗೆ ಬ್ಯುಸಿನೆಸ್ ಮೀಟ್ ಗಳಿಗೆ ಗುರುವಾರ ಶುಭದಿನ.
ವೃಷಭ ರಾಶಿ/ ಲಗ್ನ
ವೃಷಭ ರಾಶಿಯ ಜಾತಕರು ತಮ್ಮ ವ್ಯಾಪಾರ ವೃದ್ಧಿಗಾಗಿ, ತಮ್ಮ ವ್ಯಾಪಾರ ಸ್ಥಳದಲ್ಲಿ ಕನ್ನಡಿಯನ್ನಿಡಬೇಕು. ಆ ಕನ್ನಡಿಯು ವ್ಯಾಪಾರ ಸ್ಥಳದ ಹೊರಗಿನಿಂದ ಕಾಣಬಾರದು, ಒಳಗೆ ಪ್ರವೇಶಿಸಿದ ಕ್ಷಣ ಕನ್ನಡಿಯ ಮೇಲೆಯೇ.ದೃಷ್ಟಿ ಹೋಗುವಂತಿರಬೇಕು. ವ್ಯಾಪಾರ ಸ್ಥಳದಲ್ಲಿ ಜಾತಕರು ಬಾಗಿಲಿನ ನೇರ ಕುಳಿತುಕೊಳ್ಳಬಾರದು. ಶುಕ್ರವಾರದ ದಿನ ಶ್ವೇತವರ್ಣದ ಸುವಾಸನೆಯುಕ್ತ ಪುಷ್ಪವನ್ನು, ತಮ್ಮ ವ್ಯಾಪಾರದ ಸ್ಥಳದ ಪೂಜೆಯ ಸ್ಥಾನದಲ್ಲಿಡಬೇಕು. ಇವರಿಗೆ ಶುಕ್ರವಾರ ಶುಭದಿನ.
ಮಿಥುನ ರಾಶಿ/ ಲಗ್ನ
ಮಿಥುನ ರಾಶಿಯವರು ತಮ್ಮ ವ್ಯಾಪಾರ ವೃದ್ಧಿಗಾಗಿ ಬುಧವಾರದಂದು ಹಸಿರು ಎಲೆಗಳ ಸಹಿತ ಇರುವ ಹೂಗಳನ್ನು ತಂದು ತಮ್ಮ ಕಾರ್ಯಾಲಯದಲ್ಲಿ ( ವ್ಯಾಪಾರ ಸ್ಥಳ ) ಇಡಬೇಕು. ಅನಾವಶ್ಯಕ ಧ್ವನಿಯನ್ನುಂಟುಮಾಡುವ ವಿದ್ಯುತ್ ಉಪಕರಣಗಳನ್ನು ಇಡಬಾರದು. ತಾವು ಕುಳಿತುಕೊಳ್ಳುವ ಜಾಗದ ಎದುರಿಗೆ ಸರಿಯಾದ ಸಮಯ ತೋರಿಸುವ ಗಡಿಯಾರವನ್ನಿಡಬೇಕು. ಸಾಧ್ಯವಾದರೆ ಹಸಿರು ಗಿಡಗಳನ್ನು ತಮ್ಮ ಕಾರ್ಯಾಲಯದಲ್ಲಿ ಇಟ್ಟರೆ ಒಳಿತು. ಬುಧವಾರ ಇವರಿಗೆ ಶ್ರೇಷ್ಠ, ಆ ದಿನ ವ್ಯಾಪಾರ ಸ್ಥಳದಲ್ಲಿ ಪೂಜೆ ಮಾಡಿ ಉತ್ತಮ ಫಲಗಳನ್ನು ನೈವೇದ್ಯ ಮಾಡಬೇಕು.
