Tuesday, 28 April 2020

ರಾಶಿ ಪ್ರಕಾರ ವ್ಯಾಪಾರ ವೃದ್ಧಿಗೆ ಸರಳ ಉಪಾಯಗಳು

                       ಹರಿಃ ಓಂ
      ಓಂ ಶ್ರೀ ಮಹಾಗಣಪತಯೇ ನಮಃ
           ಓಂ ಶ್ರೀ ಗುರುಭ್ಯೋನಮಃ

ರಾಶಿ ಪ್ರಕಾರ ವ್ಯಾಪಾರ ವೃದ್ಧಿಗೆ ಸರಳ ಉಪಾಯಗಳು :----

        ವ್ಯಾಪಾರದ ಉನ್ನತಿಗಾಗಿ ಜ್ಯೋತಿಷ್ಯದ ಪ್ರಕಾರ ಅನೇಕ ರೀತಿಯ ಉಪಾಯಗಳನ್ನು ಮಾಡುವುದು ಜನಜನಿತವಾಗಿದೆ.  ಸರಳ ರೀತಿಯ ಈ ಉಪಾಯಗಳು ಪ್ರಭಾವಶಾಲಿಯಾದದ್ದು. ಯಾರ ಹೆಸರಿನಲ್ಲಿ ವ್ಯಾಪಾರ ಮಾಡುತ್ತಿದ್ದಾರೆ,  ಆ ವ್ಯಕ್ತಿಯ ರಾಶಿಗೆ ಅನುಗುಣವಾಗಿ ಮಾಡಬಹುದಾದ ಚಿಕ್ಕ, ಚೊಕ್ಕ,ವಿಶಿಷ್ಟ, ಸರಳ ಉಪಾಯಗಳು ಇಲ್ಲಿವೆ....
ನೀವುಗಳೂ ಅನುಸರಿಸಿ ನೋಡಿ😊

ಮೊದಲಿಗೆ :-----
Picture source: Internet/social media

          ಮೇಶರಾಶಿ / ಲಗ್ನ

       ಮೇಶರಾಶಿಯ ಜಾತಕರು ತಮ್ಮ ವ್ಯಾಪಾರ ವೃದ್ಧಿಗಾಗಿ, ವ್ಯಾಪಾರದ ಸ್ಥಳದಲ್ಲಿ ಮಣ್ಣಿನ ಅಥವಾ ಗಾಜಿನ ಪಾತ್ರೆಯಲ್ಲಿ  ಮಾತ್ರವೇ ನೀರನ್ನು ತುಂಬಿ ಇಡಬೇಕು. ಯಾವುದೇ ಲೋಹ, ಪ್ಲಾಸ್ಟಿಕ್ ಬಳಸಬಾರದು. ವ್ಯಾಪಾರದ ಸ್ಥಳದ ಗೋಡೆಗಳಿಗೆ, ನೆಲ, ಪೀಠೋಪಕರಣ, ಕಿಟಕಿ ಪರದೆಗಳಿಗೆ ಗಾಢವಾದ ಬಣ್ಣಗಳಾದ ಕಪ್ಪು, ಕೆಂಪು, ಕಂದು, ನೀಲಿ ಬಣ್ಣಗಳನ್ನು ಉಪಯೋಗಿಸಬಾರದು.  ಮೇಷ ರಾಶಿಯ ಜಾತಕರು ಖಾರವಾದ ಹಾಗೂ ಹುಳಿಯ ಪದಾರ್ಥಗಳನ್ನು ಸೇವಿಸಿ ವ್ಯಾಪಾರ ಸ್ಥಳಕ್ಕೆ ಹೋಗಬಾರದು.  ಹೊಸ ವ್ಯಾಪಾರಗಳಿಗೆ, ವ್ಯಾಪಾರದ ವೃದ್ಧಿಗಾಗಿ ಕೈಗೊಳ್ಳುವ ಕಾರ್ಯಗಳಿಗೆ ಬ್ಯುಸಿನೆಸ್ ಮೀಟ್ ಗಳಿಗೆ ಗುರುವಾರ ಶುಭದಿನ.

           ವೃಷಭ ರಾಶಿ/ ಲಗ್ನ
Picture source: Internet/social media
           ವೃಷಭ ರಾಶಿಯ ಜಾತಕರು ತಮ್ಮ ವ್ಯಾಪಾರ ವೃದ್ಧಿಗಾಗಿ, ತಮ್ಮ ವ್ಯಾಪಾರ ಸ್ಥಳದಲ್ಲಿ ಕನ್ನಡಿಯನ್ನಿಡಬೇಕು. ಆ ಕನ್ನಡಿಯು ವ್ಯಾಪಾರ ಸ್ಥಳದ  ಹೊರಗಿನಿಂದ ಕಾಣಬಾರದು, ಒಳಗೆ ಪ್ರವೇಶಿಸಿದ ಕ್ಷಣ ಕನ್ನಡಿಯ ಮೇಲೆಯೇ.ದೃಷ್ಟಿ ಹೋಗುವಂತಿರಬೇಕು. ವ್ಯಾಪಾರ ಸ್ಥಳದಲ್ಲಿ ಜಾತಕರು ಬಾಗಿಲಿನ ನೇರ ಕುಳಿತುಕೊಳ್ಳಬಾರದು. ಶುಕ್ರವಾರದ ದಿನ ಶ್ವೇತವರ್ಣದ ಸುವಾಸನೆಯುಕ್ತ ಪುಷ್ಪವನ್ನು, ತಮ್ಮ ವ್ಯಾಪಾರದ ಸ್ಥಳದ ಪೂಜೆಯ ಸ್ಥಾನದಲ್ಲಿಡಬೇಕು. ಇವರಿಗೆ ಶುಕ್ರವಾರ ಶುಭದಿನ.

