Thursday, 22 September 2022

ವಿವಾಹಯೋಗ

ವಿವಾಹಯೋಗ
**************

         ಮಾನವ ಜೀವನದ  ಶೋಡಶ   ಸಂಸ್ಕಾರಗಳಲ್ಲಿ ಅತೀ ಮುಖ್ಯವಾದದ್ದು ವಿವಾಹ.  ಸಂಘಜೀವಿಯಾದ ಮಾನವ ಸಂಗಾತಿಯೊಡನೆ ಜೀವಿಸಿದಾಗಲೇ ವಂಶಾಭಿವೃದ್ಧಿ, ಆ ವಂಶದಿಂದ ಸುಖ ಸಂತೋಷ, ಮುಖ್ಯವಾಗಿ  ಪಿತೃಋಣವನ್ನು ತೀರಿಸುವಲ್ಲಿ ಸಹಕಾರಿ. ಅಪುತ್ರಂ ಗತಿರ್ನಾಸ್ತಿ ಎನ್ನುವಂತೆ ಸದ್ಗತಿಯನ್ನು ನೀಡುವಲ್ಲಿ  ಸಹಕಾರಿಯಾದ ಸತ್ಸಂತಾನವನ್ನು ಪಡೆಯಲು ಧರ್ಮಮಾರ್ಗವಾದ ಈ ವಿವಾಹ ಯೋಗಕ್ಕೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗತಿಗಳು ಹೇಗಿರಬೇಕೆಂದು ನೋಡೋಣ ಬನ್ನಿ. 
         ವಿವಾಹವು ವರವೋ, ಶಾಪವೋ, ಉತ್ತಮ ಸಂಗಾತಿಯೊ ಅಥವಾ ಪೀಡಿಸುವವರೊ, ಶೀಘ್ರವಿವಾಹವೋ, ಅಥವಾ ತಡವಿವಾಹವೋ.. ಎಲ್ಲಕ್ಕೂ ಕಾರಣ ಜಾತಕದ ಗ್ರಹಸ್ಥಿತಿ.
          ಜಾತಕದಲ್ಲಿ  ಲಗ್ನ,  ಚಂದ್ರ,  ಕಲತ್ರಕಾರಕನಾದ  ಶುಕ್ರ ಪ್ರಬಲವಾಗಿದ್ದರೆ ಉತ್ತಮ ವಿವಾಹಯೋಗ.

         ವಿವಾಹಯೋಗಕ್ಕೆ  ಪ್ರಮುಖವಾಗಿ ವಿವಾಹ ಸ್ಥಾನಗಳಾದ 1, 2, 4, 7, 8, 12  ಭಾವಗಳನ್ನು  ಲಗ್ನ, ಚಂದ್ರ ಹಾಗೂ ಶುಕ್ರರಿಂದ ನಿರ್ಣಯ ಮಾಡಬೇಕು.

1. ಲಗ್ನಭಾವ  -  ಜಾತಕನ ಗುಣ, ಆತನ ಸುಖವನ್ನು ಸೂಚಿಸುತ್ತದೆ.

2.  ಕುಟುಂಬ ಭಾವ - ಜಾತಕನ  ಕುಟುಂಬ ಸೌಖ್ಯವನ್ನು ಸೂಚಿಸುತ್ತದೆ.

4.   ಸುಖಭಾವ -  ವೈವಾಹಿಕ ಸುಖವನ್ನು ಸೂಚಿಸುತ್ತದೆ.

7.   ಕಳತ್ರಭಾವ  -  ಸಂಗಾತಿಯ ಗುಣ,  ಅವರಿಂದ ಸಿಗುವ ಸುಖ ದುಃಖಗಳನ್ನು ಸೂಚಿಸುತ್ತದೆ.

8.   ಮಾಂಗಲ್ಯ ಭಾವ  -  ಸಂಗಾತಿಯ ಆಯುಷ್ಯವನ್ನು ಸೂಚಿಸುತ್ತದೆ.

12.  ಪತಿ - ಪತ್ನಿಯರಲ್ಲಿ ಪರಸ್ಪರ ಪ್ರೀತಿ, ಶಯನಸುಖವನ್ನು  ಸೂಚಿಸುತ್ತದೆ.