ಕಟಕ ರಾಶಿ/ಲಗ್ನ
ಈ ರಾಶಿಯ ಜಾತಕರು ತಮ್ಮ ವ್ಯಾಪಾರ ವೃದ್ಧಿಗಾಗಿ, ಪವಿತ್ರ ನದಿ ಅಥವಾ ಸರೋವರದಿಂದ ನೀರನ್ನು ತಂದು ಗಾಜಿನ ಪಾತ್ರೆಯಲ್ಲಿ ತುಂಬಿ ವ್ಯಾಪಾರದ ಸ್ಥಳದಲ್ಲಿಡಬೇಕು. ಆ ಜಾಲವನ್ನು ಪೂಜೆ ಮಾಡಿದರೆ ಶೀಘ್ರ ಫಲವೃದ್ಧಿ. ವ್ಯಾಪಾರ ಸ್ಥಳದಲ್ಲಿ ಗ್ರಾಹಕರಿಗೆ ಕುಡಿಯಲು ಅನುಕೂಲವಾಗುವಂತೆ ಶುದ್ಧ ನೀರಿನ ವ್ಯವಸ್ಥೆ ಮಾಡಿದ್ದಲ್ಲಿ ಉತ್ತಮ. ಕುಡಿಯುವ ನೀರನ್ನು ಮಣ್ಣಿನ ಪಾತ್ರೆಯಲ್ಲಿಟ್ಟರೆ ಮತ್ತೂ ಉತ್ತಮ. ಪ್ರತೀ ಹುಣ್ಣಿಮೆಯಂದು ವ್ಯಾಪಾರ ಸ್ಥಳದ ದ್ವಾರದ ಎರಡೂ ಬದಿಗೆ ಗಂಗಾಜಲ ಪ್ರೋಕ್ಷಿಸುವುದು ಉತ್ತಮ. ಈ ರಾಶಿಯ ಜಾತಕರು ತಮ್ಮ ಕುಡಿಯುವ ನೀರಿನಲ್ಲಿ ತುಳಸೀದಲವನ್ನು ಹಾಕಿಕೊಂಡು ಕುಡಿಯಬೇಕು.
ಸಿಂಹ ರಾಶಿ/ ಲಗ್ನ
ಸಿಂಹ ರಾಶಿಯ ಜಾತಕರು ತಮ್ಮ ವ್ಯಾಪಾರ ವೃದ್ಧಿಗಾಗಿ, ತಮ್ಮ ಕಾರ್ಯಾಲಯ ಅಥವಾ ಅಂಗಡಿಯ ಮುಖ್ಯದ್ವಾರದತ್ತ ಮುಖ ಮಾಡಿ ಕುಳಿತುಕೊಳ್ಳಬಾರದು. ಅಂಗಡಿಯ ಹೊರಗಿನಿಂದ ನೋಡಿದಾಗ ಜಾತಕರ ಮುಖ ಕಾಣಬಾರದು ಆ ರೀತಿಯಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡಬೇಕು. ಈ ಜಾತಕರು ಲೋಹದ ಪೀಠೋಪಕರಣ ಗಳನ್ನು ಉಪಯೋಗಿಸಬಾರದು. ಆ ಸ್ಥಳದ ವಾತಾವರಣವನ್ನು ಸ್ವಚ್ಛ ಹಾಗೂ ಸುಗಂಧಭರಿತವಾಗಿಟ್ಟುಕೊಂಡಿರಬೇಕು. ಕಾರ್ಯಾಲಯದಲ್ಲಿ ಪ್ರತಿನಿತ್ಯ ಪೂಜೆ ಮಾಡಿ ನೈವೇದ್ಯ ಸಮರ್ಪಿಸಬೇಕು. ಪ್ರವೇಶ ದ್ವಾರದ ಮೇಲೆ ಶುಭ ಹಾಗೂ ಸ್ವಾಗತ ಚಿಹ್ನೆಗಳನ್ನು ಹಾಕಿದರೆ ಉತ್ತಮ.
ಕನ್ಯರಾಶಿ/ಲಗ್ನ
ಕನ್ಯಾ ರಾಶಿಯ ಜಾತಕರು ತಮ್ಮ ವ್ಯಾಪಾರ ವೃದ್ಧಿಗಾಗಿ ವ್ಯಾಪಾರ ಸ್ಥಳದಲ್ಲಿ ಮರದ ಕುರ್ಚಿ ಯ ಮೇಲೆ ಕುಳಿತುಕೊಳ್ಳಬೇಕು. ಕೆಟ್ಟಿರುವ ಯಾವುದೇ ಉಪಕರಣಗಳನ್ನು ಇಡಬಾರದು ಅಂದ್ರೆ ಯಾವುದೇ ಕೆಟ್ಟಿರುವ ಯಂತ್ರ, ಗಡಿಯಾರಗಳನ್ನು ಇಡಬಾರದು , ವಿದ್ಯುತ್ ಉಪಕರಣಗಳು, ಫ್ಯಾನ್, ಏಸಿ, ಫ್ರಿಡ್ಜ್ ಫೋನ್, ಇತ್ಯಾದಿಗಳಿಂದ ದೂರ ಕುಳಿತುಕೊಳ್ಳಬೇಕು. ಈ ಜಾತಕರು ವೀಲ್ ಚೇರ್ ಮೇಲೆ ಕುಳಿತುಕೊಳ್ಳಬಾರದು. ಬುಧವಾರದಂದು ತಮ್ಮ ವ್ಯಾಪಾರ ಸ್ಥಳದಲ್ಲಿ ಹಸುವಿಗೆ ಹಸಿರು ಹುಲ್ಲನ್ನು ತಿನ್ನಿಸಬೇಕು.