           ಮಿಥುನ ರಾಶಿ/ ಲಗ್ನ

Picture source: Internet/social media

          ಮಿಥುನ ರಾಶಿಯವರು ತಮ್ಮ ವ್ಯಾಪಾರ ವೃದ್ಧಿಗಾಗಿ ಬುಧವಾರದಂದು  ಹಸಿರು ಎಲೆಗಳ ಸಹಿತ ಇರುವ  ಹೂಗಳನ್ನು  ತಂದು ತಮ್ಮ ಕಾರ್ಯಾಲಯದಲ್ಲಿ ( ವ್ಯಾಪಾರ ಸ್ಥಳ ) ಇಡಬೇಕು. ಅನಾವಶ್ಯಕ ಧ್ವನಿಯನ್ನುಂಟುಮಾಡುವ ವಿದ್ಯುತ್ ಉಪಕರಣಗಳನ್ನು ಇಡಬಾರದು.  ತಾವು ಕುಳಿತುಕೊಳ್ಳುವ ಜಾಗದ ಎದುರಿಗೆ ಸರಿಯಾದ ಸಮಯ ತೋರಿಸುವ ಗಡಿಯಾರವನ್ನಿಡಬೇಕು. ಸಾಧ್ಯವಾದರೆ ಹಸಿರು ಗಿಡಗಳನ್ನು ತಮ್ಮ ಕಾರ್ಯಾಲಯದಲ್ಲಿ ಇಟ್ಟರೆ ಒಳಿತು. ಬುಧವಾರ ಇವರಿಗೆ ಶ್ರೇಷ್ಠ, ಆ ದಿನ ವ್ಯಾಪಾರ ಸ್ಥಳದಲ್ಲಿ ಪೂಜೆ ಮಾಡಿ ಉತ್ತಮ ಫಲಗಳನ್ನು  ನೈವೇದ್ಯ ಮಾಡಬೇಕು.

          ಕಟಕ ರಾಶಿ/ಲಗ್ನ
Picture source: Internet/social media

          ಈ ರಾಶಿಯ ಜಾತಕರು ತಮ್ಮ ವ್ಯಾಪಾರ ವೃದ್ಧಿಗಾಗಿ, ಪವಿತ್ರ ನದಿ ಅಥವಾ ಸರೋವರದಿಂದ ನೀರನ್ನು ತಂದು ಗಾಜಿನ ಪಾತ್ರೆಯಲ್ಲಿ ತುಂಬಿ ವ್ಯಾಪಾರದ ಸ್ಥಳದಲ್ಲಿಡಬೇಕು.  ಆ ಜಾಲವನ್ನು ಪೂಜೆ ಮಾಡಿದರೆ ಶೀಘ್ರ ಫಲವೃದ್ಧಿ.  ವ್ಯಾಪಾರ ಸ್ಥಳದಲ್ಲಿ ಗ್ರಾಹಕರಿಗೆ ಕುಡಿಯಲು ಅನುಕೂಲವಾಗುವಂತೆ ಶುದ್ಧ ನೀರಿನ ವ್ಯವಸ್ಥೆ ಮಾಡಿದ್ದಲ್ಲಿ ಉತ್ತಮ. ಕುಡಿಯುವ ನೀರನ್ನು ಮಣ್ಣಿನ ಪಾತ್ರೆಯಲ್ಲಿಟ್ಟರೆ ಮತ್ತೂ ಉತ್ತಮ. ಪ್ರತೀ ಹುಣ್ಣಿಮೆಯಂದು  ವ್ಯಾಪಾರ ಸ್ಥಳದ  ದ್ವಾರದ ಎರಡೂ ಬದಿಗೆ ಗಂಗಾಜಲ ಪ್ರೋಕ್ಷಿಸುವುದು ಉತ್ತಮ. ಈ ರಾಶಿಯ ಜಾತಕರು ತಮ್ಮ ಕುಡಿಯುವ ನೀರಿನಲ್ಲಿ ತುಳಸೀದಲವನ್ನು ಹಾಕಿಕೊಂಡು ಕುಡಿಯಬೇಕು.

         ಸಿಂಹ ರಾಶಿ/ ಲಗ್ನ
Picture source: Internet/social media

         ಸಿಂಹ ರಾಶಿಯ ಜಾತಕರು ತಮ್ಮ ವ್ಯಾಪಾರ ವೃದ್ಧಿಗಾಗಿ, ತಮ್ಮ ಕಾರ್ಯಾಲಯ ಅಥವಾ ಅಂಗಡಿಯ  ಮುಖ್ಯದ್ವಾರದತ್ತ ಮುಖ ಮಾಡಿ ಕುಳಿತುಕೊಳ್ಳಬಾರದು. ಅಂಗಡಿಯ ಹೊರಗಿನಿಂದ ನೋಡಿದಾಗ ಜಾತಕರ ಮುಖ ಕಾಣಬಾರದು ಆ ರೀತಿಯಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡಬೇಕು.  ಈ ಜಾತಕರು ಲೋಹದ ಪೀಠೋಪಕರಣ ಗಳನ್ನು  ಉಪಯೋಗಿಸಬಾರದು. ಆ ಸ್ಥಳದ ವಾತಾವರಣವನ್ನು ಸ್ವಚ್ಛ ಹಾಗೂ ಸುಗಂಧಭರಿತವಾಗಿಟ್ಟುಕೊಂಡಿರಬೇಕು. ಕಾರ್ಯಾಲಯದಲ್ಲಿ ಪ್ರತಿನಿತ್ಯ ಪೂಜೆ ಮಾಡಿ ನೈವೇದ್ಯ ಸಮರ್ಪಿಸಬೇಕು. ಪ್ರವೇಶ ದ್ವಾರದ ಮೇಲೆ ಶುಭ ಹಾಗೂ ಸ್ವಾಗತ ಚಿಹ್ನೆಗಳನ್ನು ಹಾಕಿದರೆ ಉತ್ತಮ.