         ಈ ಎಲ್ಲಾ ಭಾವಗಳಲ್ಲಿ ಶುಭಗ್ರಹರು ಸ್ಥಿತರಾದಾಗ ಉತ್ತಮ ವೈವಾಹಿಕ ಜೀವನ. ಅಶುಭ, ಪೀಡಿತ, ಅಸ್ತ, ನೀಚ ಗ್ರಹಗಳೇನಾದರೂ ಸ್ಥಿತವಾಗಿದ್ರೆ, ಆಯಾ ಗ್ರಹಗಳ ಪ್ರಭಾವಕ್ಕನುಗುಣವಾಗಿ ಜೀವನದಲ್ಲಿ ಏರುಪೇರುಗಳು ಇರುತ್ತದೆ.

          ವಿವಾಹ ಜೀವನಕ್ಕೆ ಶುಭಗ್ರಹರು  - ಚಂದ್ರ, ಶುಕ್ರ,  ಗುರು.
          ವಿವಾಹ ಜೀವನಕ್ಕೆ ಅಶುಭರು ರವಿ, ರಾಹು, ಶನಿ.
           ಸಂದರ್ಭಕ್ಕೆ ತಕ್ಕಂತೆ ವರ್ತಿಸುವವರು  ಕುಜ, ಕೇತು ಬುಧ (  ಶುಭಗ್ರಹರ ಸಂಪರ್ಕ ವಿದ್ದರೆ ಶುಭ,  ಅಶುಭರ ಸಂಪರ್ಕ ವಾದರೆ ಅಶುಭ )

           ವಿವಾಹವಾಗಲು  ಕುಟುಂಬ,.ಸಪ್ತಮ, ಮತ್ತು ಲಾಭ ಸ್ಥಾನ ಹಾಗೂ ಆ ಸ್ಥಾನಾಧಿಪತಿಗಳು ಅತ್ಯಂತ ಮುಖ್ಯವಾಗುತ್ತೆ, ಹಾಗೂ ವಿವಾಹ ಕಾರಕನ ಸ್ಥಿತಿಯೂ ಸಹ ಉತ್ತಮವಿರಬೇಕು.

           ಯಾವುದೇ ಜಾತಕದಲ್ಲಿ 2, 7, 11 ನೇ ಭಾವಾಧಿಪತಿಗಳು ಬಲಿಷ್ಠರಾಗಿ ವಿವಾಹ ಸೂಚಕ ಗ್ರಹರಾದ ಶುಕ್ರ, ಗುರು, ಚಂದ್ರರು  ಬಲಿಷ್ಠರಾಗಿದ್ದರೆ ಉತ್ತಮ ವಿವಾಹ ಯೋಗ.

          ಜಾತಕದಲ್ಲಿ ಸಪ್ತಮಾಧಿಪತಿ ಬಲಯುತನಾಗಿ  ಉಚ್ಚ, ಸ್ವಕ್ಷೇತ್ರ, ಮಿತ್ರಕ್ಷೇತ್ರ ದಲ್ಲಿದ್ದರೆ ವಿವಾಹಯೋಗ ಹಾಗೂ ಉತ್ತಮ ಸಂಗಾತಿ.

          ಸಪ್ತಮಾಧಿಪತಿ ಯು ಬಲಯುತನಾಗಿ ಶುಭಗ್ರಹರ ದೃಷ್ಟಿಯಲ್ಲಿದ್ದರೆ ಶುಭ ವಿವಾಹ ಯೋಹ.

          ಕಲತ್ರಕಾರಕನಾದ ಶುಕ್ರನು ಶುಭ ಗುರು ದೃಷ್ಟಿಯಲ್ಲಿದ್ದರೆ ಉತ್ತಮ ಸಂಗಾತಿಯೊಡನೆ ಶುಭವಿವಾಹ ಯೋಗ.

          ಪುರುಷರ ಜಾತಕದಲ್ಲಿ. ಚಂದ್ರ 2 ಅಥವಾ 4 ನೇ ಸ್ಥಾನದಲ್ಲಿದ್ದಾರೆ  ತಡ (ಆಲಸ್ಯ )ವಿವಾಹಯೋಗ

          ಸ್ತ್ರೀಯರ ಜಾತಕನಿಗೆ ರವಿಯು 2 ಅಥವಾ 4 ರಲ್ಲಿದ್ದರೆ ಆಲಸ್ಯ ವಿವಾಹಯೋಗ.

          ಮೇಷ, ಸಿಂಹ, ಕನ್ಯಾ, ಧನಸ್ಸು, ಮಕರ ಲಗ್ನದಲ್ಲಿ ಶುಕ್ರನಿದ್ದರೆ ( ಸ್ತ್ರೀ ಪುರುಷರ ಜಾತಕಗಳೆರಡರಲ್ಲೂ ) ಆಲಸ್ಯ ವಿವಾಹಯೋಗ.

       Dr : ಶೈಲಜಾ ರಮೇಶ್