ತುಲಾ ರಾಶಿ/ ಲಗ್ನ
ತುಲಾರಾಶಿಯ ಜಾತಕರು ತಮ್ಮ ವ್ಯಾಪಾರ ವೃದ್ಧಿಗಾಗಿ ತಮ್ಮ ಕಾರ್ಯಾಲಯ ಅಥವಾ ಅಂಗಡಿಯ ಮಧ್ಯಬಾಗದಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಬೇಕು. ತಮ್ಮ ಕಾರ್ಯಾಲಯದಲ್ಲಿ 7 ಶ್ರೀಫಲಗಳನ್ನು ಕೆಂಪುವರ್ಣದ ವಸ್ತ್ರದಲ್ಲಿ ಗಂಟು ಕಟ್ಟಿ, ಶುದ್ಧವಾದ ಅಲ್ಮಾರಿನಲ್ಲಿ ಇಡಬೇಕು, ಅಲ್ಲಿ ಬೇರೆ ಯಾವುದೇ ವಸ್ತುಗಳನ್ನಿಡಬಾರದು. ಶುಕ್ರವಾರಗಳಲ್ಲಿ ಸುವಾಸನೆಯುಕ್ರ ಹೂಗಳನ್ನು ತಂದು ಪೂಜಾ ಸ್ಥಳದಲ್ಲಿಡಬೇಕು. ಇವರು ತಮ್ಮ ಕಾರ್ಯಾಲಯದ ಸ್ವಚ್ಛತೆ ಹಾಗೂ ಅಲಂಕಾರದ ಬಗ್ಗೆ ವಿಶೇಷ ಗಮನ ಹರಿಸಿದರೆ ಒಳ್ಳೆಯದು.
ವೃಶ್ಚಿಕ ರಾಶಿ/ಲಗ್ನ
ವೃಶ್ಚಿಕ ರಾಶಿಯವರು ತಮ್ಮ ವ್ಯಾಪಾರ ವೃದ್ಧಿಗಾಗಿ ವ್ಯಾಪಾರ ಕಾರ್ಯಾಲಯದ ಮುಖ್ಯದ್ವಾರದ ಎರಡೂ ಬದಿ ಸಿಂಧೂರದಿಂದ ಸ್ವಸ್ತಿಕ್ ನ ಚಿಹ್ನೆಯನ್ನು ಬರೆಯಬೇಕು. ಮಂಗಳವಾರ, ಶನಿವಾರದಂದು ಪೂಜೆಗೆ ಕೆಂಪುವರ್ಣದ ಹೂಗಳನ್ನು ಬಳಸಬೇಕು. ವ್ಯಾಪಾರ ಸ್ಥಳಕ್ಕೆ ಬರುವ ಮುನ್ನ ಯಾರಾದ್ರೂ ಪೂಜ್ಯ ವ್ಯಕ್ತಿಗಳ ಚರಣ ಸ್ಪರ್ಶ ಮಾಡಿ, ಅವರ ಆಶೀರ್ವಾದ ಪಡೆದು ಬಂದರೆ ಅತ್ಯುತ್ತಮ. ಗಂಗಾಜಲವನ್ನು ಮಂಗಳವಾರಗಳಲ್ಲಿ ವ್ಯಾಪಾರ ಸ್ಥಳದ ಸಮಸ್ತ ಕೋನಗಳಲ್ಲಿ ಸಿಂಪರಿಸಬೇಕು. ಇವರು ಪ್ರತಿದಿನ ಹಣೆಗೆ ಕೆಂಪು ತಿಲಕವನ್ನು ಧರಿಸುವುದು ಅತ್ಯುತ್ತಮ.