             ಕನ್ಯರಾಶಿ/ಲಗ್ನ
       
    Picture source: Internet/social media

          ಕನ್ಯಾ ರಾಶಿಯ ಜಾತಕರು  ತಮ್ಮ ವ್ಯಾಪಾರ ವೃದ್ಧಿಗಾಗಿ ವ್ಯಾಪಾರ ಸ್ಥಳದಲ್ಲಿ ಮರದ ಕುರ್ಚಿ ಯ ಮೇಲೆ ಕುಳಿತುಕೊಳ್ಳಬೇಕು.  ಕೆಟ್ಟಿರುವ  ಯಾವುದೇ ಉಪಕರಣಗಳನ್ನು ಇಡಬಾರದು ಅಂದ್ರೆ ಯಾವುದೇ ಕೆಟ್ಟಿರುವ ಯಂತ್ರ, ಗಡಿಯಾರಗಳನ್ನು ಇಡಬಾರದು , ವಿದ್ಯುತ್ ಉಪಕರಣಗಳು, ಫ್ಯಾನ್, ಏಸಿ, ಫ್ರಿಡ್ಜ್   ಫೋನ್, ಇತ್ಯಾದಿಗಳಿಂದ ದೂರ ಕುಳಿತುಕೊಳ್ಳಬೇಕು. ಈ ಜಾತಕರು ವೀಲ್ ಚೇರ್ ಮೇಲೆ ಕುಳಿತುಕೊಳ್ಳಬಾರದು.  ಬುಧವಾರದಂದು ತಮ್ಮ ವ್ಯಾಪಾರ ಸ್ಥಳದಲ್ಲಿ ಹಸುವಿಗೆ ಹಸಿರು ಹುಲ್ಲನ್ನು ತಿನ್ನಿಸಬೇಕು.

           ತುಲಾ ರಾಶಿ/ ಲಗ್ನ
Picture source: Internet/social media
           ತುಲಾರಾಶಿಯ ಜಾತಕರು ತಮ್ಮ ವ್ಯಾಪಾರ ವೃದ್ಧಿಗಾಗಿ ತಮ್ಮ ಕಾರ್ಯಾಲಯ ಅಥವಾ ಅಂಗಡಿಯ  ಮಧ್ಯಬಾಗದಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಬೇಕು. ತಮ್ಮ ಕಾರ್ಯಾಲಯದಲ್ಲಿ 7 ಶ್ರೀಫಲಗಳನ್ನು ಕೆಂಪುವರ್ಣದ ವಸ್ತ್ರದಲ್ಲಿ ಗಂಟು ಕಟ್ಟಿ, ಶುದ್ಧವಾದ ಅಲ್ಮಾರಿನಲ್ಲಿ ಇಡಬೇಕು, ಅಲ್ಲಿ ಬೇರೆ ಯಾವುದೇ ವಸ್ತುಗಳನ್ನಿಡಬಾರದು. ಶುಕ್ರವಾರಗಳಲ್ಲಿ ಸುವಾಸನೆಯುಕ್ರ ಹೂಗಳನ್ನು ತಂದು ಪೂಜಾ ಸ್ಥಳದಲ್ಲಿಡಬೇಕು. ಇವರು ತಮ್ಮ ಕಾರ್ಯಾಲಯದ ಸ್ವಚ್ಛತೆ ಹಾಗೂ ಅಲಂಕಾರದ ಬಗ್ಗೆ ವಿಶೇಷ ಗಮನ ಹರಿಸಿದರೆ ಒಳ್ಳೆಯದು.

           ವೃಶ್ಚಿಕ ರಾಶಿ/ಲಗ್ನ
Picture source: Internet/social media
          ವೃಶ್ಚಿಕ ರಾಶಿಯವರು ತಮ್ಮ ವ್ಯಾಪಾರ ವೃದ್ಧಿಗಾಗಿ ವ್ಯಾಪಾರ ಕಾರ್ಯಾಲಯದ ಮುಖ್ಯದ್ವಾರದ ಎರಡೂ ಬದಿ ಸಿಂಧೂರದಿಂದ ಸ್ವಸ್ತಿಕ್ ನ ಚಿಹ್ನೆಯನ್ನು ಬರೆಯಬೇಕು.  ಮಂಗಳವಾರ, ಶನಿವಾರದಂದು ಪೂಜೆಗೆ ಕೆಂಪುವರ್ಣದ ಹೂಗಳನ್ನು ಬಳಸಬೇಕು. ವ್ಯಾಪಾರ ಸ್ಥಳಕ್ಕೆ ಬರುವ ಮುನ್ನ ಯಾರಾದ್ರೂ ಪೂಜ್ಯ ವ್ಯಕ್ತಿಗಳ ಚರಣ ಸ್ಪರ್ಶ ಮಾಡಿ, ಅವರ ಆಶೀರ್ವಾದ ಪಡೆದು ಬಂದರೆ ಅತ್ಯುತ್ತಮ.  ಗಂಗಾಜಲವನ್ನು ಮಂಗಳವಾರಗಳಲ್ಲಿ ವ್ಯಾಪಾರ ಸ್ಥಳದ ಸಮಸ್ತ ಕೋನಗಳಲ್ಲಿ ಸಿಂಪರಿಸಬೇಕು.  ಇವರು ಪ್ರತಿದಿನ ಹಣೆಗೆ ಕೆಂಪು ತಿಲಕವನ್ನು ಧರಿಸುವುದು ಅತ್ಯುತ್ತಮ.

           ಧನೂರಾಶಿ/ ಲಗ್ನ
Picture source: Internet/social media
           ಧನಸ್ಸು ರಾಶಿಯವರು ತಮ್ಮ ವ್ಯಾಪಾರ ವೃದ್ಧಿಗಾಗಿ ಹಣವಿರಿಸುವ ಸ್ಥಳದಲ್ಲಿ ಶ್ವೇತ ಚಂದನದ ತುಂಡನ್ನು ಇರಿಸಬೇಕು. ಪ್ರತಿದಿನ ವ್ಯಾಪಾರ ಸ್ಥಳದಲ್ಲಿ ಹಸುವಿನ ಶುದ್ಧ ತುಪ್ಪದಿಂದ ದೀಪ ಹಚ್ಚಬೇಕು. ಹಳದಿ ಬಣ್ಣದ ಹೂವಿನಿಂದ ಪೂಜಿಸಬೇಕು. ಮುಖ್ಯ ದ್ವಾರದ ಎದುರು ಕುಳಿತು ಕೊಳ್ಳಬಾರದು. ತಮ್ಮ ಕಾರ್ಯಸ್ಥಾನದ ಎದುರಲ್ಲಿ ಹಸುವಿಗೆ ರೊಟ್ಟಿ ತಿನ್ನಿಸಬೇಕು. ಈ ಜಾತಕರು ಹುಣ್ಣಿಮೆ ದಿನದಂದು ಆಫಿಸ್ಗೆ ಬರುವ ಮುನ್ನ ದೇವಾಲಯಕ್ಕೆ ಹೋಗಿಬರಬೇಕು.

          ಮಕರ ರಾಶಿ/ಲಗ್ನ
Picture source: Internet/social media
          ಮಕರರಾಶಿಯವರು ತಮ್ಮ ವ್ಯಾಪಾರ ವೃದ್ಧಿಗಾಗಿ,  ಶನಿವಾರದಂದು ತಮ್ಮ ಕಾರ್ಯ ಸ್ಥಾನ ದ ಎದುರು ಬಂದ ಯಾವುದೇ ಯಾಚಕರಿಗೆ ಕಪ್ಪು ಎಳ್ಳು ದಾನ ಕೊಡಬೇಕು. ಕುದುರೆ ಲಾಳವನ್ನು ಮುಖ್ಯದ್ವಾರಕ್ಕೆ ಹಾಕಬೇಕು. ವ್ಯಾಪಾರ ಮಂದಗತಿಯಲ್ಲಿ ನಡೆಯುತ್ತಿದ್ದರೆ,  ಶನಿವಾರದಂದು ಮಣ್ಣಿನ ಮಡಿಕೆಯನ್ನು ತಂದು ಅದರ ಮೇಲೆ ಮುಚ್ಚಳ ಮುಚ್ಚಬೇಕು, ಹಾಗೂ ಬುಧವಾರದಂದು ಆ ಮಡಿಕೆಯ ಮುಚ್ಚಳ ತೆಗೆಯದೆ ಹಾಗೆಯೇ ಪ್ರವಹಿಸುವ ನದಿಯಲ್ಲಿ (ನೀರಿನಲ್ಲಿ ) ಮಾಡಿಕೆಯನ್ನು ಬಿಟ್ಟುಬರಬೇಕು. ಪ್ರತಿದಿನ  ಮುಖ್ಯದ್ವಾರವನ್ನು ತೆರೆಯುವ ಮುನ್ನ  ದ್ವಾರದ ಮುಂದೆ ನೀರನ್ನು ಸಿಂಪರಿಸಬೇಕು.

               ಕುಂಭರಾಶಿ/ ಲಗ್ನ
Picture source: Internet/social media
             ಈ ರಾಶಿಯ ಜಾತಕರು ತಮ್ಮ ಕಾರ್ಯ ಸ್ಥಳದಲ್ಲಿ ಹೊರಗಿನವರಿಗೆ ಕಾಣದಂತೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಬೇಕು.  ಇವರು ಕುಳಿತುಕೊಳ್ಳುವ  ಸ್ಥಳದ ಎದುರಿಗೆ ಯಾವುದೇ ಮೂಲೆಯಾಗಲೀ, ಮುಚ್ಚಿದ ಬಾಗಿಲಾಗಲೀ ಇರಬಾರದು.  ಶನಿವಾರದಂದು ಸಣ್ಣ ಮಣ್ಣಿನ ಮಡಿಕೆ ತಂದು ಎಳ್ಳನ್ನು ತುಂಬಿ ಮಣ್ಣಿನ ಮುಚ್ಚಳವನ್ನು ಮುಚ್ಚಿ ಇಡಬೇಕು.  ಮಾರನೇ ದಿನ  ಎಳ್ಳು ಸಹಿತವಾದ ಆ ಮಡಿಕೆಯನ್ನು ದಾನ ಕೊಡಬೇಕು. ತಮ್ಮ ಕಾರ್ಯಾಲಯದ ಮುಂದೆ ಯಾರೇ ಯಾಚಕರು ಬಂದರೂ ಬರಿಗೈಯಲ್ಲಿ ಕಳುಹಿಸಬಾರದು, ಯಥಾಶಕ್ತಿ ದಾನ ನೀಡಬೇಕು. ತಮ್ಮ ಕಾರ್ಯ ಸ್ಥಾನವನ್ನು ಅಲಂಕರಿಸಲು ಕೆಂಪು ಹಾಗೂ ಬಿಳಿಯ ಬಣ್ಣವನ್ನು ಉಪಯೋಗಿಸಬಾರದು.

           ಮೀನ ರಾಶಿ/ಲಗ್ನ
Picture source: Internet/social media
           ಮೀನ ರಾಶಿಯ ಜಾತಕರು ತಮ್ಮ ವ್ಯಾಪಾರ ವೃದ್ಧಿಗಾಗಿ ತಮ್ಮ ಕಾರ್ಯ ಸ್ಥಳಕ್ಕೆ ಹೋಗುವ ಮುಂಚೆ,  ದೇವರಿಗೆ ನಮಿಸಿ,   ಪೂಜ್ಯರ ಚರಣ ಸ್ಪರ್ಶಮಾಡಿ,  ಹೋಗಬೇಕು. ಗುರುವಾರದ ದಿನದಂದು ಹಳದಿ ಬಣ್ಣದ ಫಲಗಳನ್ನು ತಂದು ವ್ಯವಹಾರ ಸ್ಥಳದ ಪೂಜಾಸ್ಥಳದಲ್ಲಿ ಇರಿಸಬೇಕು. ಮರುದಿನ ಆ ಹಣ್ಣುಗಳನ್ನು ಯಾರಾದರೂ ಯಾಚಕರಿಗೆ ಕೊಡಬೇಕು.  ಗುರುವಾರದಂದು  ವ್ಯವಹಾರ ಸ್ಥಳದಲ್ಲಿ ಬಂದ ಸಾಧುವಿಗೆ ಯಥಾಶಕ್ತಿ ದಾನ ನೀಡಬೇಕು. ಅನಾವಶ್ಯಕ ಚರ್ಚೆ ಅನಗತ್ಯ.  ಹಳದಿ ವಸ್ತ್ರದಲ್ಲಿ ಶ್ವೇತ ಚಂದನವನ್ನು ಕಟ್ಟಿ ವ್ಯಾಪಾರ ಸ್ಥಳದಲ್ಲಿ ಇರಿಸಬೇಕು.