ಧನೂರಾಶಿ/ ಲಗ್ನ
ಧನಸ್ಸು ರಾಶಿಯವರು ತಮ್ಮ ವ್ಯಾಪಾರ ವೃದ್ಧಿಗಾಗಿ ಹಣವಿರಿಸುವ ಸ್ಥಳದಲ್ಲಿ ಶ್ವೇತ ಚಂದನದ ತುಂಡನ್ನು ಇರಿಸಬೇಕು. ಪ್ರತಿದಿನ ವ್ಯಾಪಾರ ಸ್ಥಳದಲ್ಲಿ ಹಸುವಿನ ಶುದ್ಧ ತುಪ್ಪದಿಂದ ದೀಪ ಹಚ್ಚಬೇಕು. ಹಳದಿ ಬಣ್ಣದ ಹೂವಿನಿಂದ ಪೂಜಿಸಬೇಕು. ಮುಖ್ಯ ದ್ವಾರದ ಎದುರು ಕುಳಿತು ಕೊಳ್ಳಬಾರದು. ತಮ್ಮ ಕಾರ್ಯಸ್ಥಾನದ ಎದುರಲ್ಲಿ ಹಸುವಿಗೆ ರೊಟ್ಟಿ ತಿನ್ನಿಸಬೇಕು. ಈ ಜಾತಕರು ಹುಣ್ಣಿಮೆ ದಿನದಂದು ಆಫಿಸ್ಗೆ ಬರುವ ಮುನ್ನ ದೇವಾಲಯಕ್ಕೆ ಹೋಗಿಬರಬೇಕು.
ಮಕರ ರಾಶಿ/ಲಗ್ನ
ಮಕರರಾಶಿಯವರು ತಮ್ಮ ವ್ಯಾಪಾರ ವೃದ್ಧಿಗಾಗಿ, ಶನಿವಾರದಂದು ತಮ್ಮ ಕಾರ್ಯ ಸ್ಥಾನ ದ ಎದುರು ಬಂದ ಯಾವುದೇ ಯಾಚಕರಿಗೆ ಕಪ್ಪು ಎಳ್ಳು ದಾನ ಕೊಡಬೇಕು. ಕುದುರೆ ಲಾಳವನ್ನು ಮುಖ್ಯದ್ವಾರಕ್ಕೆ ಹಾಕಬೇಕು. ವ್ಯಾಪಾರ ಮಂದಗತಿಯಲ್ಲಿ ನಡೆಯುತ್ತಿದ್ದರೆ, ಶನಿವಾರದಂದು ಮಣ್ಣಿನ ಮಡಿಕೆಯನ್ನು ತಂದು ಅದರ ಮೇಲೆ ಮುಚ್ಚಳ ಮುಚ್ಚಬೇಕು, ಹಾಗೂ ಬುಧವಾರದಂದು ಆ ಮಡಿಕೆಯ ಮುಚ್ಚಳ ತೆಗೆಯದೆ ಹಾಗೆಯೇ ಪ್ರವಹಿಸುವ ನದಿಯಲ್ಲಿ (ನೀರಿನಲ್ಲಿ ) ಮಾಡಿಕೆಯನ್ನು ಬಿಟ್ಟುಬರಬೇಕು. ಪ್ರತಿದಿನ ಮುಖ್ಯದ್ವಾರವನ್ನು ತೆರೆಯುವ ಮುನ್ನ ದ್ವಾರದ ಮುಂದೆ ನೀರನ್ನು ಸಿಂಪರಿಸಬೇಕು.