          ಯಾವುದೇ ರಾಶಿಯವರಾಗಲೀ ತಮ್ಮ ವ್ಯಾಪಾರ ವೃದ್ಧಿಸಬೇಕೆಂದರೆ,  ನ್ಯಾಯ ನೀತಿ ಧರ್ಮ ಮಾರ್ಗದಲ್ಲಿ ನಡೆದು , ನ್ಯಾಯಾನ್ಯಾಯ ವಿವೇಚನೆಯಿಂದ ನಡೆದಾಗ ನವಗ್ರಹಗಳ ಅನುಗ್ರಹವಾಗುತ್ತದೆ. ಆಗ ತಮ್ಮ ವ್ಯಾಪಾರ  ವ್ಯವಹಾರಗಳು ಸುಗಮವಾಗಿ ಸಾಗುತ್ತವೆ.

         ✍️ ಡಾ: B.N.ಶೈಲಜಾ ರಮೇಶ್

Saturday, 25 April 2020

ಕ್ರೀಡೆ ಮತ್ತು ಜ್ಯೋತಿಷ್ಯ

                         ಹರಿಃ ಓಂ
        ಓಂ ಶ್ರೀ ಮಹಾಗಣಪತಯೇ ನಮಃ
              ಓಂ ಶ್ರೀ ಗುರುಭ್ಯೋನಮಃ

ಕ್ರೀಡೆ ಮತ್ತು ಜ್ಯೋತಿಷ್ಯ
(Picture source: internet /social media)

             ಕ್ರೀಡೆ ಮತ್ತು ಜ್ಯೋತಿಷ್ಯಕ್ಕೆ ಸಂಬಂಧವಿದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.  ಜ್ಯೋತಿಷ್ಯ ಶಾಸ್ತ್ರವು ಒಂದು ಮಹಾ ಸಾಗರವಿದ್ದಂತೆ,  ಅದರಲ್ಲಿ ಅನೇಕ ವಿಷಯಗಳು ಅಡಕವಾಗಿವೆ. ಹಾಗೆಯೇ ಜ್ಯೋತಿಷ್ಯ ಶಾಸ್ತ್ರದಲ್ಲಿ ಅನೇಕ ವಿಭಾಗಗಳಿವೆ. ಅದರಲ್ಲಿ ಕ್ರೀಡಾ ಜ್ಯೋತಿಷ್ಯವೂ ಒಂದು.  ಜ್ಯೋತಿಷ್ಯ ಶಾಸ್ತ್ರದ ಸಹಾಯದಿಂದ ಒಬ್ಬ ಮನುಷ್ಯ ಯಾವ ಯಾವ  ಕ್ರೀಡೆಗಳಲ್ಲಿ ಮುಂದೆ ಬರುತ್ತಾನೆ,  ಯಾವ ಯಾವ ಗ್ರಹಗಳು ಯಾವ ಯಾವ ಕ್ರೀಡೆಗಳಿಗೆ ಕಾರಕರಾಗುತ್ತಾರೆ,  ಯಾವ ಯಾವ ರಾಶಿಯವರು ಯಾವ ಯಾವ ಕ್ರೀಡೆಗಳನ್ನ ಬಯಸುತ್ತಾರೆ, ಎನ್ನುವುದನ್ನು ತಿಳಿಯಬಹುದು.

           ಕ್ರೀಡೆಗಳಲ್ಲಿ ನಾನಾ ವಿಭಾಗಗಳಿದ್ದರೂ ಅವುಗಳನ್ನು ಮುಖ್ಯವಾಗಿ ಎರಡು ರೀತಿಯಲ್ಲಿ ವಿಭಾಗಿಸಬಹುದು.

     1.  ಹೊರಾಂಗಣ ಕ್ರೀಡೆ
     2.  ಒಳಾಂಗಣ ಕ್ರೀಡೆ

          ಹೊರಾಂಗಣ  ಕ್ರೀಡೆ  ಎಂದರೆ ಮನೆಯಿಂದ ಹೊರಗೆ ಆಡುವ ಆಟಗಳು.
ಉದಾ:-- ಕ್ರಿಕೆಟ್, ಫುಟ್ಬಾಲ್, ವಾಲಿಬಾಲ್, ಹಾಕಿ, ಟೆನ್ನಿಸ್, ಬ್ಯಾಸ್ಕೆಟ್ ಬಾಲ್ ಮುಂತಾದವು.

          ಒಳಾಂಗಣ ಕ್ರೀಡೆ ಎಂದರೆ  ಮನೆಯ ಒಳಗೆ ಆಡುವ ಆಟಗಳು.  ಅವುಗಳೆಂದರೆ, ಚೆಸ್, ಕೆರಮ್,  ಟೇಬಲ್ ಟೆನ್ನಿಸ್, ಬಿಲಿಯರ್ಡ್ಸ್, ಇಸ್ಪೀಟ್  ಮುಂತಾದವು.

          ಇವಲ್ಲದೆ ನಾನಾ ರೀತಿಯ ಜಲಕ್ರೀಡೆಗಳು  ಜನಪ್ರಿಯವಾಗಿವೆ. ಉದಾಹರಣೆಗೆ, ಈಜುವುದು, ವಾಟರ್ಪೋಲೋ, ನೀರಿನಲ್ಲಿ ಚೆಂಡಾಟ ಆಡುವುದು, ಕರಾಟೆ, ಕುಸ್ತಿ, ಜಿಮ್ನಾಸ್ಟಿಕ್  ಇವು ಇನ್ನೊಂದು ವಿಭಾಗಕ್ಕೆ ಸೇರುತ್ತವೆ.

     ಈಗ , ಮೊದಲಿಗೆ  ಯಾವ ಯಾವ ಕ್ರೀಡೆಗೆ ಯಾವ ಯಾವ ಗ್ರಹರು ಕಾರಕರಾಗುತ್ತಾರೆ ಎಂಬುದನ್ನು ತಿಳಿಯೋಣ.

    ಗ್ರಹಗಳು -- ಕ್ರೀಡೆಗಳು
************************
    1. ರವಿ   -- ಹೊರಾಂಗಣ, ಸಾಹಸ ಕ್ರೀಡೆಗಳು
    2. ಚಂದ್ರ -- ಎಲ್ಲಾ ರೀತಿಯ ಜಲ ಕ್ರೀಡೆಗಳು
    3. ಕುಜ -- ಹೊರಾಂಗಣ ಕ್ರೀಡೆ, ಸಾಹಸ ಕ್ರೀಡೆಗಳು.
    4. ಬುಧ -- ಹೊರಾಂಗಣ ಕ್ರೀಡೆ.
    5. ಗುರು -- ಒಳಾಂಗಣ ಹಾಗೂ ಹೊರಾಂಗಣ ಕ್ರೀಡೆ.
    6. ಶುಕ್ರ -- ಎಲ್ಲಾ ರೀತಿಯ ಜಲ ಕ್ರೀಡೆಗಳು.
    7. ಶನಿ  -- ಜೂಜು ( ರೇಸು, ಇಸ್ಪೀಟು, ಮಟ್ಕಾ )
         ರಾಹು ಕೇತುಗಳು ಯಾವ ಯಾವ ಗ್ರಹದ ರಾಶಿಯಲ್ಲಿರುತ್ತಾರೋ ಆ ಗ್ರಹಗಳ ಸ್ಥಾನ ಬಲದಂತೆ ಕಾರಕರಾಗುತ್ತಾರೆ.

        ಯಾವ ಯಾವ ರಾಶಿಗಳು ಯಾವಯಾವ ಕ್ರೀಡೆಗಳನ್ನು ಪ್ರಚೋದಿಸುತ್ತವೆ ಎಂಬುದನ್ನು ತಿಳಿಯೋಣ.

      ರಾಶಿಗಳು  -- ಕ್ರೀಡೆಗಳು

      ಮೇಷ, ಸಿಂಹ, ಧನಸ್ಸು ರಾಶಿ ಅಥವಾ ಲಗ್ನದವರು ಸಾಹಸ ಕಾರ್ಯ ಪ್ರವೃತ್ತಿಯುಳ್ಳವರಾಗಿರುತ್ತಾರೆ,  ಏಕೆಂದರೆ ಈ ರಾಶಿಗಳು  ಕ್ಷತ್ರಿಯ ರಾಶಿಗಳು.

       ವೃಷಭ, ತುಲಾ ಮತ್ತು ಕಟಕ ರಾಶಿಗಳು ಜಲಕ್ರೀಡೆಯನ್ನು ಪ್ರಚೋದಿಸುತ್ತವೆ.. ಕಾರಣ , ಈ ರಾಶಿಗಳ ಅಧಿಪತಿಗಳು ಜಲಗ್ರಹಗಳು.

       ಕಟಕ, ವೃಶ್ಚಿಕ, ಮೀನ ಈ ರಾಶಿಗಳು ಜಲ ರಾಶಿಗಳಾದ್ದರಿಂದ , ಜಲಕ್ರೀಡೆಗಳನ್ನು ಪ್ರಚೋದಿಸುತ್ತವೆ.

       ಮಿಥುನ , ತುಲಾ ಕುಂಭ ಈ ರಾಶಿಗಳು ವಾಯುತತ್ವವಾದ್ದರಿಂದ ಈ ರಾಶಿಯವರು ವಾಯುವಿಹಾರವನ್ನು ಬಯಸುತ್ತಾರೆ.

       ಮಿಥುನ ಮತ್ತು ಕನ್ಯಾ ರಾಶಿಯಲ್ಲಿ ಜನಿಸಿದವರು ಸಾಮಾನ್ಯವಾಗಿ ವ್ಯವಹಾರದಲ್ಲಿ ಮತ್ತು ಮಾತಿನಲ್ಲಿ ನಿಪುಣರಾಗಿರುತ್ತಾರೆ. 

        ಕ್ರೀಡೆ ಮತ್ತು ಗ್ರಹ
       ****************
      ಸಾಮಾನ್ಯವಾಗಿ  ಯಾವುದೇ ರೀತಿಯ ಹೊರಾಂಗಣ ಕ್ರೀಡೆಗಳಿಗೆ ರವಿ, ಕುಜ ಮತ್ತು ಗುರು ಕಾರಕರಾಗುತ್ತಾರೆ,  ಹೇಗೆಂದರೆ ... ರವಿಯು ಆತ್ಮಕಾರಕ,  ಕುಜ ಹಾಗೂ ಗುರುಗಳು ದೇಹಪುಷ್ಠಿಗೆ ಕಾರಕರಾಗುತ್ತಾರೆ.  ಯಾವುದೇ ಆಟವನ್ನು ಆಡಬೇಕೆಂದರೂ ದೇಹಪುಷ್ಟಿಯೂ ಇರಬೇಕು ಆರೋಗ್ಯವೂ ಇರಬೇಕು.  ಜನ್ಮ ಜಾತಕದಲ್ಲಿ ರವಿ, ಕುಜರ ನಂತರ ಗುರು ಬಲಿಷ್ಠರಾಗಿದ್ದರೆ,  ಆ ಜಾತಕರು ಕ್ರಿಕೆಟ್ ಆಟದಲ್ಲಿ ಉನ್ನತಿಯನ್ನು ಪಡೆಯುವುದಕ್ಕೆ ಅವಕಾಶ ಇರುತ್ತದೆ.  ಉದಾಹರಣೆಗೆ  ಕ್ರಿಕೆಟ್ ದೇವರು ಎಂದೇ ಪ್ರಖ್ಯಾತರಾದ, ವಿಶ್ವದ ಖ್ಯಾತ ಆಟಗಾರ  "ಸಚಿನ್ ತೆಂಡೂಲ್ಕರ್" ಜಾತಕದಲ್ಲಿ  ರವಿ, ಕುಜರು ಉಚ್ಚಸ್ಥಾನದಲ್ಲಿದ್ದಾರೆ,  ಹಾಗಾಗಿ  ಸಚಿನ್ ತೆಂಡೂಲ್ಕರ್ ಅತೀ ಚಿಕ್ಕ ವಯಸ್ಸಿನಲ್ಲೇ ಕ್ರಿಕೆಟ್ ಆಟದಲ್ಲಿ ವಿಶ್ವ ವಿಖ್ಯಾತರಾದರು.