ಕುಂಭರಾಶಿ/ ಲಗ್ನ
ಈ ರಾಶಿಯ ಜಾತಕರು ತಮ್ಮ ಕಾರ್ಯ ಸ್ಥಳದಲ್ಲಿ ಹೊರಗಿನವರಿಗೆ ಕಾಣದಂತೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಬೇಕು. ಇವರು ಕುಳಿತುಕೊಳ್ಳುವ ಸ್ಥಳದ ಎದುರಿಗೆ ಯಾವುದೇ ಮೂಲೆಯಾಗಲೀ, ಮುಚ್ಚಿದ ಬಾಗಿಲಾಗಲೀ ಇರಬಾರದು. ಶನಿವಾರದಂದು ಸಣ್ಣ ಮಣ್ಣಿನ ಮಡಿಕೆ ತಂದು ಎಳ್ಳನ್ನು ತುಂಬಿ ಮಣ್ಣಿನ ಮುಚ್ಚಳವನ್ನು ಮುಚ್ಚಿ ಇಡಬೇಕು. ಮಾರನೇ ದಿನ ಎಳ್ಳು ಸಹಿತವಾದ ಆ ಮಡಿಕೆಯನ್ನು ದಾನ ಕೊಡಬೇಕು. ತಮ್ಮ ಕಾರ್ಯಾಲಯದ ಮುಂದೆ ಯಾರೇ ಯಾಚಕರು ಬಂದರೂ ಬರಿಗೈಯಲ್ಲಿ ಕಳುಹಿಸಬಾರದು, ಯಥಾಶಕ್ತಿ ದಾನ ನೀಡಬೇಕು. ತಮ್ಮ ಕಾರ್ಯ ಸ್ಥಾನವನ್ನು ಅಲಂಕರಿಸಲು ಕೆಂಪು ಹಾಗೂ ಬಿಳಿಯ ಬಣ್ಣವನ್ನು ಉಪಯೋಗಿಸಬಾರದು.
ಮೀನ ರಾಶಿ/ಲಗ್ನ
ಮೀನ ರಾಶಿಯ ಜಾತಕರು ತಮ್ಮ ವ್ಯಾಪಾರ ವೃದ್ಧಿಗಾಗಿ ತಮ್ಮ ಕಾರ್ಯ ಸ್ಥಳಕ್ಕೆ ಹೋಗುವ ಮುಂಚೆ, ದೇವರಿಗೆ ನಮಿಸಿ, ಪೂಜ್ಯರ ಚರಣ ಸ್ಪರ್ಶಮಾಡಿ, ಹೋಗಬೇಕು. ಗುರುವಾರದ ದಿನದಂದು ಹಳದಿ ಬಣ್ಣದ ಫಲಗಳನ್ನು ತಂದು ವ್ಯವಹಾರ ಸ್ಥಳದ ಪೂಜಾಸ್ಥಳದಲ್ಲಿ ಇರಿಸಬೇಕು. ಮರುದಿನ ಆ ಹಣ್ಣುಗಳನ್ನು ಯಾರಾದರೂ ಯಾಚಕರಿಗೆ ಕೊಡಬೇಕು. ಗುರುವಾರದಂದು ವ್ಯವಹಾರ ಸ್ಥಳದಲ್ಲಿ ಬಂದ ಸಾಧುವಿಗೆ ಯಥಾಶಕ್ತಿ ದಾನ ನೀಡಬೇಕು. ಅನಾವಶ್ಯಕ ಚರ್ಚೆ ಅನಗತ್ಯ. ಹಳದಿ ವಸ್ತ್ರದಲ್ಲಿ ಶ್ವೇತ ಚಂದನವನ್ನು ಕಟ್ಟಿ ವ್ಯಾಪಾರ ಸ್ಥಳದಲ್ಲಿ ಇರಿಸಬೇಕು.
ಯಾವುದೇ ರಾಶಿಯವರಾಗಲೀ ತಮ್ಮ ವ್ಯಾಪಾರ ವೃದ್ಧಿಸಬೇಕೆಂದರೆ, ನ್ಯಾಯ ನೀತಿ ಧರ್ಮ ಮಾರ್ಗದಲ್ಲಿ ನಡೆದು , ನ್ಯಾಯಾನ್ಯಾಯ ವಿವೇಚನೆಯಿಂದ ನಡೆದಾಗ ನವಗ್ರಹಗಳ ಅನುಗ್ರಹವಾಗುತ್ತದೆ. ಆಗ ತಮ್ಮ ವ್ಯಾಪಾರ ವ್ಯವಹಾರಗಳು ಸುಗಮವಾಗಿ ಸಾಗುತ್ತವೆ.
✍️ ಡಾ: B.N.ಶೈಲಜಾ ರಮೇಶ್
ರಾಶಿ, ಲಗ್ನ ಬೇರೆಬೇರೆ ಆಗಿದ್ದಾಗ ಯಾವುದನ್ನು ಪರಿಗಣಿಸಬೇಕು
ReplyDelete