        ಯಾವುದೇ ರೀತಿಯ  ಒಳಾಂಗಣ  ಕ್ರೀಡೆಗಳಿಗೆ  ಸಾಮಾನ್ಯವಾಗಿ ಬುಧ ಮತ್ತು ಗುರು ಗ್ರಹರು ಕಾರಕರಾಗುತ್ತಾರೆ.  ಈ ಗ್ರಹಗಳ ನಂತರ ರವಿ, ಕುಜರು ಸ್ವಲ್ಪ ಮಟ್ಟಿಗೆ ಕಾರಕರಾಗುತ್ತಾರೆ.  ಜನಪ್ರಿಯ  ಒಳಾಂಗಣ  ಆಟವಾದ ಚದುರಂಗ ( ಚೆಸ್)  ಆಟವನ್ನು ತೆಗೆದುಕೊಂಡಾಗ...  ಈ ಆಟವನ್ನು ಆಡಬೇಕಾದ್ರೆ  ಅತೀ ಚರುಕಾದ ಬುದ್ಧಿವಂತಿಕೆ ಅಗತ್ಯ,  ಹಾಗಾಗಿ... ವಿದ್ಯಾಕಾರಕ, ಬುದ್ಧಿಕಾರಕ,  ಜ್ಞಾನಕಾರಕ ಗ್ರಹರಾದ ಬುಧ, ಗುರುಗಳು ಜಾತಕದಲ್ಲಿ ಬಲಿಷ್ಠರಾಗಬೇಕು.  ಯಾರ ಜಾತಕದಲ್ಲಿ  ಬುಧ, ಗುರುಗಳು ಬಲಿಸ್ಥರಾಗಿರುತ್ತಾರೋ  ಆ ಜಾತಕರು ಒಳಾಂಗಣ ಕ್ರೀಡೆಗಳಲ್ಲಿ ಯಶಸ್ಸು ಪಡೆಯಲು ಸಾಧ್ಯವಾಗುತ್ತೆ.  ಅದೂ ಅಲ್ಲದೆ ಚದುರಂಗವನ್ನು " ಬುದ್ಧಿವಂತರ ಆಟ " ಎಂದೇ ಕರೆಯುತ್ತಾರೆ, ಇದಲ್ಲದೆ ಕೇರಂ ಆಗಲೀ ಇಸ್ಪೀಟ್ ಆಟವನ್ನಾಗಲಿ ಆಡಲು ಬುದ್ಧಿವಂತಿಕೆ ಬೇಕು.

       ಸಾಹಸ ಕ್ರೀಡೆಗಳನ್ನು  ಆಡಬೇಕೆಂದರೂ ಸಹ ರವಿ ಕುಜರು ಬಲಿಷ್ಠರಾಗಿರಬೇಕು.  ಸಾಹಸದ ಕಾರ್ಯಗಳೆಂದರೆ  ಕುಸ್ತಿ, ಕರಾಟೆ, ಮೋಟಾರ್ ರೇಸ್, ಪರ್ವತಾರೋಹಣ, ಇತ್ಯಾದಿಗಳು.  ರವಿ, ಕುಜರೊಟ್ಟಿಗೆ ಗುರುವೂ ಬಲಿಷ್ಠರಾಗಿದ್ದರೆ ಇನ್ನೂ ಉತ್ತಮ.

         ಯಾವುದೇ ರೀತಿಯ ಜಲಕ್ರೀಡೆಗಳಿಗೆ  ಚಂದ್ರ, ಶುಕ್ರರು ಪ್ರಮುಖ ಕಾರಕರಾಗುತ್ತಾರೆ.  ಚಂದ್ರ ಶುಕ್ರರು ಜಲಗ್ರಹಗಳಾದ್ದರಿಂದ,  ಯಾರ ಜಾತಕದಲ್ಲಿ  ಈ ಗ್ರಹಗಳು ಬಲಿಸ್ಥರಾಗಿರುತ್ತಾರೋ ಆ ಜಾತಕರು ಜಲಪ್ರಿಯರಾಗಿರುತ್ತಾರೆ.  ಚಂದ್ರ, ಶುಕ್ರರು ಜಾತಕದಲ್ಲಿ  ಶುಭ ಸ್ಥಾನದಲ್ಲಿ.  ಒಟ್ಟಿಗಿದ್ದರೆ   ಅಂತಹ ವ್ಯಕ್ತಿಗಳು ಸಾಮಾನ್ಯ ವಾಗಿ ಯಾವಾಗ್ಲೂ ನೀರಿನ ಸಮೀಪವನ್ನು  ಬಯಸುತ್ತಾರೆ.

           ಇನ್ನು ಶನಿಯು,  ಯಾವ ಕ್ರೀಡೆಗೂ ಕಾರಕನಲ್ಲವೇ ? ..    ಹೌದು, ಶನಿಯೂ ಸಹ ಜೂಜಿಗೆ  ಪ್ರಮುಖ ಕಾರಕನಾಗುತ್ಯಾನೆ.  ಜೂಜು ಎಂದರೆ ಹಣ ಪಣಕ್ಕಿಟ್ಟು ಆಡುವ ಆಟ ಎಂದರ್ಥ.  ಉದ್ಸಹರಣೆಗೆ :-- ಇಸ್ಪೀಟ್, ಕುದುರೆ ರೇಸು, ಮಟ್ಕಾ ಇತ್ಯಾದಿ... ಆಟಗಳೆಲ್ಲವೂ ಜೂಜಿಗೆ ಸಂಬಂಧಪಟ್ಟದ್ದು.  ಯಸ್ರ ಜಾತಕದಲ್ಲಿ ಶನಿಯು ಬಲಿಷ್ಟ ನಾಗಿರುತ್ತಾನೋ,  ಆ ಜಾತಕರು ಜೂಜಿನಲ್ಲಿ ಆಸಕ್ತಿ ಹೊಂದಿದ್ದು, ಜೊತೆಗೆ ಅದೃಷ್ಟವೂ ಚನ್ನಾಗಿದ್ದರೆ  ಅದರಲ್ಲೇ ಅಧಿಕ ಹಣವನ್ನೂ ಗಳಿಸುತ್ಯಾರೆ.  ಜೂಜಿನಿಂದ  ಒಬ್ಬ ಮನುಷ್ಯ ಆಕಾಶದೆತ್ತರಕ್ಕೂ ಏರಬಹುದು.  ಅದಃಪತನಕ್ಕೂ ಇಳಿಯಬಹುದು (  ಮಹಾಭಾರತದ ಪಾಂಡವರು ಜೂಜಿನಿಂದ ಪಟ್ಟ ಅನೇಕ ಕಷ್ಟಗಳನ್ನು ಇಲ್ಲಿ ಸ್ಮರಿಸಬಹುದು) 

           ಜಾತಕದಲ್ಲಿ ಕ್ರೀಡೆಗೆ ಯಾವ ಸ್ಥಾನ..?

          ಕ್ರೀಡಾಪಟುವಾಗುವ ಯೋಗ ಜಾತಕದ ಯಾವ ಯಾವ ಸ್ಥಾನದಿಂದ ತಿಳಿಯಬಹುದು ಎಂಬುದನ್ನು.ತಿಳಿಯೋಣ.
ಕ್ರೀಡಾಪಟುತ್ವಕ್ಕೆ ಮುಖ್ಯವಾಗಿ ತನುಸ್ಥಾನ ಮತ್ತು ಸಪ್ತಮ ಸ್ಥಾನವನ್ನು ಪರಿಶೀಲಿಸಬೇಕು.  7ನೆ ಭಾವವು ಕ್ರೀಡಾ ಸ್ಥಾನವೆಂದೂ ಜ್ಯೋತಿಷ್ಯ ದಲ್ಲಿ ಹೇಳಿದೆ. ಜಾತಕ ಕಲಾನಿಧಿ   ಗ್ರಂಥದಲ್ಲಿ  "ಕಳತ್ರ ಕ್ರೀಡಾ ಭೋಗ ಕಾಮ - ಶೃಂಗಾರಕೇಳೀಭೋಜನ ವಿಹಾರ ಸಂಸಾರಕಾರಕಮ್ ಸಪ್ತಮಮ್ " ಎಂದು 7 ನೇ ಮನೆಯನ್ನು ವಿವರಿಸಿದ್ದಾರೆ.    

           ಯಾರ ಜಾತಕದಲ್ಲಿ ಸಪ್ತಮ.ಸ್ಥಾನವು ಬಲಿಷ್ಟವಾಗಿರುತ್ತದೋ ಅವರು ಕ್ರೀಡೆಯಲ್ಲಿ,  ಶೃಂಗಾರದಲ್ಲಿ,  ಭೋಜನದಲ್ಲಿ ನಿಪುನರಾಗಿರುತ್ತಾರೆ ಮತ್ತು ಸಪ್ತಮ ಸ್ಥಾನದಲ್ಲಿ ಶುಭಗ್ರಹಗಳಿದ್ದು, ಸಪ್ತಮಾಧಿಪತಿ ಬಲಿಷ್ಠನಾಗಿದ್ದರೆ,  ಅವರ ಸಂಸಾರವೂ ಚೆನ್ನಾಗಿರುತ್ತದೆ.  ಸಪ್ತಮ ಸ್ಥಾನದ ಜೊತೆಗೆ ತನುಸ್ಥಾನವನ್ನೂ ಪರಿಶೀಲಿಸಬೇಕು,  ಏಕೆಂದರೆ ಸಪ್ತಮ ಸ್ಥಾನವು ಸಂಪೂರ್ಣ ದೃಷ್ಟಿಯಿಂದ ತನು  ಸ್ಥಾನವನ್ನು ದೃಷ್ಠಿಸುತ್ತದೆ.  ಅಲ್ಲದೆ ತನುಸ್ಥಾನದಿಂದ ಜಾಟಕರ ದೇಹ, ದೇಹದ ಸ್ಥಿತಿ - ಗತಿ, ಆರೋಗ್ಯವನ್ನೂ ತಿಳಿಯಬಹುದು.  ಲಗ್ನದಲ್ಲಿ ಶುಭಗ್ರಹರಿದ್ದರೆ ಎಲ್ಲಾ ರೀತಿಯಲ್ಲೂ ಒಳ್ಳೆಯದು.  ಲಗ್ನದಲ್ಲಿ ರವಿ ಅಥವಾ ಕುಜರಿದ್ದಾರೆ ಅವರು ಸಾಹಸಕಾರ್ಯಗಳನ್ನು ಮಾಡಲಿಚ್ಚುಸುತ್ತಾರೆ.  ಈ ಎರಡೂ ಭಾವಗಳ ಜೊತೆಗೆ ಚತುರ್ಥ ಸ್ಥಾನ, ನವಮ ಸ್ಥಾನವನ್ನೂ ( ಭಾಗ್ಯ ಸ್ಥಾನ )  ಪರಿಶೀಲಿಸಬೇಕು ಏಕೆಂದರೆ ಜಾಟಕನಿದೆ ಅದೃಷ್ಟವಿಲ್ಲದೆ ಇದ್ದರೆ ಯಾವುದೇ  ವಿಷಯದಲ್ಲೂ, ಕೀರ್ತಿ ಗಳಿಸಲು ಸಾಧ್ಯವಿಲ್ಲ.

             ಒಟ್ಟಿನಲ್ಲಿ  ಕ್ರೀಡೆಯಲ್ಲಿ ಯಶಸ್ವೀಯಾಗಬೇಕೆಂದರೆ,  ಜಾತಕದ ತನುಸ್ಥಾನ, ಚತುರ್ಥ, ಸಪ್ತಮ, ಭಾಗ್ಯ ಸ್ಥಾನಗಳು, ರವಿ, ಕುಜ, ಗುರು, ಶುಕ್ರ, ಚಂದ್ರ, ಶನಿಗ್ರಹಗಳು  ಬಲಾಢ್ಯವಾಗಿರಬೇಕಾಗುತ್ತದೆ.

✍️ ಡಾ : B. N. ಶೈಲಜಾ ರಮೇಶ್